ಯುರೋಪ್: ನನಗೆ ದಕ್ಕಿದಷ್ಟು
ಲಂಡನ್ ನಲ್ಲಿ ಬಸವ
ಲಂಡನ್ ನಲ್ಲಿದ್ದ ಮೂರೆನೇ ದಿನ -ಅದೇ ಅಲ್ಲಿ ನಮ್ಮ ಕಡೆಯ ದಿನವೂ ಆಗಿತ್ತು- ಬೆಳಿಗ್ಗೆ ನಾವು ಸೀದಾ ಬಸವೇಶ್ವರ ಸ್ಟ್ಯಾಚ್ಯು ನೋಡಲು ಹೋದೆವು. ಲಂಡನ್ನಿನ ಒಂದು ಪ್ರಶಾಂತವಾದ ರೋಡಿನ ಪಕ್ಕದಲ್ಲಿ ಎದೆಮಟ್ಟದ ಬಸವೇಶ್ವರ ಮೂರ್ತಿಯನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಕೆಲ ದಿನಗಳ ಹಿಂದಷ್ಟೇ ಅನಾವರಣಗೊಳಿಸಿದ್ದರು. ನಮ್ಮಂತೇ ಅನೇಕ ಕನ್ನಡಿಗರು ಮತ್ತು ಭಾರತೀಯರು ಬಸವ ಮೂರ್ತಿಯನ್ನು ನೋಡಲು ಬಂದಿದ್ದರು. ಹನ್ನೆರಡನೇ ಶತಮಾನದಲ್ಲಿಯೇ ಜಾತಿ-ವರ್ಗಗಳ ಅಸಮಾನತೆಯನ್ನು ಹೋಗಲಾಡಿಸಲು ಆಧ್ಯಾತ್ಮಿಕ ಚಳುವಳಿಯನ್ನೇ ಕೈಕೊಂಡ ಬಸವಣ್ಣ ಇಂದಿನ ಇಪ್ಪತೊಂದನೇ ಶತಮಾನಕ್ಕೂ ಪ್ರಸ್ತುತರಾಗಿದ್ದು, ವಿದೇಶೀ ನೆಲದಲ್ಲಿ ಕೂಡ ನಮ್ಮ ನಾಡಿನ ಈ ಮಹಾನುಭಾವ ರಾರಾಜಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಎಲ್ಲರೂ ಬಸವ ಮೂರ್ತಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ನಂತರ ನಮ್ಮ ಪಯಣ ಟ್ರಫಲ್ಗಾರ್ ಸ್ಕ್ವೇರನತ್ತ ಹೊರಟಿತು.
ಲಂಡನ್ನಿನ ಪ್ರಮುಖ ಆಕರ್ಷಣೆ ಟ್ರಫಲ್ಗಾರ್ ಸ್ಕ್ವೇರನ್ನು ಅಲ್ಲಿಗೆ ಹೋದವರು ನೋಡಲೇಬೇಕು. ಲಂಡನ್ನಿನ ಮಧ್ಯ ಭಾಗದಲ್ಲಿರುವ ಈ ಸುಂದರವಾದ, ವಿಶಾಲವಾದ ಸಾರ್ವಜನಿಕ ಜಾಗದಲ್ಲಿ ಒಂದು ಎತ್ತರವಾದ ಸ್ತಂಭವಿದೆ, ಮತ್ತು ಸ್ತಂಭದ ಮೇಲೆ ಅಡ್ಮಿರಲ್ ನೆಲ್ಸನ್ ನ ಪ್ರತಿಮೆಯಿದೆ. ೧೮೦೫ರಲ್ಲಿ ನಡೆದ ಫ್ರಾನ್ಸ್ ಮತ್ತು ಸ್ಪೇನ್ ವಿರುದ್ಧದ ಟ್ರಫಲ್ಗಾರ್ ಯುದ್ಧದಲ್ಲಿ ಇಂಗ್ಲಂಡ್ ಈ ಅಡ್ಮಿರಲ್ ನೆಲ್ಸನನ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಸ್ಮರಣಾರ್ಥವಾಗಿ ಈ ಇಡೀ ಸ್ಕ್ವೇರನ್ನು ನಿರ್ಮಿಸಲಾಗಿದೆ. ೫೧.