ಪ್ರಬಂಧ
ಭಾರತೀಯರ ಸಿನೆಮಾ ಸಂಗೀತದ ಪ್ರೇಮ
(ಡಿಸೆಂಬರ್ ತಿಂಗಳಿನ ತುಷಾರ ಮಾಸಪತ್ರಿಕೆಯಲ್ಲಿ "ಆಕಾಶವಾಣಿ, ಈಗ ಚಿತ್ರಗೀತೆಗಳ ಕಾರ್ಯಕ್ರಮ" ಎನ್ನುವ ತಲೆಬರಹದೊಂದಿಗೆ ಪ್ರಕಟವಾದ ಪ್ರಬಂಧ )
ಭಾರತೀಯರ ಸಿನೆಮಾ ಸಂಗೀತ ಪ್ರೇಮ ಅನನ್ಯವಾದದ್ದು. ಹಾಡಿಲ್ಲದ ಸಿನೆಮಾಗಳನ್ನೇ ನಾವು ಕಲ್ಪಿಸಲಾರೆವು. ಒಂದೂ ಹಾಡಿಲ್ಲದ ಇಂಗ್ಲಿಷ್ ಮತ್ತಿತರ ವಿದೇಶಿ ಚಿತ್ರಗಳಿರುತ್ತವೆ. ಅವುಗಳನ್ನು ನೋಡಿ ನಾವೂ "ಎಷ್ಟು ನ್ಯಾಚರಲ್ಲಾಗಿದೆ ಸಿನೆಮಾ! ಸುಮ್ಮಸುಮ್ಮನೇ ಹೀರೊ, ಹಿರೋಯಿನ್ನಗಳು ಹಾಡು ಹಾಡಿ ಮರ ಸುತ್ತೋ ಕೆಲಸ ಇಲ್ಲವೇ ಇಲ್ಲ" ಅಂತ ಹೊಗಳಿರುತ್ತೇವೆ.
ನಿಜ ಜೀವನದಲ್ಲಿ ಪ್ರತಿ ಸನ್ನಿವಾಶಕ್ಕೆ ಯಾರು ಹಾಡು ಹಾಡುತ್ತಾ ಕೂರುತ್ತಾರೆ ಅಥವಾ ಮರ ಸುತ್ತುತ್ತಾರೆ ಹೇಳಿ! ಅಳು ಬಂದರೆ ಅತ್ತು ಕಣ್ಣೀರಾಗುವ ಬದಲು ಒಂದು ದುಃಖಭರಿತ ಹಾಡನ್ನು ಹಾಡುತ್ತಾ ನೋಡುಗರ ಕಣ್ಣಲ್ಲಿ ಕರುಣೆ ಉಕ್ಕಿಸುವುದು ಸಾಧ್ಯವೇ? ಹಾಗೆ ಮಾಡಬೇಕೆಂದರೂ ಥಟ್ಟನೇ ಶಬ್ದಗಳು ಹೊಳೆದು, ಅದೊಂದು ಗೀತೆಯಾಗಿ, ಅದಕ್ಕೆ ನಾವೇ ಟ್ಯೂನ್ ಕೊಟ್ಟುಕೊಂಡು (ಹಿನ್ನೆಲೆ ಸಂಗೀತ ಇಲ್ಲ ಎಂದೇ ಇಟ್ಟುಕೊಳ್ಳಿ) ಹಾಡುವುದು ಎಷ್ಟೊಂದು ಕಷ್ಟ ಊಹಿಸಿಕೊಳ್ಳಿ. ಹಾಗಿದ್ದರೆ ಈ ಸಿನೆಮಾಗಳಲ್ಲಿ ಮಾತ್ರ ಅದು ಹೇಗೆ ನಾಯಕ, ನಾಯಕಿಯರು ಒಮ್ಮೊಮ್ಮೆ ಸಪೋರ್ಟಿಂಗ್ ನಟ, ನಟಿಯರು ಕೂಡ, ಪ್ರತೀ ಸನ್ನಿವೇಶಕ್ಕೆ ಸರಿಯಾಗಿ, ತಮ್ಮ ಮಾನಸಿಕ ಸ್ಥಿತಿಗೆ ಸರಿಯಾಗಿ, ರಾಗ-ತಾಳ ಸಮೇತÀವಾಗಿ ಸುಂದರವಾದ ಹಾಡುಗಳನ್ನು ಹಾಡುತ್ತಾರೆ! ಅದೆಲ್ಲಾ ಬೋಗಸ್ ಅಂತ ನಾವು ಅನ್ನಬಹುದು.
ಚಿಕ್ಕ ಮಕ್ಕಳಿದ್ದಾಗ ನಾವೊಂದಿಷ್ಟು ಹಾಡುಗಳನ್ನು ಕಲಿತು ಅಂದಿರುತ್ತೇವೆ. ಏಕೆಂದರೆ ನಮ್ಮ ಅಮ್ಮಂದಿರು ಮತ್ತು ಶಾಲೆಯಲ್ಲಿ ಟೀಚರುಗಳು ಶ್ರಮಪಟ್ಟು ಅಭಿನಯ ಸಹಿತವಾಗಿ ಹಾಡಲು ಕಲಿಸಿಕೊಟ್ಟಿರುತ್ತಾರೆ. ನನ್ನ ಹಿರಿಯ ಮಗ ಟಿಪಿಕಲ್ ಮಕ್ಕಳ ಹಾಡುಗಳನ್ನು ತನ್ನ ಗೆಳೆಯನೊಡನೆ ಕೂಡಿಕೊಂಡು ಹೇಳುತ್ತಿದ್ದ. 'ಗಣಪ್ಪ ಬಂದಾ, ಹೊಟ್ಟಿ ಮ್ಯಾಲೆ ಗಂಧಾ', 'ಝಣ ಝಣಾ ಝಣಾ ಜೇಬು ತುಂಬ ಹಣಾ', 'ಕಪ್ಪೆ ಕರಕರ, ತುಪ್ಪಾ ಜಲಿಜಲಿ', 'ಬಸ್ ಬಂತು ಬಸ್ಸು, ಗೋರ್ಮೆಂಟ ಬಸ್ಸು' ಇವೆಲ್ಲಾ ಪದ್ಯಗಳನ್ನು ಮೈಕೈ ತಿರುಗಿಸುತ್ತ ಅಭಿನಯಿಸಿ ರಾಗವಾಗಿ ಹೇಳುತ್ತಿದ್ದ. ನಾವೂ ಮೇಲಿಂದ ಮೇಲೆ ಅವೇ ಅವೇ ಪದ್ಯಗಳನ್ನು ಮಕ್ಕಳ ಬಾಯಿಂದ ಕೇಳಿ ಸಂತೋಷ ಪಡುತ್ತಿದ್ದೆವು. ಆದರೆ ಮಕ್ಕಳು ದೊಡ್ಡವರಾದಂತೆ ಹಾಡು ಹಾಡುವುದನ್ನು ನಿಲ್ಲಿಸಿಬಿಡುತ್ತಾರೆ. ತೀರಾ ಸಿನೆಮಾ ಹಾಡುಗಳ ಹುಚ್ಚು ಹಿಡಿಸಿಕೊಂಡವರು ಬಾಥರೂಮ ಸಿಂಗರಗಳಾಗುತ್ತಾರೆ. ಹಾಡಿನ ನಾದವಿರುವ ಹೆಣ್ಣುಮಕ್ಕಳು ಅಡುಗೆ ಮಾಡುತ್ತ ಯಾರು ಇಲ್ಲದ ಸಮಯದಲ್ಲಿ ಒಗ್ಗರಣೆಯ ಸದ್ದಿನೊಂದಿಗೆ ತಮ್ಮ ದನಿಯನ್ನು ಬೆರೆಸಿ ಅಡುಗೆಯ ರುಚಿ ಹೆಚ್ಚಿಸುತ್ತಾರೆ. ಆದರೆ ಪ್ರತೀ ಸನ್ನಿವೇಶಕ್ಕೆ ಮತ್ತು ಭಾವನೆಗೆ ತಕ್ಕಂತೆ ಯಾರೂ ಹಾಡುತ್ತಾ ಕೂರಲು ಆಗುವುದಿಲ್ಲ.
