Thursday, 27 June 2024

 

ವಿವೇಕಾನಂದರ ಪಾದಧೂಳಿಯಿಂದ ಪವಿತ್ರವಾದ ನೆಲ





  •     ಸ್ವಾಮಿ ವಿವೇಕಾಂದರು 1893ರಲ್ಲಿ ಅಮೇರಿಕಾದ ಚಿಕ್ಯಾಗೋದಲ್ಲಿ ತಮ್ಮ ವಿಶ್ವವಿಖ್ಯಾತ ಭಾಷಣವನ್ನು ಮಾಡುವುದಕ್ಕೆ ಮೊದಲು ಅಂದರೆ 1892ರಲ್ಲಿ ಕೊಲ್ಹಾಪುರದ ಮಹಾರಾಜರ ಮಂತ್ರಿಗಳಿಂದ  ಪತ್ರವೊಂದನ್ನು ತೆಗೆದುಕೊಂಡು ಬಂದು ಬೆಳಿಗ್ಗೆ ಆರೂವರೆಯ ಸುಮಾರಿಗೆ ಬೆಳಗಾವಿಯ ರಿಸಾಲ್ದಾರ ಗಲ್ಲಿಯಲ್ಲಿರುವ ಶ್ರೀ. ಸದಾಶಿವ ಭಾತೆ ಅವರ ಮನೆಯ ಬಾಗಿಲು ಬಡಿದಾಗ ಅವರ ಮೇರು ವ್ಯಕ್ತಿತ್ವದ, ಅದರ ಔನ್ನತ್ಯದ ಸಣ್ಣ ಸುಳಿವೂ ಭಾತೆಯವರಿಗೆ ಇರಲಿಲ್ಲ. ಪರಿಚಯ ಪತ್ರವನ್ನು ನೋಡಿ ತಮ್ಮ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ಭಾತೆಯವರಿಗೆ  ಸ್ವಾಮಿಜಿಯವರ ಮಾತುಗಳಿಂದ ಈತ ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಮನವರಿಕೆಯಗುತ್ತಲೇ ಅವರು ಬೆಳಗಾವಿಯ ವಿದ್ವತ್ತಪೂರ್ಣ ಸಮೂಹದ ಒಂದಿಷ್ಟು ಜನರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸ್ವಾಮಿಜಿಯವರೊಡನೆ ಜಾಣರ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮ, ಧರ್ಮ, ಆಧ್ಯಾತ್ಮ, ಭಾರತದ ಬಗೆಗಿನ ನಿರಂತರ ಚರ್ಚೆಗಳಿಂದ ವಿವೇಕಾನಂದರು ಎಂಥ ಶ್ರೇಷ್ಠ ವ್ಯಕ್ತಿ ಎನ್ನುವುದು ಅವರಿಗೆ ಮನವರಿಕೆಯಾಯಿತು. ಭಾತೆಯವರು ತಮ್ಮ ಇನ್ನೊಬ್ಬ ಸ್ನೇಹಿತ ಬಂಗಾಲಿ ಗೃಹಸ್ತರಾದ ಶ್ರೀ. ಹರಿಪಾದ ಮಿತ್ರ ಅವರನ್ನೂ ತಮ್ಮ ಮನೆಗೆ ಕರೆತಂದು ತಮ್ಮ ಮನೆಯಲ್ಲಿ ಉಳಿದುಕೊಂಡಿರುವ ಈ ಅಸಾಧಾರಣ ಬುದ್ಧಿಮತ್ತೆಯ ಸ್ವಾಮಿಜಿಯನ್ನು ಪರಿಚಯಿಸಿದರು. ತಕ್ಷಣವೇ ಕಾರ್ಯಪ್ರವೃತ್ತವಾದ ಮಿತ್ರರವರ ತಲೆಯಲ್ಲಿ ಹೇಗಾದರೂ ಮಾಡಿ ಈ ಸ್ವಾಮಿಜಿಯನ್ನು ಬೆಳಗಾವಿಯ ಕೋಟೆಯ ಆವರಣದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಲೇಬೇಕು ಎನ್ನುವ ಯೋಚನೆ ತೀವ್ರವಾಯಿತು.



    ಅವರು ಭಾತೆಯವರ ಮನವೊಲಿಸಿ, ಬೇಗನೇ ಸ್ವಾಮಿಜಿಯವರನ್ನು ತಂದುಬಿಡುವುದಾಗಿ ಆಶ್ವಾಸನೆ ನೀಡಿ ಸ್ವಾಮಿ ವಿವೇಕಾನಂದರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು.
   

    ಆಗಿನ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸಹಜವಾಗಿ ಇಂಗ್ಲೀಷ್ ಶಿಕ್ಷಣವನ್ನು ಪಡೆದ ಮಿತ್ರ ಅವರಿಗೆ ಇಂಥ ಸಾಧು-ಸನ್ಯಾಸಿಗಳೆಂದರೆ ಅಷ್ಟೇನೂ ಸಹಾನುಭೂತಿಯಿರಲಿಲ್ಲ. ಬದಲಾಗಿ ಅಂಥವರೆಲ್ಲ ಸೋಮಾರಿಗಳು, ಅಜ್ಞಾನಿಗಳು ಎನ್ನುವ ಅಭಿಪ್ರಾಯವಿತ್ತು. ಜೊತೆಗೆ ಹಿಂದು ಧರ್ಮದ ಬಗೆಗಿನ ತಪ್ಪು ಕಲ್ಪನೆಗಳಿಂದಾಗಿ ಅಸಡ್ಡೆಯೇ ಇತ್ತು. ಆದರೂ ಸ್ವಾಮಿಜಿ ಕೂಡ ಬಂಗಾಳಿ ಎನ್ನುವ ಬಾಂಧವ್ಯದಿಂದ ತಮ್ಮ ಮನೆಯ ಆತಿಥ್ಯವನ್ನು ನೀಡಲು ಮುಂದಾದರು. ಹಾಗೆ ನೋಡಿದರೆ ಭಾತೆಯವರು ಸ್ವಾಮಿಜಿಯವರನ್ನು ಬಿಟ್ಟುಕೊಡಲು ಬಿಲಕುಲ್ ತಯಾರಿರಲಿಲ್ಲ. ಹರಿಪಾದ ಮಿತ್ರರು ಭಾತೆಯವರ ಮನವೊಲಿಸಬೇಕಾಯ್ತು. ತಮ್ಮ ಮನೆಗೆ ಬಂದ ನಂತರ ಸ್ವಾಮಿಜಿಯವರೊಡನೆ ಮಾತು-ಕತೆ, ಸಂವಾದ, ಚರ್ಚೆಗಳನ್ನು ಮಾಡಿ ಮಿತ್ರರವರ ಅನೇಕ ತಪ್ಪುಕಲ್ಪನೆಗಳು, ದುರಭಿಪ್ರಾಯಗಳು ಮಾಯವಾದವು. ಅಷ್ಟೇ ಅಲ್ಲ ಎಷ್ಟೋ ವರ್ಷಗಳಿಂದ ಅವರು ಮತ್ತು ಅವರ ಪತ್ನಿ ಹುಡುಕುತ್ತಿದ್ದ ದಾರಿ ತೋರುವ ಗುರುವೊಬ್ಬ ಸಿಕ್ಕಂತಾಯಿತು. ಅವರಿಬ್ಬರೂ ಸ್ವಾಮಿಜಿಯವರೊಡನೆ ಚರ್ಚಿಸಿ ಅವರ ಶಿಷ್ಯತ್ವವನ್ನು ಸ್ವೀಕರಿಸಿದರು.  
 

  ಬೆಳಗಾವಿಯಿಂದ ಹೊರಟ ಸ್ವಾಮಿಜಿ ಮದ್ರಾಸಿಗೆ ತಲುಪಿದರು. ಅಮೇರಿಕೆಯ ಚಿಕ್ಯಾಗೋದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ವತಿಯಿಂದ ಭಾಗವಹಿಸಲು ಅಲ್ಲಿಯೇ ಅವರ ಆಯ್ಕೆ ಮಾಡಲಾಯಿತು. ನಂತರ ಅವರು ಲೋಕವಿಖ್ಯಾತರಾದರು. ಅನೇಕ ವರ್ಷಗಳ ಕಾಲ ಅಮೇರಿಕಾ ಮತ್ತು ಯುರೋಪಿನ ದೇಶಗಳಲ್ಲಿ ಸಂಚರಿಸಿ ಹಿಂದು ಧರ್ಮದ ಸಾರವನ್ನು ಜನರಿಗೆ ತಿಳಿಸಿದರು.

    ಎಷ್ಟೋ ವರ್ಷಗಳ ನಂತರ, ಇತ್ತೀಚೆಗೆ ಸ್ವಾಮಿಜಿ ಒಂಬತ್ತು ದಿನಗಳ ಕಾಲ ತಂಗಿದ್ದ ಬೆಳಗಾವಿಯ ಕೋಟೆಯ ಆವರಣದ ಮನೆಯನ್ನು ಒಂದಿಷ್ಟು ನವೀಕರಿಸಿ ರಾಮಕೃಷ್ಣಾಶ್ರಮವನ್ನು ಅಭಿವೃದ್ಧಿಗೊಳಿಸಲಾಗಿದೆ. ವಿಶಾಲವಾದ ಜಾಗದಲ್ಲಿ ಧ್ಯಾನಮಂದಿರ, ಸ್ವಾಮಿಜಿ ಉಳಿದುಕೊಂಡ ಮನೆ, ರಾಮಕೃಷ್ಣಾಶ್ರಮದಿಂದ ಪ್ರಕಾಶನಗೊಂಡ ಪುಸ್ತಕಗಳ ಮಾರಾಟ ಮಳಿಗೆ, ಸಭೆ-ಸಮಾರಂಭಗಳನ್ನು ನಡೆಸಲು ದೊಡ್ಡದಾದ ಬಯಲು ಸಭಾಂಗಣ ಎಲ್ಲವೂ ಇಲ್ಲಿ ಇವೆ. ಸ್ವಾಮಿ ರಾಮಕೃಷ್ಣರ ಜೀವನಕಥೆಯನ್ನು ಹೇಳುವ ಚಿತ್ರಪಟಗಳನ್ನು ಸಾಲಾಗಿ ಜೋಡಿಸಿದ ಓಪನ್ ಹಾಲ್ ಕೂಡ ಇದೆ. ದಿನಾಲೂ ಭಜನೆ, ಆರತಿ ನಡೆಯುತ್ತವೆ. ಶಾಲೆ-ಕಾಲೇಜಿನ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲು ತರಬೇತಿ ಕೇಂದ್ರವಿದೆ.


 ಸ್ವಾಮಿಜಿ ಮೂರು ದಿನಗಳು ಉಳಿದುಕೊಂಡಿದ್ದ ಶ್ರೀ. ಸದಾಶಿವ ಭಾತೆಯವರ ರಿಸಾಲ್ದಾರ ಗಲ್ಲಿಯ ಮನೆಯನ್ನು ಅಗತ್ಯವಿದ್ದಷ್ಟು ನವೀಕರಿಸಿ ಅಲ್ಲಿಯೂ ರಾಮಕೃಷ್ನಾಶ್ರಮದ ಶಾಖೆಯನ್ನು ತೆರೆಯಲಾಗಿದೆ. ಕಲ್ಲಿನ ಹಳೆಯ ಶೈಲಿಯ ಮನೆಯು ಅತ್ಯಂತ ಮಜಬೂತಾಗಿದ್ದು ಆಕರ್ಷಕವಾಗಿದೆ. ಸ್ವಾಮಿಜಿ ಬಳಸುತ್ತಿದ್ದ ಕೇಸರಿ ನಿಲುವಂಗಿ, ಅವರ ಪಾದರಕ್ಷೆಗಳು, ಬೆಳಗಾವಿಯ ಆಗಿನ ಪ್ರಸಿದ್ಧ ಫೋಟೋಗ್ರ್ರಾಫರ್ ಶ್ರೀ. ಗೋವಿಂದ ವೆಲ್ಲಿಂಗ್ ಅವರು ತೆಗೆದ ಸ್ವಾಮಿಜಿಯವರ ಆಳೆತ್ತರದ ಅಪರೂಪದ ಫೋಟೋವನ್ನೂ ಇಡಲಾಗಿದೆ. ಮೇಲಿನ ಮಹಡಿಯಲ್ಲಿ ಸುಂದರವಾದ ಸಂಗ್ರಹಾಲಯವಿದೆ. ಇಲ್ಲಿ ಬಹಳ ಅಪರೂಪದ ಛಾಯಾಚಿತ್ರಗಳು, ಪೇಂಟಿಂಗಗಳನ್ನು ಜೋಡಿಸಲಾಗಿದೆ. ಜೊತೆಗೆ ಸ್ವಾಮಿಜಿ ಈ ಮನೆಯಲ್ಲಿ ತಂಗಿದಾಗ ಮಲಗಲು ಬಳಸಿದ ಮರದ ಮಂಚವನ್ನೂ ಆಳೆತ್ತರದ ಬೆಲ್ಜಿಯಂ ಕನ್ನಡಿಯನ್ನೂ ಇಡಲಾಗಿದೆ.


   ಎರಡೂ ಶಾಖೆಗಳು ಬೆಳಗಾವಿಗರಿಗೆ ಮತ್ತು ಬೆಳಗಾವಿಗೆ ಬರುವ ಜನರಿಗೆ ಒಂದೊಳ್ಳೆ ಅನುಭವ, ಮಾಹಿತಿ ಜೊತೆಗೆ ದಿವ್ಯವಾದ ಅನುಭೂತಿಯನ್ನು ನೀಡುವ ಕೇಂದ್ರಗಳಾಗಿವೆ. ಇಲ್ಲಿ, ಇದೇ ಜಾಗದಲ್ಲಿ ಸ್ವಾಮಿ ವಿವೇಕಾನಂದರು ನಡೆದಾಡಿದ್ದರು ಎಂದು ನೆನೆಸಿಕೊಳ್ಳುತ್ತಿದ್ದಂತೇ ಮೈ ರೋಮಾಂಚನಗೊಳ್ಳುತ್ತದೆ. ಸ್ವಾಮಿಜಿಯ ಪಾದಧೂಳಿಯಿಂದ ಬೆಳಗಾವಿಯ ನೆಲ ಪವಿತ್ರವಾಯಿತು ಎನ್ನುವ ಸಂತಸ ಮನಸ್ಸನ್ನು ತುಂಬಿ ಧ್ವನಿ ಗದ್ಗದಿತವಾಗುತ್ತದೆ.


   ತಪ್ಪದೇ ಎಲ್ಲರೂ ವೀಕ್ಷಿಸಬೇಕಾದ ಸ್ಥಳಗಳಿವು.   


 

DzsÁgÀ:- 1) Reminiscences of Swami Vivekananda- His Eastern and Western Admirers, published by Swami Muktidananda

               2) ಆಶ್ರಮಗಳ ಭೇಟಿ ಮತ್ತು ರಿಸಾಲ್ದಾರ ಗಲ್ಲಿಯ ಆಶ್ರಮದ ಸ್ವಾಮಿಜಿಯವರೊಡನೆ ಚರ್ಚೆ

 


 

Thursday, 14 January 2021

ಸಂಕ್ರಾಂತಿಯ ಸಂಭ್ರಮ

 ಸಂಕ್ರಾಂತಿಯ ಸಂಭ್ರಮ


ಸಂಕ್ರಾತಿ ಬಂತೆಂದರೆ ಬಾಲ್ಯದ ಅನೇಕ ನೆನಪುಗಳು ಬಂದು ಈ ಛಳಿಯಲ್ಲಿ ಸುಖದ ಅನುಭವ ನೀಡುತ್ತವೆ. ಆ ದಿನಗಳ ಸಂಕ್ರಾತಿ ಹಬ್ಬದ ‌ಸಂಭ್ರಮದ ಮುಂದೆ ಈಗಿನ ಆಚರಣೆ ಸಪ್ಪಗೆನಿಸುತ್ತದೆ.

ನಾನು ಪ್ರಾಥಮಿಕ ಶಾಲೆಗೆ ಹೊರಟ ಕೂಡಲೇ ನನಗೆ ನಮ್ಮದೇ ಓಣಿಯಲ್ಲಿ ವಾಸಿಸುತ್ತಿದ್ದ ಮೂರ್ನಾಲ್ಕು ಹುಡುಗಿಯರು ಗೆಳತಿಯರಾದರು. ಗೆಳೆತನವೆಂದರೆ ಎಂಥದ್ದು ರಾತ್ರಿ ಮಲಗುವ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ನಾನು ಅವರ ಮನೆಯಲ್ಲೋ, ಅವರು ನಮ್ಮ ಮನೆಯಲ್ಲೋ ಸದಾ ಒಂದಿಲ್ಲೊಂದು ಆಟ, ಅಭ್ಯಾಸ, ಹಾಡು, ಡಾನ್ಸು ಎಂದು ನೂರೆಂಟು ಕಿತಾಪತಿ ಮಾಡುತ್ತಲೇ ಇರುವುದು. ನಾವು ಆರು ಅಥವಾ ಏಳನೇ ತರಗತಿಯಲ್ಲಿದ್ದಾಗ ಮನೆಯಲ್ಲಿಯೇ ಕುಸಿರೆಳ್ಳು ಮಾಡುವ ನಮ್ಮ ಮೊದಲ ಕಸರತ್ತು ಶುರುವಾಯ್ತು. ಜೈನರಾದ ನನ್ನ ಗೆಳತಿಯರೆಲ್ಲರ ಮನೆಯಲ್ಲಿ ಮಕ್ಕಳಿಗೆ ಬಹುಬೇಗ ಮನೆಕೆಲಸಗಳನ್ನೆಲ್ಲ ಕಲಿಸಿಕೊಟ್ಟುಬಿಡುತ್ತಿದ್ದರು. ಅವರ ಜೊತೆಗೆ ನಾನೂ ಒಂದಿಷ್ಟು ಕೆಲಸಗಳನ್ನು ಕಲಿತಿದ್ದೆ. ಅದೇ ರೀತಿ ಅವರ ಮನೆಯಲ್ಲಿ ಸಂಕ್ರಾಂತಿಗೆ ಮನೆಯಲ್ಲೇ ಎಳ್ಳು ಮಾಡುತ್ತಿದ್ದರು ಮತ್ತು ಮಕ್ಕಳಿಗೂ ಹೇಗೆ ಮಾಡುವುದೆಂದು ಕಲಿಸಿಕೊಡುತ್ತಿದ್ದರು. ನಮ್ಮದೇನಿದ್ದರೂ ಸಾಂಘಿಕ ಚಟುವಟಿಕೆಯೇ ಆದ್ದರಿಂದ ಆ ಸಲ ನಮ್ಮ ಕುಸಿರೆಳ್ಳಿನ‌ ಕಾರ್ಯಕ್ರಮವೂ ಒಟ್ಟೊಟ್ಟಿಗೇ ಶುರುವಾಯ್ತು. ಮಕ್ಕಳು ಮಾಡುವುದೆಂದರೆ ದೊಡ್ಡವರೂ ನೂರಾಎಂಟು ಸಹಾಯ ಮಾಡಬೇಕಾಗುತ್ತದಲ್ಲ! ಹಾಗೆ ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ಎಳ್ಳು ಮಾಡಲು ನಿರ್ಧರಿಸಿದ ಮೇಲೆ ಅದಕ್ಕೆ ಬೇಕಾದ ವಸ್ತುಗಳನ್ನೆಲ್ಲ ಹೊಂದಿಸಿಕೊಂಡೆವು. ಅಂದರೆ ಇದ್ದಿಲೊಲೆ, ಅದಕ್ಕೆ ಹಾಕಲು ಇದ್ದಿಲು, ದಪ್ಪ ಚಚ್ಚೌಕದ ಸಕ್ಕರೆ, ಬಿಳಿ ಎಳ್ಳು, ಪಾಕ ಮಾಡೊಕೊಳ್ಳಲು ಸಕ್ಕರೆ, ಎಲ್ಲರ ಮನೆಯಿಂದಲೂ ರೊಟ್ಟಿ ಬಡಿಯುವ ಪರಾತು, ಎಲ್ಲ ಹೊಂದಿಸಿಕೊಂಡು ನಮ್ಮ ಚಟುವಟಿಕೆ ಶುರು ಹಚ್ಚಿಕೊಂಡೆವು. ಅಂದರೆ ಮೊದಲು ಪಾಕ ಮಾಡಿಕೊಳ್ಳುವುದು, ನಂತರ ಇದ್ದಿಲೊಲೆಗಳನ್ನು ಹೊತ್ತಿಸಿಕೊಂಡು, ಒಂದಿಷ್ಟು ದಪ್ಪ ಸಕ್ಕರೆಯ ಹರಳುಗಳನ್ನು ಪರಾತದಲ್ಲಿ ಹಾಕಿಕೊಂಡು ಒಲೆಯ ಮೇಲಿಟ್ಟು, ಒಂದೊಂದೇ ಚಮಚ ಸಕ್ಕರೆ ಪಾಕನ್ನು ಅದಕ್ಕೆ ಹಾಕುತ್ತ ಬೆರಳುಗಳಿಂದ ಆಕಡೆ ಈಕಡೆ ಹೊರಳಾಡಿಸುತ್ತ ಕೂಡುವುದು, ಮಧ್ಯೆ ಮಧ್ಯೆ ಶಾಖ ಹೆಚ್ಚಾಗಿ ಕೈಗೆ ಬಿಸಿ ಮುಟ್ಟಲಾರಂಭಿಸಿತೆಂದರೆ ಪರಾತವನ್ನು ಕೆಳಗಿಳಿಸಿಕೊಂಡು ಕೈಯಾಡಿಸುವುದು. ಹೀಗೆ ಒಂದು ತಾಸು ಮಾಡುವುದಕ್ಕೂ ಮೃದುವಾದ ಬೆರಳುಗಳಿಗೆಲ್ಲ ಸಕ್ಕರೆ ಪಾಕ ಹತ್ತಿಕೊಂಡು ಒಣಗಿ ಬೆಳ್ಳಗೆ ಕಾಣುತ್ತಿತ್ತು ಮತ್ತು ಬೆರಳುಗಳೂ ಆಡಿಸಿ ಆಡಿಸಿ ನೋವಾಗುತ್ತಿದ್ದವು. ಕೈ ನೋಯಲಾರಂಭಿಸುತ್ತಿತ್ತು. ಆಗ ಅವನ್ನೆಲ್ಲ ನಮ್ಮ ನಮ್ಮ ಡಬ್ಬಿಗಳಲ್ಲಿ ತುಂಬಿಟ್ಟುಬಿಡುತ್ತಿದ್ದೆವು. ಮತ್ತೆ ಮರುದಿನ ತಾಸುಗಟ್ಟಲೇ ಇದೇ ಕೆಲಸ. ಹೀಗೆ ನಾಲ್ಕೈದು ದಿನ‌ಮಾಡಿದ ಮೇಲೆ ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು‌ ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ ಬೇರೆಯವರಿಗೆ ಅವುಗಳನ್ನು ಕೊಡಬೇಕಾದರೂ ಒಂದಿಷ್ಟು ಜಿಕ್ಕೂತನ ಮಾಡುತ್ತಿದ್ದುದು ಸುಳ್ಳಲ್ಲ. 

ನಮ್ಮ ಪರಾಕ್ರಮವನ್ನೂ, ನಾವು ಪಟ್ಟ ಕಷ್ಟವನ್ನೂ ಸಾರುವ ಈ ಕುಸುರು ಕುಸುರಿನ ಎಳ್ಳುಗಳನ್ನು ಕೊಟ್ಟು ಬೆಲ್ಲಧಂಗಿರಲು ಹೇಳಲು ನಾವೇನೂ ಸಮೀಪದ ಮನೆಗಳಿಗಷ್ಟೇ ಹೋಗಿ ತೃಪ್ತರಾಗುತ್ತಿರಲಿಲ್ಲ. ಸಾಕಷ್ಟು ದೂರವೇ ಇದ್ದ ನಮ್ಮ ಕ್ಲಾಸ್ ಟೀಚರ್ ಮನೆಗೆ ಕಾಲ್ನಡಿಗೆಯ ದಂಡಯಾತ್ರೆ ಕೈಗೊಂಡು ಅವರಿಗೆ ಎಳ್ಳು ಕೊಟ್ಟು ನಮಸ್ಕಾರ ಮಾಡಿದರೇನೇ ನಮ್ಮ ಜೀವಕ್ಕೆ ಸಮಾಧಾನ. 

