Thursday, 26 December 2013

ಉಡುಗೊರೆಯೇ ಆಶೀರ್ವಾದ‌



ಲಘು ಬರಹ‌
ಉಡುಗೊರೆಯೇ ಆಶೀರ್ವಾದ
ಇಪ್ಪತ್ತು ವರ್ಷಗಳ ಹಿಂದೆ, ಅಂದರೆ ನಮ್ಮ ಮದುವೆಯ ಸಮಯ‍, ಏನೇನೋ ಹುಚ್ಚು ಆದರ್ಶಗಳು ನನ್ನ ತಲೆಯನ್ನು ತುಂಬಿ ಕೆಡಿಸಿದ್ದವು. ನಮ್ಮ ಮದುವೆಗೆ ಇನ್ನೊಬ್ಬರಿಂದ ಉಡುಗೊರೆಯನ್ನೇಕೆ ತೆಗೆದುಕೊಳ್ಳಬೇಕು? ಮತ್ತೆ ನಾವೂ ಏನಾದರೂ ವಾಪಸ್ ಕೊಡುವುದುಇದೆಲ್ಲಾ 'ಕೋಣ ಕೊಟ್ಟು ಕೋಣ' ತೆಗೆದುಕೊಂಡ ಹಾಗೆಅಂತೆಲ್ಲಾ ಏನೇನೋ ಕೆಲಸಕ್ಕೆ ಬಾರದ ವಿಚಾರಗಳುಆಯ್ತು, ಲಗ್ನ ಪತ್ರಿಕೆಯಲ್ಲಿ 'ಆಶೀರ್ವಾದವೇ ಉಡುಗೊರೆ' ಎಂದು ಬರೆಸಿದ್ದಾಯ್ತು. ಮದುವೆಗೆ ಬಂದ ಮಹಾಶಯರು ಏನೇನೂ ಕೊಡಲಿಲ್ಲ.
ನಮ್ಮ ಸಂಬಳವಾದರೂ ಎಷ್ಟು? 'ಒಂದರಿಂದ ಇಪ್ಪತ್ತರವರೆಗೆ ಉಂಡಾಟ s ಉಂಡಾಟ' ಎನ್ನುವಷ್ಟೇ. ಮದುವೆಯಾಗಿ  ವರ್ಷ ಕಳೆದರೂ ಗೋಡೆಯ ಮೇಲೆ ತಗಲಿ ಹಾಕಲು ಒಂದು ಗಡಿಯಾರವನ್ನೂ ಕೊಳ್ಳಲಾಗಲಿಲ್ಲ. ಮನೆಗೆ ಬಂದವರಿಗೆ ಕುಳಿತುಕೊಳ್ಳಲು, ನಾವು ಕೊಂಡು ಓದಿ ಪೇರಿಸಿಟ್ಟ ದಿನಪತ್ರಿಕೆಗಳೇ ಗತಿಯಾದವು. ಇನ್ನು ಒಂದು ಮಿಕ್ಸಿ ಕೊ0ಡುಕೊಳ್ಳಬೇಕಾದರೆ ರಾಮಾಯಣವೇ ಆಯಿತು. ಒಂದೂವರೆ ಸಾವಿರ ರೂಪಾಯಿಗಳನ್ನು ನಾಲ್ಕು  ಕ0ತುಗಳಲ್ಲಿ ತುಂಬುವಂಥ ಪರಿಸ್ಥಿತಿ.