ಆದರೂ ಸಿನೆಮಾಗಳಲ್ಲಿ ನಟ, ನಟಿಯರು ಹಾಗೆ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಹೇಳಿದರೆ ನಮಗ್ಯಾರಿಗೂ ವಿಚಿತ್ರ ಅನಿಸುವುದೇ ಇಲ್ಲ. ಬದಲಾಗಿ ಖುಶಿಯೇ ಆಗುತ್ತದೆ. ಕೆಲವು ಚಿತ್ರಗಳಂತೂ ಕತೆಗಿಂತ ಹಾಡುಗಳಿಗಾಗಿಯೇ ಹೆಚ್ಚು ಫೇಮಸ್ ಆಗುತ್ತವೆ. ಹಾಡುಗಳಿಗಾಗಿಯೇ ಚಲನಚಿತ್ರ ತಯಾರಿಸಿದ ಅಪರೂಪದ ಉದಾಹರಣೆಗಳೂ ನಮ್ಮಲ್ಲಿ ಇವೆ. 'ಮೈಸೂರು ಮಲ್ಲಿಗೆ' ಅಂಥ ಒಂದು ವಿಶೇಷ ಚಿತ್ರ. ಕೆ.ಎಸ್.ಎನ್. ಅವರ ಭಾವಗೀತೆಗಳನ್ನು ದೃಶ್ಯಕಾವ್ಯವಾಗಿಸಿ ತೆರೆಗಿಳಿಸಿದ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಹಿಂದಿಯಲ್ಲಿ ಕುಮಾರ ಸಾನು ಮತ್ತು ಅನುರಾಧಾ ಪೋಡವಾಲ ಅವರ ಅಲ್ಬಮ ಹಾಡುಗಳನ್ನೇ ಮತ್ತಷ್ಟು ಜನಪ್ರೀಯವಾಗಿಸಲು ಮಾಡಿದ 'ಆಶಿಕಿ' ಚಿತ್ರ ತೊಂಬತ್ತರ ದಶಕದಲ್ಲಿ ಬಹಳ ಫೇಮಸ್ ಆಯಿತು. ಸುಮಾರು ಇಪ್ಪತ್ತೇಳು ವರ್ಷಗಳಷ್ಟು ಹಳೆಯದಾದ ಆ ಚಿತ್ರದ ಹಾಡುಗಳನ್ನು ಇನ್ನೂ ನಮ್ಮ ವಯಸ್ಸಿನ ಅನೇಕರು ಗುಣುಗುಣಿಸುತ್ತಾರೆ, ಅನೇಕ ಹಾಟೆಲ್ಲುಗಳಲ್ಲಿ ಇವುಗಳ ರೆಕಾರ್ಡ ಹಾಕಿರುತ್ತಾರೆ. ಇತ್ತಿತ್ತಲಾಗಿ ಚಿತ್ರಕ್ಕಿಂತ ಮೊದಲೇ ಹಾಡುಗಳ ಆಡಿಯೋ ರಿಲೀಸ್ ಸಮಾರಂಭಗಳನ್ನು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯ ಶುರುವಾಗಿದೆ. ಹಾಗಾಗಿ ಹಾಡುಗಳು ಸಿನೆಮಾ ರಿಲೀಸ್ ಆಗುವುದಕ್ಕಿಂತ ಮೊದಲೇ ರಸಿಕರಿಗೆ ತಿಳಿದುಬಿಟ್ಟಿರುತ್ತವೆ. ಅವು ಚಿತ್ರದ ಮೌಲ್ಯವನ್ನು ಇನ್ನೂ ಹೆಚ್ಚಿಸುತ್ತವೆ. ಸಿನೆಮಾಗಳ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಹಿಂದೆ ಕೂಡ ರೇಡಿಯೋಗಳಿಂದಾಗಿ ಹಾಡುಗಳು ಎಲ್ಲರ ಮನೆಮಾತಾಗಿರುತ್ತಿದ್ದವು.
