Thursday, 2 January 2014

ಬೆಳಗಿನ ವ್ಯಾಪಾರ‌

ಬೆಳಗಿನ ವ್ಯಾಪಾರ

ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದಾಗ, ಕೈ ಬೀಸಿ ಕರೆಯುತ್ತಿರುವ ಮನೆಗೆಲಸಗಳ ಸಾಲೇ ಇರುವಾಗ, ಅಡುಗೆಮನೆಯ ಡಬ್ಬಗಳಲ್ಲಿ ಯಾವುದು ತುಂಬಿದೆ, ಯಾವುದು ಖಾಲಿಯಾಗಿದೆ ಎನ್ನುವುದೂ ಮರೆತು ಹೋಗುವ ಪ್ರಸಂಗಗಳು ಹಲವಾರು. ಬೆಳಿಗ್ಗೆ ಎದ್ದು ಚಪಾತಿಗೆ ಹಿಟ್ಟು ಕಲಿಸಲು ಡಬ್ಬ ತೆರೆದಾಗಲೇ ತಿಳಿದಿದ್ದು, ಹಿಟ್ಟು ಖಾಲಿ! ತಿಂಗಳಿಗೊಂದು ಸಾರಿ ಪಟ್ಟಿ ಮಾಡಿ ಕರಾರುವಕ್ಕಾಗಿ ಸಾಮಾನುಗಳನ್ನು ತರಿಸಿದರೂ, ಶೋಕಿಗಾಗಿ ಮಾಲ್ ಗಳಲ್ಲಿ ಆಗೀಗ ಖರೀದಿ ಮಾಡಿದರೂ, ನಮ್ಮ ನೆನಪಿಗೆ ಮೋಸ ಮಾಡುವಂತೆ, ಹೇಗೋ ಸಾಮಾನುಗಳು ಯಾವ ಮಾಯದಲ್ಲೋ ಮುಗಿದು ಹೋಗಿರುತ್ತವೆ. ತುಸು ಬೇಜಾರಿನಿಂದಲೇ ಗಡಿಬಿಡಿಯಲ್ಲಿ ಸಲ್ವಾರ ಧರಿಸಿ ಮನೆಯ ಹತ್ತಿರದ ಗೂಡಿನಂಥ ಪುಟ್ಟ ಅಂಗಡಿಗೆ ಓಡುತ್ತೇನೆ. ಬೆಳ್ಳಂಬೆಳಿಗ್ಗೆ ಹೀಗೆ ಅರ್ಜೆಂಟಿಗೆ ಏನಾದರೂ ಸಾಮಾನು ಬೇಕೆಂದರೆ ಪುಟ್ಟ ಅಂಗಡಿಯವನೇ ನಮ್ಮ ಆಪದ್ಭಾಂಧವ. ಬೆಳಿಗ್ಗೆ ಆರೂವರೆ ಏಳಕ್ಕೆಲ್ಲ ಬಾಗಿಲು ತೆಗೆದು ಸಣ್ಣಪುಟ್ಟ ವ್ಯಾಪಾರ ಮಾಡುತ್ತಲೇ ಹಗಲನ್ನು ರಾತ್ರಿ ಮಾಡುವ ಅಂಗಡಿಕಾರನಿಗೆ ಓಣಿಯವರೆಲ್ಲ ಋಣಿಯಾಗಿರಲೇಬೇಕು.
ಸರಿ, ಬೆಳಿಗ್ಗೆ ಏಳಕ್ಕೇ ನಾನು ಮಹಾತ್ಮನ ಅಂಗಡಿಯ ಬಾಗಿಲಿಗೆ ಹೋಗಿ ನಿಂತಾಗ, ಆಗ ತಾನೇ ಬಾಗಿಲು ತೆರೆದು ಕಸ ಗುಡಿಸುತ್ತಿದ್ದವ ಸ್ವಾಗತ ನೀಡುವಂತೆ ಒಂದು ಸಣ್ಣ ಸ್ಮೈಲ್ ಕೊಟ್ಟ.    