Thursday, 27 March 2014

ಮುದ್ದು ವಿದ್ಯಾರ್ಥಿಗಳಿಗೊಂದು ಪ್ರೇಮಪತ್ರದ ನಮೂನೆ


ಮುದ್ದು ವಿದ್ಯಾರ್ಥಿಗಳಿಗೊಂದು ಪ್ರೇಮಪತ್ರದ ನಮೂನೆ

ನಮ್ಮ ಪ್ರೀತಿಯ ಮುದ್ದು ಮಕ್ಕಳಿಗೆ ಅರ್ಥಾತ್ ವಿದ್ಯಾರ್ಥಿಗಳಿಗಾಗಿ ನಾವು ಏನೇನು ಮಾಡುವುದಿಲ್ಲ? ಬೇಸರ ಬಂದು ಅವು ಕ್ಲಾಸಿನಲ್ಲೇ ತೂಕಡಿಸಿದರೂ ಒಂದು ತಾಸು ಬಿಡದೇ ಕೊರೆಯುವುದಂತೂ ಇದ್ದೇ ಇದೆ. ಆದರೂ ನಾವು ತೀರಾ ಕಟುಕರೇನಲ್ಲ. ಹಾಗೆ ಯಾರಾದರೂ ಕ್ಲಾಸಿನಲ್ಲೇ ನಿದ್ದೆ ಮಾಡಲು ಸುರು ಮಾಡಿದರೆ, ಪಾಪ ಮನೆಯಲ್ಲಿ ಏನು ಕಷ್ಟವೋ ಏನೊ ಇಲ್ಲಿಯಾದರೂ ಒಂದಿಷ್ಟು ನೆಮ್ಮದಿಯಿಂದ ಮಲಗಲಿ ಎಂದು ಧ್ವನಿ ತಗ್ಗಿಸುತ್ತೇವೆ. ಇನ್ನು ಮತ್ಯಾರೋ ವಿದ್ಯಾರ್ಥಿ ಕೂತಲ್ಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಇಹಪರದ ಚಿಂತೆ  ಬಿಟ್ಟು ತನ್ನದೇ ಲೋಕದಲ್ಲಿ ಕಳೆದುಕೊಂಡುಬಿಟ್ಟಿದ್ದರೆ ಅವನಿಗೆ ಅವನನ್ನು ಹುಡುಕಿಕೊಡುವ ಕಾರಭಾರ ಮಾಡುವುದೇ ಇಲ್ಲ. ಪಾಪ ನಮಗಿರುವುದೇ ಒಂದು ಅಸ್ತ್ರ ಎಂದುಕೊಂಡು ದೊಡ್ಡದನಿಯಲ್ಲಿ ಕೂಗುತ್ತಾ, ಇಡೀ ಕ್ಲಾಸ್ ರೂಮನ್ನೇ ನಮ್ಮ ರಂಗಸ್ಥಳವನ್ನಾಗಿ ಪರಿವರ್ತಿಸಿಕೊಂಡು ಮೈಕೈಗಳನ್ನೆಲ್ಲಾ ಕುಣಿಸುತ್ತಾ ನಾವು ವೀರಗರ್ಜನೆಗೈಯ್ಯುತ್ತಿದ್ದರೆ ಸಮಾಧಿ ಯೋಗಕ್ಕೇರುವ ತಾಕತ್ತು ಅವನಿಗಿದೆಯೆಂದರೆ ಅವನ ಪ್ರಭುದ್ಧತೆ ಎಂಥ ಮೇಲ್ಮಟ್ಟದ್ದಾಗಿರಬಹುದೆಂದು ಅರಿವಾಗಿ ಅವನನ್ನು ಕೊಂಚವೂ ಅಲುಗಾಡಿಸದೇ ಅವನ‌ಷ್ಟಕ್ಕೆ ಅವ ನ‌ನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವರು ಪುಟ್ಟ ಮಕ್ಕಳಂತೆ ಬಾಯಲ್ಲಿ ಬೆರಳು ಹಾಕಿಕೊಂಡು ಚೀಪುತ್ತಿದ್ದರೆ, ನೋಟಬುಕ್ಕುಗಳಲ್ಲಿ ಆಟವಾಡುತ್ತಿದ್ದರೆ  ನಾವು ನೋಡಿಯೇ ಇಲ್ಲವೆಂಬಂತೆ ನಟಿಸಿ ಅವರ ಮುಜುಗರ ತಪ್ಪಿಸಿಬಿಡುತ್ತೇವೆ. ಇದೇನು  ಮಹಾ,  ನೀವು ಮಾಡುವುದೇ ಇಷ್ಟು ಅಂತ ನೀವೇನೂ ಮೂಗು ಮುರಿಯುವುದು ಬೇಡ. ಇನ್ನೂ ನನ್ನ ಲಿಸ್ಟು ಮುಗಿದಿಲ್ಲ.

ನೋಟ್ಸು, ಕ್ವೆಶ್ಚನ್ ಬ್ಯಾಂಕು, ಇಂಪಾರ್ಟೆಂಟ್ ಪ್ರಶ್ನೆಗಳು, ಮೂರ್ನಾಲ್ಕು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಕ್ಲಾಸಿನಲ್ಲಿ ಬಿಡಿಸುವುದು, ಇವೆಲ್ಲಾ ಉಪಕಾರಗಳನ್ನು ಅವರು ಕೇಳದೆಯೇ ಮಾಡುತ್ತಿರುತ್ತೇವೆ. ಅದರ ಮೇಲೆ ಕೇಸ್ ಸ್ಟಡಿ, ಅಸೈನ್ಮೆಂಟು, ಅದು ಇದು ಅಂತ ನಮಗೆ ಗೊತ್ತಿಲ್ಲದ್ದನ್ನೆಲ್ಲ ಗೊತ್ತಿದ್ದವರಿಗಿಂತ ಹೆಚ್ಚು ಸಿರೀಯಸ್ಸಾಗಿ ಮಾಡಿಸುತ್ತೇವೆ.

