Saturday, 3 October 2015

ಪತ್ರ Vs ಫೋನ್ Vs ಸೆಲ್ ಫೋನ್


ಪತ್ರ  Vs ಫೋನ್ Vs ಸೆಲ್ ಫೋನ್



        ದಿನ ಕಳೆದಂತೆ ಸಂಪರ್ಕ ಸಾಧನೆಗಳಲ್ಲಿ ವಿಧವಿಧ ಬದಲಾವಣೆಗಳಾಗಿರುವುದನ್ನುನಾವೇ ಕಣ್ಣಾರೆ ನೋಡುತ್ತಿದ್ದೇವೆ.ಅದರ ಜೊತೆಜೊತೆಗೇ ನಮ್ಮ ಮಾನವೀಯ ಸಂಬಂಧಗಳ ರೂಪ ರೇಶೆಗಳೂ ಬದಲಾಗುತ್ತಿವೆ. ಜೀವನದ ಬಗ್ಗೆ, ಸಂಬಂಧಗಳ ಬಗ್ಗೆ ನಮ್ಮ ದೃಷ್ಟಿಕೋನಗಳೂ ವಿಪರೀತವಾಗಿ ಬದಲಾಗುತ್ತಿವೆ. ಹಳೆಯ ತಲೆಮಾರಿನ ಜನ ಪತ್ರಗಳಲ್ಲೇ ತಮ್ಮೆಲ್ಲ ಭಾವನೆಗಳನ್ನು ತೋಡಿಕೊಂಡು ತಣ್ಣಗಾಗಿ ಹೋದರು. ಇಂದಿನ ತಲೆಮಾರಿನವರು ಸೆಲ್ ಫೋನಗಳ ಕೈಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿ ಸಮಾಧಾನದಿಂದಿದ್ದಾರೆ. ಆದರೆ ಪತ್ರಗಳಿಂದ ಪ್ರಾರಂಭಿಸಿ, ಮುಂದುವರೆಸಲಾಗದೇ ಫೋನಗಳ ರಿಸಿವರಗಳಲ್ಲಿ ನಮ್ಮ ಧ್ವನಿಯನ್ನು ಕಳಿಸಿ, ಇದೀಗ ಮೊಬೈಲ್ ಫೋನಗಳ ಹಾಳೆಗಳ ಮೇಲೆ ಎಸ್ಸೆಮ್ಮೆಸ್ ಟೈಪ್ ಮಾಡುತ್ತಾ, ಹಳೆಯದನ್ನು ಮರೆಯಲಾಗದೇ ಹೊಸತನ್ನು ಬಿಡಲಾಗದೇ ತ್ರಿಶಂಕು ಸ್ಥಿತಿಯಲ್ಲಿರುವ ನಾವು ಅಂದರೆ ನಲವತ್ತರಿಂದ ಐವತ್ತು ವಯಸ್ಸಿನವರು ಈ ಸ್ಥಿತ್ಯಂತರ ಅವಧಿಯ ಬಲಿಪಶುಗಳು ಎಂದೆನಿಸುತ್ತದೆ, ಅಥವಾ ಎಲ್ಲ ಸಂಪರ್ಕ ಸಾಧನಗಳನ್ನು ಉಪಯೋಗಿಸಿದ, ಪ್ರತಿಸಲ ಸಂಕ್ರಮಣ ಕಾಲವನ್ನು ದಾಟಿ ಬಂದ ಧೀರರು ಹೌದೇನೋ!
ನಾವು ಚಿಕ್ಕವರಿದ್ದಾಗ ಅಮ್ಮ ತನ್ನ ಇಬ್ಬರು ತಂಗಿಯರಿಗೆ ಅಂದರೆ ನನ್ನ ಚಿಕ್ಕಮ್ಮಂದಿರಿಗೆ ಇನ್ ಲ್ಯಾಂಡ್ ಕವರಿನಲ್ಲಿ ಪತ್ರ ಬರೆಯುತ್ತಿದ್ದಳು. ಒಬ್ಬ ತಂಗಿ ಗೋವಾದ ಪಣಜಿಯಲ್ಲಿದ್ದರೆ ಇನ್ನೊಬ್ಬ ತಂಗಿ ಮಹಾರಾಷ್ಟ್ರದ ಠಾಣೆಯಲ್ಲಿದ್ದಳು. ಹಾಗೂ ನಾವು ಬೆಳಗಾವಿಯಲ್ಲಿ. ಪ್ರತಿ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಸರಿಯಾಗಿ ಅವರೆಲ್ಲ ಪತ್ರದ ಮೂಲಕ ಖಾಯಂ ಆಗಿ ಸಂಪರ್ಕ ಇರಿಸಿಕೊಂಡಿದ್ದರು. ಹೀಗೆ ಬರೆಯುವ ಪತ್ರದ ಕೆಲವು ಭಾಗಗಳು ಕರಾರುವಕ್ಕಾಗಿರುತ್ತಿದ್ದವು. ಮೊದಲಿಗೆ ಪ್ರೀತಿಯ ಇಲ್ಲವೇ ಪೂಜ್ಯ ಎಂಬ ಸಂಬೋಧನೆಯ ನಂತರ "ಶಿ.ಸಾ. ನಮಸ್ಕಾರಗಳು (ಶಿರ ಸಾಷ್ಠಾಂಗ) ಇಲ್ಲಿ ನಾವೆಲ್ಲ ಕ್ಷೇಮ. ತಮ್ಮ ಕ್ಷೇಮಕ್ಕೆ ಮೇಲಿಂದ ಮೇಲೆ ತಿಳಿಸುತ್ತಿರಬೇಕು" ಎಂಬ ಅವೇ ಶಬ್ದಗಳ ಅವೇ ವಾಕ್ಯಗಳಿರುತ್ತಿದ್ದವು. ಅವು ಶಿಷ್ಟಾಚಾರದ ಸಂಕೇತವಾಗಿರುತ್ತಿದ್ದವು.