ನಾವು ಭಾರತೀಯರು ಹಾಡುಗಳನ್ನು ಬಹುವಾಗಿ ಮೆಚ್ಚುತ್ತೇವೆ ಹಾಗೂ ನೆಚ್ಚುತ್ತೇವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿರುವ ಹಾಡುಗಳಿಗೆ ನಮ್ಮ ನಿಜ ಜೀವನದ ಯಾವುದೇ ಸನ್ನಿವೇಶಕ್ಕೂ ಸೆಟ್ಟಾಗುವ ವಿಶೇಷ ಗುಣವಿದೆ. ಹಾಗಾಗಿ ನಾವೇ ಬರೆದು, ಸಂಯೋಜಿಸಿ ಹಾಡುವ ತಾಪತ್ರಯವೇ ಇಲ್ಲ. ನನ್ನ ಅಕ್ಕನ ಮಗಳು ಪುಟ್ಟ ಮಗುವಾಗಿದ್ದಾಗ ರಾತ್ರಿ ಎಷ್ಟೊತ್ತಾದರೂ ಮಲಗುತ್ತಿರಲಿಲ್ಲ. ಮೇಲೆ ಜೋರು ಧ್ವನಿಯಲ್ಲಿ ಅಳುವುದು ಬೇರೆ. ಒಂದು ದಿನ ಬೇಸರಗೊಂಡು ನನ್ನಕ್ಕ ಮತ್ತು ಅಪ್ಪ ತೊಟ್ಟಲಿನ ಎರೆಡೂ ಬದಿಗೆ ನಿಂತು ಹಾಡುತ್ತಾ ಅವಳನ್ನು ತೂಗಲು ಶುರು ಮಾಡಿದರು. ಹಾಡುವುದು ನಿಲ್ಲಿಸಿದ ತಕ್ಷಣ ಅವಳು ಅಳಲು ಶುರುಮಾಡುತ್ತಿದ್ದಳು. ಹಾಡು ಹಾಡುವ ತನಕ ಸುಮ್ಮನೇ ಕೇಳುತ್ತಿದ್ದಳು. ಹೀಗೆ ಅನೇಕ ಸಿನೆಮಾ ಹಾಡುಗಳು, ದೇವರ ನಾಮಗಳು ಎಲ್ಲ ಹೇಳಿ ಅವರು ಸುಸ್ತಾದರೂ ಅವಳು ಅಳುವುದನ್ನೂ ನಿಲ್ಲಿಸಲಿಲ್ಲ, ಮಲಗಲೂ ಇಲ್ಲ. ಕೊನೆಗೆ ಬೇಸರಗೊಂಡು ಲಾಲಿ ಹಾಡು ಹೇಳುವುದೇ ಸರಿ ಎಂದುಕೊಂಡು 'ಲಾಲಿ ಲಾಲಿ, ಲಾಲಿ ಲಾಲಿ, ಕತ್ತೆಯ ಮರಿಚಂದ' ಎನ್ನುವ ಸಿನೆಮಾ ಹಾಡನ್ನು ಹೇಳಿದ ಮೇಲೆಯೇ ಅವಳು ನಿದ್ದೆಗೆ ಜಾರಿದ್ದು. ನಾವು ಚಿಕ್ಕವರಿದ್ದಾಗ ಅಮ್ಮ-ಅಪ್ಪ ಏನಾದರೂ ಜಗಳವಾಗಿ ಮಾತು ಬಿಟ್ಟಾಗ, ಶುಭಮಂಗಳ ಚಿತ್ರದ 'ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನಗತದ ಭೂತಾಯಿ ಮನಸು' ಹಾಡು ಹೇಳಿ ಇಬ್ಬರನ್ನೂ ನಗಿಸಿಬಿಡುತ್ತಿದ್ದೆವು.
ನಾಗರಹಾವು ಚಿತ್ರ ನೋಡಿದ ನನ್ನಕ್ಕನಿಗೆ ಅದರಲ್ಲಿನ ಹಾಡುಗಳ ಹುಚ್ಚು ಸರಿಯಾಗಿ ಹಿಡಿದಿತ್ತು. ರೇಡಿಯೋದಲ್ಲಿ 'ಕನ್ನಡ ನಾಡಿನ ವೀರ ರಮಣಿಯಾ ಗಂಡುಭೂಮಿಯಾ ವೀರ ನಾರಿಯಾ ಚರಿತೆಯ ನಾನು ಹಾಡುವೆ' ಹಾಡು ಬಂದ ತಕ್ಷಣ ಅವಳು ಆವೇಶಕ್ಕೊಳಗಾಗಿ ಫಡಫಡನೇ ಕಪಾಟು ಬಾಗಿಲು ತೆಗೆದು ಅದರಲ್ಲಿನ ಅಮ್ಮನ ಒಂದು ಸೀರೆಯನ್ನು ಎಳೆದುಕೊಂಡು ಸರಸರನೇ ಮೈಗೆ ಸುತ್ತಿಕೊಂಡು ವೀರಗಚ್ಚೆ ಹಾಕಿಕೊಂಡು ಒನಕೆಯನ್ನು ಹಿಡಿದು ನಿಂತುಬಿಡುತ್ತಿದ್ದಳು. ಒಂದು ಹಾಡು ಕೇಳುವುದರಲ್ಲಿ ಇಷ್ಟೆಲ್ಲ ಮಾಡುವುದು ಸಾಧ್ಯವೇ ಅನ್ನುವ ಪ್ರ್ಯಾಕ್ಟಿಕಲ್ ಪ್ರಶ್ನೆ ಒಗೆಯಬೇಡಿ. ಅಷ್ಟು ದೊಡ್ಡ ಹಾಡು ಮುಗಿಯುವುದರೊಳಗೆ ಇಷ್ಟೆಲ್ಲ ಮಾಡಲು ಸಾಧ್ಯವೇ ಹೌದು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. 'ಕೈಗೆ ಸಿಕ್ಕಿದಾ ಒನಕೆ ಹಿಡಿದಳು' ಎಂದು ಪಿ.ಬಿ.ಶ್ರೀನಿವಾಸ ಹಾಡುವುದರಲ್ಲಿ ಅಡುಗೆಮನೆಯ ಮೂಲೆಯಲ್ಲಿನ ಒನಕೆ ಅವಳ ಕೈಗೆ ಬಂದಿರುತ್ತಿತ್ತು. 'ವೀರಗಚ್ಚೆಯಾ ಹಾಕಿ ನಿಂತಳು' ಎನ್ನುವಷ್ಟರಲ್ಲಿ ಉಟ್ಟ ಸೀರೆಯ ನೆರಿಗೆಗಳನ್ನು ಹಿಡಿದು ಹಿಂದೆ ತೆಗೆದುಕೊಂಡು ವೀರಗಚ್ಚೆ ಹಾಕಿಕೊಂಡು ಬಿಡುತ್ತಿದ್ದಳು. ಮತ್ತಾಮೇಲೆ ಅವಳ ಮೈಮೇಲೆ ನಮ್ಮ ನೆಚ್ಚಿನ ನಟಿ ಜಯಂತಿ ಬರುತ್ತಿದ್ದಳೋ ಅಥವಾ ಸ್ವತಃ ಒನಕೆ ಓಬವ್ವನೇ ಆವಾಹನೆಯಾಗುತ್ತದ್ದಳೋ ನಾವು ತಲೆ ಕೆಡಿಸಿಕೊಂಡಿರಲಿಲ್ಲ. ಅಂತೂ ವಿಷ್ಣುವರ್ಧನ್ ಕಥೆಯ ಕೊನೆಯ ಘಟ್ಟಕ್ಕೆ ತಲುಪಿ 'ಅಮರಳಾದಳು ಓಬವ್ವಾ ದುರ್ಗವು ಮರೆಯದ ಓಬವ್ವಾ' ಎಂದು ಹೇಳಿ ಶಾಲೆಯ ಮಕ್ಕಳ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಸುವ ಹೊತ್ತಿಗೆ ಇಲ್ಲಿವಳು ಸಕಲ ವೀರಾವೇಶದೊಂದಿಗೆ ಒನಕೆಯಿಂದ ನಮ್ಮ ಮನೆಯ ಶಗಣಿಯಿಂದ ಸಾರಿಸಿದ ಮಣ್ಣಿನ ನೆಲವನ್ನು ಕುಟ್ಟಿ ಕುಟ್ಟಿ ಒಂದಿಷ್ಟು ಮಣ್ಣು ಎದ್ದು ಒಂದೆರೆಡು ಸಣ್ಣಪುಟ್ಟ ತೆಗ್ಗುಗಳಾಗಿ ಮನೆಯ ಮಾಲಿಕರು ಏನು ನಡೆದಿದೆ ಇವರ ಮನೆಯಲ್ಲಿ ಎಂದು ಬಯ್ಯಲು ಮೇಲೆ ಓಡೋಡಿ ಬಂದು ಅಭಿನವ ಓಬವ್ವನನ್ನು ನೋಡುತ್ತ ದಂಗಾಗಿ ನಿಂತುಬಿಡುತ್ತಿದ್ದರು. ಅವರೇನಾದರೂ ಆಗ ಮಾತನಾಡಿದರೆ ಹೈದರಾಲಿಯ ಸೈನಿಕರಿಗಾದ ಗತಿಯೇ ತಮಗೂ ಆಗಬಹುದೆಂಬ ಹೆದರಿಕೆಯಿಂದ ಮಾತನಾಡದೇ ಶಬ್ದ ಮಾಡದಂತೆ ಮೆಟ್ಟಿಲು ಇಳಿದು ಹೋಗಿ ಬಿಡುತ್ತಿದ್ದರು. ಇವಳ ಹಾಡಿನ ಪ್ರೇಮ 'ನಾಗರಹಾವಿ'ಗಷ್ಟೇ ಭುಸುಗುಟ್ಟಿದ್ದರೆ ನನಗೇನೂ ಆತಂಕವಿರಲಿಲ್ಲ. ಆದರೆ ಅದು 'ದೇವರ ಕಣ್ಣು' ವರೆಗೂ ಹರಿದು ಬಂದು ನನಗೆ ತ್ರಾಸು ಕೊಡಲಾರಂಭಿಸಿತು. 'ಓ ಇನಿಯಾ ನೀ ಎಲ್ಲಿರುವೆ, ನಿನಗಾಗಿ ನಾ ಕಾದಿರುವೆ' ಎಂದು ದೆವ್ವದಂತೆ ಆ ಚಿತ್ರದಲ್ಲಿ ನಟಿಯೊಬ್ಬಳು ಹಾಡುತ್ತ ಕಾಡು ಮೇಡು ಅಲೆಯಲಾರಂಭಿಸಿದಳೆಂದರೆ ಇವಳು ಭೂತವೊಂದನ್ನು ತನ್ನ ಮೇಲೆ ಬಿಟ್ಟುಕೊಳ್ಳುತ್ತಿದ್ದಳು. ಆ ಸಮಯಕ್ಕೆ ಸರಿಯಾಗಿ ಅಮ್ಮನೇನಾದರೂ ಹತ್ತಿರದಲ್ಲೇ ಇದ್ದ ಅಜ್ಜಿಯ ಮನೆಗೆ ಹೋಗಿದ್ದಳೆಂದರೆ ಭೂತಕ್ಕೆ ಇನ್ನೂ ಶಕ್ತಿ ಹೆಚ್ಚಾಗುತ್ತಿತ್ತು. ಬಿಳಿ ಸೀರೆ ಉಟ್ಟು ತಲೆಕೂದಲನ್ನೆಲ್ಲ ಬಿಚ್ಚಿ ಹರಡಿಕೊಂಡು ನನ್ನನ್ನು ಹೆದರಿಸುತ್ತಿದ್ದಳು. ನಾನೋ ಹೆದರಿ ಕಂಗಾಲಾಗಿ ಸತ್ತೆನೋ ಕೆಟ್ಟೆನೋ ಅನ್ನುತ್ತ ಅಜ್ಜಿಯ ಮನೆಗೆ ಓಡಿ ಹೋಗುತ್ತಿದ್ದೆ. ಹೀಗಾಗಿ ಮುಂದೆ ಎಷ್ಟೋ ವರುಷಗಳು ಈ 'ಓ ಇನಿಯಾ' ಹಾಡು ನನ್ನನ್ನು ಹೆದರಿಸಿದ್ದಿದೆ.
ಪ್ರೀತಿಯಲ್ಲಿ ಬಿದ್ದು ವಿಲಿವಿಲಿ ಒದ್ದಾಡುವ ಪ್ರೇಮಿಗಳಿಗಂತೂ ಹಾಡುಗಳೆಂದರೆ ತಮ್ಮ ಗುರಿಯನ್ನು ಮುಟ್ಟಿಸುವ ಸುವರ್ಣ ಸೇತುವೆಗಳಿದ್ದಂತೆ. ಆಗ ಅವರ ಸಹಾಯಕ್ಕೆ ಗಾಯನ ಪ್ರಪಂಚದ ದಿಗ್ಗಜರೆಲ್ಲರೂ ಓಡೋಡಿ ಬರುತ್ತಾರೆ. "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ" ಎಂದು ಎಸ್. ಜಾನಕಿ ಹಾಡಿ ಹುರಿದುಂಬಿಸಿದರೆ, "ಏ ಮೇರಾ ಪ್ರೇಮ ಪತ್ರ ಪಢಕರ ಕೆ ತುಮ ನಾರಾಜ ನಾ ಹೋನಾ" ಎನ್ನುತ್ತ ರಫಿ ಸಹಾಬ ಬರುತ್ತಾರೆ. "ಸಾಗರ ಕಿನಾರೆ ದಿಲ ಏ ಪುಕಾರೆ" ಎಂದು ಕಿಶೋರ ದಾ ಹೇಳುತ್ತಾನೆ. "ದಿಲ್ ಕಾ ಆಲಮ್ ಮೈ ಕ್ಯಾ ಬತಾವೂಂ ತುಝೆ" ಎಂದು ಕುಮಾರ ಸಾನು ಪ್ರಶ್ನಿಸುತ್ತಾನೆ. ಹೊಸ ಹುಡುಗರಿಗಾಗಿ "ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿದೆ" ಎಂದು ಸೋನು ನಿಗಮ ಹಾಡಿದರೆ, "ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ" ಎಂದು ಶ್ರೇಯಾ ಘೋಷಾಲ್ ಹೇಳುತ್ತಾಳೆ. ಇವರೆಲ್ಲ ಪ್ರೇಮಿಗಳ ದನಿಯಾಗಿ ಅವರ ಸಂದೇಶಗಳನ್ನು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸುವ ಪವಿತ್ರ ಕೈಂಕರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಇಂಥ ಪ್ರೇಮ-ರೋಗಗ್ರಸ್ತ ನಾಯಕ, ನಾಯಕಿಯರೊಡನೆ ಉಳಿದ ಹುಡುಗರು ಸಹಕಲಾವಿದರ ವೇಷದಲ್ಲಿ "ಕುಣಿದಾಡುವಾ ವಯಸಿದು, ನಲಿದಾಡುವ ದಿನವಿದು" ಎಂದು ಕೋರಸ್ ಹಾಡುತ್ತ ನರ್ತಿಸುತ್ತಿರುತ್ತಾರೆ.