೬ ಮಿಟರ್ ಎತ್ತರವಿರುವ ನೆಲ್ಸನ್ ಪಿಲ್ಲರನ ಬೇಸನಲ್ಲಿ ನಾಲ್ಕೂ ದಿಕ್ಕಿಗೆ ನಾಲ್ಕು ದೊಡ್ಡ ಲೋಹದ ಸಿಂಹಗಳಿವೆ. ಮತ್ತು ಸ್ತಂಭದ ಅಕ್ಕಪಕ್ಕ ಎರಡು ಸುಂದರವಾದ ಕಾರಂಜಿಗಳ ಕೊಳಗಳಿವೆ. ಇವುಗಳಲ್ಲಿ ಮತ್ಸ್ಯಕನ್ನಿಕೆಯರು ಮತ್ತು ಮತ್ಸ್ಯಪುರುಷರು ಕೈಯಲ್ಲಿ ಹಿಡಿದ ಮೀನುಗಳಿಂದ ನೀರು ಸೂಸುತ್ತಿರುತ್ತದೆ. ಕೊಳಗಳಲ್ಲಿ ಬಾತುಕೋಳಿಗಳು ಈಜುತ್ತಿರುತ್ತವೆ. ತುಂಬ ವಿಸ್ತಾರವಾದ ಈ ಜಾಗದಲ್ಲಿ ನೀವು ಕಾಲ್ನಡಿಗೆಯಿಂದ ಮಾತ್ರ ಓಡಾಡಬಹುದು. ಒಳಗಡೆ ವಾಹನಗಳಿಗೆ ಪ್ರವೇಶವಿಲ್ಲ. ಆದರೆ ಸೈಕಲ್ ತೆಗೆದುಕೊಂಡು ಹೋಗಬಹುದು. ಸ್ಕ್ವೇರ್ ನ ಒಂದು ದಿಕ್ಕಿಗೆ ಪ್ರಸಿದ್ಧವಾದ ನ್ಯಾಷನಲ್ ಮ್ಯೂಸಿಯಂ ಇದೆ. ಉಳಿದ ಮೂರು ದಿಕ್ಕುಗಳಲ್ಲೂ ಐತಿಹಾಸಿಕ ಕಟ್ಟಡಗಳಿವೆ. ಪ್ರವಾಸಿಗಳೆಲ್ಲ ಕಾಯಂ ಓಡಾಡುತ್ತಿರುವ ಈ ಸ್ಥಳದಲ್ಲಿ ಯುವ ಕಲಾವಿದನೊಬ್ಬ ತಂತಿವಾದ್ಯದೊಂದಿಗೆ ಹಾಡು ಹೇಳುತ್ತಿದ್ದ. ಇನ್ನೊಂದು ಕಡೆ ಚಿತ್ರಕಾರರು ಯಾವುದೇ ಗಡಿಬಿಡಿಯಿಲ್ಲದೇ ತನ್ಮಯರಾಗಿ ಚಿತ್ರಗಳನ್ನು ಬಿಡಿಸುತ್ತ ಕುಳಿತಿದ್ದರು. ಕೆಲವರು ಅವರು ಹಾಗೆ ಬಿಡಿಸುವುದನ್ನು ನೋಡುತ್ತ ಆರಾಮವಾಗಿ ಕುಳಿತಿದ್ದರು. ಒಬ್ಬ ಕಲಾವಿದ "I am homeless, please help" ಎಂದು ಬರೆದುಕೊಂಡಿದ್ದ. ಕೆಲವರು ನಾನಾ ವೇಷಗಳನ್ನು ಧರಿಸಿನಿಂತು ಪ್ರವಾಸಿಗಳನ್ನು ಆಕರ್ಷಿಸಿಸುತ್ತಿದ್ದರು. ಓ ಇಲ್ಲಿಯೂ "ಉದರನಿಮಿತ್ತಂ ಬಹುಕೃತ ವೇಷಂ" ಇದೆ ಎಂದುಕೊಂಡೆ ನಾನು. ನಿಜ ಹೇಳಬೇಕೆಂದರೆ ಈ ಸ್ಕ್ವೇರ್ ಒಂದು ಲಂಡನ್ನಿನ "Most happening place". ಇಲ್ಲಿ ನಾಗರಿಕರು ಯಾವುದೇ ಸಾಮಾಜಿಕ, ರಾಜಕೀಯ, ಅಥವಾ ಸಾಮಾನ್ಯಜನರಿಗೆ ಮುಖ್ಯವೆನಿಸುವಂಥ ಯಾವುದೇ ವಿಷಯಕ್ಕಾಗಿ ಧರಣಿಗಳನ್ನು, ಪ್ರೊಟೆಸ್ಟಗಳನ್ನು ಮಾಡಬಹುದು. ಹಾಗಾಗಿ ಹೆಚ್ಚಿನ ವೇಳೆಯಲ್ಲಿ ಇದು ಜನರಿಂದ ತುಂಬಿಯೇ ಇರುತ್ತದಂತೆ. ಹಿಂದಿನ ದಿನ ನಾವು ಸಿಟಿ ಟೂರ್ ಮಾಡುವಾಗಲೂ ಟಫಲ್ಗಾರ್ ಸ್ಕ್ವೇರ ನಮ್ಮ ಕಣ್ಣಿಗೆ ಬಿದ್ದಿತ್ತು. ಆಗ ಬಗೆಬಗೆ ಬಣ್ಣದ ಸುಂದರವಾದ ಟೆಂಟುಗಳಿಂದ ಇಡೀ ಜಾಗ ತುಂಬಿತ್ತು. ಬಸ್ಸಿನಲ್ಲಿ ಕುಳಿತೇ ಅದರ ಅಂದವನ್ನು ಸವಿಯುವಂತೆ ನಮ್ಮ ಟೂರ್ ಮ್ಯಾನೇಜರ್ ಹೇಳಿದಾಗ ನಾನು ತಕರಾರು ಮಾಡಿದೆ. ಲಂಡನ್ ವರೆಗೆ ಬಂದು ಇಂಥ ಸುಂದರವಾದ ಸ್ಥಳವನ್ನು ನೋಡದೇ ಹೋಗುವುದೇ? ನಾವು ಇಲ್ಲಿಗೆ ಬರುವುದಕ್ಕೆ ಎಂಟುಹತ್ತು ದಿನಗಳ ಮುನ್ನವೇ ವಿಶ್ವವಾಣಿಯಲ್ಲಿ ವಿಶ್ವೇಶ್ವರ ಭಟ್ಟರು ಈ ಸ್ಕ್ವೇರ ಕುರಿತು ಬರೆಯುತ್ತ, ನೀವು ಇಲ್ಲಿ ಬಂದು ಸುಮ್ಮನೇ ಕುಳಿತರೂ ಸಾಕು, ಟೈಮ್ ಹೋದದ್ದೇ ತಿಳಿಯುವುದಿಲ್ಲ. ಸುಮ್ಮನೇ ಸ್ಕ್ವೇರ ಸುತ್ತಮುತ್ತ ತಿರುಗಾಡುವುದೇ ಒಂದು ಅಪೂರ್ವ ಅನುಭವ ಎಂದು ಬರೆದಿದ್ದನ್ನು ನಾನು ನೆನಪಿಟ್ಟುಕೊಂಡಿದ್ದೆ. ಹಾಗಾಗಿ ನನಗೆ ಅದನ್ನು ನೋಡಲೇ ಬೇಕಿತ್ತು. ಅಂತೂ ಅದು ಇಂದು ಕೈಗೂಡಿತ್ತು. ಮತ್ತು ನಮ್ಮ ನಿರೀಕ್ಷೆಗೂ ಮೀರಿ ಸ್ಕ್ವೇರ ಸುಂದರವಾಗಿತ್ತು.
ಅಲ್ಲಿಂದ ತೃಪ್ತರಾಗಿ ನಾವು ಮ್ಯಾಡಮ್ ತುಸ್ಸಾಡ್ಸ ವ್ಯಾಕ್ಸ್ ಮ್ಯೂಸಿಯಂ ನೋಡಲು ಹೊರಟೆವು. ಇದು ಕೂಡ ಊರ ಮಧ್ಯಭಾಗದಲ್ಲಿಯೇ ಇದೆ. ನಮಗೆಲ್ಲ ಈ ಮ್ಯೂಸಿಯಂನ ಪರಿಚಯ ಇದ್ದೇ ಇದೆ. ಅದಕ್ಕೆ ಕಾರಣ ನಮ್ಮ ದೇಶದ ಹಲವು ಪ್ರಸಿದ್ಧರು ಇಲ್ಲಿ ಮೇಣದ ಮೂರ್ತಿಗಳಾಗಿ ನಿಂತಿದ್ದಾರೆ, ಮತ್ತು ಇತ್ತೀಚೆಗೆ ಸೇರಿಸಲಾದ ನರೇಂದ್ರ ಮೋದಿಯವರ ಮೂರ್ತಿ ಮಾಡುವಾಗಿನ ಅಷ್ಟೂ ಮಾಹಿತಿಯನ್ನು ನಾವು ಮಾಧ್ಯಮಗಳ ಮುಖಾಂತರ ತಿಳಿದಿದ್ದೇವೆ.