ಅದೇ ರೀತಿ ಮುಕ್ತಾಯ ಮಾಡುವಾಗ "ಮನೆಯಲ್ಲಿ ಎಲ್ಲ ಹಿರಿಯರಿಗೆ ನನ್ನ ನಮಸ್ಕಾರಗಳು, ಹಾಗೂ ಕಿರಿಯರಿಗೆ ಸಿಹಿ ಆಶೀರ್ವಾದಗಳು". ಎನ್ನುವ ಸಾಲುಗಳು ತಪ್ಪದೇ ಇರುತ್ತಿದ್ದವು. ಪತ್ರದ ಮಧ್ಯಭಾಗದಲ್ಲಿ ಮುಖ್ಯವಾದ ಹಾಗೂ ನಿಯಮಿತವಾದ ವಿಷಯಗಳಿರುತ್ತಿದ್ದವು. ಮಳೆ ಬೆಳೆಯ ಬಗ್ಗೆ, ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಆರೋಗ್ಯ, ನೋಡಿದ ಯಾವುದಾದರೂ ಸಿನೆಮಾ, ಓದಿದ ಪುಸ್ತಕ ಹೀಗೆ ನಾನಾ ವಿಷಯಗಳ ಬಗ್ಗೆ ಲೇಖನಿ ಹರಿದಾಡುತ್ತಿತ್ತು.ಬಹುಷ: ಅದೇ ಆಕರ್ಷಣೆ ನಮಗೇ ಗೊತ್ತಿಲ್ಲದಂತೆ ನಮ್ಮ ಮನಸ್ಸಿನೊಳಗೂ ಗೂಡುಕಟ್ಟಿತ್ತು ಎನಿಸುತ್ತದೆ. ಆರು ಏಳನೇ ಕ್ಲಾಸಿನಲ್ಲಿದ್ದಾಗಿನಿಂದ ನಾನು, ನನ್ನಕ್ಕ ಕೂಡಾ ನಮ್ಮ ಬಂಧುಗಳಿಗೆ ಕಾಗದ ಬರೆಯಲಾರಂಭಿಸಿದೆವು. ಆಗ ಅಂದರೆ 80-90 ರ ದಶಕಗಳಲ್ಲಿ, ಸಾಹಿತ್ಯದ ಓದು ಬರವಣಿಗೆ ಅತ್ಯಂತ ಉಚ್ರಾಯ ಸ್ಥಿತಿಯಲ್ಲಿದ್ದ ವೈಭವದ ಕಾಲ. ಎಲ್ಲರೂ ಕತೆ ಕಾದಂಬರಿಗಳನ್ನೋದುವವರೇ. ತಾವೂ ಕೂಡಾ ಸಾಹಿತಿ, ಕವಿ, ಕತೆಗಾರ್ತಿ ಆಗಬೇಕೆಂದು ಕನಸು ಕಾಣುವವರೇ. ಕೊನೆಗೆ ಅದೆಲ್ಲ ಆಗದಿದ್ದರೆ ಹೋಗಲಿ, ಪತ್ರಗಳಲ್ಲಾದರೂ ಒಂದಿಷ್ಟು ಸುಂದರವಾದ ವಾಕ್ಯಗಳನ್ನು ರಚಿಸಿ ಬರೆದು, ಅಷ್ಟರ ಮಟ್ಟಿಗೆ ಸಾಹಿತ್ಯ ಕೃಷಿ ಮಾಡಿಬಿಡುವ ಉತ್ಸಾಹ ಅನೇಕರಲ್ಲಿತ್ತು. ಅಲ್ಲದೇ ಪತ್ರಗಳು ನಿಜವಾಗಿಯೂ ಅತ್ಯಂತ ಸೂಕ್ಷ್ಮ ಸಂವೇದನೆಗಳ ಅಭಿವ್ಯಕ್ತಿಯಾಗಿರುತ್ತಿದ್ದುದೂ ಸುಳ್ಳಲ್ಲ. ಅವ್ಯಕ್ತವಾಗಿದ್ದುಕೊಂಡೇ ವ್ಯಕ್ತವಾಗುವ ಅನೇಕ ಭಾವನೆಗಳು ಬರೆಯಲಾರದ ಶಬ್ದಗಳ ಮೂಲಕ ಹೊರಹೊಮ್ಮುತ್ತಿದ್ದವು. ಇಂಥವೇ ಅನೇಕ ಕಾರಣಗಳಿಂದ ಪತ್ರಗಲು ಅನೇಕರ ಅಚ್ಚುಮೆಚ್ಚಿನ ಸಂಗಾತಿಗಳಾಗಿದ್ದವು. ಪತ್ರ ಬರೆಯುವುದು ಒಂದು ಪ್ರೀತಿಯ ಹವ್ಯಾಸವಾಗಿರುತ್ತಿತ್ತು.ನಮ್ಮ ಕಥೆ ಕವನ ಹೀಗೆ ಯಾವುದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದರಂತೂ ಅದೆಲ್ಲಿಂದ ಓದುಗರು ನಮ್ಮ ವಿಳಾಸವನ್ನು ಸಂಗ್ರಹಿಸುತ್ತಿದ್ದರೋ ದೇವರೇ ಬಲ್ಲ! ಅಂತೂ ಅತ್ಯಂತ ಹೊಗಳಿಕೆಯಿಂದ ಕೂಡಿದ ಪತ್ರಗಳು ಕೈಸೇರುತ್ತಿದ್ದವು. ಅದಕ್ಕೇನಾದರೂ ಉತ್ತರ ಬರೆದು ಕೃತಜ್ನತೆ ಸಲ್ಲಿಸಿದಿರೋ ಮತ್ತೊಂದು ಪತ್ರ. ಇಷ್ಟರಲ್ಲೇ ಒಂದು ಪತ್ರದಷ್ಟು ಹಳೆಯ ಪರಿಚಯವಿರುವುದರಿಂದ ಇನ್ನಷ್ಟು ಆತ್ಮೀಯತೆ. ಒಮ್ಮೊಮ್ಮೆ ಸ್ವಂತ ವಿಷಯಗಳ ತೋಡಿಕೊಳ್ಳುವಿಕೆ, ಹೀಗೆ ಎನೇನೋ ಅಂತೂ ಒಳ್ಳೆ ಮಜವಾದ ಕಾಲ.
 ಗುರುತು ಪರಿಚಯವಿಲ್ಲದ ಪತ್ರಮಿತ್ರರಿಂದಾಗಿ ಅನೇಕ ಹಾಸ್ಯ ಪ್ರಸಂಗಗಳೂ ಉಂಟಾಗುತ್ತಿದ್ದವು. ಹೇಗೂ ಒಬ್ಬರ ಮುಖವನ್ನೊಬ್ಬರು ನೋಡಿರದೇ ಇರುವುದರಿಂದ, ಮತ್ತೆ ಯಾವುದೇ ರಿಸ್ಕ್ ಇಲ್ಲದೇ ಇದ್ದುದರಿಂದ ಕೆಲವರು ಸುವಾಸಿತ ಗುಲಾಬಿ ಹಾಳೆಗಳ ಮೇಲೆ ಬರೆದದ್ದೂ ಉಂಟು. ಅವನ್ನೆಲ್ಲ ನೋಡಿ, ಓದಿ ನಕ್ಕು ಮರೆತದ್ದೂ ಉಂಟು.
