- ಸ್ವಾಮಿ ವಿವೇಕಾಂದರು 1893ರಲ್ಲಿ ಅಮೇರಿಕಾದ ಚಿಕ್ಯಾಗೋದಲ್ಲಿ ತಮ್ಮ ವಿಶ್ವವಿಖ್ಯಾತ ಭಾಷಣವನ್ನು ಮಾಡುವುದಕ್ಕೆ ಮೊದಲು ಅಂದರೆ 1892ರಲ್ಲಿ ಕೊಲ್ಹಾಪುರದ ಮಹಾರಾಜರ ಮಂತ್ರಿಗಳಿಂದ ಪತ್ರವೊಂದನ್ನು ತೆಗೆದುಕೊಂಡು ಬಂದು ಬೆಳಿಗ್ಗೆ ಆರೂವರೆಯ ಸುಮಾರಿಗೆ ಬೆಳಗಾವಿಯ ರಿಸಾಲ್ದಾರ ಗಲ್ಲಿಯಲ್ಲಿರುವ ಶ್ರೀ. ಸದಾಶಿವ ಭಾತೆ ಅವರ ಮನೆಯ ಬಾಗಿಲು ಬಡಿದಾಗ ಅವರ ಮೇರು ವ್ಯಕ್ತಿತ್ವದ, ಅದರ ಔನ್ನತ್ಯದ ಸಣ್ಣ ಸುಳಿವೂ ಭಾತೆಯವರಿಗೆ ಇರಲಿಲ್ಲ. ಪರಿಚಯ ಪತ್ರವನ್ನು ನೋಡಿ ತಮ್ಮ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ಭಾತೆಯವರಿಗೆ ಸ್ವಾಮಿಜಿಯವರ ಮಾತುಗಳಿಂದ ಈತ ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಮನವರಿಕೆಯಗುತ್ತಲೇ ಅವರು ಬೆಳಗಾವಿಯ ವಿದ್ವತ್ತಪೂರ್ಣ ಸಮೂಹದ ಒಂದಿಷ್ಟು ಜನರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸ್ವಾಮಿಜಿಯವರೊಡನೆ ಜಾಣರ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮ, ಧರ್ಮ, ಆಧ್ಯಾತ್ಮ, ಭಾರತದ ಬಗೆಗಿನ ನಿರಂತರ ಚರ್ಚೆಗಳಿಂದ ವಿವೇಕಾನಂದರು ಎಂಥ ಶ್ರೇಷ್ಠ ವ್ಯಕ್ತಿ ಎನ್ನುವುದು ಅವರಿಗೆ ಮನವರಿಕೆಯಾಯಿತು. ಭಾತೆಯವರು ತಮ್ಮ ಇನ್ನೊಬ್ಬ ಸ್ನೇಹಿತ ಬಂಗಾಲಿ ಗೃಹಸ್ತರಾದ ಶ್ರೀ. ಹರಿಪಾದ ಮಿತ್ರ ಅವರನ್ನೂ ತಮ್ಮ ಮನೆಗೆ ಕರೆತಂದು ತಮ್ಮ ಮನೆಯಲ್ಲಿ ಉಳಿದುಕೊಂಡಿರುವ ಈ ಅಸಾಧಾರಣ ಬುದ್ಧಿಮತ್ತೆಯ ಸ್ವಾಮಿಜಿಯನ್ನು ಪರಿಚಯಿಸಿದರು. ತಕ್ಷಣವೇ ಕಾರ್ಯಪ್ರವೃತ್ತವಾದ ಮಿತ್ರರವರ ತಲೆಯಲ್ಲಿ ಹೇಗಾದರೂ ಮಾಡಿ ಈ ಸ್ವಾಮಿಜಿಯನ್ನು ಬೆಳಗಾವಿಯ ಕೋಟೆಯ ಆವರಣದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಲೇಬೇಕು ಎನ್ನುವ ಯೋಚನೆ ತೀವ್ರವಾಯಿತು.
ಬೆಳಗಾವಿಯಿಂದ ಹೊರಟ ಸ್ವಾಮಿಜಿ ಮದ್ರಾಸಿಗೆ ತಲುಪಿದರು. ಅಮೇರಿಕೆಯ ಚಿಕ್ಯಾಗೋದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ವತಿಯಿಂದ ಭಾಗವಹಿಸಲು ಅಲ್ಲಿಯೇ ಅವರ ಆಯ್ಕೆ ಮಾಡಲಾಯಿತು. ನಂತರ ಅವರು ಲೋಕವಿಖ್ಯಾತರಾದರು. ಅನೇಕ ವರ್ಷಗಳ ಕಾಲ ಅಮೇರಿಕಾ ಮತ್ತು ಯುರೋಪಿನ ದೇಶಗಳಲ್ಲಿ ಸಂಚರಿಸಿ ಹಿಂದು ಧರ್ಮದ ಸಾರವನ್ನು ಜನರಿಗೆ ತಿಳಿಸಿದರು.
ಎಷ್ಟೋ ವರ್ಷಗಳ ನಂತರ, ಇತ್ತೀಚೆಗೆ ಸ್ವಾಮಿಜಿ ಒಂಬತ್ತು ದಿನಗಳ ಕಾಲ ತಂಗಿದ್ದ ಬೆಳಗಾವಿಯ ಕೋಟೆಯ ಆವರಣದ ಮನೆಯನ್ನು ಒಂದಿಷ್ಟು ನವೀಕರಿಸಿ ರಾಮಕೃಷ್ಣಾಶ್ರಮವನ್ನು ಅಭಿವೃದ್ಧಿಗೊಳಿಸಲಾಗಿದೆ. ವಿಶಾಲವಾದ ಜಾಗದಲ್ಲಿ ಧ್ಯಾನಮಂದಿರ, ಸ್ವಾಮಿಜಿ ಉಳಿದುಕೊಂಡ ಮನೆ, ರಾಮಕೃಷ್ಣಾಶ್ರಮದಿಂದ ಪ್ರಕಾಶನಗೊಂಡ ಪುಸ್ತಕಗಳ ಮಾರಾಟ ಮಳಿಗೆ, ಸಭೆ-ಸಮಾರಂಭಗಳನ್ನು ನಡೆಸಲು ದೊಡ್ಡದಾದ ಬಯಲು ಸಭಾಂಗಣ ಎಲ್ಲವೂ ಇಲ್ಲಿ ಇವೆ. ಸ್ವಾಮಿ ರಾಮಕೃಷ್ಣರ ಜೀವನಕಥೆಯನ್ನು ಹೇಳುವ ಚಿತ್ರಪಟಗಳನ್ನು ಸಾಲಾಗಿ ಜೋಡಿಸಿದ ಓಪನ್ ಹಾಲ್ ಕೂಡ ಇದೆ. ದಿನಾಲೂ ಭಜನೆ, ಆರತಿ ನಡೆಯುತ್ತವೆ. ಶಾಲೆ-ಕಾಲೇಜಿನ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲು ತರಬೇತಿ ಕೇಂದ್ರವಿದೆ.
