Thursday, 24 November 2016


ಹತ್ತನೇ ಕ್ಲಾಸಿನ ಹುಡುಗಿಯರು


       ಅವರು ಇರುವುದೇ ಹಾಗೆ. ಏನೋ ಧಿಮಾಕು, ನಾವೀಗ ದೊಡ್ಡವರಾಗಿಬಿಟ್ಟಿದ್ದೇವೆ ಅಂತ. ಮನೆಯಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಗುರುಗಳೆಂದರೆ ಲೆಕ್ಕವೇ ಇಲ್ಲ. "ಇವರೇನು ಹೇಳುತ್ತಾರೆ, ಬದನೆಕಾಯಿ!" ಎಂದು ಕಡೆಗಣ್ಣಿನಿಂದ ತಾತ್ಸಾರದ ನೋಟವೊಂದನ್ನು ಒಗೆದು, ಧಪಧಪ ಕಾಲು ಬಡಿಯುತ್ತಾ ಹೋದವರು, ಹೊಸ್ತಿಲ ಹೊರಗೆ ಬಿದ್ದ ಕೂಡಲೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ, ಕೊರಳಲ್ಲಿ ಕೋಗಿಲೆಯನ್ನಿಟ್ಟುಕೊಂಡವರಂತೆ, ನವಿಲಿನ ನಡಿಗೆಯಲ್ಲಿ ಹಾಡುತ್ತಾ ಸಾಗುತ್ತಾರೆ. ಶಾಲೆಯ ಯುನಿಫಾರ್ಮ್ಗಿಡ್ಡವಾಗಿ (ಅಂದರೆ ಇವರು ಎತ್ತರೆತ್ತರ ಬೆಳೆದು) ಮೊಣಕಾಲಮೇಲ್ಬಂದು ನೋಡುಗರ ಕಣ್ಣಿಗೆ ಒಮ್ಮೊಮ್ಮೆ ಮುಜುಗರ, ಮತ್ತೊಮ್ಮೆ ರಸದೌತಣ ಒದಗಿಸುತ್ತದೆ ಎನ್ನುವುದು ಗೊತ್ತಿದ್ದರೂ ಏನೋ ಉಡಾಫೆ.  ಇವರ ಪಾಲಕರೂ ಅಷ್ಟೇ ಜುಗ್ಗರು. ಕಡೇ ಒಂದು ವರ್ಷಕ್ಕೆ ಮತ್ತೊಂದು ಸ್ಕರ್ಟ್ಹೊಲಿಸಿ ದುಡ್ಡು ದಂಡ ಮಾಡುವುದೇಕೆ ಎಂದು ಎಲ್ಲ ಗೊತ್ತಿದ್ದೂ ಗೊತ್ತಿಲ್ಲದವರಂತೆ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುತ್ತಿರುತ್ತಾರೆ. ಇನ್ನು ಶಾಲೆಯ ಹೆಡ್ಮಾಸ್ತರು ಏನಾದರೂ ಅದರ ಸುದ್ದಿ ತೆಗೆದರೋ ಮುಗಿದೇಹೋಯ್ತು, "ಇವರಿಗೇನು ತಿಳಿಯುತ್ತೇ, ಮುದಿಗೂಬೆಯಷ್ಟು ವಯಸ್ಸಾದರೂ ಇಂಥ ಕಮೆಂಟ್ಮಾಡುವುದು ಬಿಡಲಿಲ್ಲ" ಎಂದು ಅವರ ಜನ್ಮ ಜಾಲಾಡಿ ಬಿಡುತ್ತಾರೆ. ತಾವು ಮಾತ್ರ ಹೀಗೆ ಬಿಳಿ ಚರ್ಮ ತೋರಿಸುವ ಗಿಡ್ಡ ಸ್ಕರ್ಟಗಳನ್ನು ಹಾಕುವುದೇ ಸರಿ ಎಂಬ ಧೋರಣೆಯಲ್ಲಿ ತಿರುಗುತ್ತ,  ಮನೆ-ಶಾಲೆಗಳೆರಡರಲ್ಲೂ ಕಿಚ್ಚು ಹಚ್ಚುತ್ತಾರೆ.
        ಇದು ಹೀಗೇ ಯಾವಾಗಿನಿಂದಲೂ ನಡೆದುಬಂದಿದೆ. ಮೂವತ್ತು ವರ್ಷಗಳ ಹಿಂದೆಯೂ ನಾನು ಹತ್ತನೇ ಕ್ಲಾಸಿನಲ್ಲಿದ್ದಾಗಲೂ. ನಾನೇನೋ ಆಗ ವಯಸ್ಸಿಗೆ ತಕ್ಕ ಬೆಳವಣಿಗೆ ಕಾಣದೇ ಯಾವಾಗಲೂ ಮುಂದಿನ ಬೆಂಚೇ ಕಾಯಮ್ಮಾಗಿ ಎಲ್ಲ ಟೀಚರಗಳ ಹದ್ದಿನ ದೃಷ್ಟಿಗೆ ಅತೀ ಹತ್ತಿರದಲ್ಲಿ ಕೂರಬೇಕಾಗಿತ್ತು. ಆದರೆ ಹಿಂದಿನ ಬೆಂಚಿನ ಹುಡುಗಿಯರಿಗಿದ್ದ ಸ್ವಾತಂತ್ರ್ಯ ನಮ್ಮಂಥ ಗಿಡ್ಡ ಹುಡುಗಿಯರಿಗಿರಲಿಲ್ಲ. ಅವರೋ ಎತ್ತರ,  ದಪ್ಪ ಬೆಳೆದ ಕಾಲೇಜು ಹುಡುಗಿರಂತೆ ಕಾಣುವಂಥವರು. ನಮ್ಮದೇನು,  ಒಂದು ಕಾಲು ಹೊರಗೆ, ಒಂದು ಒಳಗೆ ಎಂದು ಡೌಲು ಬಡೆಯುತ್ತ ಸೊಕ್ಕಿ ತಿರುಗಾಡುವವರು. ಟೀಚರಗಳೆಂದರೆ (ಲೇಡಿ ಟೀಚರಗಳು) ಲೆಕ್ಕವಿಲ್ಲ, ಮಾಸ್ತರಗಳೆಂದರೆ (ಪುರುಷರು) ಇವರಿಗೆ ಏನೋ ಒಂದು ರೀತಿಯ ಆಕರ್ಷಣೆ ಬೆರೆತ ಸಿಟ್ಟು. ಮೇಲೆ ಮೇಲೆ ಹುಸಿ ಮುನಿಸು ತೋರಿಸುವುದು, ಒಳಗೊಳಗೇ ಆ ಸರು ತನ್ನನ್ನೇ ನೋಡುತ್ತಿದ್ದ ಎಂದು ಇನ್ನೊಬ್ಬಳ ಕಿವಿಯಲ್ಲಿ ಉಸಿರಿ ಕಣ್ಣು ಹೊಡೆದು ನಗುವುದು. ಇವರೆಲ್ಲಾ ಆಗಲೇ ‘ದೊಡ್ಡವರೂ’ ಆಗಿಬಿಟ್ಟಿದ್ದರಿಂದ ಏನೇನೋ ಗುಸುಗುಸು, ಪಿಸಿಪಿಸಿ ಮಾತನಾಡಿಕೊಳ್ಳುವುದು ನನ್ನಂಥ ಪೀಚಲು ಹುಡುಗಿಯರಿಗೆ ಅರ್ಥವೇ ಆಗುತ್ತಿರಲಿಲ್ಲ. ಕೇಳಿದರೆ "ನಿನಗೇನೂ ಗೊತ್ತಾಗುವುದಿಲ್ಲ ಸುಮ್ಮನಿರು" ಎಂದು ಕಿಚಾಯಿಸಿ ನಗುವುದು. ನನಗೆ ಗೊತ್ತಾಗದ್ದು ಇವರಿಗೇನಪ್ಪಾ ಗೊತ್ತಾಗಿರಬಹುದು ಎನ್ನುವುದು ಆಗಿನ ಕಾಲಕ್ಕೆ ಬಿಡಿಸಲಾರದ ಯಕ್ಷಪ್ರಶ್ನೆಯಾಗಿತ್ತು ನನಗೆ. ಈಗಿನ ಹುಡುಗಿಯರು ಇದನ್ನೆಲ್ಲ ಓದಿದರೆ ನಕ್ಕು ಬಿಡಬಹುದು, ಸುದ್ದಿ-ಸ್ಫೋಟದ ಈ ಯುಗದಲ್ಲಿ ಅವರಿಗೆ ಗೊತ್ತಿಲ್ಲದ್ದು ಏನೂ ಉಳಿದಿಲ್ಲ.
ಅವರೆಲ್ಲ ಥ್ರೋಬಾಲ್ ಆಡುತ್ತ ಜಿಗಿಯುತ್ತಿದ್ದರೆ ಅಷ್ಟೊಂದು ಕಸುವಿಲ್ಲದ ನನ್ನಂಥವರು ನೆಟನ ಮುಂದುಗಡೆಯೇ ನಿಲ್ಲಬೇಕಿತ್ತು. ಅಪ್ಪಿತಪ್ಪಿ ಸರ್ವಿಸ್ಮಾಡಿ ಬಾಲು ನೆಟ್ದಾಟಿ ಆಕಡೆ ಹೋಯಿತೋ, ಎತ್ತರ-ದಪ್ಪಗಿದ್ದ ಧಾಂಡಿಗ ಹುಡುಗಿಯರೆಲ್ಲ ಸೇರಿ ನನ್ನನ್ನು ಎತ್ತಿ ಕುಣಿದಾಡಿಬಿಡುತ್ತಿದ್ದರು. ವಿಜ್ಞಾನ ಕಲಿಸುವ ಸರು ಬಯೊಲಾಜಿ ಪಿರಿಯಡಿನಲ್ಲಿ ಏನೇನೋ ಹೇಳುತ್ತಾ ಕಣ್ಣು-ಹುಬ್ಬು ಕುಣಿಸುತ್ತಿದ್ದರೆ ಇವರೆಲ್ಲಾ ಬಾಯಿ ಮೇಲೆ ಕೈ ಇಟ್ಟುಕೊಂಡು ಮುಸಿಮುಸಿ ನಗುವರು. ಅರ್ಥವಾಗದ ನನ್ನಂಥ ಒಂದೆರಡೇ ಹುಡುಗಿಯರು ಪೆಚ್ಚಾಗಿ ಕಣ್ಣ-ಕಣ್ಣ ಬಿಡುವದು.
    ಒಬ್ಬ ಗೆಳತಿಯಂತೂ ಇತಿಹಾಸದ ಸರು ಬಂದ ಕೂಡಲೇ ತಾನೇತಾನಾಗಿ ಎದ್ದು ನಿಂತುಬಿಡುವವಳು. ಪಾಪ ಆ ಸರು ಬಹಳ ಸಂಭಾವಿತರು,  "ಯಾಕವ್ವಾ ನಂದಾ, ಎದ್ದುನಿಂತಿ?"  ಎಂದರೆ ಸಾಕು, "ಸರ್  ನೀವೇನರೇ ನ್ಯವಾ ತೆಗದು ಹೆಂಗೂ ಎದ್ದು ನಿಲ್ಲಿಸೇ ಬಿಡತೀರಿ, ಅದಕ್ಕಿಂತ ನಾನs ಎದ್ದು ನಿಂತುಬಿಟ್ಟಿದ್ದು ಛೊಲೋ" ಎನ್ನುವವಳು. ಅವರು ಅಷ್ಟೇ ಸಮಾಧಾನದಿಂದ "ಇರವಾಲ್ತೇಳವಾ, ಇನ್ನೊಂದ ಸಲಾ ಹಿಂಗ ಮಾಡಬ್ಯಾಡ ಕುತಗೋ" ಎಂದು ಹೇಳಿದರೂ ಇವಳು ಎದ್ದೇ ನಿಂತು ಎಲ್ಲರಿಗೂ, ಮುಖ್ಯವಾಗಿ ಮಾಸ್ತರಿಗೆ ಕಿರಿಕಿರಿ ಮಾಡುವವಳು.
      ಶಾಲೆಯ ಎನ್ಯುವಲ್ಡೇಗೆ ನಾಟಕದ ತಯಾರಿ ನಡೆದಿತ್ತು. ಆಫಿಸಿನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕ್ಲರ್ಕ್,  ನಾನು ನಾಟಕ ಕಲಿಸಿಕೊಡುತ್ತೇನೆ ಎಂದು ಮುಂದೆ ಬಂದರು. ಆದರೆ ಈ ಹುಡುಗಿಯರ ಕೈಯಲ್ಲಿ ಏಗಲಾರದೇ ಹಿಂದೆ ಸರಿದುಬಿಟ್ಟರು. "ಅಂವಾ ಸುಮ್ಮಸುಮ್ಮನ ನನ್ನ ಕೈ ಮುಟ್ಟತಾನ,  ಗಲ್ಲ ಮುಟ್ಟಿದ"  ಅಂತ ವರಾತ ತೆಗೆದು ಆ ಕ್ಲಾರ್ಕಿಗೆ ನಮೋನಮೋ ಎನಿಸಿಬಿಟ್ಟರು.
ಶಾಲೆಗೆ ಬರುವಾಗ ಮನೆಯಿಂದ ಏಷ್ಟು ಬೇಗ ಬಿಟ್ಟರೂ ಜೋಲಾಡಿಕೊಂಡು ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು ಒಂದು ಹೆಜ್ಜೆ ಮುಂದೆ ಇಟ್ಟರೆ ಇನ್ನೆರೆಡು ಹೆಜ್ಜೆ ಹಿಂದೆ ಹಾಕುತ್ತ, ಅಂತೂ ಮೊದಲನೇ ಪಿರಿಯಡಿಗೆ ತಡವಾಗಿಯೇ ಬಹಳಷ್ಟು ಮಂದಿ ಬರುವವರಿದ್ದರು. ಶಾಲೆಯ ಟೈಮಾದರೂ ಏನಂತೀರಿ? ಬೆಳಿಗ್ಗೆ ಅಂದರೆ ಹೆಚ್ಚುಕಡಿಮೆ ಬಿಸಿಲೇರುವ ಹೊತ್ತು, ಹತ್ತೂನಾಲವತ್ತಕ್ಕೆ ಶುರುವಾಗಿ ಐದೂ ಹತ್ತಕ್ಕೆ ಮುಗಿಯುವುದು. ಅಷ್ಟಾಗಿ ಇಷ್ಟು ಛಂದ. ಇವರು ಹೊರಡುವ ಮೆರವಣಿಗೆಯ ಹಾದಿಯಲ್ಲಿ ಡೈಲಾಗಗಳ ಹೂಮಳೆಗರೆಯಲು ಆಗಿನ ಕಾಲದ ಹೀರೋಗಳ ರೀತಿ ಬೆಲ್-ಬಾಟಮ್  ಪ್ಯಾಂಟು,  ಕ್ರಾಪು ಬಿಟ್ಟುಕೊಂಡು ರಸ್ತೆಯ ತಿರುವಿನಲ್ಲಿ ಕಾಯುತ್ತಿದ್ದ ಪಡ್ಡೆಹುಡುಗರ ಗುಂಪೇ ಇರುತ್ತಿತ್ತಲ್ಲ! ಅವರ ಕಡೆ ಕದ್ದು ಕದ್ದು ನೋಡುತ್ತ, ಆ ಕ್ಶಣಕ್ಕೆ, ಆ ವಯಸ್ಸಿಗೆ ಅವರೇ ಹೀರೋಗಳೆಂದುಕೊಂಡು, ಒಂದು ಹುಸಿನಗೆ ಚೆಲ್ಲಿ ಹೆಜ್ಜೆ ಮುಂದಿಡುವಷ್ಟರಲ್ಲಿ ಪಾಪ ಎಲ್ಲಿಗೆ ಹೊರಟಿದ್ದೇವೆನ್ನುವದನ್ನೇ ಮರೆತುಬಿಡುವ ಹೆಣ್ಣುಗಳು.
  ಕಾಲೇಜೆಂದರೆ ಕಣ್ಣ ತುಂಬ ಕನಸುಗಳು, ಮನದ ತುಂಬ ಉಲ್ಹಾಸ. ಸ್ವಪ್ನಲೋಕದ ಮಹಾದ್ವಾರವೇ ಅದು ಎನ್ನುವ ಭಾವನೆ. ಎಷ್ಟು ಬೇಗ ಅಲ್ಲಿಗೆ ತಲುಪುತ್ತೇವೋ ಎನ್ನುವ ಕಾತರ. ನಮಗೆ ಬೇಡವಾದ ಸಬ್ಜೆಕ್ಟಗಳನ್ನೆಲ್ಲ ಬಿಟ್ಟಹಾಕಿಬಿಡಬಹುದೆಂಬ ಖುಶಿ. "ಥೂ ಈ ಹಾಳಾದ ಇತಿಹಾಸ ಯಾರಿಗೆ ಬೇಕಪ್ಪಾ, ಇಸ್ವಿಗಳನ್ನೆಲ್ಲ ಬಾಯಿಪಾಠ ಮಾಡಿ ಮಾಡಿ ಸಾಕಾಗಿ ಹೋತು, ಆದರೂ ಅಕಬರನಿಗೆ ಬರೀಬೇಕಾದ ಇಸ್ವಿ ಬ್ರಿಟಿಷರಿಗೆ ಹೋಗ್ತದ, ಬ್ರಿಟಿಷರದ್ದು ಶಿವಾಜಿಗೆ ಹೋಗ್ತದ, ಇನ್ನ ಜಾಗ್ರಫಿಯಂತೂ ಫಜೀತಿ ಹಿಡಿಸಿಬಿಟ್ಟದ. ರಾಜಸ್ಥಾನದ ರಾಜಧಾನಿ ಒಯ್ದು ಗುಜರಾತಿಗೆ, ಗುಜರಾತಿಂದು ಒಯ್ದು ಉತ್ತರ ಪ್ರದೇಶಕ್ಕ, ಹಿಂಗ ಏನೇನರೇ ತಪ್ಪಾಗತಾವ. ಅಲ್ಲಾ ಬೇರೆ ರಾಜ್ಯದಾವ್ರು ರಾಜಧಾನಿ ತೊಗೊಂಡು ನಾವೇನ ಮಾಡೋದು, ನಮ್ಮ ಬೆಂಗಳೂರೊಂದು ನಮಗ ಗೊತ್ತಿದ್ರ ಸಾಕಲ್ಲೇನು? ನಾ ಕಾಲೇಜಿಗೆ ಹೋದಮ್ಯಾಲೆ ಈ ಹಿಸ್ಟರಿ, ಜಾಗ್ರಫಿ ತೊಗೊಂಡ ಹೋಗಿ ಹಾಳಭಾವಿಗೆ ಹಾಕಿ ಬರ್ತೇನಿ" ಅಂತ ಒಬ್ಬಳು ಹೇಳಿದ್ರೆ, ಇನ್ನೊಬ್ಬಳು ಗಣಿತ-ದ್ವೇಶಿ ಗೆಳತಿ, "ನಾನಂತೂ ಕಾಲೇಜಿಗೆ ಹೋದಮ್ಯಾಲೆ ಮದ್ಲು ಈ ಗಣಿತಕ್ಕ ಎಳ್ಳುನೀರು ಬಿಡತೇನವಾ. ಸಾಕಾಗೇದ ಅದರ ಸಹವಾಸ, ಬೀಜಗಣಿತಂತ, ಜಾಮೆಟ್ರಿ ಅಂತ, ಏನುಪಯೋಗ ಅದ ಮುಂದ ನಮ್ಮ ಜೀವನಕ್ಕ?" ಅನ್ನುತ್ತಿದ್ದಳು. ಮತ್ತೊಬ್ಬಳಿಗೆ ಸೈನ್ಸನ ಅಲರ್ಜಿ. ಹೀಗೇ ಎಲ್ಲರಿಗೂ ಕಾಲೇಜಿನಲ್ಲಿ ತಮಗೆ ಇಷ್ಟವಾದ ವಿಷಯಗಳನ್ನು ತೆಗೆದುಕೊಳ್ಳುವ ಉತ್ಸಾಹಕ್ಕಿಂತ, ಬೇಸರದ ತಲೆ ಕೆಡಿಸುವ ವಿಷಯಗಳನ್ನು ಬಿಟ್ಟುಬಿಡುವ ಸಂಭ್ರಮವೇ ಜಾಸ್ತಿಯಾಗಿರುತ್ತಿತ್ತು. ಹಾಗಾಗಿ ಕಾಲೇಜಂದರೇನು, ಅಲ್ಲಿನ ಸಬ್ಜೆಕ್ಟುಗಳೇನು, ನೀರು ಕುಡಿದಷ್ಟು ಸಲೀಸು ಎನ್ನುವ ಭ್ರಮೆ ಇವರಿಗೆ. ಕಾಲೇಜಿಗೆ ಬಂದಾಗಲೇ ಗೊತ್ತಾಗುವುದು, ನೀರೂ ಇಳಿಯದ ಇವರ ಗಂಟಲೊಳು ಪ್ರೊಫ಼ೆಸ್ಸರುಗಳು ಕಡಬುಗಳನ್ನು ತುರುಕುತ್ತಿದ್ದಾರೆಂಬ ಸತ್ಯ.