    ಆದರೆ ಪರಿಚಯವಿದ್ದ ಆತ್ಮೀಯರೊಡನೆ ಉಂಟಾಗುವ ಪತ್ರ ಮೈತ್ರಿ ನೋವು ನಲಿವು ಎರಡನ್ನೂ ತರುತ್ತವೆ. ವರ್ಷಾನುಗಟ್ಟಲೇ ಪತ್ರಗಳನ್ನು ಬರೆಯತ್ತಾ ಆತ್ಮೀಯತೆ, ಸ್ನೇಹವನ್ನು ಮುಂದುವರೆಸಿದವರು ಆಗಿನ‌ ಕಾಲದಲ್ಲಿ ಅನೇಕರಿರುತ್ತಿದ್ದರು. ಸ್ನೇಹ ಒಂದು ಹೆಣ್ಣು ಮತ್ತು ಒಂದು ಗಂಡಿನ ಮಧ್ಯದ್ದಾದರಂತೂ ಈ ತುಡಿತ ತೀವ್ರತೆ ಇನ್ನೂ ಹೆಚ್ಚಾಗಿರುತ್ತಿತ್ತು. ಪತ್ರಗಳು ಇಬ್ಬರ ಮಧ್ಯೆಯೂ ರಾಕೆಟಿನಂತೆ ಹಾರಾಟ ನಡೆಸಿರುತ್ತಿದ್ದವು. ಸ್ನೇಹಿತನಿಂದ ಪತ್ರ ಬಂತೆಂದರೆ ಎರೆಡೆರೆಡು ಬಾರಿ, ಒಮ್ಮೊಮ್ಮೆ ಮೂರ್ನಾಲ್ಕು ಬಾರಿ ಓದುವುದು, ತಕ್ಷಣ ಉತ್ತರ ಬರೆದು ಪೋಸ್ಟ್ ಡಬ್ಬಿಯಲ್ಲಿ ಹಾಕಿ ಬರುವುದು. ಎಲ್ಲಿ ತಡವಾಗುತ್ತದೋ ಎಂದು ಒಮ್ಮೊಮ್ಮೆ ಹೆಡ್ ಪೋಸ್ಟಿಗೇ ಹೋಗಿ ಪತ್ರವನ್ನು ಹಾಕಿ ಬರುವುದು, ಮತ್ತು ಉತ್ತರ ಬರುವ ತನಕ ಚಡಪಡಿಸುವುದು, ಪೋಸ್ಟ್ ಮನ್ ಬರುವ ಟೈಮಿಗೆ ಸರಿಯಾಗಿ ಹೋಗಿ ಗೇಟಿಗೇ ನಿಲ್ಲುವುದು, ಇವೆಲ್ಲ ನಿತ್ಯಕಾಯಕಗಳಾಗಿ ಬಿಟ್ಟಿರುತ್ತಿದ್ದವು.ಪತ್ರದ ವಿಷಯಗಳೂ ವೈವಿಧ್ಯಮಯವಾಗಿರುತ್ತಿದ್ದವು. ಅಲ್ಲಿ ವಯ್ಯ‌ಕ್ತಿಕ ವಿಷಯಗಳಲ್ಲದೇ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಹವಾಮಾನ, ಓದಿದ ಕಥೆ ಕಾದಂಬರಿಗಳ ಚರ್ಚೆ ಹೀಗೆ ನಾನಾ ವಿಷಯಗಳು ಹಾದುಹೋಗುತ್ತಿದ್ದವು. ಆ ದೃಷ್ಟಿಯಿಂದಲೇ ಅನೇಕರು ತಮ್ಮ  ಮತ್ತು ತಮಗೆ ಬಂದ ಪತ್ರಗಳನ್ನೇ ಜತನದಿಂದಿಟ್ಟುಕೊಂಡು ನಂತರದ ದಿನಗಳಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
   ಕ್ರಮೇಣವಾಗಿ ತಡವಾಗಿಯಾದರೂ ಎಲ್ಲರ ಮನೆಗಳಲ್ಲಿ ಫೋನುಗಳು ರಿಂಗಣಿಸತೊಡಗಿದ್ದು 90 ರ ದಶಕದ ಮಧ್ಯಭಾಗದಲ್ಲಿ. ಸ್ಥಿರಫೋನುಗಳು ಸರ್ವವ್ಯಾಪಿಯಾದ ನಂತರ ಈ ಪತ್ರ ಬರೆಯುವ ತಾಪತ್ರಯ ಯಾರಿಗೂ ಬೇಡವಾಗಿರಬಹುದು. ಮೊದಲು ಪೋಸ್ಟಾಫಿಸಿಗೆ ಹೋಗಿ ಇನ್ ಲ್ಯಾಂಡ್, ಇಲ್ಲವೇ ಕವರ್ ಗಳನ್ನು ತಂದಿಟ್ಟುಕೊಳ್ಳುವುದು, ವಿಚಾರ ಮಾಡಿ ಬರೆಯುವುದು, ಅವುಗಳನ್ನು ಸರಿಯಾಗಿ ಮಡಚಿ ಅಂಟಿಸಿ ಹತ್ತಿರದಲ್ಲಿರುವ ಪೋಸ್ಟ್ ಡಬ್ಬಕ್ಕೆ ಹಾಕಿ ಬರುವುದು, ಈ ಯಾವ ರಗಳೆಯೂ ಇಲ್ಲದೇ ಕೇವಲ ಒಂದಿಷ್ಟು ನಂಬರಗಳನ್ನು ತಿರುವಿದರೆ ಅಥವಾ ಒತ್ತಿದರೆ ಸಾಕು, ಆ ಕಡೆಯಿಂದ ನಮಗೆ ಬೇಕಾದವರ ಕಂಠದಿಂದ 'ಹಲೋ' ಉಲಿತ. ನೇರ ಸಂಪರ್ಕ. ಎರಡೂ ಕಡೆಗಳಿಂದ ಮಾತು ಕತೆ. ಈ ಎಲ್ಲ ಅನುಕೂಲತೆಗಳಿಂದಾಗಿ ಕ್ರಮೇಣ ಪತ್ರ ಬರೆಯುವ ಅಭ್ಯಾಸ, ಹವ್ಯಾಸ ಎರಡೂ ಬಿಟ್ಟು ಹೋಯಿತು. ಪತ್ರಗಳಲ್ಲಿ ನೀರಿನಂತೆ ಸುಲಲಿತವಾಗಿ ಹರಿಯುತ್ತಿದ್ದ ಭಾವನೆಗಳಿಗೆ ಕಡಿವಾಣ ಖಂಡಿತ ಬಿತ್ತು. ಏಕೆಂದರೆ ಪತ್ರದಲ್ಲಿ ಬರೆದು ನಿಮ್ಮ ಭಾವನೆಗಳನ್ನು ತೋಡಿಕೊಂಡಂತೆ ಫೋನಿನಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ. ಆದರೂ ಕ್ರಮೇಣ ವಯ್ಯಕ್ತಿಕ ಪತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಯಿತು. 
