ಪ್ರವಾಸ ಕಥನ
ಲಂಡನ್ ಸಿಟಿ-ನೋಟ
ಲಂಡನ್ನಿನ ಹೀತ್ರೂ ವಿಮಾನ ನಿಲ್ದಾಣದ ಹತ್ತಿರವೇ ಇದ್ದ ಹಿಲ್ಟನ್ ಹಾಟೆಲ್ಲಿನಲ್ಲಿ ಉಳಿದುಕೊಂಡ ನಾವು ಮರುದಿನ ಲಂಡನ್ ಎನ್ನುವ ವಯ್ಯಾರದ, ಸುಂದರ ನಗರಿಯನ್ನು ಕಣ್ತುಂಬಿಕೊಳ್ಳಲು ಹೊರಟೆವು. ಮಳೆ ಮತ್ತು ಛಳಿ ಎರಡೂ ನಮ್ಮನ್ನು ಮದುರಿಕೊಳ್ಳುವಂತೆ ಮಾಡಿದ್ದರೂ ನಮ್ಮನ್ನಾಳಿದ ಬ್ರಿಟಿಷ್ ಸಾಮ್ರಾಜ್ಯದ ಕಿರೀಟಪ್ರಾಯವಾದ ಲಂಡನ್ ಶಹರವನ್ನು ನೋಡುವ ಉತ್ಸಾಹ ಎಲ್ಲರಲ್ಲೂ ಗರಿಗೆದರಿತ್ತು. ನಮ್ಮ ಬಸ್ಸು ಅಬೆ (ಂbbeಥಿ)ಯಲ್ಲಿ ಕುಳಿತು ಹಾಟೆಲ್ಲಿನಿಂದ ಸಿಟಿಗೆ ಹೋದ ನಾವು ವೆಸ್ಟ್ ಮಿನಿಸ್ಟರ್ ಅಬೆ ಇರುವ ಸ್ಥಳದಲ್ಲಿ ನಡೆದುಕೊಂಡು ಒಂದೊಂದೇ ಕಟ್ಟಡವನ್ನು ನೋಡುತ್ತಾ ನಡೆದೆವು. ವೆಸ್ಟ್ ವಿನಿಸ್ಟರ್ ಅಬೆ ಗಾಥಿಕ್ ಶೈಲಿಯ ಭವ್ಯ ಚರ್ಚ ಆಗಿದ್ದು ಮೊದಲೆಲ್ಲ ರಾಜಮನೆತನದ ಕಿರಿಟಧಾರಣೆಗಳು ಮತ್ತು ಸುಮಾರು ಹದಿನಾರು ರಾಯಲ್ ಮದುವೆಗಳು ಇಲ್ಲಿ ನಡೆದಿವೆ. ರಾಜಮನೆತನದವರ ಸಮಾಧಿಗಳನ್ನು ಇಲ್ಲಿ ಮಾಡಲಾಗಿದೆ. ಕಾಲಾಂತರದಲ್ಲಿ ದೇಶದ ಶ್ರೇಷ್ಠ ಸಾಧಕರು, ಮೇಧಾವಿಗಳು, ರಾಜಕಾರಣಿಗಳು, ಕಲಾವಿದರು, ಸಾಹಿತಿಗಳು, ವಿಜ್ಞಾನಿಗಳು ಹೀಗೆ ಇಂಗ್ಲೆಂಡಿನ ಅನೇಕ ದಿಗ್ಗಜರು ಇಹಲೋಕದಲ್ಲಿ ತಮ್ಮ ಪಾರಮ್ಯವನ್ನು ಮೆರೆದು ಮುಗಿಸಿ ಇಲ್ಲೀಗ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಲ್ಲಿ ಪ್ರಮುಖವಾಗಿ ನಾನು ನೆನಪಿನಲ್ಲಿಟ್ಟುಕೊಂಡ ಹೆಸರುಗಳೆಂದರೆ ಸರ್ ಐಸಾಕ್ ನ್ಯೂಟನ್, ಚಲ್ರ್ಸ ಡಾರ್ವಿನ್, ಚಾಲ್ರ್ಸ ಡಿಕೆನ್ಸ್, ಮತ್ತು ಇದೀಗ ನಮ್ಮನ್ನಗಲಿದ ಮಹಾವಿಜ್ಞಾನಿ ಸ್ಟೀಫನ್ ಹಾಕಿಂಗ್. 1998ರಲ್ಲಿ ವೆಸ್ಟ್ ಮಿನಿಸ್ಟರ್ ಅಬೆಯ ಪಶ್ಚಿಮದ ಮಹಾದ್ವಾರದ ಮೇಲಿನ ಖಾಲಿ ಜಾಗಗಳನ್ನು ಕ್ರಿಶ್ಚಿಯನ್ ಧರ್ಮಕ್ಕಾಗಿ ತ್ಯಾಗ-ಬಲಿದಾನ ಮಾಡಿ ಮಡಿದ ಹುತಾತ್ಮರ ಪ್ರತಿಮೆಗಳಿಂದ ತುಂಬಲಾಗಿದೆ.
ಬಸ್ಸಿನಲ್ಲಿ ತಿರುಗಾಡುತ್ತಲೇ ನಾವು ಹೌಸ್ ಆಫ್ ಲಾಡ್ರ್ಸ ಮತ್ತು ಹೌಸ್ ಆಫ್ ಕಾಮನ್ಸ್ ಕಟ್ಟಡಗಳನ್ನು, ಬಿಗ ಬೆನ್ ಕ್ಲಾಕ್ ಟಾವರನ್ನು ನೋಡಿದೆವು. ಇಂಥ ಸಿಟಿ ಟೂರ್ ಮಾಡಲು ಇಲ್ಲಿ ಡಬಲ್ ಡೆಕ್ಕರ ಬಸ್ಸುಗಳಿದ್ದು ಮೇಲಿನ ಮಜಲು ಟಾಪಲೆಸ್ ಇದ್ದು ಜನ ಸೀಟಿನಲ್ಲಿ ಕುಳಿತು ಲಂಡನ್ ಶಹರದ ಸೌಂದರ್ಯವನ್ನು ವೀಕ್ಷಿಸುತ್ತ ಆನಂದಿಸುತ್ತಾರೆ. ಎಂಟು ಹತ್ತು ಜನ ಸೇರಿ ಪೆಡಲ್ ಮಾಡಿಕೊಂಡು ಓಡಿಸುವ ವಾಹನಗಳನ್ನು ನೋಡಿ ನನಗೆ ಬಹಳ ಮೋಜೆನಿಸಿತು. ಅವರೂ ಯಾವುದೇ ಗಾಬರಿ-ಗಡಿಬಿಡಿ ಇಲ್ಲದೇ ಆನಂದವಾಗಿ ಹಾಡು ಹೇಳುತ್ತ ಚಪ್ಪಾಳೆ ತಟ್ಟುತ್ತ ಪೆಡಲ್ ಹಾಕುತ್ತಿದ್ದರು. ಇಂಥ ಅನೇಕ ಆಶ್ಚರ್ಯಗಳು ನಮ್ಮೆದುರು ಧುತ್ತನೇ ಎದುರಾಗುತ್ತವೆ ಇಲ್ಲಿ. ಬಸ್ಸುಗಳೆಲ್ಲ ಈಗಷ್ಟೇ ಹೊಸದಾಗಿ ರಸ್ತೆಗಿಳಿದಷ್ಟು ಹೊಚ್ಚಹೊಸದೆನಿಸುತ್ತವೆ. ಧೂಳು ಇಲ್ಲವೇ ಇಲ್ಲ. ಪ್ರತೀ ಕಟ್ಟಡವೂ ಐತಿಹಾಸಿಕ ಕಥೆಯೊಂದನ್ನು ಹೇಳಲು ಹಪಹಪಿಸುತ್ತಿದೆಯೇನೋ ಎನ್ನಿಸುವಷ್ಟು ಸಾಲಾಗಿ ಒಂದೇ ಥರದ ಕಟ್ಟಡಗಳು ಅದೇ ಹಳೇ ಯುರೋಪಿಯನ್ ಮತ್ತು ಬ್ರಿಟಿಷ್ ಶೈಲಿಯಲ್ಲಿ ಪ್ರವಾಸಿಗಳನ್ನು ಎದುರುಗೊಳ್ಳುತ್ತವೆ. ಹಳೆಯ ಕಟ್ಟಡಗಳÀ ಹೊರಮೈಯನ್ನು ಸ್ವಲ್ಪವೂ ಬದಲಾವಣೆ ಮಾಡದೇ ಹಾಗೆಯೇ ಉಳಿಸಿಕೊಂಡು ಒಳಾವರಣವನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿ ಅವನ್ನೆಲ್ಲ ಅತ್ಯಾಧುನಿಕವಾದ ಹಾಟೆಲ್ಲುಗಳು, ವ್ಯಾಪಾರಿ ಮಳಿಗೆಗಳನ್ನಾಗಿ ಪರಿವರ್ತಿಸಲಾಗಿದೆ. ಒಂದೊಂದು ರಸ್ತೆಯಲ್ಲೂ ಎರಡೂ ಬದಿಯ ಕಟ್ಟಡಗಳು ಒಂದೇ ರೀತಿ ಇರುವಂತೆ ಕಟ್ಟಲಾಗಿದೆ. ಎಲ್ಲಿಯೂ ವ್ಯತ್ಯಾಸವೇ ಇಲ್ಲ. ಈ ರೀತಿಯ ಏಕತೆಯನ್ನು ಅವರು ಸಾಧಿಸಿದ್ದಾದರೂ ಹೇಗೆ ಎಂಬ ಅಚ್ಚರಿ ಮೂಡುತ್ತದೆ. ಬಹುಶಃ ಅವೆಲ್ಲ ಒಂದೇ ಕಾಲದಲ್ಲಿ ಒಬ್ಬನೇ ಕಟ್ಟಡ ವಿನ್ಯಾಸಕಾರನು ನಕ್ಷೆ ಸಿದ್ಧಪಡಿಸಿ ಕಟ್ಟಿದ ಕಟ್ಟಡಗಳಿರಬೇಕು, ಮತ್ತು ಅದಕ್ಕಾಗಿ ಸಾಕಷ್ಟು ವರ್ಷಗಳು, ಸಾಕಷ್ಟು ಶ್ರಮ ಖರ್ಚಾಗಿರಬೇಕು. ಮತ್ತೀಗ ಅತ್ಯಂತ ಕಠಿಣ ಕಾಯಿದೆಗಳನ್ನು ಮಾಡಿ ಇಂಥ ಹಳೆಯ ಕಟ್ಟಡಗಳ ಹೊರಮೈಯನ್ನು ಸ್ವಲ್ಪವೂ ಬದಲಾವಣೆ ಮಾಡದಂತೆ ತಡೆಯಲಾಗಿದೆಯಂತೆ. ಈ ಜನರ ಸಂಸ್ಕøತಿ ಪ್ರೇಮ ತುಂಬ ದೊಡ್ಡದು. ತಮ್ಮ ಪುರಾತನ ಸಂಸ್ಕøತಿ, ಶೈಲಿ, ಆಚರಣೆಗಳನ್ನು ಅವರು ತುಂಬ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಕಾಯಿದೆಗಳನ್ನು ಪಾಲಿಸುತ್ತಾರೆ. ಹೀಗಾಗಿ ಲಂಡನ್ನಿನ ಯಾವುದೇ ಕಿರಿದಾದ ಓಣಿಯ ಒಳಗೆ ತಿರುಗಿಕೊಳ್ಳಿ, ನಿಮಗೆ ನೋಡಲು ಸುಂದರವಾದ ಕಟ್ಟಡಗಳು, ಅವುಗಳ ಮೇಲೆ ಕೆತ್ತಿದ ಮೂರ್ತಿಗಳು, ನಾಲ್ಕು ರಸ್ತೆಗಳು ಕೂಡುವಲ್ಲಿ ಸುಂದರ ಶಿಲ್ಪಗಳಿರುವ ವೃತ್ತಗಳು, ಕಾರಂಜಿಗಳು, ಅವುಗಳ ಸುತ್ತಲೂ ನಳನಳಿಸುತ್ತಿರುವ ಬಣ್ಣಬಣ್ಣದ ಹೂಗಳಿಂದ ತೊನೆಯುತ್ತಿರುವ ಪುಟ್ಟಪುಟ್ಟ ಗಿಡಗಳು, ಮಾರ್ಗಮಧ್ಯೆ ಪಿಲ್ಲರಗಳು, ಬರಿ ಕಾಲ್ನಡಿಗೆಯಿಂದ ಮಾತ್ರ ತಿರುಗಾಡಬಹುದಾದ ವಿಶಾಲವಾದ ಸ್ಕ್ವೇರಗಳು ಸಿಕ್ಕೇ ಸಿಗುತ್ತವೆ. ಇಡೀ ನಗರವೇ ಒಂದು ದೊಡ್ಡ ಪ್ರೇಕ್ಷಣೀಯ ಸ್ಥಳ. ಯಾವುದನ್ನು ನೋಡಲಿ, ಯಾವುದನ್ನು ಬಿಡಲಿ? ಎಡಗಡೆಯ ಕಟ್ಟಡದ ಫೋಟೊ ತೆಗೆಯುತ್ತಿದ್ದಂತೇ ಬಲಗಡೆಯ ಸುಂದರ ಕಟ್ಟಡವು ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಂಡುಬಿಟ್ಟ ಹಳಹಳಿ. ಮಾನವ ನಿರ್ಮಿತ ಸೊಬಗನ್ನು ನೋಡಿ ಹೃತ್ಪೂರ್ವಕವಾದ ಮೆಚ್ಚುಗೆ ಸೂಸದೇ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಡೀ ನಗರ ಸೌಂದರ್ಯದಿಂದ ತುಂಬಿದೆ. ಜೊತೆಗೇ "ಇಂಥ ನಗರವನ್ನು, ಬಕಿಂಗಹ್ಯಾಮ್ ಅರಮನೆಯನ್ನು ಕಟ್ಟದೇ ಏನು ಮಾಡುತ್ತಾರೆ? ನಮ್ಮಂಥ ದೇಶಗಳ ಸಂಪತ್ತನ್ನೆಲ್ಲ ಲೂಟಿ ಮಾಡಿ ತಂದು ಇಲ್ಲಿ ಗುಡ್ಡೆ ಹಾಕಿಕೊಂಡಿದ್ದರು!" ಎನ್ನುವ ಅಸಹನೆಯೊಂದು ಎಲ್ಲ ಭಾರತೀಯರ ಬಾಯಲ್ಲಿ ಕೇಳಿಬಂದರೆ ಅದನ್ನೂ ಧಿಕ್ಕಿರಿಸುವಂತಿಲ್ಲ, ಹೊಟ್ಟೆಯೊಳಗಿನ ಸಿಟ್ಟಿನ ಶಬ್ದರೂಪಗಳವು!
ಟಾವರ್ ಆಫ್ ಲಂಡನ್
ವೆಸ್ಟ ಮಿನಿಸ್ಟರ್ ಅಬೆಯಿಂದ ಸೀದಾ ನಾವು ಥೇಮ್ಸ್ ನದಿಯ ಉತ್ತರ ದಡದಲ್ಲಿರುವ ಟಾವರ್ ಆಫ್ ಲಂಡನ್ ಗೆ ಹೋದೆವು. ಟಾವರ್ ಆಫ್ ಲಂಡನ್ ಒಂದು ದೊಡ್ಡ ಕ್ಯಾಸಲ್. ಹನ್ನೊಂದನೇ ಶತಮಾನದಲ್ಲೇ ಕಟ್ಟಲಾದ ಈ ಕ್ಯಾಸಲಗೆ ನಂತರ ಅನೇಕ ಸೇರ್ಪಡೆಗಳು, ರಿಪೇರಿಗಳು ಆಗಿವೆಯಂತೆ. ವೈಟ್ ಟಾವರ್ ಎನ್ನುವ ಮುಖ್ಯ ಕಟ್ಟಡದಿಂದಾಗಿ ಈ ಕ್ಯಾಸಲ್ಲಿಗೆ ಟಾವರ್ ಆಫ್ ಲಂಡನ್ ಎನ್ನುವ ಹೆಸರು ಬಂದಿದೆಯಂತೆ. ಮುಖ್ಯ ದ್ವಾರದಿಂದ ಒಳಗಡೆ ಹೋದನಂತರ ಒಂದು ಸುತ್ತು ಇಡೀ ಕ್ಯಾಸಲ್ಲಿನ ಹೊರಾವರಣವನ್ನು ತಿರುಗಿದೆವು. ಅರಮನೆಯನ್ನು ಕಾಯುವ ಕಾವಲುಗಾರರು ಅಲುಗಾಡದೇ ಬೊಂಬೆಗಳಂತೆ ನಿಂತಿದ್ದರು. ಒಂದು ನಿರ್ಧಿಷ್ಟ ಸಮಯಕ್ಕೆ ತಾವು ನಿಂತಲ್ಲಿಂದ ಸ್ವಲ್ಪ ದೂರ ಮಾರ್ಚ ಮಾಡಿ ಮತ್ತೆ ಬೊಂಬೆಗಳಾದರು. ಒಂದು ಕಡೆ ಚಿತ್ರ ಬರೆದಿಟ್ಟಂಥ ಸುಂದರವಾದ ಕಟ್ಟಡಗಳು. ಇನ್ನೊಂದು ಬದಿಗೆ ವಾಟರ್ ಗೇಟ್ ಇದೆ. ತೀವ್ರ ಅಪರಾಧ ಮಾಡಿದ ಕೈದಿಗಳು, ರಾಜಕೀಯ ದ್ರೋಹಿಗಳನ್ನು ಈ ಜಲಮಾರ್ಗದಿಂದ ಕೋಟೆಯೊಳಕ್ಕೆ ಕರೆತರಲಾಗುತ್ತಿತ್ತು ಮತ್ತು ವಿಚಾರಣೆಯ ನಂತರ ಇಲ್ಲಿಯೇ ಅವರಿಗೆ ಶಿಕ್ಷೆಯನ್ನೂ ನೀಡಲಾಗುತ್ತಿತ್ತು. ನೀರು ಹರಿಯುತ್ತಿರುವ ಈ ಜಲಮಾರ್ಗಕ್ಕೆ ಕೋಟೆಯನ್ನು ಪ್ರವೇಶಿಸಲು ಒಂದು ಗೇಟ್ ಇದೆ. ಶತಮಾನಗಳಿಂದ ಹರಿಯುತ್ತಿರುವ ಈ ನೀರಿನಲ್ಲಿ ರಕ್ತ ಮತ್ತು ಕಣ್ಣೀರಿನ ಕಲೆಗಳೇನಾದರೂ ಉಳಿದಿವೆಯೋ ನೋಡಬೇಕೆನಿಸುತ್ತದೆ. ಒಳಗಡೆ ಕೊಹಿನೂರ ವಜ್ರದ ಕಿರೀಟವಿರುವ ಮ್ಯೂಸಿಯಂ ಇದೆ. ಮ್ಯೂಸಿಯಂಗೆ ಹೋಗಲು ಕ್ಯೂನಲ್ಲಿ ಕಾಯುತ್ತಿದ್ದಾಗ ಒಬ್ಬ ಕಲಾವಿದೆ ಎತ್ತರದ ಗ್ಯಾಲರಿ ಒಂದರಿಂದ ಏನೇನೋ ಕೂಗುತ್ತ ಕೆಳಗಿಳಿದು ಓಡಿದಳು. ಅವಳ ಚೀರಾಟಕ್ಕೆ ಅಲ್ಲೆಲ್ಲೋ ದೂರ ಲಾನ್ಮೇಲೆ ನಿಂತಿರುವ ಇನ್ನೊಬ್ಬ ಕಲಾವಿದ ಉತ್ತರಿಸುವಂತೆ ಕೂಗುತ್ತಿದ್ದ. ನಟಿಯು ಗತಕಾಲದ ರಾಣಿಯ ಪೋಷಾಕಿನಲ್ಲಿದ್ದಂತೆ ಅನಿಸಿತು. ನಾಟಕಪ್ರಿಯರಾದ ಬ್ರಿಟಿಷರು ವಿವಿಧ ರೀತಿಯ ರಂಗಪ್ರಯೋಗಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಯಾವುದೋ ಒಂದು ನಾಟಕದ ಪ್ರಯೋಗವನ್ನು ಹೀಗೆ ಓಪನ್ ಥೇಟರನಂತೆ ಮಾಡುತ್ತಿರಬೇಕೆಂದುಕೊಂಡೆ. ನಂತರ ಅಂತರ್ಜಾಲದಲ್ಲಿ ಜಾಲಾಡಿದಾಗ ತಿಳಿದ ವಿಷಯವೆಂದರೆ ಪ್ರವಾಸಿಗಳನ್ನು ರಂಜಿಸುವುದಕ್ಕಾಗಿ ಹದಿನಾರನೇ ಶತಮಾನದ ಪ್ರಭಾವಿ ರಾಣಿ ಆ್ಯನ್ ಬೋಲಿನ್ ಳ ನಾಟಕವನ್ನು ಹೀಗೆ ಬಯಲಿನಲ್ಲಿ ಆಡಲಾಗುತ್ತದಂತೆ. ಇಂಗ್ಲೆಂಡಿನ ದೊರೆ ಎಂಟನೇ ಹೆನ್ರಿ ಆ್ಯನ್ ಬೊಲಿನಳನ್ನು ಮದುವೆಯಾಗುವುದಕ್ಕಾಗಿ ತನ್ನ ಮೊದಲ ರಾಣಿಯಿಂದ ವಿಚ್ಛೇದನೆ ಪಡೆಯಲು ಬಯಸುತ್ತಾನೆ. ಆದರೆ ರೋಮನ್ ಚರ್ಚು ಇದಕ್ಕೆ ಸಮ್ಮತಿ ನೀಡುವುದಿಲ್ಲ. ಹಾಗಾಗಿ ಹೆನ್ರಿ ರೋಮನ್ ಚರ್ಚಿನ ಪಾರಮ್ಯವನ್ನು ಕಿತ್ತೊಗೆದು ಇಂಗ್ಲೆಂಡಿನಲ್ಲಿ ಬೇರೆಯೇ ಚರ್ಚನ್ನು ಮತ್ತು ನಿಯಮಾವಳಿಗಳನ್ನು ಪ್ರಾರಂಭಿಸುತ್ತಾನೆ ಮತ್ತು ಆ್ಯನ್ ಬೊಲಿನಳನ್ನು ಮದುವೆಯಾಗುತ್ತಾನೆ. ಆದರೆ ಅವಳಿಂದ ಹೆಣ್ಣುಮಗುವಾದಾಗ ನಿರಾಶನಾದ ಹೆನ್ರಿ ಮತ್ತೊಬ್ಬಳನ್ನು ವಿವಾಹ ಮಾಡಿಕೊಳ್ಳಲು ನಿಶ್ಚಯಿಸುತ್ತಾನೆ. ಮತ್ತು ರಾಜದ್ರೋಹದ ಅಪವಾದ ಹೊರಿಸಿ ಆ್ಯನ್ಳನ್ನು ಈ ಟಾವರ್ ಆಫ್ ಲಂಡನ್ ಕ್ಯಾಸಲನಲ್ಲಿ ವಿಚಾರಣೆಗೊಳಪಡಿಸಿ ಅವಳ ತಲೆಯನ್ನು ಕಡಿಸುತ್ತಾನೆ. ಹೀಗೆ ದುರಂತ ಸಾವಿಗೀಡಾದ ಆ್ಯನ್ ಬೊಲಿನ್ ತನ್ನ ಕಡಿದ ರುಂಡವನ್ನು ತನ್ನ ತೋಳುಗಳಡಿಯಲ್ಲಿ ಇಟ್ಟುಕೊಂಡು ರಾತ್ರಿಯ ಹೊತ್ತು ಕೋಟೆಯಲ್ಲಿ ಗಸ್ತು ತಿರುಗುತ್ತಾಳೆಂದು ಪ್ರತೀತಿಯಿದೆ. ಒಂದಂತೂ ನಿಜ, ಇಡೀ ಕ್ಯಾಸಲನಲ್ಲಿ ಸುತ್ತಾಡುವಾಗ ಅದೊಂದು ನಿಗೂಢ ರಹಸ್ಯಗಳ, ಕ್ರೌರ್ಯ, ಕೊಲೆ, ರಾಜದ್ರೋಹ, ಅವಿಶ್ವಾಸಗಳ ಹಾಂಟೆಡ್ ಕಟ್ಟಡ ಎನಿಸದೇ ಇರುವುದಿಲ್ಲ. ಎಷ್ಟೊಂದು ರಕ್ತದ ಕಣ್ಣೀರು ಅಲ್ಲಿ ಹರಿದಿದೆಯೋ, ಎಷ್ಟೊಂದು ಅತೃಪ್ತ ಆತ್ಮಗಳ ನರಳಿಕೆಯಿಂದ ಕಂಗೆಟ್ಟಿದೆಯೋ! ಇಂಥ ಕಥೆಗಳ ಬಗ್ಗೆ, ಜಾಗಗಳ ಬಗ್ಗೆ ಕಥೆ, ಸಿನೆಮಾಗಳಲ್ಲಷ್ಟೇ ನೋಡಿ ಕೇಳಿ ತಿಳಿದಿದ್ದ ನಮಗೆ ಇದೊಂದು ಅಪರೂಪದ ಮೈ ಜುಂ ಎನಿಸುವ ಅನುಭವ.