ಇತ್ತಿತ್ತಲಾಗಿ ನಾವು ಇನ್ನೊಂದಿಷ್ಟು add on ಉಪಕಾರಗಳನ್ನು ಸುರು ಹಚ್ಚಿಕೊಂಡಿದ್ದೇವೆ. ಶಾಲೆಯಲ್ಲಿ ಏನು ಎಂದರೆ ಏನೂ ಕಲಿತಿರದ ನಮ್ಮ ಮುದ್ದು ಮಕ್ಕಳಿಗೆ ನಮ್ಮ ಪಾಠ ಎಲ್ಲಿಂದ ಶುರು ಮಾಡಬೇಕೆಂಬ ಗೊಂದಲದಲ್ಲಿ ನಾವೇ ಬಿದ್ದು ಗೋಳಾಡಿದರೂ ಪ್ರಾಬ್ಲ್ಂ ಅನ್ನು ಅಲ್ಲಿಯೇ ಫಿಕ್ಸ್ ಮಾಡಿ, ಅಕ್ಷರಗಳಿಂದಲೇ ಆಗಲಿ ಅಂತ ಪ್ರಾರಂಭಿಸಿಯೇ ಬಿಡುತ್ತೇವೆ. ಇನ್ನು ವ್ಯಾಕರಣ, ವಾಕ್ಯರಚನೆ ಅಂತೆಲ್ಲಾ ಅಂತ:ಕರಣದಿಂದ ಹೇಳಿಕೊಟ್ಟು ಯಾಕಾರು ಸಿಗತಿವಿ ಟೀಚರ್ಸಿಗೆ, ಬ್ಯಾರೆ ಸಿಕ್ಸೆ ಇಲ್ವಾ ಸ್ಟುಡಂಟಿಗೆ' ಅಂತ ಅವು ಅತ್ತು ಸಾಲೆ ಬಿಡಿಸಿದ ದೋಷಕ್ಕೆ ತುತ್ತಾಗ್ತೀವಿ. ಇರಲಿ ಈಗ ಮಾತ್ರ ನಾನು ಕಲಿಸುತ್ತಿರುವ ವಿಷಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಿಯವಾಗಬಹುದೆಂಬ ಕೆಟ್ಟ ನಂಬಿಕೆ ಉಂಟಾಗಿದೆ ನನಗೆ. ಒಂದೊಂದು ಸಲ ಹಾಗೆ ಟೀಚರಗಳು ತಮ್ಮ ಕೆಪ್ಯಾಸಿಟಿಯ ಬಗ್ಗೆ ಅತಿಶ‌ಯವಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಅಷ್ಟೇ ಅಲ್ಲ ತಮ್ಮ ವಿದ್ಯಾರ್ಥಿಗಳ ಆಸಕ್ತಿಯ ಬಗ್ಗೆಯೂ ಭಯಂಕರ ವಿಶ್ವಾಸ ಅವರಿಗೆ. ಅಂಥದೇ ಕೆಟಗರಿಯಲ್ಲಿ ಬರುವ ನಾನು ನನ್ನ ಮಕ್ಕಳ‌  ಬಗ್ಗೆ ಬಹಳಷ್ಟು ಸಹಾನುಭೂತಿಯನ್ನು ಹೊಂದಿರುವವಳಗಿದ್ದರಿಂದ ಒಂದು ಸಣ್ಣ ಪರೋಪಕಾರಿ ಕೆಲಸವನ್ನು ಮಾಡಲು ಹೊರಟಿದ್ದೇನೆ. ಹುಡುಗ‍ ಹುಡುಗಿಯರು ಒಮ್ಮೊಮ್ಮೆ ಪ್ರೇಮದಲ್ಲಿ ಬಿದ್ದು ವಿಲವಿಲ ಒದ್ದಾಡಬೇಕೆಂದು ಸ್ವಯಂಸ್ಪೂರ್ಥಿಯಿಂದ ಪ್ರಯತ್ನ ಮಾಡುತ್ತಿರುತ್ತಾರೆ, ಇನ್ನು ಕೆಲವರು ಅದಾಗಲೇ ಬಿದ್ದುಬಿಟ್ಟಿರುತ್ತಾರೆ ಮತ್ತು ತಮ್ಮ ಪ್ರಿಯತಮೆ(ಮ)ಗೆ ಒಂದು ಸುಂದರವಾದ ಪ್ರೇಮಪತ್ರವನ್ನು ಬರೆಯಲು ಚಡಪಡಿಸುತ್ತಿರುತ್ತಾರೆ. ಇದು ಮೊಬೈಲ್ ಯುಗವಾದ್ದರಿಂದ  ILU, I ms U, Gm, Ga, Gn, tc  ಎಂದೆಲ್ಲಾ ಕಳಿಸಿ ಆಗಲೇ ಮುಗಿದುಹೋಗಿರುತ್ತದೆ. ಮತ್ತೂ ಮತ್ತೂ ಅವನ್ನೇ ಕಳಿಸಬೇಕೆಂದರೆ ಅವಕ್ಕೂ ಬೋರು, ಓದುವ ಪ್ರೇಮಿಗಳಿಗೂ ಬೋರು. ಇಂಥ ಟೈಮಲ್ಲೇ ಸ್ವಾಮಿ, ಏನಾದರೂ ಕ್ರಿಏಟಿವ್ ಆಗಿ ಬರೆಯಬೇಕೆಂಬ  ರೋಗ ಉಲ್ಭಣಿಸಿ ಪ್ರೇಮರೋಗಿಯು ಇನ್ನೂ ಹೆಚ್ಚಿನ ಟೆಂಪರೇಚರನಿಂದ ಬಳಲಿ ಬೆಂಡಾಗುತ್ತಾನೆ(ಳೆ).  ಒಂದು ಉದ್ದಾನುದ್ದ ಪ್ರೇಮಪತ್ರ ಬರೆದು ಮನಸ್ಸಿನೊಳಗಿನದೆಲ್ಲಾ ತೋಡಿಕೊಳ್ಳಬೇಕೆಂಬ ಬಯಕೆ ಪಾಪ ಯಾರಿಗಿರುವುದಿಲ್ಲ ಹೇಳಿ? ಆದರೆ ಪಾಪ ಮತ್ತದೇ ವ್ಯಾಕರಣ, ವಾಕ್ಯರಚನೆ ಎಂದೆಲ್ಲಾ ರಗಳೆ. ಆಗ ಕೆಟ್ಟ ಭಾಷೆ ಕಲಿಸಿದ ಈ ಸ್ಕೂಲ ಟೀಚರಗಳ ವಿರುದ್ಧ ಅವರ ಸಹಸ್ರ ನಾಮಾವಳಿ ಪ್ರಾರಂಭವಾಗಬಹುದು. ನೌಕರಿಗಾಗಿ ಅರ್ಜಿ ಕಳಿಸಲು ಅರ್ಜಿಯ ವಿವಿಧ ನಮೂನೆಗಳನ್ನು ಇಂಟರನೆಟ್ ಮೇಲೆ ಜಾಲಾಡಿದಂತೆ, ಪ್ರೇಮಪತ್ರದ ನಮೂನೆಗಳಿಗಾಗಿಯೂ ಜಾಲಾಡಿ ಸುಸ್ತಾಗಿರಬಹುದು. ಯಾಕೆ ಯಾರೂ ಕೊಡಬಾರದು ಇಂಥ ಉಪಯೋಗಿ ಟಿಪ್ಸು, ಲಿಂಕ್ಸು, ಅಂತ ಯಾರನ್ನು ಬೈಯ್ಯಬೇಕೆಂದು ಗೊತ್ತಾಗದೇ ಕೈಕೈ ಹಿಸುಕಿಕೊಂಡು ಅಸಹಾಯಕರಾಗಿರಬಹುದು. ಅಂಥ ನನ್ನ ಎಲ್ಲ ಪಾಪದ ಮುದ್ದು ಮಕ್ಕಳಿಗೆ ಇಲ್ಲಿದೆ ಒಂದು ಪ್ರೇಮಪತ್ರದ ನಮೂನೆ.

   ಓದಿಕೊಂಡು, ಕಂಠಪಾಠ ಮಾಡಿಕೊಂಡು, ಇಲ್ಲವೇ ಕಾಪಿ ಹೊಡೆದು ಬರೆದು ಪ್ರಿಯತಮನ(ಮೆಯ) ಮನಗೆದ್ದು ಪಾಸಾಗಿಬಿಡಲಿ ಎಂಬ ಒಂದೇ ಒಂದು ದೂರಾಲೋಚನೆ ಅಷ್ಟೇ. ಮತ್ತಾವ ಸ್ವಾರ್ಥವೂ ಇಲ್ಲ. ಹಾಗಂತ ಇದು ನನ್ನದೇ ಸ್ವಂತ ಕಪೋಲಕಲ್ಪಿತ ಕೃತಿ ಎಂದು ಪ್ರಿಯ ವಿದ್ಯಾರ್ಥಿಗಳು ತಪ್ಪು ಭಾವಿಸಬಾರದು. ಹಾಗೆಲ್ಲಾ ನಾವು ಲೆಕ್ಚರರಗಳು ಸ್ವಂತ ತಲೆ ಉಪಯೋಗಿಸಿ ನೋಟ್ಸ್ ಕೊಡುವುದೇ ಇಲ್ಲ. ಅಲ್ಲಿ ಇಲ್ಲಿ ನಿಮಗಿಂತ ಒಂದೆರಡು ಹೆಚ್ಚಿಗೆ ಪುಸ್ತಕಗಳನ್ನು ರೆಫರ ಮಾಡಿ ನೋಟ್ಸ್ ತೆಗೆದಂತೆ ಅಲ್ಲಿ ಇಲ್ಲಿ ಹುಡುಕಾಡಿ ನಿಮಗಾಗಿ ಪ್ರೇಮಪತ್ರದ ಒಂದೊಳ್ಳೆ ಮಾದರಿಯನ್ನು ಕಂಡುಹಿಡಿದ್ದಿದ್ದೇನೆ. ಇದನ್ನೇ ಆಧಾರವಾಗಿಟ್ಟುಕೊಂಡು ನೀವು ಅಲ್ಲಿ ಇಲ್ಲಿ ಒಂದೆರೆಡು ಶಬ್ದಗಳನ್ನು ನಿಮ್ಮ ನಿಮ್ಮ ಅನುಕೂಲ, ಪರಿಸ್ಥಿತಿ ಮತ್ತು ಬುದ್ಧಿಗೆ ತಕ್ಕಂತೆ ಬದಲಾಯಿಸಿ ಬರೆದುಕೊಳ್ಳಬಹುದು. ತೀರಾ ಇದನ್ನೇ ವರ್ಡ್ ಟು ವರ್ಡ್ ಕಾಪಿ ಹೊಡೆದರೆ ಪ್ಲಗೇರಿಸ್ಂ ಭೂತ ಬೆಂಬಿಡದೆ ಕಾಡಬಹುದು.

ಇನ್ನು ನೀವುಂಟು, ಪ್ರೇಮಪತ್ರದ ನಮೂನೆಯುಂಟು, All the best, all the best.

Welfare

My Dearest Laila (Miss Kho t)

       All well, I love you hart and sole, You also please love to me. I you Go to Seneema, box seat, I stand in Moter stand 3 O’clock. Seneema begin three and half matnee. You do not come, my life Barbad! Nothing more to wright at present. All well.

Post:Dharwar                                                Your dearest Majnu

At: Dharwar                                             Vasantrao Gopal Gouda Desai

District: Dharwar                                                  (Bahaddur)

                                                                            

(ಇದೊಂದು ಕನ್ನಡದ ಖ್ಯಾತಲೇಖಕರ ಪ್ರಸಿದ್ಧ ಕಾದಂಬರಿಯಲ್ಲಿ ಬಂದ ಪ್ರೇಮಪತ್ರ, ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು. ಇಲ್ಲವಾದರೆ ಇನ್ನೆರಡು ದಿನ ಬಿಟ್ಟು ನಾನೇ ತಿಳಿಸುತ್ತೇನೆ)

Friday, 21 March 2014

ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು

                    ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು


ಮರಿ ಫುಡಾರಿ ಭಾಳ ಘಾಬರಿ ಆಗಿದ್ದ. ಎಲ್ಲಾ ನ್ಯಾಷನಲ್ ಚ್ಯಾನಲ್ಲಗೋಳು ಬರೇ ಭ್ರಷ್ಟಾಚಾರದ ಸುದ್ದಿನs.. ಮಾತಾಡಲಿಖತ್ತಾವ. ಅವಕ್ಕ ಸರಕ ಒದಗಸ್ಲಿಕ್ಕಂತ ದಿನಕ್ಕೊಂದೊಂದು ಸ್ಕ್ಯಾಮು ಪೈಪೊಟಿಮ್ಯಾಲೆ ಹೊರಗ ಬೀಳಲಿಖತ್ತಾವ. ಅಯ್ಯೋ ದೇವರೇ ಹಿಂಗಾದರ ಮುಂದಿನ ಇಲೆಕ್ಷನ್ನದಾಗ ನಮ್ಮ ಗತಿಯೇನು? ಅವರಪ್ಪ ಹಿರಿಯ ಫುಡಾರಿ ಮುಂದ ಹೋಗಿ ಘೋಳಾಡಲಿಖತ್ತ. "ಅಪ್ಪಾ ಈ ಸರ್ತೆ ಇಲೆಕ್ಷನ್ನದಾಗ ನಾವು ಗೆದ್ದಂಗ ತೊಗೊ. ಬರೇ ಒಂದರ ಮ್ಯಾಲ ಒಂದು ಭ್ರಷ್ಟಾಚಾರ ಹೊರಗೆಳಿಲಿಖತ್ತಾರ ಟಿ.ವಿ. ಚ್ಯಾನಲ್ಲಿನವ್ರು ".
"ಅಯ್ಯೋ ಮಗನ ಅದನ್ನೆಲ್ಲ ಮನಸ್ಸಿಗೆ ಹಚಗೋಬ್ಯಾಡ ತಗಿ, ಗೆಲ್ಲೋದ ಗೆಲ್ಲೋದ ನವs  ಗ್ಯಾರಂಟೀ, ಇನ್ನ್ಯಾರ ಬರ್ತಾರಲೇ ನಮ್ಮನ್ನ್ನ ಸೈಡ್ ಒಗದು!" ಅಂತ ಆತ್ಮವಿಶ್ವಾಸದಿಂದ ಹಿರಿ ಫುಡಾರಿ ಉಡಾಫೆ ಮಾಡಿದ. "ಇಲ್ಲಪ್ಪಾ ನಿನಗ ಗೊತ್ತಿಲ್ಲ ಜನಾ ಈಗ ಶ್ಯಾಣೆ ಆಗ್ಯಾರ, ಹಿಂದಿನ ಹಂಗ ನಮಗ ಕಾಲ ಬಿದ್ದು ವೋಟು ಕೊಡಂಗಿಲ್ಲ, ನೋಡ್ತಾ ಇರು, ಇನ್ನ ಐದ ವರ್ಷ ನಮಗೆಲ್ಲಾ ರಜಾ ಕೊಟ್ಟಬಿಡ್ತಾರ".
"ಛೇ ಮಗನ ನಿನ್ನ ದಿಲ್ಲಿ ಕಾಲೇಜಿನ್ಯಾಗ ಇಟ್ಟು ಓದಿಸಿದ್ದರ ದುಷ್ಪರಿಣಾಮ ಇದು ತಮ್ಮಾ . ನಮ್ಹಂಗ ಹಳ್ಳಿ ಸಾಲ್ಯಾಗ ಕಲತಿದ್ದರ ನಮ್ಮ ಸುತ್ತಮುತ್ತಲ ಮಂದಿ ಆಚಾರಾ- ವಿಚಾರಾ ಎಲ್ಲಾ ತಿಳೀತಿತ್ತು ನಿಂಗ. ಈಗ ಒಂದು ಕೆಲಸಾ ಮಾಡೋಣು. ಒಂದಿಷ್ಟು ಮಂದಿನ್ನ ಮಾತಾಡಿಸಿಕೊಂಡು ಬರೋಣು ನಡಿ, ನಮ್ಮೂರಾಗ".
ಅಪ್ಪ ಮಗ ರಾಜಕಾರಣಿಗಳು ಮತ್ತವರ ಪಟಾಲಂ ಹಳ್ಳಿಗೆ ಬಂದು ತಮ್ಮ ಹಳೆ ಮನ್ಯಾಗ ಟೆಂಟ ಹಾಕ್ತು. ಫುಡಾರಿ ಸಾಹೇಬರು ಊರಿಗೆ ಬಂದ ಸುದ್ದಿ ಊರಿಗೆಲ್ಲಾ ತಿಳೀತು. ಹಳ್ಳಿ ಅಜ್ಜಾರು, ಮುತ್ತ್ಯಾಗಳು, ಕಾಕಾ - ಮಾಮಾಗೋಳು, ಕೆಲಸಿಲ್ದ ಬೀಡಿ ಎಳದ ಎಳದ ಹೊಗಿ ಬಿಟಕೊಂತ ಆಲದ ಮರದ ಕಟ್ಟಿ ಮ್ಯಾಲ ಹಾಳ ಹರಟಿ ಹೊಡಕೊಂತ ಕೂತ ಪಡ್ಡೆ ಹೈಕಳು, ಎಲ್ಲಾ ಸಾಹೇಬ್ರ ದರ್ಶನಾ ತೊಗೊಂಡು ಧನ್ಯ ಆಗ್ಲಿಕ್ಕೆ ಓಡೋಡಿ ಬಂದ್ರು. ಸಾಹೇಬ್ರು ತಮ್ಮನಿ ಜಗಲಿ ಮ್ಯಾಲ ಅವರ್ನೆಲ್ಲಾ ಕೂಡಿಸಿ, ತಾವಿಬ್ರು ಹಳೇ ಕಾಲದ ಧೊಡ್ಡ ಕುರ್ಚಿಗಳ ಮ್ಯಾಲೆ ಆಸೀನರಾದ್ರು. ಮಳೀ -ಬ್ಯೆಳಿ ವಿಚಾರಿಸಿದ್ರು. ಹಳ್ಳಿ ಮಂದಿ ಇನ್ನೂ ಹುರುಪಾದ್ರು. ಐದ ವರ್ಷ, ಒಳಗs ಇಟಗೊಂಡ ಇಟಗೊಂಡ ಉಬ್ಬಿದ ಹೊಟ್ಟಿ ಒಳಗಿನ ದು:ಖಾ ಎಲ್ಲಾ ಹೊರಗ ಹಾಕಿ ನಿರಾಳಾದ್ರು. ಹಳ್ಳಿ ಮಕ್ಕಳಂದ್ರ ಸಾಹೇಬ್ರಿಗರೇ ಏನು ಕಡಿಮಿ ಪ್ರೀತೀ ಅಂತೀರಿs ! ಈ ಹಳ್ಳಿ ಅಲ್ದನs ಸುತ್ತಮುತ್ತಲ ಇಪ್ಪತ್ತು ಮೂವತ್ತು ಹಳ್ಳಿ ಜನಾ ಎಲ್ಲಾ ವೋಟ ಹಾಕಿ ಪ್ರತೀ ಸಲ ಅವರನ್ನ ಗೆಲ್ಲಿಸಿಕೊಟ್ಟಾರ. ಸಾಹೇಬ್ರರೇ ಅವರನ್ನ ಮರತಾರೇನು, ಊಹುಂ, ಎರಡ ವರ್ಷದ ಹಿಂದ ಮಗಳ ಮದವಿ ಮಾಡಿ ಎಲ್ಲಾರಿಗೂ ಭರ್ಜರೀ ಊಟಾ ಹಾಕಸ್ಯಾರ. ಹೋದ ವರ್ಷ ಮಗನ ಮದವಿ ಮೂರ ಮೂರ ದಿನಾ ಮಾಡಿದಾಗ ಸುತ್ತಮುತ್ತಲ ಹಳ್ಯಾಗೆಲ್ಲಾ ಒಂದ ಮನ್ಯಾಗೂ ಒಲಿ ಉರಿಬಾರ್ದು, ಎಲ್ಲಾರೂ ಮೂರೂ ದಿನಾ ಮದವಿ ಮನ್ಯಾಗs ಊಟಾ ಮಾಡ್ಬೇಕಂತ ಫ಼ರ್ಮಾನು ಹೊಂಡಿಸಿದ ಮ್ಯಾಲೆ ಪಾಪ ಮಂದ್ಯರ ಯಾಕ ಸುಮ್ಮ ಸುಮ್ಮನ ತ್ರಾಸ ತೊಗೋತಾರ? ಮೂರೂ ದಿನಾ ಹಗಲ -ರಾತ್ರಿ ಅನದನ ಧಕ್ಕನ ದುಡದು ಕಂಠ ಮಟ ಉಂಡು ತೃಪ್ತ ಆಗಿ ಹೊಗ್ಯಾರ. ಮುಂದಿನ ವರ್ಷ ಸಾಹೇಬ್ರಿಗೆ ಮಮ್ಮಗಾ ಆಗ್ಲಿ, ಊರಿಗೇ ಊಟಾ ಹಾಕಸ್ಲಿ ಅಂತ ಕಾಯ್ಲಿಖತ್ಯಾರ ಅಂಥ ಒಳ್ಳೆ ದಾನಶೂರ ಕಳ್ನಾ ನಮ್ಮ ಸಾಹೇಬರು ಇನ್ನು ಈಗೀಗ ರಾಜಕಾರಣಕ್ಕ ಇಳಿದಿರೋ ಅವರ ಡೆಲ್ಲಿ ರಿಟರ್ನಡ್ ಮಗಾ. ಅಂದಮ್ಯಾಲ ಕೇಳ್ತೀರ, ಎಲ್ಲಾ ಜನ್ರ ಪ್ರೀತಿ ಸುರಕೊಂಡು ಸೂರಿ ಮಾಡಿಬಿಟ್ಟರ ಅಪ್ಪಾ-ಮಗಾ. ಅಂಥ ಸಾಹೇಬ್ರು ಮಗನ್ನ ಕರಕೊಂಡು ಅಪರೂಪಕ್ಕ ಊರಕಡೀ ಬಂದ್ರಂದ್ರ ಜನ ಮನ್ಯಾಗ ಇರಲಿಕ್ಕಾಗತದೇನು? ಎಲ್ಲಾ ಕೆಲಸಾ ಬಿಟ್ಟು ಊರಿಗ ಊರs ಅವರ ಮುಂದ ನೆರದದ.