ಇಷ್ಟೆಲ್ಲಾ ಆದ ಮೇಲೆ ತಾನೇ ಜ್ನಾನೋದಯವಾಗುವುದು! ಮದುವೆಗೆ ಬಂದವರು ಒಂದಿಷ್ಟು ಉಡುಗೊರೆ ಕೊಟ್ಟಿದ್ದರೆ, ನಾವದನ್ನು ನಗುನಗುತ್ತಾ ಫೋಟೊ ಪೋಸು ಕೊಟ್ಟು ಸ್ವೀಕರಿಸಿದ್ದರೆ, ಮೂರು ಕೋಣೆಗಳ ಮೂರೂ ಗೋಡೆಗಳ ಮೇಲೆ ಐದಾರಾದರೂ ಗಡಿಯಾರಗಳು ರಾರಾಜಿಸಿ ನಮ್ಮ ಸಮಯ ಪ್ರಜ್ನೆಯನ್ನಾದರೂ ಹೆಚ್ಚಿಸುತ್ತಿದ್ದವು! ಮಿಕ್ಸಿಯನ್ನು ಉಡುಗೊರೆಯಾಗಿ ಕೊಡುವ (ಆಗಿನಕಾಲದಲ್ಲಿ) ಉದಾರತನವನ್ನು ಯಾರೂ ತೋರದಿದ್ದರೂ ಎಲ್ಲರೂ ಕೊಟ್ಟ ಅಷ್ಟಿಷ್ಟು ಹಣಸೇರಿಸಿ ಒಂದು ಮಿಕ್ಸಿಯನ್ನು  ಝುಂ ಎಂದು ಕೊಂಡು, ಮದುವೆಯಾದ ಹೊಸತರಲ್ಲೇ ಒಂದಿಷ್ಟು ಇಡ್ಲಿ, ದೋಸೆ ಎಲ್ಲಾ ಮಾಡಿ, ಪತಿದೇವರ ಹೊಟ್ಟೆಯನ್ನು ತೃಪ್ತಿಪಡಿಸಿ, ಮನಸ್ಸನ್ನು ಗೆಲ್ಲಬಹುದಿತ್ತಾ! ಥೂ‍ 'ಆಶೀರ್ವಾದವೇ ಉಡುಗೊರೆ' ಅಂತ ಕಾರ್ಡಿನಲ್ಲಿ ಬರಿಸಿದ್ದೇ ಎಲ್ಲ ಅವಾಂತರಗಳಿಗೆ ಕಾರಣವಾಗುತ್ತೆ ಅಂತ ಗೊತ್ತಾಗುವ ವಯಸ್ಸಾ ಆಗ ನನ್ನದು?
ಅಂತೂ ಇದೆಲ್ಲಾ ಹೀಗ್ ಹೀಗೆ ಆಗುತ್ತೆ ಅಂತ ಲೌಕಿಕದ ಅರಿವಾದ ಮೇಲೆ ನಾನೂ ಸ್ವಲ್ಪ ಜಾಣೆಯಾದೆ. ಯಜಮಾನರ ಕಂಪನಿಯವರು ತಮ್ಮ ಡೀಲರುಗಳಿಗೆ ದೀಪಾವಳಿಯ ಉಡುಗೊರೆ ಕೊಟ್ಟಾಗ ಅದರಲ್ಲಿ ಒಂದು ಪೀಸಾದರೂ ನಮ್ಮ ಮನೆಗೆ ತಂದರೆ ನಮ್ಮ ಆದರ್ಶಗಳಿಗೆ ಖೋತಾ ಬೀಳುವುದಿಲ್ಲವೆಂದು ನನಗೆ ನಾನೇ ಸಮಝಾಯಿಸಿ ಕೊಟ್ಟುಕೊಂಡೆ. ಒಂದರ ಹಿಂದೊಂದರಂತೆ ಗಡಿಯಾರಗಳು ಗೋಡೆಗಳ ಮೇಲೆ ವಿರಾಜಿಸಿ ಸಮಯವನ್ನು ತಿಳಿಸಲಾರಂಭಿಸಿದವು.