ಮ್ಯೂಸಿಯಂನ ಒಳಗಡೆ ಬ್ರಿಟಿಷ್ ರಾಜಮನೆತನದ ಇತಿಹಾಸವನ್ನು ಪರದೆಯ ಮೇಲೆ ತೋರಿಸುವ ವ್ಯವಸ್ಥೆ ಇದೆ. ಮೂರು ಪರದೆಗಳ ಮೇಲೆ ಸತತವಾಗಿ ಪ್ರದರ್ಶನಗೊಳ್ಳುವ ಡಾಕ್ಯೂಮೆಂಟರಿಯನ್ನು ನೋಡಿ ನಾವು ರಾಯಲ್ ಫ್ಯಾಮಿಲಿಯ ಕಿರೀಟಗಳು ಮತ್ತಿತರ ಅರಸೊತ್ತಿಗೆಯ ಪ್ರತೀಕಗಳಾದ ವಸ್ತುಗಳನ್ನು ಇಡಲಾದ ಸಂಗ್ರಹಾಲಯಕ್ಕೆ ಬಂದೆವು. ಕತ್ತಲೆಯ ಕೋಣೆಯೊಳಗೆ ಮಂದ ಬೆಳಕನ್ನು ಬೀರುವ ಲೈಟುಗಳಡಿಯಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಇಡಲಾದ ರತ್ನಖಚಿತ ಕಿರೀಟಗಳು ತುಂಬ ಸೊಗಸಾಗಿವೆ. ಪ್ರತೀ ರಾಜ ಅಥವಾ ರಾಣಿಯ ಪಟ್ಟಾಭಿಷೇಕದ ಸಮಯದಲ್ಲಿ ತಯಾರಿಸಲಾದ ವಿಶೇಷವಾದ ಕಿರೀಟಗಳು ತುಂಬ ಬೆಲೆಬಾಳುವ ನಾನಾ ಬಗೆಯ ರತ್ನಗಳಿಂದ ತಮ್ಮದೇ ಆದ ಕಾಂತಿಯನ್ನು ಪಸರಿಸಿವೆ. ತುಂಬ ರಾಯಲ್ ಆಗಿವೆ. ಕೊಹಿನೂರ ವಜ್ರವನ್ನು ಅಡಕಗೊಳಿಸಿ ತಯಾರಿಸಲಾದ ಕಿರೀಟವಂತೂ ಎಲ್ಲ ಕಿರೀಟಗಳಿಗಿಂತ ಶ್ರೇಷ್ಠ ಮತ್ತು ಸುಂದರವಾಗಿದೆ. "ಅದು ನಮ್ಮದು, ಅದು ನಮ್ಮದು" ಎನ್ನುವ ವಿಚಿತ್ರ ಭಾವ ಭಾರತೀಯರಾದ ನಮ್ಮನ್ನು ಕಾಡದೇ ಬಿಡುವುದಿಲ್ಲ. ಆದರೆ ಉಡುಗೊರೆ ಕೊಟ್ಟಮೇಲೆ ಅದರ ಮೇಲೆ ನಮಗ್ಯಾವ ಹಕ್ಕೂ ಇಲ್ಲ ಎಂದು ಪ್ರಥಮ ಬಾರಿಗೆ ನನಗಲ್ಲಿ ಕೊಹಿನೂರ್ ವಜ್ರವನ್ನು ನೋಡುತ್ತಿದ್ದಾಗಲೇ ಅನಿಸಿಬಿಟ್ಟಿತು. ಕನ್ವೇಯರ್ ಬೆಲ್ಟ ಮೇಲೆ ಸಾಗುತ್ತಾ ಅವನ್ನೆಲ್ಲ ನೋಡಬೇಕಿರುವುದರಿಂದ ಹೆಚ್ಚು ಹೊತ್ತು ಅದನ್ನೇ ನೋಡುತ್ತ ನಿಲ್ಲಲು ಆಸ್ಪದವಿಲ್ಲ. ಒಂದು ಸಲ ನೋಡಿ ಕಣ್ಮನಗಳು ತೃಪ್ತವಾಗದ್ದರಿಂದ ಮತ್ತೆ ಹಿಂದಕ್ಕೆ ಹೋಗಿ ಮತ್ತೊಮ್ಮೆ ಬೆಲ್ಟ ಮೇಲೆ ಸಾಗಿ ಕೊಹಿನೂರನ್ನು ಕಣ್ತುಂಬಿಕೊಂಡೆವು.
ಕ್ಯಾಸಲನಿಂದ ಹೊರಬಂದ ಮೇಲೆ ನಮ್ಮ ದೃಷ್ಟಿ ಅಲ್ಲಿಂದ ಅತ್ಯಂತ ಮನೋಹರವಾಗಿ ಕಾಣುವ ಟಾವರ್ ಬ್ರಿಜ್ ಮೇಲೆ ಬಿತ್ತು. ಟಾವರ್ ಆಫ್ ಲಂಡನ್ ನ ಹತ್ತಿರವೇ ಇರುವ ಇದು ಟಾವರ್ ಬ್ರಿಜ್ ಆದರೂ ಜನರ ಬಾಯಲ್ಲಿ ಇದೇ ಲಂಡನ್ ಬ್ರಿಜ್ ಎಂದು ನೆಲೆನಿಂತು