      "ಹ್ಯಾಂಗದಪಾ ರಾಮಣ್ಣಾ ಇಲೆಕ್ಷನ್ ಭರಾಟಿs. ನಮಗೇನರೇ ಸಹಾಯ ಮಾಡ್ತಿರೋ ಇಲ್ಲೋ ಮತ್ತ? " ಸಾಹೇಬ್ರು ಹಗೂರಕ ಮುಖ್ಯ ವಿಷಯಕ್ಕ ಬರಲಿಕ್ಕ ಸುರು ಮಾಡಿದ್ರು.
      "ಹಂಗ್ಯಾಕ ಅಂತೀರಿ,  ತಗೀರೀ ಯಪ್ಪಾ, ನಿಮಗಲ್ದನ ಇನ್ಯಾರಿಗೆ ವೋಟು ಕೊಡೋದು  ನಾವು. ಇಲ್ಲೆ ಅಷ್ಟೂ ಜನಾ, ಸುತ್ತಮುತ್ತಲ ಹಳ್ಳಿ ಜನಾ ಎಲ್ಲರ ವೋಟು ನಿಮಗs, ಕಾಳಜಿ ಬಿಡ್ರಿ" ಅಂದ ಊರಿನ ಹಳೇ ಮನಷ್ಯಾ ರಾಮಣ್ಣ.
      "ಅಲ್ಲಪಾ ಮತ್ತ, ಈಗೀಗ ಟಿ. ವ್ಹಿ. ಅವ್ರು ಏನೇನೋ ಸುದ್ದಿ ತಗದು ಸುಳ್ಳ ಸುಳ್ಳs ನಮ್ಮನ್ನೆಲ್ಲಾ ಬಯ್ಯಾಕತ್ತಾರ ಏನಪಾs . ಮತ್ತ ನೀವೆಲ್ಲರೇ ಅದನ್ನs ಖರೇ ಅಂತ ನಂಬಿ ನಮಗ ವೋಟ ಹಾಕಬಾರ್ದಂತ ಒಳಗೊಳಗ ನಿರ್ಣಯ ಮಾಡಿದ್ರ ಈ ವಯಸ್ಸಿನ್ಯಾಗ ನಾವೆಲ್ಲೆ ಬ್ಯಾರೆ ಕ್ಷೇತ್ರಕ್ಕ ಹೋಗಿ ವೋಟ ಕೊಡ್ರಿ ವೋಟ ಕೊಡ್ರಿ ಅಂತ ಬ್ಯಾರೆದಾವ್ರನ ಭಿಕ್ಷಾ ಬೇಡೋಣೋ  ಭೀಮಶಿ, ನನ್ನ ಭವಿಷ್ಯ ನನ್ನ ಮಗನ ಭವಿಷ್ಯ ಎರಡೂ ನಿಮ್ಮ ಉಡ್ಯಾಗ ಹಾಕಿ ಬರಿಗೈಲೆ ನಿಂತೇವಿ ನೋಡ್ರ್ಯಪಾ, ಉಳಸೋದು, ಮುಳಗಸೋದು ನಿಮಗs ಬಿಟ್ಟಿದ್ದು" ಅಂತ ನಾಜೂಕಾಗಿ  ಅಸ್ತ್ರ ಉಪಯೋಗಿಸಿದರು ಹಿರೀ ಸಾಹೇಬ್ರು.
       "ತಗೀರಿ ಅಣ್ಣಾರ ಆ ಟಿ. ವ್ಹಿ. ಅವರು ಏನ ಹೇಳ್ತಾರೋ ಏನೋ ಅದೆಲ್ಲಾ ನಾವು ತಲಿ ಕೆಡಿಸಿಗೋಳಾಂಗಿಲ್ಲರೀs. ನಮ್ಮ ವೋಟ ಏನಿದ್ರೂ ನಿಮಗs... " ಅಂತ ವಿಶ್ವಾಸ ಕೊಟ್ಟ ಭೀಮಶೀ. ಆದ್ರೂ ಮರಿ ಫ಼ುಡಾರಿ ಜೀವ ಫುಕು ಫುಕು ಅನ್ನೋದು ಬಿಡವಲ್ತು. ಅದಕ್ಕs ತಾನs  ಕೇಳಿದ.
"ನೀವು ದಿನಾ ಟಿ.ವ್ಹಿ.ನ್ಯಾಗ ಏನೇನ ನೋಡ್ತೀರಪಾ?
" ಏ ಬಿಡ್ರಿ ಸಾಹೇಬ್ರ‌s ಬೆಳಗಿನ ಟೈಮಂತೂ ನೋಡಾಕ ಆಗೂದಿಲ್ರೀ  ರಾತ್ರಿ ಒಂದಿಷ್ಟು ಹೆಣ್ಮಕ್ಕಳು ಧಾರಾವಾಹಿ ಹಚ್ಕೊಂಡು ಕೂತಿರ್ತಾರ, ಅದನ ನಾವೂ ನೋಡೋದು. ಅದ ಬಿಟ್ಟರ ಒಂದೀಟ ಕ್ರಿಕೆಟ್ಟು ಅದೂ ಇದು ಅಂತ ಆಟಾ ನೋಡ್ತೇವರೀ, ಆತು" ಅಂತ ನಿಂಗಣ್ಣ ಉತ್ತರಾ ಕೊಟ್ಟಾ.
ಅಷ್ಟರಾಗ ಜಮಾಯಿಸಿದ್ದ ಹೆಣ್ಣಮಕ್ಕಳನ್ನ ನೋಡಿ ಮರಿ ಕೇಳಿದ, "ತಾಯಂದ್ರ, ನೀವು ಏನೇನ ನೋಡ್ತೀರಿ ಟಿವ್ಯಾಗ, ನೀವು ಮನ್ಯಾಗ ಇರ್ತೀರಂದ್ರ ಮುಂಜಾನೆ, ಮಧ್ಯಾನ್ನನೂ ನೋಡ್ತಿರಬೇಕಲಾ?"
"ನೋಡ್ತೇವರೀ. ಮಧ್ಯಾನ್ನ ಕೆಲವೊಂದು ಚಾನಲ್ಲಿನ್ಯಾಗ ಗಂಡಾ ಹೆಣ್ತೀ ಜಗಳ, ಡೈವರ್ಸ ಕೊಡ್ತೇನಂತ ಗಂಡ ಹೇಳೋದು, ಕೊಡಂಗಿಲ್ಲಂತ ಹೇಣ್ತೀ ಅಳೋದು, ತಾಸಗಟ್ಳೇ ಕೆಲಸಾ ಮಾಡೋದು ಬಿಟ್ಟ ಬಿಟ್ಟ ನೋಡೇವ್ರೀ. ಇನ್ನ ಆ ಸ್ವಾಮಿ, ಈ ಸ್ವಾಮಿ ಅಂತೆಲ್ಲಾ ನೂರಾಎಂಟು ಕಥೀ ತೋರಸ್ತಾರ ನೋಡ್ರೀ, ಬಲೇ ಮಜಾ ಇರ್ತಾವ್ರೀ, ಅವನ್ನೆಲ್ಲಾ ನೋಡ್ತೇವ್ರೀ. ರಾತ್ರೀ ಮಾತ್ರ ಸೀರಿಯಲ್ ಬೇಕು. ಅದೇನ ಛ್ಂದ ಮನೀ, ಅದೇನ ವಸ್ತಾ ವಡವಿ, ದಾಗೀಣು, ಸೀರೀ,  ಭಾಳ ಛಂದ ಇರ್ತಾವ್ರೀ" ಅಂದ್ಲು ಕಡೀಮನೀ ಕಲ್ಲಕ್ಕ.
"ಅಲ್ಲಾ ಅಕ್ಕಾರ, ನಿಮಗ ಈ 2ಜಿ, 3ಜಿ ಅಂದ್ರ ಏನು ಅಂತ ಗೊತ್ತದ ಏನು?" ಮರಿ ಮತ್ತೂ ಕೆದಕಿದ.
"ಏ ಇಲ್ಲ ಬಿಡ್ರೀ, ನಮಗ ಗೊತ್ತಿರೋದು ಪಾರ್ಲೆ ಜಿ ಒಂದ" ಅಂದ್ರು ಹೆಣ್ಮಕ್ಕಳು.
"ಅಲ್ಲಾ ಗಂಡಸರಿಗೆ ಯಾರಗರೇ ಈ ಕೋಲಗೇಟು ಅನ್ನೋದು ಗೊತ್ತದ ಏನು?"
"ಹೇ ಅದೇನ ಚಾಷ್ಟೀ ಮಾಡ್ತಿರೀ ಸಾಹೇಬ್ರ, ನಾವ ಹುಟ್ಟಿದಾಗಿಂದ ಕೋಲ್ಗೇಟ ಪೇಸ್ಟ‌s ಅಲ್ಲೇನರೀ ಹಲ್ಲ ತಿಕ್ಕಾಕ ಬಳಸೂದು? ಬ್ರಷ್ ಉಪಯೋಗಿಸ್ದೇ ಇದ್ರೂ ಪೇಸ್ಟ ಮಾತ್ರ ಯಾವಾಗ್ಲೂ ಕೋಲ್ಗೇಟರೀ" ಅಂದ ಪಂಪಣ್ಣಾ. ಮರಿಗೆ ಖುಶಿ ಆತು, ಅಬ್ಬಾ ಅಂತೂ ಇಲ್ಲಿನ ಮ‍ಂದಿಗೆ ಕೋಲ್ಗೇಟು, 2ಜಿ, CWG, ಎಲ್ಲಾ ಏನೂ ಗೊತ್ತಿಲ್ಲ ಅಂತಾತು. ಇನ್ನ ಆದರ್ಶ ಅದೂ ಇದೂ ಅಂತ ಕೇಳೋದ್ಯಾಕ ಅಂತ ಸುಮ್ಮನಾದ. ದೊಡ್ಡ ಸಾಹೇಬ್ರೂ ಅದು ಇದು ಮಾತಾಡಿ ಊರಮಂದಿನ್ನ ಕಳಿಸಿ ಕೊಟ್ರು.