ರಾತ್ರಿಯೆಲ್ಲಾ ಒಳಗೇ ಇತ್ತೇನೋ _ ಬೆಕ್ಕೊಂದು ಮಿಯಾಂ ಮಿಯಾಂ ಎನ್ನುತ್ತ ಅವನ ಹಿಂದೆ ಮುಂದೆಯೇ ಸುತ್ತುವರೆಯಲಾರಂಭಿಸಿತು. ಹುಷ್ ಹುಷ್ ಎನ್ನುತ್ತಲೇ, ಅದೇನೂ ಹೋಗಲೇಬೇಕೆಂಬ ಅಭಿಲಾಷೆಯನ್ನೂ ಪ್ರಕಟ ಪಡಿಸದೇ ಆತ ತನ್ನ ಕೆಲಸ ಮಾಡುತ್ತಿದ್ದ.   ಬಹುಷ: ಇದು ಅವರಿಬ್ಬರ ದಿನದ ಆಟವಾಗಿರಬಹುದು. ಕೈ ತೊಳೆದುಕೊಂಡವ ಒಂದೊಂದೇ ಡಬ್ಬವನ್ನು ಅಂಗಡಿಯ ಮುಂದೆ ಓರಣವಾಗಿ ಹಚ್ಚತೊಡಗಿದ. ಅಷ್ಟರಲ್ಲಿ 2 ರೂಪಾಯಿಯ ಶಾಂಪೂ ಪ್ಯಾಕೆಟ್ ಬೇಕೆಂದು ಹತ್ತೊಂಬತ್ತು ಇಪ್ಪತ್ತು ವರ್ಷದ ಹುಡುಗಿಯೊಬ್ಬಳು ನೈಟಿಯ ಮೇಲೆ ಬಂದು ವಯ್ಯಾರ ಮಾಡುತ್ತ ನಿಂತಳು. ಅಂಗಡಿಯವ ತನ್ನ ಕೆಲಸವನ್ನೇ ಇನ್ನೂ ಮುಂದುವರೆಸಿದ್ದ. ನಿಜ ಹೇಳಬೇಕೆಂದರೆ ಹಾಗೆ ಡಬ್ಬಗಳನ್ನೆಲ್ಲ ಹೊರಗೆ ಜೋಡಿಸಿಡಲಾರದೇ ಒಳಗಿನಿಂದ ಯಾವುದೇ ಸಾಮಾನನ್ನೂ ತೆಗೆದು ಕೊಡುವುದು ಅವನಿಂದ ಸಾಧ್ಯವಿರಲಿಲ್ಲ. ಅಂಥ ಪುಟ್ಟ ಗೂಡಂಗಡಿ ಅದು. ಸರಿ, ಇಪ್ಪತೈದರ ಆಸುಪಾಸಿನ ಹುಡುಗನೊಬ್ಬ ನಿದ್ದೆಗಣ್ಣಲ್ಲೇ ಎದ್ದುಬಂದಂತೆ ತೇಲಾಡುತ್ತ ಬಂದು ಒಂದು ಪ್ಯಕೆಟ್ ಪಾನ್ ಮಸಾಲಾ, ಒಂದು ಮೈ ಸೋಪು ಬೇಕೇಂದ. ಹುಡುಗಿಯನ್ನು ನೋಡುತ್ತಲೇ ಅವನ ನಿದ್ದೆಯ ಜೊಂಪು ಹಾರಿಹೋಯಿತು. ನಿಂತಲ್ಲೇ ಹಾಡೊಂದನ್ನು ಗುಣುಗುಣಿಸುತ್ತಾ ಸ್ಟೈಲ್ ಕೊಡಲಾರಂಭಿಸಿದ. ಹುಡುಗಿಯ ಕಣ್ಣುಗಳೂ ನಗುನಗುತ್ತಲೇ ಅವನ ಸ್ಟೈಲನ್ನೂ ಸ್ಮೈಲನ್ನೂ ಸ್ವಾಗತಿಸುತ್ತಿವೆ ಎಂಬ ಅನುಮಾನ ನಂಗೆ. ಒಟ್ಟು ಒಂದು ಸಂವಹನ ಅವರಿಬ್ಬರ ಮಧ್ಯೆ ಮಾತಿನ ಹಂಗಿಲ್ಲದೇ ಸೇತುವೆ ಕಟ್ಟುತ್ತಿತ್ತು. ಇಬ್ಬರಿಗೂ ಗಡಿಬಿಡಿ ಇರಲಿಲ್ಲ. ಇದ್ದ ನನಗೂ ಅಲ್ಲಿನ ವ್ಯಾಪಾರದ ಗುಂಗು ಹಿಡಿದಿತ್ತು.