ಈ ಓಡಾಟದ ಜೊತೆಜೊತೆಗೇ ನಾವು ನಮ್ಮ ಓಣಿಯಲ್ಲಿಯೇ ಇದ್ದ ಇನ್ನೊಂದು ಮನೆಗೆ ವಿಶೇಷವಾಗಿ ಹೋಗುತ್ತಿದ್ದೆವು. ಮೂಲತಃ ಉತ್ತರ ಭಾರತದ, ತಮ್ಮ ಉಡುಗೆ ತೊಡುಗೆಯಿಂದ ನೆಹರೂ ಅವರನ್ನು ನೆನಪಿಸುತ್ತಿದ್ದ ಮತ್ತು ನಮ್ಮ ಕನ್ನಡ ಶಾಲೆಯ ಬೆಟರ್ ಮೆಂಟ್ ಕಮೀಟಿಯ ಚೇರಮನ್ನರಾಗಿದ್ದ ಗೋರ್ಡಿಯಾ ಅವರು ನಗುಮುಖದ ಹಿರಿಯ ಜೀವ. ಮಕ್ಕಳನ್ನು ಯಾವಾಗಲೂ ನಗುಮುಖದಿಂದಲೇ ಮಾತನಾಡಿಸುತ್ತಿದ್ದ ಅವರ ಮನೆ ನಮ್ಮ ಮನೆಯಿದ್ದ ಅನಂತಶಯನ ಗಲ್ಲಿಯಲ್ಲೇ (ಬೆಳಗಾವಿಯಲ್ಲಿ) ಇತ್ತು. ಉದ್ದದ ಅಂಗಳವನ್ನು ಒಂಥರಾ ಅಳಕುತ್ತ ನಿಧಾನ ಹೆಜ್ಜೆಗಳನ್ನಿಡುತ್ತ ದಾಟಿ ಅವರ ಮನೆಯ ಜಗಲಿಗೆ ಕಾಲಿಡುತ್ತಿದ್ದೆವು. ಆ ಕಾಲಕ್ಕೆ ನಮ್ಮ ಮನಸ್ಸಿನ ತುಂಬ ಅಚ್ಚರಿಯ, ಮೆಚ್ಚುಗೆಯ ಭಾವಗಳನ್ನು ಸ್ಫುರಿಸುತ್ತಿದ್ದ ಅವರ ಮನೆಯ ಸುಂದರವಾದ ಸೋಫಾ ಸೆಟ್ಟು, ಮಧ್ಯದಲ್ಲೊಂದು ಟಿಪಾಯ್ ಎಲ್ಲವನ್ನೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವಾಗಲೇ ಅವರು ಪ್ರೀತಿಯಿಂದ ಮಕ್ಕಳನ್ನೆಲ್ಲ ಹತ್ತಿರ ಕರೆದು ಎಳ್ಳು ಇಸಿದುಕೊಳ್ಳುತ್ತಿದ್ದರು. ಪ್ರತಿಯಾಗಿ ದೊಡ್ಡ ಬೆಳ್ಳಿಯ ಬಟ್ಟಲಿನಲ್ಲಿ ತಾವು ಇಟ್ಟುಕೊಂಡಿರುತ್ತಿದ್ದ ಗೋಡಂಬಿ, ಬದಾಮು, ಒಣದ್ರಾಕ್ಷಿ ಮುಂತಾದ ಡ್ರೈಫ್ರೂಟ್ಸಗಳನ್ನು ನಮ್ಮ ಪುಟ್ಟ ಕೈಗಳಲ್ಲಿಡುತ್ತಿದ್ದರು. ಆ ಕಾಲದಲ್ಲಿ ನಮ್ಮ ಮಟ್ಟಿಗೆ ಅತ್ಯಂತ ದುಬಾರಿಯಾಗಿದ್ದ ಈ ಗೋಡಂಬಿ, ಬದಾಮುಗಳಿಗಾಗಿಯೇ ನಾವು ಅವರ ಮನೆಗೆ ತಪ್ಪದೇ ಸಂಕ್ರಾಂತಿಗೆ ಭೇಟಿ ಕೊಡುತ್ತಿದ್ದೆವು. ಮಕ್ಕಳ ಮೇಲೆ ಎಷ್ಟು ವಿಧವಿಧ ರೀತಿಯಲ್ಲಿ ಪ್ರೀತಿಯನ್ನು ಪ್ರಕಟಿಸಬಹುದು ಎಂಬುದನ್ನು ಇಂಥವರಿಂದ ಕಲಿತುಕೊಳ್ಳಬೇಕು ಎಂದು ಇದನ್ನು ಬರೆಯುವ ಸಮಯದಲ್ಲಿ ಅನಿಸುತ್ತಿದೆ. 

ಗೊತ್ತಿದ್ದವರು, ಇಲ್ಲದವರು, ಎಲ್ಲರ ಮನೆಗಳಿಗೂ ಹೋಗಿ, ಪುಟ್ಟ ಮೈಗೆ ಭಾರವಾಗುತ್ತಿದ್ದ ದೊಡ್ಡ ಸೀರೆಗಳನ್ನುಟ್ಟು ಅವುಗಳನ್ನು ನಿಭಾಯಿಸುತ್ತಲೇ ಎಲ್ಲರಿಗೂ "ಎಳ್ಳ ತೊಗೊಂಡು ನಾವೂ ನೀವೂ ಎಳ್ಳೂಬೆಲ್ಲಧಂಗ ಇರೋಣು" ಎಂದು ಹೇಳಿ ಎಳ್ಳು ಕೊಟ್ಟು ಮತ್ತೆ ಗಬಕ್ಕನೇ ಅವರ ಕಡೆಯಿಂದಲೂ ಎಳ್ಳು ಮರಳಿ ಪಡೆದುಕೊಂಡು, ಅದರಲ್ಲೇನಾದರೂ ಶೇಂಗಾಕ್ಕೆ ಹಚ್ಚಿದ ದೊಡ್ಡ ಎಳ್ಳು ಬಂದಿದ್ದರೆ ಅಲ್ಲೇ ಗಬಕ್ಕನೇ ಬಾಯಿಗೆಸೆದುಕೊಂಡೇ ಇನ್ನೊಂದು ಮನೆಯ ಹೊಸಿಲು ತುಳಿಯುತ್ತಿದ್ದ ಪಕ್ಕಾ ಹೆಣ್ಮಕ್ಕಳು ನಾವು. ಇಡೀ ಮನೆ ಎಳ್ಳು ಚೆಲ್ಲಾಡಿ ಹೋಗುವಷ್ಟು ಮಕ್ಕಳು ಎಲ್ಲರ ಮನೆಗೂ ಎಳ್ಳು ಕೊಡುತ್ತಿದ್ದ ಕಾಲವದು. ಇಂದು ಎಣಿಸಿದರೆ ಐದು ಜನರಿಗೂ ಕೊಡಲಾಗಿರುವುದಿಲ್ಲ. ಒಂದೇ ಕಡೆ ಬಂಧುಬಾಂಧವರೆಲ್ಲ ಸೇರಿ ಸಂಕ್ರಾಂತಿ ಆಚರಣೆ ಮಾಡುವುದರಿಂದ ಒಂದಿಷ್ಟು ಜನ ಅನಾಯಾಸವಾಗಿ ಸಿಗುತ್ತಾರೆನ್ನುವ ಕಾರಣಕ್ಕೆ ಹತ್ತಾರು ಜನರಿಗೆ ಎಳ್ಳು ವಿನಿಮಯ ಮಾಡಲು ಸಾಧ್ಯವಾಗುತ್ತಿದೆ ನನಗೀಗ. ಅದೂ ಕೂಡ ಒಮ್ಮೊಮ್ಮೆ ಬೇಸರವಾದಾಗ ಮೊದಲೆಲ್ಲ ಅಷ್ಟೊಂದು ಮೆರೆದವರು, ಈಗ ಇಷ್ಟೂ ಬೇಡವಾಗುವುದೇ ಎಂದೆನಿಸಿ ಸೋಜಿಗವಾಗುತ್ತದೆ. ಕಾಲಾಯ ತಸ್ಮೈನ್ನಮಃ! ವಯಸ್ಸೂ ಆಯ್ತಲ್ಲ!?


ನೀತಾ. ರಾವ್.

Wednesday, 15 May 2019

          ಯುರೋಪ್: ನನಗೆ ದಕ್ಕಿದಷ್ಟು


           ಲಂಡನ್ ನಲ್ಲಿ ಬಸವ

           ಲಂಡನ್ ನಲ್ಲಿದ್ದ ಮೂರೆನೇ ದಿನ -ಅದೇ ಅಲ್ಲಿ ನಮ್ಮ ಕಡೆಯ ದಿನವೂ ಆಗಿತ್ತು- ಬೆಳಿಗ್ಗೆ ನಾವು ಸೀದಾ ಬಸವೇಶ್ವರ ಸ್ಟ್ಯಾಚ್ಯು ನೋಡಲು ಹೋದೆವು. ಲಂಡನ್ನಿನ ಒಂದು ಪ್ರಶಾಂತವಾದ ರೋಡಿನ ಪಕ್ಕದಲ್ಲಿ ಎದೆಮಟ್ಟದ ಬಸವೇಶ್ವರ ಮೂರ್ತಿಯನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಕೆಲ ದಿನಗಳ ಹಿಂದಷ್ಟೇ ಅನಾವರಣಗೊಳಿಸಿದ್ದರು. ನಮ್ಮಂತೇ ಅನೇಕ ಕನ್ನಡಿಗರು ಮತ್ತು ಭಾರತೀಯರು ಬಸವ ಮೂರ್ತಿಯನ್ನು ನೋಡಲು ಬಂದಿದ್ದರು. ಹನ್ನೆರಡನೇ ಶತಮಾನದಲ್ಲಿಯೇ ಜಾತಿ-ವರ್ಗಗಳ ಅಸಮಾನತೆಯನ್ನು ಹೋಗಲಾಡಿಸಲು ಆಧ್ಯಾತ್ಮಿಕ ಚಳುವಳಿಯನ್ನೇ ಕೈಕೊಂಡ ಬಸವಣ್ಣ ಇಂದಿನ ಇಪ್ಪತೊಂದನೇ ಶತಮಾನಕ್ಕೂ ಪ್ರಸ್ತುತರಾಗಿದ್ದು, ವಿದೇಶೀ ನೆಲದಲ್ಲಿ ಕೂಡ ನಮ್ಮ ನಾಡಿನ  ಈ ಮಹಾನುಭಾವ ರಾರಾಜಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಎಲ್ಲರೂ ಬಸವ ಮೂರ್ತಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ನಂತರ ನಮ್ಮ ಪಯಣ  ಟ್ರಫಲ್ಗಾರ್‍ ಸ್ಕ್ವೇರನತ್ತ ಹೊರಟಿತು. 
                 ಲಂಡನ್ನಿನ ಪ್ರಮುಖ ಆಕರ್ಷಣೆ ಟ್ರಫಲ್ಗಾರ್‍ ಸ್ಕ್ವೇರನ್ನು ಅಲ್ಲಿಗೆ ಹೋದವರು ನೋಡಲೇಬೇಕು. ಲಂಡನ್ನಿನ ಮಧ್ಯ ಭಾಗದಲ್ಲಿರುವ ಈ ಸುಂದರವಾದ, ವಿಶಾಲವಾದ ಸಾರ್ವಜನಿಕ ಜಾಗದಲ್ಲಿ ಒಂದು ಎತ್ತರವಾದ ಸ್ತಂಭವಿದೆ, ಮತ್ತು ಸ್ತಂಭದ ಮೇಲೆ ಅಡ್ಮಿರಲ್ ನೆಲ್ಸನ್ ನ ಪ್ರತಿಮೆಯಿದೆ. ೧೮೦೫ರಲ್ಲಿ ನಡೆದ ಫ್ರಾನ್ಸ್ ಮತ್ತು ಸ್ಪೇನ್ ವಿರುದ್ಧದ ಟ್ರಫಲ್ಗಾರ್‍ ಯುದ್ಧದಲ್ಲಿ ಇಂಗ್ಲಂಡ್ ಈ ಅಡ್ಮಿರಲ್ ನೆಲ್ಸನನ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಸ್ಮರಣಾರ್ಥವಾಗಿ ಈ ಇಡೀ ಸ್ಕ್ವೇರನ್ನು ನಿರ್ಮಿಸಲಾಗಿದೆ. ೫೧.೬ ಮಿಟರ್‍ ಎತ್ತರವಿರುವ ನೆಲ್ಸನ್ ಪಿಲ್ಲರನ ಬೇಸನಲ್ಲಿ ನಾಲ್ಕೂ ದಿಕ್ಕಿಗೆ ನಾಲ್ಕು ದೊಡ್ಡ ಲೋಹದ ಸಿಂಹಗಳಿವೆ. ಮತ್ತು ಸ್ತಂಭದ ಅಕ್ಕಪಕ್ಕ ಎರಡು ಸುಂದರವಾದ ಕಾರಂಜಿಗಳ ಕೊಳಗಳಿವೆ. ಇವುಗಳಲ್ಲಿ ಮತ್ಸ್ಯಕನ್ನಿಕೆಯರು ಮತ್ತು ಮತ್ಸ್ಯಪುರುಷರು ಕೈಯಲ್ಲಿ ಹಿಡಿದ ಮೀನುಗಳಿಂದ ನೀರು ಸೂಸುತ್ತಿರುತ್ತದೆ. ಕೊಳಗಳಲ್ಲಿ ಬಾತುಕೋಳಿಗಳು ಈಜುತ್ತಿರುತ್ತವೆ. ತುಂಬ ವಿಸ್ತಾರವಾದ ಈ ಜಾಗದಲ್ಲಿ ನೀವು ಕಾಲ್ನಡಿಗೆಯಿಂದ ಮಾತ್ರ ಓಡಾಡಬಹುದು. ಒಳಗಡೆ ವಾಹನಗಳಿಗೆ ಪ್ರವೇಶವಿಲ್ಲ. ಆದರೆ ಸೈಕಲ್ ತೆಗೆದುಕೊಂಡು ಹೋಗಬಹುದು. ಸ್ಕ್ವೇರ್‍ ನ ಒಂದು ದಿಕ್ಕಿಗೆ ಪ್ರಸಿದ್ಧವಾದ ನ್ಯಾಷನಲ್ ಮ್ಯೂಸಿಯಂ ಇದೆ. ಉಳಿದ ಮೂರು ದಿಕ್ಕುಗಳಲ್ಲೂ ಐತಿಹಾಸಿಕ ಕಟ್ಟಡಗಳಿವೆ. ಪ್ರವಾಸಿಗಳೆಲ್ಲ ಕಾಯಂ ಓಡಾಡುತ್ತಿರುವ ಈ ಸ್ಥಳದಲ್ಲಿ ಯುವ ಕಲಾವಿದನೊಬ್ಬ ತಂತಿವಾದ್ಯದೊಂದಿಗೆ ಹಾಡು ಹೇಳುತ್ತಿದ್ದ. ಇನ್ನೊಂದು ಕಡೆ ಚಿತ್ರಕಾರರು ಯಾವುದೇ ಗಡಿಬಿಡಿಯಿಲ್ಲದೇ ತನ್ಮಯರಾಗಿ  ಚಿತ್ರಗಳನ್ನು ಬಿಡಿಸುತ್ತ ಕುಳಿತಿದ್ದರು. ಕೆಲವರು ಅವರು ಹಾಗೆ ಬಿಡಿಸುವುದನ್ನು ನೋಡುತ್ತ ಆರಾಮವಾಗಿ ಕುಳಿತಿದ್ದರು. ಒಬ್ಬ ಕಲಾವಿದ "I am homeless, please help" ಎಂದು ಬರೆದುಕೊಂಡಿದ್ದ. ಕೆಲವರು ನಾನಾ ವೇಷಗಳನ್ನು ಧರಿಸಿನಿಂತು ಪ್ರವಾಸಿಗಳನ್ನು ಆಕರ್ಷಿಸಿಸುತ್ತಿದ್ದರು. ಓ ಇಲ್ಲಿಯೂ "ಉದರನಿಮಿತ್ತಂ ಬಹುಕೃತ ವೇಷಂ" ಇದೆ ಎಂದುಕೊಂಡೆ ನಾನು. ನಿಜ ಹೇಳಬೇಕೆಂದರೆ ಈ ಸ್ಕ್ವೇರ್‍ ಒಂದು ಲಂಡನ್ನಿನ "Most happening place". ಇಲ್ಲಿ ನಾಗರಿಕರು ಯಾವುದೇ ಸಾಮಾಜಿಕ, ರಾಜಕೀಯ, ಅಥವಾ ಸಾಮಾನ್ಯಜನರಿಗೆ ಮುಖ್ಯವೆನಿಸುವಂಥ ಯಾವುದೇ ವಿಷಯಕ್ಕಾಗಿ ಧರಣಿಗಳನ್ನು, ಪ್ರೊಟೆಸ್ಟಗಳನ್ನು ಮಾಡಬಹುದು. ಹಾಗಾಗಿ ಹೆಚ್ಚಿನ ವೇಳೆಯಲ್ಲಿ ಇದು ಜನರಿಂದ ತುಂಬಿಯೇ ಇರುತ್ತದಂತೆ. ಹಿಂದಿನ ದಿನ ನಾವು ಸಿಟಿ ಟೂರ್‍ ಮಾಡುವಾಗಲೂ ಟಫಲ್ಗಾರ್‍ ಸ್ಕ್ವೇರ ನಮ್ಮ ಕಣ್ಣಿಗೆ ಬಿದ್ದಿತ್ತು. ಆಗ ಬಗೆಬಗೆ ಬಣ್ಣದ ಸುಂದರವಾದ ಟೆಂಟುಗಳಿಂದ ಇಡೀ ಜಾಗ ತುಂಬಿತ್ತು. ಬಸ್ಸಿನಲ್ಲಿ ಕುಳಿತೇ ಅದರ ಅಂದವನ್ನು ಸವಿಯುವಂತೆ ನಮ್ಮ ಟೂರ್‍ ಮ್ಯಾನೇಜರ್‍ ಹೇಳಿದಾಗ ನಾನು ತಕರಾರು ಮಾಡಿದೆ. ಲಂಡನ್ ವರೆಗೆ ಬಂದು ಇಂಥ ಸುಂದರವಾದ ಸ್ಥಳವನ್ನು ನೋಡದೇ ಹೋಗುವುದೇ? ನಾವು ಇಲ್ಲಿಗೆ ಬರುವುದಕ್ಕೆ ಎಂಟುಹತ್ತು ದಿನಗಳ ಮುನ್ನವೇ ವಿಶ್ವವಾಣಿಯಲ್ಲಿ ವಿಶ್ವೇಶ್ವರ ಭಟ್ಟರು ಈ ಸ್ಕ್ವೇರ ಕುರಿತು ಬರೆಯುತ್ತ, ನೀವು ಇಲ್ಲಿ ಬಂದು ಸುಮ್ಮನೇ ಕುಳಿತರೂ ಸಾಕು, ಟೈಮ್ ಹೋದದ್ದೇ ತಿಳಿಯುವುದಿಲ್ಲ. ಸುಮ್ಮನೇ ಸ್ಕ್ವೇರ ಸುತ್ತಮುತ್ತ ತಿರುಗಾಡುವುದೇ ಒಂದು ಅಪೂರ್ವ ಅನುಭವ ಎಂದು ಬರೆದಿದ್ದನ್ನು ನಾನು ನೆನಪಿಟ್ಟುಕೊಂಡಿದ್ದೆ. ಹಾಗಾಗಿ ನನಗೆ ಅದನ್ನು ನೋಡಲೇ ಬೇಕಿತ್ತು. ಅಂತೂ ಅದು ಇಂದು ಕೈಗೂಡಿತ್ತು. ಮತ್ತು ನಮ್ಮ ನಿರೀಕ್ಷೆಗೂ ಮೀರಿ ಸ್ಕ್ವೇರ ಸುಂದರವಾಗಿತ್ತು. 
      ಅಲ್ಲಿಂದ ತೃಪ್ತರಾಗಿ ನಾವು ಮ್ಯಾಡಮ್ ತುಸ್ಸಾಡ್ಸ ವ್ಯಾಕ್ಸ್ ಮ್ಯೂಸಿಯಂ ನೋಡಲು ಹೊರಟೆವು. ಇದು ಕೂಡ ಊರ ಮಧ್ಯಭಾಗದಲ್ಲಿಯೇ ಇದೆ. ನಮಗೆಲ್ಲ ಈ ಮ್ಯೂಸಿಯಂನ ಪರಿಚಯ ಇದ್ದೇ ಇದೆ. ಅದಕ್ಕೆ ಕಾರಣ ನಮ್ಮ ದೇಶದ ಹಲವು ಪ್ರಸಿದ್ಧರು ಇಲ್ಲಿ ಮೇಣದ ಮೂರ್ತಿಗಳಾಗಿ ನಿಂತಿದ್ದಾರೆ, ಮತ್ತು ಇತ್ತೀಚೆಗೆ ಸೇರಿಸಲಾದ ನರೇಂದ್ರ ಮೋದಿಯವರ ಮೂರ್ತಿ ಮಾಡುವಾಗಿನ ಅಷ್ಟೂ ಮಾಹಿತಿಯನ್ನು ನಾವು ಮಾಧ್ಯಮಗಳ ಮುಖಾಂತರ ತಿಳಿದಿದ್ದೇವೆ. 
         ಟಿಕೆಟ್ ತೆಗೆಸಲು ನಾವು ಉದ್ದನೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಾಗ ಎಷ್ಟು ಹೊತ್ತು ತಗಲುತ್ತದೋ ಎಂದುಕೊಂಡಿದ್ದೆವು, ಆದರೆ ಸರದಿಯಲ್ಲಿನ ಜನ ಬೇಗಬೇಗ ಮುಂದೆ ಸರಿಯುತ್ತಿದ್ದರಿಂದ ಸಮಾಧಾನವೆನಿಸುತ್ತಿತ್ತು. ಅಲ್ಲಿ ನಿಂತುಕೊಂಡೇ ಆಕಡೆ ಈಕಡೆ ನೋಡುತ್ತಿದ್ದೆವು. ಇರುವ ಕಡಿಮೆ ಸಮಯದಲ್ಲಿ ಈ ದೇಶದ ಬಗ್ಗೆ ಇಲ್ಲಿನ ಜನಜೀವನದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟನ್ನು ತಿಳಿದುಕೊಂಡುಬಿಡಬೇಕು ಎನ್ನುವ ಕಾತರ. ರಸ್ತೆಯಲ್ಲಿ ಪುರುಷನೊಬ್ಬ ಕಸ ಗುಡಿಸುತ್ತಿದ್ದ. ಅವನ ಒಳ್ಳೆಯ ಪರ್‍ಸನ್ಯಾಲಿಟಿ, ಒಳ್ಳೆಯ ಬಟ್ಟೆ ಎಲ್ಲ ನೋಡಿ ನನಗೆ ಖುಷಿಯಾಯಿತು. ಅವನು ಇಷ್ಟಿಷ್ಟೇ ಗುಡಿಸಿ ತಕ್ಷಣ ಕಸವನ್ನು ಕಸದ ಮರಕ್ಕೆ ಹಾಕಿಕೊಳ್ಳುತ್ತಿದ್ದ ಮತ್ತು ಮರ ತುಂಬುವುದಕ್ಕೆ ಮೊದಲು ಹೋಗಿ ಕಸದ ಬುಟ್ಟಿಯಲ್ಲಿ ಅದನ್ನು ಬರಿದು ಮಾಡಿ ಬರುತ್ತಿದ್ದ. ಇಡೀ ಊರು ಪ್ರವಾಸಿಗಳಿಂದಲೇ ತುಂಬಿರುವುದರಿಂದ ಮತ್ತೆ ಇಲ್ಲೆಲ್ಲ ನಡೆದಾಡುತ್ತಲೇ ಎಲ್ಲರೂ ಕಾಫಿ ಕುಡಿಯುವುದು, ಏನಾದರೂ ಸ್ನಾಕ್ಸ್  ತಿನ್ನುವುದು ಮಾಡುತ್ತಾರಾದ್ದರಿಂದ ಇಡೀ ಊರಲ್ಲಿ ಅಲ್ಲಲ್ಲಿ ಸಾಕಷ್ಟು ಡಸ್ಟಬಿನ್ ಗಳು ಇವೆ. ಹಾಗಾಗಿ ಜನರೂ ಅದರಲ್ಲಿಯೇ ಕಸವನ್ನು ಚೆಲ್ಲುತ್ತಾರೆ. ಸ್ವಚ್ಛತೆಯ ಕೆಲಸವಂತೂ ಯಾವಗಲೂ ನಡೆದೇ ಬಿಟ್ಟಿರುತ್ತದೆ. ನಮ್ಮ ಜನರೂ ಅಲ್ಲಿ ಸ್ವಲ್ಪ ಶಿಸ್ತಾಗಿ ವರ್ತಿಸುತ್ತಾರೆ. 
           ಮ್ಯಾಡಮ್ ತುಸ್ಸಾಡ್ಸ ಮ್ಯೂಸಿಯಂ ನಾವು ಸಾಮಾನ್ಯವಾಗಿ ಊಹಿಸಿಕೊಂಡಿರುವಂಥ ಅಥವಾ ನೋಡಿರುವಂಥ ಮ್ಯೂಸಿಯಂ ಥರ ಅಲ್ಲ. ಒಳಪ್ರವೇಶಿಸುತ್ತಲೇ ನೂಕುನುಗ್ಗಲು ಪ್ರಾರಂಭವಾಗಿಬಿಡುತ್ತದೆ. ಕತ್ತಲೆಯಲ್ಲಿ ತಡಕಾಡುತ್ತಾ ನಾವು ಪ್ರವೇಶ ಮಾಡುವುದಕ್ಕೂ ಯಾವುದೋ ಒಂದು ಮೇಣದ ಮೂರ್ತಿ ಧುತ್ತೆಂದು ಎದುರಾಗಿ ಬಿಡುತ್ತದೆ. ಅದು ಮೂರ್ತಿಯೋ, ನಿಜವಾದ ಮನುಷ್ಯನೋ ಎಂದು ಕೂಡ ಒಮ್ಮೊಮ್ಮೆ ಕನ್ಫ್ಯೂಸ್ ಆಗುವಷ್ಟು  ಸಹಜವಾಗಿ ಇರುವ ಮೂರ್ತಿಗಳು ಅಷ್ಟೇ ಸಹಜವಾಗಿ ಎದುರಾಗಿಬಿಡುತ್ತವೆ. ಅದರರ್ಥ ಅವುಗಳನ್ನು ಸಾಲಾಗಿ ಇಟ್ಟಿಲ್ಲ. ಬಹುಷಃ ಜೀವಂತಿಕೆಯ ಫೀಲ್ ಬರಲಿಕ್ಕಾಗಿ ಬೇಕೆಂತಲೇ ಎಲ್ಲೆಂದರಲ್ಲಿ ಇಟ್ಟಿದ್ದಾರೆ. ಜನರನ್ನು ದಾಟಿಕೊಂಡು, ತಳ್ಳಿಕೊಂಡು ನೀವು ಹೋಗುತ್ತಿರುವಂತೇ ಒಮ್ಮಿಲೇ ಸಲ್ಮಾನ್ ಖಾನನ ಜೊತೆ ಅವನಂತೆಯೇ ಬಾಡಿ ಬಿಲ್ಡ್ ಮಾಡಿದ ಸರದಾರಜಿಯೊಬ್ಬರು ಎದುರಾಗಿಬಿಡುತ್ತಾರೆ. ಇನ್ನೊಂದು ಕಡೆ ಐಶ್ವರ್‍ಯಾ ರೈ ಹತ್ತಿರ ಹುಡುಗರ ಗುಂಪೊಂದು ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನವಾಗಿರುತ್ತದೆ. ಅಮಿತಾಭ್ ಬಚ್ಚನನನ್ನು ನೋಡಿ ಆರವತ್ತು ಎಪ್ಪತ್ತರ ದಶಕದಲ್ಲಿ ಯುವತಿಯರಾಗಿದ್ದ ಮಧ್ಯವಯಸ್ಸಿನ ಭಾರತೀಯ ಹೆಣ್ಣುಮಕ್ಕಳ ಮೈಬಿಸಿ ಏರಿರುತ್ತದೆ. ಆದರೆ ಎಲ್ಲರಿಗಿಂತ ಹೆಚ್ಚು ಜನಪ್ರಿಯ ಎಂದರೆ ಅಲ್ಲಿಯೂ ಮೋದಿನೇ. ಮೋದಿಯ ಹತ್ತಿರ ನಿಂತ ಜನರ ವರ್ತನೆಯನ್ನು ನೋಡಬೇಕು ನೀವು. ಆಶ್ಚರ್ಯದಿಂದ, ಖುಷಿಯಿಂದ, ಮತ್ತು ಮೋಜಿನಿಂದ ನಕ್ಕುನಕ್ಕು ಇಡುತ್ತೀರಿ. ಅದೇನು ನಿಜವಾದ ಮೋದಿನೇ ಎದುರಿಗೆ ಬಂದಂತೆ ಜನ ಕೈಮುಗಿಯುವುದೇನು, "ಮೋದಿ ಸಹಬ, ಇಸ್  ಬಾರ ಭೀ ಆಪ ಹೀ ಕೊ ಪಿಎಮ್ ಬನನಾ ಹೈ" ಎಂದೆಲ್ಲ ಹೇಳುತ್ತ ನಿಜವಾಗಿ ಮೋದಿಯೊಂದಿಗೇ ಮಾತನಾಡುತ್ತಿದ್ದೇವೆಂದು ಭ್ರಮಿಸುತ್ತ ಆಕಡೆ ಈಕಡೆ ಜರುಗದೇ ಅಲ್ಲಿಯೇ ನಿಂತುಬಿಟ್ಟ ಜನಜಂಗುಳಿಯನ್ನು ನೋಡಿ ತುಂಬ ಮಜವೆನಿಸಿತು. ಮೋದಿ ಸಾಹೇಬರ ಮೋಡಿಯಿಂದ ಹೊರಬರುವುದು ಸಾಧ್ಯವೇ ಇಲ್ಲ ಎನಿಸಿತು. ಉಳಿದಂತೆ ಬೇರೆ ಬೇರೆ ದೇಶಗಳ ಪ್ರಸಿದ್ಧರು, ಇಂಗ್ಲಂಡ್ ರಾಜಮನೆತನದ ಸದಸ್ಯರ ಮೂರ್ತಿಗಳು, ಚಾರ್ಲಿ ಚಾಪ್ಲಿನ್, ಮರ್ಲಿನ್  ಮನ್ರೋ, ಮಾರ್ಟಿನ್ ಲೂಥರ್‍ ಕಿಂಗ, ಹೀಗೆ ಅನೇಕರ ಮೇಣದ ಮೂರ್ತಿಗಳಿವೆ. ಅಲ್ಲದೇ ಇಂಗ್ಲಂಡಿನ ಇತಿಹಾಸವನ್ನು ತೋರಿಸುವ ಪ್ರತಿಕೃತಿಗಳನ್ನೂ ಆಟೋರಿಕ್ಷಾದಲ್ಲಿ ಕುಳಿತು ನೋಡಬಹುದು. ಈ ಮ್ಯೂಸಿಯಂನ ಕರ್ತೃ ಮ್ಯಾಡಮ್ ತುಸ್ಸಾಡ್ಸಳ ಮೇಣದ ಮೂರ್ತಿಯೂ ಇದೆ. ಮತ್ತು ಮೂರ್ತಿಗಳನ್ನು ಮಾಡುವ ವಿವಿಧ ಹಂತಗಳ ವಿದಾನವನ್ನು ತಿಳಿಸುವ ಮೂರ್ತಿಗಳೂ ಇವೆ. ಅಂತೂ ಒಂದೊಳ್ಳೆ ಸ್ಥಳವನ್ನು ನೋಡಿದ ತೃಪ್ತಿಯಿಂದ ನಾವು ಲಾರ್ಡ್ಸ ಕ್ರಿಕೆಟ್ ಮೈದಾನಕ್ಕೆ ಹೋದೆವು. ನಿಜ ಹೇಳಬೇಕೆಂದರೆ ನನಗಾಗಲಿ, ಅಕ್ಕನಿಗಾಗಲಿ ಮೊದಲಿನಿಂದಲೂ ಕ್ರಿಕೆಟ್ಟಿನಲ್ಲಿ ಅಂಥ ಆಸಕ್ತಿಯೇನಿಲ್ಲ. ಹಾಗಾಗಿ ಆಟವೂ ಸರಿಯಾಗಿ ತಿಳಿಯುವುದಿಲ್ಲ. ಆದರೂ ಎಲ್ಲರೊಡನೆ ಆ ದೊಡ್ಡ ಇತಿಹಾಸ ಪ್ರಸಿದ್ಧ ಮೈದಾನವನ್ನು ನೋಡಿ ಬಂದೆವು. ಅಲ್ಲಿ ನಮಗೆ ಗೈಡ್ ಮಾಡಲು ಸುಮಾರು ಎಪ್ಪತ್ತರ ಪ್ರಾಯದ ಗೈಡ್ ಇದ್ದದ್ದೇ ಕುತೂಹಲವೆನಿಸಿತು ನಮಗೆ. ಇಲ್ಲಿನ ಬಹುತೇಕ ಪುರುಷರು ಆರಡಿಗಿಂತ ಜಾಸ್ತಿಯೇ ಎತ್ತರವಿರುತ್ತಾರೆ, ಹೆಂಗಸರು ಎತ್ತರ, ತೆಳ್ಳಗೆ. ಬಹುಷಃ ನಿತ್ಯ ಓಡಾಟದ ಬಹುಪಾಲು ಕಾಲ್ನಡಿಗೆಯಿಂದ ಅಥವಾ ಸೈಕಲನಿಂದ ಪೂರೈಸುವ ಕಾರಣಕ್ಕಾಗಿ ಇವರಲ್ಲಿ ಬೊಜ್ಜು ಇರಲಿಕ್ಕಿಲ್ಲ ಎನಿಸಿತು. 
        ನಂತರದ ನಮ್ಮ ಗುರಿ ಲಂಡನ್ ಆಯ್ (London Eye) ನೋಡುವುದಾಗಿತ್ತು. ಮತ್ತೆ ಅದಕ್ಕೆ ಸುಮಾರು ಹೊತ್ತು ಟಿಕೆಟ್ ಕೌಂಟರನಲ್ಲಿ ನಿಂತು ಆಮೇಲೆ  ಕ್ಯೂನಲ್ಲಿ ನಿಂತು, ಕೊನೆಗೊಮ್ಮೆ ಜನಜಾತ್ರೆಯಲ್ಲಿ ನಾವೂ ಬೆರೆಯುತ್ತ ಈ ಲಂಡನ್ ಆಯ್ ಎಂಬ ಜಾಯಿಂಟ್ ವ್ಹೀಲನ್ನು ತಲುಪಿದೆವು. ಲಂಡನ್ ಆಯ್ ಇದು ಇಡಿ ಶಹರವನ್ನು ಎತ್ತರದಿಂದ ವೀಕ್ಷಿಸಲು ಮತ್ತು ಲಂಡನ್ನಿನ ಪಾರಂಪರಿಕ ಕಟ್ಟಡಗಳ ಪಕ್ಷಿನೋಟವನ್ನು ಜನರಿಗೆ ದೊರಕಿಸಲು ಮಾಡಿರುವ ಜಾಯಿಂಟ್ ವ್ಹಿಲನಂಥ ಚಕ್ರ. ಇದರಲ್ಲಿ ಸುಮಾರು ಹದಿನೈದಿಪ್ಪತ್ತು ಹೊರಗಿನ ದೃಶ್ಯಗಳೆಲ್ಲ ಕಾಣುವಂಥ ಗಾಜಿನ ಕಾರುಗಳಿವೆ. ಒಂದೊಂದು ಕಾರಿನಲ್ಲೂ ಹನ್ನೆರಡು, ಹದಿನೈದು ಜನರನ್ನು ಏರಿಸಿ ಬಾಗಿಲನ್ನು ಭದ್ರ ಪಡಿಸುತ್ತಾರೆ. ಚಕ್ರ ತಿರುಗುತ್ತಿರುವಾಗ ನಾವು ನಿಂತ ಕಾರು ಮೇಲೆ  ಮೇಲೆ ಹೋಗುತ್ತ ಇಡೀ ಲಂಡನ್ ಶಹರದ ದರ್ಶನ ಮಾಡಿಸುತ್ತದೆ. ಪ್ರಮುಖ ಕಟ್ಟಡಗಳನ್ನು ನೋಡಲು ಅನುಕೂಲವಾಗುವಂತೆ ಒಳಗಡೆ ಪುಟ್ಟ ಕಂಪ್ಯೂಟರನಲ್ಲಿ ಯಾವ ದಿಕ್ಕಿನಲ್ಲಿ ಯಾವ ಕಟ್ಟಡವಿದೆ ಎಂದು ತೋರಿಸುವ ಗೈಡ್  ಇರುತ್ತದೆ. ಅದರ ಸಹಾಯದಿಂದ ಕಟ್ಟಡಗಳನ್ನು ನೋಡಿ ಗುರುತಿಸಬಹುದು. ಸಂಪೂರ್ಣ ಮೇಲೆ ಹೋದಾಗ ಸಿಟಿಯ ವಿಹಂಗಮ ದೃಶ್ಯ ಕಣ್ಣಿಗೆ ಹಬ್ಬವೆನಿಸುತ್ತದೆ. ಕೆಳಗೆ ಹರಿಯುವ ಥೇಮ್ಸ್ ನದಿಯಲ್ಲಿ ತೇಲುವ ಹಡಗುಗಳು ಮನದ ಭಾವಗಳನ್ನು ಹೊಯ್ದಾಡಿಸುತ್ತವೆ. ಹಳೆಯದೆಲ್ಲವನ್ನೂ ಪ್ರೀತಿಸುವ ಬ್ರಿಟಿಷರ ಸಾಂಪ್ರದಾಯಿಕ ಶಹರಕ್ಕೆ ಈ ಲಂಡನ್ ಆಯ್ ಹೊಸ ಸೇರ್ಪಡೆ ಹೌದಾದರೂ ಸರಿಯಾಗಿ ಹೊಂದಿಕೊಂಡಿದೆ. 
        ದಿನದ ಕೊನೆಯ ನಮ್ಮ ಗುರಿ, ಗೊತ್ತುಗುರಿಯಿಲ್ಲದೇ ಸುಮ್ಮನೇ ಆಕ್ಸಫರ್ಡ ಸ್ಟ್ರೀಟನಲ್ಲಿ ಉದ್ದಕ್ಕೆ ತಿರುಗಾಡುವುದಾಗಿತ್ತು. ಇಕ್ಕೆಲಗಳಲ್ಲೂ ಅಗಲವಾದ ಕಾಲ್ನಡಿಗೆಯ ವಾಕರ್‍ಸ ವೇ ಹೊಂದಿರುವ ಈ ರಸ್ತೆಗುಂಟ ನಡೆಯುವುದೇ ಒಂದು ವಿಶಿಷ್ಠ ಅನುಭವ. ಲಂಡನ್ನಿನಿಂದ ನಲವತ್ತು ಕಿಲೊಮೀಟರ ದೂರದಲ್ಲಿರುವ ನಮ್ಮ ಅಣ್ಣನ ಮಗ ಮತ್ತು ಸೊಸೆ ನಮ್ಮನ್ನು ಭೆಟ್ಟಿಯಾಗಲು ಆಕ್ಸಫರ್ಡ ಸ್ಟ್ರೀಟಿಗೇ ಬಂದು ಕೂಡಿಕೊಂಡದ್ದು ನಮಗಿಬ್ಬರಿಗೂ ತುಂಬ ಖುಷಿ ನೀಡಿತು. ಅವರ ಜೊತೆ ಹೊಟೆಲ್ಲೊಂದಕ್ಕೆ ಹೋಗಿ ಕಾಫಿವಚನ ಕುಡಿದೆವು.
         ಲಂಡನ್ನಿನಲ್ಲಿ ನಮ್ಮ ತಿರುಗಾಟದ ಈ ಅಂತಿಮ ದಿನದಂದೂ ನಾವು ಮಂತ್ರಾ ಹಾಟೆಲ್ಲಿಗೇ ಹೋಗಿ ಡಿನ್ನರ್‍ ಮುಗಿಸಿದೆವು. ಅಂದು ಅಲ್ಲಿ ಪಂಜಾಬಿ ಕುಟುಂಬದ ಒಂದು ಹುಟ್ಟುಹಬ್ಬದ ಪಾರ್ಟಿ ಇತ್ತು. ಹೀಗಾಗಿ ಇಡೀ ಹೊಟೆಲ್ಲು ಟಿಪಿಕಲ್ ಪಂಜಾಬಿ ಸರದಾರಜಿಗಳ ಮತ್ತು  ಅದೇ ಟಿಪಿಕಲ್ ಚಮಕ-ಚಮಕ ಪಂಜಾಬಿ ಡ್ರೆಸ್ಸುಗಳ, ಕೆಂಪು ಲಿಪಸ್ಟಿಕಗಳ,  ಪಂಜಾಬಿ ಹೆಣ್ಣುಮಕ್ಕಳ ಕಲರವದಿಂದ ತುಂಬಿಹೋಗಿತ್ತು. ನಮಗೆ ನಾವು ಇಂಗ್ಲಂಡಿನಲ್ಲಿದ್ದೇವೆ ಎನಿಸಲೇ ಇಲ್ಲ. ಸಂಪೂರ್ಣ ಭಾರತೀಯ ಫೀಲಿಂಗನಿಂದ ಮನಸ್ಸು ಹಗುರವಾಗಿ ಹೋಯಿತು. ಈ ಪಂಜಾಬಿಗಳು ನೂರಾರು ವರ್ಷಗಳಿಂದ ಇಂಗ್ಲಂಡಿಗೆ ಬಂದು ಬಂದು ನೆಲೆಸಿಬಿಟ್ಟಿರುವುದರಿಂದ ಅಲ್ಲಿ ಅವರ ಸಂಖ್ಯೆ ಸಾಕಷ್ಟಿದೆ. ನಾವು ಬಂದ ರಾತ್ರಿಯೇ ಊಟ ಮಾಡಿದ "ಪಂಜಾಬಿ ಕಢೈ" ಪಂಜಾಬಿಗಳೇ ನಡೆಸುವ ರೆಸ್ಟೊರೆಂಟ್ ಆಗಿತ್ತು. 
(ಮುಂದುವರೆಯುವುದು)

ನೀತಾ ರಾವ್

Friday, 23 November 2018

ಪ್ರಬಂಧ

ಭಾರತೀಯರ ಸಿನೆಮಾ ಸಂಗೀತದ ಪ್ರೇಮ

(ಡಿಸೆಂಬರ್ ತಿಂಗಳಿನ ತುಷಾರ ಮಾಸಪತ್ರಿಕೆಯಲ್ಲಿ "ಆಕಾಶವಾಣಿ, ಈಗ ಚಿತ್ರಗೀತೆಗಳ ಕಾರ್ಯಕ್ರಮ" ಎನ್ನುವ ತಲೆಬರಹದೊಂದಿಗೆ ಪ್ರಕಟವಾದ ಪ್ರಬಂಧ )
       ಭಾರತೀಯರ ಸಿನೆಮಾ ಸಂಗೀತ ಪ್ರೇಮ ಅನನ್ಯವಾದದ್ದು. ಹಾಡಿಲ್ಲದ ಸಿನೆಮಾಗಳನ್ನೇ ನಾವು ಕಲ್ಪಿಸಲಾರೆವು. ಒಂದೂ ಹಾಡಿಲ್ಲದ ಇಂಗ್ಲಿಷ್  ಮತ್ತಿತರ ವಿದೇಶಿ ಚಿತ್ರಗಳಿರುತ್ತವೆ. ಅವುಗಳನ್ನು ನೋಡಿ ನಾವೂ "ಎಷ್ಟು ನ್ಯಾಚರಲ್ಲಾಗಿದೆ ಸಿನೆಮಾ! ಸುಮ್ಮಸುಮ್ಮನೇ ಹೀರೊ, ಹಿರೋಯಿನ್ನಗಳು ಹಾಡು ಹಾಡಿ ಮರ ಸುತ್ತೋ ಕೆಲಸ ಇಲ್ಲವೇ ಇಲ್ಲ" ಅಂತ ಹೊಗಳಿರುತ್ತೇವೆ.
ನಿಜ ಜೀವನದಲ್ಲಿ ಪ್ರತಿ ಸನ್ನಿವಾಶಕ್ಕೆ ಯಾರು ಹಾಡು ಹಾಡುತ್ತಾ ಕೂರುತ್ತಾರೆ ಅಥವಾ ಮರ ಸುತ್ತುತ್ತಾರೆ ಹೇಳಿ! ಅಳು ಬಂದರೆ ಅತ್ತು ಕಣ್ಣೀರಾಗುವ ಬದಲು ಒಂದು ದುಃಖಭರಿತ ಹಾಡನ್ನು ಹಾಡುತ್ತಾ ನೋಡುಗರ ಕಣ್ಣಲ್ಲಿ ಕರುಣೆ ಉಕ್ಕಿಸುವುದು ಸಾಧ್ಯವೇ? ಹಾಗೆ ಮಾಡಬೇಕೆಂದರೂ ಥಟ್ಟನೇ ಶಬ್ದಗಳು ಹೊಳೆದು, ಅದೊಂದು ಗೀತೆಯಾಗಿ, ಅದಕ್ಕೆ ನಾವೇ ಟ್ಯೂನ್  ಕೊಟ್ಟುಕೊಂಡು (ಹಿನ್ನೆಲೆ ಸಂಗೀತ ಇಲ್ಲ ಎಂದೇ ಇಟ್ಟುಕೊಳ್ಳಿ) ಹಾಡುವುದು ಎಷ್ಟೊಂದು ಕಷ್ಟ ಊಹಿಸಿಕೊಳ್ಳಿ. ಹಾಗಿದ್ದರೆ ಈ ಸಿನೆಮಾಗಳಲ್ಲಿ ಮಾತ್ರ ಅದು ಹೇಗೆ ನಾಯಕ, ನಾಯಕಿಯರು ಒಮ್ಮೊಮ್ಮೆ ಸಪೋರ್ಟಿಂಗ್ ನಟ, ನಟಿಯರು ಕೂಡ, ಪ್ರತೀ ಸನ್ನಿವೇಶಕ್ಕೆ ಸರಿಯಾಗಿ, ತಮ್ಮ ಮಾನಸಿಕ ಸ್ಥಿತಿಗೆ ಸರಿಯಾಗಿ, ರಾಗ-ತಾಳ ಸಮೇತÀವಾಗಿ ಸುಂದರವಾದ ಹಾಡುಗಳನ್ನು ಹಾಡುತ್ತಾರೆ! ಅದೆಲ್ಲಾ ಬೋಗಸ್ ಅಂತ ನಾವು ಅನ್ನಬಹುದು.
ಚಿಕ್ಕ ಮಕ್ಕಳಿದ್ದಾಗ ನಾವೊಂದಿಷ್ಟು ಹಾಡುಗಳನ್ನು ಕಲಿತು ಅಂದಿರುತ್ತೇವೆ. ಏಕೆಂದರೆ ನಮ್ಮ ಅಮ್ಮಂದಿರು ಮತ್ತು ಶಾಲೆಯಲ್ಲಿ ಟೀಚರುಗಳು ಶ್ರಮಪಟ್ಟು ಅಭಿನಯ ಸಹಿತವಾಗಿ ಹಾಡಲು ಕಲಿಸಿಕೊಟ್ಟಿರುತ್ತಾರೆ. ನನ್ನ ಹಿರಿಯ ಮಗ ಟಿಪಿಕಲ್ ಮಕ್ಕಳ ಹಾಡುಗಳನ್ನು ತನ್ನ ಗೆಳೆಯನೊಡನೆ ಕೂಡಿಕೊಂಡು ಹೇಳುತ್ತಿದ್ದ. 'ಗಣಪ್ಪ ಬಂದಾ, ಹೊಟ್ಟಿ ಮ್ಯಾಲೆ ಗಂಧಾ', 'ಝಣ ಝಣಾ ಝಣಾ ಜೇಬು ತುಂಬ ಹಣಾ', 'ಕಪ್ಪೆ ಕರಕರ, ತುಪ್ಪಾ ಜಲಿಜಲಿ', 'ಬಸ್ ಬಂತು ಬಸ್ಸು, ಗೋರ್ಮೆಂಟ ಬಸ್ಸು' ಇವೆಲ್ಲಾ ಪದ್ಯಗಳನ್ನು ಮೈಕೈ ತಿರುಗಿಸುತ್ತ ಅಭಿನಯಿಸಿ ರಾಗವಾಗಿ ಹೇಳುತ್ತಿದ್ದ. ನಾವೂ ಮೇಲಿಂದ ಮೇಲೆ ಅವೇ ಅವೇ ಪದ್ಯಗಳನ್ನು ಮಕ್ಕಳ ಬಾಯಿಂದ ಕೇಳಿ ಸಂತೋಷ ಪಡುತ್ತಿದ್ದೆವು. ಆದರೆ ಮಕ್ಕಳು ದೊಡ್ಡವರಾದಂತೆ ಹಾಡು ಹಾಡುವುದನ್ನು ನಿಲ್ಲಿಸಿಬಿಡುತ್ತಾರೆ. ತೀರಾ ಸಿನೆಮಾ ಹಾಡುಗಳ ಹುಚ್ಚು ಹಿಡಿಸಿಕೊಂಡವರು ಬಾಥರೂಮ ಸಿಂಗರಗಳಾಗುತ್ತಾರೆ. ಹಾಡಿನ ನಾದವಿರುವ ಹೆಣ್ಣುಮಕ್ಕಳು ಅಡುಗೆ ಮಾಡುತ್ತ ಯಾರು ಇಲ್ಲದ ಸಮಯದಲ್ಲಿ ಒಗ್ಗರಣೆಯ ಸದ್ದಿನೊಂದಿಗೆ ತಮ್ಮ ದನಿಯನ್ನು ಬೆರೆಸಿ ಅಡುಗೆಯ ರುಚಿ ಹೆಚ್ಚಿಸುತ್ತಾರೆ. ಆದರೆ ಪ್ರತೀ ಸನ್ನಿವೇಶಕ್ಕೆ ಮತ್ತು ಭಾವನೆಗೆ ತಕ್ಕಂತೆ ಯಾರೂ ಹಾಡುತ್ತಾ ಕೂರಲು ಆಗುವುದಿಲ್ಲ. 
ಆದರೂ ಸಿನೆಮಾಗಳಲ್ಲಿ ನಟ, ನಟಿಯರು ಹಾಗೆ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಹೇಳಿದರೆ ನಮಗ್ಯಾರಿಗೂ ವಿಚಿತ್ರ ಅನಿಸುವುದೇ ಇಲ್ಲ. ಬದಲಾಗಿ ಖುಶಿಯೇ ಆಗುತ್ತದೆ. ಕೆಲವು ಚಿತ್ರಗಳಂತೂ ಕತೆಗಿಂತ ಹಾಡುಗಳಿಗಾಗಿಯೇ ಹೆಚ್ಚು ಫೇಮಸ್  ಆಗುತ್ತವೆ. ಹಾಡುಗಳಿಗಾಗಿಯೇ ಚಲನಚಿತ್ರ ತಯಾರಿಸಿದ ಅಪರೂಪದ ಉದಾಹರಣೆಗಳೂ ನಮ್ಮಲ್ಲಿ ಇವೆ. 'ಮೈಸೂರು ಮಲ್ಲಿಗೆ' ಅಂಥ ಒಂದು ವಿಶೇಷ ಚಿತ್ರ. ಕೆ.ಎಸ್.ಎನ್. ಅವರ ಭಾವಗೀತೆಗಳನ್ನು ದೃಶ್ಯಕಾವ್ಯವಾಗಿಸಿ ತೆರೆಗಿಳಿಸಿದ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಹಿಂದಿಯಲ್ಲಿ ಕುಮಾರ ಸಾನು ಮತ್ತು ಅನುರಾಧಾ ಪೋಡವಾಲ ಅವರ ಅಲ್ಬಮ ಹಾಡುಗಳನ್ನೇ ಮತ್ತಷ್ಟು ಜನಪ್ರೀಯವಾಗಿಸಲು ಮಾಡಿದ 'ಆಶಿಕಿ' ಚಿತ್ರ ತೊಂಬತ್ತರ ದಶಕದಲ್ಲಿ ಬಹಳ ಫೇಮಸ್ ಆಯಿತು. ಸುಮಾರು ಇಪ್ಪತ್ತೇಳು ವರ್ಷಗಳಷ್ಟು ಹಳೆಯದಾದ ಆ ಚಿತ್ರದ ಹಾಡುಗಳನ್ನು ಇನ್ನೂ ನಮ್ಮ ವಯಸ್ಸಿನ ಅನೇಕರು ಗುಣುಗುಣಿಸುತ್ತಾರೆ, ಅನೇಕ ಹಾಟೆಲ್ಲುಗಳಲ್ಲಿ ಇವುಗಳ ರೆಕಾರ್ಡ ಹಾಕಿರುತ್ತಾರೆ. ಇತ್ತಿತ್ತಲಾಗಿ ಚಿತ್ರಕ್ಕಿಂತ ಮೊದಲೇ ಹಾಡುಗಳ ಆಡಿಯೋ ರಿಲೀಸ್ ಸಮಾರಂಭಗಳನ್ನು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯ ಶುರುವಾಗಿದೆ. ಹಾಗಾಗಿ ಹಾಡುಗಳು ಸಿನೆಮಾ ರಿಲೀಸ್ ಆಗುವುದಕ್ಕಿಂತ ಮೊದಲೇ ರಸಿಕರಿಗೆ ತಿಳಿದುಬಿಟ್ಟಿರುತ್ತವೆ. ಅವು ಚಿತ್ರದ ಮೌಲ್ಯವನ್ನು ಇನ್ನೂ ಹೆಚ್ಚಿಸುತ್ತವೆ. ಸಿನೆಮಾಗಳ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಹಿಂದೆ ಕೂಡ ರೇಡಿಯೋಗಳಿಂದಾಗಿ ಹಾಡುಗಳು ಎಲ್ಲರ ಮನೆಮಾತಾಗಿರುತ್ತಿದ್ದವು. 
ನಾವು ಭಾರತೀಯರು ಹಾಡುಗಳನ್ನು ಬಹುವಾಗಿ ಮೆಚ್ಚುತ್ತೇವೆ ಹಾಗೂ ನೆಚ್ಚುತ್ತೇವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿರುವ ಹಾಡುಗಳಿಗೆ ನಮ್ಮ ನಿಜ ಜೀವನದ ಯಾವುದೇ ಸನ್ನಿವೇಶಕ್ಕೂ ಸೆಟ್ಟಾಗುವ ವಿಶೇಷ ಗುಣವಿದೆ. ಹಾಗಾಗಿ ನಾವೇ ಬರೆದು, ಸಂಯೋಜಿಸಿ ಹಾಡುವ ತಾಪತ್ರಯವೇ ಇಲ್ಲ. ನನ್ನ ಅಕ್ಕನ ಮಗಳು ಪುಟ್ಟ ಮಗುವಾಗಿದ್ದಾಗ ರಾತ್ರಿ ಎಷ್ಟೊತ್ತಾದರೂ ಮಲಗುತ್ತಿರಲಿಲ್ಲ. ಮೇಲೆ ಜೋರು ಧ್ವನಿಯಲ್ಲಿ ಅಳುವುದು ಬೇರೆ. ಒಂದು ದಿನ ಬೇಸರಗೊಂಡು ನನ್ನಕ್ಕ ಮತ್ತು ಅಪ್ಪ ತೊಟ್ಟಲಿನ ಎರೆಡೂ ಬದಿಗೆ ನಿಂತು ಹಾಡುತ್ತಾ ಅವಳನ್ನು ತೂಗಲು ಶುರು ಮಾಡಿದರು. ಹಾಡುವುದು ನಿಲ್ಲಿಸಿದ ತಕ್ಷಣ ಅವಳು ಅಳಲು ಶುರುಮಾಡುತ್ತಿದ್ದಳು. ಹಾಡು ಹಾಡುವ ತನಕ ಸುಮ್ಮನೇ ಕೇಳುತ್ತಿದ್ದಳು. ಹೀಗೆ ಅನೇಕ ಸಿನೆಮಾ ಹಾಡುಗಳು, ದೇವರ ನಾಮಗಳು ಎಲ್ಲ ಹೇಳಿ ಅವರು ಸುಸ್ತಾದರೂ ಅವಳು ಅಳುವುದನ್ನೂ ನಿಲ್ಲಿಸಲಿಲ್ಲ, ಮಲಗಲೂ ಇಲ್ಲ. ಕೊನೆಗೆ ಬೇಸರಗೊಂಡು ಲಾಲಿ ಹಾಡು ಹೇಳುವುದೇ ಸರಿ ಎಂದುಕೊಂಡು 'ಲಾಲಿ ಲಾಲಿ, ಲಾಲಿ ಲಾಲಿ, ಕತ್ತೆಯ ಮರಿಚಂದ' ಎನ್ನುವ ಸಿನೆಮಾ ಹಾಡನ್ನು ಹೇಳಿದ ಮೇಲೆಯೇ ಅವಳು ನಿದ್ದೆಗೆ ಜಾರಿದ್ದು. ನಾವು ಚಿಕ್ಕವರಿದ್ದಾಗ ಅಮ್ಮ-ಅಪ್ಪ ಏನಾದರೂ ಜಗಳವಾಗಿ ಮಾತು ಬಿಟ್ಟಾಗ, ಶುಭಮಂಗಳ ಚಿತ್ರದ 'ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನಗತದ ಭೂತಾಯಿ ಮನಸು' ಹಾಡು ಹೇಳಿ ಇಬ್ಬರನ್ನೂ ನಗಿಸಿಬಿಡುತ್ತಿದ್ದೆವು. 
ನಾಗರಹಾವು ಚಿತ್ರ ನೋಡಿದ ನನ್ನಕ್ಕನಿಗೆ ಅದರಲ್ಲಿನ ಹಾಡುಗಳ ಹುಚ್ಚು ಸರಿಯಾಗಿ ಹಿಡಿದಿತ್ತು. ರೇಡಿಯೋದಲ್ಲಿ 'ಕನ್ನಡ ನಾಡಿನ ವೀರ ರಮಣಿಯಾ ಗಂಡುಭೂಮಿಯಾ ವೀರ ನಾರಿಯಾ ಚರಿತೆಯ ನಾನು ಹಾಡುವೆ' ಹಾಡು ಬಂದ ತಕ್ಷಣ ಅವಳು ಆವೇಶಕ್ಕೊಳಗಾಗಿ ಫಡಫಡನೇ ಕಪಾಟು ಬಾಗಿಲು ತೆಗೆದು ಅದರಲ್ಲಿನ ಅಮ್ಮನ ಒಂದು ಸೀರೆಯನ್ನು ಎಳೆದುಕೊಂಡು ಸರಸರನೇ ಮೈಗೆ ಸುತ್ತಿಕೊಂಡು ವೀರಗಚ್ಚೆ ಹಾಕಿಕೊಂಡು ಒನಕೆಯನ್ನು ಹಿಡಿದು ನಿಂತುಬಿಡುತ್ತಿದ್ದಳು. ಒಂದು ಹಾಡು ಕೇಳುವುದರಲ್ಲಿ ಇಷ್ಟೆಲ್ಲ ಮಾಡುವುದು ಸಾಧ್ಯವೇ ಅನ್ನುವ ಪ್ರ್ಯಾಕ್ಟಿಕಲ್ ಪ್ರಶ್ನೆ ಒಗೆಯಬೇಡಿ. ಅಷ್ಟು ದೊಡ್ಡ ಹಾಡು ಮುಗಿಯುವುದರೊಳಗೆ ಇಷ್ಟೆಲ್ಲ ಮಾಡಲು ಸಾಧ್ಯವೇ ಹೌದು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. 'ಕೈಗೆ ಸಿಕ್ಕಿದಾ ಒನಕೆ ಹಿಡಿದಳು' ಎಂದು ಪಿ.ಬಿ.ಶ್ರೀನಿವಾಸ ಹಾಡುವುದರಲ್ಲಿ ಅಡುಗೆಮನೆಯ ಮೂಲೆಯಲ್ಲಿನ ಒನಕೆ ಅವಳ ಕೈಗೆ ಬಂದಿರುತ್ತಿತ್ತು. 'ವೀರಗಚ್ಚೆಯಾ ಹಾಕಿ ನಿಂತಳು' ಎನ್ನುವಷ್ಟರಲ್ಲಿ ಉಟ್ಟ ಸೀರೆಯ ನೆರಿಗೆಗಳನ್ನು ಹಿಡಿದು ಹಿಂದೆ ತೆಗೆದುಕೊಂಡು ವೀರಗಚ್ಚೆ ಹಾಕಿಕೊಂಡು ಬಿಡುತ್ತಿದ್ದಳು. ಮತ್ತಾಮೇಲೆ ಅವಳ ಮೈಮೇಲೆ ನಮ್ಮ ನೆಚ್ಚಿನ ನಟಿ ಜಯಂತಿ ಬರುತ್ತಿದ್ದಳೋ ಅಥವಾ ಸ್ವತಃ ಒನಕೆ ಓಬವ್ವನೇ ಆವಾಹನೆಯಾಗುತ್ತದ್ದಳೋ ನಾವು ತಲೆ ಕೆಡಿಸಿಕೊಂಡಿರಲಿಲ್ಲ. ಅಂತೂ ವಿಷ್ಣುವರ್ಧನ್ ಕಥೆಯ ಕೊನೆಯ ಘಟ್ಟಕ್ಕೆ ತಲುಪಿ 'ಅಮರಳಾದಳು ಓಬವ್ವಾ ದುರ್ಗವು ಮರೆಯದ ಓಬವ್ವಾ' ಎಂದು ಹೇಳಿ ಶಾಲೆಯ ಮಕ್ಕಳ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಸುವ ಹೊತ್ತಿಗೆ ಇಲ್ಲಿವಳು ಸಕಲ ವೀರಾವೇಶದೊಂದಿಗೆ ಒನಕೆಯಿಂದ ನಮ್ಮ ಮನೆಯ ಶಗಣಿಯಿಂದ ಸಾರಿಸಿದ ಮಣ್ಣಿನ ನೆಲವನ್ನು ಕುಟ್ಟಿ ಕುಟ್ಟಿ ಒಂದಿಷ್ಟು ಮಣ್ಣು ಎದ್ದು ಒಂದೆರೆಡು ಸಣ್ಣಪುಟ್ಟ ತೆಗ್ಗುಗಳಾಗಿ ಮನೆಯ ಮಾಲಿಕರು ಏನು ನಡೆದಿದೆ ಇವರ ಮನೆಯಲ್ಲಿ ಎಂದು ಬಯ್ಯಲು ಮೇಲೆ ಓಡೋಡಿ ಬಂದು ಅಭಿನವ ಓಬವ್ವನನ್ನು ನೋಡುತ್ತ ದಂಗಾಗಿ ನಿಂತುಬಿಡುತ್ತಿದ್ದರು. ಅವರೇನಾದರೂ ಆಗ ಮಾತನಾಡಿದರೆ ಹೈದರಾಲಿಯ ಸೈನಿಕರಿಗಾದ ಗತಿಯೇ ತಮಗೂ ಆಗಬಹುದೆಂಬ ಹೆದರಿಕೆಯಿಂದ ಮಾತನಾಡದೇ ಶಬ್ದ ಮಾಡದಂತೆ ಮೆಟ್ಟಿಲು ಇಳಿದು ಹೋಗಿ ಬಿಡುತ್ತಿದ್ದರು. ಇವಳ ಹಾಡಿನ ಪ್ರೇಮ 'ನಾಗರಹಾವಿ'ಗಷ್ಟೇ ಭುಸುಗುಟ್ಟಿದ್ದರೆ ನನಗೇನೂ ಆತಂಕವಿರಲಿಲ್ಲ. ಆದರೆ ಅದು 'ದೇವರ ಕಣ್ಣು' ವರೆಗೂ ಹರಿದು ಬಂದು ನನಗೆ ತ್ರಾಸು ಕೊಡಲಾರಂಭಿಸಿತು. 'ಓ ಇನಿಯಾ ನೀ ಎಲ್ಲಿರುವೆ, ನಿನಗಾಗಿ ನಾ ಕಾದಿರುವೆ' ಎಂದು ದೆವ್ವದಂತೆ ಆ ಚಿತ್ರದಲ್ಲಿ ನಟಿಯೊಬ್ಬಳು ಹಾಡುತ್ತ ಕಾಡು ಮೇಡು ಅಲೆಯಲಾರಂಭಿಸಿದಳೆಂದರೆ ಇವಳು ಭೂತವೊಂದನ್ನು ತನ್ನ ಮೇಲೆ ಬಿಟ್ಟುಕೊಳ್ಳುತ್ತಿದ್ದಳು. ಆ ಸಮಯಕ್ಕೆ ಸರಿಯಾಗಿ ಅಮ್ಮನೇನಾದರೂ ಹತ್ತಿರದಲ್ಲೇ ಇದ್ದ ಅಜ್ಜಿಯ ಮನೆಗೆ ಹೋಗಿದ್ದಳೆಂದರೆ ಭೂತಕ್ಕೆ ಇನ್ನೂ ಶಕ್ತಿ ಹೆಚ್ಚಾಗುತ್ತಿತ್ತು. ಬಿಳಿ ಸೀರೆ ಉಟ್ಟು ತಲೆಕೂದಲನ್ನೆಲ್ಲ ಬಿಚ್ಚಿ ಹರಡಿಕೊಂಡು ನನ್ನನ್ನು ಹೆದರಿಸುತ್ತಿದ್ದಳು. ನಾನೋ ಹೆದರಿ ಕಂಗಾಲಾಗಿ ಸತ್ತೆನೋ ಕೆಟ್ಟೆನೋ ಅನ್ನುತ್ತ ಅಜ್ಜಿಯ ಮನೆಗೆ ಓಡಿ ಹೋಗುತ್ತಿದ್ದೆ. ಹೀಗಾಗಿ ಮುಂದೆ ಎಷ್ಟೋ ವರುಷಗಳು ಈ 'ಓ ಇನಿಯಾ' ಹಾಡು ನನ್ನನ್ನು ಹೆದರಿಸಿದ್ದಿದೆ. 
ಪ್ರೀತಿಯಲ್ಲಿ ಬಿದ್ದು ವಿಲಿವಿಲಿ ಒದ್ದಾಡುವ ಪ್ರೇಮಿಗಳಿಗಂತೂ ಹಾಡುಗಳೆಂದರೆ ತಮ್ಮ ಗುರಿಯನ್ನು ಮುಟ್ಟಿಸುವ ಸುವರ್ಣ ಸೇತುವೆಗಳಿದ್ದಂತೆ. ಆಗ ಅವರ ಸಹಾಯಕ್ಕೆ ಗಾಯನ ಪ್ರಪಂಚದ ದಿಗ್ಗಜರೆಲ್ಲರೂ ಓಡೋಡಿ ಬರುತ್ತಾರೆ. "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ" ಎಂದು ಎಸ್. ಜಾನಕಿ ಹಾಡಿ ಹುರಿದುಂಬಿಸಿದರೆ, "ಏ ಮೇರಾ ಪ್ರೇಮ ಪತ್ರ ಪಢಕರ ಕೆ ತುಮ ನಾರಾಜ ನಾ ಹೋನಾ" ಎನ್ನುತ್ತ ರಫಿ ಸಹಾಬ ಬರುತ್ತಾರೆ. "ಸಾಗರ ಕಿನಾರೆ ದಿಲ ಏ ಪುಕಾರೆ" ಎಂದು ಕಿಶೋರ ದಾ ಹೇಳುತ್ತಾನೆ. "ದಿಲ್ ಕಾ ಆಲಮ್ ಮೈ ಕ್ಯಾ ಬತಾವೂಂ ತುಝೆ" ಎಂದು ಕುಮಾರ ಸಾನು ಪ್ರಶ್ನಿಸುತ್ತಾನೆ. ಹೊಸ ಹುಡುಗರಿಗಾಗಿ "ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿದೆ" ಎಂದು ಸೋನು ನಿಗಮ ಹಾಡಿದರೆ, "ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ" ಎಂದು   ಶ್ರೇಯಾ ಘೋಷಾಲ್ ಹೇಳುತ್ತಾಳೆ. ಇವರೆಲ್ಲ ಪ್ರೇಮಿಗಳ ದನಿಯಾಗಿ ಅವರ ಸಂದೇಶಗಳನ್ನು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸುವ ಪವಿತ್ರ  ಕೈಂಕರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಇಂಥ ಪ್ರೇಮ-ರೋಗಗ್ರಸ್ತ ನಾಯಕ, ನಾಯಕಿಯರೊಡನೆ ಉಳಿದ ಹುಡುಗರು ಸಹಕಲಾವಿದರ ವೇಷದಲ್ಲಿ "ಕುಣಿದಾಡುವಾ ವಯಸಿದು, ನಲಿದಾಡುವ ದಿನವಿದು" ಎಂದು ಕೋರಸ್ ಹಾಡುತ್ತ ನರ್ತಿಸುತ್ತಿರುತ್ತಾರೆ.
