ಪ್ರೇಮಾಯಣ
ಮಾಡಲು ಕೆಲಸವಿಲ್ಲದೆ, ಓದಲು ಆಸ್ಥೆ ಇಲ್ಲದೆ ಉಂಡು ಮಲಗುವ ಕತ್ತೆಯಂತಾಗಿದ್ದೆ. ಆ ಕತ್ತೆಗಾದರೂ ಕೆಲಸವಿರುತ್ತದೆ ಪಾಪ! ನನಗಿಲ್ಲ ಅಷ್ಟೇ. ರೇಡಿಯೋ ಆದರೂ ಕೇಳೋಣವೆಂದು ವಿವಿಧಭಾರತಿಗೆ ತಿರುಗಿಸಿದೆ. "ಪ್ಯಾರ ತೆರಾ ಪಾನೇಕೊ" ಎಂದು ಮುಕೇಶ ಅಡ್ಡಾದಿಡ್ಡಿಯಾಗಿ ಅಳುತ್ತಿದ್ದ. ಈ ಗೊಡ್ಡು ಹಿಂದಿಯವಕ್ಕೆ ಪ್ರೀತಿ ಮಾಡಿ ಎಲ್ಲಾ ಕಳಕೊಳ್ಳುವುದು ಬಿಟ್ಟು ಇನ್ನೇನು ಬರುತ್ತದೆ? ಧಾರವಾಡಕ್ಕೆ ಹಚ್ಚಿದೆ. ಅಬ್ಬಾ! ಇವರಿಗೂ ಪ್ರೀತಿಯ ಸಾಂಕ್ರಾಮಿಕ ರೋಗ ಹರಡಿಯೇ ಬಿಟ್ಟಿದೆ. "ಪ್ರೀತಿಯೇ ನನ್ನುಸಿರು" ಎಂದು ಕಿರುಚತೊಡಗಿದಾಗ ನಾವೆಲ್ಲ ಹಾಗಾದರೆ ಉಸಿರು ಸಿಕ್ಕು ಸಾಯುತ್ತಿದ್ದೇವೆಯೇ ಎನಿಸಿತು. ಏಕೆಂದರೆ ನಾವು ಅಂದರೆ ನಾನಂತೂ ಪ್ರೀತಿ ಮಾಡಲಿಲ್ಲ ನೋಡಿ.ಈ ಹೊಲಸು ಹೊತ್ತು ಹೋಗುವುದೇ ಕಠಿಣವಾಗಿ ಗೆಳತಿಯ ಮನೆಗಾದರೂ ಹೋಗೋಣವೆಂದು ಹೊರಟೆ. ಹೋದೆ. ನನ್ನ ದುರದೃಷ್ಟ! ಅವಳ ಮೂಡೂ ಚೆನ್ನಾಗಿರಲಿಲ್ಲ. "ಏಕೇ ಏನಾಗಿದೆ?" ಎಂದು ಕೇಳಿದೆ. "ಶ್ .. ಹೇಳುತ್ತೇನೆ ಬಾ" ಎಂದು ಕೋಣೆಯಲ್ಲಿ ಕರೆದೊಯ್ದವಳು ತನ್ನ ಗೋಳನ್ನು ತೋಡಿಕೊಂಡಳು. "ನನ್ನ ಲವರ್ ಎಂಟುದಿನದಿಂದ ಕಂಡೇ ಇಲ್ಲ ಕಣೆ. ಎಲ್ಲಿ ಹೋಗುವೆನೆಂದು ಹೇಳುವುದು ಬೇಡವೇ?" ಇಷ್ಟು ಹೇಳುವುದರಲ್ಲಿ ಪಾಪ ಅವಳ ಕಣ್ಣೀರು ಮಳೆನೀರಿನಂತೆ ಎಲ್ಲಿ ಹರಿಯುವುದೋ ಎಂದು ನಾನು ಹೆದರಿಬಿಟ್ಟೆ. "ನೀನು ಯಾವಾಗ ಲವ್ ಮಾಡಿದೆಯೇ?" ಎಂದೆ. ಒಮ್ಮಿಲೇ ಆ ಕಣ್ಣುಗಳು ಏನು ಹೊಳೆದವು! "ನಿನ್ನಂಥ ಗುಗ್ಗೂಗೆ ಹೇಗೆ ಗೊತ್ತಾಗಬೇಕು? ಅದಕ್ಕೂ ಬೇಕು ಬುದ್ಧಿ" ಎಂದಳು. ಅವಳ ವಿರಹವೇದನೆ ನನಗೆ ಕೇಳಲು ಅಸಹನೆಯಾಗಿ ಎದ್ದು ಬಂದೆ.