ಟಿಕೆಟ್ ತೆಗೆಸಲು ನಾವು ಉದ್ದನೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಾಗ ಎಷ್ಟು ಹೊತ್ತು ತಗಲುತ್ತದೋ ಎಂದುಕೊಂಡಿದ್ದೆವು, ಆದರೆ ಸರದಿಯಲ್ಲಿನ ಜನ ಬೇಗಬೇಗ ಮುಂದೆ ಸರಿಯುತ್ತಿದ್ದರಿಂದ ಸಮಾಧಾನವೆನಿಸುತ್ತಿತ್ತು. ಅಲ್ಲಿ ನಿಂತುಕೊಂಡೇ ಆಕಡೆ ಈಕಡೆ ನೋಡುತ್ತಿದ್ದೆವು. ಇರುವ ಕಡಿಮೆ ಸಮಯದಲ್ಲಿ ಈ ದೇಶದ ಬಗ್ಗೆ ಇಲ್ಲಿನ ಜನಜೀವನದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟನ್ನು ತಿಳಿದುಕೊಂಡುಬಿಡಬೇಕು ಎನ್ನುವ ಕಾತರ. ರಸ್ತೆಯಲ್ಲಿ ಪುರುಷನೊಬ್ಬ ಕಸ ಗುಡಿಸುತ್ತಿದ್ದ. ಅವನ ಒಳ್ಳೆಯ ಪರ್ಸನ್ಯಾಲಿಟಿ, ಒಳ್ಳೆಯ ಬಟ್ಟೆ ಎಲ್ಲ ನೋಡಿ ನನಗೆ ಖುಷಿಯಾಯಿತು. ಅವನು ಇಷ್ಟಿಷ್ಟೇ ಗುಡಿಸಿ ತಕ್ಷಣ ಕಸವನ್ನು ಕಸದ ಮರಕ್ಕೆ ಹಾಕಿಕೊಳ್ಳುತ್ತಿದ್ದ ಮತ್ತು ಮರ ತುಂಬುವುದಕ್ಕೆ ಮೊದಲು ಹೋಗಿ ಕಸದ ಬುಟ್ಟಿಯಲ್ಲಿ ಅದನ್ನು ಬರಿದು ಮಾಡಿ ಬರುತ್ತಿದ್ದ. ಇಡೀ ಊರು ಪ್ರವಾಸಿಗಳಿಂದಲೇ ತುಂಬಿರುವುದರಿಂದ ಮತ್ತೆ ಇಲ್ಲೆಲ್ಲ ನಡೆದಾಡುತ್ತಲೇ ಎಲ್ಲರೂ ಕಾಫಿ ಕುಡಿಯುವುದು, ಏನಾದರೂ ಸ್ನಾಕ್ಸ್ ತಿನ್ನುವುದು ಮಾಡುತ್ತಾರಾದ್ದರಿಂದ ಇಡೀ ಊರಲ್ಲಿ ಅಲ್ಲಲ್ಲಿ ಸಾಕಷ್ಟು ಡಸ್ಟಬಿನ್ ಗಳು ಇವೆ. ಹಾಗಾಗಿ ಜನರೂ ಅದರಲ್ಲಿಯೇ ಕಸವನ್ನು ಚೆಲ್ಲುತ್ತಾರೆ. ಸ್ವಚ್ಛತೆಯ ಕೆಲಸವಂತೂ ಯಾವಗಲೂ ನಡೆದೇ ಬಿಟ್ಟಿರುತ್ತದೆ. ನಮ್ಮ ಜನರೂ ಅಲ್ಲಿ ಸ್ವಲ್ಪ ಶಿಸ್ತಾಗಿ ವರ್ತಿಸುತ್ತಾರೆ.