ನಾವು ಅದೇ ತಾನೇ ಕಾಲೇಜು ಮೆಟ್ಟಿಲು ಹತ್ತಿದ ವೇಳೆ. ಶಾಲೆಯ ಬಿಗಿ ವಾತಾವರಣದಿಂದ ಒಮ್ಮಿಲೇ ಮುಕ್ತ ಹವೆಗೆ ಒಡ್ಡಿಕೊಂಡ ಅನುಭವ. ಪ್ರತೀ ಕ್ಲಾಸಿಗೆ ಆ ಲೆಕ್ಚರ್ ಹಾಲಿನಿಂದ ಈ ಹಾಲಿಗೆ, ಇಲ್ಲಿಂದ ಇನ್ನೊಂದು ಹಾಲಿಗೆ ತಿರುಗಾಡಬೇಕಿತ್ತು. ಫ್ರೀ ಪಿರಿಯಡ್ ಇದ್ದಾಗ ಖಾಲಿ ಕ್ಲಾಸೊಂದನ್ನು ಹುಡುಕಿಕೊಂಡು ಹೋಗಿ ಕುಳಿತುಕೊಳ್ಳುತ್ತಿದ್ದೆವು. ನಮಗಿಂತ ಸಾಕಷ್ಟು ಸಿನೀಯರ್ ಇದ್ದ  ಹುಡುಗನೊಬ್ಬ ಇಂಥ ಬೆದರುಗಣ್ಣಿನ ಹೊಸಹುಡುಗಿಯರನ್ನೇ ಟಾರ್ಗೆಟ್ ಮಾಡಿಕೊಂಡು ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ. ಮತ್ತೆ ಹಾಡಲು ಶುರುವಿಟ್ಟುಕೊಳ್ಳುತ್ತಿದ್ದ. ಅದೇ ಅವನು ಹೊಸ ಹುಡುಗಿಯರಿಗೆ ಕೊಡುತ್ತಿದ್ದ ರ್ಯಾಗಿಂಗ್ ಪನಿಶಮೆಂಟ್ ಆಗಿತ್ತು. ಒಂದು ದಿನ ಅವನು ಹಿಂದಿಯಲ್ಲಿ ಡೈಲಾಗ್ ಹೊಡೆಯುತ್ತ ಆಗ ತಾನೇ ಬಂದಿದ್ದ ಸಿನೆಮಾವೊಂದರ ಹಾಡು, "ಡಿಸ್ಕೊ 82, ಡಿಸ್ಕೊ 82, ತೂ ಎಕ ಡಿಸ್ಕೊ" ಎಂದು ಹಾಡಲಾರಂಭಿಸಿದ ಕೂಡಲೇ ನಾವು ಜಾಗ ಖಾಲಿ ಮಾಡಲಾರಂಭಿಸಿದೆವು. ಅವನಿಗೋ ತನ್ನ ಸಿರಿಕಂಠದಿಂದ ಹಾಡುಗಾರಿಕೆಯ ಪ್ರದರ್ಶನವಾಗಬೇಕಿತ್ತು. ಅದಕ್ಕೆ ನಮ್ಮಂಥ ಮುಗ್ಧ ಪ್ರೇಕ್ಷಕರ ಅವಶ್ಯಕತೆ ಇತ್ತು. ಹಾಗಾಗಿ ಮಧ್ಯದಲ್ಲೇ ಹಾಡು ನಿಲ್ಲಿಸಿ ನಾವು ರಸಭಂಗ ಮಾಡದೇ ಒಂದೆರೆಡು ಹಾಡು ಕೇಳಿಕೊಂಡು ಹೋಗುವ ಕೃಪೆ ತೋರಬೇಕಾಗಿ ನಾಟಕೀಯವಾಗಿ ಕೈ ಜೋಡಿಸಿ ವಿನಂತಿಸಿಕೊಂಡ. ಹಾಡಿನ ವಿಪರೀತ ಹುಚ್ಚಿದ್ದ ಗೆಳತಿಯೊಬ್ಬಳು ಕುಳಿತುಕೊಳ್ಳುವ ಇರಾದೆ ತೋರಿದರೂ ನಾವು ಹೊರಟೇಬಿಟ್ಟೆವು. "ರುಕಜಾ ಓ ಜಾನೆವಾಲಿ ರುಕಜಾ, ಮೈ ತೊ ರಾಹಿ ತೆರೆ ಮಂಝಿಲ ಕಾ" ಎಂದು ಅವನು ಕೂಗಿ ಹಾಡಿದರೂ ನಾವು ಕರುಣೆ ತೋರದಾದೆವು. ಅವನಿಗೆ ಭಾರೀ ನಿರಾಸೆಯಾಯ್ತು. ಆದರೆ ಅವನ ರಸಿಕತನ ಮತ್ತು ಸಮಯಸ್ಫೂರ್ತಿ ಅಂಥ ಹೊತ್ತಿನಲ್ಲೂ ಕೈಕೊಡಲಿಲ್ಲ. " ಓ ಜಾನೆವಾಲೆ ಹೋ ಸಕೆ ತೋ ಲೌಟಕೆ ಆನಾ" ಎಂದು ಮುಕೇಶನ ಕಂಠದಲ್ಲಿ ಅಳತೊಡಗಿದ. ನಾವು ನಗುನಗುತ್ತ ಕೇಳಿ ಹೊರಬಂದೆವು.
ನಾವು ಬಿ.ಕಾಂ. ಕೊನೆಯ ವರ್ಷದಲ್ಲಿದ್ದಾಗ ನಮ್ಮ ಕ್ಲಾಸಿನ ಒಬ್ಬ ಹುಡುಗನ ಕಾಕ ದೃಷ್ಟಿ ಅದು ಹೇಗೋ ಏನೋ ನಮ್ಮ ಗೆಳತಿಯೊಬ್ಬಳ ಮೇಲೆ ಬಿದ್ದುಬಿಟ್ಟಿತು. ಮತ್ತು ಅದೇ ನೆಪದಲ್ಲಿ ಅವನು ಕೋಗಿಲೆಯಂತೆ ಹಾಡಲಾರಂಭಿಸಿಬಿಟ್ಟ. ಮುಕೇಶನನ್ನು ವಶ ಮಾಡಿಕೊಂಡುಬಿಟ್ಟ. ಅಲ್ಲಿಯವರೆಗೂ ಅದೆಲ್ಲಿ ಎಮ್ಮೆ ಕಾಯುತ್ತಿದ್ದನೋ ಕೊನೆಯ ವರ್ಷದಲ್ಲಿ ಒಮ್ಮಿಂದೊಮ್ಮಿಲೇ ಅವಳನ್ನು ನೋಡಿ ಐಲುಪೈಲಾಗಿ ವರ್ತಿಸಲಾರಂಭಿಸಿದ. ರೊಮ್ಯಾಂಟಿಕ್ ಹಾಡುಗಳನ್ನು ಹಾಡುತ್ತ ಅವಳ ಹಿಂದೆ ಹಿಂದೆ ಹೋಗಿ ಮನೆಯ ವರೆಗೂ ಬಿಟ್ಟುಬರಲಾರಂಭಿಸಿದ. "ಕಭಿ ಕಭಿ ಮೆರೆ ದಿಲ್ ಮೆ ಖಯಾಲ ಆತಾ ಹೈ, ಕಿ ಜೈಸೆ ತುಝಕೊ ಬನಾಯಾ ಗಯಾ ಹೈ ಮೇರೆ ಲಿಯೆ" ಎಂದು ಕೂತಲ್ಲಿ ನಿಂತಲ್ಲಿ ಹಾಡಲಾರಂಭಿಸಿದ. ಕೊನೆಗೆ ಬೇಸತ್ತ ಹಿರೋಯಿನ್ನಳ ಅಣ್ಣಂದಿರು ನಾಲ್ಕು ಧರ್ಮದೇಟು ನೀಡಿದರು. ಪೆಟ್ಟು ತಿಂದರೂ ಪಟ್ಟು ಬಿಡದೇ ಥೇಟ್ ಸಿನೆಮಾ ಹೀರೊಗಳಂತೆ " ಪ್ಯಾರ ತೆರಾ ಪಾನೆ ಕೋ ಹಮನೆ ಅಪನಾ ಸಬ ಕುಛ ಖೋಯಾ" ಎಂದು ಅಲವತ್ತುಕೊಂಡ. ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕೊನೆಗೂ ಸಹಾಯ ಮಾಡಿದ್ದು ಪಾಪ ಮುಕೇಶನೇ. ದುರಂತ ನಾಯಕ "ಕೊಯಿ ಜಬ ತುಮ್ಹಾರಾ ಹೃದಯ ತೋಡ ದೇ ತಡಪತಾ ಹುವಾ ಜಬ ಕೊಯಿ ಛೋಡ ದೇ, ತಬ ತುಮ ಮೆರೆ ಪಾಸ ಆನಾ ಪ್ರಿಯೆ, ಮೆರಾ ದರ ಖುಲಾ ಹೈ ಖುಲಾ ಹೀ ರಹೆಗಾ ತುಮ್ಹಾರೆ ಲಿಯೆ" ಎಂದು ಕಣ್ಣೀರು ಹಾಕಿ ತನ್ನ ಪ್ರೇಮ ಪ್ರಕರಣಕ್ಕೆ ತಿಲಾಂಜಲಿ ನೀಡಿದ. ನೋಡಿ, ಹೇಗೆ ಇವರಿಗೆಲ್ಲ ತಮ್ಮ ಭಾವನೆಗಳನ್ನು ತೋಡಿಕೊಳ್ಳಲು, ತೋರಿಸಿಕೊಳ್ಳಲು ನಮ್ಮ ಶ್ರೇಷ್ಠ ಗಾಯಕರು, ಅವರ ಹಿನ್ನೆಲೆಯಲ್ಲಿ ಗೀತಕಾರರು, ಸಂಗೀತಕಾರರು ನೆರವಾದರು! ನಮ್ಮಲ್ಲಿ ಅದೆಷ್ಟು ಹಾಡುಗಳ ಅಮೂಲ್ಯ ಭಂಡಾರವೇ ಇದೆಯೆಂದರೆ ನಮ್ಮ ಪ್ರತೀ ಸಂದರ್ಭಕ್ಕೆ ತಕ್ಕಂತೆ ನೂರಾರು ಹಾಡುಗಳು ಒದಗಿಬರುತ್ತವೆ. ನೀವೇನೂ ಕಷ್ಟ ಪಡದೇ, ಇಷ್ಟಪಟ್ಟ ಹಾಡುಗಳನ್ನು ಶುದ್ಧ ಸ್ವರದಲ್ಲಿ ಹಾಡಿದರೆ ಸಾಕು, ನಿಮ್ಮ ಭಾವನೆಗಳು ಹೊಳೆಯಾಗಿ ಹರಿದು ಆ ದಂಡೆ ತಲುಪಿ ಅಲ್ಲಿನ ನೆಲವನ್ನು ತಂಪುಗೊಳಿಸುತ್ತವೆ. ಇಲ್ಲಿನ ಕುದಿಯ ಬಿಸಿ ಅಲ್ಲಿ ತಟ್ಟುತ್ತದೆ. ಅಲ್ಲಿನ ನಿಟ್ಟುಸಿರು ಇಲ್ಲಿನ ಬಾಯಲ್ಲಿ ಹೊರಬರುತ್ತದೆ. 
ಪ್ರೇಮ ಉಂಟಾದರೆ ಸಹಸ್ರ ಸಹಸ್ರ ಗೀತೆಗಳು ಓಡೋಡಿ ಬರುತ್ತವೆ. ಯಾವುದು ಅನ್ನುತ್ತೀರಿ, ಯಾವುದು ಬಿಡುತ್ತೀರಿ. ಇವತ್ತು "ಪೆಹಲಾ ನಶಾ, ಪೆಹಲಿ ಖುಮಾ" ಹಾಡುತ್ತೇನೆ, "ಆಪಕೆ ನಜರೋ ನೆ ಸಮಝಾ ಪ್ಯಾರ ಕೆ ಕಾಬಿಲ್  ಮುಝೆ" ನಾಳೆಗಿರಲಿ ಎಂದು ನೀವೆ ಆರಿಸಿ ಆರಿಸಿ ಎತ್ತಿಟ್ಟುಕೊಳ್ಳಬೇಕು. ಪ್ರೇಮಕ್ಕೆ ಎರಡೂ ಕಡೆಗಳಿಂದ ಗ್ರೀನ ಸಿಗ್ನಲ್ ಸಿಕ್ಕು ಮರ ಸುತ್ತುವ ವ್ಯಾಯಾಮ ಶುರುವಾದ ಮೇಲೆ ಮತ್ತಷ್ಟು ಹಾಡುಗಳು. "ಗಗನವು ಎಲ್ಲೋ, ಭೂಮಿಯು ಎಲ್ಲೋ" ಅನಿಸಲಾರಂಭಿಸುತ್ತದೆ. ಇಡೀ ಜಗತ್ತು ಮರೆತು ಹೋಗಿ "ನೀನೆ ನನ್ನ ಮನಸಲಿ, ಬರಿ ನಿಂದೆ ನನ್ನ ಕನಸಲಿ" ಆಗುತ್ತದೆ. ಇನ್ನೂ ಮುಂದೆ ಹೋಗಿ "ಅನ್ನೊರೆಲ್ಲಾ ಅನ್ನಲಿ" ಎನ್ನುವ ಧಾಷ್ರ್ಟ್ಯ ಬೆಳೆಯುತ್ತದೆ. ನಿಮ್ಮ ಪ್ರೇಮಿ ಊರಲ್ಲಿಲ್ಲ ಎಂದುಕೊಳ್ಳಿ, ವಿರಹದ ಬೆಂಕಿ ನಿಮ್ಮನ್ನು ಸುಡುತ್ತದೆ, ಮತ್ತು "ವಿರಹಾ ನೂರು ನೂರು ತರಹಾ"  ಎಂದು ಹಾಡುತ್ತ ಪಿ.ಸುಶಿಲಾ ಬರುತ್ತಾಳೆ. ಇಲ್ಲವೇ ನಿಮ್ಮ ಜಾಗದಲ್ಲಿ ನೀವು, ನಿಮ್ಮ ಪ್ರೇಮಿಯ ಸ್ಥಳದಲ್ಲಿ ಅವಳು ನಿಂತು ಮೊಹಮ್ಮದ ರಫಿ ಮತ್ತು ಲತಾ ಮಂಗೇಶ್ಕರಳಂತೆ "ವೊ ಜಬ ಯಾದ ಆಯೆ ಬಹುತ ಯಾದ ಆಯೆ" ಅಂತ ಹಾಡಿಕೊಳ್ಳಿ. ಒಬ್ಬರೇ "ಯಾದ ಮೇ ತೇರೆ ಜಾಗ ಜಾಗ ಕೆ ಹಮ, ರಾತ ಭರ ಕರವಟೆ ಬದಲ್ತೆ ಹೈಂ" ಎಂದು ಹಾಸಿಗೆಯ ಮೇಲೆ ಹೊರಳಾಡಿ ರಾತ್ರಿಯನ್ನು ಬೆಳಗು ಮಾಡಿ. 
ದುರದೃಷ್ಟವಶಾತ್  ನಿಮ್ಮ ಪ್ರೇಮವೇನಾದರೂ ವಿಫಲವಾದರಂತೂ ಅಳಲಿಕ್ಕೆ ಅಳಿಸಲಿಕ್ಕೆ ಎಲ್ಲಾ ಗಾಯಕರು ಓಡೋಡಿ ಬರಲು ತುದಿಗಾಲ ಮೇಲೆ ನಿಂತಿರುತ್ತಾರೆ. "ನಸೀಬ ಮೆ ಜಿಸಕೆ ಜೋ ಲಿಖಾ ಥಾ ವೋ ತೆರೆ ಮೆಹಫಿಲ ಮೆ ಕಾಮ ಆಯಾ" ಎಂದು ರಫಿ ಕಣ್ಣೀರಾದರೆ, "ಮೆರೆ ಕಿಸಮತ ಮೆ ತೂ ನಹಿ ಶಾಯದ, ಮೈ ತೆರಾ ಇಂತಜಾರ ಕರತಾ ಹೂಂ" ಅಂತ ಸುರೇಶ ವಾಡಕರ ಮತ್ತು ಲತಾ ಅಳುತ್ತಾರೆ. "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಅದರ ಮಧುರ ಸ್ಮøತಿಯ ನಾನು ಹೇಗೆ ತಾನೆ ಅಳಿಸಲಿ?" ಎಂದು ಪಿ.ಬಿ.ಶ್ರೀ ಕೇಳುತ್ತಾರೆ. "ಇವನು ಗೆಳೆಯನಲ್ಲ, ತುಂಬ ಸನಿಹ ಬಂದಿಹನಲ್ಲ" ಎಂದು ಶ್ರೇಯಾ ಕಂಗಾಲಾಗಿ ಬಿಕ್ಕುತ್ತಾಳೆ. ಆದರೂ "ಅಬ್ ತೇರೆ ಬಿನ್ ಜೀ ಲೇಂಗೆ ಹಮ್, ಜೆಹರ್ ಜಿಂದಗಿ ಕಾ ಪೀಲೇಂಗೆ ಹಮ್" ಎಂದು ಕುಮಾರ ಸಾನು ಧೈರ್ಯ ತುಂಬಿ ಬದುಕಿನೆಡೆಗೆ ಹೊಸ ಆಸೆಗಳನ್ನು ಹುಟ್ಟಿಸುತ್ತಾನೆ.
ಮುಂದೆ ನಿಮ್ಮ ಮದುವೆ ಬೇರೆ ಯಾರದೋ ಜೊತೆ ಆಗಿ, ನಂತರ ಸಹಜ ಪರಿಣಾಮವಾದ ಮಕ್ಕಳು ನಿಮ್ಮ ಮಡಿಲು ತುಂಬಿದ ಮೇಲೆ ಅವರನ್ನು ಮುದ್ದಿಸಲು, ಲಾಲಿ ಹಾಡಿ ಮಲಗಿಸಲು ಮತ್ತಷ್ಟು ಹಾಡುಗಳು. ಮಕ್ಕಳು ಶಾಲೆಗೆ ಹೊರಟ ನಂತರ "ಅ ಆ ಇ ಈ ಕನ್ನಡದಾ ಅಕ್ಷರ ಮಾಲೆ, ಅಮ್ಮಾ ಎಂಬುದು ಕಂದನ ಕರುಳಿನ ಕರೆಯೋಲೆ" ಹಾಡು, "ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು" ಹಾಡು ಎಲ್ಲ ಸಾಲಾಗಿ ಶಿಸ್ತಾಗಿ ಬಂದು ಕೈಕಟ್ಟಿ ನಿಲ್ಲುತ್ತವೆ.
ನಂತರ ಅದೃಷ್ಟವಶಾತ್ ನಿಮ್ಮ ಸಂಸಾರ ಸುಖಮಯವಾಗಿದ್ದಲ್ಲಿ "ನಮ್ಮ ಸಂಸಾರಾ ಆನಂದ ಸಾಗರಾ, ಪ್ರೀತಿಯೆಂಬ ದೈವವೇ ನಮಗಾಧಾರಾ" ಎಂದು ಮನೆಮಂದಿಯೆಲ್ಲ ಕೂಡಿ ಕೋರಸ್ ಹಾಡಿ. ಇಲ್ಲವೇ "ಮುಳ್ಳೇ ಇಲ್ಲದ ಗುಲಾಬಿ ಹೂಗಳು ನಾವೆಲ್ಲಾ, ಪ್ರೇಮದ ಪರಿಮಳ ತುಂಬಿದೆ ನಮ್ಮಾ ಒಡಲೆಲ್ಲಾ" ಎಂದು ಸಂತಸ ಪಡಿ. ಸುಖವೆಂಬುದು ಮರೀಚಿಕೆಯಾಗಿದೆಯೇ, "ಹರುಷ ದೂರದ ಮೇರು ಏರದೆನ್ನಾ ಬಾಳ ತೇರು, ಪಯಣಾ ಏರುಪೇರು" ರೆಡಿ ಇದೆ. ಹಳೆಗೆಳತಿಯ ನೆನಪು ಅಲೆಅಲೆಯಾಗಿ ಬಂದು ಬಂಡೆಗಲ್ಲು ಮಾಡಿಕೊಂಡರೂ ನಿಮ್ಮ ಮನಸ್ಸಿಗಪ್ಪಳಿಸುತ್ತಿದೆಯೇ, "ಯಾದ ನ ಜಾಯೆ ಬೀತೆ ದಿನೊಂ ಕಿ, ಜಾಕೆ ನ ಆಯೆ ಜೋ ದಿನ ದಿಲ ಕ್ಯೂಂ ಬುಲಾಯೆ ಉನ್ಹೆ" ಎಂದು ಉತ್ತರವಿಲ್ಲದ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಸಂಕಟಪಟ್ಟು ಒದ್ದಾಡಿ ಒದ್ದಾಡಿ ಎಂಜಾಯ್ ಮಾಡಿ. ಜೀವನದ ಸುಖ-ದುಃಖಗಳನ್ನುಂಡು ಮೈ-ಮನಸ್ಸು ಮಾಗಿದ ಮೇಲೆ ನಡಗುವ ಧ್ವನಿಯಲ್ಲಿ ಎಂ. ಬಾಲಮುರಳಿಕೃಷ್ಣ ಅವರು ನಿಮಗಾಗಿಯೇ ಹಾಡಿದ "ದೇವರು ಹೊಸೆದಾ ಪ್ರೇಮದ ದಾರ" ಕೇಳುತ್ತ  ಕಣ್ಣೀರಾಗಿ. ಜೀವನದ ಬಿರುಬಿಸಿಲು, ಧಾರಾಕಾರ ಮಳೆ, ಕೆಟ್ಟ ಛಳಿ ಎಲ್ಲವನ್ನೂ ಒಂದೇ ಹಾಡಿನಲ್ಲಿ ಅನುಭವಿಸಿಬಿಡಿ. ಇಳಿವಯಸ್ಸಿಗೆ "ಎಲ್ಲಿಗೆ ಪಯಣಾ, ಯಾವುದೋ ದಾರಿ ಏಕಾಂಗಿ ಸಂಚಾರಿ" ಎಂದು ಹಾಡುತ್ತ ಪಿ.ಬಿ.ಶ್ರೀ. ಊರುಗೋಲಾಗುತ್ತಾರೆ. ದಾಸವರಣ್ಯರು ಹಾಡುಗಳಲ್ಲೇ ವೇದಾಂತದ ಸಾರವನ್ನೆಲ್ಲ ತಿಳಿಸಿ ಪೊರೆಯುತ್ತಾರೆ. 
ಅಂತೂ ಹುಟ್ಟಿನಿಂದ ಸಾವಿನವರೆಗೆ ಈ ಸಿನೆಮಾ ಹಾಡುಗಳ ನಂಟು ಬಿಡದೇ ಕಾಡುವುದು, ಕಾಯುವುದು. ಒಮ್ಮೆಯೂ ಒಂದೂ ಸಿನೆಮಾ ಹಾಡು ಗುಣುಗುಣಿಸದ ಭಾರತೀಯನೇ ಇರಲಿಕ್ಕಿಲ್ಲ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅಷ್ಟರ ಮಟ್ಟಿಗೆ ಸಿನೆಮಾ ಹಾಡುಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾವೆಲ್ಲ ಇಂಥ ರಸಿಕಶಿಖಾಮಣಿಗಳು ಇರುವುದರಿಂದಲೇ ನಮ್ಮ ಗಾಯಕರು, ಸಂಗೀತಕಾರರು, ಗೀತರಚನೆಕಾರರು ಪ್ರಸಿದ್ಧಿಯ ಉತ್ತುಂಗ ಶಿಖರಕ್ಕೇರಿದ್ದಾರೆ. ತೆರೆಯ ಮೇಲೆ ನಾಯಕ-ನಾಯಕಿಯೇ ಮುಖ್ಯವಾದರೂ ಅವರಿಗೆ ಕಂಠವಾಗಿ, ಅವರ ಭಾವನೆಗಳನ್ನೆಲ್ಲ ತಮ್ಮ ಗೀತೆಗಳಿಂದಲೇ ವಿಜ್ರಂಭಿಸುವ ಗಾಯಕರು ಸ್ವತಃ ನಾಯಕರಾಗಿ ಬಿಟ್ಟಿದ್ದಾರೆ. ಜನಸಾಮಾನ್ಯರ ಆರಾಧ್ಯದೈವವೇ ಅವರು.
ಈಗ ಒಮ್ಮೆ ಯೋಚಿಸಿ, ಈ ಎಲ್ಲ ಹಾಡುಗಳೇ ಇಲ್ಲದ ನಮ್ಮ ಜೀವನ ಅದೆಷ್ಟು ಬರಡಾಗುತ್ತಿತ್ತು!
                      *******************
ನೀತಾ ರಾವ್