"ಆತಿಲ್ಲಪಾ ಮಗನ‌s  ಸಮಾಧಾನ! ನಮ್ಮ ಜನಾ ಒಳ್ಳೆವ್ರು. ಆ ಸುಪನಾತಿ ಟಿ.ವ್ಹೀ. ಅವ್ರು ನೂರು ಒದರ್ಲೀ, ನಮ್ಮ ಜನಾ ನಮಗs ವೋಟು ಕೊಡ್ತಾರ, ನೋಡ್ತಿರು. ಹೋದ ಸರ್ತಿ ಮನಿಗೆ ಸಾವಿರ ರೂಪಾಯ ಹಂಗ ಹಂಚಿತ್ತು, ಈ ಸಲ ಮನಷ್ಯಾಗ ಸಾವ್ರ ರೂಪಾಯ ಹಂಗ ಹಂಚಿದ್ರ ಓಡಿ ಬಂದ ವೋಟ ಹಾಕಿ  ಹೋಕ್ತಾರ, ಅಷ್ಟ ನಿಯತ್ತಿನ ಮಂದಿ" ಅಂತ ಮಂಚದ ಮ್ಯಾಲೆ ಮೈ ಚಾಚಿದ್ರು.
ಏನೋ ಯೊಚ್ನಿ ಮಾಡ್ಕೋತ ಮರಿ ಫುಡಾರಿನೂ ಅಡ್ಡಾದ. ಆದರ ಮೈಗೆಲ್ಲಾ ಸೊಳ್ಳಿ  ಕಡದು ನಿದ್ದಿ ಬರಲಿಲ್ಲಾ. ಮತ್ತ ತಲ್ಯಾಗ ಹುಳಾ ಕೊರಿಲಿಕತ್ತು. ಅಲ್ಲಾ ಈ ಹಳ್ಳಿ ಮಂದಿ ಹಕ್ತಾರ, ಅಡ್ಡಿ ಇಲ್ಲಾ. ಆದ್ರ ಆ ಹರಾಮಖೋರ್ ಶಹರದ ಜನಾ? ಈ ಲೋಕಸಭಾ ಇಲೆಕ್ಷನ್ನದಾಗ ಅವ್ರದೂ ಮರ್ಜಿ ಕಾಯಬೇಕಲ್ಲಾ! ಅವ್ರಿಗೆ 2ಜಿ, ಕೊಲ್ಗೇಟು ಎಲ್ಲಾ ಸ್ಕ್ಯಾಮೂ ಗೊತ್ತ ಇರ್ತಾವ! ಅದಕ್ಕೇನು ಮಾಡೋದು? "ಅಪ್ಪಾ ಹಳ್ಳಿ ಮಂದಿದಂತೂ ಖಾರ್ತಿ ಆತು, ಆದರ ಶಹರದ ಜನಾ, ಅವರನ್ನೇನು ಮಾಡೋದು, ಅವ್ರು ಮಹಾ ದಗಾಖೋರ ಮಂದಿ" ಅಂದ. "ಥತ್ತೇರಿ ನಾಳೆ ನೋಡೋಣು ಮಲಕ್ಕಳಲೇ" ಅಂತ ಹಿರಿ ಫುಡಾರಿ ಮತ್ತ ಮಗ್ಗಲಾದ್ರು.
ಮರಿ ಫುಡಾರಿ ಬಿಡಬೇಕಲ್ಲಾ? ದಿಲ್ಲಿಯೊಳಗ ಕಲತ ಬಂದಾವ, ಹಳ್ಳಿ ಮನಷ್ಯಾ ಈ ಅಪ್ಪಗ ಏನ ತಿಳಿತದ ಅಂತ ಹೆದರಿಕಿ ಅವಂಗ. ಮರದಿನಾ ಇಬ್ಬರದೂ ಸವಾರಿ ಶಹರ ಕ್ಷೇತ್ರದೊಳಗ ಬಿಜಯಂಗೈದು ಜನರಿಗೆ ದರ್ಶನ ಕೊಟ್ಟಿತು.
ಕಾಲೇಜಿನ್ಯಾಗ ಮರಿ ಫುಡಾರಿತರುಣ ಮತದಾರರಿಗೆ ಕೇಳೇಬಿಟ್ಟ "ಯಾವ್ಯಾವ ಟಿ.ವ್ಹಿ. ಚ್ಯಾನಲ್ ನೋಡ್ತೀರಿ ತಮ್ಮಗೋಳ್ರ್ಯಾ"
"M ಟಿ.ವ್ಹಿ,  f ಟಿ.ವ್ಹಿ.  V ಚ್ಯಾನೆಲ್, ಬಿಟ್ರ ಉದಯಾ ಮ್ಯುಜಿಕ್, ರಾಜ್ ಮ್ಯುಜಿಕ್, ಕಾಮಿಡಿ, ಸಿನಮಾ ಇವನ್ನ‌s ನೋಡುದ್ರೀ ನಾವು" ಅಂದ ತರುಣರ ಪ್ರತಿನಿಧಿ ಹಂಗಿದ್ದ ವಿಚಿತ್ರ ವೇಷ ಭೂಷಣದ ಹುಡುಗನೊಬ್ಬ. "ಪೇಪರ್ ಯಾವ್ದು ಓದ್ತೀರಿ ತಮ್ಮಾ" "ಏ ಪೇಪರ್ ಓದಾಕ ಟೈಂ ಯಾರಿಗದರೀ?" ಅಂದ್ರು ಹುಡುಗ್ರು. "ಮತ್ತ ಕ್ಲಾಸ್ ಮುಗದ ಮ್ಯಾಲೆ ಏನ್ ಮಾಡ್ತೀರಪ್ಪಾ?" ಅಂದದ್ದಕ್ಕ "ಕ್ಲಾಸಿಗ್ಯಾರ ಹೋಗ್ತಾರ್ರೀ, ಕಾಲೇಜ ಇದ್ದಾಗ ಕ್ಯಾಂಪಸ್ಸಿನ್ಯಾಗ ಅಡ್ಡಾಡತೇವಿ, ಇಲ್ಲಾ ಕ್ಯಾಂಟೀನ್ ನ್ಯಾಗ ಬಿದ್ದಿರತೇವಿ, ಯಾವಾಗರೆ ಬ್ಯಾಸರ ಬಂದಾಗ ಕ್ಲಾಸಿಗೆ ಹೋದ್ರ ಮಾಸ್ತರ ಕಾಲ ಎಳಿತೇವಿ" ಎಲ್ಲಾ ಖೊಳ್ ಅಂತ ನಕ್ಕರು. "ಮನ್ಯಾಗ, ಹೊರಗ ಎಲ್ಲೆಂದ್ರಲ್ಲೆ ಮೊಬೈಲ್ ಮ್ಯಾಲೆ ಮೆಸ್ಸೆಜು ಕಳಸೋದು, ಬಂದದ್ದನ್ನ ಓದೋದು, ಫೇಸ್ ಬುಕ್ಕು, ವಾಟ್ಸ್ಯಾಪು, ಅಯ್ಯೋ ಭಾಳ ಎಂಗೇಜಮೆಂಟ್ಸ್ ಅವರೀ ನಮಗ‌s" ಅಂತ ಮತ್ತ ಎಲ್ಲಾರೂ ನಕ್ರು.
"ನಿಮಗ 2ಜಿ, 3ಜಿ, CWG ಬಗ್ಗೆ ಏನರೆ ಗೊತ್ತದ ಏನು ತಮ್ಮಾ" ಅಂದದ್ದಕ್ಕ "ಸ್ವಲ್ಪ ಸ್ವಲ್ಪ ಗೊತ್ತದರೀ, ಯಾರು ತಲಿ ಕೆಡಿಸಿಗೊಳ್ಳಾವ್ರು, ತಿನ್ನಾವ್ರು ತಿಂದು ಹಾಯಾಗಿ ಸಾಯ್ಲಿ, ನಮಗ ಹೊಸಾ ಹೊಸಾ ವರ್ಷನ್ ಗ್ಯಾಜೆಟ್ ಸಿಗಲಿ ಅಷ್ಟ‌s" ಅಂದ್ರು. ಮರಿ, ಹಿರಿ ಇಬ್ರೂ ಅಲ್ಲಿಂದ ಮರೆಯಾದ್ರು.
ಒಂದಿಷ್ಟು ನಡು ವಯಸ್ಸಿನ ಸಿರಿಯಸ್ ಜಾಣರನ್ನ ಭೆಟ್ಟಿ ಆಗಿ ಬಿಡ್ಬೇಕು ಅಂದ ಮರಿ. ಬೈಕೊಂಡೇ ಒಪಗೊಂಡ್ರು ಹಿರಿ.
"ಸರಕಾರದ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಅಂತ ಕೇಳಿದ್ದಕ್ಕ, ಅವರೊಂದಿಷ್ಟು ಮಂದಿ ಉದ್ದುದ್ದ ಭಾಷಣ ಬಿಗಿದು ಕುತಗೊಂಡ್ರು. "ಹಂಗಾರ ವೋಟು ಯಾರಿಗೆ ಹಾಕ್ತೀರಿ/" ಅಂದದ್ದಕ್ಕ, "ಎಲ್ಲೀ ವೋಟು ಸ್ವಾಮೀ,  ಯಾರಿಗೆ ಹಾಕಿದ್ರೂ ಅಷ್ಟs, ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ, ಎಲ್ಲಾರೂ ಭ್ರಷ್ಟರs, ನಾವ್ಯಾರಿಗೂ ವೋಟು ಹಾಕಂಗಿಲ್ಲ, ಇಲೆಕ್ಷನ್ ದಿನ, ಅದರ ಹಿಂದ ಮುಂದ ಜೋಡಿಸಿಕೊಂಡು ಎರಡ ದಿನಾ ಎಲ್ಲೆರೆ ಟೂರಿಗೆ ಹೋಗಿ ಬರ್ತೇವಿ, ಅಷ್ಟs ಮಜಾ ಆದ್ರು ಆಗ್ತದ" ಅಂದ್ರು.
ದಿಲ್ಲಿ ಕಾಲೇಜಿನ್ಯಾಗ ಕಲತ ನನಗಿಂತ ಹಳ್ಳೀ ಸಾಲ್ಯಾಗ ಕಲತ ನಮ್ಮಪ್ಪನ ಶಾಣ್ಯಾ ಅಂತ ಖಾತ್ರಿ ಆಗಿ ಮರಿ ರಾಜಕಾರಣಿ ನಕ್ಕೋತ ನಿದ್ದಿ ಮಾಡಿದ.