ಮ್ಯಾಡಮ್ ತುಸ್ಸಾಡ್ಸ ಮ್ಯೂಸಿಯಂ ನಾವು ಸಾಮಾನ್ಯವಾಗಿ ಊಹಿಸಿಕೊಂಡಿರುವಂಥ ಅಥವಾ ನೋಡಿರುವಂಥ ಮ್ಯೂಸಿಯಂ ಥರ ಅಲ್ಲ. ಒಳಪ್ರವೇಶಿಸುತ್ತಲೇ ನೂಕುನುಗ್ಗಲು ಪ್ರಾರಂಭವಾಗಿಬಿಡುತ್ತದೆ. ಕತ್ತಲೆಯಲ್ಲಿ ತಡಕಾಡುತ್ತಾ ನಾವು ಪ್ರವೇಶ ಮಾಡುವುದಕ್ಕೂ ಯಾವುದೋ ಒಂದು ಮೇಣದ ಮೂರ್ತಿ ಧುತ್ತೆಂದು ಎದುರಾಗಿ ಬಿಡುತ್ತದೆ. ಅದು ಮೂರ್ತಿಯೋ, ನಿಜವಾದ ಮನುಷ್ಯನೋ ಎಂದು ಕೂಡ ಒಮ್ಮೊಮ್ಮೆ ಕನ್ಫ್ಯೂಸ್ ಆಗುವಷ್ಟು ಸಹಜವಾಗಿ ಇರುವ ಮೂರ್ತಿಗಳು ಅಷ್ಟೇ ಸಹಜವಾಗಿ ಎದುರಾಗಿಬಿಡುತ್ತವೆ. ಅದರರ್ಥ ಅವುಗಳನ್ನು ಸಾಲಾಗಿ ಇಟ್ಟಿಲ್ಲ. ಬಹುಷಃ ಜೀವಂತಿಕೆಯ ಫೀಲ್ ಬರಲಿಕ್ಕಾಗಿ ಬೇಕೆಂತಲೇ ಎಲ್ಲೆಂದರಲ್ಲಿ ಇಟ್ಟಿದ್ದಾರೆ. ಜನರನ್ನು ದಾಟಿಕೊಂಡು, ತಳ್ಳಿಕೊಂಡು ನೀವು ಹೋಗುತ್ತಿರುವಂತೇ ಒಮ್ಮಿಲೇ ಸಲ್ಮಾನ್ ಖಾನನ ಜೊತೆ ಅವನಂತೆಯೇ ಬಾಡಿ ಬಿಲ್ಡ್ ಮಾಡಿದ ಸರದಾರಜಿಯೊಬ್ಬರು ಎದುರಾಗಿಬಿಡುತ್ತಾರೆ. ಇನ್ನೊಂದು ಕಡೆ ಐಶ್ವರ್ಯಾ ರೈ ಹತ್ತಿರ ಹುಡುಗರ ಗುಂಪೊಂದು ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನವಾಗಿರುತ್ತದೆ. ಅಮಿತಾಭ್ ಬಚ್ಚನನನ್ನು ನೋಡಿ ಆರವತ್ತು ಎಪ್ಪತ್ತರ ದಶಕದಲ್ಲಿ ಯುವತಿಯರಾಗಿದ್ದ ಮಧ್ಯವಯಸ್ಸಿನ ಭಾರತೀಯ ಹೆಣ್ಣುಮಕ್ಕಳ ಮೈಬಿಸಿ ಏರಿರುತ್ತದೆ. ಆದರೆ ಎಲ್ಲರಿಗಿಂತ ಹೆಚ್ಚು ಜನಪ್ರಿಯ ಎಂದರೆ ಅಲ್ಲಿಯೂ ಮೋದಿನೇ. ಮೋದಿಯ ಹತ್ತಿರ ನಿಂತ ಜನರ ವರ್ತನೆಯನ್ನು ನೋಡಬೇಕು ನೀವು. ಆಶ್ಚರ್ಯದಿಂದ, ಖುಷಿಯಿಂದ, ಮತ್ತು ಮೋಜಿನಿಂದ ನಕ್ಕುನಕ್ಕು ಇಡುತ್ತೀರಿ. ಅದೇನು ನಿಜವಾದ ಮೋದಿನೇ ಎದುರಿಗೆ ಬಂದಂತೆ ಜನ ಕೈಮುಗಿಯುವುದೇನು, "ಮೋದಿ ಸಹಬ, ಇಸ್ ಬಾರ ಭೀ ಆಪ ಹೀ ಕೊ ಪಿಎಮ್ ಬನನಾ ಹೈ" ಎಂದೆಲ್ಲ ಹೇಳುತ್ತ ನಿಜವಾಗಿ ಮೋದಿಯೊಂದಿಗೇ ಮಾತನಾಡುತ್ತಿದ್ದೇವೆಂದು ಭ್ರಮಿಸುತ್ತ ಆಕಡೆ ಈಕಡೆ ಜರುಗದೇ ಅಲ್ಲಿಯೇ ನಿಂತುಬಿಟ್ಟ ಜನಜಂಗುಳಿಯನ್ನು ನೋಡಿ ತುಂಬ ಮಜವೆನಿಸಿತು. ಮೋದಿ ಸಾಹೇಬರ ಮೋಡಿಯಿಂದ ಹೊರಬರುವುದು ಸಾಧ್ಯವೇ ಇಲ್ಲ ಎನಿಸಿತು. ಉಳಿದಂತೆ ಬೇರೆ ಬೇರೆ ದೇಶಗಳ ಪ್ರಸಿದ್ಧರು, ಇಂಗ್ಲಂಡ್ ರಾಜಮನೆತನದ ಸದಸ್ಯರ ಮೂರ್ತಿಗಳು, ಚಾರ್ಲಿ ಚಾಪ್ಲಿನ್, ಮರ್ಲಿನ್ ಮನ್ರೋ, ಮಾರ್ಟಿನ್ ಲೂಥರ್ ಕಿಂಗ, ಹೀಗೆ ಅನೇಕರ ಮೇಣದ ಮೂರ್ತಿಗಳಿವೆ. ಅಲ್ಲದೇ ಇಂಗ್ಲಂಡಿನ ಇತಿಹಾಸವನ್ನು ತೋರಿಸುವ ಪ್ರತಿಕೃತಿಗಳನ್ನೂ ಆಟೋರಿಕ್ಷಾದಲ್ಲಿ ಕುಳಿತು ನೋಡಬಹುದು. ಈ ಮ್ಯೂಸಿಯಂನ ಕರ್ತೃ ಮ್ಯಾಡಮ್ ತುಸ್ಸಾಡ್ಸಳ ಮೇಣದ ಮೂರ್ತಿಯೂ ಇದೆ. ಮತ್ತು ಮೂರ್ತಿಗಳನ್ನು ಮಾಡುವ ವಿವಿಧ ಹಂತಗಳ ವಿದಾನವನ್ನು ತಿಳಿಸುವ ಮೂರ್ತಿಗಳೂ ಇವೆ. ಅಂತೂ ಒಂದೊಳ್ಳೆ ಸ್ಥಳವನ್ನು ನೋಡಿದ ತೃಪ್ತಿಯಿಂದ ನಾವು ಲಾರ್ಡ್ಸ ಕ್ರಿಕೆಟ್ ಮೈದಾನಕ್ಕೆ ಹೋದೆವು. ನಿಜ ಹೇಳಬೇಕೆಂದರೆ ನನಗಾಗಲಿ, ಅಕ್ಕನಿಗಾಗಲಿ ಮೊದಲಿನಿಂದಲೂ ಕ್ರಿಕೆಟ್ಟಿನಲ್ಲಿ ಅಂಥ ಆಸಕ್ತಿಯೇನಿಲ್ಲ. ಹಾಗಾಗಿ ಆಟವೂ ಸರಿಯಾಗಿ ತಿಳಿಯುವುದಿಲ್ಲ. ಆದರೂ ಎಲ್ಲರೊಡನೆ ಆ ದೊಡ್ಡ ಇತಿಹಾಸ ಪ್ರಸಿದ್ಧ ಮೈದಾನವನ್ನು ನೋಡಿ ಬಂದೆವು. ಅಲ್ಲಿ ನಮಗೆ ಗೈಡ್ ಮಾಡಲು ಸುಮಾರು ಎಪ್ಪತ್ತರ ಪ್ರಾಯದ ಗೈಡ್ ಇದ್ದದ್ದೇ ಕುತೂಹಲವೆನಿಸಿತು ನಮಗೆ. ಇಲ್ಲಿನ ಬಹುತೇಕ ಪುರುಷರು ಆರಡಿಗಿಂತ ಜಾಸ್ತಿಯೇ ಎತ್ತರವಿರುತ್ತಾರೆ, ಹೆಂಗಸರು ಎತ್ತರ, ತೆಳ್ಳಗೆ. ಬಹುಷಃ ನಿತ್ಯ ಓಡಾಟದ ಬಹುಪಾಲು ಕಾಲ್ನಡಿಗೆಯಿಂದ ಅಥವಾ ಸೈಕಲನಿಂದ ಪೂರೈಸುವ ಕಾರಣಕ್ಕಾಗಿ ಇವರಲ್ಲಿ ಬೊಜ್ಜು ಇರಲಿಕ್ಕಿಲ್ಲ ಎನಿಸಿತು.