ಮತ್ತೆ ಮನೆಯಲ್ಲಿ ಬಿದ್ದಿರುವುದೇಕೆಂದು ಎದ್ದು ವಾಕಿಂಗಿಗೆ ಹೋದರೆ ಅಲ್ಲೂ ಗೆಳತಿಯರ ಕಾಟ. ಏನೋ ಗೊಳ್ಳು ಮಾತಾಡಿ ಹೋಗುವ ಎಂದು ಪ್ರೇಮಾವತಿಯೊಡನೆ ನಿಂತೆ. ಮಾತನಾಡುತ್ತ ನಿಂತವಳು ಒಮ್ಮಿಲೇ ನಾಚಿದಂತೆ ನಕ್ಕಾಗ "ಏನಾಯಿತೇ?" ಎಂದೆ. ಉತ್ತರ ಹೇಳದೇ ಪಕ್ಕಕ್ಕೆ ವಾರೆನೋಟ ಬೀರಿದಳು. ಕೋಡಂಗಿಯಂಥವನೊಬ್ಬ ನಿಂತಿದ್ದ. ಯಾರಾದರೂ ಇರಲಿ ಎಂದು ಧೈರ್ಯದಿಂದ ಕೇಳಿಬಿಟ್ಟೆ, "ನಿನ್ನ ಲವರಾ?" "ನಿನಗೆ ಹೇಗೆ ಗೊತ್ತಾಗಿಬಿಟ್ತು!" ಎಂದು ಮತ್ತೆ ಮತ್ತೆ ನಕ್ಕಾಗ ಸಮಾಧಾನವಾಯ್ತು, ಈ ಗುಗ್ಗೂಗೂ ಸ್ವಲ್ಪ ಬುದ್ಧಿ ಬರಲಾರಂಭಿಸಿದೆ ಎಂದು. ದಾರಿಯಲ್ಲೆಲ್ಲಾ ಅದೇ ಯೋಚನೆ ಅಂತರ್ರಾಷ್ಟ್ರೀಯ ಪ್ರಶ್ನೆಯಾಗಿ ತಲೆ ತುಂಬಿತ್ತು. ಅಲ್ಲಾ, ನೋಡಿದವರೆಲ್ಲಾ ಪ್ರೀತಿ ಮಾಡುತ್ತಿದ್ದಾರೆ. ಇಷ್ಟು ದಿನ ಬರೀ ನೋಡಲು ಚೆಂದ ಎಂದು ತಿಳಿದುಕೊಂಡವರಷ್ಟೇ ಪ್ರೀತಿ ಮಾಡುತ್ತಾರೆಂದುಕೊಂಡಿದ್ದೆ. ಈಗ ಇದೇನು? ಮಂಗನಂತಿದ್ದವರು ಕತ್ತೆಯಂಥವರನ್ನೂ, ಕುರೂಪಿಗಳು ಕೋಡಂಗಿಗಳನ್ನೂ, ಹುಚ್ಚರು ಬೆಪ್ಪರನ್ನೂ, ಒಟ್ಟು ಎಲ್ಲ ಗಂಡುಗಳು ಎಲ್ಲ ಹೆಣ್ಣುಗಳನ್ನು ಒಟ್ಟು ಸಿಕ್ಕಿದವುಗಳನ್ನು ಪ್ರೀತಿಸುತ್ತಿದ್ದಾರೆ. ಅಂದರೆ ಪ್ರೀತಿ ದೇಶ, ಕಾಲ, ಸೌಂದರ್ಯ, ಜಾತಿ ಎಲ್ಲವುಗಳಿಂದ ಅತೀತ. ಹೆತ್ತವರಿಗೆ ಹೆಗ್ಗಣ ಮುದ್ದೆಂಬ ಮಾತನ್ನು ಕೇಳಿದ್ದೆ. ಈಗ "ಪ್ರೀತಿಸಿದವರಿಗೆ ಪಿಗ್ಗೂ (pig) ಮುದ್ದೆಂದು ತಿಳಿದುಕೊಂಡೆ. ಜಗತ್ತಿನ ಒಂದೇ ಶಕ್ತಿ ಪ್ರೀತಿ. "ಪ್ರೀತಿಗೆ ಜೈವಾಗಲಿ" ಎಂದು ಜೋರಾಗಿ ಒದರಿದೆ, ಪುಣ್ಯಕ್ಕೆ ಮನೆಯಲ್ಲಿ.