ನೀತಾ ರಾವ್

Saturday, 1 March 2014

ಸ್ಥಾನ (ಪಲ್ಲಟ) ಮಹಾತ್ಮೆ


ಸ್ಥಾನ (ಪಲ್ಲಟ) ಮಹಾತ್ಮೆ



ಅಂಕ
                                                                                         

ಪ್ರೊಫೆಸರ್ ಅಲಮೇಲಮ್ಮನವರು ತಮ್ಮ ದೊಡ್ಡ ಮೂಗಿನ ಅಗಲ ಹೊಳ್ಳೆಗಳಿಂದ ಜೋರಾಗಿ ಉಸಿರು ಬಿಡುತ್ತ ಓಡಿ ಬಂದರು, ಧಾರವಾಡದ ಬಸ್ ಸ್ಟ್ಯಾಂಡಿನ ಒಳಗಡೆ. ಅವರು ಓಡುವುದನ್ನು ನೋಡಲೆಂದೇ ಕಣ್ಣ ಕಣ್ಣ ಬಿಟ್ಟು, ಬಂದ ಬಸ್ಸುಗಳನ್ನೂ ಬಿಟ್ಟೂ ನಿಂತು ಬಿಟ್ಟರು ಕಾಲಪ್ರಜ್ನೆಯಿಲ್ಲದ ಕೆಲ ಜನ. ಹಾಗೆ ನೋಡುವ ನೋಟವೇ ಇತ್ತೆನ್ನಿ ಅವರ ಓಟ.

ಆಂಧ್ರದ ಅಲಮೇಲು ಅವರು ಧಾರವಾಡಕ್ಕೆ ಬಂದು ಯುನಿವರ್ಸಿಟಿ ಸೇರಿ ಮನೆ ಮಾಡಿದ ಮೇಲೆ ಸ್ಥಾನಿಕ ಜನರ ಬಾಯಲ್ಲಿ  'ಅಲಮೇಲಮ್ಮ' ಆಗಿ ಬಢ್ತಿ  ಹೊಂದಿದ್ದು ಅವರಿಗೆ ಅಷ್ಟೇನೂ ಪ್ರಿಯವಾಗಿರಲಿಲ್ಲ. ಆದರೆ ನಮಗೆ ಪ್ರಿಯವಾದದ್ದನ್ನೇ ಆಡಬೇಕಲ್ಲಾ ಜನಗಳು! (ದನಗಳು). ಅವರ ಕಪ್ಪು ಬಣ್ಣದ ಮುಖದ ನಡುವೆ ಮಿರಮಿರನೇ ಮಿಂಚುತ್ತಿತ್ತು ವಜ್ರದ ಶುಭ್ರ ಬಿಳಿ ಮೂಗುತಿ. ಧಡುತಿ ದೇಹವೋ ಗುಜ್ಜಾನೆ ಮರಿಯನ್ನು ಜ್ನಾಪಿಸುವಂತಿತ್ತು. ದಪ್ಪ ಜರೀ ಬಾರ್ಡರಿನ ಗಡದ್ದು ನೀಲಿ ಬಣ್ಣದ ಕಂಚಿ ಸಿಲ್ಕ್ ಸೀರೆಯನ್ನು ಮೇಲಕ್ಕೆತ್ತಿ ಅವರು ಓಡುತ್ತಿರುವ ಸ್ಟೈಲ್ ನೋಡಿದರೆ ನೋಡುತ್ತಲೇ ಇರಬೇಕು ಎನಿಸಿರಬೇಕು ಕೆಲವರಿಗೆ. ಅಂಥದರಲ್ಲೇ ಮಾಲೆ ಮಾರುವ ಹುಡುಗನೂ ಓಡಿ ಬರಬೇಕೇ? ಇವರ ಸೀರೆ ಮತ್ತು ಮೈಬಣ್ಣ ನೋಡಿಯೇ ಅವನಿಗೆ ಖಾತ್ರಿಯಾಗಿಬಿಟ್ಟಿತು, ಇದು ತನ್ನ ಗಿರಾಕಿಯೆಂದು. ಅಲಮೇಲಮ್ಮ ನಾಲ್ಕು ಮೊಳ ಮಲ್ಲಿಗೆ ಮಾಲೆ, ಮೂರು ಮೊಳಅಬೋಲಿ ಮಾಲೆ (ಅವರ ಬಾಯಲ್ಲಿ ಕನಕಾಂಬರ) ಕೊಂಡು ತಲೆಗೇರಿಸಿಯೇ ತಟ್ಟಾದರು. ಇನ್ನು ಬೆಳಗಾವಿಯ ಬಸ್ಸು ಹತ್ತುವ ಗಡಿಬಿಡಿ ಅವರಿಗೆ.

ಅರೆರೆ! ಅವರ ಪತಿರಾಯ ಶ್ರೀ ಶ್ರೀ ವೆಂಕಟಗಿರಿ ರಾವ್ ಅವರೂ ಅದಾವ ಮಾಯದಲ್ಲೋ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷರಾಗಿಬಿಟ್ಟಿದ್ದಾರೆ. ಅಲಮೇಲಮ್ಮನವರನ್ನು ನೋಡುವ ಗಡಿಬಿಡಿ, ಗಾಬರಿಯಲ್ಲಿ ಪಾಪ ವೆಂಕಟಗಿರಿ ರಾವ್ ಕಣ್ಣಿಗೆ ಬೀಳುವುದಾದರೂ ಹೇಗೆ? ಇವರೋ ಒಂದಂಕಿ ಗೆರೆಯಂಥ ಪಿಟೀಲು  ಮನುಷ್ಯ. ತಾಯಿಯೋ ಶೂನ್ಯದಂತೆ ಪುಟಿವ ಫುಟ್ ಬಾಲ್ ತರಹ! ವೆಂಕಟರಮಣಾ ಇದೆಂಥಾ ಜೋಡಿಯಯ್ಯಾ!

ನಿಮಗೆ ಗೊತ್ತಿದೆಯಲ್ಲಾ, ಧಾರವಾಡದಿಂದ ಬೆಳಗಾವಿಗೆ ಬರುವಾಗ ಎಂದಾದರೂ ಕುಳಿತುಕೊಳ್ಳಲು ಸೀಟು ಸಿಕ್ಕಿದೆಯಾ? ಇಲ್ಲ. ಅಂದಮೇಲೆ ಅಲಮೇಲಮ್ಮನವರಿಗೆ ಅದು ಸಿಕ್ಕುವುದುಂಟಾ? ಇಲ್ಲ. ವೆಂಕಟರಾಯರೇನೋ ಗಾಳಿ ಬಂದಾಗ ಪುಸ್ಸ ಅಂತ ಒಳಗೆ ತೂರಿಕೊಂಡು ಬಿಟ್ಟರು. ಇನ್ನು ಜನರನ್ನು ಹತ್ತಿಸುವುದೇ ಇಲ್ಲವೆಂದ ಕಂಡಕ್ಟರ್. ಅಲಮೇಲಮ್ಮ ಕೆರಳಿ ಕೆಂಡದುಂಡೆಯಾದರು. ಅದು ಹೇಗೆ ನಮ್ಮನ್ನು ಬಿಟ್ಟು ಹೋಗುತ್ತೀಯೋ ನೋಡುತ್ತೇನೆ ಎಂದು ಧಮಕಿ ಹಾಕಿದರು. ಅಂತೂ ಇಂತೂ ಇಪ್ಪತ್ತು ನಿಮಿಷ ಗುದ್ದಾಡಿ ಗಾಡಿಯ ಮೇಲೆ ಒಂದು ಕಾಲಿಟ್ಟರು. ಬಸ್ಸು ಕಿರ್ ಎಂದಿತು. ಎರಡನೇ ಕಾಲಿಟ್ಟರು. ಸ್ವಲ್ಪ ಕೆಳಕ್ಕಿಳಿಯಿತು. ಮುಂದೆ ತೂರಿಕೊಳ್ಳುತ್ತ ನಡೆದ ರಾಯರಿಗೆ ಹೋದ ಜೀವ ಬಂದಂತಾಯಿತು. ಬಸ್ಸು ಕೆಳಕ್ಕಿಳಿಯಿತೆಂದರೆ ಅರ್ಧಾಂಗಿ ಗಾಡಿ ಏರಿದ್ದಾಳೆಂದು ಅವರಿಗೆ ಖಾತ್ರಿ.