ಮಧ್ಯೆ ನಮ್ಮ ಹೊಸಮನೆ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯಲ್ಲಿ 'ಆಶೀರ್ವಾದವೇ ಉಡುಗೊರೆ' ಎಂದು ಬರೆಸುವ ತಪ್ಪನ್ನು ಬಿಲ್ಕುಲ್ ಮಾಡಲಿಲ್ಲ. ಪರಿಣಾಮ‍-‍-‍-, ಸಂಜೆಯ ಹೊತ್ತಿಗೆ ಎಲ್ಲ ಬಂಧುಬಾಂಧವರನ್ನು ಸೇರಿಸಿಕೊಂಡು, ಇವರು ಇದು ಕೊಟ್ಟರು, ಅವರು ಅದು ಕೊಟ್ಟರು ಎಂದು ಮುಖದ ತುಂಬೆಲ್ಲಾ ನಗು ತುಂಬಿಕೊಂಡು, ಮನಸ್ಸಿನ ತುಂಬೆಲ್ಲಾ ಆನಂದ ಪಟ್ಟುಕೊಂಡು, ಇದೆಲ್ಲಾ ನೋಡಿ ಬೇರೆಯವರು ಪಾಪ! ಹೊಟ್ಟೆ ತುಂಬಾ ಉರಿಪಟ್ಟುಕೊಂಡರೇನೋ ಎಂದು ಕಲ್ಪಿಸಿಕೊಂಡು ಸುಖಿಸಿದ್ದಾಯ್ತು. 'ಆಹಾ ಎಂಥ ಮಧುರ ಯಾಚನೆ!' ಉಡುಗೊರೆ ಎನ್ನುವುದು. ಮನೆಯಲ್ಲಿ ಹತ್ತಾರು ಗೋಡೆಗಡಿಯಾರಗಳು, ನಾಲ್ಕಾರು ಹೂದಾನಿಗಳು, ಹತ್ತಿರದವರು ಕೊಟ್ಟ ಒಂದಿಷ್ಟು ಬೆಳ್ಳಿ ವಸ್ತುಗಳು, ಬಂಗಾರದ ತುಂಡುಗಳು, ಉಡಲು ಬರುವ, ಬಾರದ ಸೀರೆಗಳು, ನೂರಾರು ರವಿಕೆ ಖಣಗಳುಒಂದು ರೂಮೆಲ್ಲ ತುಂಬಿ ನನ್ನ ಮನಸ್ಸನ್ನೂ ತುಂಬಿದವು.
ಮಗನ ಉಪನಯನದ ಹೊತ್ತಿಗೆ ನಮ್ಮ ಸ್ಟೇಟಸ್ಸು, ಸಂಪತ್ತು ಇನ್ನೂ ಸ್ವಲ್ಪ ಬೆಳೆದಿತ್ತು. 'ಆಶೀರ್ವಾದವೇ ಉಡುಗೊರೆ' ಅನಲಿಕ್ಕೇ ಹೋಗಲ್ಲಿಲ್ಲ. ನಮಗೆ ಉಡುಗೊರೆ ಕೊಟ್ಟರೆ, ಕೊಟ್ಟವರೇ ಧನ್ಯರು! ನಮಗಾದರೂ ಏನು ಕಡಿಮೆ ಖರ್ಚಿನ ಬಾಬತ್ತೇ? ಬಂದವರು ಹೋದವರಿಗೆಲ್ಲ ಸೀರೆ, ಶಾಲು, ಬ್ಲೌಸ್ ಪೀಸು, ಅವಲಕ್ಕಿಉಂಡಿಗಳ ಪ್ಯಾಕೆಟ್ಟುಎಲ್ಲಾ ಅವರವರ ಅಂತಸ್ತು, ಸಾಮರ್ಥ್ಯ, ಸಾಮಿಪ್ಯ ನೋಡಿ ಕೊಡಬೇಡವೇ? ಇನ್ನೊಮ್ಮೆ ಮನೆ ತುಂಬಾ ಸೀರೆ, ಪೀಸುಗಳು, ಶರ್ಟುಪ್ಯಾಂಟಿನ ಬಟ್ಟೆಗಳ ಜೊತೆಗೆ ಪಂಚೆಶಲ್ಯಗಳು, ಬೆಳ್ಳಿಯ ಕವಳಿಗೆಸೌಟುಗಳು, ನಗದು ಹಣಗಳು, ಚೂರುಪಾರು ಬಂಗಾರದ ಒಡವೆಗಳು (ನಮ್ಮ ಪುಣ್ಯಕ್ಕೆ ಆಗಿನ್ನೂ ಬೆಳ್ಳಿಬಂಗಾರ ಈಗಿನಷ್ಟು ತುಟ್ಟಿಯಾಗಿರಲಿಲ್ಲ) ಹರಿದು ಬಂದು ಮನಸ್ಸಿಗೆ ಮುದ ನೀಡಿದವು.