ನಾವು ಅದೇ ತಾನೇ ಕಾಲೇಜು ಮೆಟ್ಟಿಲು ಹತ್ತಿದ ವೇಳೆ. ಶಾಲೆಯ ಬಿಗಿ ವಾತಾವರಣದಿಂದ ಒಮ್ಮಿಲೇ ಮುಕ್ತ ಹವೆಗೆ ಒಡ್ಡಿಕೊಂಡ ಅನುಭವ. ಪ್ರತೀ ಕ್ಲಾಸಿಗೆ ಆ ಲೆಕ್ಚರ್ ಹಾಲಿನಿಂದ ಈ ಹಾಲಿಗೆ, ಇಲ್ಲಿಂದ ಇನ್ನೊಂದು ಹಾಲಿಗೆ ತಿರುಗಾಡಬೇಕಿತ್ತು. ಫ್ರೀ ಪಿರಿಯಡ್ ಇದ್ದಾಗ ಖಾಲಿ ಕ್ಲಾಸೊಂದನ್ನು ಹುಡುಕಿಕೊಂಡು ಹೋಗಿ ಕುಳಿತುಕೊಳ್ಳುತ್ತಿದ್ದೆವು. ನಮಗಿಂತ ಸಾಕಷ್ಟು ಸಿನೀಯರ್ ಇದ್ದ ಹುಡುಗನೊಬ್ಬ ಇಂಥ ಬೆದರುಗಣ್ಣಿನ ಹೊಸಹುಡುಗಿಯರನ್ನೇ ಟಾರ್ಗೆಟ್ ಮಾಡಿಕೊಂಡು ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ. ಮತ್ತೆ ಹಾಡಲು ಶುರುವಿಟ್ಟುಕೊಳ್ಳುತ್ತಿದ್ದ. ಅದೇ ಅವನು ಹೊಸ ಹುಡುಗಿಯರಿಗೆ ಕೊಡುತ್ತಿದ್ದ ರ್ಯಾಗಿಂಗ್ ಪನಿಶಮೆಂಟ್ ಆಗಿತ್ತು. ಒಂದು ದಿನ ಅವನು ಹಿಂದಿಯಲ್ಲಿ ಡೈಲಾಗ್ ಹೊಡೆಯುತ್ತ ಆಗ ತಾನೇ ಬಂದಿದ್ದ ಸಿನೆಮಾವೊಂದರ ಹಾಡು, "ಡಿಸ್ಕೊ 82, ಡಿಸ್ಕೊ 82, ತೂ ಎಕ ಡಿಸ್ಕೊ" ಎಂದು ಹಾಡಲಾರಂಭಿಸಿದ ಕೂಡಲೇ ನಾವು ಜಾಗ ಖಾಲಿ ಮಾಡಲಾರಂಭಿಸಿದೆವು. ಅವನಿಗೋ ತನ್ನ ಸಿರಿಕಂಠದಿಂದ ಹಾಡುಗಾರಿಕೆಯ ಪ್ರದರ್ಶನವಾಗಬೇಕಿತ್ತು. ಅದಕ್ಕೆ ನಮ್ಮಂಥ ಮುಗ್ಧ ಪ್ರೇಕ್ಷಕರ ಅವಶ್ಯಕತೆ ಇತ್ತು. ಹಾಗಾಗಿ ಮಧ್ಯದಲ್ಲೇ ಹಾಡು ನಿಲ್ಲಿಸಿ ನಾವು ರಸಭಂಗ ಮಾಡದೇ ಒಂದೆರೆಡು ಹಾಡು ಕೇಳಿಕೊಂಡು ಹೋಗುವ ಕೃಪೆ ತೋರಬೇಕಾಗಿ ನಾಟಕೀಯವಾಗಿ ಕೈ ಜೋಡಿಸಿ ವಿನಂತಿಸಿಕೊಂಡ. ಹಾಡಿನ ವಿಪರೀತ ಹುಚ್ಚಿದ್ದ ಗೆಳತಿಯೊಬ್ಬಳು ಕುಳಿತುಕೊಳ್ಳುವ ಇರಾದೆ ತೋರಿದರೂ ನಾವು ಹೊರಟೇಬಿಟ್ಟೆವು. "ರುಕಜಾ ಓ ಜಾನೆವಾಲಿ ರುಕಜಾ, ಮೈ ತೊ ರಾಹಿ ತೆರೆ ಮಂಝಿಲ ಕಾ" ಎಂದು ಅವನು ಕೂಗಿ ಹಾಡಿದರೂ ನಾವು ಕರುಣೆ ತೋರದಾದೆವು. ಅವನಿಗೆ ಭಾರೀ ನಿರಾಸೆಯಾಯ್ತು. ಆದರೆ ಅವನ ರಸಿಕತನ ಮತ್ತು ಸಮಯಸ್ಫೂರ್ತಿ ಅಂಥ ಹೊತ್ತಿನಲ್ಲೂ ಕೈಕೊಡಲಿಲ್ಲ. " ಓ ಜಾನೆವಾಲೆ ಹೋ ಸಕೆ ತೋ ಲೌಟಕೆ ಆನಾ" ಎಂದು ಮುಕೇಶನ ಕಂಠದಲ್ಲಿ ಅಳತೊಡಗಿದ. ನಾವು ನಗುನಗುತ್ತ ಕೇಳಿ ಹೊರಬಂದೆವು.