ನನಗೆ ನನ್ನ ಮೇಲೇ ಬಹಳ ಸಿಟ್ಟು ಬಂದುಬಿಟ್ಟಿದೆ, ಬೇಜಾರಾಗಿದೆ. ಅಲ್ಲಾ ಎಲ್ಲರೂ ಪ್ರೇಮದ ದಾಸರಾಗಿರುವಾಗ ನಾನೊಬ್ಬಳೇ ಅದಕ್ಕೆ ಅಧಿಪತಿಯಾಗಿ ಅದನ್ನು ನಿಯಂತ್ರಿಸಲು ಸಾಧ್ಯವೇ? ಛೇ! ಸಾಧ್ಯವೇ ಇಲ್ಲ, ಅದೂ ಈ ಪ್ರಜಾತಂತ್ರ ರಾಜ್ಯದ ಪ್ರೇಮಿಗಳೆಲ್ಲರ ಮಧ್ಯೆ. ಅದಕ್ಕೇ ನಾನಾಗಿಯೇ ಮೊದಲು ಶರಣಾಗುವುದು ಒಳ್ಳೆಯದೆನಿಸಿ ಪ್ರೇಮ ಮಾಡಬೇಕೆಂದೆ. ಆದರೆ ಒಂದು ಒಳ್ಳೆಯ ಗಂಡು ಸಿಗಬೇಕಲ್ಲಾ ದೇವರೇ!
ಎರೆಡು ದಿನ ಸತತವಾಗಿ ಧ್ಯಾನದಲ್ಲಿದ್ದೆ. ಚಿಂತನೆ-ಮಂಥನಗಳ ನಿರಂತರ ತಪದಿಂದ ಸುಂದರವಾದ ವಿಚಾರ ಹೊಳೆಯಿತು. ರಾಜಮಾರ್ಗ! ಹೇಗೂ ದಿನಪತ್ರಿಕೆಯ ಕಾರ್ಯಾಲಯದಲ್ಲಿ ನನ್ನ ಗೆಳತಿಯೊಬ್ಬಳಿದ್ದಾಳೆ. (ಅವಳೂ ಪ್ರೇಮರೋಗಿ). ಅವಳಿಗೆ ಹೇಳಿ ಒಂದು ಜಾಹಿರಾತು ಕೊಟ್ಟುಬಿಡುವುದು. ಹೌದು. ಸುಂದರವಾದ ಜಾಹಿರಾತು ತಯಾರಿಸಿದೆ. ’ಹದಿನಾರರ ಮೇಲಿನ ಹುಡುಗಿಗೆ ಸುಂದರ, ಸಾಹುಕಾರ, ಒಳ್ಳೆಯ ಹುದ್ದೆ, ಗದ್ದೆ, ಮನೆ ಇರುವ ೨೦ ರಿಂದ ೨೫ ವಯಸ್ಸಿನ ಒಳಗಿನ ಹುಡುಗನೊಬ್ಬ ಪ್ರೀತಿ ಮಾಡಲು ಬೇಕಾಗಿದ್ದಾನೆ. ಪ್ರತಿ ಗುರುವಾರ ಮಠಕ್ಕೆ ಹೋಗುವವನಾಗಿರಬೇಕು. ಬೇರೆ ಯಾವ ಹುಡುಗಿಯನ್ನೂ ಸರಿಯಾಗಿ ನೋಡಿರಬಾರದು. ನೋಡಿದ್ದರೂ ಪ್ರೀತಿ, ಪ್ರೇಮಗಳ ಬಗ್ಗೆ ವಿಚಾರ ಮಾಡಿರಬಾರದು"
ತೆಗೆದುಕೊಂಡು ಹೋಗುವಾಗ ದೇವರಿಗೆಲ್ಲಾ ಅಡ್ಡಬಿದ್ದೆ. ಕೃಷ್ಣನ ಮುಂದೆ ಹತ್ತು ನಿಮಿಷ ಸಾಷ್ಠಾಂಗ ನಮಸ್ಕಾರ ಮಾಡಿ ಬೇಡಿಕೊಂಡೆ, "ಕೃಷ್ಣಾ ಇಂಥ ವಿಚಾರಗಳೆಲ್ಲಾ ಉಳಿದವರಿಗಿಂತ ನಿನಗೇ ಹೆಚ್ಚು ತಿಳಿಯುವುದು, ದಯವಿಟ್ಟು ಒಂದು ಒಳ್ಳೆಯ ಹುಡುಗನನ್ನು ದಯಪಾಲಿಸು."