ಸ್ವಾಮಿಜಿ ಮೂರು ದಿನಗಳು ಉಳಿದುಕೊಂಡಿದ್ದ ಶ್ರೀ. ಸದಾಶಿವ ಭಾತೆಯವರ ರಿಸಾಲ್ದಾರ ಗಲ್ಲಿಯ ಮನೆಯನ್ನು ಅಗತ್ಯವಿದ್ದಷ್ಟು ನವೀಕರಿಸಿ ಅಲ್ಲಿಯೂ ರಾಮಕೃಷ್ನಾಶ್ರಮದ ಶಾಖೆಯನ್ನು ತೆರೆಯಲಾಗಿದೆ. ಕಲ್ಲಿನ ಹಳೆಯ ಶೈಲಿಯ ಮನೆಯು ಅತ್ಯಂತ ಮಜಬೂತಾಗಿದ್ದು ಆಕರ್ಷಕವಾಗಿದೆ. ಸ್ವಾಮಿಜಿ ಬಳಸುತ್ತಿದ್ದ ಕೇಸರಿ ನಿಲುವಂಗಿ, ಅವರ ಪಾದರಕ್ಷೆಗಳು, ಬೆಳಗಾವಿಯ ಆಗಿನ ಪ್ರಸಿದ್ಧ ಫೋಟೋಗ್ರ್ರಾಫರ್ ಶ್ರೀ. ಗೋವಿಂದ ವೆಲ್ಲಿಂಗ್ ಅವರು ತೆಗೆದ ಸ್ವಾಮಿಜಿಯವರ ಆಳೆತ್ತರದ ಅಪರೂಪದ ಫೋಟೋವನ್ನೂ ಇಡಲಾಗಿದೆ. ಮೇಲಿನ ಮಹಡಿಯಲ್ಲಿ ಸುಂದರವಾದ ಸಂಗ್ರಹಾಲಯವಿದೆ. ಇಲ್ಲಿ ಬಹಳ ಅಪರೂಪದ ಛಾಯಾಚಿತ್ರಗಳು, ಪೇಂಟಿಂಗಗಳನ್ನು ಜೋಡಿಸಲಾಗಿದೆ. ಜೊತೆಗೆ ಸ್ವಾಮಿಜಿ ಈ ಮನೆಯಲ್ಲಿ ತಂಗಿದಾಗ ಮಲಗಲು ಬಳಸಿದ ಮರದ ಮಂಚವನ್ನೂ ಆಳೆತ್ತರದ ಬೆಲ್ಜಿಯಂ ಕನ್ನಡಿಯನ್ನೂ ಇಡಲಾಗಿದೆ.
ಎರಡೂ ಶಾಖೆಗಳು ಬೆಳಗಾವಿಗರಿಗೆ ಮತ್ತು ಬೆಳಗಾವಿಗೆ ಬರುವ ಜನರಿಗೆ ಒಂದೊಳ್ಳೆ ಅನುಭವ, ಮಾಹಿತಿ ಜೊತೆಗೆ ದಿವ್ಯವಾದ ಅನುಭೂತಿಯನ್ನು ನೀಡುವ ಕೇಂದ್ರಗಳಾಗಿವೆ. ಇಲ್ಲಿ, ಇದೇ ಜಾಗದಲ್ಲಿ ಸ್ವಾಮಿ ವಿವೇಕಾನಂದರು ನಡೆದಾಡಿದ್ದರು ಎಂದು ನೆನೆಸಿಕೊಳ್ಳುತ್ತಿದ್ದಂತೇ ಮೈ ರೋಮಾಂಚನಗೊಳ್ಳುತ್ತದೆ. ಸ್ವಾಮಿಜಿಯ ಪಾದಧೂಳಿಯಿಂದ ಬೆಳಗಾವಿಯ ನೆಲ ಪವಿತ್ರವಾಯಿತು ಎನ್ನುವ ಸಂತಸ ಮನಸ್ಸನ್ನು ತುಂಬಿ ಧ್ವನಿ ಗದ್ಗದಿತವಾಗುತ್ತದೆ.
ತಪ್ಪದೇ ಎಲ್ಲರೂ ವೀಕ್ಷಿಸಬೇಕಾದ ಸ್ಥಳಗಳಿವು.
DzsÁgÀ:- 1) Reminiscences
of Swami Vivekananda- His Eastern and Western Admirers, published by Swami
Muktidananda
2) ಆಶ್ರಮಗಳ ಭೇಟಿ ಮತ್ತು ರಿಸಾಲ್ದಾರ ಗಲ್ಲಿಯ ಆಶ್ರಮದ ಸ್ವಾಮಿಜಿಯವರೊಡನೆ ಚರ್ಚೆ


