ಮುದ್ದು ವಿದ್ಯಾರ್ಥಿಗಳಿಗೊಂದು ಪ್ರೇಮಪತ್ರದ ನಮೂನೆ
ನಮ್ಮ ಪ್ರೀತಿಯ ಮುದ್ದು ಮಕ್ಕಳಿಗೆ ಅರ್ಥಾತ್ ವಿದ್ಯಾರ್ಥಿಗಳಿಗಾಗಿ ನಾವು ಏನೇನು ಮಾಡುವುದಿಲ್ಲ? ಬೇಸರ ಬಂದು ಅವು ಕ್ಲಾಸಿನಲ್ಲೇ ತೂಕಡಿಸಿದರೂ ಒಂದು ತಾಸು ಬಿಡದೇ ಕೊರೆಯುವುದಂತೂ ಇದ್ದೇ ಇದೆ. ಆದರೂ ನಾವು ತೀರಾ ಕಟುಕರೇನಲ್ಲ. ಹಾಗೆ ಯಾರಾದರೂ ಕ್ಲಾಸಿನಲ್ಲೇ ನಿದ್ದೆ ಮಾಡಲು ಸುರು ಮಾಡಿದರೆ, ಪಾಪ ಮನೆಯಲ್ಲಿ ಏನು ಕಷ್ಟವೋ ಏನೊ ಇಲ್ಲಿಯಾದರೂ ಒಂದಿಷ್ಟು ನೆಮ್ಮದಿಯಿಂದ ಮಲಗಲಿ ಎಂದು ಧ್ವನಿ ತಗ್ಗಿಸುತ್ತೇವೆ. ಇನ್ನು ಮತ್ಯಾರೋ ವಿದ್ಯಾರ್ಥಿ ಕೂತಲ್ಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಇಹಪರದ ಚಿಂತೆ ಬಿಟ್ಟು ತನ್ನದೇ ಲೋಕದಲ್ಲಿ ಕಳೆದುಕೊಂಡುಬಿಟ್ಟಿದ್ದರೆ ಅವನಿಗೆ ಅವನನ್ನು ಹುಡುಕಿಕೊಡುವ ಕಾರಭಾರ ಮಾಡುವುದೇ ಇಲ್ಲ. ಪಾಪ ನಮಗಿರುವುದೇ ಒಂದು ಅಸ್ತ್ರ ಎಂದುಕೊಂಡು ದೊಡ್ಡದನಿಯಲ್ಲಿ ಕೂಗುತ್ತಾ, ಇಡೀ ಕ್ಲಾಸ್ ರೂಮನ್ನೇ ನಮ್ಮ ರಂಗಸ್ಥಳವನ್ನಾಗಿ ಪರಿವರ್ತಿಸಿಕೊಂಡು ಮೈಕೈಗಳನ್ನೆಲ್ಲಾ ಕುಣಿಸುತ್ತಾ ನಾವು ವೀರಗರ್ಜನೆಗೈಯ್ಯುತ್ತಿದ್ದರೆ ಸಮಾಧಿ ಯೋಗಕ್ಕೇರುವ ತಾಕತ್ತು ಅವನಿಗಿದೆಯೆಂದರೆ ಅವನ ಪ್ರಭುದ್ಧತೆ ಎಂಥ ಮೇಲ್ಮಟ್ಟದ್ದಾಗಿರಬಹುದೆಂದು ಅರಿವಾಗಿ ಅವನನ್ನು ಕೊಂಚವೂ ಅಲುಗಾಡಿಸದೇ ಅವನಷ್ಟಕ್ಕೆ ಅವ ನನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವರು ಪುಟ್ಟ ಮಕ್ಕಳಂತೆ ಬಾಯಲ್ಲಿ ಬೆರಳು ಹಾಕಿಕೊಂಡು ಚೀಪುತ್ತಿದ್ದರೆ, ನೋಟಬುಕ್ಕುಗಳಲ್ಲಿ ಆಟವಾಡುತ್ತಿದ್ದರೆ
ನಾವು ನೋಡಿಯೇ ಇಲ್ಲವೆಂಬಂತೆ ನಟಿಸಿ ಅವರ ಮುಜುಗರ ತಪ್ಪಿಸಿಬಿಡುತ್ತೇವೆ. ಇದೇನು ಮಹಾ, ನೀವು ಮಾಡುವುದೇ ಇಷ್ಟು ಅಂತ ನೀವೇನೂ ಮೂಗು ಮುರಿಯುವುದು ಬೇಡ. ಇನ್ನೂ ನನ್ನ ಲಿಸ್ಟು ಮುಗಿದಿಲ್ಲ.