      ನಮ್ಮದು ಬರಿ ಹುಡುಗಿಯರ ಶಾಲೆ. ಕನ್ನಡದ್ದೊಂದು, ಮರಾಠಿಯದೊಂದು ಹೀಗೆ ಎರೆಡು ಡಿವಿಜನ್ನುಗಳು. ಭಾಷೆಯ ವಿಷಯಕ್ಕೆ, ಬೆಸ್ಟ್ಗರ್ಲ್, ಬೆಸ್ಟ್ಕ್ಲಾಸ್ವಿಷಯಕ್ಕೆ, ರ್ಯಾಂಕುಗಳು, ಆಟ-ಪಾಟದ ವಿಷಯಕ್ಕೆ ಎಲ್ಲಾ ವಿಷಯಗಳಲ್ಲೂ ಇಬ್ಬರ ನಡುವೆ ಜಟಾಪಟಿ ಇದ್ದದ್ದೇ. ಒಂದೊಂದು ಸಲ ಈ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ, ಟೀಚರುಗಳ ಮಧ್ಯೆ ಜಗಳಗಳಾಗುವ ಪ್ರಸಂಗಗಳೂ ಇದ್ದವು. ಮತ್ತು ಅಂಥ ಜಗಳಗಳ ರೂವಾರಿಗಳು, ಅಧಿನಾಯಕಿಯರು ನಮ್ಮ ಕ್ಲಾಸಿನ ವೀರವನಿತೆಯರೇ ಆಗಿರುತ್ತಿದ್ದರು. ಅಷ್ಟಾಗಿ ಬೆಸ್ಟ್ಕ್ಲಾಸ್ ಎನ್ನುವ ಬಿರುದು ಪಡೆದು ಅದರ ಬೋರ್ಡೊಂದನ್ನು ಕ್ಲಾಸಿನಲ್ಲಿ ತಗಲಾಕಿಕೊಂಡ ಕೀರ್ತಿ ನಮ್ಮದು. ಟೀಚರುಗಳಿಲ್ಲದ ವೇಳೆಯಲ್ಲಿ ಈ ಬೆಸ್ಟ್ಕ್ಲಾಸಿನ ಬೆಸ್ಟ್ಹುಡುಗಿಯರನ್ನು ಕಂಟ್ರೋಲ್ಮಾಡುವವರೇ ಇಲ್ಲ. ಆ ಫ್ಪಿರಿಯಡಿನಲ್ಲಿ ಹಾಡು, ಕುಣಿತ, ಜೋಕ್ಸು, ಗಲಾಟೆ, ಇಂಥ ಎಲ್ಲ ಪ್ರಹಸನಗಳು ಒಂದೇ ಟೈಮಿಗೆ ನಡೆಯುತ್ತಿದ್ದವು. ಟೀಚರಿಲ್ಲದೇ ಅರಾಜಕತೆ ಉಂಟಾದ ಅಂಥ ಒಂದು ದಿನ ನಮ್ಮ ಗಲಾಟೆ ಮಿತಿ ಮೀರಿತ್ತು. ಕ್ಲಾಸ್ಮಾನಿಟರ್ನಮ್ಮನ್ನು ಸುಮ್ಮನಾಗಿಸುವ ವ್ಯರ್ಥಪ್ರಯತ್ನದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಳು. ಆದರೆ ಅವಳ ಮಾತಿಗೆ ಕಿಮ್ಮತ್ತು ಕೊಡುವವರಾರೂ ಇದ್ದಿಲ್ಲ. ಕೊನೆಯ ಅಸ್ತ್ರವಾಗಿ ಆಕೆ ಗದ್ದಲ ಮಾಡಿದವರ ಹೆಸರುಗಳನ್ನು ಬೋರ್ಡ್ಮೇಲೆ ಬರೆಯಲು ಪ್ರಾರಂಭಿಸಿದಳು. ಯಾರ ಹೆಸರು ಬರೆಯುವುದು, ಯಾರದು ಬಿಡುವುದು ಆಕೆಗೆ ತಿಳಿಯದಾಯಿತು. ಕೊನೆಗೆ ತಲೆ ಕೆಟ್ಟು "ನಾನು ಕ್ಲಾಸ್-ಮಾನಿಟರ ಇಲ್ಲೇ ದೆವ್ವಧಂಗ ನಿಂತೇನಿ, ನಿಮಗೇನರೆ ಖಬರ ಅದ ಏನು?" ಎಂದು ಆವಾಜು ಹಾಕಿದಳು. ನಾವೆಲ್ಲ ಗೊಳ್ಳೆಂದು ನಕ್ಕೆವು, "ದೆವ್ವ ಕಣ್ಣಿಗೆ ಕಾಣಸೂದಿಲ್ಲ, ಅದಕ್ಕ ನಾವು ಗದ್ಲಾ ಹಾಕಲಿಕತ್ತೇವಿ" ಅಂತ ಮತ್ತೆ ನಮ್ಮ ವೃತ್ತಿಯಲ್ಲಿ ಗರ್ಕಾದೆವು. ನಮ್ಮ ಗಲಾಟೆ ಶಾಲೆಯ ಆಫಿಸಿನವರೆಗೆ ತಲುಪಿ, ಅಲ್ಲಿದ್ದವರಿಗೆ ಕಿರಿಕಿರಿಯಾಗಿ ಮತ್ತದೇ ಡ್ರಾಮಾ ಕಲಿಸಲು ಬಂದು ಕೈ ಚೆಲ್ಲಿ ಹೋಗಿದ್ದ ಕ್ಲಾರ್ಕು ಬಂದು ನಮ್ಮನ್ನೆಲ್ಲ ಸುಮ್ಮನಿರಿಸಲು ಹರಸಾಹಸ ಮಾಡಿದರು. ಆದರೆ ಧಾಂಡಿಗ ಹುಡುಗಿಯರಿಗೆ ಅವರ ಬಡಕಲು ಶರಿರ, ಮತ್ತು ಬಾವಿಯ ತಳದಿಂದ ಬಂದಂಥ ಶಾರೀರ ಎರಡರದೂ ಕಿಮ್ಮತ್ತಿಲ್ಲದಂತಾಯಿತು. ಬೇಸತ್ತು ಸಿಟ್ಟಿಗೆದ್ದ ಅವರು ಅಲ್ಲೇ ತೂಗು ಹಾಕಿದ್ದ ಬೆಸ್ಟ್-ಕ್ಲಾಸ್    ಬೋರ್ಡನ್ನು  ತೆಗೆದು ತಿರುಗಿಸಿ ಹಾಕಿ ಹೊರಟುಹೋದರು. ಒಮ್ಮಿಲೇ ಕ್ಲಾಸಿನಲ್ಲಿ ಮೌನ ಆವರಿಸಿತು. ಎಲ್ಲರಿಗೂ ತಮ್ಮ ಕೃತ್ಯದ ಅರಿವಾಗಿ ನಾಚಿಕೆಯಾಯಿತು. ನಿಧಾನಕ್ಕೆ ಹೋಗಿ ಬೋರ್ಡನ್ನು ಸರಿಯಾಗಿ ಹಾಕಿಬಂದರೂ ಮನಸ್ಸಿನ ಮೂಲೆಯಲ್ಲಿ ಸಣ್ಣ ಪ್ರಾಯಶ್ಚಿತ ಮೂಡಿದಂತಾಗಿತ್ತು.
      ಅಂತೂ ಇಂತೂ ಇಂಥ ಹತ್ತನೇ ಕ್ಲಾಸು ಮುಗಿಸಿ, ಆಗಷ್ಟೇ ಹಾರಲು ಕಲಿತ ಹಕ್ಕಿಮರಿ, ತನ್ನ ತಾಕತ್ತಿನ ಬಗ್ಗೆ ವಿಪರೀತ ಭರವಸೆ ಇಟ್ಟುಕೊಂಡು ನೀಲಗಗನದಲ್ಲಿ ಗರಿ ಬಿಚ್ಚಿ ಹಾರಿದಂತೆ, ಎಲ್ಲರೂ ಫಡಫಡನೇ ರೆಕ್ಕೆಬಿಚ್ಚಿ ಹಾರಿದೆವು, ಇಡೀ ಆಕಾಶವೇ ನಮ್ಮದೆನ್ನುವಂತೆ. ಕೆಲವರು ಇನ್ನಷ್ಟು ಕಸುವು ಮೈ ಗೂಡಿಸಿಕೊಂಡು ಎತ್ತರೆತ್ತರಕ್ಕೆ ಹಾರಿದರು, ಹಾರುತ್ತಲೇ ಇದ್ದಾರೆ. ಇನ್ನು ಕೆಲವರು ಆಯಾಸವಾಗಿ ಕೆಳಗಿಳಿದು, ಈ ಹಾರುಹಕ್ಕಿಗಳನ್ನೇ ನೋಡುತ್ತಿದ್ದಾರೆ,  ನೋವು, ನಿರೀಕ್ಷೆ, ಈರ್ಷೆ, ಆಸೆ ತುಂಬಿದ ಕಂಗಳಿಂದ. ಮತ್ತೂ ಕೆಲವರು ಅಷ್ಟಿಷ್ಟು ಹಾರಿ ಸಾಕೆಂದುಕೊಂಡು ಗೂಡೊಂದ ಕಟ್ಟಿಕೊಂಡು, ಮಕ್ಕಳು-ಮರಿಗಳನ್ನು ಮಾಡಿ, ಪಾಲಿಸಿ,  ಅವು ಈಗ ದೂರದೂರ ಹಾರುವುದನ್ನು ಕಂಡು ಖುಶಿಪಡುತ್ತಿದ್ದಾರೆ.
ಇಷ್ಟೆಲ್ಲ ಕರ್ಮಕಾಂಡಗಳ ನಡುವೆಯೂ ನಾವು ತುಂಬ ಒಳ್ಳೆಯ ವಿದ್ಯಾರ್ಥಿಗಳೆಂದು ಅಭಿಮಾನದಿಂದ ಹೇಳುವ, ಹೊಗಳುವ ನಮ್ಮ ಪ್ರೀತಿಯ ಕ್ಲಾಸ್ಟೀಚರು ಮೊನ್ನೆ ಅಚಾನಕ್ಕಾಗಿ ಭೆಟ್ಟಿಯಾಗಿ,  ಮತ್ತೊಮ್ಮೆ ಪ್ರೀತಿಯಿಂದ ಹೊಗಳಿದಾಗ ಎಲ್ಲ ನೆನಪಿಗೆ ಬಂತು.
***************************


