ಅಂಕ ೧
ಪ್ರೊಫೆಸರ್ ಅಲಮೇಲಮ್ಮನವರು ತಮ್ಮ ದೊಡ್ಡ ಮೂಗಿನ ಅಗಲ ಹೊಳ್ಳೆಗಳಿಂದ ಜೋರಾಗಿ ಉಸಿರು ಬಿಡುತ್ತ ಓಡಿ ಬಂದರು, ಧಾರವಾಡದ ಬಸ್ ಸ್ಟ್ಯಾಂಡಿನ ಒಳಗಡೆ. ಅವರು ಓಡುವುದನ್ನು ನೋಡಲೆಂದೇ ಕಣ್ಣ ಕಣ್ಣ ಬಿಟ್ಟು, ಬಂದ ಬಸ್ಸುಗಳನ್ನೂ ಬಿಟ್ಟೂ ನಿಂತು ಬಿಟ್ಟರು ಕಾಲಪ್ರಜ್ನೆಯಿಲ್ಲದ ಕೆಲ ಜನ. ಹಾಗೆ ನೋಡುವ ನೋಟವೇ ಇತ್ತೆನ್ನಿ ಅವರ ಆ ಓಟ.
ಆಂಧ್ರದ ಅಲಮೇಲು ಅವರು ಧಾರವಾಡಕ್ಕೆ ಬಂದು ಯುನಿವರ್ಸಿಟಿ ಸೇರಿ ಮನೆ ಮಾಡಿದ ಮೇಲೆ ಸ್ಥಾನಿಕ ಜನರ ಬಾಯಲ್ಲಿ
'ಅಲಮೇಲಮ್ಮ' ಆಗಿ ಬಢ್ತಿ
ಹೊಂದಿದ್ದು ಅವರಿಗೆ ಅಷ್ಟೇನೂ ಪ್ರಿಯವಾಗಿರಲಿಲ್ಲ. ಆದರೆ ನಮಗೆ ಪ್ರಿಯವಾದದ್ದನ್ನೇ ಆಡಬೇಕಲ್ಲಾ ಈ ಜನಗಳು! (ದನಗಳು). ಅವರ ಕಪ್ಪು ಬಣ್ಣದ ಮುಖದ ನಡುವೆ ಮಿರಮಿರನೇ ಮಿಂಚುತ್ತಿತ್ತು ವಜ್ರದ ಶುಭ್ರ ಬಿಳಿ ಮೂಗುತಿ. ಆ ಧಡುತಿ ದೇಹವೋ ಗುಜ್ಜಾನೆ ಮರಿಯನ್ನು ಜ್ನಾಪಿಸುವಂತಿತ್ತು. ದಪ್ಪ ಜರೀ ಬಾರ್ಡರಿನ ಗಡದ್ದು ನೀಲಿ ಬಣ್ಣದ ಕಂಚಿ ಸಿಲ್ಕ್ ಸೀರೆಯನ್ನು ಮೇಲಕ್ಕೆತ್ತಿ ಅವರು ಓಡುತ್ತಿರುವ ಸ್ಟೈಲ್ ನೋಡಿದರೆ ನೋಡುತ್ತಲೇ ಇರಬೇಕು ಎನಿಸಿರಬೇಕು ಕೆಲವರಿಗೆ. ಅಂಥದರಲ್ಲೇ ಮಾಲೆ ಮಾರುವ ಹುಡುಗನೂ ಓಡಿ ಬರಬೇಕೇ? ಇವರ ಸೀರೆ ಮತ್ತು ಮೈಬಣ್ಣ ನೋಡಿಯೇ ಅವನಿಗೆ ಖಾತ್ರಿಯಾಗಿಬಿಟ್ಟಿತು, ಇದು ತನ್ನ ಗಿರಾಕಿಯೆಂದು. ಅಲಮೇಲಮ್ಮ ನಾಲ್ಕು ಮೊಳ ಮಲ್ಲಿಗೆ ಮಾಲೆ, ಮೂರು ಮೊಳ ಅಬೋಲಿ ಮಾಲೆ (ಅವರ ಬಾಯಲ್ಲಿ ಕನಕಾಂಬರ) ಕೊಂಡು ತಲೆಗೇರಿಸಿಯೇ ತಟ್ಟಾದರು. ಇನ್ನು ಬೆಳಗಾವಿಯ ಬಸ್ಸು ಹತ್ತುವ ಗಡಿಬಿಡಿ ಅವರಿಗೆ.