ಗೆಳತಿಗೆ ಜಾಹಿರಾತು ಬರೆದ ಹಾಳೆಯನ್ನು ಕೊಟ್ಟೆ. ಜೋರಾಗಿ ನಕ್ಕಳು ಸೊಕ್ಕಿಷ್ಟೆ! "ಜೊತೆಗೆ ಜಾತಕಾನೂ ತಂದಿದ್ರಾಗ್ತಿತ್ತೇ." ಎಂದಳು. ಇವಳಿಗೇನು ಗೊತ್ತು ನನ್ನ ಸಂಕಟ? ಯಾವ ಕೆಲಸವೂ ಇಲ್ಲದೇ ಒದ್ದಾಡುವವಳು ನಾನು. ಎರೆಡೆರೆಡು ಕೆಲಸಗಳನ್ನು ಹಿಡಿದು ಹಾಯಾಗಿರುವವಳು ಅವಳು. ಪ್ರೀತಿಯನ್ನಾದರೂ ಮಾಡಬೇಕೆಂದು ನಾನು ಜಾಹಿರಾತು ಕೊಡಬೇಕೆಂದರೆ ಶುರುವಾಯಿತು ಅವಳ ಉಪದೇಶ. "ಹೀಗೆ ಪೇಪರನಲ್ಲಿ ಕೊಟ್ಟು ಪ್ರೀತಿ ಮಾಡುವುದಲ್ಲವೇ ಹುಚ್ಚಿ. ಪ್ರೀತಿ ತಾನಾಗಿಯೇ ಉದಯಿಸಬೇಕು. ನಿನಗೆ ಪರಿಚಯವಿದ್ದವರಲ್ಲಿ, ಕಾಲೇಜಿನಲ್ಲಿ ಯಾರಾದರೂ ಸಿಕ್ಕರೆ ಮಾಡು" ಎಂದಳು.
ಅಂದಿನಿಂದ ಪ್ರಾರಂಭವಾಯಿತು ಪ್ರೇಮಿಯ ಹುಡುಕಾಟ. ದಾರಿಯಲ್ಲಿ ಹೊರಟ ಗಂಡುಪ್ರಾಣಿಗಳನ್ನೆಲ್ಲ ನೋಡಿದೆ. ಕೆಲವನ್ನು ನೆನಪಿಟ್ಟುಕೊಂಡೆ. ಇನ್ನೂ ಕೆಲವನ್ನು ಮಾತನಾಡಿಸಲು ಪ್ರಯತ್ನಿಸಿದೆ. ಆದರೂ ಪ್ರೀತಿ ಹೇಗೆ ಮಾಡಬೇಕೆಂದು ತಿಳಿಯಲಿಲ್ಲ. ಹೇಗೆ ಪ್ರೀತಿ ಮಾಡುತ್ತಾರೆ ಈ ಜನ! ದನಗಳು ಹುಲ್ಲು ಮೇಯ್ದಷ್ಟು ಸುಲಭವಾಗಿ. ನನ್ನ ಗೆಳತಿಯರೆಲ್ಲ ಪ್ರೇಮಾನಂದದ, ವಿರಹತಾಪದ ಅನುಭವವನ್ನು ಮೇಯುತ್ತಿರುವಾಗ ಇದೇನು ನನ್ನ ಸ್ಥಿತಿ! ಒಂದು ಗಂಡಿಗೂ ಇಲ್ಲ ಗತಿ! ಎನಿಸಿತು. ಆದರೂ ಅದೊಂದು ತಪಸ್ಸೇ ಸರಿ, ಮಾಡಿಯೇ ತೀರಬೇಕೆಂಬ ಛಲ ಹೊತ್ತೆ.