ನಿಜ, ಆದರೆ ಅಂಚೆಅಣ್ಣನ ಕೆಲಸವೇನೂ ಕಡಿಮೆಯಾಗಿಲ್ಲ. ಆಗಿನ ವಯ್ಯಕ್ತಿಕ ಪತ್ರಗಳ ಬದಲಾಗಿ ಈಗ ವ್ಯವಹಾರಿಕ, ವ್ಯಾಪಾರಿ ಪತ್ರಗಳು ಬಂದಿವೆ. ದಿನಾಲೂ ನಿಮ್ಮ ಅಂಚೆಪೆಟ್ಟಿಗೆಯಲ್ಲಿ ಜಿವವಿಮಾ ಕಂತು ತುಂಬಲು ನೆನಪಿನೋಲೆ, ನಿಮ್ಮ ಬ್ಯಾಂಕಿನ, ಮ್ಯೂಚವಲ್ ಫಂಡಿನ, ಡಿಮ್ಯಾಟ್ ಅಕೌಂಟಿನ ಸ್ಟೇಟಮೆಂಟುಗಳು ಹೀಗೆ ಒಂದಿಲ್ಲ ಒಂದು ಅಂಚೆ ಕಾದು ಕುಳಿತಿರುತ್ತದೆ. ಹೊರತು ಯಾರಿಂದಲೂ ಪತ್ರ ಬಂದಿರುವುದಿಲ್ಲ. ಹಾಗಾಗಿ ಮೊದಲಿನ ಕುತೂಹಲ, ಉತ್ಸಾಹ ಈಗೇನಿಲ್ಲ. ಹಾಗೆ ಅಂಚೆಗಾಗಿ ಕಾಯುವ ನಮ್ಮ ವಯಸ್ಸೂ ಕಳೆದುಹೊಗಿರುವುದರಿಂದ ಬೇಜಾರೂ ಇಲ್ಲ. ಯೌವನದ ಸುಂದರ ದಿನಗಳಲ್ಲಿ ಈ ಪತ್ರಗಳ ಅಪರಿಮಿತ ಲಾಭವನ್ನು ನನ್ನಂಥ ಅನೇಕರು ಬೊಗಸೆತುಂಬ ಪಡೆದಿದ್ದೇವೆ, ಖುಶಿ ಪಟ್ಟಿದ್ದೇವೆ. ಪತ್ರಗಳಿಗಾಗಿ ಕಾಯುವ ಮಧುರ ಯಾತನೆಯನ್ನು ಅನುಭವಿಸಿದ್ದೇವೆ. ಅದು ಬಂದೊಡನೆ ಗಡಿಬಿಡಿಯಲ್ಲಿ ಒಡೆದು ಓದಿ ಅತ್ತಿದ್ದೇವೆ, ನಕ್ಕಿದ್ದೇವೆ.
ಇದೀಗ ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಮ್ಮೆಲ್ಲ ವ್ಯಾಪಾರೀ/ವ್ಯವಹಾರೀ ವಿಷಯಗಳನ್ನು e-mail ಮತ್ತು smsಮೂಲಕ ತಲುಪಿಸುವ, ತಿಳಿಸುವ ವ್ಯವಸ್ಥೆ ಪ್ರಾರಂಭವಾಗಿದೆ. ನಿಜ, e-mail ಗಳು ವಯ್ಯಕ್ತಿಕ ಪತ್ರಗಳ ಜಾಗವನ್ನೂ ತುಂಬಬಲ್ಲವು. ಆದರೆ ಪತ್ರಗಳ ಖುಶಿಯನ್ನು ಕೊಡಲಾರವು. ಪತ್ರಗಳೇ ಇಲ್ಲದ್ದರಿಂದ ಪತ್ರಗಳ ಬಗ್ಗೆ ಮೊದಲು ಬರುತ್ತಿದ್ದ "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ, ಈ ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳೆಸಿರುವೆ" ಎನ್ನುವ ಸುಂದರವಾದ ಮಧುರ ಹಾಡುಗಳೂ ಇನ್ನಿಲ್ಲವಾಗಿವೆ. ಸಿನೇಮಾಗಳಲ್ಲಿ ಪತ್ರಗಳ ಪ್ರೇಮಾಲಾಪನೆ ಮುಗಿದು ಇದೀಗ ಫೋನಾಯಣ ಪ್ರಾರಂಭವಾಗಿದೆ. ನಮ್ಮ ಮಕ್ಕಳು ತಮ್ಮ ಸ್ನೇಹಿತರೊಂದಿಗೆ smsಭಾಷೆಯಲ್ಲಿ ಸಂವಹನ ಶುರುವಿಟ್ಟುಕೊಂಡ ಈ ಸಂಕ್ರಮಣ ಕಾಲದಲ್ಲಿ ಕೂಡಾ ಪತ್ರಗಳ ಗತವೈಭವದ ನೆನಪಿನಲ್ಲಿ ನಮ್ಮ ಕಣ್ಣೂಗಳು ಒದ್ದೆಯಾಗುವಷ್ಟು ಭಾವುಕತೆಯನ್ನು ಇನ್ನೂ ಉಳಿಸಿಕೊಂಡಿರುವುದೇ ನಮ್ಮ ಹೃದಯಗಳ ಹೆಗ್ಗಳಿಕೆ!
ಶ್ರೀಮತಿ. ನೀತಾ. ರಾವ್.

*******************

Friday, 2 October 2015

ಹಳೇ ಸಿನಮಾ ಹಳೇ ಥೇಟರ್


ಹಳೇ ಸಿನಮಾ ಹಳೇ ಥೇಟರ್


          ಇಂದಿನ ದಿನಗಳಲ್ಲಿ ಒಂದು ಭಾನುವಾರ ಸಿನೆಮಾ ನೋಡಬೇಕೆಂದು ಟಿ.ವ್ಹಿ. ಮುಂದೆ ಕುಳಿತು, ನಡುನಡುವೆ ಜಾಹಿರಾತುಗಳಿಗಾಗಿ ಕೊಡುವ ಬ್ರೇಕ್ ಗಳಲ್ಲಿ ಮನೆಯವರಿಗೆ ಟೀ, ಕಾಫಿ ಸಮಾರಾಧನೆ ಮಾಡಿ, ಮತ್ತೇನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ನಡುನಡುವೆ ಬಂದು ಕುಳಿತುಕೊಂಡು ನಾಲ್ಕು ತಾಸಿನ ದೀರ್ಘವಾದ ಸಿನೆಮಾ+ಜಾಹಿರಾತುಗಳನ್ನು ನೋಡುವಾಗ ಮಧ್ಯೆ ಮಧ್ಯೆ ಮಕ್ಕಳು, ಮನೆಯವರು ರಿಮೋಟ್ ಕಸಿದುಕೊಂಡು 'ಕ್ರಿಕೆಟ್ ಸ್ಕೋರ್ ಎಷ್ಟಾಯ್ತು ನೋಡಿ ಕೊಟ್ಟುಬಿಡ್ತೀನಿ' ಅಂತ ತಲೆ ಚಿಟ್ಟು ಹಿಡಿಸುವುದು, ಮಧ್ಯೆ ಯಾರೋ ಮನೆಬಾಗಿಲಿಗೇ ಬಂದು ಹಪ್ಪಳ-ಸಂಡಿಗೆ ಬೇಕಾ ಎನ್ನುವುದು, ನಾನು ಅಸಹನೆಯಿಂದಲೇ ಬೇಡ ಬೇಡ ಎಂದು ಬೇಗ ಮಾತು ಮುಗಿಸಲು ಗಡಿಬಿಡಿ ಮಾಡಿದರೂ ಅವನು ವಾರ ಚುಡಿದಾರ ಸೆಟ್ ಕೂಡಾ ತಂದಿದಿನಿ ನೋಡ್ತೀರಾ ಎಂದು ಗೋಗರೆಯುವುದು - ಎಲ್ಲದರ ಮಧ್ಯೆ ಹಾಳು ಸಿನೆಮಾನೂ ಬೇಡ, ಟಿ.ವ್ಹಿ. ಸಹವಾಸಾನೂ ಬೇಡ ಎಂದು ಎದ್ದು ಹೋಗಿ ಬೆಡ್ ರೂಮಿನ ಬಾಗಿಲು ಹಾಕಿ ಮಲಗಿಕೊಂಡು ನಿದ್ರೆಯಿಲ್ಲದೇ ಒದ್ದಾಡುವಾಗ ನಮ್ಮ ಹಳೆಯ ಕಾಲೇಜು ದಿನಗಳ ಸಿನೆಮಾ ನೋಡುವ ಸಂಭ್ರಮದ ಗತವೈಭವ ಕಣ್ಣಿಗೆ ಕಟ್ಟುತ್ತದೆ.
       ಅವು ಎಂಬತ್ತರ ದಶಕದ ಆರಂಭದ ದಿನಗಳು, ನಾವೂ ಆಗಷ್ಟೇ ಶಾಲೆ ಮುಗಿಸಿ ಪಿ.ಯು.ಸಿ.ಗೆ ಕಾಲೇಜು ಕಟ್ಟೆ ಏರಿದವರು. ಬೆಳಗಾವಿಯ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಟಾಕೀಜುಗಳು ತುಂಬಿದ್ದವು. ಮನೆಯ ಹತ್ತಿರವೇ ಎಂಟು-ಹತ್ತು ಥೇಟರುಗಳು. ಒಂದಂತೂ ಮನೆಯ ಹಿತ್ತಲಿನಲ್ಲೇ, ರೇಡಿಯೊ ಥೇಟರ ಅಂತ. ಮನೆಯಿಂದ ನಾಲ್ಕು ಹೆಜ್ಜೆ ನಡೆದರೆ ರಿಟ್ಝ್ ಟಾಕೀಜು. ಮತ್ತೆ ಹುರುಪು, ಕಸುವು ಎರಡೂ ಇದ್ದ ಕಾಲದಲ್ಲಿ ಕಪೀಲ್, ಕೃಷ್ಣಾ, ಬಾಳಕೃಷ್ಣಾ, ಗ್ಲೋಬ್, ರೂಪಾಲಿ, ಅಝಾದ್, ಅರುಣ, ಹೀಗೆ ಯಾವ ಥೇಟರಗಳೂ ದೂರವಲ್ಲ ನಮಗೆ. ಒಂದು ಸಿನೆಮಾ ಬರುವುದಿದೆಯೆಂದರೆ ಅದರ ಕಥೆ ಏನಿರಬಹುದು, ನಾಯಕ-ನಾಯಕಿ ಯಾರು ಯಾರು, ನಿರ್ದೇಶಕ ಯಾರು, ಹಾಡುಗಳನ್ನು ಯಾರು ಯಾರು ಹಾಡಿದ್ದಾರೆ, ಅವು  ಚೆನ್ನಾಗಿವೆಯೇ, ಎಂದೆಲ್ಲಾ ಚರ್ಚೆಯಾಗುತ್ತಿತ್ತು, ಗೆಳತಿಯರ ಮಧ್ಯೆ, ಮುಖ್ಯವಾಗಿ ನಾವಿಬ್ಬರು ಅಕ್ಕ-ತಂಗಿಯರ ಮಧ್ಯೆ. ಆನಂತರ, ಹಾಗಾದರೆ ಸಿನೆಮಾಕ್ಕೆ ಹೋಗುವುದೋ ಬೇಡವೋ ಎಂದು ಡಿಸೈಡ್ ಮಾಡಿ ಕಾಲೇಜಿನಿಂದ ಬಂದವರೇ ಗಬಗಬನೇ ಊಟ ಮಾಡಿ ಅಮ್ಮನ ಮುಂದೆ ಹಾಜರಾಗಿ ಬೇಡಿಕೆಯಿಡುವುದು. ಅವಳು ಮೊದಲು "ಊಹೂಂ, ಊಹೂಂ, ಸಿನೆಮಾ ನೋಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗ ಇಷ್ಟು ಬೇಗ ಇನ್ನೊಂದಕ್ಕೆ ಕಳಿಸುವುದಿಲ್ಲ" ಎನ್ನುವಳು. "ಅಮ್ಮಾ ಪ್ಲೀಜ್" ಅಂತ ಗೋಗರೆತದ ನಂತರ "ಹಾಗಾದ್ರೆ ಬಾಲ್ಕನಿಗೆ ಹೋಗಬೇಡ್ರಿ, ಸ್ಟಾಲಿಗೆ ಹೋಗಿ ಸಾಕು" ಅಂತ ಒಂದು ಕಂಡಿಷನ್ ಹಾಕುವಳು. ಅಂತೂ ಒಪ್ಪಿಗೆ ಸಿಕ್ಕಿತಲ್ಲಾ ಅಷ್ಟೇ ಸಾಕು ಅಂತ ನಾವು ಓಡುವುದು.