ನೋಟ್ಸು, ಕ್ವೆಶ್ಚನ್ ಬ್ಯಾಂಕು, ಇಂಪಾರ್ಟೆಂಟ್ ಪ್ರಶ್ನೆಗಳು, ಮೂರ್ನಾಲ್ಕು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಕ್ಲಾಸಿನಲ್ಲಿ ಬಿಡಿಸುವುದು, ಇವೆಲ್ಲಾ ಉಪಕಾರಗಳನ್ನು ಅವರು ಕೇಳದೆಯೇ ಮಾಡುತ್ತಿರುತ್ತೇವೆ. ಅದರ ಮೇಲೆ ಕೇಸ್ ಸ್ಟಡಿ, ಅಸೈನ್ಮೆಂಟು, ಅದು ಇದು ಅಂತ ನಮಗೆ ಗೊತ್ತಿಲ್ಲದ್ದನ್ನೆಲ್ಲ ಗೊತ್ತಿದ್ದವರಿಗಿಂತ ಹೆಚ್ಚು ಸಿರೀಯಸ್ಸಾಗಿ ಮಾಡಿಸುತ್ತೇವೆ.
ಇತ್ತಿತ್ತಲಾಗಿ ನಾವು ಇನ್ನೊಂದಿಷ್ಟು add on ಉಪಕಾರಗಳನ್ನು ಸುರು ಹಚ್ಚಿಕೊಂಡಿದ್ದೇವೆ. ಶಾಲೆಯಲ್ಲಿ ಏನು ಎಂದರೆ ಏನೂ ಕಲಿತಿರದ ನಮ್ಮ ಮುದ್ದು ಮಕ್ಕಳಿಗೆ ನಮ್ಮ ಪಾಠ ಎಲ್ಲಿಂದ ಶುರು ಮಾಡಬೇಕೆಂಬ ಗೊಂದಲದಲ್ಲಿ ನಾವೇ ಬಿದ್ದು ಗೋಳಾಡಿದರೂ ಪ್ರಾಬ್ಲ್ಂ ಅನ್ನು ಅಲ್ಲಿಯೇ ಫಿಕ್ಸ್ ಮಾಡಿ, ಅಕ್ಷರಗಳಿಂದಲೇ ಆಗಲಿ ಅಂತ ಪ್ರಾರಂಭಿಸಿಯೇ ಬಿಡುತ್ತೇವೆ. ಇನ್ನು ವ್ಯಾಕರಣ, ವಾಕ್ಯರಚನೆ ಅಂತೆಲ್ಲಾ ಅಂತ:ಕರಣದಿಂದ ಹೇಳಿಕೊಟ್ಟು ಯಾಕಾರು ಸಿಗತಿವಿ ಟೀಚರ್ಸಿಗೆ, ಬ್ಯಾರೆ ಸಿಕ್ಸೆ ಇಲ್ವಾ
ಸ್ಟುಡಂಟಿಗೆ' ಅಂತ ಅವು ಅತ್ತು ಸಾಲೆ ಬಿಡಿಸಿದ ದೋಷಕ್ಕೆ ತುತ್ತಾಗ್ತೀವಿ. ಇರಲಿ ಈಗ ಮಾತ್ರ ನಾನು
ಕಲಿಸುತ್ತಿರುವ ವಿಷಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಿಯವಾಗಬಹುದೆಂಬ ಕೆಟ್ಟ ನಂಬಿಕೆ ಉಂಟಾಗಿದೆ ನನಗೆ.
ಒಂದೊಂದು ಸಲ ಹಾಗೆ ಟೀಚರಗಳು ತಮ್ಮ ಕೆಪ್ಯಾಸಿಟಿಯ ಬಗ್ಗೆ ಅತಿಶಯವಾದ ಆತ್ಮವಿಶ್ವಾಸ ಹೊಂದಿರುತ್ತಾರೆ.