ಅರೆರೆ! ಅವರ ಪತಿರಾಯ ಶ್ರೀ ಶ್ರೀ ವೆಂಕಟಗಿರಿ ರಾವ್ ಅವರೂ ಅದಾವ ಮಾಯದಲ್ಲೋ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷರಾಗಿಬಿಟ್ಟಿದ್ದಾರೆ. ಅಲಮೇಲಮ್ಮನವರನ್ನು ನೋಡುವ ಗಡಿಬಿಡಿ, ಗಾಬರಿಯಲ್ಲಿ ಪಾಪ ವೆಂಕಟಗಿರಿ ರಾವ್ ಕಣ್ಣಿಗೆ ಬೀಳುವುದಾದರೂ ಹೇಗೆ? ಇವರೋ ಒಂದಂಕಿ ಗೆರೆಯಂಥ ಪಿಟೀಲು ಮನುಷ್ಯ. ಆ ತಾಯಿಯೋ ಶೂನ್ಯದಂತೆ ಪುಟಿವ ಫುಟ್ ಬಾಲ್ ತರಹ! ವೆಂಕಟರಮಣಾ ಇದೆಂಥಾ ಜೋಡಿಯಯ್ಯಾ!
ನಿಮಗೆ ಗೊತ್ತಿದೆಯಲ್ಲಾ, ಧಾರವಾಡದಿಂದ ಬೆಳಗಾವಿಗೆ ಬರುವಾಗ ಎಂದಾದರೂ ಕುಳಿತುಕೊಳ್ಳಲು ಸೀಟು ಸಿಕ್ಕಿದೆಯಾ? ಇಲ್ಲ. ಅಂದಮೇಲೆ ಅಲಮೇಲಮ್ಮನವರಿಗೆ ಅದು ಸಿಕ್ಕುವುದುಂಟಾ? ಇಲ್ಲ. ವೆಂಕಟರಾಯರೇನೋ ಗಾಳಿ ಬಂದಾಗ ಪುಸ್ಸ ಅಂತ ಒಳಗೆ ತೂರಿಕೊಂಡು ಬಿಟ್ಟರು. ಇನ್ನು ಜನರನ್ನು ಹತ್ತಿಸುವುದೇ ಇಲ್ಲವೆಂದ ಕಂಡಕ್ಟರ್. ಅಲಮೇಲಮ್ಮ ಕೆರಳಿ ಕೆಂಡದುಂಡೆಯಾದರು. ಅದು ಹೇಗೆ ನಮ್ಮನ್ನು ಬಿಟ್ಟು ಹೋಗುತ್ತೀಯೋ ನೋಡುತ್ತೇನೆ ಎಂದು ಧಮಕಿ ಹಾಕಿದರು. ಅಂತೂ ಇಂತೂ ಇಪ್ಪತ್ತು ನಿಮಿಷ ಗುದ್ದಾಡಿ ಗಾಡಿಯ ಮೇಲೆ ಒಂದು ಕಾಲಿಟ್ಟರು. ಬಸ್ಸು ಕಿರ್ ಎಂದಿತು. ಎರಡನೇ ಕಾಲಿಟ್ಟರು. ಸ್ವಲ್ಪ ಕೆಳಕ್ಕಿಳಿಯಿತು. ಮುಂದೆ ತೂರಿಕೊಳ್ಳುತ್ತ ನಡೆದ ರಾಯರಿಗೆ ಹೋದ ಜೀವ ಬಂದಂತಾಯಿತು. ಬಸ್ಸು ಕೆಳಕ್ಕಿಳಿಯಿತೆಂದರೆ ಅರ್ಧಾಂಗಿ ಗಾಡಿ ಏರಿದ್ದಾಳೆಂದು ಅವರಿಗೆ ಖಾತ್ರಿ.