ನಂತರದ ನಮ್ಮ ಗುರಿ ಲಂಡನ್ ಆಯ್ (London Eye) ನೋಡುವುದಾಗಿತ್ತು. ಮತ್ತೆ ಅದಕ್ಕೆ ಸುಮಾರು ಹೊತ್ತು ಟಿಕೆಟ್ ಕೌಂಟರನಲ್ಲಿ ನಿಂತು ಆಮೇಲೆ ಕ್ಯೂನಲ್ಲಿ ನಿಂತು, ಕೊನೆಗೊಮ್ಮೆ ಜನಜಾತ್ರೆಯಲ್ಲಿ ನಾವೂ ಬೆರೆಯುತ್ತ ಈ ಲಂಡನ್ ಆಯ್ ಎಂಬ ಜಾಯಿಂಟ್ ವ್ಹೀಲನ್ನು ತಲುಪಿದೆವು. ಲಂಡನ್ ಆಯ್ ಇದು ಇಡಿ ಶಹರವನ್ನು ಎತ್ತರದಿಂದ ವೀಕ್ಷಿಸಲು ಮತ್ತು ಲಂಡನ್ನಿನ ಪಾರಂಪರಿಕ ಕಟ್ಟಡಗಳ ಪಕ್ಷಿನೋಟವನ್ನು ಜನರಿಗೆ ದೊರಕಿಸಲು ಮಾಡಿರುವ ಜಾಯಿಂಟ್ ವ್ಹಿಲನಂಥ ಚಕ್ರ. ಇದರಲ್ಲಿ ಸುಮಾರು ಹದಿನೈದಿಪ್ಪತ್ತು ಹೊರಗಿನ ದೃಶ್ಯಗಳೆಲ್ಲ ಕಾಣುವಂಥ ಗಾಜಿನ ಕಾರುಗಳಿವೆ. ಒಂದೊಂದು ಕಾರಿನಲ್ಲೂ ಹನ್ನೆರಡು, ಹದಿನೈದು ಜನರನ್ನು ಏರಿಸಿ ಬಾಗಿಲನ್ನು ಭದ್ರ ಪಡಿಸುತ್ತಾರೆ. ಚಕ್ರ ತಿರುಗುತ್ತಿರುವಾಗ ನಾವು ನಿಂತ ಕಾರು ಮೇಲೆ ಮೇಲೆ ಹೋಗುತ್ತ ಇಡೀ ಲಂಡನ್ ಶಹರದ ದರ್ಶನ ಮಾಡಿಸುತ್ತದೆ. ಪ್ರಮುಖ ಕಟ್ಟಡಗಳನ್ನು ನೋಡಲು ಅನುಕೂಲವಾಗುವಂತೆ ಒಳಗಡೆ ಪುಟ್ಟ ಕಂಪ್ಯೂಟರನಲ್ಲಿ ಯಾವ ದಿಕ್ಕಿನಲ್ಲಿ ಯಾವ ಕಟ್ಟಡವಿದೆ ಎಂದು ತೋರಿಸುವ ಗೈಡ್ ಇರುತ್ತದೆ. ಅದರ ಸಹಾಯದಿಂದ ಕಟ್ಟಡಗಳನ್ನು ನೋಡಿ ಗುರುತಿಸಬಹುದು. ಸಂಪೂರ್ಣ ಮೇಲೆ ಹೋದಾಗ ಸಿಟಿಯ ವಿಹಂಗಮ ದೃಶ್ಯ ಕಣ್ಣಿಗೆ ಹಬ್ಬವೆನಿಸುತ್ತದೆ. ಕೆಳಗೆ ಹರಿಯುವ ಥೇಮ್ಸ್ ನದಿಯಲ್ಲಿ ತೇಲುವ ಹಡಗುಗಳು ಮನದ ಭಾವಗಳನ್ನು ಹೊಯ್ದಾಡಿಸುತ್ತವೆ. ಹಳೆಯದೆಲ್ಲವನ್ನೂ ಪ್ರೀತಿಸುವ ಬ್ರಿಟಿಷರ ಸಾಂಪ್ರದಾಯಿಕ ಶಹರಕ್ಕೆ ಈ ಲಂಡನ್ ಆಯ್ ಹೊಸ ಸೇರ್ಪಡೆ ಹೌದಾದರೂ ಸರಿಯಾಗಿ ಹೊಂದಿಕೊಂಡಿದೆ.