ನನ್ನ ಅಣ್ಣ ತನ್ನ ಹೊಸ ಗೆಳೆಯನೊಬ್ಬನ ಪರಿಚಯವನ್ನ ಭಾರಿಯಾಗಿ ಮಾಡಿಕೊಟ್ಟ. ಅಬ್ಬಬ್ಬ! ಅಂತೂ ಒಂದು ಮಿಕ ಸಿಕ್ತು ಟ್ರೈ ಮಾಡಲು ಅಡ್ಡಿ ಇಲ್ಲ ಎಂದುಕೊಂಡೆ. "ಅಣ್ಣಾ ನಿನ್ನ ಗೆಳೆಯ ಹ್ಯಾಗೋ? ತುಂಬಾ ಒಳ್ಳೆಯವನ ಹಾಗೆ ಕಾಣ್ತಾನಲ್ಲಾ?" ರಾತ್ರಿ ಎಂದಿಲ್ಲದ ಪ್ರೀತಿಯಿಂದ ಅಣ್ಣನ ಹತ್ತಿರ ಕುಳಿತು ಕೇಳಿದೆ. ಉಳಿದ ದಿನಗಳಲ್ಲಿ ಆ ಮಂಗನ ಹತ್ತಿರ ಕೂಡಲು ನನಗೇನು ಕೆಲಸವಿಲ್ಲವೇ ಹೇಳಿ. ಏಕೆಂದರೆ ಅದಕ್ಕೋ ಕೇವಲ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಹುಚ್ಚು ಹುಡುಗಿಯರ ಧ್ಯಾನವೇ ಧ್ಯಾನವಾಗಿರುತ್ತದೆ.
“ಏನು ಒಳ್ಳೆ ಪತ್ತೆದಾರನ ಥರಾ ತೀರಾ ಮೃದುವಾಗಿ ಎಲ್ಲಾ ವಿಷಯ ಕೇಳಕೊಳ್ಳೋಣ ಅಂತೀ. ಆ ಬೇಕೂಫ ಒಂದು ಹುಡುಗೀನ ಲವ್ ಮಾಡಿ ಬಿಟ್ಟು ಈಗ ಯೋಗಿಯಾಗಿ ರೋಗಿ ಥರಾ ಕಾಣ್ತಾ ಇದ್ದಾನೆ" ಎಂದ. ಥತ್! ಇವನಿಗೆ ಬೇರೆ ಉದ್ಯೋಗ ಇದ್ದಿರಲಿಲ್ಲವೇ? ಏನು ಮಹಾ ಸುಂದರಾಂಗ ಅಂತ ಲವ್ ಮಾಡಿಬಿಟ್ಟ, ಇನ್ನೊಮ್ಮೆ ಅವನನ್ನ ಹೊರಳಿ ಕೂಡ ನೋಡಬಾರದೆನಿಸಿತು.