ಅಷ್ಟೇ ಅಲ್ಲ ತಮ್ಮ ವಿದ್ಯಾರ್ಥಿಗಳ ಆಸಕ್ತಿಯ ಬಗ್ಗೆಯೂ ಭಯಂಕರ ವಿಶ್ವಾಸ ಅವರಿಗೆ. ಅಂಥದೇ ಕೆಟಗರಿಯಲ್ಲಿ
ಬರುವ ನಾನು ನನ್ನ ಮಕ್ಕಳ ಬಗ್ಗೆ ಬಹಳಷ್ಟು ಸಹಾನುಭೂತಿಯನ್ನು
ಹೊಂದಿರುವವಳಗಿದ್ದರಿಂದ ಒಂದು ಸಣ್ಣ ಪರೋಪಕಾರಿ ಕೆಲಸವನ್ನು ಮಾಡಲು ಹೊರಟಿದ್ದೇನೆ. ಹುಡುಗ ಹುಡುಗಿಯರು
ಒಮ್ಮೊಮ್ಮೆ ಪ್ರೇಮದಲ್ಲಿ ಬಿದ್ದು ವಿಲವಿಲ ಒದ್ದಾಡಬೇಕೆಂದು ಸ್ವಯಂಸ್ಪೂರ್ಥಿಯಿಂದ ಪ್ರಯತ್ನ ಮಾಡುತ್ತಿರುತ್ತಾರೆ,
ಇನ್ನು ಕೆಲವರು ಅದಾಗಲೇ ಬಿದ್ದುಬಿಟ್ಟಿರುತ್ತಾರೆ ಮತ್ತು ತಮ್ಮ ಪ್ರಿಯತಮೆ(ಮ)ಗೆ ಒಂದು ಸುಂದರವಾದ
ಪ್ರೇಮಪತ್ರವನ್ನು ಬರೆಯಲು ಚಡಪಡಿಸುತ್ತಿರುತ್ತಾರೆ. ಇದು ಮೊಬೈಲ್ ಯುಗವಾದ್ದರಿಂದ ILU, I ms U, Gm, Ga, Gn, tc ಎಂದೆಲ್ಲಾ ಕಳಿಸಿ ಆಗಲೇ ಮುಗಿದುಹೋಗಿರುತ್ತದೆ. ಮತ್ತೂ ಮತ್ತೂ
ಅವನ್ನೇ ಕಳಿಸಬೇಕೆಂದರೆ ಅವಕ್ಕೂ ಬೋರು, ಓದುವ ಪ್ರೇಮಿಗಳಿಗೂ ಬೋರು. ಇಂಥ ಟೈಮಲ್ಲೇ ಸ್ವಾಮಿ, ಏನಾದರೂ
ಕ್ರಿಏಟಿವ್ ಆಗಿ ಬರೆಯಬೇಕೆಂಬ ರೋಗ ಉಲ್ಭಣಿಸಿ ಪ್ರೇಮರೋಗಿಯು
ಇನ್ನೂ ಹೆಚ್ಚಿನ ಟೆಂಪರೇಚರನಿಂದ ಬಳಲಿ ಬೆಂಡಾಗುತ್ತಾನೆ(ಳೆ). ಒಂದು ಉದ್ದಾನುದ್ದ ಪ್ರೇಮಪತ್ರ ಬರೆದು ಮನಸ್ಸಿನೊಳಗಿನದೆಲ್ಲಾ
ತೋಡಿಕೊಳ್ಳಬೇಕೆಂಬ ಬಯಕೆ ಪಾಪ ಯಾರಿಗಿರುವುದಿಲ್ಲ ಹೇಳಿ? ಆದರೆ ಪಾಪ ಮತ್ತದೇ ವ್ಯಾಕರಣ, ವಾಕ್ಯರಚನೆ
ಎಂದೆಲ್ಲಾ ರಗಳೆ. ಆಗ ಕೆಟ್ಟ ಭಾಷೆ ಕಲಿಸಿದ ಈ ಸ್ಕೂಲ ಟೀಚರಗಳ ವಿರುದ್ಧ ಅವರ ಸಹಸ್ರ ನಾಮಾವಳಿ ಪ್ರಾರಂಭವಾಗಬಹುದು.
ನೌಕರಿಗಾಗಿ ಅರ್ಜಿ ಕಳಿಸಲು ಅರ್ಜಿಯ ವಿವಿಧ ನಮೂನೆಗಳನ್ನು ಇಂಟರನೆಟ್ ಮೇಲೆ ಜಾಲಾಡಿದಂತೆ, ಪ್ರೇಮಪತ್ರದ
ನಮೂನೆಗಳಿಗಾಗಿಯೂ ಜಾಲಾಡಿ ಸುಸ್ತಾಗಿರಬಹುದು. ಯಾಕೆ ಯಾರೂ ಕೊಡಬಾರದು ಇಂಥ ಉಪಯೋಗಿ ಟಿಪ್ಸು, ಲಿಂಕ್ಸು,
ಅಂತ ಯಾರನ್ನು ಬೈಯ್ಯಬೇಕೆಂದು ಗೊತ್ತಾಗದೇ ಕೈಕೈ ಹಿಸುಕಿಕೊಂಡು ಅಸಹಾಯಕರಾಗಿರಬಹುದು. ಅಂಥ ನನ್ನ ಎಲ್ಲ
ಪಾಪದ ಮುದ್ದು ಮಕ್ಕಳಿಗೆ ಇಲ್ಲಿದೆ ಒಂದು ಪ್ರೇಮಪತ್ರದ ನಮೂನೆ.