ಇತ್ತಿತ್ತಲಾಗಿ ಜನರ ಬಳಿ ಹೀಗೆ ಬಂದಹೋದ ಸೀರೆ, ಖಣಗಳು ಅದೆಷ್ಟಾಗಿಬಿಟ್ಟಿವೆಯೆಂದರೆ, ಸುಮ್ಮಸುಮ್ಮನೇ ಬಂದುಹೋದವರಿಗೆಲ್ಲ ರವಿಕೆಖಣ ಕೊಟ್ಟುಬಿಡುವುದು ಚಹಾ ಕೊಟ್ಟಷ್ಟೇ ಸಹಜವಾಗಿ ಹೋಯ್ತು. ನನ್ನ ಮನೆಯಲ್ಲಿನ ಖಣಗಳನ್ನು ಒಮ್ಮೆ ಎಣಿಸಿ ನೋಡಿದೆ. ಇನ್ನೂರಕ್ಕೂ ಹೆಚ್ಚು ಕೆಂಪು, ಹಳದಿ, ಹಸಿರು, ಬಿಳಿ, ಕಪ್ಪು, ನೀಲಿ ಖಣಗಳು. ಆದರೆ ಒಂದೂ ರವಿಕೆ ಹೊಲಿಸಿ ಹಾಕಿಕೊಳ್ಳಬಹುದಾದ ಒಳ್ಳೆಯ ಕ್ವಾಲಿಟಿಯ ಬಟ್ಟೆಯಲ್ಲ. ಇನ್ನು ಇವುಗಳನ್ನೆಲ್ಲ ಸಾಗಹಾಕುವುದು ಹೇಗಪ್ಪಾ ಎಂಬ ಚಿಂತೆಯಾಯಿತು. ನಾನೂ ಉಳಿದ ಜಾಣ ಗೃಹಿಣಿಯರ ಚಾತುರ್ಯ ಉಪಯೊಗಿಸಲಾರಂಭಿಸಿದೆ. ಮನೆಗೆ ಬಂದ ಹೆಣ್ಣುಮಕ್ಕಳಿಗೆಲ್ಲಾ ಒಂದೊಂದು ರವಿಕೆ ಖಣವನ್ನು ಬೇಡಬೇಡವೆಂದರೂ ಕೈಯೊಳಗೆ ತುರುಕಲು ಪ್ರಾರಂಭಿಸಿದೆ. ಅಯ್ಯೋ ಪಾಪ! ಗಂಡಸರಿಗೂ ಒಂದೊಂದು ಖಣ ಉಡಿತುಂಬುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನ್ನಿಸದೇ ಇರಲಿಲ್ಲ. ನಾನು ಹೀಗೆ ಹತ್ತು ಖಣಗಳನ್ನು   ಪರಭಾರೆ ಮಾಡಿದ ಖುಶಿಯಲ್ಲಿರುವಾಗಲೇ ನನ್ನ ಕಪಾಟಿನಲ್ಲಿ ಇಪ್ಪತ್ತು ಹೊಸ ಖಣಗಳು ಜಮೆಯಾಗತೊಡಗಿದವು. ಅಂದರೆ ಉಳಿದ ಹೆಂಗಸರೆಲ್ಲ ಖಣ ಸಾಗುಹಾಕುವುದರಲ್ಲಿ ನನಗಿಂತಲೂ ನಿಸ್ಸೀಮರು ಎಂದಾಯಿತು.