ನಾವು ಬಿ.ಕಾಂ. ಕೊನೆಯ ವರ್ಷದಲ್ಲಿದ್ದಾಗ ನಮ್ಮ ಕ್ಲಾಸಿನ ಒಬ್ಬ ಹುಡುಗನ ಕಾಕ ದೃಷ್ಟಿ ಅದು ಹೇಗೋ ಏನೋ ನಮ್ಮ ಗೆಳತಿಯೊಬ್ಬಳ ಮೇಲೆ ಬಿದ್ದುಬಿಟ್ಟಿತು. ಮತ್ತು ಅದೇ ನೆಪದಲ್ಲಿ ಅವನು ಕೋಗಿಲೆಯಂತೆ ಹಾಡಲಾರಂಭಿಸಿಬಿಟ್ಟ. ಮುಕೇಶನನ್ನು ವಶ ಮಾಡಿಕೊಂಡುಬಿಟ್ಟ. ಅಲ್ಲಿಯವರೆಗೂ ಅದೆಲ್ಲಿ ಎಮ್ಮೆ ಕಾಯುತ್ತಿದ್ದನೋ ಕೊನೆಯ ವರ್ಷದಲ್ಲಿ ಒಮ್ಮಿಂದೊಮ್ಮಿಲೇ ಅವಳನ್ನು ನೋಡಿ ಐಲುಪೈಲಾಗಿ ವರ್ತಿಸಲಾರಂಭಿಸಿದ. ರೊಮ್ಯಾಂಟಿಕ್ ಹಾಡುಗಳನ್ನು ಹಾಡುತ್ತ ಅವಳ ಹಿಂದೆ ಹಿಂದೆ ಹೋಗಿ ಮನೆಯ ವರೆಗೂ ಬಿಟ್ಟುಬರಲಾರಂಭಿಸಿದ. "ಕಭಿ ಕಭಿ ಮೆರೆ ದಿಲ್ ಮೆ ಖಯಾಲ ಆತಾ ಹೈ, ಕಿ ಜೈಸೆ ತುಝಕೊ ಬನಾಯಾ ಗಯಾ ಹೈ ಮೇರೆ ಲಿಯೆ" ಎಂದು ಕೂತಲ್ಲಿ ನಿಂತಲ್ಲಿ ಹಾಡಲಾರಂಭಿಸಿದ. ಕೊನೆಗೆ ಬೇಸತ್ತ ಹಿರೋಯಿನ್ನಳ ಅಣ್ಣಂದಿರು ನಾಲ್ಕು ಧರ್ಮದೇಟು ನೀಡಿದರು. ಪೆಟ್ಟು ತಿಂದರೂ ಪಟ್ಟು ಬಿಡದೇ ಥೇಟ್ ಸಿನೆಮಾ ಹೀರೊಗಳಂತೆ " ಪ್ಯಾರ ತೆರಾ ಪಾನೆ ಕೋ ಹಮನೆ ಅಪನಾ ಸಬ ಕುಛ ಖೋಯಾ" ಎಂದು ಅಲವತ್ತುಕೊಂಡ. ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕೊನೆಗೂ ಸಹಾಯ ಮಾಡಿದ್ದು ಪಾಪ ಮುಕೇಶನೇ. ದುರಂತ ನಾಯಕ "ಕೊಯಿ ಜಬ ತುಮ್ಹಾರಾ ಹೃದಯ ತೋಡ ದೇ ತಡಪತಾ ಹುವಾ ಜಬ ಕೊಯಿ ಛೋಡ ದೇ, ತಬ ತುಮ ಮೆರೆ ಪಾಸ ಆನಾ ಪ್ರಿಯೆ, ಮೆರಾ ದರ ಖುಲಾ ಹೈ ಖುಲಾ ಹೀ ರಹೆಗಾ ತುಮ್ಹಾರೆ ಲಿಯೆ" ಎಂದು ಕಣ್ಣೀರು ಹಾಕಿ ತನ್ನ ಪ್ರೇಮ ಪ್ರಕರಣಕ್ಕೆ ತಿಲಾಂಜಲಿ ನೀಡಿದ. ನೋಡಿ, ಹೇಗೆ ಇವರಿಗೆಲ್ಲ ತಮ್ಮ ಭಾವನೆಗಳನ್ನು ತೋಡಿಕೊಳ್ಳಲು, ತೋರಿಸಿಕೊಳ್ಳಲು ನಮ್ಮ ಶ್ರೇಷ್ಠ ಗಾಯಕರು, ಅವರ ಹಿನ್ನೆಲೆಯಲ್ಲಿ ಗೀತಕಾರರು, ಸಂಗೀತಕಾರರು ನೆರವಾದರು! ನಮ್ಮಲ್ಲಿ ಅದೆಷ್ಟು ಹಾಡುಗಳ ಅಮೂಲ್ಯ ಭಂಡಾರವೇ ಇದೆಯೆಂದರೆ ನಮ್ಮ ಪ್ರತೀ ಸಂದರ್ಭಕ್ಕೆ ತಕ್ಕಂತೆ ನೂರಾರು ಹಾಡುಗಳು ಒದಗಿಬರುತ್ತವೆ. ನೀವೇನೂ ಕಷ್ಟ ಪಡದೇ, ಇಷ್ಟಪಟ್ಟ ಹಾಡುಗಳನ್ನು ಶುದ್ಧ ಸ್ವರದಲ್ಲಿ ಹಾಡಿದರೆ ಸಾಕು, ನಿಮ್ಮ ಭಾವನೆಗಳು ಹೊಳೆಯಾಗಿ ಹರಿದು ಆ ದಂಡೆ ತಲುಪಿ ಅಲ್ಲಿನ ನೆಲವನ್ನು ತಂಪುಗೊಳಿಸುತ್ತವೆ. ಇಲ್ಲಿನ ಕುದಿಯ ಬಿಸಿ ಅಲ್ಲಿ ತಟ್ಟುತ್ತದೆ. ಅಲ್ಲಿನ ನಿಟ್ಟುಸಿರು ಇಲ್ಲಿನ ಬಾಯಲ್ಲಿ ಹೊರಬರುತ್ತದೆ.
ಪ್ರೇಮ ಉಂಟಾದರೆ ಸಹಸ್ರ ಸಹಸ್ರ ಗೀತೆಗಳು ಓಡೋಡಿ ಬರುತ್ತವೆ. ಯಾವುದು ಅನ್ನುತ್ತೀರಿ, ಯಾವುದು ಬಿಡುತ್ತೀರಿ. ಇವತ್ತು "ಪೆಹಲಾ ನಶಾ, ಪೆಹಲಿ ಖುಮಾ" ಹಾಡುತ್ತೇನೆ, "ಆಪಕೆ ನಜರೋ ನೆ ಸಮಝಾ ಪ್ಯಾರ ಕೆ ಕಾಬಿಲ್ ಮುಝೆ" ನಾಳೆಗಿರಲಿ ಎಂದು ನೀವೆ ಆರಿಸಿ ಆರಿಸಿ ಎತ್ತಿಟ್ಟುಕೊಳ್ಳಬೇಕು. ಪ್ರೇಮಕ್ಕೆ ಎರಡೂ ಕಡೆಗಳಿಂದ ಗ್ರೀನ ಸಿಗ್ನಲ್ ಸಿಕ್ಕು ಮರ ಸುತ್ತುವ ವ್ಯಾಯಾಮ ಶುರುವಾದ ಮೇಲೆ ಮತ್ತಷ್ಟು ಹಾಡುಗಳು. "ಗಗನವು ಎಲ್ಲೋ, ಭೂಮಿಯು ಎಲ್ಲೋ" ಅನಿಸಲಾರಂಭಿಸುತ್ತದೆ. ಇಡೀ ಜಗತ್ತು ಮರೆತು ಹೋಗಿ "ನೀನೆ ನನ್ನ ಮನಸಲಿ, ಬರಿ ನಿಂದೆ ನನ್ನ ಕನಸಲಿ" ಆಗುತ್ತದೆ. ಇನ್ನೂ ಮುಂದೆ ಹೋಗಿ "ಅನ್ನೊರೆಲ್ಲಾ ಅನ್ನಲಿ" ಎನ್ನುವ ಧಾಷ್ರ್ಟ್ಯ ಬೆಳೆಯುತ್ತದೆ. ನಿಮ್ಮ ಪ್ರೇಮಿ ಊರಲ್ಲಿಲ್ಲ ಎಂದುಕೊಳ್ಳಿ, ವಿರಹದ ಬೆಂಕಿ ನಿಮ್ಮನ್ನು ಸುಡುತ್ತದೆ, ಮತ್ತು "ವಿರಹಾ ನೂರು ನೂರು ತರಹಾ" ಎಂದು ಹಾಡುತ್ತ ಪಿ.ಸುಶಿಲಾ ಬರುತ್ತಾಳೆ. ಇಲ್ಲವೇ ನಿಮ್ಮ ಜಾಗದಲ್ಲಿ ನೀವು, ನಿಮ್ಮ ಪ್ರೇಮಿಯ ಸ್ಥಳದಲ್ಲಿ ಅವಳು ನಿಂತು ಮೊಹಮ್ಮದ ರಫಿ ಮತ್ತು ಲತಾ ಮಂಗೇಶ್ಕರಳಂತೆ "ವೊ ಜಬ ಯಾದ ಆಯೆ ಬಹುತ ಯಾದ ಆಯೆ" ಅಂತ ಹಾಡಿಕೊಳ್ಳಿ. ಒಬ್ಬರೇ "ಯಾದ ಮೇ ತೇರೆ ಜಾಗ ಜಾಗ ಕೆ ಹಮ, ರಾತ ಭರ ಕರವಟೆ ಬದಲ್ತೆ ಹೈಂ" ಎಂದು ಹಾಸಿಗೆಯ ಮೇಲೆ ಹೊರಳಾಡಿ ರಾತ್ರಿಯನ್ನು ಬೆಳಗು ಮಾಡಿ.
ದುರದೃಷ್ಟವಶಾತ್ ನಿಮ್ಮ ಪ್ರೇಮವೇನಾದರೂ ವಿಫಲವಾದರಂತೂ ಅಳಲಿಕ್ಕೆ ಅಳಿಸಲಿಕ್ಕೆ ಎಲ್ಲಾ ಗಾಯಕರು ಓಡೋಡಿ ಬರಲು ತುದಿಗಾಲ ಮೇಲೆ ನಿಂತಿರುತ್ತಾರೆ. "ನಸೀಬ ಮೆ ಜಿಸಕೆ ಜೋ ಲಿಖಾ ಥಾ ವೋ ತೆರೆ ಮೆಹಫಿಲ ಮೆ ಕಾಮ ಆಯಾ" ಎಂದು ರಫಿ ಕಣ್ಣೀರಾದರೆ, "ಮೆರೆ ಕಿಸಮತ ಮೆ ತೂ ನಹಿ ಶಾಯದ, ಮೈ ತೆರಾ ಇಂತಜಾರ ಕರತಾ ಹೂಂ" ಅಂತ ಸುರೇಶ ವಾಡಕರ ಮತ್ತು ಲತಾ ಅಳುತ್ತಾರೆ. "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಅದರ ಮಧುರ ಸ್ಮøತಿಯ ನಾನು ಹೇಗೆ ತಾನೆ ಅಳಿಸಲಿ?" ಎಂದು ಪಿ.ಬಿ.ಶ್ರೀ ಕೇಳುತ್ತಾರೆ. "ಇವನು ಗೆಳೆಯನಲ್ಲ, ತುಂಬ ಸನಿಹ ಬಂದಿಹನಲ್ಲ" ಎಂದು ಶ್ರೇಯಾ ಕಂಗಾಲಾಗಿ ಬಿಕ್ಕುತ್ತಾಳೆ. ಆದರೂ "ಅಬ್ ತೇರೆ ಬಿನ್ ಜೀ ಲೇಂಗೆ ಹಮ್, ಜೆಹರ್ ಜಿಂದಗಿ ಕಾ ಪೀಲೇಂಗೆ ಹಮ್" ಎಂದು ಕುಮಾರ ಸಾನು ಧೈರ್ಯ ತುಂಬಿ ಬದುಕಿನೆಡೆಗೆ ಹೊಸ ಆಸೆಗಳನ್ನು ಹುಟ್ಟಿಸುತ್ತಾನೆ.
ಮುಂದೆ ನಿಮ್ಮ ಮದುವೆ ಬೇರೆ ಯಾರದೋ ಜೊತೆ ಆಗಿ, ನಂತರ ಸಹಜ ಪರಿಣಾಮವಾದ ಮಕ್ಕಳು ನಿಮ್ಮ ಮಡಿಲು ತುಂಬಿದ ಮೇಲೆ ಅವರನ್ನು ಮುದ್ದಿಸಲು, ಲಾಲಿ ಹಾಡಿ ಮಲಗಿಸಲು ಮತ್ತಷ್ಟು ಹಾಡುಗಳು. ಮಕ್ಕಳು ಶಾಲೆಗೆ ಹೊರಟ ನಂತರ "ಅ ಆ ಇ ಈ ಕನ್ನಡದಾ ಅಕ್ಷರ ಮಾಲೆ, ಅಮ್ಮಾ ಎಂಬುದು ಕಂದನ ಕರುಳಿನ ಕರೆಯೋಲೆ" ಹಾಡು, "ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು" ಹಾಡು ಎಲ್ಲ ಸಾಲಾಗಿ ಶಿಸ್ತಾಗಿ ಬಂದು ಕೈಕಟ್ಟಿ ನಿಲ್ಲುತ್ತವೆ.