Wednesday, 8 June 2016

ಮನೆಗಳಿಗೆ ಹಿತ್ತಲುಗಳಿಲ್ಲ.

ಪ್ರಬಂಧ


ಮನೆಗಳಿಗೆ ಹಿತ್ತಲುಗಳಿಲ್ಲ.


        ಒಂದು ಕಾಲವಿತ್ತು, ಎಲ್ಲ ಮನೆಗಳಿಗೂ ಹಿತ್ತಲುಗಳಿರುತ್ತಿದ್ದವು. ಬೆಳಗಾವಿಯಂಥ ಊರಿನ, ಒತ್ತೊತ್ತಾಗಿ ಕಟ್ಟಿದ, ಗಾಳಿ ಆಡದ, ಬೆಳಕು ಬಾರದ, ರೈಲ್ವೆ ಡಬ್ಬಿಯಂಥ ಮನೆಗಳಿಗೆ ಕೂಡ ಹಿಂದೆ ಹಿತ್ತಲುಗಳಿದ್ದವು. ಅವು ಅನೇಕ ಮನೆಗಳಿಗೆ ಸಾಮೂಹಿಕವಾಗಿಯೂ ಇದ್ದಿದ್ದು ಸುಳ್ಳಲ್ಲ. ಅಂದರೆ ಇವರ ಹಿತ್ತಲಿನಿಂದ ಅವರ ಹಿತ್ತಲಿಗೆ, ಅವರ ಹಿತ್ತಲಿನಿಂದ ಇವರ ಹಿತ್ತಲಿಗೆ ಸುಲಭವಾಗಿ ಸೀಮೋಲ್ಲಂಘನ ಮಾಡಿ, ಅವರ ಗಿಡದ ಹೂಗಳನ್ನು ಇವರು, ಇವರದನ್ನು ಅವರು ಕದ್ದು ಕೊಯ್ದು, ತಮ್ಮತಮ್ಮಮನೆದೇವರಿಗೆ ಅರ್ಪಿಸಿ ವರವ ಪಡೆದುಕೊಂಡವರೆಷ್ಟೋ!
        ಹಿತ್ತಲಿನಲ್ಲಿ ಒಂದು ತುಳಸಿಕಟ್ಟೆ, ಅದರಲ್ಲೊಂದು ಪುಟ್ಟ ತುಳಸಿಗಿಡ, ಹಂಗೆ ಮುಂದೆ ಖಾಲಿಜಾಗ, ಅದರ ಸುತ್ತಲೂ ಮಲ್ಲಿಗೆ ಬಳ್ಳಿ, ಗೊರಟಗಿ ಹೂವಿನ ಗಿಡ, ಗುಲಾಬಿ ಕಂಟಿಗಳು, ಬೇರೆ ಬೇರೆ ಬಣ್ಣದ ದಾಸವಾಳದ ಗಿಡಗಳು, ಕನಕಾಂಬರ ಗಿಡಗಳು, ಹೀಗೇ ಅನೇಕ ಹೂವಿನ ಸಸ್ಯಸಮೂಹ, ಜೊತೆಗೆ ಕರಿಬೇವಿನ ಮರ, ನಿಂಬೆಗಿಡ, ಪಪ್ಪಾಯಿ ಮರ, ಒಂದೊಂದು ಹಿತ್ತಲಿಗೆ ತೆಂಗಿನ ಮರ, ಮಾವಿನ ಮರ ಕೂಡ ಇರುತ್ತಿದ್ದವು. ಕೆಲವರ ಮನೆ ಹಿತ್ತಲು ಏನೇನೂ ಕೃಷಿ ಇಲ್ಲದೇ ಹಾಗೆ ಪಾಳು ಬಿದ್ದಿರುವುದೂ ಇತ್ತು, ಆದರೆ ಹಿತ್ತಲು ಮಾತ್ರ ಗ್ಯಾರಂಟಿ ಇರುತ್ತಿತ್ತು.  
         ಆದರೆ ಹಿತ್ತಲೆಂದರೆ ಇಷ್ಟೇ ಅಲ್ಲ, ಅದು ಇನ್ನೂ ಏನೇನೋ ಆಗಿದ್ದುದು ಸುಳ್ಳಲ್ಲ. ನನ್ನ ಅಜ್ಜಿಯ ಊರು ಖಾನಾಪುರದ ಹತ್ತಿರ ಹೆಬ್ಬಾಳ ಎನ್ನುವ ಪುಟ್ಟ ಹಳ್ಳಿ. ಅಲ್ಲಿ ಅವಳದೊಂದು ಸುಮಾರು ದೊಡ್ಡ ಮನೆ. ಮನೆ ಮುಂದೆ ಎತ್ತರ ಮತ್ತು ಅಗಲವಾದ ಕಟ್ಟೆ. ಹಿಂದೆ ಸಾಕಷ್ಟು ದೊಡ್ಡದಾದ ಹಿತ್ತಲು. ಹಿತ್ತಲಿಗೆ ಕಾಲಿಡುತ್ತಿದ್ದಂತೆ ಎದುರುಗೊಳ್ಳುತ್ತಿದ್ದ ಆಳದ ನೀರಿನ, ಗಡಗಡೆಯಿದ್ದ ಬಾವಿ, ಅದನ್ನು ಬಳಸಿ ಮುಂದೆ ಹೋಗುತ್ತಿದ್ದಂತೆ ಬಟ್ಟೆ ಒಗೆಯುವ ಕಲ್ಲು ಮತ್ತು ಅದಕ್ಕೆ ತಾಕಿದಂತೆ ಹಾಕಲಾಗಿದ್ದ ನೀರು ತುಂಬಿಸುವ ದೋಣಿ. ಮುಂದೆರೆಡು ಮೆಟ್ಟಿಲು ಇಳಿದರೆ ನಿಜವಾದ ಹಿತ್ತಲಿನ ಬಯಲು ಪ್ರಾರಂಭವಾಗುತ್ತಿತ್ತು. ಎರೆಡು ದೊಡ್ಡ ಹಲಸಿನ ಮರಗಳು, ಮುಂದೆ ಎರೆಡು ದೊಡ್ಡ ಕಲಮಿ ಮಾವಿನ ಮರಗಳು ಮಧ್ಯದಲ್ಲೇ ಎತ್ತರವಾಗಿ ಬೆಳೆದು ನಿಂತಿದ್ದವು. ಮಧ್ಯ ಸಾಕಷ್ಟು ಖಾಲಿ ಜಾಗದ ನಂತರ ಬೇಲಿಗೆ ಹೊಂದಿಕೊಂಡು ಢಮಣಿ ಹಣ್ಣಿನ ಗಿಡ, ಕೊನೆಗೆ ಆಗಿನ ಕಾಲದ ಹಳೆಯ ಪಾಯಿಖಾನೆ. ಹಲಸು, ಮಾವಿನ ಎಲೆಗಳೆಲ್ಲ ಇಡೀ ಹಿತ್ತಲಿನ ತುಂಬೆಲ್ಲ ಉದುರಿ ನೆಲವೇ ಕಾಣಲಾರದಂತೆ ಹಾಸಿರುತ್ತಿದ್ದವು. ಅಜ್ಜಿ ಬೆಳಗಾವಿಗೆ ಬಂದು ನೆಲೆಸಿದ ಮೇಲೆ ಸದಾ ಬೀಗ ಹಾಕಿರುತ್ತಿದ್ದ ಮನೆ ಮತ್ತು ಹಿತ್ತಲುಗಳು ಧೂಳಾಗಿರುತ್ತಿದ್ದವು, ಎಲೆಗಳಿಂದ ಹಿತ್ತಲು ತುಂಬಿ ಹೋಗಿರುತ್ತಿತ್ತು. ಬೇಸಿಗೆಯ ರಜದಲ್ಲಿ ಮಾವಿನ ಹಣ್ಣಿನ ಸೀಜನ್ನಿನಲ್ಲಿ ನಾವು ಹೋಗಿ ಮನೆ, ಹಿತ್ತಲುಗಳನ್ನು ಸ್ವಚ್ಛಗೊಳಿಸಿ ತಿಂಗಳುಗಟ್ಟಲೇ ಅಲ್ಲೇ ಇರುತ್ತಿದ್ದೆವು. 
        ದಿನಾಲೂ ಬಾವಿಯಿಂದ ನೀರು ಸೇದುವುದು, ಒಂದಿಷ್ಟು ಬಟ್ಟೆ ತೊಳೆಯುವುದು ಇವು ನಮ್ಮ ಅಲ್ಲಿನ ದೈನಂದಿನ ಕೆಲಸಗಳು. ಪಾಡಾದ ಮಾವಿನ ಕಾಯಿಗಳನ್ನು ಅಜ್ಜಿ ಅಥವಾ ಅಮ್ಮ ಊರಿನ ರೈತರ ಸಹಾಯದಿಂದ ಇಳಿಸುತ್ತಿದ್ದರು. ಚಿಕ್ಕ ಹುಡುಗರಾಗಿದ್ದ ನಮ್ಮ ಕೆಲಸವೆಂದರೆ ಇಷ್ಟಿಷ್ಟೇ ಮಾವಿನ ಕಾಯಿಗಳನ್ನು ಮನೆಯೊಳಗೊಯ್ದು ಅವನ್ನು ಸರಿಯಾಗಿ ಜೋಡಿಸಿ ಇಡುವುದು. ನಂತರ ಹಣ್ಣುಗಳಾದಂತೆ ದಿನಾಲೂ ಬೆಳಿಗ್ಗೆ, ರಾತ್ರಿ ಮಾವಿನ ಹಣ್ಣುಗಳನ್ನು ತಿನ್ನುವುದೇ ಒಂದು ಮೋಜು. ನಮ್ಮ ಅಂಗಿಯ ಮೇಲೆ ಬೀಳಿಸಿಕೊಳ್ಳದಂತೆ ಕಸರತ್ತು ಮಾಡಿ ಗೊರಟೆಯನ್ನು ಚೀಪಿ ಚೀಪಿ ತಿನ್ನುವುದೇ ಒಂದು ಮಜ. ಬೆಳಗಿನ ಹೊತ್ತಿನಲ್ಲಿ ಹಲಸಿನ ಹಣ್ಣನ್ನು ತಿನ್ನವುದು. ಇಂಥ ರಾಜಫಲಗಳ ಜೊತೆಗೆ ಸಣ್ಣಪುಟ್ಟ ಹಣ್ಣುಗಳಾದ ಢಮಣಿಹಣ್ನು, ಕೌಳಿಹಣ್ಣು, ಸುಣ್ಣದ ಹಣ್ಣು, ನೀರಲ ಹಣ್ಣು, ಚಾರಿಹಣ್ಣು, ಹೀಗೆ ನಾನಾ ರೀತಿಯ ಹಣ್ಣುಗಳನ್ನು ತಿನ್ನುವುದೇ ನಮಗೆ ಖುಶಿ. ಮತ್ತೆ ಇಂಥ ತಿನ್ನುವ ಕೆಲಸಗಳಿಗೆಲ್ಲ ಹಿಂದಿನ ಹಿತ್ತಲು ಇಲ್ಲವೇ ಮುಂದಿನ ಕಟ್ಟೆ ಹೇಳಿ ಮಾಡಿಸಿದ ಜಾಗಗಳು.
        ಸುಮಾರು ವರ್ಷಗಳು ಮನೆಯನ್ನು ಬೀಗ ಹಾಕಿಟ್ಟು ಕೊನೆಗೆ ಮಾರಿದ ಮೇಲೆ ಇದೀಗ ಆ ಮನೆ, ಆ ಹಿತ್ತಿಲು, ಮನೆ ಮುಂದಿನ ದೊಡ್ಡ ಕಟ್ಟೆ, ಎದುರಿನ ಹನಮಪ್ಪನ ಗುಡಿ, ಎಲ್ಲ ಕೇವಲ ನೆನಪುಗಳಾಗಿ ಸ್ಮøತಿಪಟಲದ ಮೇಲೆ ಉಳಿದುಹೋದವು. ದೊಡ್ಡ ಮನೆಗಳಿದ್ದರೂ ಮಕ್ಕಳು ಪ್ರೀತಿಯಿಂದ ಹೆಚ್ಚು ಹೊತ್ತು ಕಳೆಯುವುದು ಹಿತ್ತಲಿನಲ್ಲೇ ಎನ್ನುವ ಸತ್ಯವೂ ಇದೀಗಷ್ಟೇ ನನಗೆ ತಿಳಿಯಲಾರಂಭಿಸಿದೆ.
        ಹೀಗೆ ಅಜ್ಜಿಯ ಮನೆಯ ಹಿತ್ತಲಿನ ಆಟ ನಮ್ಮ ಪಾಲಿಗೆ ಇಲ್ಲದೇ ಹೋದರೂ ಬೆಳಗಾವಿಯ ನಮ್ಮ ಮನೆಗೂ ಒಳ್ಳೆಯ ಹಿತ್ತಲೇ ಇದ್ದಿದ್ದರಿಂದ ಮತ್ತೆ ನಮ್ಮ ಹಿತ್ತಲಿನ ನಂಟು ಯಾವ ತಡೆಯಿಲ್ಲದೇ ಸಾಗಿತು. ಅಪ್ಪ ಮನೆ ಕಟ್ಟಿದ ಹೊಸತರಲ್ಲಿ ಅತಿ ಉತ್ಸಾಹದಲ್ಲಿ ಎಲ್ಲೆಲ್ಲಿಂದ ಹುಡುಕಿ ಹೂವಿನ ಸಸಿಗಳನ್ನು ತಂದು ನೆಟ್ಟಿದ್ದಾಯಿತು. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಡಾ, ಗೊರಟಗಿ, ಕನಕಾಂಬರ, ಛಂದದ ಹೂಗಳು ಹೀಗೆ ನಾನಾ ನಮೂನೆಯ ಗಿಡಗಳು ಹಿತ್ತಲಿನಲ್ಲಿ ಕಂಗೊಳಿಸಿದವು. ಅವುಗಳ ಜೊತೆ ತೆಂಗಿನ ಮರಗಳನ್ನೂ ಅಪ್ಪ ಹಾಕಿದರು. ನಮ್ಮ ಮತ್ತು ಪಕ್ಕದವರ ಮನೆಯ ಹಿತ್ತಲಿನ ಮಧ್ಯೆ ಗಡಿರೇಖೆಯಲ್ಲಿ ಒಂದು ಪಾರಿಜಾತದ ಮರವೂ ಇತ್ತು. ಮತ್ತೆ ಯಥಾ ರೀತಿ ಆ ಪಾರಿಜಾತ ಹೂಗಳು ನಮ್ಮ ಜಾಗದಲ್ಲಿ ಬೀಳುತ್ತಿದ್ದವು. ಸಂಜೆಯ ಹೊತ್ತಿಗೆ ಪಾರಿಜಾತದ ಮೊಗ್ಗುಗಳ ಪರಿಮಳ ಘಂಮ್ಮೆಂದು ಇಡೀ ಹಿತ್ತಲು ಪಸರಿಸುತ್ತಿತ್ತು. ಆದರೆ ಪಕ್ಕದ ಮನೆಯವರ ಬಾಡಿಗೆಯ ಆಸೆಗೆ ಎಲ್ಲ ಮರಗಳ ಜೊತೆ ಈ ಪಾರಿಜಾತದ ಮರವೂ ಬಲಿಯಾಯಿತು, ಮತ್ತು ಅವರ ಇಡೀ ಹಿತ್ತಲು ಕಾಂಕ್ರೀಟ್ ಕಾಡಾಯಿತು. ಮರ-ಗಿಡಗಳ ಮರ್ಮರ, ಮೊಗ್ಗುಗಳ ಸುವಾಸನೆ ಎಲ್ಲ ಮುಗಿದ ಕಥೆಗಳಾದವು.