ಬ್ಯಾಂಕಿನಲ್ಲಿ ಒಂದು ಅಕೌಂಟ ತೆಗೆಯೋಣ ಎನಿಸಿತು. ಬೇಕೇ ಆಗಿತ್ತು ಬಿಡಿ. ಮೊನ್ನೆ ನನ್ನ ಗೆಳತಿನೂ ಹೇಳಿದ್ದಳು, ಅವರ ಮನೆ ಪಕ್ಕದ ಬ್ಯಾಂಕಿನಲ್ಲಿ ಧಂಡಿಯಾಗಿ ಹುಡುಗರಿದ್ದಾರೆ ಎಂದು. ಅವಳನ್ನು ಕರೆದುಕೊಂಡು ಹೋದೆ. ಕಣ್ಣು ಪ್ರತಿ ಗಂಡು ಪ್ರಾಣಿಯನ್ನೂ ಪರೀಕ್ಷಾದೃಷ್ಟಿಯಿಂದ ನೋಡುತ್ತಿತ್ತು. ಅರೆರೆರೆ! ಅಲ್ಲಿ ಕೊನೆಗೆ ಕೂತವನು ಏನು ಚೆನ್ನಾಗಿದ್ದಾನೆ ದೇವ್ರೇ. ಪ್ರೀತಿ ಮಾಡಿದ್ರೆ ಇಂಥವನನ್ನ ಮಾಡಬೇಕು, ಇಲ್ಲಾಂದ್ರೆ ಏನು ಯಾವುದೋ ಹುಚ್ಚನನ್ನು ಮಾಡೋದು ಒಂದೇ ಬಾವಿ ಹಾರೋದು ಒಂದೇ. ಲವರ್ ಅಂದರೆ ಇವನು. "ಅಲ್ನೋಡೇ, ಆಫೀಸರ್ ಕಣೆ ಅವನು" ಗೆಳತಿ ಕೈತಿವಿದಾಗ ಮತ್ತಿಷ್ಟೂ ಉಬ್ಬಿ ಹೋದೆ. "A lover must be an officer" ಎಂದೆ ಮನಸ್ಸಿನಲ್ಲೇ. "ಅಕೌಂಟ್ ಓಪನ್ ಮಾಡ್ತೀಯಾ?" ಎಂದಳು. "ಯಾರು, ಅವನ ಹತ್ರಾನಾ?" ಎಂದು ನಾನೂ ನಕ್ಕೆ.
ಅಷ್ಟರಲ್ಲಿ ಯಾವನೋ ಒಬ್ಬ, ಕ್ಲಾರ್ಕೊ, ಪ್ಯೂನೋ ಇರಬಹುದು, ಅವನ್ನ ನೋಡಿದ್ರೆ ತಿಳಿಯುತ್ತೆ, ಲವ್ ಮಾಡಲಿಕ್ಕಲ್ಲಾ ಅವನು ಪಾಪ ಎಂದು, "ಸರ್ ನಿಮ್ಮಗ ಮನೆಗೆ ಹೋಗಬೇಕಂತೆ, ಅಳ್ತಾ ಇದಾನೆ ಸಾರ್" ಎಂದ. ಈ ಸಾಹೇಬ, ಬೇರೆಯವರಿಗೆ ಮಕ್ಕಳೇ ಇಲ್ಲ ತನ್ನದೊಂದೇ ಎನ್ನುವಂತೆ ದಿಕ್ಕೆಟ್ಟು ಓಡಿದ. ಅಲ್ಲಾ ಇವನಿಗೇನು ಬಂದಿತ್ತು ಅಂಥದ್ದು? ಇವನ ವಯಸ್ಸಿನವರಿನ್ನೂ ಕೆಲಸ ಮಾಡುತ್ತಿಲ್ಲ, ಇವ ಈಗಾಗಲೇ ಮದುವೆ ಮಾಡಿಕೊಂಡು, ಮಕ್ಕಳೂ ಕೂಡ ಆಗಿಬಿಡುವುದೇ? ಇಷ್ಟು ಅವಸರ ಏನಿತ್ತು? ಈಗಿನ್ನೂ ನನ್ನಂಥವರನ್ನು ಲವ್ ಮಾಡುವ ಕಾಲ. ಮಕ್ಕಳು ಮರಿ ಎಂದು ಮಂಡೆ ಬಿಸಿ ಮಾಡಿಕೊಳ್ಳುವ ಹುಚ್ಚರಿಗೆ ಏನೆನ್ನಬೇಕು ತಿಳಿಯಲಿಲ್ಲ. ಅಲ್ಲಿ ಅಕೌಂಟ್ ತೆಗೆದಾದರೂ ಏನು ಉಪಯೋಗ ಹೇಳಿ. ಹತ್ತು ರೂಪಾಯಿ ದಂಡ ಸುಮ್ಮನೇ. "ಬಾರೇ ಬ್ಯಾಂಕ್ ಚೆನ್ನಾಗಿಲ್ಲ, ಮುದುಕಾಗಿ ಬಿಟ್ಟಿದೆ ಅಕಾಲದಲ್ಲಿ" ಎಂದು ಗೆಳತಿಯನ್ನು ದೂಡುತ್ತ ಹೊರಬಂದುಬಿಟ್ಟೆ.