ನಂತರ ಅದೃಷ್ಟವಶಾತ್ ನಿಮ್ಮ ಸಂಸಾರ ಸುಖಮಯವಾಗಿದ್ದಲ್ಲಿ "ನಮ್ಮ ಸಂಸಾರಾ ಆನಂದ ಸಾಗರಾ, ಪ್ರೀತಿಯೆಂಬ ದೈವವೇ ನಮಗಾಧಾರಾ" ಎಂದು ಮನೆಮಂದಿಯೆಲ್ಲ ಕೂಡಿ ಕೋರಸ್ ಹಾಡಿ. ಇಲ್ಲವೇ "ಮುಳ್ಳೇ ಇಲ್ಲದ ಗುಲಾಬಿ ಹೂಗಳು ನಾವೆಲ್ಲಾ, ಪ್ರೇಮದ ಪರಿಮಳ ತುಂಬಿದೆ ನಮ್ಮಾ ಒಡಲೆಲ್ಲಾ" ಎಂದು ಸಂತಸ ಪಡಿ. ಸುಖವೆಂಬುದು ಮರೀಚಿಕೆಯಾಗಿದೆಯೇ, "ಹರುಷ ದೂರದ ಮೇರು ಏರದೆನ್ನಾ ಬಾಳ ತೇರು, ಪಯಣಾ ಏರುಪೇರು" ರೆಡಿ ಇದೆ. ಹಳೆಗೆಳತಿಯ ನೆನಪು ಅಲೆಅಲೆಯಾಗಿ ಬಂದು ಬಂಡೆಗಲ್ಲು ಮಾಡಿಕೊಂಡರೂ ನಿಮ್ಮ ಮನಸ್ಸಿಗಪ್ಪಳಿಸುತ್ತಿದೆಯೇ, "ಯಾದ ನ ಜಾಯೆ ಬೀತೆ ದಿನೊಂ ಕಿ, ಜಾಕೆ ನ ಆಯೆ ಜೋ ದಿನ ದಿಲ ಕ್ಯೂಂ ಬುಲಾಯೆ ಉನ್ಹೆ" ಎಂದು ಉತ್ತರವಿಲ್ಲದ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಸಂಕಟಪಟ್ಟು ಒದ್ದಾಡಿ ಒದ್ದಾಡಿ ಎಂಜಾಯ್ ಮಾಡಿ. ಜೀವನದ ಸುಖ-ದುಃಖಗಳನ್ನುಂಡು ಮೈ-ಮನಸ್ಸು ಮಾಗಿದ ಮೇಲೆ ನಡಗುವ ಧ್ವನಿಯಲ್ಲಿ ಎಂ. ಬಾಲಮುರಳಿಕೃಷ್ಣ ಅವರು ನಿಮಗಾಗಿಯೇ ಹಾಡಿದ "ದೇವರು ಹೊಸೆದಾ ಪ್ರೇಮದ ದಾರ" ಕೇಳುತ್ತ ಕಣ್ಣೀರಾಗಿ. ಜೀವನದ ಬಿರುಬಿಸಿಲು, ಧಾರಾಕಾರ ಮಳೆ, ಕೆಟ್ಟ ಛಳಿ ಎಲ್ಲವನ್ನೂ ಒಂದೇ ಹಾಡಿನಲ್ಲಿ ಅನುಭವಿಸಿಬಿಡಿ. ಇಳಿವಯಸ್ಸಿಗೆ "ಎಲ್ಲಿಗೆ ಪಯಣಾ, ಯಾವುದೋ ದಾರಿ ಏಕಾಂಗಿ ಸಂಚಾರಿ" ಎಂದು ಹಾಡುತ್ತ ಪಿ.ಬಿ.ಶ್ರೀ. ಊರುಗೋಲಾಗುತ್ತಾರೆ. ದಾಸವರಣ್ಯರು ಹಾಡುಗಳಲ್ಲೇ ವೇದಾಂತದ ಸಾರವನ್ನೆಲ್ಲ ತಿಳಿಸಿ ಪೊರೆಯುತ್ತಾರೆ.
ಅಂತೂ ಹುಟ್ಟಿನಿಂದ ಸಾವಿನವರೆಗೆ ಈ ಸಿನೆಮಾ ಹಾಡುಗಳ ನಂಟು ಬಿಡದೇ ಕಾಡುವುದು, ಕಾಯುವುದು. ಒಮ್ಮೆಯೂ ಒಂದೂ ಸಿನೆಮಾ ಹಾಡು ಗುಣುಗುಣಿಸದ ಭಾರತೀಯನೇ ಇರಲಿಕ್ಕಿಲ್ಲ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅಷ್ಟರ ಮಟ್ಟಿಗೆ ಸಿನೆಮಾ ಹಾಡುಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾವೆಲ್ಲ ಇಂಥ ರಸಿಕಶಿಖಾಮಣಿಗಳು ಇರುವುದರಿಂದಲೇ ನಮ್ಮ ಗಾಯಕರು, ಸಂಗೀತಕಾರರು, ಗೀತರಚನೆಕಾರರು ಪ್ರಸಿದ್ಧಿಯ ಉತ್ತುಂಗ ಶಿಖರಕ್ಕೇರಿದ್ದಾರೆ. ತೆರೆಯ ಮೇಲೆ ನಾಯಕ-ನಾಯಕಿಯೇ ಮುಖ್ಯವಾದರೂ ಅವರಿಗೆ ಕಂಠವಾಗಿ, ಅವರ ಭಾವನೆಗಳನ್ನೆಲ್ಲ ತಮ್ಮ ಗೀತೆಗಳಿಂದಲೇ ವಿಜ್ರಂಭಿಸುವ ಗಾಯಕರು ಸ್ವತಃ ನಾಯಕರಾಗಿ ಬಿಟ್ಟಿದ್ದಾರೆ. ಜನಸಾಮಾನ್ಯರ ಆರಾಧ್ಯದೈವವೇ ಅವರು.
ಈಗ ಒಮ್ಮೆ ಯೋಚಿಸಿ, ಈ ಎಲ್ಲ ಹಾಡುಗಳೇ ಇಲ್ಲದ ನಮ್ಮ ಜೀವನ ಅದೆಷ್ಟು ಬರಡಾಗುತ್ತಿತ್ತು!
*******************
ನೀತಾ ರಾವ್
No comments:
Post a Comment