        ಗೆಳತಿಯರನೇಕರ ಮನೆಗಳಿಗೂ ಹಿತ್ತಲುಗಳಿದ್ದವು. ಒಬ್ಬ ಗೆಳತಿಯ ಹಿತ್ತಲಿನಲ್ಲಿದ್ದ ತೆಂಗಿನ ಮರ ನೆಲಕ್ಕಂಟಿದಂತೆ ಬೆಳೆದು ನಂತರ ಮೇಲೇರಿತ್ತು. ಹೀಗಾಗಿ ಅದರ ಮೇಲೆ ಹತ್ತಿ ಕುಳಿತುಕೊಳ್ಳುವುದು ನಮಗೆ ಮೋಜಿನ ಕೆಲಸವಾಗಿತ್ತು. ಯಾರ ಮನೆಗೇ ಹೋಗಲಿ ನಮ್ಮ ವ್ಯಾಪಾರವೆಲ್ಲ ಹಿತ್ತಲಿನಲ್ಲೇ. ಅಲ್ಲೇ ನಮ್ಮ ಆಟ, ಅಲ್ಲೇ ಅಭ್ಯಾಸವನ್ನೂ ಮಾಡುತ್ತಿದ್ದೆವು. ಬಟ್ಟೆ ಒಗೆಯುವ ಕಲ್ಲಿನ ಮೇಲೆ ಹೊಸ ಹುಣಸೆಹಣ್ಣಿನ ಚಿಗಳಿ ಕುಟ್ಟುತ್ತಿದ್ದೆವು. ಹುಳಿಗೆ ಲಿಸ್‍ಲಿಸ್ ಮಾಡುತ್ತಾ ಅಲ್ಲೇ ಕುಳಿತು ಅದನ್ನು ತಿನ್ನುತ್ತಿದ್ದೆವು. ಅತೀ ಚಿಕ್ಕವರಿದ್ದಾಗ ನಮ್ಮ ಬೊಂಬೆಯಾಟಕ್ಕೂ ಈ ಹಿತ್ತಲುಗಳೇ ಸಾಕ್ಷಿಯಾಗಿದ್ದವು. ಅಂತೂ ನಮ್ಮ ಅರ್ಧಕ್ಕಿಂತ ಹೆಚ್ಚು ಸಮಯ, ಸಂಸಾರ ಅಲ್ಲೇ ಸಾಗುತ್ತಿದ್ದುದು ಸುಳ್ಳಲ್ಲ. ಯಾಕ ಹೀಗೆಲ್ಲಾ ಹೇಳುತ್ತಿರುವೆನೆಂದರೆ, ಈಗ ನಾನು ಮೇಲೆ ಹೇಳಿದ ಯಾವ ಹಿತ್ತಲುಗಳೂ ಉಳಿದಿಲ್ಲ, ಉಳಿದಿದ್ದರೂ ಅವು ಮೊದಲಿನಂತೆ ಉಳಿದಿಲ್ಲ.
         ಇದೀಗ ಜಾಗದ ರೇಟು ಗಗನಕ್ಕೇರಿ ಇಂಚಿಂಚು ಜಾಗಕ್ಕೂ ಕಿಮ್ಮತ್ತು ಬಂದ ಮೇಲೆ ಹಿತ್ತಲುಗಳಿದ್ದವರಿಗೆ ಜಾಗವನ್ನಿಟ್ಟುಕೊಳ್ಳುವುದಕ್ಕಿಂತ ಅದರಲ್ಲಿ ಇನ್ನೊಂದು ಮನೆ ಕಟ್ಟುವುದೇ ಹೆಚ್ಚು ಫಾಯದೆ ಎನಿಸಿರಬೇಕು. ಕೆಲವು ಮನೆಗಳಲ್ಲಿ ಅಣ್ಣ-ತಮ್ಮಂದಿರು ಬೇರೆ ಬೇರೆ ಆಗಿ, ಇದ್ದ ಜಾಗವನ್ನೇ ಹಿಂದೊಬ್ಬರು, ಮುಂದೊಬ್ಬರು ಎಂದು ಹಂಚಿಕೊಂಡು ಎರಡೂ ಕಡೆ ಮನೆ ಕಟ್ಟಿ ಇದೀಗ ಈ ಹಿತ್ತಲುಗಳೆಲ್ಲ ಹೇಳಹೆಸರಿಲ್ಲದಂತೆ ಮಾಯವಾದವು. ಹಿಂದಿನ ಮಕ್ಕಳಿಗೆ ಆಶ್ರಯ ನೀಡಿದ್ದ ತೆಂಗಿನ ಮರಗಳನ್ನು ನಾನಾ ಕಾರಣಕ್ಕೆ ಕಡಿಯಲಾಯಿತು. ಬೇರುಗಳು ಸುತ್ತಲೆಲ್ಲ ಹರಡಿ ಮನೆಯ ಪಾಯಾವನ್ನೇ ಅಲುಗಾಡಿಸುತ್ತಿವೆ ಎನ್ನುವುದು ಒಂದು ಕಾರಣವಾದರೆ, ನಮ್ಮ ಮರ ವಾಲಿ ಪಕ್ಕದ ಮನೆಯ ಮೇಲೊರಗಿರುವುದು ಇನ್ನೊಂದು ಕಾರಣ. ತೆಂಗಿನ ಗರಿಗಳು, ಕಾಯಿಗಳು ಗಾಳಿ ಬೀಸಿದಗೊಮ್ಮೆ ಮ್ಯೆಮೇಲೆ ಬೀಳಬಹುದೆಂಬ ಹೆದರಿಕೆಯಂತೂ ಸಾರ್ವತ್ರಿಕ. ಇನ್ನು ದೊಡ್ಡ ದೊಡ್ಡ ಮಾವಿನ ಮರಗಳೆಲ್ಲ ಉರುಳಲು ಆ  ಜಾಗದಲ್ಲಿ ಹೊಸ ಮನೆ ಏಳಬೇಕೆಂಬ ಕಾರಣವೇ ಸಾಕಲ್ಲ. ಅಂತೂ ನೋಡನೋಡುತ್ತಿದ್ದಂತೆ ನಮ್ಮ ಸುತ್ತಮುತ್ತಲಿನ ಎಲ್ಲ ಮರಗಳೂ ಧರಾಶಾಹಿಯಾಗಿ, ಹಿತ್ತಲುಗಳೆಲ್ಲ ಕಾಂಕ್ರೀಟ ಕಾಡುಗಳಾದವು. ಅರಿವಿಗೆ ಬಾರದಷ್ಟು ಕ್ಷಿಪ್ರವಾಗಿ ಎಲ್ಲರ ಮನೆಯ ಸಣ್ಣಪುಟ್ಟ ಗಿಡಮರಗಳೆಲ್ಲ ಸತ್ತು ಸ್ವರ್ಗ ಸೇರಿದವು. ಅಷ್ಟೇ ಏಕೆ, ಬೆಳಗಾವಿಯ ಜನರಂತೂ ಹಿತ್ತಲಿನಲ್ಲಿದ್ದ ಬಾವಿಗಳನ್ನು ಕೂಡಾ ಮುಚ್ಚಿಸಿ ತಣ್ಣಗೆ ಕುಳಿತುಬಿಟ್ಟರು. ಒಂದಷ್ಟು ವರ್ಷ ಅದರ ಪರಿಣಾಮವೂ ಅವರನ್ನು ತಟ್ಟಲೇ ಇಲ್ಲ. ಯಾವಾಗ ಬರದ ಬಿಸಿ ಜೋರಾಯಿತೋ, ಯಾವಾಗ ಕುಡಿಯುವ ನೀರಿಗೂ ತತ್ವಾರವಾಯಿತೋ ಇದೇ ಜನ, ನಗರಪಾಲಿಕೆಯ ನೀರಿನ ಆಮಿಷಕ್ಕೆ ಬಲಿಯಾಗಿ ಬಾವಿಗಳನ್ನು ಮುಚ್ಚಿದ್ದಕ್ಕೆ ತಮ್ಮನ್ನು ತಾವೇ ಶಪಿಸಿಕೊಳ್ಳುವ ಸ್ಥಿತಿಗೆ ಬಂದುನಿಂತರು. ಇದೀಗ ಪಾಲಿಕೆಯೇ ಮುಂದೆ ನಿಂತು, ಒಂದೊಮ್ಮೆ ಹೂತುಹೋದ ಬಾವಿಗಳಿಗೆ ಮತ್ತೆ ಮರುಜನ್ಮ ನೀಡುವ ಕಾಯಕಲ್ಪಕ್ಕೆ ನಾಂದಿ ಹಾಡಿದೆ. ಹೀಗಾಗಿ ಅನೇಕರ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳಲಾರಂಭಿಸಿವೆ. ಒಂದೊಮ್ಮೆ ಮುಚ್ಚಿಬಿಟ್ಟ ಬಾವಿಗಳನ್ನು ಮತ್ತೆ ತೆರೆಸಲಾಗುತ್ತಿದೆ.
       ಆದರೆ ಕಡಿದ ಮರಗಳನ್ನು ಮತ್ತೆ ಎಬ್ಬಿಸಿ ನಿಲ್ಲಿಸಲಾಗದು, ಕಳೆದುಹೋದ ಗಾಳಿ ಬೀಸಿದಾಗಲೆಲ್ಲ ಪರಿಮಳ ಸೂಸಿದ ಹೂ-ಹಣ್ಣುಗಳ ಸುಖವನ್ನು ಮತ್ತೆ ಹಿಡಿದು ನಿಲ್ಲಿಸಲಾಗದು. ಇಂಚಿಂಚೂ ಬಿಡದೇ ಎಲ್ಲೆಂದರಲ್ಲಿ ಕಟ್ಟಿದ ಮನೆಗಳನ್ನು ಈಗ ಉರುಳಿಸಲಾಗದು. ತಪ್ಪುಗಳು ಆಗಿ ಹೋಗಿವೆ. ಮಕ್ಕಳಿಗೆ ಆಟಕ್ಕೆ, ನೋಟಕ್ಕೆ ಬೇಕೇಬೇಕಿದ್ದ ಹಿತ್ತಲುಗಳನ್ನು ಮಾಯಮಾಡಿದ ಮೇಲೆ ಇದೀಗ ಮಕ್ಕಳ ಕಾಲಿಗೆ ಮಣ್ಣು ಮೆತ್ತಿಕೊಳ್ಳಬೇಕು, ಮಕ್ಕಳು ಮಣ್ಣಲ್ಲಿ ಆಟವಾಡಬೇಕು ಎಂದೆಲ್ಲ ಅಲ್ಲಿಲ್ಲಿ ಓದಿ, ಖಾಲಿ ಜಾಗಗಳನ್ನು, ಇತರರ ಇನ್ನೂ ಯಾಕೋ ಪುಣ್ಯಕ್ಕೆ ಉಳಿದುಕೊಂಡ ಹಿತ್ತಲುಗಳಿಗೆ ತಮ್ಮ ಮಕ್ಕಳನ್ನು ಆಟಕ್ಕೆ ಕರೆದುಕೊಂಡು ಬರುವ ಪಾಲಕರನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ.
                                                               ****************** 