Sunday, 4 November 2018

                  ಲಲಿತ ಪ್ರಬಂಧ

        ಮಹಿಳಾ ಸಬಲೀಕರಣದ ಗಾಲಿಗಳು
      (ವಾಹನ ಪುರಾಣ ಎಂಬ ಹೆಸರಿನಲ್ಲಿ ದಿನಾಂಕ ೪ ನವ್ಹೆಂಬರ್, ೨೦೧೮ ರಂದು ಉದಯವಾಣಿಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾದದ್ದು)

       ಹಿಂದೊಮ್ಮೆ ಯಾವಾಗಲೋ ಐದು-ಆರನೇ ಕ್ಲಾಸಿನಲ್ಲಿರುವಾಗ, ಮನೆಗೊಂದು ಸೈಕಲ್ ಕೂಡ ಇಲ್ಲದ ಕಟಾನುಕಟಿ ದಿನಗಳಲ್ಲಿ ಒಂದು ತಾಸಿಗೆ ನಾಲ್ಕಾಣೆಯಂತೆ ನೀಡಿ ಬಾಡಿಗೆ ಸೈಕಲ್ ತಂದು ನಾನು, ನನ್ನ ಗೆಳತಿಯರು ಓಣಿಯ ತುಂಬ ಬೀಳುತ್ತ ಏಳುತ್ತ ಅಂತೂ ಸೈಕಲ್ ಕಲಿತೇ ಸೈ ಎಂದಿದ್ದೆವು. ಆದರೆ ಮುಂದೆ ಹೈಸ್ಕೂಲಿಗೆ ಹೋಗುವಾಗ ಆಗಲಿ, ದೂರದ ಕಾಲೇಜಿಗೆ ಕಾಲೆಳೆದುಕೊಂಡು ನಡೆದು ಹೋಗುವ ಸಮಯದಲ್ಲಾಗಲಿ, ಸೈಕಲ್ಲೊಂದನ್ನು ಕೊಂಡು ಸಮಯ ಉಳಿಸಬಹುದೆಂಬ ಪರಿಜ್ಞಾನ ನಮಗಾಗಲಿ ನಮ್ಮ ಪಾಲಕರಿಗಾಗಲಿ ಎಂದೂ ಮೂಡಲೇ ಇಲ್ಲವಲ್ಲ! ನಡೆಯುವುದೇ ಎಲ್ಲರ ನಿತ್ಯ ಕಾಯಕದ ಮುಖ್ಯ ಭಾಗವಾದ ಆ ದಿನಗಳಲ್ಲಿ, ತೀರಾ ದೂರವೆನಿಸಿದ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನೇ ಹೊತ್ತೊಯ್ಯುತ್ತ ಯೌವನದಿಂದ ತುಂಬಿ ತೊನೆದಾಡುತ್ತಿದ್ದ ಸಿಟಿ ಬಸ್‍ಗಳ ಜಮಾನಾದ ಎಂಬತ್ತು-ತೊಂಬತ್ತರ ದಶಕಗಳಲ್ಲಿ ಸೈಕಲ್ಲೊಂದಕ್ಕೆ ರೇಟೇನಿರಬಹುದೆಂದು ಕೂಡ ನಾವ್ಯಾರೂ ತಲೆ ಕೆಡಿಸಿಕೊಂಡವರಲ್ಲ. ಕಾಲುಗಳೆಂಬ ಹನ್ನೊಂದು ನಂಬರಿನ ಗಾಡಿ ನಮ್ಮಲ್ಲಿರುವಾಗ, ಮತ್ತವು ಸಾಕಷ್ಟು ಗಟ್ಟಿಯಿರುವಾಗ ಬೆಳಿಗ್ಗೆ ಹತ್ತು ಗಂಟೆಯ ಕ್ಲಾಸಿಗೆ ಒಂಬತ್ತೂ ನಲವತ್ತಕ್ಕೆಲ್ಲ ಮನೆ ಬಿಟ್ಟು ಕಾಲೇಜು ಸೇರುತ್ತಿದ್ದ ನಮಗೆ ಅದೊಂದು ಪ್ರಯಾಸದ ಕೆಲಸವೆಂದು ಯಾವತ್ತೂ ಅನಿಸಿರಲೇ ಇಲ್ಲ, (ಎರೆಡು ಹೆಜ್ಜೆಗೆ ಸೈಕಲ್- ಬೈಕ್ ಅಂತ ತಲೆ ತಿನ್ನುವ ಮಕ್ಕಳಿಗೆ ಈಗ ಇದನ್ನೆಲ್ಲ ಹೇಳಿದರೆ ನಿಮ್ಮ ಕಾಲದ ಗತವೈಭವದ ರೀಲು ಈಗ ಬಿಡಬೇಡ, ಆಗ ಹಾಗಿತ್ತು, ಈಗ ಬೇರೆಯಾಗಿದೆ ಎನ್ನುತ್ತಾರೆ.) ಈ ಜನ್ಮದಲ್ಲಿ ನಾನೂ ಒಂದು ದ್ವಿಚಕ್ರ ವಾಹನದ ಮೇಲೆ ಕುಳಿತು ತಿರುಗಾಡಬಹುದೆಂಬ ದುಬಾರಿ ಕನಸನ್ನು ಹಗಲಿನಲ್ಲಾಗಲಿ ಇರುಳಿನಲ್ಲಾಗಲಿ ಕಂಡದ್ದೇ ಇಲ್ಲ. ನಮ್ಮ ಮನೆಯೇ ಅಂತಲ್ಲ, ನಮ್ಮ ಸುತ್ತಮುತ್ತಲಿನ ಯಾರ ಮನೆಗಳಲ್ಲೂ ಯಾವುದೇ ವಾಹನಗಳು ಇರಲಿಲ್ಲ. ಕೆಲವರ ಮನೆಗಳ ಪಡಸಾಲೆಗಳಲ್ಲಿ ಗೋಡೆಗೊರಗಿ ನಿಂತ ಸೈಕಲ್ಲುಗಳ ಮೇಲೆ ನನಗಂತೂ ಎಂದೂ ಲವ್ವಾಗಿರಲಿಲ್ಲ. ಯಾರೋ ಕೆಲವರ ಮನೆಗಳಲ್ಲಿ ಅನುಕೂಲವಿದ್ದವರು ಬಜಾಜ ಸ್ಕೂಟರಿಗೆ ನಂಬರು ಹಚ್ಚಿ ವರ್ಷಾನುಗಟ್ಟಲೇ ಕಾದು ನಂಬರು ಬಂದಾಗ ಅದನ್ನು ಬೇರೆಯವರಿಗೆ ಕೊಟ್ಟು ಅದರ ಮೇಲೊಂದಿಷ್ಟು ಹೆಚ್ಚಿಗೆ ದುಡ್ಡು ಇಸಿದುಕೊಂಡು ಫಾಯಿದೆ ಮಾಡಿಕೊಳ್ಳುತ್ತಿದ್ದರೇ ವಿನಹ ತಾವೇ ಕೊಂಡು ಸವಾರಿ ಮಾಡುವಷ್ಟು ಹವ್ಯಾಸವನ್ನು ಬೆಳೆಸಿಕೊಂಡಿರಲಿಲ್ಲ. 
     ನಾವು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನಮ್ಮ ಎಲ್ಲ ಲೆಕ್ಚರರುಗಳು ಕೂಡ ನಡೆದೇ ಬರುತ್ತಿದ್ದರು. ಕೇವಲ ಒಬ್ಬರ ಬಳಿ ಲ್ಯಾಂಬ್ರೆಟ್ಟಾ ಎನ್ನುವ ಸ್ಕೂಟರ್ ಇತ್ತು ಮತ್ತದು ಫಡ್ ಫಡ್ ಸಪ್ಪಳವಿಲ್ಲದೇ ಬರುತ್ತಿರಲಿಲ್ಲ. ನಮ್ಮ ಒಬ್ಬನೇ ಒಬ್ಬ ಕ್ಲಾಸಮೇಟನ ಹತ್ತಿರ, ಆಗ ಬಹಳ ಚಾಲ್ತಿಯಲ್ಲಿದ್ದ ಇಂಡ್-ಸುಝುಕಿ ಬೈಕ್ ಇತ್ತು. ಅದರ ಮೇಲೆ ಅವನು ಭರ್ ಎಂದು ಹೋಗುವುದನ್ನು ನೋಡಿದಾಗಲೆಲ್ಲ ಎರೆಡು ಫೀಲಿಂಗಗಳು ನನ್ನನ್ನು ಕಾಡುತ್ತಿದ್ದವು. ಒಂದು, ನಾನು ಮದುವೆಯಾಗುವ ಹುಡುಗನ ಹತ್ತಿರವೂ ಒಂದು ಬೈಕಿರಬೇಕು, ಇನ್ನೊಂದು ಈ ನಮ್ಮ ಕ್ಲಾಸಮೇಟ್ ಮಹಾರಾಯ ಈ ರೀತಿ ಜೋರಾಗಿ ಗಾಡಿ ಓಡಿಸಿದರೆ ಖಂಡಿತಾ ಬಿದ್ದು ಅವಘಡ ಮಾಡಿಕೊಳ್ಳುತ್ತಾನೆ ಅಂತ. ಪುಣ್ಯವಶಾತ್ ಅಂಥದ್ದೇನೂ ಆಗಲಿಲ್ಲ. ಮತ್ತೆ ನನ್ನ ಪತಿರಾಯರು ಮದುವೆಗೆ ಒಂದಷ್ಟೇ ದಿನ ಮೊದಲು ಒಂದು ಸೆಕೆಂಡ್ ಹ್ಯಾಂಡ್ ಲೂನಾ ಖರೀದಿಸಿ ನನ್ನನ್ನು ನಿರಾಸೆಯ ಕೂಪಕ್ಕೆ ತಳ್ಳಿದರೂ ಮುಂದೆ ಮೂರು ಬೇರೆ ಬೇರೆ ಬೈಕುಗಳ ಮೇಲೆ ನನ್ನನ್ನು ಹತ್ತಿಸಿಕೊಂಡು ತಿರುಗಾಡಿದರು. ಇದೀಗ ರಾಯಲ್ ಎನ್‍ಫೀಲ್ಢನ ದುರಾಸೆಗೆ ಬಿದ್ದು ಅದರ ಭಾರವನ್ನು ನಿಭಾಯಿಸುವುದರಲ್ಲೇ ಬೆವರಿಳಿಸುತ್ತಿರುವಾಗ ನನ್ನ ಭಾರವನ್ನೂ ಅವರ ಮೇಲೆ ಹಾಕುವುದು ಬೇಡವೇ ಬೇಡವೆಂದುಕೊಂಡು ಬೈಕಿನ ಬಗ್ಗೆ ನಿರ್ಮೋಹಿಯಾಗಿಬಿಟ್ಟಿದ್ದೇನೆ.
      ನಾನು ಬ್ಯಾಂಕಿನ ಕೆಲಸಕ್ಕೆ ಸೇರಿ ವಿಜಾಪುರಕ್ಕೆ ಹೊದಾಗ ನಾನೂ ಒಂದು ಸೈಕಲ್ಲಾದರೂ ಕೊಳ್ಳಬೇಕೆಂಬ ಆಸೆ ಬಲವತ್ತರವಾಯಿತು. ಇಬ್ರಾಹಿಂಪುರದ ಹತ್ತಿರದ ನನ್ನ ಬಾಡಿಗೆ ಮನೆಯಿಂದ ಒಂದಿಷ್ಟು ನಡೆದು ಬಸ್ಟಾಪ್ ತಲುಪಿ ನಂತರ ಸಿಟಿ ಬಸ್ ಹಿಡಿದು ಮಿನಾಕ್ಷಿ ಚೌಕಿನಲ್ಲಿ ಇಳಿದುಕೊಂಡು ಮತ್ತೆ ಅಲ್ಲಿಂದ ಸಿದ್ಧೇಶ್ವರ ರೋಡಿನಲ್ಲಿದ್ದ ನನ್ನ ಬ್ಯಾಂಕಿಗೆ ತಲುಪಿದಾಗ ಹತ್ತು ಇಲ್ಲವೇ ಹತ್ತೂ-ಕಾಲು ಆಗಿರುತ್ತಿತ್ತು. ಇನ್ನೂ ಹತ್ತು ಹದಿನೈದು ನಿಮಿಷ ಉಳಿದಿರುತ್ತಿತ್ತು. ಈ ಎಲ್ಲ ಧಾವಂತಕ್ಕಿಂತ ಒಂದು ಸೈಕಲ್ ಕೊಂಡುಬಿಟ್ಟರೆ ಹತ್ತು ಗಂಟೆಗೆ ಮನೆ ಬಿಟ್ಟರೂ ಆರಾಮವಾಗಿ ಟೈಮಿಗೆ ಸರಿಯಾಗಿ ನಾನು ಬ್ಯಾಂಕ್ ತಲುಪಬಹುದಾಗಿತ್ತು. ಆದರೆ ನನ್ನಾಸೆಯನ್ನು ನಾನು ಯಾರ ಮುಂದೆಯೂ ಹೇಳಲು ಹೋಗಲೇ ಇಲ್ಲ, ಸ್ವತಃ ನಿರ್ಣಯವನ್ನೂ ಮಾಡಲಿಲ್ಲ. ಹೀಗಾಗಿ ಸೈಕಲ್ ಕೊಳ್ಳುವ ನನ್ನ ಕನಸು ಕನಸಾಗಿಯೇ ಉಳಿದುಹೋಗಿದೆ. ಈಗ ಕೊಳ್ಳಬಹುದಾದರೂ ನನ್ನ ಭಾರವಾದ ದೇಹವನ್ನು ಹೊತ್ತುಕೊಂಡು ಅದು ಕಿರ್ ಕಿರ್ ಎಂದು ಕಿರುಚುವುದು ಬೇಡವೆಂದು ನಾನೇ ಸುಮ್ಮನಾಗಿದ್ದೇನೆ. ಮದುವೆಯ ನಂತರ ಮಧ್ಯೆ ಒಂದಿಷ್ಟು ದಿನಗಳು ಹುಬ್ಬಳ್ಳಿಯಿಂದ ಗದಗವರೆಗೆ ಮಾಡಿದ ಪ್ರಯಾಣದಲ್ಲಿ ನಮ್ಮ ಲೂನಾ, ಸಿಟಿ ಬಸ್ಸುಗಳು ಮತ್ತು ರೈಲು ಎಲ್ಲ ಪ್ರಕಾರದ ವಾಹನಗಳು ಏಕಪ್ರಕಾರವಾಗಿ ನನಗೆ ಸೇವೆ ಒದಗಿಸಿ ಕೃತಾರ್ಥವಾಗಿವೆ.
      ಮತ್ತೆ ಬೆಳಗಾವಿಗೆ ಬಂದಾಗ ಆಗಿನ್ನೂ ಬಜಾಜ ಚೇತಕ ಸ್ಕೂಟರನ್ನು ಕೊಂಡಿದ್ದ ಪತಿರಾಯರು ದಿನಾಲೂ ಸಂಜೆ ಬ್ಯಾಂಕು ಬಿಡುವ ಹೊತ್ತಿಗೆ ಬಾಗಿಲಿನ ಎದುರು ಹಾಜರಾಗಿ ಹಾರ್ನ ಹಾಕಿದರೆಂದರೆ ಸಹೋದ್ಯೋಗಿಗಳ ಬಾಯಿಂದ ನಾನಾ ರೀತಿಯ ಕಮೆಂಟುಗಳು ಉದುರುತ್ತಿದ್ದವು. "ನಿನ್ನ ಪೈಲಟ್ ಬಂದರು, ಓಡು", "ನಿನ್ನ ಡ್ರೈವರ್ ಹಾಜರಾದರು ಹೊರಡು", ಹೀಗೆ ಕಾಲೆಳೆಯುತ್ತಿದ್ದರು. ಅಂತೂ ಹೀಗೆ ನನ್ನ ಕಾಲುಗಳನ್ನು, ಇವರ ಸ್ಕೂಟರನ್ನು ನಂಬಿಕೊಂಡು ವರ್ಷಗಳನ್ನೇ ತಳ್ಳಿದ್ದಾಯ್ತು.
     ನಾನು ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಮಹಿಳಾ ಸಹಕಾರಿ ಬ್ಯಾಂಕಿಗೆ ಮ್ಯಾನೇಜರ್ ಆಗಿ ಸೇರಿಕೊಂಡ ಮೇಲೆ ಮಾತ್ರ ಅಲ್ಲಿನ ಆಡಳಿತ ಮಂಡಳಿಯವರು, "ಮ್ಯಾನೇಜರ್ ಎಂದಮೇಲೆ ಹೊರಗೆ ತಿರುಗಾಟ ಇದ್ದೇ ಇರುತ್ತದೆ, ನಾವೇ ಸಾಲ ಕೊಡುತ್ತೇವೆ, ಒಂದು ದ್ವೀಚಕ್ರ ವಾಹನವನ್ನು ಖರೀದಿಸಲೇಬೇಕು" ಎಂದು ಖಡಾಖಂಡಿತವಾಗಿ ಹೇಳಿದ ಮೇಲೆ ನಾನು ನನ್ನ ಸ್ವಂತ ವಾಹನದ ಮೇಲೆ ವಿರಾಜಮಾನಳಾದೆ. ಆಗಿನ್ನೂ ಹೊಸದಾಗಿ ಟಿವಿಎಸ್ ಸ್ಕೂಟಿ ಬಂದಿತ್ತು. ನೋಡಲು ತೆಳ್ಳಗೆ ಕ್ಯೂಟಾಗಿತ್ತು. ಮತ್ತೆ ಅದಾಗಲೇ ಸಾಕಷ್ಟು ಸದ್ದು ಮಾಡಿ ಮೈಲೇಜ್ ಸಾಧಿಸಿದ್ದ ಕೈನೆಟಿಕ್ ಹೊಂಡಾ ಗಾಡಿಗಿಂತ ತೂಕ ಮತ್ತು ಬೆಲೆ ಎರಡರಲ್ಲೂ ಹಗುರವಾಗಿತ್ತು. ಹಾಗಾಗಿ ನನ್ನ ನ್ಯಾಚರಲ್ ಚಾಯ್ಸ್ ಸ್ಕೂಟಿನೇ ಆಗಿತ್ತು. ನಮ್ಮ ಬ್ಯಾಂಕಿನ ಮಹಿಳಾ ಅಕೌಂಟಂಟ್ ತನ್ನ ಎತ್ತರ ಮತ್ತು ಗಾತ್ರಕ್ಕೆ ತಕ್ಕಂತೆ ಕೈನಿ ಕೊಂಡಿದ್ದಳು. ಇನ್ನಿಬ್ಬರು ಮಹಿಳಾ ಸ್ಟಾಫ್ ಆಗಿನ್ನೂ ವಾಹನ ಕೊಂಡಿರಲಿಲ್ಲ. ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಪ್ರಾರಂಭವಾದ, ಮಹಿಳಾ ನಿರ್ದೇಶಕರು ಮತ್ತು ಉದ್ಯೋಗಿಗಳೇ ಇದ್ದ ಬ್ಯಾಂಕು ನಮ್ಮದು. ಎಂದೆಂದೂ ಬ್ಯಾಂಕಿನ ಮೆಟ್ಟಲನ್ನೇ ಏರದ, ಕೇವಲ ಅಡುಗೆ ಮತ್ತು ಮನೆಗೆಲಸಗಳಲ್ಲಿ, ಶ್ರಾವಣದ ವ್ರತಗಳು, ದೀಪಾವಳಿಯ ಫರಾಳಗಳು, ಅಮಾವಾಸ್ಯೆಯ ಹೋಳಿಗೆ ಎಡೆಗಳು ಇವುಗಳಲ್ಲೇ ಕಳೆದು ಹೋದ ಸುತ್ತಮುತ್ತಲಿನ ಹೆಣ್ಣುಮಕ್ಕಳನ್ನು ಬ್ಯಾಂಕಿನ ಮೆಟ್ಟಲೇರುವಂತೆ, ತಮ್ಮದೇ ಒಂದು ಖಾತೆಯನ್ನು ತೆರೆಯುವಂತೆ ಮನವೊಲಿಸಲು ನಾವು ನಮ್ಮೆಲ್ಲ ಜಾಣತನವನ್ನು ಖರ್ಚು ಮಾಡುತ್ತಿದ್ದ ಕಾಲವದು. ಜನರೊಂದಿಗೆ ಬೆರೆಯುವುದರಿಂದ ಮಾತ್ರ ಬ್ಯಾಂಕಿಂಗನ್ನು ಬೆಳೆಸಬಹುದೆಂದು ನಾವೆಲ್ಲ ಬಲವಾಗಿ ನಂಬಿದ್ದರಿಂದ ಯಾರು ಯಾವ ಸಭೆ-ಸಮಾರಂಭಗಳಿಗೇ ಕರೆದರೂ ತಪ್ಪದೇ ಹಾಜರಿ ಕೊಡುತ್ತಿದ್ದೆವು. ನಮ್ಮ ಎರೆಡು ದ್ವಿಚಕ್ರ ವಾಹನಗಳ ಮೇಲೆ ನಾವು ನಾಲ್ಕು ಜನ ಮಹಿಳಾ ಸಿಬ್ಬಂದಿ ಎಲ್ಲೆಂದರಲ್ಲಿ ಅಲೆಯಲು ಶುರು ಮಾಡಿ ಸಾಕಷ್ಟು ಹೆಸರು ಮಾಡಿದೆವೆಂದೇ ಹೇಳಬೇಕು. ನಮ್ಮ ಗಾಡಿಗಳಿಗೆ ಸ್ಟ್ಯಾಂಡ್ ಹಾಕಿ ನಿಲ್ಲಿಸುವಷ್ಟರಲ್ಲಿ "ಮಹಿಳಾ ಬ್ಯಾಂಕಿನವರು ಬಂದ್ರು" ಅಂತ ಹೆಣ್ಣುಮಕ್ಕಳು, ಅವರ ಗಂಡಂದಿರು ಮಾತನಾಡಿಕೊಂಡು ಸಂಭ್ರಮ ಪಡುವಷ್ಟರ ಮಟ್ಟಿಗೆ ನಮ್ಮ ಕೀರ್ತಿಪತಾಕೆಗಳು ಹಾರಾಡಲು ಕಾರಣ ನಮ್ಮ ಈ ಎರೆಡು ದ್ವಿಚಕ್ರ ವಾಹನಗಳೇ ಆಗಿದ್ದವೆಂದು ನಾನಂತೂ ಬಲವಾಗಿ ನಂಬಿದ್ದೇನೆ. ಎಲ್ಲೆಂದರಲ್ಲಿ, ಯಾವಾಗ ಬೇಕೆಂದಾಗ, ಯಾರ ಮರ್ಜಿಗೂ ಕಾಯದೇ ನಾವು ನಾವೇ ನಮ್ಮ ಪ್ರೀತಿಯ ವಾಹನಗಳ ಮೇಲೆ ಹೆಮ್ಮೆಯಿಂದ ಕುಳಿತು ಓಡಾಡಿದಾಗ ಸ್ತ್ರೀಸ್ವಾತಂತ್ರ್ಯದ ಎರಡನೇಯ ಮಜಲನ್ನು ಮುಟ್ಟಿ ಆನಂದ ಪಟ್ಟಿದ್ದೆವು.