ಐವತ್ತರ ವಯಸ್ಸಿನನೊಬ್ಬ ಬೆಳ್ಳಂಬೆಳಿಗ್ಗೆ ಸಿಗರೇಟಿನ ಬೇಡಿಕೆಯಿಟ್ಟ. ಎಲ್ಲವೂ ಕಿರುಕೋಳ ವ್ಯಾಪಾರಗಳು. "ಮೇಡಮ್ ನಿಮಗೇನು ಬೇಕು?' ಎಂದು ಅಂಗಡಿಯವನು ಕೇಳಿದಾಗಲೇ ವಾಸ್ತವಕ್ಕೆ ಬಂದೆ. ಗೋದಿಹಿಟ್ಟನ್ನು ಅವನು ಕೊಡುತ್ತಿರುವಾಗಲೇ ಪುಟ್ಟ ಹುಡುಗನೊಬ್ಬ "ಧೋಂಡಿಬಾ ಎರೆಡು ಚಾಕಲೇತು ಕೊಡು" ಎಂದು ಒಂದು ರೂಪಾಯಿಯ ನಾಣ್ಯವನ್ನು ಮುಂದೆ ಚಾಚಿದ. ಮಹಿಳೆಯೊಬ್ಬಳು ಐದು ರೂಪಾಯಿಯ ಚಹಾಪುಡಿ ಬೇಕೆಂದಳು. ಕಾಲು ಕೇಜಿ ಶೇಂಗಾ ಎಣ್ಣೆಗಾಗಿ ಸಣ್ಣದೊಂದು ಡಬ್ಬವನ್ನೂ ತಂದಿದ್ದಳು. ಅಂಗಡಿಯವನ ಬೆಳಗಿನ ವ್ಯಾಪಾರದ ಮಜವನ್ನು ನೋಡಿ ನಗು ಬಂತು. ಖುಶಿಯೂ ಆಯಿತು. ಬೆಳಗಿನ ವ್ಯಾಪಾರದ ಜೊತೆಜೊತೆಗೆ ಇನ್ನೂ ಏನೇನೋ ವ್ಯಾಪಾರ ವ್ಯವಹಾರಗಳು ನಡೆಯುವ ಗಮ್ಮತ್ತು, ಪುರುಸೊತ್ತು ಮಾಡಿಕೊಂಡು ನಿಂತು ನೋಡುವವರಿಗೆ ಮಾತ್ರ ಗೋಚರಿಸುವ ಗುಪ್ತಗಾಮಿನಿಗಳು.
ವೈವಿಧ್ಯಮಯವಾಗಿರುವ ದೇಶದಲ್ಲಿ ಬರೀ ಮೇಲ್ಪದರದ ವರ್ಗಗಳ, ಜನಗಳ ಖುಶಿಗಾಗಿ ತೆರೆದ ಮಾಲ್ ಗಳು, ರಿಟೇಲ್ ಮಳಿಗೆಗಳು ಸಾಲುಸಾಲಾಗಿ ಬಂದರೂ ನಮ್ಮ ಗೂಡಂಗಡಿಯ 'ಧೋಂಡಿಬಾ'ನಂಥವರ ವ್ಯಾಪಾರ ಯಾವು ದೇ ಹಂಗು ಹೆದರಿಕೆಯಿಲ್ಲದೇ ನಡೆಯುತ್ತಲೇ ಇರುತ್ತದೆ. ಇದೀಗ ಸಾವಿರ ಸಾವಿರ ಜನರು ಮಾಲ್ ಗಳಿಗೆ ಭೇಟಿ ಕೊಡುತ್ತಿರಬಹುದು. ಆದರೆ ಸಣ್ಣ ಆದಾಯದ ಲಕ್ಷಾಂತರ ಜನರು ತಮ್ಮ ಬೆಳಗಿನ ಬೇಡಿಕೆಗಳಿಗೆ ಆಶ್ರಯಿಸುವುದು ಇಂಥ ಪುಟ್ಟ ಅಂಗಡಿಗಳನ್ನೇ. ಇಂಥಲ್ಲೇ ಹರೆಯದ ಹುಡುಗರ ವಿನಿಮಯಗಳು ನಡೆದು ಮಿಂಚಿನ ಸಂಚಾರವಾಗಿ, ಮತ್ತೆ ನಾಳೆ ಅಲ್ಲೇ ಭೇಟಿಯಾಗುವ ಮೌನ ಸಂದೇಶಗಳು ರವಾನೆಯಾಗುವುದು. ಇಂಥ ಅಂಗಡಿಗಳಲ್ಲೇ, ಚಹಾಪುಡಿ ತೀರಿದ ಮನೆಗಳಲ್ಲಿ ಎದ್ದೋಡನೇ ಚಹಾ ಕುಡಿಯುವ ಆಸೆಯಾದರೆ ಐದು ರೂಪಾಯಿಗೂ ಚಹಾಪುಡಿ ಸಿಗುವುದು. ಇಲ್ಲಿಯೇ ಬೆಕ್ಕುಗಳು ಮಿಯಾಂ ಮಿಯಾಂ ಎನ್ನುತ್ತಾ ಕಾಲು ಕಾಲಲ್ಲಿ ಅಡ್ಡಾಡುತ್ತಾ ತಮ್ಮ ಹೊಟ್ಟೆಗೆ ಏನಾದರೂ ಸಿಗುತ್ತಾ ಎಂದು ಅರಸುವುದು, ಮತ್ತು ಅಲ್ಲಿಯೇ ಸುತ್ತುವರೆಯುವವು ಲಬ್ ಡಬ್ ಎನ್ನುವ ಶ್ರೀಮಂತ ದೇಶದ ಬಡ  ಹೃದಯಗಳು!
ಶ್ರೀಮತಿ ನೀತಾ ರಾವ್