ಬಿಟ್ಟಿದೆ. "ಲಂಡನ್ ಬ್ರಿಜ ಇಸ್ ಫಾಲಿಂಗ ಡೌನ್" ರೈಮ್ ಗೊತ್ತಿರುವ ಎಲ್ಲರಿಗೂ ಬ್ರಿಜ್ ಹೇಗೆ ಬೀಳುತ್ತದೆನ್ನುವ ಕುತೂಹಲ ಚಿಕ್ಕ ವಯಸ್ಸಿಗಾದರೂ ಇದ್ದೇ ಇರುತ್ತದೆ. ಹಿಂದೆ ದೊಡ್ಡ ಹಡಗುಗಳು ಥೇಮ್ಸ ನದಿಯ ಮೂಲಕ ಲಂಡನ್ ಶಹರವನ್ನು ಪ್ರವೇಶಿಸುವಾಗ ಬ್ರಿಜ್ಜು ಇಬ್ಭಾಗವಾಗಿ ತೆರೆದುಕೊಂಡು ಎತ್ತರದ ಹಡಗುಗಳಿಗೆ ದಾಟಲು ಅನುವು ಮಾಡಿಕೊಡುತ್ತಿತ್ತಂತೆ. ಈಗ ಆ ಪ್ರಮೇಯವಿಲ್ಲ. ಆದರೆ ಮಧ್ಯದ ಜೋಡಣೆ ನಮಗೆ ಕಾಣಿಸುತ್ತದೆ. ಲಂಡನ್ ಬ್ರಿಜ್ಜಿನ ಹಿನ್ನೆಲೆಯಲ್ಲಿ ಫೋಟೊ ತೆಗೆಸಿಕೊಳ್ಳುವ ಸಂಭ್ರಮದಲ್ಲಿ ಪ್ರವಾಸಿಗರಿದ್ದರು. ನಾವೂ ಫೋಟೊ ತೆಗೆಸಿಕೊಂಡೆವು. ಈ ಲಂಡನ್ ಬ್ರಿಜ್ ನಾವೆಲ್ಲ ಲಂಡನ್ನಿಗೆ ಹೋಗಿ ಬಂದದ್ದಕ್ಕೆ ಸಾಕ್ಷಿ ನೀಡಿ ಸರ್ಟಿಫಿಕೇಟ್ ನೀಡುತ್ತದೆ.
ಮೊದಲ ದಿನದ ಲಂಡನ್ ಸಿಟಿ ಟೂರನಿಂದ ಮನಸ್ಸು ಉಲ್ಲಾಸಗೊಂಡಿತ್ತು. ನಮ್ಮ ಕಲ್ಪನೆ ಮತ್ತು ಕನಸುಗಳಿಗಿಂತಲೂ ಇದು ಹೆಚ್ಚು ಸುಂದರವಾಗಿದೆ, ಗೂಢವಾಗಿದೆ ಎಂದುಕೊಳ್ಳುತ್ತ ರಾತ್ರಿಯ ಊಟಕ್ಕೆ ನಡೆದೆವು. "ಮಂತ್ರಾ" ಎಂಬ ಇಂಡಿಯನ್ ರೆಸ್ಟೊರೆಂಟಿನ ಪ್ರವೇಶದ್ವಾರದ ಎಡಕ್ಕೆ ತಿರುಗಿದರೆ ಲೈಫ್-ಸೈಜ್ ಪೇಂಟಿಂಗನಲ್ಲಿ ಎಲ್ಲ ಗತ್ತಿನೊಂದಿಗೆ ವಿರಾಜಮಾನರಾದ ನಮ್ಮ ಶಿವಾಜಿ ಮಹಾರಾಜರು ಭವ್ಯ ಸ್ವಾಗತ ನೀಡಿದರು. ಅದರೊಂದಿಗೆ ಒಮ್ಮಿಲೇ ಇಂಡಿಯನ್ ಮೂಡಿಗೆ ತಳ್ಳಲ್ಪಟ್ಟ ನಾವು ಇಂಡಿಯನ್ ಡಿನ್ನರ್ ಸವಿಯಲು ಮನಸ್ಸನ್ನು ಹದಗೊಳಿಸಿಕೊಂಡೆವು. ರುಚಿಯಾದ ಭಾರತೀಯ ಊಟ ನಾಲಿಗೆಯ ರುಚಿಗ್ರಂಥಿಗಳನ್ನು ಉತ್ತೇಜಿಸಿ ರಸದೌತಣ ನೀಡಿ ದಣಿದ ದೇಹ ಮತ್ತು ಮನಸ್ಸಿಗೆ ಹಾಯೆನಿಸುವಂಥ ನಿರಾಳವುಂಟಾಯ್ತು.
********************
ನೀತಾ. ರಾವ್.
ಟಾವರ್ ಆಫ್ ಲಂಡನ್ ನ ಒಳಾವರಣದಲ್ಲಿ
ಟಾವರ್ ಆಫ್ ಲಂಡನ್ ನ ಒಳಾವರಣ
ಲಂಡನ್ ಬ್ರಿಜ್ (ಟಾವರ್ ಬ್ರಿಜ್)



Short and sweet 😇
ReplyDeleteFelt like in a tour again . Very good.👍👍
ReplyDeleteThank you.
Delete