        ಅಲ್ಲಿ ನೋಡಿದರೆ ಗದ್ದಲವೋ ಗದ್ದಲ. ಉದ್ದಾನುದ್ದ ಕ್ಯೂಗಳು- ಹುಡುಗರ ಕ್ಯೂ ಬೇರೆ, ಹುಡುಗಿಯರದೇ ಬೇರೆ. ಅಷ್ಟರ ಮೇಲೆ "ಒಬ್ಬರಿಗೆ ಎರಡೇ ಟಿಕೆಟ್ ಕೊಡ್ತಾರಂತೆ ಕಣೆ" ಅಂತ ಮುಂದೆ ನಿಂತವರಾರೋ ಹೆದರಿಸುವುದು. ಹಾಗಾಗಿ ಎನಾದರಾಗಲಿ ಎಂದು ಎಲ್ಲರೂ ಕ್ಯೂನಲ್ಲಿ ನಿಂತೇ ಬಿಡುವುದು. ಉಡಾಫೆ ಮಾಡ್ಕೊಂಡು ಲೇಟಾಗಿ ಬಂದ ಹುಡುಗರು ನಮ್ಮ ಹತ್ತಿರ ಬಂದು ಬಹಳ ಸಭ್ಯರಂತೆ ಸುಳ್ಳು ಸುಳ್ಳೇ ನಟಿಸುತ್ತಾ, "ಸಿಸ್ಟರ್ ಸಿಸ್ಟರ್, ನಮಗೆರಡು ಟಿಕೆಟ್ ತೆಗಿಸಿಕೊಡಿ ಸಿಸ್ಟರ್, ಹುಡುಗರ ಲೈನಲ್ಲಿ ಭಾಳ ರಷ್ ಇದೆ" ಎಂದು ದೈನಾಸಿ ಪಡುವುದು ಕೇಳಿ ಮೇಲೆ ಮೇಲೆ "ಹೂಂ ಹೂಂ" ಎಂದು ದುಡ್ಡಿಸಿದುಕೊಂಡ್ರೂ ಅವರು ಸ್ವಲ್ಪ ಆಚೆ ಹೋಗುತ್ತಲೂ ಕಡೆ "ಸಿಸ್ಟರ್ ಮೈ ಫುಟ್" ಅಂತ ಹುಡುಗರನ್ನು ಬೈಯ್ಯುವುದು, ಆದ್ರೂ "ಇರ್ಲಿ ಪಾಪ, ಅವೂ ನೋಡ್ಕೊಳ್ಲಿ" ಅಂತ ಒಂದೆರಡು ಟಿಕೆಟು ತೆಗಿಸಿಕೊಟ್ಟು ಉಪಕಾರ ಮಾಡಿ, ಅವರ ಥ್ಯಾಂಕ್ಸಿಗೆ ಒಂದು ಹೂನಗೆ ನಕ್ಕು ಸೀಟು ಹಿಡಿಯಲು ಧಾವಿಸುವುದು.
       ಗುದ್ದಾಡಿ ಸೀಟು ಸಿಕ್ಕು ಗೆಳತಿಯರು, ಅಕ್ಕ, ಒಮ್ಮೊಮ್ಮೆ ಅವಳ ಗೆಳತಿಯರು ಹೀಗೆ ಉದ್ದಾನುದ್ದ ಸಾಲು ನಾವೇ ಕೂತ್ಕೊಂಡು, ಸಣ್ಣ ಪುಟ್ಟ ಡೈಲಾಗಿಗೆಲ್ಲಾ ಖೊಳ್ ಅಂತ ನಕ್ಕು ಸೊಕ್ಕು ತೋರಿಸಿ, ಒಮ್ಮೊಮ್ಮೆ ಬೇರೆ, ವಯಸ್ಸಾದ ಸಿರಿಯಸ್ ಜನರಿಂದ ಬೈಸಿಕೊಂಡಿದ್ದೂ ಇದೆ. ನನಗಿನ್ನೂ ನೆನಪಿದೆ, ವಿಷ್ಣುವರ್ಧನ, ಭವ್ಯಾ ಅಭಿನಯದ 'ನೀ ಬರೆದ ಕಾದಂಬರಿ' ಚಿತ್ರದಲ್ಲಿ ಸಿ.ಆರ್. ಸಿಂಹ ಅವರ ಡೈಲಾಗ್ ಕೇಳಿ ಇಡೀ ಒಂದು ಸಾಲು ನಾವೇ ನಾವಾಗಿ ಕುಳಿತಿದ್ದ ಗೆಳತಿಯರ ಬಳಗ ನಕ್ಕಿದ್ದೇ ನಕ್ಕಿದ್ದು.
      ಹಾಗಂತ ಎಲ್ಲಾ ಸಿನೆಮಾಗಳಿಗೆ ಥರ ರಶ್ ಇರ್ತಿತ್ತು ಅಂತಲ್ಲ. ಒಂದೊಂದು ಸಿನೆಮಾಕ್ಕೆ ಹೋಗಿ ಅವು ಖಾಲಿ ಹೊಡೆಯುವುದನ್ನು ನೋಡಿ, ಇನ್ನೇನು ಇಷ್ಟು ದೂರ ಬಿಸಿಲಲ್ಲಿ ಹ್ಯಾಗೂ ನಡಕೊಂಡು ಬಂದಿದ್ದೀವಲ್ಲ ಸಿನಮಾ ನೋಡಿಯೇ ಹೋದರಾಯ್ತು ಅಂತ ಕೂತ್ಕೊಂಡು ಅಷ್ಟು ಕಷ್ಟ ಪಟ್ಟಿದಕ್ಕೆ ಮತ್ತೆ ಹಂಗೇ ಮಜಾ ಮಾಡಿ ನಕ್ಕು ನಕ್ಕು ಹೊರಬಂದ ಉದಾಹರಣೆಗಳೂ ಇವೆ.