ಅಂಥದರಲ್ಲೇ ಒಂದು ದಿನ ಭೃಗುಮುನಿಯ ವಕ್ಕಲಿನವರಾದ ನಮ್ಮೆಜಮಾನರು ಒಂದು ಸುಳ್ಳು ಜಗಳ ಸುರು ಮಾಡಿದರು. ಅವರ ಕರವಸ್ತ್ರಗಳೆಲ್ಲಾ ಹೇಳಹೆಸರಿಲ್ಲದಂತೆ ಮಾಯವಾಗುತ್ತಿರುವುದಕ್ಕೆ ಮಕ್ಕಳ ಜೊತೆ ನನ್ನನ್ನೂಅಂದರೆ ನನ್ನನ್ನೇ ಮುಖ್ಯ ಆರೋಪಿಯನ್ನಾಗಿ ಮಾಡಿ ಗೂಬೆ ಕೂರಿಸಿ ಕೂಗಾಡಹತ್ತಿದರು. ಒಂದು ವರ್ಷಕ್ಕೆ ಒಂದು ಡಜನ್ ಕರವಸ್ತ್ರಗಳು ಕಳೆದುಹೋಗುವುದು ಅತ್ಯಂತ ಸಹಜ ಎಂದು, ಕಾಮರ್ಸಿನಲ್ಲಿ ನಾರ್ಮಲ್ ಲಾಸ್ ಬಗ್ಗೆ ಕಲಿತಿದ್ದ ನಾನುಅವರ ತಲೆಯೊಳಗೆ ಜ್ನಾನದ ಬೆಳಕು ಚೆಲ್ಲಿ ಸಮಾಧಾನ ಮಾಡಲು ಹೋದೆ. ಆದರೆ ಆಗಲೇ ಭೃಗುಮುನಿಗಳ ಜೊತೆಗೆ ಅವರ ಸಂಬಂಧಿಗಳಾದ ವಿಶ್ವಾಮಿತ್ರ, ದೂರ್ವಾಸರೂ ಸವಾರಿಯಾಗಿದ್ದ ಅವರ ತಲೆಗೆ ಅದು ಹೋಗಲಿಲ್ಲ. ಭುಸುಭುಸುಗುಟ್ಟುತ್ತ ಚಪ್ಪಲಿ ಮೆಟ್ಟಿ ಧಪಧಪ ಶಬ್ದದೊಂದಿಗೆ ಅವರು ಹೊರಹೊಗುತ್ತಿದ್ದಂತೆ ನಮ್ಮ ಕೆಲಸದ ಮೌಸಿ ಹೇಳಿದಳು, "ಅಣ್ಣಾವ್ರು ಇಷ್ಟು ಸಣ್ಣ ವಿಷಯಕ್ಕ ಅಷ್ಟು ತಲಿ ಕೆಡಿಸಿಕೊಂಡ್ರ ಹೆಂಗ s, ಇನ್ನೊಂದು ಡಜನ್ ವಸ್ತ್ರಾ ತಂದ್ಬಿಟ್ರ ಆತು". ಭಲೇ ಇವಳಿಗಾದರೂ ತಿಳಿಯುತ್ತೆ ಎಕನಾಮಿಕ್ಸು, ಕಮರ್ಸು, ಎಂದುಕೊಂಡೆ. ಅಲ್ಲಾ   ಈ ಜನ ದಿನ ಬೆಳಗಾದರೆ ರವಿಕೆ ಖಣ ಕೊಟ್ಟು ಕೊಟ್ಟು ಖಾಲಿ ಮಾಡುವ ಬದಲು ಕರವಸ್ತ್ರಗಳನ್ನಾದರೂ ಕೊಟ್ಟಿದ್ದರೆ ಇವತ್ತು ನಮ್ಮ ಮನೆಯಲ್ಲಾದ ಜಗಳವಾದರೂ  ತಪ್ಪುತ್ತಿತ್ತಾ!
ಅದಕ್ಕೇ ಈ ವಿಷಯದಲ್ಲಿ ಮಹಾರಾಷ್ಟ್ರದವರ, ಅಥವಾ ಮರಾಠಿ ಜನರ ಜಾಣ್ಮೆ ನನಗೆ ಮೆಚ್ಚಿಕೆಯಾಗುತ್ತದೆ. ಅವರು ಉಡುಗೊರೆಯೆಂದರೆ ಬೆಡ್ ಶೀಟ್ಗಳನ್ನು ಕೊಡುತ್ತಾರೆ, ತಲೆದಿಂಬಿನ ಕವರಗಳನ್ನು ಕೊಡುತ್ತಾರೆ, ಕರವಸ್ತ್ರಗಳನ್ನು ಕೊಡುತ್ತಾರೆ, ಇನ್ನೂ ಕೆಲವರು ಡೈನಿಂಗ ಟೇಬಲ್ ಕವರು, ಫ್ರಿಜ್, ವಾಷಿಂಗ ಮಶಿನ್ ಕವರುಗಳನ್ನೆಲ್ಲಾ ಕೊಡುತ್ತಾರೆ. ಉಪಯೊಗವಾಗುತ್ತವೆ ಅಲ್ವಾ! ಈಗೀಗಂತೂ ನಮ್ಮ ಮನೆಯ ಅಕ್ಕಪಕ್ಕದವರೆಲ್ಲಾ ಸಂಕ್ರಾಂತಿ ಹಬ್ಬಕ್ಕೆ, ರಥಸಪ್ತಮಿ ಕಾರ್ಯಕ್ರಮಕ್ಕೆ ಕರೆದು ಅರ್ಧ ಕೆ.ಜಿ. ಬೆಲ್ಲದ ಚಿಪ್ಪು, ಕಾಲು ಕೆ.ಜಿ. ಸಕ್ಕರೆಯ ಪ್ಯಾಕೆಟ್, ಟಿಷ್ಯು ಪೇಪರ ಪ್ಯಕೆಟ್, ಫ್ರಿಜ್ ಬಾಟಲ್ ಹೀಗೆಲ್ಲಾ ಉಪಯೋಗವಾಗುವಂಥ ಸಣ್ಣ ಪುಟ್ಟ ಉಡುಗೊರೆಗಳನ್ನೇ ಕೊಡುತ್ತಾರೆ.