ದಿನದ ಕೊನೆಯ ನಮ್ಮ ಗುರಿ, ಗೊತ್ತುಗುರಿಯಿಲ್ಲದೇ ಸುಮ್ಮನೇ ಆಕ್ಸಫರ್ಡ ಸ್ಟ್ರೀಟನಲ್ಲಿ ಉದ್ದಕ್ಕೆ ತಿರುಗಾಡುವುದಾಗಿತ್ತು. ಇಕ್ಕೆಲಗಳಲ್ಲೂ ಅಗಲವಾದ ಕಾಲ್ನಡಿಗೆಯ ವಾಕರ್ಸ ವೇ ಹೊಂದಿರುವ ಈ ರಸ್ತೆಗುಂಟ ನಡೆಯುವುದೇ ಒಂದು ವಿಶಿಷ್ಠ ಅನುಭವ. ಲಂಡನ್ನಿನಿಂದ ನಲವತ್ತು ಕಿಲೊಮೀಟರ ದೂರದಲ್ಲಿರುವ ನಮ್ಮ ಅಣ್ಣನ ಮಗ ಮತ್ತು ಸೊಸೆ ನಮ್ಮನ್ನು ಭೆಟ್ಟಿಯಾಗಲು ಆಕ್ಸಫರ್ಡ ಸ್ಟ್ರೀಟಿಗೇ ಬಂದು ಕೂಡಿಕೊಂಡದ್ದು ನಮಗಿಬ್ಬರಿಗೂ ತುಂಬ ಖುಷಿ ನೀಡಿತು. ಅವರ ಜೊತೆ ಹೊಟೆಲ್ಲೊಂದಕ್ಕೆ ಹೋಗಿ ಕಾಫಿವಚನ ಕುಡಿದೆವು.
ಲಂಡನ್ನಿನಲ್ಲಿ ನಮ್ಮ ತಿರುಗಾಟದ ಈ ಅಂತಿಮ ದಿನದಂದೂ ನಾವು ಮಂತ್ರಾ ಹಾಟೆಲ್ಲಿಗೇ ಹೋಗಿ ಡಿನ್ನರ್ ಮುಗಿಸಿದೆವು. ಅಂದು ಅಲ್ಲಿ ಪಂಜಾಬಿ ಕುಟುಂಬದ ಒಂದು ಹುಟ್ಟುಹಬ್ಬದ ಪಾರ್ಟಿ ಇತ್ತು. ಹೀಗಾಗಿ ಇಡೀ ಹೊಟೆಲ್ಲು ಟಿಪಿಕಲ್ ಪಂಜಾಬಿ ಸರದಾರಜಿಗಳ ಮತ್ತು ಅದೇ ಟಿಪಿಕಲ್ ಚಮಕ-ಚಮಕ ಪಂಜಾಬಿ ಡ್ರೆಸ್ಸುಗಳ, ಕೆಂಪು ಲಿಪಸ್ಟಿಕಗಳ, ಪಂಜಾಬಿ ಹೆಣ್ಣುಮಕ್ಕಳ ಕಲರವದಿಂದ ತುಂಬಿಹೋಗಿತ್ತು. ನಮಗೆ ನಾವು ಇಂಗ್ಲಂಡಿನಲ್ಲಿದ್ದೇವೆ ಎನಿಸಲೇ ಇಲ್ಲ. ಸಂಪೂರ್ಣ ಭಾರತೀಯ ಫೀಲಿಂಗನಿಂದ ಮನಸ್ಸು ಹಗುರವಾಗಿ ಹೋಯಿತು. ಈ ಪಂಜಾಬಿಗಳು ನೂರಾರು ವರ್ಷಗಳಿಂದ ಇಂಗ್ಲಂಡಿಗೆ ಬಂದು ಬಂದು ನೆಲೆಸಿಬಿಟ್ಟಿರುವುದರಿಂದ ಅಲ್ಲಿ ಅವರ ಸಂಖ್ಯೆ ಸಾಕಷ್ಟಿದೆ. ನಾವು ಬಂದ ರಾತ್ರಿಯೇ ಊಟ ಮಾಡಿದ "ಪಂಜಾಬಿ ಕಢೈ" ಪಂಜಾಬಿಗಳೇ ನಡೆಸುವ ರೆಸ್ಟೊರೆಂಟ್ ಆಗಿತ್ತು.
(ಮುಂದುವರೆಯುವುದು)