"ಮುಂದೆ ಹೋಗ್ರೀ, ಇಲ್ಲಾಂದ್ರೆ ಹೋಗುವವರಿಗೆ ಜಾಗಾನಾದ್ರೂ ಬಿಡ್ರಿ" ದೊಡ್ಡಕೆ ಕೂಗಿದರು ಅಲಮೇಲಮ್ಮ. ಜನರಿಗೋ ಮುಂದಕ್ಕೆ ಹೋಗುವುದೂ ಕಷ್ಟ, ಹಾಗೆಂದು ಇವರಿಗೆ ಜಾಗಬಿಡುವುದಂತೂ ಯಮಕಷ್ಟ.

"ಅಯ್ಯೋ ಕಾಲು ಹೋಯ್ತಪ್ಪಾ ಕಾಲು, ಸ್ವಲ್ಪ ತೆಗಿರೀ ಕಾಲ್ನ‌s, ಹೆಂಗಸರು ಮಕ್ಕಳು ಇರ್ತಾರನ್ನೋ ಜ್ನಾನ ಬೇಡವೇನ್ರೀ?" ಪಕ್ಕದಲ್ಲಿ ನಿಂತಿದ್ದ ಗಂಡಸಿಗೆ ಬಯ್ದರು ಅಮ್ಮ. "ರೀ ಎಲ್ಲಿ ಹಾಳಾಗಿ ಹೋದ್ರೀ, ಇಲ್ಲಿ ನಾನೊಬ್ಬಳೇ ಇದ್ದೀನಿ ಅನ್ನೋ ನೆನಪಾದ್ರೂ ಇದೆಯೇನ್ರೀ?" ಮತ್ತೊಂದು ಕೂಗು. ಮೂರು ಸೀಟಿನ ಆಸನದ ಮೇಲೆ ಮಕ್ಕಳಂತೆ ನಾಲ್ಕನೇಯವರಾಗಿ ಕೂತ ವೆಂಕಟಗಿರಿ ರಾವ್ ತಮ್ಮ ಕೊಕ್ಕರೆ ಕೊರಳು ಮುಂದೆ ಮಾಡಿ ಹೆಂಡತಿಗೆ ಮುಖದರ್ಶನ ಮಾಡಿಸಿದರು. ಅಲಮೇಲಮ್ಮನ ಮೈಯೆಲ್ಲ ಉರಿದು ಹೋಯಿತು. ಹೆಂಡತಿಯನ್ನು ಜವಾಬ್ದಾರಿಯಿಂದ ಒಂದು ಸೀಟು ನೋಡಿ ಕೂಡ್ರಿಸುವುದು ಬಿಟ್ಟು, ಸಣ್ಣ ಹುಡುಗನಂತೆ ಸಣ್ಣ ಜಾಗ ಕಂಡಿದ್ದೇ ತಡ, ಅಂಡು ಆನಿಸಿ ಆರಾಮಾದ ಭಂಡ, ಇವರೆಂಥ ಗಂಡ? ಎಂದು ಮನಸ್ಸಿನಲ್ಲೇ ಮೆಣಸಿನಕಾಯಿ ಮುರಿದರು.

ಬಸುರಿ ಹೆಂಗಸಿನಂತೆ ಮೈತುಂಬಿಕೊಂಡ ಬಸ್ಸು, ಶುರುವಾತೋ ಇಲ್ಲವೋ ಎನ್ನುತ್ತ ಜಾಗಬಿಟ್ಟು ಇನ್ನೂ ಹತ್ತಿಪ್ಪತ್ತು ನಿಮಿಷವಾಗಿಲ್ಲ, ಡ್ರೈವರ್ ಮಹಾಶಯ ಬ್ರೇಕ್ ಹಾಕುವುದೇ? ಅಲಮೇಲಮ್ಮನ ಇಡೀ ದೇಹ ಅನಾಮತ್ತಾಗಿ ಸೀಟಿನ ಮೇಲೆ ಕುಳಿತ ಕೋಮಲಾಂಗಿಯ ಮೇಲೆರಗಿತು. ಆಕೆ ತನ್ನ ಚೂಪುಗಣ್ಣಿನಿಂದ ಕರಕರನೇ ಕತ್ತರಿಸಿ ಎಸೆಯುವಂತೆ ಪ್ರೊ. ಅಲಮೇಲಮ್ಮನವರನ್ನು ನೋಡುವುದೆಂದರೇನು? ಸಿಟ್ಟು ಮಾಡುವುದೆಂದರೇನು? ಇವರಿಗೆ ತಡೆಯುತ್ತದೆಯೇ ಜೀವ, ಶುರು ಮಾಡಿಯೇ ಬಿಟ್ಟರು ವಿಷ್ಣು ಸಹಸ್ರನಾಮ. ನಾನೇನು  ಬೇಕೂಂತ ನಿನ್ನ ಮೇಲೆ ಬಿದ್ನೇನಮ್ಮಾ ಮಹಾತಾಯಿ? ಆರಾಮವಾಗಿ ಕೂತಿದ್ದಿಯಾ, ನಿಂತವರ ಕಷ್ಟ ಹೇಗೆ ತಿಳಿಯುತ್ತೆ ಹೇಳು? ಒಂದ್ ಸ್ವಲ್ಪ ಅಡ್ಜಸ್ಟ ಮಾಡ್ಕೋಬೇಕಪ್ಪಾ. ಕೆಳಗೆ ಕಾಲಿಡಲಿಕ್ಕೆ ಜಾಗವಿಲ್ಲ, ಮೇಲೆ ಕೈ ಹಿಡಿಲಿಕ್ಕೆ ಜಾಗವಿಲ್ಲ. ನಿಂತೋರ ಪಾಡು, ಕಾಲು ನೀಡಿ ಕುಳಿತವರಿಗೆ ತಿಳಿಯೋದಾದರೂ ಹೇಗೆ ಹೇಳು".

ಅಲಮೇಲಮ್ಮನ ಬಾಯಿ ಬಾಯಿಯೇ ಅದು, ಬೊಂಬಾಯಿ, ದಿಲ್ಲಿ, ಕಲ್ಕತ್ತಾ  ಎಂದೆಲ್ಲ   ತಿಳಿದುಬಲ್ಲ ರಾಯರು ಸಣ್ಣಗೆ ಉಲಿದರು, "ಲೇ ಅಲಮೇಲು ಇಲ್ಲಿ ಬಾರೇ, ನನ್ನ ಸೀಟಿನಲ್ಲಿ ಕೂತ್ಕೋ ಬಾ, ನಾನು ಎದ್ದು ನಿಲ್ತೀನಿ" ... ರಾಯರು ಪಾಪ ! ಎಂದು ತನ್ನ ಸೀಟಿನಲ್ಲಿ ಗಿರ್ಧ ಸೀಟು ಬಿಟ್ಟುಕೊಟ್ಟ ಪಾಪದ ಪ್ರಾಣಿ ಅಕ್ಷರಶ: ಅಂಜಿಬಿಟ್ಟ. ಇವರ ಪ್ರೀತಿಯ ಅಲಮೇಲಮ್ಮನೇನಾದರೂ ತನ್ನ ಸೀಟಿನ ಹತ್ತಿರ ಬಂದರೆ ಮುಗಿದೇ ಹೋಯ್ತು, ಆಮೇಲೆ ಒಂಟೆಗೆ ಜಾಗ ಕೊಟ್ಟು ತನ್ನ ಟೆಂಟನ್ನೇ ಖಾಲಿಮಾಡಿ ಬಿಟ್ಟೂ ಹೋದವನ ಗತಿಯೇ ತನಗೂ ಆದೀತು. "ರಾಯರೇ ನೀವು ಕೂಡೋದಾದ್ರೆ ಕೂಡ್ರೀ, ಇಲ್ಲದಿದ್ರೆ ಏಳ್ರಿ" ಎಂದೇಬಿಟ್ಟ. ರಾಯರೂ ಸುಮ್ಮನಾಗಿ ಬಿಡಬೇಕೇ! ಅಲಮೇಲಮ್ಮನ ಕಣ್ಣುಗಳು ರಾಯರೊಂದಿಗೆ ಕೋಳಿಕಾಳಗ ಮಾಡಿ, ಹುಬ್ಬುಗಳು ಏರೇರಿ ಇಳಿದು ಮೈಯೆಲ್ಲ ಕಂಪಿಸಿದಾಗಲೇ, ರಾಯರು ಛಳಿಯೇರಿದಂತೆ ನಡುನಡುಗಿ ಹೋದರು. ಇನ್ನೇನು ಕಾದಿದೆಯೋ ವೆಂಕಟಾರಮಣಾ, ಸಂಕಟಾಹರಣಾ, ಧಾರವಾಡದಲ್ಲಿ ಕಾಯ್ದಿಟ್ಟು ಕಾಪಾಡಿಕೊಂಡು ಬಂದ ಮಾನ ಬೆಳಗಾವಿಯ ಬಸ್ಟ್ಯಾಂಡಿನಲ್ಲಿ ಬಿಳಿಬಿಳಿ ಬೆಳಕಿನಲ್ಲೇ ದಿವಾಳಿಯಾಗಿ ಹೋದರೇನು ಗತಿ?ಭಗವಂತ, ದಯಾವಂತ ನೀನೇ ಗತಿ ಎಂದು ಹರಿನಾಮದಲ್ಲಿ ಹರಿದು ಹೋದರು. ಸೀಟು ಕೊಡದಿದ್ದವರನ್ನು, ಕೂತು ಕೊಚ್ಚುವವರನ್ನು, ಹಾಯಾಗಿ ಗೊರಕೆ ಹೊಡೆಯುವವರನ್ನು ಕಂಡು ಹೊಟ್ಟೆಯುರಿಸಿಕೊಂಡ ಅಲಮೇಲಮ್ಮ ನಿಂತ ಕಾಲಮೇಲೇ ಉದ್ದುದ್ದ ಆಶುಭಾಷಣಗಳನ್ನು ಬಿಗಿದು ತಾವು ಪ್ರೊಫೆಸ್ಸರ್ ಆಗಿದ್ದನ್ನು ಸಾರ್ಥಕಪಡಿಸಿಕೊಂಡೇ ಬಿಟ್ಟರು.ಬೆಳಗಾವಿಯನ್ನೂ ಮುಟ್ಟಿದರು.