       ಮುಂದೆ ೮೬-೮೭ರಲ್ಲಿ ನಮ್ಮಣ್ಣ (ದೊಡ್ಡಪ್ಪನ ಮಗ) ಬೆಳಗಾವಿಗೆ ಬಂದಮೇಲಂತೂ ನಾವು ಮನೆಮಂದಿಯೆಲ್ಲಾ ಕೂಡಿ ರಾತ್ರಿ ಒಂಬತ್ತರ ಆಟಕ್ಕೆ ಸಿನೆಮಾಕ್ಕೆ ಹೋಗುವುದು ಬಹಳ ಕಾಮನ್ ಆಯಿತು. ಅವನು ತನ್ನ ಕೆಲಸ ಮುಗಿಸಿ ಎಂಟು ಗಂಟೆಗೆ ಬಂದು "ಕಾಕು ಇವತ್ತು ನಯಾ ದೌರ ಸಿನೆಮಾಕ್ಕೆ ಹೋಗುವುದೇ, ಬೇಗ ಅಡಿಗೆ ಮಾಡು" ಎನ್ನುವುದು, ನಮ್ಮಮ್ಮ ಗಡಬಡಿಸಿ ಮುಂದೆ ಹದಿನೈದು ಇಪ್ಪತ್ತು ನಿಮಿಷದೊಳಗೆ ಅನ್ನ ಝುಣಕ ರೆಡಿ ಮಾಡುವುದು, ಬಿಸಿ ಬಿಸಿ ಅನ್ನ ಉಂಡು ಓಡುವ ನಡಿಗೆಯಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಒಳಸೇರಿ ಕತ್ತಲೆಯಲ್ಲಿ, ಲೈಟ್ ಬಿಡುವವನ ಹಿಂದೆ ಹಿಂದೆ ಹೊರಟು ಯಾರದೋ ಕಾಲು ತುಳಿದು ಸಾರಿ ಹೇಳಿ, ಆತ ತೋರಿಸಿದ ಸೀಟ್ ಮೇಲೆ ಉಫ್ ಅಂತ ಕುಳಿತು, ಪಿಕ್ಚರ್ ಸುರುವಾಗಿಬಿಟ್ಟಿದೆಯೇನೋ ಅಂತ ಹೆದರಿ ಪರದೆ ಮೇಲೆ ಇನ್ನೂ ಜಾಹಿರಾತು ಬರುತ್ತಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟು ಖುಶಿ ಪಡುವುದು, .... ಹೀಗೆ ಎಷ್ಟು ಸಿನೆಮಾಗಳನ್ನು ನೋಡಿದೆವೋ ಲೆಕ್ಕವಿಲ್ಲ.
       ಹಳೇ ಕಪ್ಪು ಬಿಳುಪಿನ ಚಿತ್ರಗಳು ಮತ್ತೆ ಮತ್ತೆ ಬರುವ ಕಾಲವದು. ಹಾಗಾಗೇ ಅನೇಕ ಹಳೆಯ ಹಿಂದಿ ಚಿತ್ರಗಳನ್ನು ಟಾಕೀಜಿನಲ್ಲೇ ನೋಡುವ ಭಾಗ್ಯ ನಮ್ಮದಾಯಿತು. ಬೈಜೂ ಬಾವರಾ, ಅನಾರಕಲಿ, ಹರಿಯಾಲಿ ಔರ್ ರಾಸ್ತಾ, ದೋ ಬದನ್, ಕಶ್ಮೀರ್ ಕಿ ಕಲಿ, ಲೀಡರ್, ನಯಾದೌರ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ, ಸಂಗಮ, ಇಂಥ ನೂರಾರು ಹಳೆಯ ಚಿತ್ರಗಳನ್ನು ಈಗ ಬಣ್ಣಗೆಟ್ಟು ಹಳೆಯದಾದ, ಅಥವಾ ಅಳಿದು ಇನ್ನಾವುದೋ ಕಟ್ಟಡಕ್ಕೆ ಆಧಾರವಾದ ಹಳೆಯ ಟಾಕೀಜುಗಳಲ್ಲೇ ನಾವೆಲ್ಲಾ ನೋಡಿದ್ದೇವೆ. ಅಷ್ಟೇ ಅಲ್ಲ, ಆಯಾ ಕಾಲಕ್ಕೆ ಬರುತ್ತಿದ್ದ ಹೊಸ ಚಿತ್ರಗಳನ್ನೂ ಇದೇ ಥರ ನೋಡುತ್ತಿದ್ದೆವು. ಅಭಿಮಾನ, ಮಿಲಿ, ತ್ರಿಶೂಲ, ದೋಸ್ತಾನ, ಮುಂತಾದ ಚಿತ್ರಗಳನ್ನು ನಿಜಕ್ಕೂ ಟಾಕೀಜಿನಲ್ಲೇ ನೋಡಬೇಕು. ಮುಕದ್ದರ ಕಾ ಸಿಕಂದರ, ಶಂಕರ ಗುರುಅನಂತರದ ದಿನಗಳಲ್ಲಿ ಬಂದ ತೆಲಗಿನ ಸ್ವಾತಿಮುತ್ಯಂ ಚಿತ್ರಗಳನ್ನಂತೂ ನಾವು ಟಾಕೀಜಿನಲ್ಲಿ ಮೂರು ಮೂರು ಸಲ ನೋಡಿದ್ದೆವು ಎಂದು ಹೇಳಿ ಮಕ್ಕಳಿಂದ ಮಂಗಳಾರತಿ ಮಾಡಿಸಿಕೊಂಡೂ ಆಗಿದೆ.