ಅಂದ ಹಾಗೆ ಈಗ ಪ್ರೇಮರೋಗದ ಮೇಲೆ ಚಿಕಿಚ್ಛೆ ಮಾಡುವ ಮಹಾವೈದ್ಯನೊಬ್ಬ ನಮ್ಮ ಮನೆಹತ್ತಿರದಲ್ಲೇ ಬಂದಿದ್ದಾನೆ. ಅವನ ಸ್ಪೆಶಾಲಿಟಿ ಅಂದರೆ ಅವನು ಮೊದಲು ಪ್ರೇಮರೋಗವನ್ನು ಬರಿಸುತ್ತಾನೆ. ನಂತರ ಎಂಥ ಮದ್ದು ಕೊಡುತ್ತಾನೋ ಸರಿಯಾಗಿ ಗೊತ್ತಿಲ್ಲ, ನನಗೆ ಬೇಕೂ ಇಲ್ಲ ಬಿಡಿ, ಮೊದಲ ಮದ್ದು ಸಾಕು ನನಗೆ ಎಂದು ಇವತ್ತೇ ಹೋಗಿ ಅವನಲ್ಲಿ ನಂಬರ ಹಚ್ಚಿ ಬಂದಿದ್ದೇನೆ. ತುಂಬಾ ರಷ್ ಅಲ್ಲಿ ಗೊತ್ತೇ?
ಆದರೂ ನೀವೂ ಯಾವುದಾದರೂ ನಿಮ್ಮ ಗುರುತಿನ ಒಳ್ಳೆಯ ಹುಡುಗನಿದ್ದರೆ ತಿಳಿಸುತ್ತೀರಾ? ನಿಮ್ಮ ಉಪಕಾರವನ್ನು ಈ ಪ್ರೇಮಯುಗದಲ್ಲಿ ಎಂದೂ ಮರೆಯುವುದಿಲ್ಲ. ನನ್ನ ಬೇಡಿಕೆಗಳು ನೆನಪಿವೆ ತಾನೇ? ಹಾಗೆಯೇ ಇದ್ದರೆ ತುಂಬಾ ಒಳ್ಳೆಯದು. ನಾನು ಪೂರ್ಣವಾಗಿ ಪ್ರೀತಿ ಮಾಡಲು ತುಂಬಾ ಸಹಾಯಕವಾಗುತ್ತದೆ. ನಿಮಗೊಂದು ಪ್ರೀತಿಯ ಕಾಣಿಕೆಯೂ ಸಿಗುತ್ತದೆ, ನೆನಪಿಡಿ "ಪ್ರೀತಿ ಮಾಡಲು ನನಗೊಂದು ಹುಡುಗ ಬೇಕು (ವಿವರಗಳಿಗಾಗಿ ಒಳಗಿನ ಜಾಹಿರಾತು ನೋಡಿ).
ನೀತಾ ರಾವ್
(ಸ್ನೇಹಿತರೇ, ಸುಮಾರು ಇಪ್ಪತೈದು ವರ್ಷಗಳ ಹಿಂದೆ ಈ ನನ್ನ ಬರಹ ತುಷಾರದಲ್ಲಿ ಪ್ರಕಟಗೊಂಡಿತ್ತು. ಮೊದಲಸಲ ರಾಜ್ಯಮಟ್ಟದ ಮಾಸಿಕಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ನನಗೆ ತುಂಬಾ ಖುಶಿಯೂ ಆಗಿತ್ತು. ಮತ್ತೆ ಈ ಲೇಖನಕ್ಕೆ ಉತ್ತರ-ರೂಪದಲ್ಲಿ ಶ್ರೀ ಚಂದ್ರಶೇಖರ ವಸ್ತ್ರದ ಸರು ’ಉತ್ತರಕಾಂಡ’ ಎನ್ನುವ ಇನ್ನೊಂದು ಹಾಸ್ಯಲೇಖನವನ್ನೇ ಬರೆದು ಅದು ಮರುತಿಂಗಳು ತುಷಾರದಲ್ಲೇ ಪ್ರಕಟಗೊಂಡಿದ್ದು ಈ ’ಪ್ರೇಮಾಯಣ’ದ ಹೆಗ್ಗಳಿಕೆ.)

No comments:
Post a Comment