ಅಂಕ

ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಹಾಜರ್ ಹತ್ತಂಕಿ ದಂಪತಿಗಳು. ಅರೆರೆ! ಬೆಳಗಾವಿ-ಧಾರವಾಡ ಬಸ್ಸಲ್ಲಿ ಒಂದೆರೆಡು ಖಾಲಿ ಸೀಟುಗಳೂ ಇದ್ದವು! ರಾಯರು ವಸ್ತ್ರ ಹಾಕಿ ಸೀಟು ಹಿಡಿದು ಹೆಂಡತಿಯನ್ನು ಕರೆದು ತಮ್ಮ ಪಕ್ಕಕ್ಕೆ ಕೂರಿಸಿಕೊಂಡೇ ಬಿಟ್ಟರು. ಧೈರ್ಯವೆಂದರೆ ಧೈರ್ಯ, ನಮ್ಮ ರಾಯರ ಧೈರ್ಯ! ಅಲಮೇಲಮ್ಮ ಒಮ್ಮೆ ಎದ್ದು ಮತ್ತೆ ಸರಿಯಾಗಿ ಕೈಕಾಲು ಚಾಚಿದರು. ರಾಯರು ಒಂದಿಷ್ಟು ಮುದುರಿದರು. ಇವರು ಇನ್ನಿಷ್ಟು ಒತ್ತಿದರು. ಅವರು ಮತ್ತಷ್ಟು ಸರಿದರು. 'ಒತ್ತಿದರೆ ಸರಿತಾರೆ, ಸರಿದರೆ ಒತ್ತುತಾರೆ' ಎಂದು ರಾಯರಿಗೂ ಗೊತ್ತು. ಆದರೆ ಒತ್ತಲೂ ತಾಕತ್ತು ಬೇಕಲ್ಲ! ರಾಯರಿಗೆ ಮದುವೆಯಾದಾಗಿನಿಂದಲೂ ಸರಿದೇ ಗೊತ್ತು.

         ಜನ ಮತ್ತೂ ಬಂದರು, ಇನ್ನೂ ನುಗ್ಗಿದರು. ಅಲಮೇಲಮ್ಮನಿಗೆ ಸಿಟ್ಟು  ಬಂತು ಕಂಡಕ್ಟರ್ ಮೇಲೆ. ಇನ್ನೂ ಎಷ್ಟು ತುಂಬುವುದು, ಕುರಿ ತುಂಬಿದ ಹಾಗೆ. ಗಾಡಿ ಮೊದಲೇ ತುಂಬಿ ತುಳುಕುತ್ತಿದೆ ಬಸುರಿ ಹೆಂಗಸಿನ ಹಾಗೆ. ದಾರಿಯಲ್ಲೇ ಹೆರಿಗೆಯಾಗಿ ಜನ ಹೊರಗೆ ಬಿದ್ದು ಬಿಟ್ಟರೆ! "ನಡಿಯಯ್ಯಾ ಎಷ್ಟು ತುಂಬುವುದು ಕುರಿಗಳ  ಹಾಗೆ" ಎಂದೇ ಬಿಟ್ಟರು. ಜನ ಕೂಗಿದರು 'ಹೋs' ಕಂಡಕ್ಟರ್ ಕಣ್ಣ ಕಣ್ಣ ಬಿಟ್ಟ. ಮತ್ತೂ ಜನ ತುಂಬಿದರು. ಬಸುರಿ ಹೆಂಗಸು ಬಳುಕುತ್ತಾ ಕುಲುಕುತ್ತಾ ಹೊರಳಿ ಹೊರಟಳು. ರಸ್ತೆಯಲ್ಲಿ ಪುಟ್ಟ ಪುಟ್ಟ ಹೊಂಡಗಳು. ಅದರಲ್ಲಿ ಈಜುವ ಮೀನು ಮರಿಗಳು! ಮತ್ತೊಮ್ಮೆ ಪುಟ್ಟ ಪರ್ವತಗಳು, ಅವುಗಳ ಮೇಲೆಲ್ಲ ಬೆಳೆದ ಎಲೆಬಳ್ಳಿಗಳು. ಏರಿ ಇಳಿದು, ಓಡಿ ಜಿಗಿದು ನರಳಿದಳು ಆಕೆ. ಎಮ್ಮೆಯೊಂದು ಅಡ್ಡ ಬರಬೇಕೇ ಬಸ್ಸಿಗೇ? 'ಗಕ್' ಎಂದು ನಿಂತಿತು. ಪಕ್ಕದಲ್ಲಿ ನಿಂತಿದ್ದವಮೈಮೇಲೇ ಬಿದ್ದ. ಅಲಮೇಲಮ್ಮನ ಮೃದು ಮೈಗೆ ಮಹಾಪೆಟ್ಟಾಯಿತು. " ಕುಳಿತವರೂ ಅಂದ್ರೆ ಅದೇನು ಹೊಟ್ಟೆಯುರಿಯೋ ಏನೋ ಬಿದ್ದು ಬಿಡ್ತಾರೆ ಮೈಮೇಲೆ, ರಾಮರಾಮಾs ಕಣ್ಣು ಕಾಣೋದಿಲ್ವೇನ್ರೀ ಸರಿಯಾಗಿ ನಿಲ್ರೀ" " ಹೋ ಏನಪ್ಪಾ ನಮ್ಮ ಕಷ್ಟ ನಮಗೇ ಗೊತ್ತು, ಯಾಕಾದ್ರೂ ತುಂಬ್ತಾರೋ ಪಾಟಿ ಜನಾನ‌s ಇನ್ನೊಂದು ಬಸ್ಸ ಇರೊಲ್ವೇ, ಇದೊಂದೇ ಬಸ್ಸು ಕೆಟ್ಟು ಹೋಯ್ತೇ?" ಎಂದು ಕೂಗಿದರು. "ಅಲಮೇಲು ಸುಮ್ಮನಿರೇ, ಸೀಟು ಸಿಕ್ಕಿದೆ , ಹಾಯಾಗಿ ನಿದ್ದೆ ಮಾಡೇ" ರಾಯರು ಆಲವತ್ತುಕೊಂಡರು. ಪ್ರೊಫೆಸ್ಸರ್ ಅಲಮೇಲಮ್ಮ ಕೇಳಿಯಾರೇ? ಹೇಳಿಯೇ ಅಭ್ಯಾಸ ಅವರಿಗೆ.  "ಸಾಕು ಸುಮ್ಮನಿರಿ ಕಂಡಿದ್ದಿನಿ, ಆಕಡೆ ಕಿಟಕಿ ಪಕ್ಕಕ್ಕೆ ಕೂತು ಆರಾಮವಾಗಿ ಎನ್ ಬೇಕಾದ್ರೂ ಮಾತಾಡ್ತೀರಿ, ಕಡೆ ಕುಳಿತು ನೋಡ್ರಿ, ಅದೇನು ಕಾಲಮೇಲೆ ಕಾಲಿಡ್ತಾರೆ, ಮೈಮೇಲೆ ಬೀಳೋ ಥರಾನೇ ನಿಲ್ತಾರೆ, ನಿಮಿಷಕ್ಕೊಂದ್ಸಲ ಕೈತಪ್ಪಿ ಮೈಮೇಲೆ ಬಿತ್ತು ಅಂತ ನಾಟಕ ಆಡ್ತಾರೆ. ಅಷ್ಟು ತ್ರಾಸದ್ರೆ ಇನ್ನೊಂದು ಬಸ್ಸಿಗೆ ಬರ್ಬೇಕಪ್ಪಾ ಜನಾ, ನಿಂತುಕೊಂಡು ತಮಗೂ ಕಷ್ಟ, ಕೂತವರಿಗೂ ಕಷ್ಟ" ಹಿಂಗೇ ನಡೆದಿತ್ತು ಅಮ್ಮನವರ ಲೆಕ್ಚರ್!

ಮಾರುತಿರಾಯನ ಸ್ಥಾನ ಮಹಾತ್ಮೆಯ ನೆನಪು ಬಂತು ಪಾಪದ ಪೀಚಲು ರಾಯರಿಗೆ. ರಾಮನ (ಅಥವಾ ರಾಯರ) ಗುಡಿ ಮುಂದೆ ಆತ ಕೈ ಮುಗಿದುಕೊಂಡು ನಿಂತ ವಿನೀತ ರಾಮಭಕ್ತ ಹನುಮಾನ! ತನ್ನದೇ ದೇವಸ್ಥಾನದಲ್ಲಿ ಆತ ಕೈಯೆತ್ತಿ ಮುಖ ತಿರುವಿ ನಿಂತ ಜಂಭದ ಮಾರುತಿ. ಎಲ್ಲಾ ಸ್ಥಾನ (ಪಲ್ಲಟದ) ಮಹಿಮೆ ದೇವಾ ಮಾರುತಿರಾಯಾ ಬಲಭೀಮಾ ಎಂದು ರಾಯರು ಕೈಯೆತ್ತಿ ಮುಗಿದರು. ಅಲಮೇಲಮ್ಮ ಗೊರಕೆ ಹೊಡೆದರು.


 (ಜನವರಿ, 2011 ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾದದ್ದು)