"ಮುಂದೆ ಹೋಗ್ರೀ, ಇಲ್ಲಾಂದ್ರೆ ಹೋಗುವವರಿಗೆ ಜಾಗಾನಾದ್ರೂ ಬಿಡ್ರಿ" ದೊಡ್ಡಕೆ ಕೂಗಿದರು ಅಲಮೇಲಮ್ಮ. ಜನರಿಗೋ ಮುಂದಕ್ಕೆ ಹೋಗುವುದೂ ಕಷ್ಟ, ಹಾಗೆಂದು ಇವರಿಗೆ ಜಾಗಬಿಡುವುದಂತೂ ಯಮಕಷ್ಟ.
"ಅಯ್ಯೋ ಕಾಲು ಹೋಯ್ತಪ್ಪಾ ಕಾಲು, ಸ್ವಲ್ಪ ತೆಗಿರೀ ಕಾಲ್ನs, ಹೆಂಗಸರು ಮಕ್ಕಳು ಇರ್ತಾರನ್ನೋ ಜ್ನಾನ ಬೇಡವೇನ್ರೀ?" ಪಕ್ಕದಲ್ಲಿ ನಿಂತಿದ್ದ ಗಂಡಸಿಗೆ ಬಯ್ದರು ಅಮ್ಮ. "ರೀ ಎಲ್ಲಿ ಹಾಳಾಗಿ ಹೋದ್ರೀ, ಇಲ್ಲಿ ನಾನೊಬ್ಬಳೇ ಇದ್ದೀನಿ ಅನ್ನೋ ನೆನಪಾದ್ರೂ ಇದೆಯೇನ್ರೀ?" ಮತ್ತೊಂದು ಕೂಗು. ಮೂರು ಸೀಟಿನ ಆಸನದ ಮೇಲೆ ಮಕ್ಕಳಂತೆ ನಾಲ್ಕನೇಯವರಾಗಿ ಕೂತ ವೆಂಕಟಗಿರಿ ರಾವ್ ತಮ್ಮ ಕೊಕ್ಕರೆ ಕೊರಳು ಮುಂದೆ ಮಾಡಿ ಹೆಂಡತಿಗೆ ಮುಖದರ್ಶನ ಮಾಡಿಸಿದರು. ಅಲಮೇಲಮ್ಮನ ಮೈಯೆಲ್ಲ ಉರಿದು ಹೋಯಿತು. ಹೆಂಡತಿಯನ್ನು ಜವಾಬ್ದಾರಿಯಿಂದ ಒಂದು ಸೀಟು ನೋಡಿ ಕೂಡ್ರಿಸುವುದು ಬಿಟ್ಟು, ಸಣ್ಣ ಹುಡುಗನಂತೆ ಸಣ್ಣ ಜಾಗ ಕಂಡಿದ್ದೇ ತಡ, ಅಂಡು ಆನಿಸಿ ಆರಾಮಾದ ಭಂಡ, ಇವರೆಂಥ ಗಂಡ? ಎಂದು ಮನಸ್ಸಿನಲ್ಲೇ ಮೆಣಸಿನಕಾಯಿ ಮುರಿದರು.