Tuesday, 24 May 2016

ಲಘು ಬರಹ

ಮಧ್ಯಮ ತಾನಧಮನು


ರವಿವಾರ ಬಂತಂದ್ರ ಒಳಗೊಳಗೇ ಒಂದು ಖುಶಿ. ಎಷ್ಟೊತ್ತಿಗಾದರೂ ಎದ್ದು, ಮನಸ್ಸಿಗೆ ಬಂಧಂಗ ಕೆಲಸಾ ಮಾಡಕೋತ, ಇಲ್ಲಾ ಮಾಡಿಧಂಗ ಮಾಡಕೋತ, ಇಲ್ಲಾ ಆಳಸಿತನದಿಂದ ಮಲಕೊಂಢಂಗ ಕುತಗೊಂಡು ಟಿ.ವಿ. ನೋಡಕೋತ, ನಡುನಡುವ ಪೇಪರ ಮ್ಯಾಲೆ ಕಣ್ಣು ಹಾಯಿಸಿಕೋತ, ಇಕಿ ಏನರೆ ಬೈಕೋತ ಆದ್ರೂ ಒಂದು ಕಪ್ಪು ಛಾ ಕೊಡೊ ಕೃಪಾ ಮಾಡತಾಳೇನೋ ಅಂತ ಅಡಗಿಮನಿ ಕಡೆ ಕಳ್ಳನೋಟ ಬೀರಕೋತ, ಇನ್ನ ಇವತ್ತೇನೇನು ನನ್ನ ಲೇಖನಿಯಿಂದ ಬರದು ಝಳಪಿಸಬೇಕಂತ ಲೆಕ್ಕಾಚಾರ ಹಾಕ್ಕೋತ, ..............ನಾನು ಹೀಂಗ ಆರಾಮಾಗಿ ಕೂತಾಗ ಒಂದೈದಾರು ಧಾಂಡಿಗ ಹುಡುಗೋರು ಮನಿವಳಗ ಕಾಲಿಟ್ಟರು. ನನ್ನ ಜೀವ ಫುಕುಫುಕು ಹೆದರಿ ಇಲಿ ಹಂಗ ಯಾವುದರೇ ಬಿಲಾ ಸಿಗತದೇನು ಅಂತ ನೋಡಲಿಕತ್ತು. ಬಂದಾವ್ರು, "ನಮಸ್ಕಾರ ಸಾ" ಅಂತ ಹೇಳಿಸಿಕೊಳ್ಳದನ ತಾವ ಸುಖಾಸೀನರಾದ್ರು. ನಾನು ಪಿಳಿಪಿಳಿ ಕಣ್ಣು ಬಿಟ್ಟು ಮುಂದೇನು ಗಂಡಾಂತರ ಕಾದದ ಅಂತ ನೋಡಲಿಕತ್ತೆ. "ಸಾ ನಮ್ಮ ಕಾಲನಿ ಯುವಕರ ಸಂಘದ ವಾರ್ಷಿಕೋತ್ಸವಕ್ಕ ನಿಮ್ಮನ್ನ ಮುಖ್ಯ ಅತಿಥಿ ಮಾಡಬೇಕಂತ ಮಾಡೇವಿ. ಮುಂದಿನ ಭಾನುವಾರ ಫಂಕ್ಷನ್ನು. ನೀವು ಬಂದು ಒಂದೆರಡು ಮಾತಾಡಬೇಕು ಸಾ" ಅಂದ್ರು. ನಂಗಂತೂ ಖುಶಿಯಿಂದ ಕುಪ್ಪಳಿಸೋ ಹಂಗ ಆತು. ಎಷ್ಟು ವರ್ಷದಿಂದ ಈ ಅಕ್ಷರಸೇವಾ, ಸಾಹಿತ್ಯಸೇವಾ ಮಾಡಕೋತ ಬಂದೇನಿ, ಮಕ್ಕಳು ಒಬ್ಬರರೇ ಗುರತಿಸಲಿಲ್ಲ. ಈಗ ಈ ಹುಡುಗೋರು ನನ್ನೊಳಗಿರೋ ಲೇಖಕನ್ನ ಗುರುತಿಸಿ ಕರೀಲಿಕ್ಕೆ ಬಂದಾರ, ಪಾಪ - - - ಹೋಗದನ ಇರಲಿಕ್ಕೆ ಆಗತದ? ಬರದು ಬರದು ನನ್ನ ಕೈಬೆರಳು ಸವದ ಹೋಗ್ಯಾವ, ಆದ್ರೂ ಈ ಪತ್ರಿಕೆಯವರಿಗೇನು ಸೊಕ್ಕು ಕಡಿಮಿ ಅಂತೀರೀ, - - - ಕಳಿಸಿದ ಕಥಿ, ಲೇಖನ, ಕವನ ಎಲ್ಲಾ ಹಂಗ ಇಟಗೊಂಡು ಕೂಡತಾರ, ಇಲ್ಲಾ ಅಲ್ಲೇ ಕಾಲಕೆಳಗ ಇರೊ ಕಸದ ಬುಟ್ಯಾಗ ಹಾಕತಾರ, ಹೊರತೂ ಸ್ವೀಕೃತ, ಅಸ್ವೀಕೃತ ಅಂತ ಒಂದು ಮಾತು ತಿಳಸಿದ್ರ ಕೇಳ್ರಿ. ಮತ್ತ ಮ್ಯಾಲೆ ಸಂಪಾದಕರ ನಿರ್ಣಯನ s ಅಂತಿಮ ಅಂತ ಹೇಳಿ ಶರಾ ಬರದಬಿಡ್ತಾರ, ಕೇಳೋ ಹಕ್ಕು ನಿಮಗಿಲ್ಲ, ಹೇಳೋ ದರ್ದು ನಮಗಿಲ್ಲ ಅಂತ ಅದರರ್ಥ. ಆದರೂ ಛಲ ಬಿಡದ ತ್ರಿವಿಕ್ರಮನ ಹಂಗ ನಾನೂ ಬರದ-ಬರದ ಕಳಸೇ ಕಳಸ್ತೇನಿ. ಎಲ್ಲೋ ಒಂದೆರಡು ಲೇಖನ ಪ್ರಕಟ ಆಗ್ತಾವ, ಇನ್ನಿಪ್ಪತ್ತು ಕ.ಬು. ಸೇರಿರ್ತಾವ. ಈಗೀಗ ಈ ಫೇಸಬುಕ್ಕ ಒಂದಾಗಿ ಭಾಳ ಛೊಲೊ ಆಗೇದ ನೋಡ್ರಿ. ಯಾರು ಓದ್ಲಿ, ಬಿಡ್ಲಿ, ನಮ್ಮಷ್ಟಕ್ಕ ನಾವು ಬರದದ್ದನ್ನ ಪೋಸ್ಟ್ ಮಾಡಿ ಥಣ್ಣಗ ಕುತಗೊಂಡುಬಿದೋದು, ಓದೋದು ಬಿಡೋದು ಮಂದಿ ಕರ್ಮ. ಏನೋ ಓದ್ಯರೆ, ಓದದನ ಅರೆ, ಒಂದು ಲೈಕ್ ಕುಟ್ಟಿದರ ಇವರ ಗಂಟೇನ ಹೋಗ್ತದ ಹೇಳ್ರಿ, ಆದ್ರೂ ಕುಟ್ಟಂಗಿಲ್ಲ, ಹರಾಮ ನನ್ನ ಮಕ್ಕಳು. ಆದ್ರ ಹಂಗಂತ ಯಾರಿಗೂ ಕುಟ್ಟಂಗಿಲ್ಲ ಅನಕೋಬ್ಯಾಡ್ರಿ, ಕೆಲವರಿಗೆ ಫೇಸಬುಕ್ಕಿನ್ಯಾಗೂ ಭಾರೀ ಬೇಡಿಕಿ ಅದ. ಅವ್ರು ಏನ ಬರೀಲಿ, ಹೆಂಥಾ ಕತ್ತಿಮಾರಿ ಫೋಟೊ ಹಾಕಲಿ, ಪಟಾಪಟಾಂತ ನೂರು, ಎರಡ್ನೂರು ಲೈಕ್ ಬಂದ ಬಿದ್ದಿರತಾವ. ಆದ್ರೂ ನಾನೂ ಎನು ಸೋಲೋ ಆಸಾಮಿ ಅಲ್ಲ. "ಕರ್ಮಣ್ಯೆ ವಾ ಅಧಿಕಾರಸ್ತೆ, ಮಾ ಫಲೇಶು ಕದಾಚನ" ಅಂತ ಸಂಪೂರ್ಣ ನಂಬಿಕಿ ಇಟ್ಟು ನಾ ಬರದದ್ದನ್ನೆಲ್ಲಾ ಪೋಸ್ಟ್ ಮಾಡಕೋತನ ಇರತೇನಿ. ಅದರ ಫಲಾ ನೋಡ್ರಿ ಇವತ್ತ ಈ ಹುಡುಗೋರು ನನ್ನ ಚೀಫ್ ಗೆಸ್ಟ್ ಮಾಡಬೇಕಂತ ಬಂದಾರ. ಮಾರ್ಕ್ ಝುಕರಬರ್ಗ್ ನಿನಗೊಂದು ಪ್ರಣಾಮ ಅಂತ ಮನಸ್ಸಿನ್ಯಾಗ ಅನಕೊಂಡು ಖುಶಿ ಮುಖದ ಮ್ಯಾಲೆ ಧಿಮಿಧಿಮಿ ಅಂತ ಕಾಣಿಸಿಕೊಳ್ಳಿಕ್ಕೆ ಒದ್ದಾಡತಿದ್ರೂ ಭಾಳ ಪ್ರಯತ್ನ ಪಟ್ಟು ಗಂಭೀರ ವದನನಾಗಿ "ಅವತ್ತ ನನಗೇನರೆ ಬ್ಯಾರೆ ಫಂಕ್ಷನ್ನು ಅದ ಏನು ನೋಡತೇನಿ ತಡ್ರಿ" ಅಂತ ಹೇಳಿ ಡೈರಿ ಪುಟಗೋಳ್ನ ಅಕಡಿಕಡೆ ಸುಮ್ಮನ ತಿರವಿ, "ಹೂಂ, ಲಕ್ಕಿಲಿ ಅವತ್ತ ಏನೂ ಕಾರ್ಯಕ್ರಮ ಇಲ್ರೆಪಾ, ಎಷ್ಟೊತ್ತಿಗೆ ನಿಮ್ಮ ಕಾರ್ಯಕ್ರಮಾ" ಅಂತ ಹಗೂರಾಗಿ, ಪರೋಕ್ಷವಾಗಿ ಒಪ್ಪಿಗಿ ಕೊಟ್ಟಬಿಟ್ಟೆ. ಭಾಳ ಭಾವ ಹೊಡಿಲಿಕತ್ತರ ಇವರೂ ಇನ್ನೊಬ್ಬ ಫೇಸಬುಕ್ಕ ರೈಟರನ್ನ ಹುಡಿಕ್ಕೊಂಡು ಹೋದರ ಏನ್ಮಾಡಲಿ? ಮದ್ಲ ಈಗಂತೂ ಗಲ್ಲಿ ಒಳಗ ಹತ್ತ ಜನಾ ಲೇಖಕರು ಹುಟಗೊಂಡಾರ, ಇದ s ಮಾರ್ಕ್ ಝುಕರಬರ್ಗ್ ಮಹಾಶಯನ ಕೃಪಾದಿಂದ.
ಇನ್ನೇನು ಎಲ್ಲಾ ಮುಗೀತು, ನನ್ನ ಭಾಷಣ ಫಿಕ್ಸ್ ಆತು ಅನ್ನೋದರೊಳಗ, "ಸಾ s ಒಂದ ಪ್ರಶ್ನೆ, ನೀವು ಎಡಾನೋ, ಬಲನೋ ಗೊತ್ತಾಗಲಿಲ್ಲ" ಹುಡುಗ ಒಬ್ಬ ಕೇಳಿದ. ಈ ಯುವಕ ಮಂಡಳದ ಅಧ್ಯಕ್ಷನ ಇರಬೇಕು ಅನಿಸ್ತು ನನಗ. "ನಾನು ಎಡಾನೂ ಅಲ್ಲ, ಬಲಾನೂ ಅಲ್ಲ. ಒಂದ ರೀತಿ ಮಧ್ಯಮ ಮಾರ್ಗಿ" ಅಂದೆ ಭಾರಿ ಹೆಮ್ಮೆಯಿಂದ. ಆದರ ಅಧ್ಯಕ್ಷನ ಮಾರಿ ಸಪ್ಪಗಾತು, "ಸಾರ್, ನೀವು ಯಾವದೂ ಕಡೆ ಇಲ್ಲ ಅಂದ್ರ ಹೆಂಗರೀ ಸಾರ್? ಇಲ್ಲಾ ಎಡಕ್ಕ ಇರಬೇಕು, ಇಲ್ಲ ಬಲಕ್ಕಿರಬೇಕು, ಈ ಮಧ್ಯಮ ಮಾರ್ಗ ಅನ್ನೋದು ಇಲ್ಲೇ ಇಲ್ರಿ ಸರ್". ನಾನೂ ಬಿಡಲಿಲ್ಲ, "ಇಲ್ಲಪಾ ತಮ್ಮಾ ನಾನು ಸೀದಾಸಾದಾ ಮನಷ್ಯಾ, ಸುಮ್ನ ಖುಶಿಗೆ ಒಂದಿಷ್ಟು ಹಾಸ್ಯಲೇಖನ, ಪ್ರಬಂಧ, ಕಥಿ, ಕವನಾ ಬರ್ಯಾಂವ, ನನಗೆಂಥಾ ಎಡಾ-ಬಲಾ" ಅಂತ ಅವನ್ನ s ಕೇಳಿದೆ. "ಸಾ ನೀವು ಹಿಂಗ ಹೇಳಲಿಕ್ಕೇ ಬರಂಗಿಲ್ಲರಿ, ಯಾವದರೆ ಒಂದ ಕಡೆ ಇದ್ದೇನಿ ಅಂತ ನೀವು ಡಿಕ್ಲೇರ್ ಮಾಡಕೊಳ್ಳಲಿಲ್ಲಾ ಅಂದ್ರ ನಿಮ್ಮನ್ಯಾರು ಲೇಖಕರು ಅಂತಾರ್ರಿ ಸಾರ್" , ಅವನೂ ಒಂದು ಪ್ರಶ್ನಿ ಒಗದ ಕೂತಾ, ಈಗ ಉತ್ತರಾ ಕೊಡ್ರಿ ನೋಡೋಣು ಅಂತ.
"ತಮ್ಮಾ ನಾನು ಇಲ್ಲೇ ಸುತ್ತಮುತ್ತಲೂ ಕಾಣಸೋ ಸಣ್ಣಪುಟ್ಟ ವಿಷಯಗಳನ್ನ, ಜನರನ್ನ ನೋಡಿ ಹಾಸ್ಯ ಲೇಖನಾ ಬರೀತೇನಿ. ಒಂದಿಷ್ಟು ಪ್ರೇಮಕವನಗಳು, ಒಮ್ಮೊಮ್ಮೆ ಕಥಿ-ಗಿಥಿ ಬರೀತೇನಿ. ಪ್ರೀತಿ-ಪ್ರೇಮನ ಹೆಚ್ಚಾಗಿ ನನ್ನ ಬರಹದ ವಸ್ತು ಆಗಿರ್ತದ" ಅಂತಂದು ಕಾಲಮ್ಯಾಲೆ ಕಾಲು ಹಾಕ್ಕೊಂಡು ಆರಾಮಾಗಿ ಕೂತೆ. ಈಗರೇ ಇವ್ರಿಗೆ ಖುಶಿ ಆಗಬಹುದು, ಎಷ್ಟs ಅಂದ್ರೂ ಹರೇದ ಹುಡುಗರು, ಪ್ರೀತಿ-ಪ್ರೇಮಾ ಅಂದ್ರ ಸಾಯತಾರ. ಆದ್ರ ಹುಡುಗೋರು ಒಬ್ಬರನೊಬ್ರು ನೋಡಕೊಂಡು ಖಿಸಿಖಿಸಿ ನಗಲಿಕತ್ರು. ಇನ್ನೊಬ್ಬ ಹುಡುಗ ಇನ್ನೂ ನಗಿ ತಡೀಲಾರದ ಒದ್ಯಾಡಕೋತ ಹೇಳಿದ, "ಸರ್ ಈಗೆಲ್ಲ ಯಾರು ಲವ್ವು-ಗಿವ್ವು ಅಂತ ಬರದಿರೋ ಕಥಿ ಓದ್ತಾರ ಸರ್, ಅವೆಲ್ಲಾ ಸುಮ್ಮಸುಮ್ಮನ ಟೈಮಪಾಸ್. ಇಕಿ ಮೊಬೈಲಿಗೆ ಕರನ್ಸಿ ಹಾಕ್ಸಿದ್ರ ಇಕಿ ಗರ್ಲ್ ಫ್ರೆಂಡ್ ಆಗ್ತಾಳ, ಅಕಿಗ ಹಾಕ್ಸಿದ್ರ ಅಕಿ ಆಗ್ತಾಳ. ಅಷ್ಟು ಸಿಂಪಲ್ ಸರ್. ಒಂದೆರಡು ವರ್ಷದ ನಂತರ ಇಬ್ಬರದೂ ಮದವಿ ಆಗ್ತದ, ಅವರವರ ಮನೆಯವ್ರು ನೋಡಿದ ವಧು ಅಥವಾ ವರನ ಜೋಡಿ. ಅಲ್ಲಿಗೆ ಲವ್ವಿನ ಪ್ರಥಮೋಧ್ಯಾಯ ಮುಗಿದು ದ್ವಿತಿಯೋಧ್ಯಾಯ ಪ್ರಾರಂಭ ಆಗ್ತದ. ನೀವು ಪಾಪ ಹಳೇ ಕಾಲದವ್ರು, ಇದೆಲ್ಲಾ ಲೇಟೆಸ್ಟ್ ಬೆಳವಣಿಗಿ ಗೊತ್ತಿಲ್ಲ ಕಾಣಸ್ತದ ನಿಮಗ" ಅಂತ ಕನಿಕರದಿಂದ ಲೊಚಗುಟ್ಟಿದ.
ಅಷ್ಟರಾಗ ಇನ್ನೊಬ್ಬ ಮಹಾಶಯ, "ಸಾರ್ ನೀವು ಎಡ ಪಂಥದೊಳಗಿದ್ರ ಪ್ರಶಸ್ತಿ, ಬಿರುದು-ಬಾವಲಿ ಒಳ್ಳೊಳ್ಳೆ ಹುದ್ದೆ, ಫಾರಿನ್ ಟೂರು ಎಲ್ಲಾ ಸಿಗ್ತಾವ. ಪೇಪರಿನವ್ರು, ಟಿ.ವಿ. ಅವ್ರು ಭಾಳ ಭಯಂಕರ ಪ್ರಚಾರ ಕೊಡ್ತಾರ, ನಿಮಗಂತೂ ಏನೇನೂ ಖರ್ಚಿಲ್ಲ, ಎಲ್ಲಾ ತಾನಾಗೇ ಬಂದು ನಿಮ್ಮ ಕಾಲಬುಡಕ ಬೀಳ್ತದ. ನಿಮ್ಮನ್ನ ಕಂಡಕಂಡ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿ ಅಂತ ಕರದು ಶಾಲು, ಸ್ಮರಣಿಕೆ, ಕಾಣಿಕೆ ಅಂತೆಲ್ಲ ಕೊಡತಾರ. ಟಿ.ಎ, ಡಿ.ಎ. ಅಂತೂ ಇಂಪ್ಲೈಡ್ ಅಂತ ತಿಳ್ಕೋರಿ. ಯಾರಿಗುಂಟು ಯಾರಿಗಿಲ್ಲ ಸರ್. ನೀವು ಒಂದು ಸ್ಟೇಟಮೆಂಟು ಕೊಟ್ಟು ನೋಡ್ರಿ, ಹ್ಯಾಂಗ ಚೇಂಜ್ ಆಗ್ತದ ನಿಮ್ಮ ಹಣೆಬರಹ" ಭಾಳ ದೊಡ್ಡ ಲೆಕ್ಚರ್ ಕೊಟ್ಟ ಮಹರಾಯಾ! ನನ್ನ ಹೆಂಡ್ತಿ ಒಳಗಿಂದನ ನನ್ನ ಕಡೆ ದುರುಗುಟ್ಟಿಕೊಂಡು ನೋಡಲಿಕತ್ಲು, ಏನೇನೂ ಗೊತ್ತಿಲ್ಲ ಈ ಪ್ರಾಣಿಗೆ, ಎಂಥಾ ಲೇಖಕನೋ ಏನೋ ಅಂತ ಸಿಟ್ಟ ಬಂದಿರಬೇಕು. ಇನ್ನು ಇವ್ರು ಹೊರಗ ಹೋಗೋದಕ್ಕೂ ಒಳಗಿಂದ ತಿವಿತಾಳ ನನ್ನ.
ಇನ್ನೊಬ್ಬ ಹುಡುಗ ಈಗ ಶುರು ಮಾಡಿದ, "ಸರ್, ನಿಮಗ ಎಡಾ ಬ್ಯಾಡಂದ್ರ ಬಲಕ್ಕ ಹೋಗ್ರಿ, ಅಲ್ಲೂ ಫಾಯದೇನ ಅದ. ನೀವೇನರೆ ಒಂದು ಸ್ಟೇಟಮೆಂಟ್ ಕೊಟ್ಟು ನೋಡ್ರಿ, ಅಥವಾ ಒಂದು ಸಣ್ಣ ಲೇಖನಾ ಬರೀರಿ. ಎಡದಾವ್ರು ನಿಮ್ಮ ಹೆಸರಿನ ಸಹಸ್ರ ನಾಮಾವಳಿ ತೊಗೊಂಡು ಉಗದು ಉಪ್ಪಿನಕಾಯಿ ಹಾಕಾತಾರ, ಲಟಲಟಾಂತ ಮಾತಿಗೊಮ್ಮೆ ಅದನ್ನs ನೆಂಜಿಕೋತಾರ. ಆಗ ತಾನ ತಾನಾಗಿ ನಿಮ್ಮ ಹೆಸರಿಗೆ ಒಂದು ಪಾಪ್ಯುಲ್ಯಾರಿಟಿ ಅಂಟಕೊಂಡಬಿಡತದ, ಫೆವಿಕಾಲಿನಂಗ, ನೀವು ಬಿಟ್ಟರೂ ಆಮ್ಯಾಲದು ನಿಮ್ಮನ್ನ ಬಿಡಂಗಿಲ್ಲ. ಒಟ್ಟು ತಾತ್ಪರ್ಯ ಏನಪಾ ಅಂದ್ರ ಇಲ್ಲಾ ಎಡಕ್ಕ ಬರ್ರಿ, ಇಲ್ಲಾ ಬಲಕ್ಕ ಹೋಗ್ರಿ, ಈ ಮಧ್ಯಮ ಮಧ್ಯಮ ಅನಕೋತ ಕೂತ್ರಿ, ಸತ್ರಿ ನೀವು" ಅಂತ ತನ್ನ ಭಾಷಣಾ ಮುಗಿಸಿದಾ.
"ಹುಡುಗುರ್ಯಾ, ಖರೆ ಹೇಳಬೇಕಂದ್ರ ನನಗಿಂತ ನೀವs ಎಲ್ಲಾರೂ ಛೊಲೊ ಭಾಷಣಾ ಮಾಡತೀರಿ. ನನಗಿಂತಾ ಹೆಚ್ಚು ತಿಳವಳಿಕಿನೂ ನಿಮಗ ಅದ. ಇನ್ನ ನಾ ಬಂದ ಹೇಳೋದೇನು ಉಳದದ ಹೇಳ್ರಿ. ನೀವs ನನ್ನ ಗುರುಗೋಳು ಆಧಂಗ ಆದ್ರಿ. ಇನ್ನ ನಾ ಯಾವದರೇ ಒಂದ ಕಡೆ ಹೋಗಲಿಕ್ಕೆ ಡಿಸೈಡ್ ಮಾಡಬೇಕಲಾ" ಅಂದೆ. ಅವರೆಲ್ಲಾ ಖುಶಿಯಿಂದ "ಮಾಡ್ರಿ, ಮಾಡ್ರಿ, ಸರ್, ಮುಂದಿನ ರವಿವಾರದೊಳಗ ನೀವು ಯಾವದರೇ ಒಂದು ಬಣಕ್ಕ ಸೇರಕೊಳ್ರಿ, ನಾವು ಬಂದು ನಿಮ್ಮನ್ನ ಭಾಷಣಕ್ಕ ಕರಕೊಂಡು ಹೋಗ್ತೇವಿ" ಅಂತ ಎದ್ರು. ನಾನು ಬೆಂಕಿಯಲ್ಲಿ ಅರಳಿದ ಹೂವು ಸಿನಮಾದೊಳಗ ಸುಂದರ ರಾಜ ಮಾಡಿಧಂಗ ಎಡಗೈಯಿಂದ ಬಲಗೈ, ಬಲಗೈಯಿಂದ ಎಡಗೈ ಮುಟಗೋತ ಯಾವದು ಸರಿ ಆಗಬಹುದು ಅಂತ ವಿಚಾರ ಮಾಡಲಿಖತ್ತೆ.
***************************