ಓದಿಕೊಂಡು, ಕಂಠಪಾಠ
ಮಾಡಿಕೊಂಡು, ಇಲ್ಲವೇ ಕಾಪಿ ಹೊಡೆದು ಬರೆದು ಪ್ರಿಯತಮನ(ಮೆಯ) ಮನಗೆದ್ದು ಪಾಸಾಗಿಬಿಡಲಿ ಎಂಬ ಒಂದೇ
ಒಂದು ದೂರಾಲೋಚನೆ ಅಷ್ಟೇ. ಮತ್ತಾವ ಸ್ವಾರ್ಥವೂ ಇಲ್ಲ. ಹಾಗಂತ ಇದು ನನ್ನದೇ ಸ್ವಂತ ಕಪೋಲಕಲ್ಪಿತ ಕೃತಿ ಎಂದು ಪ್ರಿಯ ವಿದ್ಯಾರ್ಥಿಗಳು ತಪ್ಪು ಭಾವಿಸಬಾರದು. ಹಾಗೆಲ್ಲಾ ನಾವು ಲೆಕ್ಚರರಗಳು ಸ್ವಂತ ತಲೆ ಉಪಯೋಗಿಸಿ ನೋಟ್ಸ್ ಕೊಡುವುದೇ ಇಲ್ಲ. ಅಲ್ಲಿ ಇಲ್ಲಿ ನಿಮಗಿಂತ ಒಂದೆರಡು ಹೆಚ್ಚಿಗೆ ಪುಸ್ತಕಗಳನ್ನು ರೆಫರ ಮಾಡಿ ನೋಟ್ಸ್ ತೆಗೆದಂತೆ ಅಲ್ಲಿ ಇಲ್ಲಿ ಹುಡುಕಾಡಿ ನಿಮಗಾಗಿ ಪ್ರೇಮಪತ್ರದ ಒಂದೊಳ್ಳೆ ಮಾದರಿಯನ್ನು ಕಂಡುಹಿಡಿದ್ದಿದ್ದೇನೆ. ಇದನ್ನೇ ಆಧಾರವಾಗಿಟ್ಟುಕೊಂಡು ನೀವು ಅಲ್ಲಿ ಇಲ್ಲಿ ಒಂದೆರೆಡು ಶಬ್ದಗಳನ್ನು ನಿಮ್ಮ ನಿಮ್ಮ ಅನುಕೂಲ, ಪರಿಸ್ಥಿತಿ ಮತ್ತು ಬುದ್ಧಿಗೆ ತಕ್ಕಂತೆ ಬದಲಾಯಿಸಿ ಬರೆದುಕೊಳ್ಳಬಹುದು. ತೀರಾ ಇದನ್ನೇ ವರ್ಡ್ ಟು ವರ್ಡ್ ಕಾಪಿ ಹೊಡೆದರೆ ಪ್ಲಗೇರಿಸ್ಂ ಭೂತ ಬೆಂಬಿಡದೆ ಕಾಡಬಹುದು.
ಇನ್ನು ನೀವುಂಟು, ಈ ಪ್ರೇಮಪತ್ರದ ನಮೂನೆಯುಂಟು, All
the best, all the best.
Welfare
My Dearest Laila (Miss Kho t)
All
well, I love you hart and sole, You also please love to me. I you Go to
Seneema, box seat, I stand in Moter stand 3 O’clock. Seneema begin three and
half matnee. You do not come, my life Barbad!
Nothing more to wright at present. All well.
Post:Dharwar
Your dearest Majnu
At: Dharwar Vasantrao Gopal
Gouda Desai
District: Dharwar (Bahaddur)
(ಇದೊಂದು ಕನ್ನಡದ ಖ್ಯಾತ ಲೇಖಕರ ಪ್ರಸಿದ್ಧ ಕಾದಂಬರಿಯಲ್ಲಿ ಬಂದ ಪ್ರೇಮಪತ್ರ, ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು. ಇಲ್ಲವಾದರೆ ಇನ್ನೆರಡು ದಿನ ಬಿಟ್ಟು ನಾನೇ ತಿಳಿಸುತ್ತೇನೆ)
No comments:
Post a Comment