ಬಸುರಿ ಹೆಂಗಸಿನಂತೆ ಮೈತುಂಬಿಕೊಂಡ ಬಸ್ಸು, ಶುರುವಾತೋ ಇಲ್ಲವೋ ಎನ್ನುತ್ತ ಜಾಗಬಿಟ್ಟು ಇನ್ನೂ ಹತ್ತಿಪ್ಪತ್ತು ನಿಮಿಷವಾಗಿಲ್ಲ, ಡ್ರೈವರ್ ಮಹಾಶಯ ಬ್ರೇಕ್ ಹಾಕುವುದೇ? ಅಲಮೇಲಮ್ಮನ ಇಡೀ ದೇಹ ಅನಾಮತ್ತಾಗಿ ಸೀಟಿನ ಮೇಲೆ ಕುಳಿತ ಕೋಮಲಾಂಗಿಯ ಮೇಲೆರಗಿತು. ಆಕೆ ತನ್ನ ಚೂಪುಗಣ್ಣಿನಿಂದ ಕರಕರನೇ ಕತ್ತರಿಸಿ ಎಸೆಯುವಂತೆ ಪ್ರೊ. ಅಲಮೇಲಮ್ಮನವರನ್ನು ನೋಡುವುದೆಂದರೇನು? ಸಿಟ್ಟು ಮಾಡುವುದೆಂದರೇನು? ಇವರಿಗೆ ತಡೆಯುತ್ತದೆಯೇ ಜೀವ, ಶುರು ಮಾಡಿಯೇ ಬಿಟ್ಟರು ವಿಷ್ಣು ಸಹಸ್ರನಾಮ. ನಾನೇನು ಬೇಕೂಂತ ನಿನ್ನ ಮೇಲೆ ಬಿದ್ನೇನಮ್ಮಾ ಮಹಾತಾಯಿ? ಆರಾಮವಾಗಿ ಕೂತಿದ್ದಿಯಾ, ನಿಂತವರ ಕಷ್ಟ ಹೇಗೆ ತಿಳಿಯುತ್ತೆ ಹೇಳು? ಒಂದ್ ಸ್ವಲ್ಪ ಅಡ್ಜಸ್ಟ ಮಾಡ್ಕೋಬೇಕಪ್ಪಾ. ಕೆಳಗೆ ಕಾಲಿಡಲಿಕ್ಕೆ ಜಾಗವಿಲ್ಲ, ಮೇಲೆ ಕೈ ಹಿಡಿಲಿಕ್ಕೆ ಜಾಗವಿಲ್ಲ. ನಿಂತೋರ ಪಾಡು, ಕಾಲು ನೀಡಿ ಕುಳಿತವರಿಗೆ ತಿಳಿಯೋದಾದರೂ ಹೇಗೆ ಹೇಳು".
ಅಲಮೇಲಮ್ಮನ ಬಾಯಿ ಬಾಯಿಯೇ ಅದು, ಬೊಂಬಾಯಿ, ದಿಲ್ಲಿ, ಕಲ್ಕತ್ತಾ ಎಂದೆಲ್ಲ
ತಿಳಿದುಬಲ್ಲ ರಾಯರು ಸಣ್ಣಗೆ ಉಲಿದರು, "ಲೇ ಅಲಮೇಲು ಇಲ್ಲಿ ಬಾರೇ, ನನ್ನ ಸೀಟಿನಲ್ಲಿ ಕೂತ್ಕೋ ಬಾ, ನಾನು ಎದ್ದು ನಿಲ್ತೀನಿ" ... ರಾಯರು ಪಾಪ ! ಎಂದು ತನ್ನ ಸೀಟಿನಲ್ಲಿ ಗಿರ್ಧ ಸೀಟು ಬಿಟ್ಟುಕೊಟ್ಟ ಪಾಪದ ಪ್ರಾಣಿ ಅಕ್ಷರಶ: ಅಂಜಿಬಿಟ್ಟ. ಇವರ ಪ್ರೀತಿಯ ಅಲಮೇಲಮ್ಮನೇನಾದರೂ ತನ್ನ ಸೀಟಿನ ಹತ್ತಿರ ಬಂದರೆ ಮುಗಿದೇ ಹೋಯ್ತು, ಆಮೇಲೆ ಒಂಟೆಗೆ ಜಾಗ ಕೊಟ್ಟು ತನ್ನ ಟೆಂಟನ್ನೇ ಖಾಲಿಮಾಡಿ ಬಿಟ್ಟೂ ಹೋದವನ ಗತಿಯೇ ತನಗೂ ಆದೀತು. "ರಾಯರೇ ನೀವು ಕೂಡೋದಾದ್ರೆ ಕೂಡ್ರೀ, ಇಲ್ಲದಿದ್ರೆ ಏಳ್ರಿ" ಎಂದೇಬಿಟ್ಟ. ರಾಯರೂ ಸುಮ್ಮನಾಗಿ ಬಿಡಬೇಕೇ! ಅಲಮೇಲಮ್ಮನ ಕಣ್ಣುಗಳು ರಾಯರೊಂದಿಗೆ ಕೋಳಿಕಾಳಗ ಮಾಡಿ, ಹುಬ್ಬುಗಳು ಏರೇರಿ ಇಳಿದು ಮೈಯೆಲ್ಲ ಕಂಪಿಸಿದಾಗಲೇ, ರಾಯರು ಛಳಿಯೇರಿದಂತೆ ನಡುನಡುಗಿ ಹೋದರು. ಇನ್ನೇನು ಕಾದಿದೆಯೋ ವೆಂಕಟಾರಮಣಾ, ಸಂಕಟಾಹರಣಾ, ಧಾರವಾಡದಲ್ಲಿ ಕಾಯ್ದಿಟ್ಟು ಕಾಪಾಡಿಕೊಂಡು ಬಂದ ಮಾನ ಬೆಳಗಾವಿಯ ಬಸ್ಟ್ಯಾಂಡಿನಲ್ಲಿ ಬಿಳಿಬಿಳಿ ಬೆಳಕಿನಲ್ಲೇ ದಿವಾಳಿಯಾಗಿ ಹೋದರೇನು ಗತಿ?ಭಗವಂತ, ದಯಾವಂತ ನೀನೇ ಗತಿ ಎಂದು ಹರಿನಾಮದಲ್ಲಿ ಹರಿದು ಹೋದರು. ಸೀಟು ಕೊಡದಿದ್ದವರನ್ನು, ಕೂತು ಕೊಚ್ಚುವವರನ್ನು, ಹಾಯಾಗಿ ಗೊರಕೆ ಹೊಡೆಯುವವರನ್ನು ಕಂಡು ಹೊಟ್ಟೆಯುರಿಸಿಕೊಂಡ ಅಲಮೇಲಮ್ಮ ನಿಂತ ಕಾಲಮೇಲೇ ಉದ್ದುದ್ದ ಆಶುಭಾಷಣಗಳನ್ನು ಬಿಗಿದು ತಾವು ಪ್ರೊಫೆಸ್ಸರ್ ಆಗಿದ್ದನ್ನು ಸಾರ್ಥಕಪಡಿಸಿಕೊಂಡೇ ಬಿಟ್ಟರು.ಬೆಳಗಾವಿಯನ್ನೂ ಮುಟ್ಟಿದರು.
ಅಂಕ ೨
ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಹಾಜರ್ ಈ ಹತ್ತಂಕಿ ದಂಪತಿಗಳು. ಅರೆರೆ! ಬೆಳಗಾವಿ- ಧಾರವಾಡ ಬಸ್ಸಲ್ಲಿ ಒಂದೆರೆಡು ಖಾಲಿ ಸೀಟುಗಳೂ ಇದ್ದವು! ರಾಯರು ವಸ್ತ್ರ ಹಾಕಿ ಸೀಟು ಹಿಡಿದು ಹೆಂಡತಿಯನ್ನು ಕರೆದು ತಮ್ಮ ಪಕ್ಕಕ್ಕೆ ಕೂರಿಸಿಕೊಂಡೇ ಬಿಟ್ಟರು. ಧೈರ್ಯವೆಂದರೆ ಧೈರ್ಯ, ನಮ್ಮ ರಾಯರ ಧೈರ್ಯ! ಅಲಮೇಲಮ್ಮ ಒಮ್ಮೆ ಎದ್ದು ಮತ್ತೆ ಸರಿಯಾಗಿ ಕೈಕಾಲು ಚಾಚಿದರು. ರಾಯರು ಒಂದಿಷ್ಟು ಮುದುರಿದರು. ಇವರು ಇನ್ನಿಷ್ಟು ಒತ್ತಿದರು. ಅವರು ಮತ್ತಷ್ಟು ಸರಿದರು. 'ಒತ್ತಿದರೆ ಸರಿತಾರೆ, ಸರಿದರೆ ಒತ್ತುತಾರೆ' ಎಂದು ರಾಯರಿಗೂ ಗೊತ್ತು. ಆದರೆ ಒತ್ತಲೂ ತಾಕತ್ತು ಬೇಕಲ್ಲ! ರಾಯರಿಗೆ ಮದುವೆಯಾದಾಗಿನಿಂದಲೂ ಸರಿದೇ ಗೊತ್ತು.
