ಅಂತರ
ಗಿರಿಶಿಖರದ ತುದಿಯನೇರಿ ನಿಂತು
ಮೋಡಕೆ ಕೈ ಚಾಚಿರುವೆ ನಾನು
ಬೆಟ್ಟದಡಿಯಲಿ ನಿಂತು ಹಸಿರು
ಹುಲ್ಲ ದಿಟ್ಟಿಸುತಿರುವೆ ನೀನು II
"ಮೇಲೇರಿ ಬಾ ಗೆಳೆಯ
ಇಲ್ಲಿ ಕೈ ಚಾಚಿದಷ್ಟೂ
ಮುಗಿಲು
ಕಲ್ಪನೆಗೆ ಸಿಗದಷ್ಟೂ ಆಕಾಶ"
ಕೂಗಿ ಕರೆಯುತಿಹೆ ನಾನು
II
"ನೆಲದ ಆಳದಲ್ಲಿರುವ ಸುಖ
ನಿನಗೇನು ಗೊತ್ತು, ಗಟ್ಟಿ ನೆಲವಿದೆ
ಕಾಲಡಿಯಲಿ, ಒಳಗೆಲ್ಲ ಬೇರಿದೆ
ಇಳಿದು ಬಾ ನೀನೇ" ಎನುತಿರುವೆ
ನೀನು II
ಕೂಡುವ ಆತುರ ಇಬ್ಬರಿಗೂ
ಅಂತರ ಕಳೆದು, ಅಹಮಿಕೆ
ಇಳಿದು
ಇಳಿಯಲಾರೆ ನಾನು, ಏರಲಾರೆ ನೀನು
ಹಾರುವಾಸೆ ನನಗೆ, ನಡೆಯುವಾಸೆ ನಿನಗೆ
ಬೆಳೆಯತ್ತಲೇ ಇದೆ ಅಂತರ ದಿನದಿನವೂ
II
ನೀತಾ
ರಾವ್