ಇನ್ನು ಹುಟ್ಟು ಹಬ್ಬದ ಮರು‍ ಉಡುಗೊರೆಗಳ (return gift ) ಮೋಡಿಯಂತೂ ಹೇಳತೀರದು. ಹಾಗಾಗಿ ನನ್ನ ಚಿಕ್ಕ ಮಗರಾಯ ಈ ಹುಟ್ಟು ಹಬ್ಬದ ಕರೆಗಳಿಗಾಗಿ ಕಾಯುತ್ತಿರುತ್ತಾನೆ. ಪೆನ್ನು, ಪೆನ್ಸಿಲ್ಲುಗಳು, ಕಂಪಾಸು ಬಾಕ್ಸುಗಳು, ರೈಟಿಂಗ ಪ್ಯಾಡುಗಳು, ಪೆನ್ ಸ್ಟ್ಯಾಂಡುಗಳು, ಕಲರ್ ಪೆನ್ಸಿಲ್ಲುಗಳು ಹೀಗೆ ಮನೆ ತುಂಬಾ ಕೈ ಹಾಕಿದಲ್ಲೆಲ್ಲಾ ಇವೇ ಸಿಗುತ್ತವೆ. ನಾವು ಚಿಕ್ಕವರಿದ್ದಾಗ ಒಂದೊಂದು ಪೆನ್ನು, ಪೆನ್ಸಿಲ್ಲಿಗಾಗಿ ಪರದಾಡಿದ ನೆನಪುಗಳು ನುಗ್ಗಿಬಂದು ಅಳು ‍ ನಗುವಿನ ಮಿಶ್ರಭಾವ ಉಂಟಾಗುತ್ತದೆ.
ಈಗೀಗ ವಸ್ತುಗಳಿಗೆ ಕಿಮ್ಮತ್ತೇ ಇಲ್ಲದಷ್ಟು ಅವು ಉಪಲಬ್ಧವಾಗಿವೆ. ಗೋಡೆಯ ಗಡಿಯಾರಗಳು ನಿಂತು ಹೋದರೆ, ಕೆಟ್ಟು ಹೋದರೆ ರಿಪೇರಿ ಮಾಡಿಸುವುದೂ ಸುಮ್ಮನೇ ದಂಡ ಎಂದುಕೊಂಡು, ಒಳಗೆ ಸರದಿಯಲ್ಲಿ ಕಾಯುತ್ತಿರುವ ಇನ್ನೊಂದು ಗಡಿಯಾರವನ್ನು ಹಾಕಿಬಿಡುತ್ತೇವೆ. ಉಡುಗೊರೆಯಲ್ಲಿ ಬಂದ ಸೀರೆಗೆ ಮ್ಯಾಚಿಂಗ್ ಬ್ಲೌಸ್ ಹೊಲಿಸಿ, ಫಾಲ್ ಪಿಕೊ ಮಾಡಿಸುವುದರಲ್ಲಿ ಐನೂರು ರೂಪಾಯಿ ಕೈ ಬಿಟ್ಟು ಅಣೆಯ ಮಂಗ ನಾಲ್ಕಾಣೆಯ ಸೌತೆಕಾಯಿ ಬೇಡಿದ ಲೆಕ್ಕವಾಗುತ್ತದೆ. ಯಾರಾದರೂ ಈ ಉಡಲುಬಾರದ ಉಡುಗೊರೆಯ ಸೀರೆ, ಖಣ, ತೆಳ್ಳಗೆ ಬಳಕುವ ಪಾತ್ರೆಗಳನ್ನು ಕೊಂಡುಕೊಳ್ಳುವ ಬಿಸನೆಸ್ ಮಾಡುವರಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸದೇ ಇರುವುದಿಲ್ಲ. ಒಂದೊಂದು ಸಲ ಯಾರು ಉಡುಗೊರೆಯಲ್ಲಿ ಸೀರೆ ಕೊಟ್ಟಿರುತ್ತಾರೋ ಗೊತ್ತಾಗದೇ ಮುಂದೊಂದು ಸಲ ಅವರಿಗೇ ಅದನ್ನು ಮರಳಿಸಿ ಫಜೀತಿ ಪಟ್ಟಿದ್ದೂ ಇದೆ. ಆದರೂ ಒಂದು ಸರ್ವಕಾಲಿಕ ಸತ್ಯ ಉಳಿದೇ ಬಿಡುತ್ತದೆ ‍ ‍-ಈ ಶ್ರೇಷ್ಠವಾದ ಭರತ ಖಂಡದಲ್ಲಿ ಎಲ್ಲಿಯವರೆಗೆ ಮದುವೆ, ಮುಂಜಿವೆ, ಜಾವುಳ, ಕುಬುಸ, ಹುಟ್ಟಿದ ಹಬ್ಬ, ಗೃಹಪ್ರವೇಶ, ಬೆಳ್ಳಿ ಹಬ್ಬ, ಷಷ್ಟಬ್ಧಿ, ಸಹಸ್ರ ಚಂದ್ರ ದರ್ಶನಗಳು ನಡೆಯುತ್ತಲೇ ಇರುತ್ತವೆಯೋ ಅಲ್ಲಿಯವರೆಗೆ ಈ ಉಡುಗೊರೆಗಳ ಕೊಡು ತೆಗೆದುಕೊಳ್ಳುವಿಕೆಯೂ ನಡೆದೇ ಇರುತ್ತದೆ ಮತ್ತು ಮದುವೆ ಇತ್ಯಾದಿಗಳಂತೂ ಸೂರ್ಯ ‍- ಚಂದ್ರರಿರುವ ವರೆಗೂ ನಡೆಯುತ್ತಲೇ ಇರುತ್ತವೆ, ನಡೆಯಲೇ ಬೇಕು. ಅಂದ ಮೇಲೆ ನಮ್ಮ ಕಪಾಟುಗಳಲ್ಲಿ ಖಣಗಳು ಮಣಗಟ್ಟಲೇ ಏರುತ್ತಲೇ ಹೋಗುವುದೂ ಸತ್ಯ. ನಾವು ಪೇಚಾಡಿಕೊಳ್ಳುತ್ತಲೇ ಅವುಗಳನ್ನು ಸ್ವೀಕರಿಸುವುದು, ಸಾಗಹಾಕುವುದು ಕೂಡಾ ಅಷ್ಟೇ ಸತ್ಯ.
ಏನೇ ಆಗಲಿ, ಇನ್ನು ಮುಂದೆ ನಮ್ಮ ಮನೆಯ ಎಲ್ಲ ಕಾರ್ಯಕ್ರಮಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ 'ಉಡುಗೊರೆಯೇ ಆಶೀರ್ವಾದ' ಎಂದು ಅಚ್ಚು ಹಾಕಿಸಬೇಕೆಂದಿದ್ದೇನೆ. ಇನ್ನೂ ಮುಂದುವರೆದು 'ನಗದು ಒಳ್ಳೆಯದು' ಎಂದೂ ಬರೆಸಬೇಕೆಂದಿದ್ದೇನೆ. ಏಕೆಂದರೆ ---ನಗದು ಹಣದಷ್ಟು ಫ್ಲೆಕ್ಸಿಬಲ್ ಉಡುಗೊರೆ ಇನ್ನೊಂದಿಲ್ಲ. ತಿಳಿಯಿತೇ?                                     
 ಶ್ರೀಮತಿ. ನೀತಾ ರಾವ್



No comments:

Post a Comment