ಜನ ಮತ್ತೂ ಬಂದರು, ಇನ್ನೂ ನುಗ್ಗಿದರು. ಅಲಮೇಲಮ್ಮನಿಗೆ ಸಿಟ್ಟು ಬಂತು ಕಂಡಕ್ಟರ್ ಮೇಲೆ. ಇನ್ನೂ ಎಷ್ಟು ತುಂಬುವುದು, ಕುರಿ ತುಂಬಿದ ಹಾಗೆ. ಗಾಡಿ ಮೊದಲೇ ತುಂಬಿ ತುಳುಕುತ್ತಿದೆ ಬಸುರಿ ಹೆಂಗಸಿನ ಹಾಗೆ. ದಾರಿಯಲ್ಲೇ ಹೆರಿಗೆಯಾಗಿ ಜನ ಹೊರಗೆ ಬಿದ್ದು ಬಿಟ್ಟರೆ! "ನಡಿಯಯ್ಯಾ ಎಷ್ಟು ತುಂಬುವುದು ಕುರಿಗಳ ಹಾಗೆ" ಎಂದೇ ಬಿಟ್ಟರು. ಜನ ಕೂಗಿದರು 'ಹೋs' ಕಂಡಕ್ಟರ್ ಕಣ್ಣ ಕಣ್ಣ ಬಿಟ್ಟ. ಮತ್ತೂ ಜನ ತುಂಬಿದರು. ಬಸುರಿ ಹೆಂಗಸು ಬಳುಕುತ್ತಾ ಕುಲುಕುತ್ತಾ ಹೊರಳಿ ಹೊರಟಳು. ರಸ್ತೆಯಲ್ಲಿ ಪುಟ್ಟ ಪುಟ್ಟ ಹೊಂಡಗಳು. ಅದರಲ್ಲಿ ಈಜುವ ಮೀನು ಮರಿಗಳು! ಮತ್ತೊಮ್ಮೆ ಪುಟ್ಟ ಪರ್ವತಗಳು, ಅವುಗಳ ಮೇಲೆಲ್ಲ ಬೆಳೆದ ಎಲೆಬಳ್ಳಿಗಳು. ಏರಿ ಇಳಿದು, ಓಡಿ ಜಿಗಿದು ನರಳಿದಳು ಆಕೆ. ಎಮ್ಮೆಯೊಂದು ಅಡ್ಡ ಬರಬೇಕೇ ಈ ಬಸ್ಸಿಗೇ? 'ಗಕ್' ಎಂದು ನಿಂತಿತು. ಪಕ್ಕದಲ್ಲಿ ನಿಂತಿದ್ದವ ಮೈಮೇಲೇ ಬಿದ್ದ. ಅಲಮೇಲಮ್ಮನ ಮೃದು ಮೈಗೆ ಮಹಾಪೆಟ್ಟಾಯಿತು. "ಓ ಕುಳಿತವರೂ ಅಂದ್ರೆ ಅದೇನು ಹೊಟ್ಟೆಯುರಿಯೋ ಏನೋ ಬಿದ್ದು ಬಿಡ್ತಾರೆ ಮೈಮೇಲೆ, ರಾಮರಾಮಾs ಕಣ್ಣು ಕಾಣೋದಿಲ್ವೇನ್ರೀ ಸರಿಯಾಗಿ ನಿಲ್ರೀ" " ಹೋ ಏನಪ್ಪಾ ನಮ್ಮ ಕಷ್ಟ ನಮಗೇ ಗೊತ್ತು, ಯಾಕಾದ್ರೂ ತುಂಬ್ತಾರೋ ಈ ಪಾಟಿ ಜನಾನs ಇನ್ನೊಂದು ಬಸ್ಸ ಇರೊಲ್ವೇ, ಇದೊಂದೇ ಬಸ್ಸು ಕೆಟ್ಟು ಹೋಯ್ತೇ?" ಎಂದು ಕೂಗಿದರು. "ಅಲಮೇಲು ಸುಮ್ಮನಿರೇ, ಸೀಟು ಸಿಕ್ಕಿದೆ , ಹಾಯಾಗಿ ನಿದ್ದೆ ಮಾಡೇ" ರಾಯರು ಆಲವತ್ತುಕೊಂಡರು. ಪ್ರೊಫೆಸ್ಸರ್ ಅಲಮೇಲಮ್ಮ ಕೇಳಿಯಾರೇ? ಹೇಳಿಯೇ ಅಭ್ಯಾಸ ಅವರಿಗೆ.