     ಮಕ್ಕಳು ಮರಿಗಳೆಂದು ನಮ್ಮ ಸಂಸಾರದ ಜವಾಬ್ದಾರಿಗಳೂ ಬೆಳೆಯಲಾರಂಭಿಸಿದಾಗ, ಈ ಕಡೆ ಆಫೀಸಿನ ಕೆಲಸಗಳೂ ವಿಪರೀತವಾಗಿ ತೊಡಗಿಸಿಕೊಳ್ಳಲಾರಂಭಿಸಿದಾಗ ಇವೇ ವಾಹನಗಳು ನಮ್ಮ ಆಪದ್ಬಾಂಧವರಾಗಿ ಕೆಲಸಗಳನ್ನೆಲ್ಲ ಹಗುರಗೊಳಿಸಿದವು. ಬೆಳಿಗ್ಗೆ ಶಾಲೆಗೆ ಹೋದ ಮಗರಾಯ ಸಂಜೆ  ಅಜ್ಜಿಯ ಮನೆ ತಲುಪಿ, ಒಂದಿಷ್ಟು ತಿಂಡಿ ತಿಂದು ಆಟವಾಡುವ ಹೊತ್ತಿಗೆ ಸರಿಯಾಗಿ ಹೋಗಿ ಅವನನ್ನು ಕರೆದುಕೊಂಡು, ಬರುಬರುತ್ತ ಮಾರ್ಕೆಟ್ಟಿನಲ್ಲಿ ತರಕಾರಿ ಕೊಂಡು, ಮತ್ತೇನೋ ಮನೆಗೆ ಬೇಕಾಗುವ ನೂರೆಂಟು ಸಾಮಾನುಗಳಲ್ಲಿ ಅರ್ಜೆಂಟಿಗೆ ಬೇಕಾದದ್ದನ್ನು ಕೊಂಡು ನಮ್ಮ ಮತ್ತು ವಾಹನದ ಎಡ-ಬಲಗಳಲ್ಲೂ ಹಾಕಿ ಹರಡಿ ಮನೆ ಮುಟ್ಟುವುದೆಂದರೆ ನಿತ್ಯ-ಯುದ್ಧ ಗೆದ್ದು ಬಂದಂತೆ. ಅಂಥ ಯುದ್ಧಗಳಲ್ಲಿ ನನ್ನ ಸ್ಕೂಟಿಯೇ ನನ್ನ ರಥ. ಒಮ್ಮೊಮ್ಮೆ ಕೆಲಸ ಹೆಚ್ಚಾಗಿ ಇನ್ನೂ ದಾರಿಯಲ್ಲಿರುವಾಗಲೇ ಆಗಸವೆಲ್ಲ ಕಪ್ಪಡರಿ ಬೆಳ್ಳಿ ನಕ್ಷತ್ರಗಳು ಫಳ-ಫಳ ಹೊಳೆಯಲಾರಂಭಿಸುವಷ್ಟು ತಡವಾದಾಗ, ಇದೇ ಸ್ಕೂಟಿಯ ಮೇಲೆ ಹಿಂಬದಿಯ ಸವಾರನಾಗಿ ಬೆರಗುಗಣ್ಣುಗಳಿಂದ ಬಾನಂಗಳವನ್ನೇ ನೋಡುತ್ತಿದ್ದ ಮಗನಿಗೆ ನಿದ್ದೆ ಬರಲೆಂದು ರಾತ್ರಿ ಹೇಳಿರುತ್ತಿದ್ದ ಕಥೆಗಳೆಲ್ಲ ಮನದ ಓಣಿಯ ತುಂಬ ಮೆರವಣಿಗೆ ಹೊರಟು, "ಅಮ್ಮಾ ಈಗ ಗಣಪ್ಪ ಅಲ್ಲಿ ಆಕಾಶದಲ್ಲಿ ಇಲಿಯ ಮೇಲೆ ಕುಳಿತು ಮನೆಗೆ ಹೊರಟಿದ್ದಾನೆಯೇ?" ಎಂದು ಪ್ರಶ್ನೆ ಎಸೆಯುತ್ತಿದ್ದ. ಅದಕ್ಕೇನಾದರೂ ಉತ್ತರ ಕೊಟ್ಟು ಮುಂದೆ ಸಾಗುತ್ತಿದ್ದಂತೇ "ಅಮ್ಮಾ ಈಗ ಯಾವ್ಯಾವ ದೇವರು ಆಕಾಶದಲ್ಲಿ ಸಂಚರಿಸುತ್ತಿದ್ದಾರೆ?" ಎಂದು ಇನ್ನೊಂದು ಪ್ರಶ್ನೆ. ಅವನಿಗೆ ಕನ್ವಿನ್ಸ್ ಆಗುವ ರೀತಿಯಲ್ಲಿ ಉತ್ತರ ಕೊಡುವುದಕ್ಕೆ ಗೋಳಾಡುತ್ತ ಮನೆಗೆ ಬರುವುದು. ಮಳೆಗಾಲದಲ್ಲಿ ಮಾತ್ರ ಈ ಸ್ಕೂಟಿಯ ಸಹವಾಸವೇ ಬೇಡ ಎನ್ನುವಷ್ಟು ಹೆದರಿಕೆ, ತಾಪತ್ರಯ. ಆದರೂ ಅದಿಲ್ಲದೇ ಈ ಜೀವನವೇ ನಿಂತು ಹೋಗುತ್ತದೆನ್ನುವಷ್ಟು ಅವಲಂಬನೆ.
      ಬರೀ ಆರ್ಥಿಕ ಸ್ವಾತಂತ್ರ್ಯವಷ್ಟೇ ಮಹಿಳಾ ಸಬಲೀಕರಣವಲ್ಲ, ಸ್ವತಂತ್ರವಾಗಿ ಓಡಾಡುವ ಸ್ವಾತಂತ್ರ್ಯವೂ ಸೇರಿದಾಗ ಮಾತ್ರ ನಿಜ ಅರ್ಥದ ಮಹಿಳಾ ಸಬಲೀಕರಣ ಎಂದೆಲ್ಲ ಆಗಲೇ ಅನಿಸಿದ್ದು ಅದು ಇಂದಿಗೂ ಸುಳ್ಳಲ್ಲ ಎಂದು ಮನದಟ್ಟಾದದ್ದು ಎಲ್ಲವೂ ಈ ನನ್ನ ಪುಟ್ಟ ದ್ವಿಚಕ್ರ ವಾಹನದ ದೆಸೆಯಿಂದಲೇ.
     ನಂತರದ ದಿನಗಳಲ್ಲಿ ನಾನು ಇಷ್ಟಪಟ್ಟು ಮಾರುತಿ ಕಾರನ್ನು ಒಲಿಸಿಕೊಳ್ಳಲು ಹೊರಟರೂ ಅದೇಕೋ ಕೈಗೂಡದೇ ಭಗ್ನಪ್ರೇಮದಲ್ಲಿ ಪರ್ಯವಸಾನವಾಯಿತು. ಈ ವಿದ್ರೋಹದಲ್ಲಿ ಹೊರಗಿನ ಜನರ ಜೊತೆಜೊತೆಗೆ ನನ್ನ ಮನೆಮಂದಿಯೂ ಅಷ್ಟೇ ಪ್ರಮಾಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ನನ್ನ ಸಂಶಯ ಇಂದಿಗೂ ಬಲವಾಗಿಯೇ ಇದೆ. ಹೊಸದಾಗಿ ಕಾರು ಕಲಿತ ನಾನು ಎರಡನೇ ಮಗನನ್ನು ತಾಯಿಯ ಮನೆಯಲ್ಲಿ ಬಿಟ್ಟು ಬ್ಯಾಂಕಿಗೆ ಹೋಗಬೇಕಿತ್ತು. ಕಾರಿನಲ್ಲಿ ಅವನನ್ನು ಕೂರಿಸಿಕೊಂಡು ಹೋಗುವಾಗ ಏನಾದರೊಂದು ಕಸರತ್ತು ಮಾಡಿ ಧೊಪ್ಪೆಂದು ಬೀಳುತ್ತಿದ್ದ. ಬಿಝಿ ರೋಡಿನಲ್ಲಿ ನಾನು ರಸ್ತೆಯ ಮೇಲೆ ಗಮನ ಕೊಡಲೋ, ಬಿದ್ದು ಅಳುತ್ತಿರುವ ಮಗನನ್ನು ಎತ್ತಿಕೊಳ್ಳಲೋ ತಿಳಿಯದೇ ಚಡಪಡಿಸುವಂತಾಗುತ್ತಿತ್ತು. ನಾನು ಗಾಬರಿ ಬೀಳುತ್ತಿದ್ದೆ. ಮೊದಲೇ ನೂರಾರು ತಿರುವುಗಳು, ಸಂದಿ-ಗೊಂದಿಗಳಿಂದ ಕೂಡಿದ ಸಣ್ಣ ಸಣ್ಣ ಓಣಿಗಳ ಊರು ಬೆಳಗಾವಿ. (ಈಗ ರಸ್ತೆಗಳು ಅಗಲವಾಗುತ್ತಿವೆ.) ಇಡೀ ರಸ್ತೆಯೇ ನಮ್ಮ ಮನೆಯ ಅಂಗಳವೆಂದು ತಿಳಿದುಕೊಂಡು ಕೈ ಕೈ ಹಿಡಿದುಕೊಂಡು ನಿತ್ಯ ಮ್ಯಾರಥಾನ್ ನಡೆಸುವ ಬೆಳಗಾವಿಯ ರಸಿಕ ಜನರು. ಅಂಥದ್ದರಲ್ಲಿ ಒಟ್ಟಿಗೇ ಕ್ಲಚ್ಚು, ಗೇರು, ಬ್ರೇಕು ಮತ್ತು ಎಕ್ಸೆಲರೇಟರು ಎಂದು ಮ್ಯಾನೇಜ್ ಮಾಡುತ್ತ, ಹಿಂದೆ-ಮುಂದೆ, ಅಕ್ಕ-ಪಕ್ಕ ನೋಡಿಕೊಂಡು ಗಾಡಿ ಓಡಿಸುವುದೆಂದರೆ ಅದೊಂದು ಮಹಾಪರಾಕ್ರಮವೇ ಸೈ. ಅಂಥದ್ದರಲ್ಲಿ ಒಂದು ದಿನ ನನ್ನ ಮಾರುತಿಯ ಮನಸ್ಸು ಅದೇಕೆ 'ಎಲ್ಲಿ ಜಾರೀತೋ, ಮನವು ಎಲ್ಲೆ ಮೀರಿತೋ', ಅದು ತನ್ನಷ್ಟಕ್ಕೆ ತಾನು ಕೈಬೀಸಿಕೊಂಡು ಆನಂದವಾಗಿ ನಡೆದುಕೊಂಡು ಹೋಗುತ್ತಿದ್ದ ದಾರಿಹೋಕನೊಬ್ಬನ ಹಿಂಗಾಲಿಗೆ ಸಿಹಿಚುಂಬನದ ಸ್ಪರ್ಷವನ್ನು ನೀಡಿಯೇಬಿಟ್ಟಿತು. ಆತ ತಪ್ಪೆಲ್ಲ ನನ್ನದೇ ಎನ್ನುವಂತೆ ಕೆಕ್ಕರಿಸಿ ನೋಡಿದ. ನಾನು ಅವನ ಅದೃಶ್ಯ ಮೂರನೇ ಕಣ್ಣಿನ ಉರಿನೋಟದಿಂದ ತಪ್ಪಿಸಿಕೊಂಡು ಬಂದು ಹುಶ್ಶಂತ ಕುಳಿತು ಮಾರುತಿಯ ಪ್ರೇಮ ಪ್ರಕರಣದ ಬಗ್ಗೆ ಹೇಳುತ್ತಿದ್ದರೆ ಮನೆಯವರೆಲ್ಲ ನನ್ನ ಮೇಲೆಯೇ ಉರಿದುಬಿದ್ದು, "ನೀನು, ನಿನ್ನ ಮಾರುತಿ ಹೀಗೆಯೇ ಜನರನ್ನು ತಬ್ಬಿಕೊಳ್ಳುತ್ತ ಹೋದರೆ, ಕ್ರಿಮಿನಲ್ ಕೇಸುಗಳು ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತವೆ,ಮತ್ತು ಜೈಲಿನಲ್ಲಿ ಮಧುಚಂದ್ರದ ಏರ್ಪಾಡಾಗುತ್ತದೆ” ಎಂದು ಹೆದರಿಸಿಬಿಟ್ಟರು. ನಾನು ಈ ಮಾರುತಿಯ ಸಹವಾಸವೇ ಬೇಡವೆಂದುಕೊಂಡು, ನನ್ನ ಹಳೆಯ ಸ್ನೇಹವೇ ವಾಸಿಯೆಂದು ಇನ್ನೊಂದು ಸ್ಕೂಟಿಯನ್ನೇ ಕೊಂಡುತಂದೆ. ಮತ್ತಾರು ವರ್ಷಗಳು ಕಳೆಯುವುದರಲ್ಲಿ ಆಗಿನ್ನೂ ಹೊಸದಾಗಿ ಬಂದಿದ್ದ ಪ್ಲೆಜರ್ ನನ್ನ ಮಿತ್ರನಾಗಿ ಜೊತೆಯಾಯಿತು. ಹೀಗೆ ಇಪ್ಪತ್ತು ವರ್ಷಗಳ ತನಕ ಇಡೀ ಬೆಳಗಾವಿಯ ಸಂದಿ-ಗೊಂದಿಗಳಲ್ಲಿ, ಇಕ್ಕಟ್ಟು ಓಣಿಗಳಲ್ಲಿ, ತಿರುವುಗಳಲ್ಲಿ, ರಸ್ತೆಮಧ್ಯೆ ಧುತ್ತೆಂದು ಅವತರಿಸುವ ಬೆಟ್ಟಗುಡ್ಡಗಳಲ್ಲಿ, ಭೋರೆಂಬೋ ಮಳೆಯ ಧಾರೆ ಮಾಡಿದ ಗುಂಡಿ-ಕೊರಕಲುಗಳಲ್ಲಿ, ಕೆಸರು ಕೊಚ್ಚೆಗಳಲ್ಲಿ ನನ್ನ ಜೊತೆಜೊತೆಯಾಗಿ ಕಷ್ಟ-ಸುಖಗಳನ್ನನುಭವಿಸಿದ್ದು ಇವೇ ದ್ವಿಚಕ್ರ ವಾಹನಗಳು. ನನ್ನ ಅವುಗಳ ಅವಿನಾಭಾವ ಸಂಬಂಧದ ಆಳ ಎತ್ತರಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಮೊದಲು ಕಚೇರಿ, ನಂತರ ಕಾಲೇಜಿನ ಕೆಲಸ, ಇದೀಗ ಮನೆಯ ನೂರಾರು ಕೆಲಸಗಳ ಜೊತೆಗೆ ಸಂಸಾರದಲ್ಲಿನ ಸರಿಗಮವು ಯಾವತ್ತೂ ಬೇಸೂರಾಗದಿರಲಿ ಎಂದು ಹಂಬಲಿಸಿ, ನನ್ನ ಶಕ್ತಿ ಮೀರಿ ಪ್ರಯತ್ನಿಸುವಾಗ, ಮನೆಯಿಂದ ಆಫೀಸಿಗೆ, ಅಲ್ಲಿಂದ ಮತ್ತೆ ಕೆಲಸದ ಮೇಲೆ ಬೇರೆ-ಬೇರೆ ಕಡೆ ತಿರುಗಾಡುವಾಗ, ಮಕ್ಕಳನ್ನು ಟ್ಯೂಶನ್ನು, ಗೆಳೆಯರ ಮನೆ ಎಂದೆಲ್ಲ ಬಿಟ್ಟು-ಕರೆದುಕೊಂಡು ಬರುವಾಗ, ತರಕಾರಿ ಪೇಟೆಗೆ ಹೋಗುವಾಗ, ಅಮ್ಮನ ಮನೆಗೆ ಭೇಟಿ ಕೊಡುವಾಗ, ಒಂಟಿಯಾಗಿ ಶಾಪಿಂಗ್‍ನ ಆನಂದವನ್ನು ಪಡೆಯುವಾಸೆಯಾದಾಗ, ಹೀಗೆ ಮನೆಯಲ್ಲಿರುವುದಕ್ಕಿಂತ ಹೆಚ್ಚು ರಸ್ತೆಯ ಮೇಲೇ ಇರುವಾಗ ನನ್ನ ಜೊತೆಯಾದದ್ದು ನನ್ನ ಪ್ರೀತಿಯ ಟೂ ವ್ಹೀಲರ್.
     ಒಂದು ದಿನ ಸರ್ವಿಸಿಂಗಿಗೋ ರಿಪೇರಿಗೋ ಕೂಡ ಬಿಡಲಾರದಷ್ಟು ಅಂಟು-ನಂಟು ಬೆಸೆದುಕೊಂಡಿದ್ದ ಟೂ-ವ್ಹೀಲರನ್ನು ಮತ್ತೊಮ್ಮೆ ಬದಲಾಯಿಸುವಷ್ಟು ವಯಸ್ಸು, ಸರ್ವೀಸು ಅದಕ್ಕೆ ಆದಾಗ ನನ್ನಲ್ಲಿ ಹತ್ತಾರು ಯೋಚನೆಗಳು ದಶದಿಕ್ಕುಗಳಲ್ಲಿ ಓಡಲಾರಂಭಿಸಿದವು. ಇದೀಗ ಮತ್ತೆ ದ್ವಿಚಕ್ರ ವಾಹನವನ್ನು ಕೊಳ್ಳಬೇಕೆಂದರೆ ಮತ್ತೆ ಅದಕ್ಕೆ ಎಪ್ಪತ್ತು ಸಾವಿರವಾದರೂ ಹಾಕಬೇಕು. ದ್ವಿಚಕ್ರ ವಾಹನವು ನನ್ನನ್ನು ಮತ್ತು ನಾನು ಅದನ್ನು ಎಷ್ಟೇ ಪ್ರೀತಿಸಿದರೂ, ಬೆಳಗಾವಿಯ ಮಳೆಯಿಂದ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚು ನಿಷ್ಕರುಣಿಯಾಗಿ ಉರಿಯುತ್ತಿರುವ ಸೂರ್ಯನಿಂದ ಅದು ನನ್ನನ್ನು ರಕ್ಷಿಸಲಾರದು. ಮೇಲಾಗಿ ಇಪ್ಪತೈದು ಕಿಲೋಮಿಟರ್ ದೂರದಲ್ಲಿರುವ ಯುನಿವರ್ಸಿಟಿಯಲ್ಲಿ ಕೆಲಸವಿದ್ದಾಗಲೆಲ್ಲಾ ಹೈವೇ ಮೇಲಿಂದ ನನ್ನನ್ನು ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಕರೆತರುವುದು ಅದರ ಶಕ್ತಿ ಮೀರಿದ ಕೆಲಸ. ಇಂಥ ಎಲ್ಲ ಕಾರಣಗಳನ್ನು ಮುಂದೆ ಮಾಡಿ ನಾನು ಪಾಯಿಂಟ್ ಬೈ ಪಾಯಿಂಟ್ ವಿವರಿಸಿ ನಾನೇಕೆ ಸಣ್ಣದೊಂದು ಕಾರನ್ನು ಸ್ವಂತಕ್ಕಾಗಿ ತೆಗೆದುಕೊಳ್ಳಬಾರದು ಎನ್ನುವ ಅಹವಾಲನ್ನು ಮುಂದಿಟ್ಟಾಗ, ಮನೆಮಂದಿಯೆಲ್ಲ ಜೈ ಎಂದು ಜೋಷ್ ನೀಡಿ, ಆ ಕಾರು ಈ ಕಾರೆಂದು ತುಲನಾತ್ಮಕ ವಿಶ್ಲೇಷಣೆಗಳನ್ನು ನಡೆಸಿದರೂ, ಮನದಲ್ಲಿ ಅಚ್ಚೊತ್ತಿದ್ದ ಆಟೋ ಗೇರ್ ನ್ಯಾನೋ ಕಾರನ್ನು ಬಿಟ್ಟು ಬೇರಾವುದನ್ನು ವರಿಸಬಾರದೆಂದು ನಾನಾಗಲೇ ನಿರ್ಣಯಿಸಿ ಆಗಿತ್ತು.
     ಅಂತೂ ಇಂತೂ ಜೀವನದ ಫಸ್ಟ್ ಹಾಫ್‍ನ ಹೊಸ್ತಿಲಲ್ಲಿ ಬಂದು ನಿಂತಿರುವ ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಹೊಸ ದಾರಿಯೊಂದು ನನ್ನೆದುರಿಗೆ ತೆರೆದುಕೊಂಡು, ಅದರ ಮೇಲಿನ ನನ್ನ ಸುಖಕರ ಪಯಣಕ್ಕೆ ಸಾಥ ನೀಡಲು ಹೊಸ ಕೆಂಪು ನ್ಯಾನೋ ಕಾರು ಬಂದು ನಿಂತಿತು.  ಇದು ಕೂಡ ನನ್ನ ಹಳೆಯ ದ್ವಿಚಕ್ರ ವಾಹನಗಳಂತೆಯೇ ನನ್ನನ್ನು ಎಲ್ಲೆಂದರಲ್ಲಿ ಹೊತ್ತು ಒಯ್ದು ಕೆಲಸಗಳನ್ನು ಹಗುರಗೊಳಿಸುತ್ತಿರುವದನ್ನು ಅನುಭವಿಸಿದಾಗ ಸ್ತ್ರೀ ಸ್ವಾತಂತ್ರ್ಯದ ಮೂರನೆಯ ಮೆಟ್ಟಿಲನ್ನು ಏರಿ ನಿಂತಂತಾಗಿ, ಖುಷಿಯಿಂದ ಈ ಎಲ್ಲ ವಾಹನಗಳಿಗೆ ಅಕ್ಷರದ ಅಭಿನಂದನೆಗಳನ್ನೂ, ಅಕ್ಕರೆಯ ಧನ್ಯವಾದಗಳನ್ನೂ ಸಲ್ಲಿಸುವ ಬಯಕೆ ಭುಗಿಲೆದ್ದ ಕಾರಣ, ಈ ಲೇಖನವನ್ನು ಬರೆದು ಅವುಗಳ ಹೆಸರಿನಲ್ಲಿ ಅರ್ಪಿಸಬೇಕಾಯಿತು.
 