      ಈಗ ಬೆಳಗಾವಿಯ ಹೆಚ್ಚಿನ ಟಾಕೀಜುಗಳು ನೆಲಸಮವಾಗಿ ಸ್ಥಳದಲ್ಲಿ ಕಾಂಪ್ಲೆಕ್ಸಗಳು ತಲೆ ಎತ್ತಿವೆಯಾವ ರೇಡಿಯೋ ಥೇಟರಿನಲ್ಲಿ (ನಮ್ಮ ಮನೆಯ ಹಿತ್ತಲಿನಲ್ಲೇ ಇದ್ದ ಥೇಟರು) ನಾವು ಜಯಪ್ರದಾ, ರಿಷಿಕಪೂರನ 'ಸರಗಮ್' ಚಿತ್ರವನ್ನು ನೋಡಿ, ನಂತರ ಆರು ತಿಂಗಳ ಕಾಲ ಹಾಡುಗಳನ್ನು ಕೇಳಿ ಖುಶಿಪಟ್ಟಿದ್ದೆವೋ, ಅನಂತನಾಗ, ಆರತಿ, ರೂಪಾ ಅಭಿನಯದ 'ಮುಳ್ಳೀನ ಗುಲಾಬಿ' ಚಿತ್ರವನ್ನು ನೋಡಿ ಹುಚ್ಚುಹಿಡಿದವರಂತೆ ತಿಂಗಳುಗಟ್ಟಲೇ ಹಿತ್ತಲಲ್ಲಿ ಕುಳಿತು ಹಾಡು, ಡೈಲಾಗುಗಳನ್ನು ಕೇಳಿ ಬಾಯಿಪಾಠ ಮಾಡಿ ಆನಂದಿಸಿದ್ದೆವೋ, ರೇಡಿಯೋ ಥೇಟರ್ ಈಗ ನಾಲ್ಕು ಅಂತಸ್ತಿನ ರೇಡಿಯೋ ಕಾಂಪ್ಲೆಕ್ಸ್ ಆಗಿ ಮಾರ್ಪಟ್ಟಿದೆ. ಕಪೀಲ ಥೇಟರ್ ಹೋಗಿ ನ್ಯೂಕ್ಲಿಯಸ್ ಮಾಲ್ ಆಗಿದ್ದರೂ ಅದರ ನೆತ್ತಿಯ ಮೇಲೆ ಬಿಗ್ ಸಿನೆಮಾದ ಎರೆಡು ಸ್ಕ್ರೀನಗಳಿವೆ. ಎಂದೂ ನಡೆಯದ ಚಂದನ ಟಾಕೀಜ್ ಈಗ ಚಂದನ ಐನಾಕ್ಸ್ ಆಗಿ ಮೂರು ಮೂರು ಸ್ಕ್ರೀನಗಳಲ್ಲಿ ಚಿತ್ರಗಳನ್ನು ಜನರಿಗೆ ತೋರಿಸುತ್ತ ಬಹುಷಃ ಲಾಭ ಮಾಡಿಕೊಳ್ಳುತ್ತಿದೆ. ಆಝಾದನ ನೆನಪೂ ಜನಕ್ಕೆ ಉಳಿಯಲಾರದಂತೆ ಅದನ್ನು ಕಾಲ್ಕೆಳಗೆ ದಬ್ಬಿ, ಅದರ ಮೇಲೆಯೇ 'ಸ್ವರೂಪ ಪ್ಲಾಝಾ' ಎತ್ತರವಾಗಿ ಎದ್ದು ನಿಂತಿದೆ. ಕೃಷ್ಣಾ ಟಾಕೀಜ ಹೋಗಿ ಯಾವುದೋ ಕಂಪನಿಯ ಶೋರೂಮ್ ಆಗಿದೆ. ಅರುಣ ಥೇಟರ್ ಏನೂ ಆಗದೇ ಪಿಕ್ಚರೂ ನಡೆಯದೇ, ಬಂದಾಗಿ, ಮೂಕವಾಗಿ ಖಾಲಿ ನಿಂತಿದೆ. ರಿಟ್ಝ್ ಥೇಟರ್ ಸ್ವಲ್ಪವೇ ಪರಿವರ್ತನೆಗೊಂಡು ಲೋಕಮಾನ್ಯ ರಂಗಮಂದಿರವಾಗಿದೆ. ನರ್ತಕಿ ಥೇಟರ್ ಹೋಗಿ ಅಪಾರ್ಟಮೆಂಟ ಆಗಿದೆ. ಸ್ವರೂಪ, ಚಿತ್ರಾ, ಪ್ರಕಾಶ ಮುಂತಾದ ಕೆಲವೇ ಕೆಲವು ಟಾಕೀಜುಗಳು ಕಾಲಕ್ಕೆ ತಕ್ಕಂತೆ ನವೀಕರಣಗೊಂಡು ಒಂದಿಷ್ಟು ಲಾಭ ಮಾಡಿಕೊಳ್ಳೂತ್ತಿವೆಯೇನೋ! ಉಳಿದವೆಲ್ಲ ಹಾಗೆಯೇ ಹರಿದ ಕುಶನ್ನಿನ ಚೇರುಗಳು, ಬಣ್ಣ ಕಿತ್ತುಹೋದ ಗೋಡೆಗಳು, ಅದೇ ಹಳೆಯ ಸ್ಕ್ರೀನು ಇಟ್ಟುಕೊಂಡು ಅಂತೂ ಇನ್ನೂ ಬದುಕಿದ್ದೇವೆ ಎಂದು ಉಸಿರಾಡುತ್ತಿರುವ ಹಳೇ ಥೇಟರುಗಳು.
        ದಿನಗಳ ಮಜಾ, ಹುಚ್ಚು, ಆಗಿನ ಕಾಲದ ಸಿನೆಮಾಗಳು ಈಗ ಬರುವುದು ಸಾಧ್ಯವೇ ಇಲ್ಲ. ಈಗಿನ ಕೆಲವು ಸಿನೆಮಾಗಳನ್ನು ನೋಡಲಾಗದೇ ಟಾಕೀಜಿನಿಂದ ಎದ್ದು ಬಂದ ಮೇಲೆ ನಾನು ಮತ್ತು ನನ್ನಕ್ಕ ಇದನ್ನೆಲ್ಲ ನೆನಪಿಸಿಕೊಂಡು ಮಾತಾಡಿ ನಕ್ಕು, ಒಂದಿಷ್ಟು ವಿಷಾದಿಸಿ, ನೋವು ನಲಿವುಗಳನ್ನು ಒಟ್ಟಿಗೆ ಅನುಭವಿಸಿದೆವು. ಯಾಕೆಂದರೆ ಆಗಿನ ಕಾಲದ ತುಡಿತಗಳೇ ಬೇರೆ, ನಮ್ಮ ವಯಸ್ಸೂ ಹಾಗಿತ್ತು.
ನೀತಾ ರಾವ್
**************************