Thursday, 14 January 2016

ಪ್ರೇಮಾಯಣ


ಪ್ರೇಮಾಯಣ

ಮಾಡಲು ಕೆಲಸವಿಲ್ಲದೆ, ಓದಲು ಆಸ್ಥೆ ಇಲ್ಲದೆ ಉಂಡು ಮಲಗುವ ಕತ್ತೆಯಂತಾಗಿದ್ದೆ. ಆ ಕತ್ತೆಗಾದರೂ ಕೆಲಸವಿರುತ್ತದೆ ಪಾಪ! ನನಗಿಲ್ಲ ಅಷ್ಟೇ. ರೇಡಿಯೋ ಆದರೂ ಕೇಳೋಣವೆಂದು ವಿವಿಧಭಾರತಿಗೆ ತಿರುಗಿಸಿದೆ. "ಪ್ಯಾರ ತೆರಾ ಪಾನೇಕೊ" ಎಂದು ಮುಕೇಶ ಅಡ್ಡಾದಿಡ್ಡಿಯಾಗಿ ಅಳುತ್ತಿದ್ದ. ಈ ಗೊಡ್ಡು ಹಿಂದಿಯವಕ್ಕೆ ಪ್ರೀತಿ ಮಾಡಿ ಎಲ್ಲಾ ಕಳಕೊಳ್ಳುವುದು ಬಿಟ್ಟು ಇನ್ನೇನು ಬರುತ್ತದೆ? ಧಾರವಾಡಕ್ಕೆ ಹಚ್ಚಿದೆ. ಅಬ್ಬಾ! ಇವರಿಗೂ ಪ್ರೀತಿಯ ಸಾಂಕ್ರಾಮಿಕ ರೋಗ ಹರಡಿಯೇ ಬಿಟ್ಟಿದೆ. "ಪ್ರೀತಿಯೇ ನನ್ನುಸಿರು" ಎಂದು ಕಿರುಚತೊಡಗಿದಾಗ ನಾವೆಲ್ಲ ಹಾಗಾದರೆ ಉಸಿರು ಸಿಕ್ಕು ಸಾಯುತ್ತಿದ್ದೇವೆಯೇ ಎನಿಸಿತು. ಏಕೆಂದರೆ ನಾವು ಅಂದರೆ ನಾನಂತೂ ಪ್ರೀತಿ ಮಾಡಲಿಲ್ಲ ನೋಡಿ.
ಈ ಹೊಲಸು ಹೊತ್ತು ಹೋಗುವುದೇ ಕಠಿಣವಾಗಿ ಗೆಳತಿಯ ಮನೆಗಾದರೂ ಹೋಗೋಣವೆಂದು ಹೊರಟೆ. ಹೋದೆ. ನನ್ನ ದುರದೃಷ್ಟ! ಅವಳ ಮೂಡೂ ಚೆನ್ನಾಗಿರಲಿಲ್ಲ. "ಏಕೇ ಏನಾಗಿದೆ?" ಎಂದು ಕೇಳಿದೆ. "ಶ್ .. ಹೇಳುತ್ತೇನೆ ಬಾ" ಎಂದು ಕೋಣೆಯಲ್ಲಿ ಕರೆದೊಯ್ದವಳು ತನ್ನ ಗೋಳನ್ನು ತೋಡಿಕೊಂಡಳು. "ನನ್ನ ಲವರ್ ಎಂಟುದಿನದಿಂದ ಕಂಡೇ ಇಲ್ಲ ಕಣೆ. ಎಲ್ಲಿ ಹೋಗುವೆನೆಂದು ಹೇಳುವುದು ಬೇಡವೇ?" ಇಷ್ಟು ಹೇಳುವುದರಲ್ಲಿ ಪಾಪ ಅವಳ ಕಣ್ಣೀರು ಮಳೆನೀರಿನಂತೆ ಎಲ್ಲಿ ಹರಿಯುವುದೋ ಎಂದು ನಾನು ಹೆದರಿಬಿಟ್ಟೆ. "ನೀನು ಯಾವಾಗ ಲವ್ ಮಾಡಿದೆಯೇ?" ಎಂದೆ. ಒಮ್ಮಿಲೇ ಆ ಕಣ್ಣುಗಳು ಏನು ಹೊಳೆದವು! "ನಿನ್ನಂಥ ಗುಗ್ಗೂಗೆ ಹೇಗೆ ಗೊತ್ತಾಗಬೇಕು? ಅದಕ್ಕೂ ಬೇಕು ಬುದ್ಧಿ" ಎಂದಳು. ಅವಳ ವಿರಹವೇದನೆ ನನಗೆ ಕೇಳಲು ಅಸಹನೆಯಾಗಿ ಎದ್ದು ಬಂದೆ. 
ಮತ್ತೆ ಮನೆಯಲ್ಲಿ ಬಿದ್ದಿರುವುದೇಕೆಂದು ಎದ್ದು ವಾಕಿಂಗಿಗೆ ಹೋದರೆ ಅಲ್ಲೂ ಗೆಳತಿಯರ ಕಾಟ. ಏನೋ ಗೊಳ್ಳು ಮಾತಾಡಿ ಹೋಗುವ ಎಂದು ಪ್ರೇಮಾವತಿಯೊಡನೆ ನಿಂತೆ. ಮಾತನಾಡುತ್ತ ನಿಂತವಳು ಒಮ್ಮಿಲೇ ನಾಚಿದಂತೆ ನಕ್ಕಾಗ "ಏನಾಯಿತೇ?" ಎಂದೆ. ಉತ್ತರ ಹೇಳದೇ ಪಕ್ಕಕ್ಕೆ ವಾರೆನೋಟ ಬೀರಿದಳು. ಕೋಡಂಗಿಯಂಥವನೊಬ್ಬ ನಿಂತಿದ್ದ. ಯಾರಾದರೂ ಇರಲಿ ಎಂದು ಧೈರ್ಯದಿಂದ ಕೇಳಿಬಿಟ್ಟೆ, "ನಿನ್ನ ಲವರಾ?" "ನಿನಗೆ ಹೇಗೆ ಗೊತ್ತಾಗಿಬಿಟ್ತು!" ಎಂದು ಮತ್ತೆ ಮತ್ತೆ ನಕ್ಕಾಗ ಸಮಾಧಾನವಾಯ್ತು, ಈ ಗುಗ್ಗೂಗೂ ಸ್ವಲ್ಪ ಬುದ್ಧಿ ಬರಲಾರಂಭಿಸಿದೆ ಎಂದು. ದಾರಿಯಲ್ಲೆಲ್ಲಾ ಅದೇ ಯೋಚನೆ ಅಂತರ್ರಾಷ್ಟ್ರೀಯ ಪ್ರಶ್ನೆಯಾಗಿ ತಲೆ ತುಂಬಿತ್ತು. ಅಲ್ಲಾ, ನೋಡಿದವರೆಲ್ಲಾ ಪ್ರೀತಿ ಮಾಡುತ್ತಿದ್ದಾರೆ. ಇಷ್ಟು ದಿನ ಬರೀ ನೋಡಲು ಚೆಂದ ಎಂದು ತಿಳಿದುಕೊಂಡವರಷ್ಟೇ ಪ್ರೀತಿ ಮಾಡುತ್ತಾರೆಂದುಕೊಂಡಿದ್ದೆ. ಈಗ ಇದೇನು? ಮಂಗನಂತಿದ್ದವರು ಕತ್ತೆಯಂಥವರನ್ನೂ, ಕುರೂಪಿಗಳು ಕೋಡಂಗಿಗಳನ್ನೂ, ಹುಚ್ಚರು ಬೆಪ್ಪರನ್ನೂ, ಒಟ್ಟು ಎಲ್ಲ ಗಂಡುಗಳು ಎಲ್ಲ ಹೆಣ್ಣುಗಳನ್ನು ಒಟ್ಟು ಸಿಕ್ಕಿದವುಗಳನ್ನು ಪ್ರೀತಿಸುತ್ತಿದ್ದಾರೆ. ಅಂದರೆ ಪ್ರೀತಿ ದೇಶ, ಕಾಲ, ಸೌಂದರ್ಯ, ಜಾತಿ ಎಲ್ಲವುಗಳಿಂದ ಅತೀತ. ಹೆತ್ತವರಿಗೆ ಹೆಗ್ಗಣ ಮುದ್ದೆಂಬ ಮಾತನ್ನು ಕೇಳಿದ್ದೆ. ಈಗ "ಪ್ರೀತಿಸಿದವರಿಗೆ ಪಿಗ್ಗೂ (pig) ಮುದ್ದೆಂದು ತಿಳಿದುಕೊಂಡೆ. ಜಗತ್ತಿನ ಒಂದೇ ಶಕ್ತಿ ಪ್ರೀತಿ. "ಪ್ರೀತಿಗೆ ಜೈವಾಗಲಿ" ಎಂದು ಜೋರಾಗಿ ಒದರಿದೆ, ಪುಣ್ಯಕ್ಕೆ ಮನೆಯಲ್ಲಿ.
ನನಗೆ ನನ್ನ ಮೇಲೇ ಬಹಳ ಸಿಟ್ಟು ಬಂದುಬಿಟ್ಟಿದೆ, ಬೇಜಾರಾಗಿದೆ. ಅಲ್ಲಾ ಎಲ್ಲರೂ ಪ್ರೇಮದ ದಾಸರಾಗಿರುವಾಗ ನಾನೊಬ್ಬಳೇ ಅದಕ್ಕೆ ಅಧಿಪತಿಯಾಗಿ ಅದನ್ನು ನಿಯಂತ್ರಿಸಲು ಸಾಧ್ಯವೇ? ಛೇ! ಸಾಧ್ಯವೇ ಇಲ್ಲ, ಅದೂ ಈ ಪ್ರಜಾತಂತ್ರ ರಾಜ್ಯದ ಪ್ರೇಮಿಗಳೆಲ್ಲರ ಮಧ್ಯೆ. ಅದಕ್ಕೇ ನಾನಾಗಿಯೇ ಮೊದಲು ಶರಣಾಗುವುದು ಒಳ್ಳೆಯದೆನಿಸಿ ಪ್ರೇಮ ಮಾಡಬೇಕೆಂದೆ. ಆದರೆ ಒಂದು ಒಳ್ಳೆಯ ಗಂಡು ಸಿಗಬೇಕಲ್ಲಾ ದೇವರೇ!
ಎರೆಡು ದಿನ ಸತತವಾಗಿ ಧ್ಯಾನದಲ್ಲಿದ್ದೆ. ಚಿಂತನೆ-ಮಂಥನಗಳ ನಿರಂತರ ತಪದಿಂದ ಸುಂದರವಾದ ವಿಚಾರ ಹೊಳೆಯಿತು. ರಾಜಮಾರ್ಗ! ಹೇಗೂ ದಿನಪತ್ರಿಕೆಯ ಕಾರ್ಯಾಲಯದಲ್ಲಿ ನನ್ನ ಗೆಳತಿಯೊಬ್ಬಳಿದ್ದಾಳೆ. (ಅವಳೂ ಪ್ರೇಮರೋಗಿ). ಅವಳಿಗೆ ಹೇಳಿ ಒಂದು ಜಾಹಿರಾತು ಕೊಟ್ಟುಬಿಡುವುದು. ಹೌದು. ಸುಂದರವಾದ ಜಾಹಿರಾತು ತಯಾರಿಸಿದೆ. ’ಹದಿನಾರರ ಮೇಲಿನ ಹುಡುಗಿಗೆ ಸುಂದರ, ಸಾಹುಕಾರ, ಒಳ್ಳೆಯ ಹುದ್ದೆ, ಗದ್ದೆ, ಮನೆ ಇರುವ ೨೦ ರಿಂದ ೨೫ ವಯಸ್ಸಿನ ಒಳಗಿನ ಹುಡುಗನೊಬ್ಬ ಪ್ರೀತಿ ಮಾಡಲು ಬೇಕಾಗಿದ್ದಾನೆ. ಪ್ರತಿ ಗುರುವಾರ ಮಠಕ್ಕೆ ಹೋಗುವವನಾಗಿರಬೇಕು. ಬೇರೆ ಯಾವ ಹುಡುಗಿಯನ್ನೂ ಸರಿಯಾಗಿ ನೋಡಿರಬಾರದು. ನೋಡಿದ್ದರೂ ಪ್ರೀತಿ, ಪ್ರೇಮಗಳ ಬಗ್ಗೆ ವಿಚಾರ ಮಾಡಿರಬಾರದು" 
ತೆಗೆದುಕೊಂಡು ಹೋಗುವಾಗ ದೇವರಿಗೆಲ್ಲಾ ಅಡ್ಡಬಿದ್ದೆ. ಕೃಷ್ಣನ ಮುಂದೆ ಹತ್ತು ನಿಮಿಷ ಸಾಷ್ಠಾಂಗ ನಮಸ್ಕಾರ ಮಾಡಿ ಬೇಡಿಕೊಂಡೆ, "ಕೃಷ್ಣಾ ಇಂಥ ವಿಚಾರಗಳೆಲ್ಲಾ ಉಳಿದವರಿಗಿಂತ ನಿನಗೇ ಹೆಚ್ಚು ತಿಳಿಯುವುದು, ದಯವಿಟ್ಟು ಒಂದು ಒಳ್ಳೆಯ ಹುಡುಗನನ್ನು ದಯಪಾಲಿಸು."