                                  ****************************************

ನೀತಾ. ರಾವ್


     

Thursday, 23 August 2018

                         ಪ್ರಬಂಧ
ನಮ್ಮ ಮತ್ತು ಗಣೇಶನ ಗೆಳೆತನಕ್ಕೆ ನಮ್ಮಷ್ಟೇ ವಯಸ್ಸು

ನಾವು ಹುಟ್ಟುವಾಗಲೇ ಈತ ನಮ್ಮ ಮನೆಯಲ್ಲಿ ಇರುತ್ತಾನೆ. ಸ್ವಲ್ಪ ತಿಳಿಯುವ ವಯಸ್ಸಿಗೆ ದೇವರ ಮನೆಯಲ್ಲಿ ಹಕ್ಕಿನಿಂದ ಕುಳಿತ ಉದ್ದ ಸೊಂಡಿಲಿನ, ಮೊರದಗಲ ಕಿವಿಗಳ, ದೊಡ್ಡ ಆನೆಯ ಮುಖದ, ಡುಮ್ಮು ಹೊಟ್ಟೆಯ ಈ ದೇವರು ಮಗುವಿನ ಮುಗ್ಧ ಮನಸ್ಸಿನಲ್ಲೊಂದು ಅಚ್ಚರಿ ಮೂಡಿಸಿ ಮುಖದಲ್ಲೊಂದು ನಗೆಯ ಚಿಮ್ಮಿಸಿ, ಯಾಕೋ ಏನೋ ಕರೆದರೆ ಜೊತೆಗೆ ಆಡಲಿಕ್ಕೆ ಬಂದೇಬಿಡಬಹುದೆನ್ನುವ ಭಾವ ಹುಟ್ಟುಹಾಕಿ ಗೆಳೆಯನಂತಾಗಿಬಿಡುತ್ತಾನೆ. ಅರೇ ಇದೇನು ಇಷ್ಟು ದೊಡ್ಡ ಹೊಟ್ಟೆ ಇಟ್ಟುಕೊಂಡು ಆ ಪುಟ್ಟ ಇಲಿಯ ಮೇಲೆ ಕುಳಿತಿದ್ದಾನೆ ಪಾಪ! ಎಂದು ಬೈದುಕೊಳ್ಳುವಷ್ಟು ಆಪ್ತನಾಗುತ್ತಾನೆ.
ಮುಂದೆ ಮಾತು ಕಲಿತು ಕತೆ ಹೇಳು ಎಂದು ಅಮ್ಮನಿಗೆ ಗಂಟು ಬೀಳುವ ವಯಸ್ಸು ಬಂದಾಗ ಇವನ ಜನ್ಮ ರಹಸ್ಯವನ್ನು ಪುಟ್ಟ ಕಂದನೆದುರು ಅಮ್ಮ ಬಿಚ್ಚಿಡುತ್ತಾಳೆ. ಮೈ ಮೇಲಿನ ಮಣ್ಣನ್ನೆಲ್ಲಾ ತೆಗೆದು ಸೇರಿಸಿ ಗೊಂಬೆಯೊಂದನು ಮಾಡಿ ಅದರಲ್ಲಿ ಪ್ರಾಣವನ್ನೂದಿದ ಪಾರ್ವತಿ ಆ ಮಗುವನ್ನು ತನ್ನರಮನೆಯ ದ್ವಾರಕ್ಕೆ ಕಾವಲು ನಿಲ್ಲಿಸಿ ಸ್ನಾನಕ್ಕೆ ಹೋದವಳು ಬೇಗ ಬರಬಾರದಿತ್ತೇ? ತನ್ನ ಗಣದೊಂದಿಗೆ ಎಲ್ಲೋ‌ ಹೊರಗಡೆ ಹೋದ ಪರಶಿವನು ಬಹುಶಃ ಹಸಿದು ಬಳಲಿ ಮನೆಗೆ ಬಂದರೆ ಈ ಪುಟ್ಟ ಪೋರ ಒಳಗೆ ಹೋಗಲಾಗದು ಎಂದು ಮನೆಯ ಯಜಮಾನನನ್ನೇ ತಡೆದರೆ, ತಡೆದಾನೆಯೇ ಪರಮೇಶ್ವರ! ಹಿಂದು ಮುಂದು ಯೋಚನೆ ಮಾಡದೇ ಬಾಲಕನ ರುಂಡ ಚೆಂಡಾಡಿದ. ಅದೆಲ್ಲೋ ಹೋಗಿ ಬಿದ್ದದ್ದು ಇನ್ನೆಂದೂ ಸಿಗದಂತೆ ಕಳೆದು ಹೋಯ್ತು. ಇಷ್ಟೆಲ್ಲ ಆಗಿ ಹೋದ ನಂತರ ನಿಧಾನವಾಗಿ ಹೊರಬಂದ ಪಾರ್ವತಿ ದೇವಿ ಸತ್ತು ಹೋದ ತನ್ನ ಮಗುವನ್ನು ನೆನೆದು ಅತ್ತು ಕರೆದೂ ಮಾಡಿ ಮಗುವನ್ನು ಮತ್ತೆ ಬದುಕಿಸುವಂತೆ ಗಂಡನಿಗೆ ಗಂಟುಬಿದ್ದಳು. ಅವನು ಪರಮೇಶ್ವರ ನಲ್ಲವೇ? ಹಾಗಾಗಿ ಮಗುವನ್ನು ಬದುಕಿಸಿಯೇ ಬಿಟ್ಟ. ಆದರೆ ರುಂಡ ಮಾತ್ರ ಆನೆಯದ್ದು. ದೇಹ ಅವನದೇ. ಎಂಥ ರೋಚಕ ಕಥೆ! ಮಗುವಿಗೆ ಪುಟ್ಟ ಗಣಪನ ಬಗ್ಗೆ ಕರುಣೆ, ಪ್ರೀತಿ, ಸಂತಾಪ ಏನೆಲ್ಲಾ ಉಂಟಾಗುತ್ತದೆ! ಫ್ರೆಂಡ್ ಆಗಲು ಎಲ್ಲಾ ಗುಣಗಳಿವೆ ಅವನಲ್ಲಿ.
ದೊಡ್ಡವನಾದಂತೆ ಹಾಡು ಕಲಿಸು ಎಂದರೆ ಅಮ್ಮ ಮತ್ತೆ ಕೈ ಮುಗಿದು ನಿಲ್ಲಿಸಿ, "ಗಣಪತಿ ರಾಯಾ, ಮುಗದೆವ ಕೈಯಾ, ಸಣ್ಣ ಸಣ್ಣ ಮಕ್ಕಳು ನಿನ್ನ ಸೇವೆ ಮಾಡಲು, ತಪ್ಪಿದರೆ ಒಪ್ಪಿಕೊಳ್ಳಯ್ಯಾ" ಅಂತ ರಾಗವಾಗಿ ಹೇಳಿ ಕೊಡುವಳು. ಶಾಲೆಯಲ್ಲಿ ಮಾಸ್ತರು ಕೂಡ, " ಗಣಪ್ಪ ಬಂದ, ಹೊಟ್ಟಿ ಮ್ಯಾಲೆ ಗಂಧಾ, ಕಾಯಿ ಕಡಬು ತಿಂದಾ, ಭಾವ್ಯಾಗ ಬಿದ್ದಾ, ಮುಣಗಿ ಮುಣಗಿ ಎದ್ದಾ" ಅಂತ ಬಾಯಿಪಾಠ ಮಾಡಿಸುವರು. ಅಲ್ಲಿಗೆ ಗಣಪ್ಪ ಮಕ್ಕಳ ಮೊದಲ ವರ್ಚ್ಯುವಲ್ ಗೆಳೆಯ. ಅಂವ ಎಲ್ಲಿದ್ದಾನೆ ಗೊತ್ತಿಲ್ಲ, ಆದರೆ ಇದ್ದಾನೆ ಗೆಳೆಯನಾಗಿ. ಅವನ ಬೇಕು ಬೇಡಗಳನ್ನೆಲ್ಲ ಹೇಳಿಬಿಟ್ಟಿದ್ದಾನೆ. ಗಣಪ್ಪನಿಗೆ ಮೋದಕ ಅಂದ್ರ ಪ್ರೀತಿ ಅಂತ್ಹೇಳಿ ನಾವೂ ಅವನ ಹೆಸರಿನಲ್ಲಿ ಮೋದಕ ಗಿಟ್ಟಿಸುವುದು ಸುಳ್ಳೇ ಮತ್ತೆ?
ಸ್ವಲ್ಪ ದೊಡ್ಡವರಾದಂತೆ ಗಣೇಶ ಚತುರ್ಥಿ ಗೆ ಇವನು ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಆಗಿ ಬೆಳಿಗ್ಗೆ, ಸಂಜೆ ಎರಡೂ ವೇಳೆ ಭಕ್ತರಿಂದ ಪೂಜೆಗೊಳ್ಳತೊಡಗಿದ ನಂತರ ಓ ಇವನು ಬರಿ ಗೆಳೆಯನಲ್ಲ, ದೇವರು ಅಂತ ಗೊತ್ತಾಗುತ್ತದೆ. ಹತ್ತು ದಿನಗಳ ಕಾಲ ನಮ್ಮ ಗಲ್ಲಿಗಳನ್ನು ಗಲಗಲ ಗದ್ದಲದಿಂದ ತುಂಬಿ, ಇಡೀ ವಾತಾವರಣ ಭಕ್ತಿಯಿಂದ ತುಂಬಿ ತುಳುಕುವಂತೆ ಮಾಡುವ ಈ ಗಣಪ್ಪನ ರೂಪಗಳೆಷ್ಟು ಅಂತ ಅಚ್ಚರಿ ಪಟ್ಟದ್ದಿದೆ. ಹಿಂದಿನ ಓಣಿಯಲ್ಲಿ ಸಂತ ತುಕಾರಾಮನಾದರೆ ನಮ್ಮ ಓಣಿಯಲ್ಲಿ ರಕುಮಾಯಿಯ ಜೊತೆ ನಿಂತ ವಿಠ್ಠಲ ನಾಗಿದ್ದಾನೆ. ಅಲ್ಲಿಂದು ಕಡೆ ರಾಮನಾಗಿ ಬಾಣ ಬಿಡುತ್ತಿದ್ದರೆ, ಇಲ್ಲೊಂದು ಕಡೆ ಕೃಷ್ಣನಾಗಿ ಕೊಳಲನೂದುತ್ತಿದ್ದಾನೆ. ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಮುದ್ದಾಗಿದ್ದಾನೆ. ಅನಂತ ಚತುರ್ದಶಿಯಂದು ಇವನನ್ನು ಪೆಂಡಾಲಿನಿಂದ ಹೊರ ತೆಗೆದು ಕಳಿಸುವಾಗ ಎಷ್ಟು ಬೇಜಾರಾಗುತ್ತದೆ! ಅಳು ಬಂದುಬಿಡುತ್ತದೆ. "ಮುಂದಿನ ವರ್ಷ ಬೇಗನೇ ಬಾ" ಅಂತ ಹೇಳಿ ಕಳಿಸಿ ಬಿಕೋ ಎನ್ನುವ ಮಂಟಪವನ್ನು ನೋಡಿ ಬಿಕ್ಕಿಲ್ಲವೇ ನಾವು?
ನಮ್ಮ ರಾಮ, ಕೃಷ್ಣ ರಂತೆ ಈತ ವಿವಾದವನ್ನೆಂದೂ ಮೈ ಮೇಲೆ ಎಳೆದುಕೊಂಡವನಲ್ಲ. ಎಷ್ಟು ವರ್ಷಗಳ ಹಿಂದೆ ಹುಟ್ಟಿದ, ಎಲ್ಲಿ ಹುಟ್ಟಿದ ಎನ್ನುವುದೆಲ್ಲ ನಮಗೆ ಗೊತ್ತಿಲ್ಲ. ಹಾಗಾಗಿ ಇವನಿಗೆಂದೇ ಮೀಸಲಾದ ಜನ್ಮಸ್ಥಳ ಎಂಬುದಿಲ್ಲ. ಅದರ ಮೇಲೆ ಇನ್ನಾರೋ ಇನ್ನೇನೋ ಕಟ್ಟಿ ಕಾಲು ಕೆರೆದು ಜಗಳ ತೆಗೆಯುವ ಪ್ರಶ್ನೆ ಇಲ್ಲ. ಅಷ್ಟರ ಮಟ್ಟಿಗೆ ಇವನೂ ಸೇಫ್, ನಾವೂ ಸೇಫ್. ಇನ್ನು ಪ್ರೀತಿ, ಪ್ರೇಮ, ಲಗ್ನ ಎಂದೆಲ್ಲ ಹಚ್ಚಿಕೊಂಡಿಲ್ಲವಾದ್ದರಿಂದ, ದೇವರ ಬಗ್ಗೆ ಏನೆಲ್ಲಾ ಹುಳುಕು ತೆಗೆಯುವ ಉದ್ಯೋಗದವರಿಗೆ ಇವನು ಯಾವ ಲಾಭದಾಯಕ ಉದ್ಯೋಗವನ್ನೂ ಕರುಣಿಸಿಲ್ಲ.
ಆದರೆ ಮನೆಯ ಯಾವುದೇ ಶುಭ ಕಾರ್ಯವಿರಲಿ ಈತನ ಉಪಸ್ಥಿತಿ ಇರಲೇ ಬೇಕು. ಏಕೆಂದರೆ ವಿಘ್ನ ವಿನಾಶಕನಿಗೆ ಮೊದಲ ಪೂಜೆಯನ್ನು ಸಲ್ಲಿಸಿ ನಂತರ ಉಳಿದೆಲ್ಲ ಕಾರ್ಯಕ್ರಮ.  ಉಳಿದೆಲ್ಲ ದೇವತೆಗಳಿಗಿಂತ ಮಂಗಲ ಕಾರ್ಯಗಳಲ್ಲಿ ಇವನದೇ ಜೋರು. ಹಾಗಾಗಿ ದೊಡ್ಡವರೂ ಇವನನ್ನು ಕಡೆಗಣಿಸುವಂತೆಯೇ ಇಲ್ಲ. ಚಿಕ್ಕವರಿಗಂತೂ ಇವನ ಮೇಲೆ ಪ್ರೀತಿ ಅಂದರೆ ಅಷ್ಟಿಷ್ಟಲ್ಲ. ಹಾಗಾಗಿ ಇವನು ಎಲ್ಲರಿಗೂ ಬೇಕಾದವ. ಲಂಬೋದರ, ವಿನಾಯಕ, ಪಾರ್ವತಿಸುತ, ಗಜವದನ, ಗೌರಿತನಯ, ಹೀಗೆ ಇವನಿಗೆ ಅನೇಕಾನೇಕ ಹೆಸರುಗಳನ್ನಿಟ್ಟು ಕರೆದು ಪ್ರೀತಿಸಿ ಒಲಿಸಿಕೊಳ್ಳುವ ಜನರು ಇವತ್ತೂ ಮತ್ತು  ಯಾವತ್ತೂ ಇರುವವರೇ. ಹಾಗಾಗಿ ಇವನು ಸೂರ್ಯ ಚಂದ್ರರಿರುವವರೆಗೂ, ಈ ಭೂಮಿಯು ತಿರುಗುವವರೆಗೂ ಇದ್ದು ನಮ್ಮ ನಿಮ್ಮೆಲ್ಲರ ಗೆಳೆತನಕ್ಕೆ ಹೊಸ ಹೊಸ ಭಾಷ್ಯಗಳನ್ನು ಬರೆಯುತ್ತಲೇ ಇರುವವ. ಮುದ್ದು ಗಣಪ್ಪ!