"ಸಾಕು ಸುಮ್ಮನಿರಿ ಕಂಡಿದ್ದಿನಿ, ಆಕಡೆ ಕಿಟಕಿ ಪಕ್ಕಕ್ಕೆ ಕೂತು ಆರಾಮವಾಗಿ ಎನ್ ಬೇಕಾದ್ರೂ ಮಾತಾಡ್ತೀರಿ, ಈ ಕಡೆ ಕುಳಿತು ನೋಡ್ರಿ, ಅದೇನು ಕಾಲಮೇಲೆ ಕಾಲಿಡ್ತಾರೆ, ಮೈಮೇಲೆ ಬೀಳೋ ಥರಾನೇ ನಿಲ್ತಾರೆ, ನಿಮಿಷಕ್ಕೊಂದ್ಸಲ ಕೈತಪ್ಪಿ ಮೈಮೇಲೆ ಬಿತ್ತು ಅಂತ ನಾಟಕ ಆಡ್ತಾರೆ. ಅಷ್ಟು ತ್ರಾಸದ್ರೆ ಇನ್ನೊಂದು ಬಸ್ಸಿಗೆ ಬರ್ಬೇಕಪ್ಪಾ ಈ ಜನಾ, ನಿಂತುಕೊಂಡು ತಮಗೂ ಕಷ್ಟ, ಕೂತವರಿಗೂ ಕಷ್ಟ" ಹಿಂಗೇ ನಡೆದಿತ್ತು ಅಮ್ಮನವರ ಲೆಕ್ಚರ್!
ಮಾರುತಿರಾಯನ ಸ್ಥಾನ ಮಹಾತ್ಮೆಯ ನೆನಪು ಬಂತು ಪಾಪದ ಪೀಚಲು ರಾಯರಿಗೆ. ರಾಮನ (ಅಥವಾ ರಾಯರ) ಗುಡಿ ಮುಂದೆ ಆತ ಕೈ ಮುಗಿದುಕೊಂಡು ನಿಂತ ವಿನೀತ ರಾಮಭಕ್ತ ಹನುಮಾನ! ತನ್ನದೇ ದೇವಸ್ಥಾನದಲ್ಲಿ ಆತ ಕೈಯೆತ್ತಿ ಮುಖ ತಿರುವಿ ನಿಂತ ಜಂಭದ ಮಾರುತಿ. ಎಲ್ಲಾ ಸ್ಥಾನ (ಪಲ್ಲಟದ) ಮಹಿಮೆ ದೇವಾ ಮಾರುತಿರಾಯಾ ಬಲಭೀಮಾ ಎಂದು ರಾಯರು ಕೈಯೆತ್ತಿ ಮುಗಿದರು. ಅಲಮೇಲಮ್ಮ ಗೊರಕೆ ಹೊಡೆದರು.
(ಜನವರಿ, 2011 ರ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾದದ್ದು)

No comments:
Post a Comment