ಗೆಳತಿಗೆ ಜಾಹಿರಾತು ಬರೆದ ಹಾಳೆಯನ್ನು ಕೊಟ್ಟೆ. ಜೋರಾಗಿ ನಕ್ಕಳು ಸೊಕ್ಕಿಷ್ಟೆ! "ಜೊತೆಗೆ ಜಾತಕಾನೂ ತಂದಿದ್ರಾಗ್ತಿತ್ತೇ." ಎಂದಳು. ಇವಳಿಗೇನು ಗೊತ್ತು ನನ್ನ ಸಂಕಟ? ಯಾವ ಕೆಲಸವೂ ಇಲ್ಲದೇ ಒದ್ದಾಡುವವಳು ನಾನು. ಎರೆಡೆರೆಡು ಕೆಲಸಗಳನ್ನು ಹಿಡಿದು ಹಾಯಾಗಿರುವವಳು ಅವಳು. ಪ್ರೀತಿಯನ್ನಾದರೂ ಮಾಡಬೇಕೆಂದು ನಾನು ಜಾಹಿರಾತು ಕೊಡಬೇಕೆಂದರೆ ಶುರುವಾಯಿತು ಅವಳ ಉಪದೇಶ. "ಹೀಗೆ ಪೇಪರನಲ್ಲಿ ಕೊಟ್ಟು ಪ್ರೀತಿ ಮಾಡುವುದಲ್ಲವೇ ಹುಚ್ಚಿ. ಪ್ರೀತಿ ತಾನಾಗಿಯೇ ಉದಯಿಸಬೇಕು. ನಿನಗೆ ಪರಿಚಯವಿದ್ದವರಲ್ಲಿ, ಕಾಲೇಜಿನಲ್ಲಿ ಯಾರಾದರೂ ಸಿಕ್ಕರೆ ಮಾಡು" ಎಂದಳು.
ಅಂದಿನಿಂದ ಪ್ರಾರಂಭವಾಯಿತು ಪ್ರೇಮಿಯ ಹುಡುಕಾಟ. ದಾರಿಯಲ್ಲಿ ಹೊರಟ ಗಂಡುಪ್ರಾಣಿಗಳನ್ನೆಲ್ಲ ನೋಡಿದೆ. ಕೆಲವನ್ನು ನೆನಪಿಟ್ಟುಕೊಂಡೆ. ಇನ್ನೂ ಕೆಲವನ್ನು ಮಾತನಾಡಿಸಲು ಪ್ರಯತ್ನಿಸಿದೆ. ಆದರೂ ಪ್ರೀತಿ ಹೇಗೆ ಮಾಡಬೇಕೆಂದು ತಿಳಿಯಲಿಲ್ಲ. ಹೇಗೆ ಪ್ರೀತಿ ಮಾಡುತ್ತಾರೆ ಈ ಜನ! ದನಗಳು ಹುಲ್ಲು ಮೇಯ್ದಷ್ಟು ಸುಲಭವಾಗಿ. ನನ್ನ ಗೆಳತಿಯರೆಲ್ಲ ಪ್ರೇಮಾನಂದದ, ವಿರಹತಾಪದ ಅನುಭವವನ್ನು ಮೇಯುತ್ತಿರುವಾಗ ಇದೇನು ನನ್ನ ಸ್ಥಿತಿ! ಒಂದು ಗಂಡಿಗೂ ಇಲ್ಲ ಗತಿ! ಎನಿಸಿತು. ಆದರೂ ಅದೊಂದು ತಪಸ್ಸೇ ಸರಿ, ಮಾಡಿಯೇ ತೀರಬೇಕೆಂಬ ಛಲ ಹೊತ್ತೆ. 
ನನ್ನ ಅಣ್ಣ ತನ್ನ ಹೊಸ ಗೆಳೆಯನೊಬ್ಬನ ಪರಿಚಯವನ್ನ ಭಾರಿಯಾಗಿ ಮಾಡಿಕೊಟ್ಟ. ಅಬ್ಬಬ್ಬ! ಅಂತೂ ಒಂದು ಮಿಕ ಸಿಕ್ತು ಟ್ರೈ ಮಾಡಲು ಅಡ್ಡಿ ಇಲ್ಲ ಎಂದುಕೊಂಡೆ. "ಅಣ್ಣಾ ನಿನ್ನ ಗೆಳೆಯ ಹ್ಯಾಗೋ? ತುಂಬಾ ಒಳ್ಳೆಯವನ ಹಾಗೆ ಕಾಣ್ತಾನಲ್ಲಾ?" ರಾತ್ರಿ ಎಂದಿಲ್ಲದ ಪ್ರೀತಿಯಿಂದ ಅಣ್ಣನ ಹತ್ತಿರ ಕುಳಿತು ಕೇಳಿದೆ. ಉಳಿದ ದಿನಗಳಲ್ಲಿ ಆ ಮಂಗನ ಹತ್ತಿರ ಕೂಡಲು ನನಗೇನು ಕೆಲಸವಿಲ್ಲವೇ ಹೇಳಿ. ಏಕೆಂದರೆ ಅದಕ್ಕೋ ಕೇವಲ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಹುಚ್ಚು ಹುಡುಗಿಯರ ಧ್ಯಾನವೇ ಧ್ಯಾನವಾಗಿರುತ್ತದೆ.
“ಏನು ಒಳ್ಳೆ ಪತ್ತೆದಾರನ ಥರಾ ತೀರಾ ಮೃದುವಾಗಿ ಎಲ್ಲಾ ವಿಷಯ ಕೇಳಕೊಳ್ಳೋಣ ಅಂತೀ. ಆ ಬೇಕೂಫ ಒಂದು ಹುಡುಗೀನ ಲವ್ ಮಾಡಿ ಬಿಟ್ಟು ಈಗ ಯೋಗಿಯಾಗಿ ರೋಗಿ ಥರಾ ಕಾಣ್ತಾ ಇದ್ದಾನೆ" ಎಂದ. ಥತ್! ಇವನಿಗೆ ಬೇರೆ ಉದ್ಯೋಗ ಇದ್ದಿರಲಿಲ್ಲವೇ? ಏನು ಮಹಾ ಸುಂದರಾಂಗ ಅಂತ ಲವ್ ಮಾಡಿಬಿಟ್ಟ, ಇನ್ನೊಮ್ಮೆ ಅವನನ್ನ ಹೊರಳಿ ಕೂಡ ನೋಡಬಾರದೆನಿಸಿತು. 
ಬ್ಯಾಂಕಿನಲ್ಲಿ ಒಂದು ಅಕೌಂಟ ತೆಗೆಯೋಣ ಎನಿಸಿತು. ಬೇಕೇ ಆಗಿತ್ತು ಬಿಡಿ. ಮೊನ್ನೆ ನನ್ನ ಗೆಳತಿನೂ ಹೇಳಿದ್ದಳು, ಅವರ ಮನೆ ಪಕ್ಕದ ಬ್ಯಾಂಕಿನಲ್ಲಿ ಧಂಡಿಯಾಗಿ ಹುಡುಗರಿದ್ದಾರೆ ಎಂದು. ಅವಳನ್ನು ಕರೆದುಕೊಂಡು ಹೋದೆ. ಕಣ್ಣು ಪ್ರತಿ ಗಂಡು ಪ್ರಾಣಿಯನ್ನೂ ಪರೀಕ್ಷಾದೃಷ್ಟಿಯಿಂದ ನೋಡುತ್ತಿತ್ತು. ಅರೆರೆರೆ! ಅಲ್ಲಿ ಕೊನೆಗೆ ಕೂತವನು ಏನು ಚೆನ್ನಾಗಿದ್ದಾನೆ ದೇವ್ರೇ. ಪ್ರೀತಿ ಮಾಡಿದ್ರೆ ಇಂಥವನನ್ನ ಮಾಡಬೇಕು, ಇಲ್ಲಾಂದ್ರೆ ಏನು ಯಾವುದೋ ಹುಚ್ಚನನ್ನು ಮಾಡೋದು ಒಂದೇ ಬಾವಿ ಹಾರೋದು ಒಂದೇ. ಲವರ್ ಅಂದರೆ ಇವನು. "ಅಲ್ನೋಡೇ, ಆಫೀಸರ್ ಕಣೆ ಅವನು" ಗೆಳತಿ ಕೈತಿವಿದಾಗ ಮತ್ತಿಷ್ಟೂ ಉಬ್ಬಿ ಹೋದೆ. "A lover must be an officer" ಎಂದೆ ಮನಸ್ಸಿನಲ್ಲೇ. "ಅಕೌಂಟ್ ಓಪನ್ ಮಾಡ್ತೀಯಾ?" ಎಂದಳು. "ಯಾರು, ಅವನ ಹತ್ರಾನಾ?" ಎಂದು ನಾನೂ ನಕ್ಕೆ.
ಅಷ್ಟರಲ್ಲಿ ಯಾವನೋ ಒಬ್ಬ, ಕ್ಲಾರ್ಕೊ, ಪ್ಯೂನೋ ಇರಬಹುದು, ಅವನ್ನ ನೋಡಿದ್ರೆ ತಿಳಿಯುತ್ತೆ, ಲವ್ ಮಾಡಲಿಕ್ಕಲ್ಲಾ ಅವನು ಪಾಪ ಎಂದು, "ಸರ್ ನಿಮ್ಮಗ ಮನೆಗೆ ಹೋಗಬೇಕಂತೆ, ಅಳ್ತಾ ಇದಾನೆ ಸಾರ್" ಎಂದ. ಈ ಸಾಹೇಬ, ಬೇರೆಯವರಿಗೆ ಮಕ್ಕಳೇ ಇಲ್ಲ ತನ್ನದೊಂದೇ ಎನ್ನುವಂತೆ ದಿಕ್ಕೆಟ್ಟು ಓಡಿದ. ಅಲ್ಲಾ ಇವನಿಗೇನು ಬಂದಿತ್ತು ಅಂಥದ್ದು? ಇವನ ವಯಸ್ಸಿನವರಿನ್ನೂ ಕೆಲಸ ಮಾಡುತ್ತಿಲ್ಲ, ಇವ ಈಗಾಗಲೇ ಮದುವೆ ಮಾಡಿಕೊಂಡು, ಮಕ್ಕಳೂ ಕೂಡ ಆಗಿಬಿಡುವುದೇ? ಇಷ್ಟು ಅವಸರ ಏನಿತ್ತು? ಈಗಿನ್ನೂ ನನ್ನಂಥವರನ್ನು ಲವ್ ಮಾಡುವ ಕಾಲ. ಮಕ್ಕಳು ಮರಿ ಎಂದು ಮಂಡೆ ಬಿಸಿ ಮಾಡಿಕೊಳ್ಳುವ ಹುಚ್ಚರಿಗೆ ಏನೆನ್ನಬೇಕು ತಿಳಿಯಲಿಲ್ಲ. ಅಲ್ಲಿ ಅಕೌಂಟ್ ತೆಗೆದಾದರೂ ಏನು ಉಪಯೋಗ ಹೇಳಿ. ಹತ್ತು ರೂಪಾಯಿ ದಂಡ ಸುಮ್ಮನೇ. "ಬಾರೇ ಬ್ಯಾಂಕ್ ಚೆನ್ನಾಗಿಲ್ಲ, ಮುದುಕಾಗಿ ಬಿಟ್ಟಿದೆ ಅಕಾಲದಲ್ಲಿ" ಎಂದು ಗೆಳತಿಯನ್ನು ದೂಡುತ್ತ ಹೊರಬಂದುಬಿಟ್ಟೆ.
ಅಂದ ಹಾಗೆ ಈಗ ಪ್ರೇಮರೋಗದ ಮೇಲೆ ಚಿಕಿಚ್ಛೆ ಮಾಡುವ ಮಹಾವೈದ್ಯನೊಬ್ಬ ನಮ್ಮ ಮನೆಹತ್ತಿರದಲ್ಲೇ ಬಂದಿದ್ದಾನೆ. ಅವನ ಸ್ಪೆಶಾಲಿಟಿ ಅಂದರೆ ಅವನು ಮೊದಲು ಪ್ರೇಮರೋಗವನ್ನು ಬರಿಸುತ್ತಾನೆ. ನಂತರ ಎಂಥ ಮದ್ದು ಕೊಡುತ್ತಾನೋ ಸರಿಯಾಗಿ ಗೊತ್ತಿಲ್ಲ, ನನಗೆ ಬೇಕೂ ಇಲ್ಲ ಬಿಡಿ, ಮೊದಲ ಮದ್ದು ಸಾಕು ನನಗೆ ಎಂದು ಇವತ್ತೇ ಹೋಗಿ ಅವನಲ್ಲಿ ನಂಬರ ಹಚ್ಚಿ ಬಂದಿದ್ದೇನೆ. ತುಂಬಾ ರಷ್ ಅಲ್ಲಿ ಗೊತ್ತೇ?
ಆದರೂ ನೀವೂ ಯಾವುದಾದರೂ ನಿಮ್ಮ ಗುರುತಿನ ಒಳ್ಳೆಯ ಹುಡುಗನಿದ್ದರೆ ತಿಳಿಸುತ್ತೀರಾ? ನಿಮ್ಮ ಉಪಕಾರವನ್ನು ಈ ಪ್ರೇಮಯುಗದಲ್ಲಿ ಎಂದೂ ಮರೆಯುವುದಿಲ್ಲ. ನನ್ನ ಬೇಡಿಕೆಗಳು ನೆನಪಿವೆ ತಾನೇ? ಹಾಗೆಯೇ ಇದ್ದರೆ ತುಂಬಾ ಒಳ್ಳೆಯದು. ನಾನು ಪೂರ್ಣವಾಗಿ ಪ್ರೀತಿ ಮಾಡಲು ತುಂಬಾ ಸಹಾಯಕವಾಗುತ್ತದೆ. ನಿಮಗೊಂದು ಪ್ರೀತಿಯ ಕಾಣಿಕೆಯೂ ಸಿಗುತ್ತದೆ, ನೆನಪಿಡಿ "ಪ್ರೀತಿ ಮಾಡಲು ನನಗೊಂದು ಹುಡುಗ ಬೇಕು (ವಿವರಗಳಿಗಾಗಿ ಒಳಗಿನ ಜಾಹಿರಾತು ನೋಡಿ).
ನೀತಾ ರಾವ್