ಪ್ರಿಯ ಸಂಪಾದಕರೇ! (?)

Image result for cartoon images of writer



       ಪತ್ರಿಕೆಗಳ ಸಂಪಾದಕರಿಗೂ, ಕಥೆ, ಕವನ, ಪ್ರಬಂಧ ಎಂದು ಸಣ್ಣಪುಟ್ಟ ಬರಹಗಳನ್ನು ಮೇಲಿಂದ ಮೇಲೆ ಬರೆಬರೆದು ಎಸೆಯುವ ಲೇಖಕರಿಗೂ ಒಂಥರಾ ಗಂಡ-ಹೆಂಡರ ಸಂಬಂಧ. ಒಳಗೊಳಗೇ ಸಿಟ್ಟು, ಉರಿ, ದ್ವೇಷ ಎಲ್ಲ, ಹೊರಗಡೆ ಮಾತ್ರ ಕುಲುಕುಲು. ಇವರನ್ನು ಬಿಟ್ಟರೆ ಅವರ ಪುಟಗಳು ತುಂಬುವುದಿಲ್ಲ, ಅವರನ್ನು ಬಿಟ್ಟರೆ ಇವರ ಬರಹಗಳಿಗೆ ಮೋಕ್ಷವಿಲ್ಲ, ಅಂಥಾ ಪರಿಸ್ಥಿತಿ.
    ಉದಯೋನ್ಮುಖ ಲೇಖಕರು ಅಂತ ಇರುತ್ತಾರಲ್ಲ, ಹಾಗೆಂದರೆ ಅವರು ತೀರಾ ಚಿಕ್ಕ ವಯಸ್ಸಿನವರೇ ಇರಬೇಕೆಂದೇನೂ ಇಲ್ಲ. ಐವತ್ತು ಅರವತ್ತು ವರ್ಷಗಳಾದರೂ ಉದಯೋನ್ಮುಖರಾಗಿಯೇ ಉಳಿದ ನೂರಾರು ಲೇಖಕರು ತಮ್ಮ ಲೇಖನಗಳನ್ನು ಬರೆದು ಉದ್ದನೆಯ ಹಾಳೆಗಳ ಮೇಲೆ ಅವುಗಳ ಫೇರ್  ಕಾಪಿ ಮಾಡಿ, ಎರೆಡೆರೆಡು ಬಾರಿ ತಾವೇ ಅವನ್ನು ಓದಿ ' ಸಲ ಚೆನ್ನಾಗಿ ಆಗಿದೆ, ಸಂಪಾದಕ ಸ್ವೀಕೃತಿ ಪತ್ರ ಕಳಿಸಲೇಬೇಕು' ಎನ್ನುವ ಬತ್ತದ ಆಶಾಭಾವದಿಂದ ಅವನ್ನು ಲಕೋಟೆಯೊಳಗೆ ಹಾಕಿ ಅಂಚೆಚೀಟಿ ಹಚ್ಚಿ ಇಲ್ಲಿಂದ ಎಸೆದರೆಂದರೆ ಮನಸ್ಸೆಂಬುದು ' ಲವ್ ಯೂ' ಅಂತ ಪ್ರೀತಿಸಿದವಳಿಗೆ/ನಿಗೆ ಬರೆದು ಉತ್ತರ ಏನು ಬರಬಹುದೋ ಎಂದು ಕಾಯುತ್ತ ಕುಳಿತ ಪ್ರೇಮಿಯಂತೆ ವಿಲವಿಲ ಒದ್ದಾಡುತ್ತಿರುತ್ತದೆ. ಆದರೆ ಕಡೆಯಿಂದ ಸುದ್ದಿಯೇ ಇರುವುದಿಲ್ಲ. ಹಾಗಂತ ಲೇಖನವೇನು ಸಂಪಾದಕರ ಕಸದ ಬುಟ್ಟಿಗೆ ಬಿತ್ತೋ, ಅಥವಾ ಲಕೋಟೆಗಿನ್ನೂ ತೆರೆಸಿಕೊಳ್ಳುವ ಭಾಗ್ಯವೇ ಒದಗಿಬರಲಿಲ್ಲವೋ ಒಂದೂ ತಿಳಿಯುವುದಿಲ್ಲ. ಫೋನು ಮಾಡಿ ಕೇಳಲೂ ಅವಕಾಶವಿರುವುದಿಲ್ಲ. ಒಮ್ಮೆ ನಿಮ್ಮ ಲೇಖನ ನಿಮ್ಮ ಕೈಬಿಟ್ಟಿತೆಂದರೆ ಅದರ ಸಂಪೂರ್ಣ ಅಧಿಕಾರವನ್ನು ಸಂಪಾದಕರಿಗೆ ಕೊಟ್ಟು ಕೈತೊಳೆದುಕೊಂಡ ಹಾಗೆಯೇ! 'ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು' ಎಂದು ದೀನರಾಗಿ ದೇವರಲ್ಲಿ ಮೊರೆಯಿಟ್ಟ ಹಾಗೆ 'ದಿನಪತ್ರಿಕೆಯಲ್ಲಾದರೂ ಹಾಕು, ವಾರಪತ್ರಿಕೆಯಲ್ಲಾದರೂ ಹಾಕು' ಎಂದು ದೈನೇಸಿ ಪಡುವ ಪಾಡು ಲೇಖಕನದ್ದು.

                                                              Image result for cartoon images of editor


     ನನಗೂ ಬರೆಯುವ ವಿಚಿತ್ರ ಖಯಾಲಿ ಇರುವುದರಿಂದ, ಮತ್ತು ಬರೆದದ್ದೆಲ್ಲವನ್ನೂ ಇತರರು ಓದಲಿ ಎಂಬ ವಿಪರೀತ ಆಸೆಬುರುಕತನಕ್ಕೆ ಬಿದ್ದದ್ದರಿಂದ ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುತ್ತಿರುತ್ತೇನೆ. ಒಮ್ಮೆ ನನ್ನ ಡೈರಿಯಲ್ಲಿ ತೋಚಿದಂತೆ ಗೀಚುತ್ತ ಹೋಗುವುದು, ಆನಂತರ ಅದನ್ನು ಉದ್ದದ ರೂಲ್ಡ್ ಹಾಳೆಗಳ ಮೇಲೆ ದುಂಡಾದ ಅಕ್ಷರಗಳಲ್ಲಿ ಕಾಪಿ ಮಾಡುವುದು. ಹಾಗೆ ಕಾಪಿ ಮಾಡುವಾಗಲೇ ಲೇಖನವನ್ನು ಒಂದಿಷ್ಟು ತಿದ್ದುವುದು, ಇನ್ನೊಂದೆರೆಡು ಲೈನುಗಳನ್ನು ಸೇರಿಸುವುದು, ಒಂದೆರಡನ್ನು ಕೈಬಿಡುವುದು ಎಲ್ಲಾ ಸರ್ಕಸ್ ಮಾಡಿ ಕವರಿಗೆ ಹಾಕಿ, ಸ್ವೀಕೃತವಾಗದಿದ್ದಲ್ಲಿ ವಾಪಸ್ಸಾದರೂ ಬರಲಿ ಎಂದು ಕವರಿನೊಳಗೊಂದು ಸ್ವವಿಳಾಸದ ಕವರನ್ನಿಟ್ಟು ಅದಕ್ಕೆ ಸಾಕಷ್ಟು ಅಂಚೆಚೀಟಿಗಳನ್ನು ಅಂಟಿಸಿ ಕಳಿಸುತ್ತಿದ್ದೆ. (ಇದೆಲ್ಲ ಕಂಪ್ಯೂಟರ್ ಎಂಬ ಅದ್ಭುತ ಬರುವುದಕ್ಕೆ ಮೊದಲು) ನಂತರ ಈಗ ಸಂಪಾದಕರಿಂದ ಉತ್ತರ ಬರಬಹುದು, ಆಗ ಬರಬಹುದು ಎಂದು ಕಾಯುತ್ತ ಕೂಡುವುದು. ಒಂದಷ್ಟು ದಿನಗಳ ನಂತರ ನನ್ನದೇ ಹ್ಯಾಂಡರೈಟಿಂಗ್ ಇರುವ ದಪ್ಪ ಕವರು ಮನೆಗೆ ಬಂತೆಂದರೆ ದುಃಖ ಉಮ್ಮಳಿಸಿ ಬಂದು ಕಣ್ಣೀರಾಗಿ ಹರಿಯುವುದು. ನನ್ನ ಸೋಲಿನ ದ್ಯೋತಕವಾದ ಕಣ್ಣೀರು ಯಾರಿಗೂ ಕಾಣದಿರಲೆಂದು ನಾನು ಕದ್ದು ಮುಚ್ಚಿ ಅಳುವುದು ಮತ್ತು ಸದ್ದಿಲ್ಲದೇ ಕವರನ್ನು ಎತ್ತಿಟ್ಟುಕೊಂಡು ಬಿಡುವುದು. ಎಲ್ಲ ಸುಮಾರು ವರ್ಷಗಳು ನಡೆಯಿತು. ಅಂಥದ್ದರಲ್ಲೇ ಒಂದೆರೆಡು ಲೇಖನಗಳು ಪತ್ರಿಕೆಗಳಲ್ಲಿ ಬಿಡುಗಡೆಯ ಭಾಗ್ಯ ಕಂಡು ಸುಖದ ಕಣ್ಣೀರು ಕೆನ್ನೆಗಿಳಿದವು.
     ಇದೀಗ ಲೇಖನಗಳನ್ನು ಅಂಚೆಯ ಮುಖಾಂತರ ಕಳಿಸುವ ತಾಪತ್ರಯವೂ ಇಲ್ಲ. ಕಂಪ್ಯೂಟರ್  ಮೇಲೆ ನುಡಿ ಅಥವಾ ಬರಹ ಯಾವುದಾದರೂ ಫಾಂಟನಲ್ಲಿ ಟೈಪಿಸಿಕೊಂಡು ಇಟ್ಟುಕೊಂಡರೆ ಮುಗಿಯಿತು. ಒಂದೇ ಸಲಕ್ಕೆ ಹತ್ತು ಪತ್ರಿಕೆಗಳಿಗೂ ಶೂಟ್ ಮಾಡಿಬಿಡಬಹುದು, ಯಾರು ಸ್ವೀಕರಿಸಿ ಪ್ರಕಟಿಸುತ್ತಾರೋ ಪ್ರಕಟಿಸಲಿ ಎಂದು. ಒಬ್ಬರು ಸ್ವೀಕೃತಿ ಮೆಸ್ಸೇಜು ಕಳಿಸಿದ ನಂತರ ನಾವೇ ಉಳಿದ ಒಂಬತ್ತು ಸಂಪಾದಕರಿಗೆ "ನನ್ನ ಲೇಖನವು ಈಗಾಗಲೇ ಇಂಥ ಪತ್ರಿಕೆಯವರು ಪ್ರಕಟನೆಗೆ ಸ್ವೀಕರಿಸಿರುವುದರಿಂದ ತಾವು ದಯವಿಟ್ಟು ಲೇಖನವನ್ನು ಪ್ರಕಟಿಸಬಾರದೆಂದು ತಿಳಿಸಲು ವಿಷಾದಿಸುತ್ತೇನೆ" ಎಂದು ಮತ್ತೊಂದು -ಮೇಲನ್ನು ಒಗೆದುಬಿಡುವುದು. 'ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎನ್ನುವುದು ಸುಳ್ಳೇ ಮತ್ತೆ? ಆಗ ಅವರ ಕಾಲವಿತ್ತು, ಮೆರೆದಾಡಿದರು, ಈಗ ನಮ್ಮ ಕಾಲ, ನಾವು ಮೆರೆದಾಡುವುದು, ಗಂಡ ವಯಸ್ಸಾಗಿ ಕೈಕಾಲು ಹರಿದಾಡುವುದು ನಿಂತ ಮೇಲೆ ಹಾರಾಡುವ ಹೆಂಡತಿಯಂತೆ!
    ಇಷ್ಟೆಲ್ಲ ಕಾಲ ಬದಲಾಗಿದೆಯೆಂದರೂ, ಯಾರೂ ನಿಮ್ಮ ಲೇಖನಗಳನ್ನು, ಕವನಗಳನ್ನು ಸ್ವೀಕರಿಸುವ ಕೃಪೆ ತೋರಲಿಲ್ಲವೋ, ಅಂಥವರಿಗಾಗಿಯೇ ಫೇಸಬುಕ್ಕು, ವಾಟ್ಸ್ಯಾಪು, ಬ್ಲಾಗು, ವರ್ಡಪ್ರೆಸ್ಸು ಮುಂತಾದವುಗಳು ಜನ್ಮ ತಳೆದಿವೆ. ನಮ್ಮೆಲ್ಲ ಹುಚ್ಚು, ಹವ್ಯಾಸಗಳಿಗೆ ವೇದಿಕೆ ಒದಗಿಸುವುದಕ್ಕಾಗಿಯೇ ಉದ್ಭವವಾಗಿರುವ ತಂತ್ರಜ್ಞಾನದ ಹೊಸ ಅವಿಷ್ಕಾರಗಳಿಂದ ಪತ್ರಿಕೆಗಳಿಗೆ ಅಸ್ಪøಷ್ಯರಾಗಿಯೇ ಉಳಿದ ಅನೇಕ ಬರಹಗಾರರ ಕೃತಿಗಳಿಗೊಂದು ಗತಿ ಕಾಣಿಸುವ ಸಮಯ ಒದಗಿ ಬಂದಿದೆ. ನಿಮ್ಮ ನಿಮ್ಮ ಸ್ನೇಹಿತರು, ಬಂಧು-ಬಳಗದವರು ಫ್ರೆಂಡಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಲೇಖನಗಳನ್ನು ಹರಿಬಿಟ್ಟಿರೋ ತಾಸೆರಡು ತಾಸಿನಲ್ಲಿ ಅವರು ನಿಮ್ಮ ಮನಸ್ಸು ಮುರಿಯಲಾರದೇ ನೂರಿನ್ನೂರು ಲೈಕುಗಳನ್ನು ಕುಟ್ಟುತ್ತಾರೆ. ಗುರುತು-ಪರಿಚಯ ಇಲ್ಲದವರೂ ಒಮ್ಮೊಮ್ಮೆ ಲೈಕ್ ಮಾಡುವ ದೊಡ್ಡತನ ತೋರಿ ನೋವಿನ ಹೊಳೆಯಲ್ಲಿ ಮುಳುಗುತ್ತಿರುವ ನಮ್ಮನ್ನು ಸಂತಸದ ಹಾಯಿದೋಣಿಯಲ್ಲಿ ಎತ್ತಿಕೂರಿಸಿ ತೇಲಿಸುತ್ತಾರೆ. ಕೆಲವರು ಇನ್ನೊಂದಿಷ್ಟು ತ್ರಾಸು ತೆಗೆದುಕೊಂಡು 'ಒಳ್ಳೆಯ ಲೇಖನ', 'ಚೆನ್ನಾಗಿದೆ', 'ಓದಿ ಖುಶಿಯಾಯ್ತು' ಎಂದೆಲ್ಲ ನಾಲ್ಕೈದಾದರೂ ಕಮೆಂಟುಗಳನ್ನು ಒಗೆಯುತ್ತಾರೆ. ಇದ್ದಷ್ಟು ಸಣ್ಣ ಸರ್ಕಲ್ಲಿನಲ್ಲೇ ಆದರೂ ನೀವು ಲೇಖಕ/ ಲೇಖಕಿ ಅಂತ ಫೇಮಸ್ ಆಗುತ್ತೀರಿ. ಯಾರದ್ದೋ ಮದುವೆಗೋ, ಮುಂಜಿವೆಗೋ, ಕುಬುಸಕ್ಕೋ ನೀವು ಹೋದಾಗ ನಾಲ್ಕೈದು ಜನ ನಿಮ್ಮನ್ನು ಗುರುತಿಸಿ, " ಮೇಡಮ್ ಭಾಳ ಛೊಲೊ ಬರೀತಿರಿ, ನಾವು ತಪ್ಪದ ಓದ್ತೇವಿ ನಿಮ್ಮ ಲೇಖನಾ" ಅಂತಂದು ಆಗಲೇ ಸಣ್ಣಗೇ ಮೂಡಿರುವ ಕೋಡುಗಳಿಗೆ ಗುಲಾಬಿ ರಿಬ್ಬನ್ನು ಕಟ್ಟಿ ಜಾತ್ರೆಯಲ್ಲಿ ಓಡಲು ಸ್ಫೂರ್ತಿ ತುಂಬುತ್ತಾರೆ. ವಾಟ್ಸ್ಯಾಪಿನ ಹತ್ತೆಂಟು ಗ್ರೂಪಗಳಲ್ಲಿ ನೀವೊಬ್ಬರು ಲೇಖಕ/ಲೇಖಕಿ ಎಂದು ಪ್ರಸಿದ್ಧರಾಗುತ್ತೀರಿ.
    ಮಧ್ಯೆ ಪದೆಪದೆ ಹೋಗುವ ನಿಮ್ಮ ಮೇಲ್ ಗಳಿಗೆ ಬೇಸತ್ತ ಸಂಪಾದಕನೆಂಬ ಗಂಡನಿಗೂ ಯಾವುದೋ ಒಂದು ವೀಕ್ ಗಳಿಗೆಯಲ್ಲಿ ನಿಮ್ಮ ಮೇಲೆ ಕರುಣೆಯುಕ್ಕಿ "ಇರಲಿ, ಇಷ್ಟೊಂದು ಕಳಿಸುತ್ತಾಳೆ, ಇದೊಂದು ಪ್ರಕಟಿಸಿಬಿಡೋಣ" ಎಂದು ಅವನೂ ಕೃಪೆ ತೋರಿದರೆ ನಿಮಗೆ ಸ್ವರ್ಗ ಮೂರೇ ಗೇಣು. ಅಂತೂ ಅವನ ಮೇಲಿದ್ದ, ಒಳಗೊಳಗೇ ಸೂಪ್ತ ಜ್ವಾಲಾಮುಖಿಯಂತೆ ಕುದಿಯುತ್ತಿದ್ದ ಕೋಪವೆಲ್ಲ ಶಮನಗೊಂಡು ಪ್ರೀತಿ ಉಕ್ಕೇರಿ ಹರಿದು ಜಲಪಾತದಂತೆ ಧುಮ್ಮಿಕ್ಕುತ್ತದೆ. " ಹಂಗೆಲ್ಲಾ ಕಂಡಕಂಡವ್ರ ಲೇಖನಾ ಪ್ರಕಟ ಮಾಡೂದೇ ಇಲ್ಲ ಅವ್ರು, ಲೇಖನದೊಳಗ ಏನಾದ್ರೂ ಘಟ್ಟಿತನಾ, ಸತ್ವ, ಇರಬೇಕಲ್ಲಾ!" ಅಂತ ನೀವೇ ಅವನ ಪತ್ರಿಕೆಯ ಕ್ವಾಲಿಟಿ ಬಗ್ಗೆ ಶರಾ ಬರೆದು, ನಿಮ್ಮ ಲೇಖನದ ಗುಣಮಟ್ಟವೂ ಚೆನ್ನಾಗಿದೆ ಎಂದು ಇನಡೈರೆಕ್ಟಾಗಿ ಎಲ್ಲರ ಮುಂದೆ ಢಣಾಡಂಗುರ ಸಾರಿ ಬಿಡುತ್ತೀರಿ.
    ಹೀಗೆ ನಾಲ್ಕೈದು ಲೇಖನಗಳು ಪ್ರಕಟವಾಗಿ, ಅವುಗಳಿಗೆ ಒಂದಿಷ್ಟು ಪ್ರತಿಕ್ರಿಯೆಗಳು ಪತ್ರಿಕೆಗೆ ಬಂದವೆಂದರೆ ಆಗ ನೋಡಿ ಮಜಾ! ಪತ್ರಿಕೆಯ ಸಂಪಾದಕರೇ ನಿಮ್ಮ ಫೋನಿಗೆ ಕರೆ ಮಾಡಿ, ವಿಷಯದ ಮೇಲೊಂದು ಲೇಖನ ಬರೆದುಕೊಡಿ, ಹಬ್ಬಕ್ಕೊಂದು ವಿಶೇಷ ಲೇಖನ ಕೊಡಲಿಕ್ಕಾಗುತ್ತಾ ಎಂದು ನಿಮಗೆ ಕೈತುಂಬ ಕೆಲಸ ಕೊಟ್ಟು ನಿಮ್ಮನ್ನು ಗಾಳಿಯಲ್ಲಿ ತೇಲಿಸುತ್ತಾರೆ. ನೀವು ಓದುಗರ ಕಣ್ಣಿಗೂ ಗೋಚರಿಸಲಾರಂಭಿಸುವ ಪವಾಡ ನಡೆಯುತ್ತದೆ. ನಿಮ್ಮ ಊರಲ್ಲಿ ನಡೆಯುವ ಸಣ್ಣಪುಟ್ಟ ಸಭೆ, ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಲು ನಿಮಗೆ ಆಹ್ವಾನಗಳು ಬರಲಾರಂಭಿಸುತ್ತವೆ. ಒಂದೆರಡು ಸಭೆಗಳಿಗೆ ಹೋಗಿ ಪೋಡಿಯಮ್ ಗುದ್ದಿ ಗಟ್ಟಿಯಾಗಿ ಭಾಷಣ ಬಿಗಿದಿರೋ ಮುಗಿಯಿತು, ಯಾರ್ಯಾರನ್ನೋ ಸಂಪರ್ಕಿಸಲು ಪ್ರಯತ್ನಿಸಿ ಸೋತ ಸಂಘ-ಸಂಸ್ಥೆಯವರು, "ಇಷ್ಟ್ಯಾಕ ಒದ್ದಾಡತೀರಿ? ಲೋಕಲ್ ಇದ್ದಾರ ನೋಡ್ರಿ, ಪೇಪರಿನ್ಯಾಗ ಕಥಿ-ಕವನಾ ಬರೀತಿರ್ತಾರ. ಅವರನ್ನ ಕರದು ಫಂಕ್ಷನ್  ಮುಗಿಸಿಬಿಡ್ರೆಪಾ, ಎಷ್ಟು ತಲಿ ಕೆಡಿಸಿಗೋತೀರಿ? ಯಾರ ಬಂದ್ರೂ ಅಷ್ಟ, ಒಂದ ತಾಸು ಏನರೇ ಕೊರಿತಾರ, ಹೋಗ್ತಾರ" ಅಂತ ನಿಮ್ಮನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಮೊದಮೊದಲು ನಿಮಗೂ ಸಮಾರಂಭಗಳು ಒಳ್ಳೆ ಖುಶಿ ನೀಡುತ್ತವೆ. "ಏನಕೇನ ಪ್ರಕಾರೇಣ, ಪ್ರಸಿದ್ಧೋ ಭವಂತು" ಎನ್ನುವುದು ನಿಮ್ಮ ಮಂತ್ರವಾಗಿರುತ್ತಲ್ಲಾ! ಅಂತೂ ಇಂತೂ ರೀತಿ ನಿಮ್ಮ ಜನ್ಮ ಸಾರ್ಥಕವಾಯ್ತು ಎನ್ನಿಸಲಿಕ್ಕೆ ಸಂಪಾದಕನೇ ಕಾರಣ ಎನಿಸಿ ಸಕಾರಣವಾಗಿ ಅವನ ಮೇಲಿನ ಪ್ರೀತಿ ನೂರ್ಮಡಿಸುತ್ತದೆ. ಎಷ್ಟೇ ಕೆಟ್ಟವನಿರಲಿ, ಅವನಿಲ್ಲದೇ ನಿಮಗೆ ಸದ್ಗತಿ ಇಲ್ಲ, ನೀವಿಲ್ಲದೇ ಅವನಿಗೆ ಗತಿಯಿಲ್ಲ. "ನಿಂದು ನಂದು ಜಮಾಸಂಗಿಲ್ಲ, ನಿನ್ನ ಬಿಟ್ಟು ನಡ್ಯಂಗಿಲ್ಲ" ಎಂದು ನಾವು ಹೇಳುತ್ತೇವಲ್ಲ, ಥೇಟ್ ಅದೇ ರೀತಿ ಇದು, ಲೇಖಕ-ಸಂಪಾದಕ ಸಂಬಂಧ!

                                         *************************
ನೀತಾ. ರಾವ್