(ಸ್ನೇಹಿತರೇ, ಸುಮಾರು ಇಪ್ಪತೈದು ವರ್ಷಗಳ ಹಿಂದೆ ಈ ನನ್ನ ಬರಹ ತುಷಾರದಲ್ಲಿ ಪ್ರಕಟಗೊಂಡಿತ್ತು. ಮೊದಲಸಲ ರಾಜ್ಯಮಟ್ಟದ ಮಾಸಿಕಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ನನಗೆ ತುಂಬಾ ಖುಶಿಯೂ ಆಗಿತ್ತು. ಮತ್ತೆ ಈ ಲೇಖನಕ್ಕೆ ಉತ್ತರ-ರೂಪದಲ್ಲಿ ಶ್ರೀ ಚಂದ್ರಶೇಖರ ವಸ್ತ್ರದ ಸರು ’ಉತ್ತರಕಾಂಡ’ ಎನ್ನುವ ಇನ್ನೊಂದು ಹಾಸ್ಯಲೇಖನವನ್ನೇ ಬರೆದು ಅದು ಮರುತಿಂಗಳು ತುಷಾರದಲ್ಲೇ ಪ್ರಕಟಗೊಂಡಿದ್ದು ಈ ’ಪ್ರೇಮಾಯಣ’ದ ಹೆಗ್ಗಳಿಕೆ.)