ಪ್ರಿಯ ಸಂಪಾದಕರೇ! (?)
ಈ ಪತ್ರಿಕೆಗಳ ಸಂಪಾದಕರಿಗೂ, ಕಥೆ, ಕವನ, ಪ್ರಬಂಧ ಎಂದು ಸಣ್ಣಪುಟ್ಟ ಬರಹಗಳನ್ನು ಮೇಲಿಂದ ಮೇಲೆ ಬರೆಬರೆದು ಎಸೆಯುವ ಲೇಖಕರಿಗೂ ಒಂಥರಾ ಗಂಡ-ಹೆಂಡರ ಸಂಬಂಧ. ಒಳಗೊಳಗೇ ಸಿಟ್ಟು, ಉರಿ, ದ್ವೇಷ ಎಲ್ಲ, ಹೊರಗಡೆ ಮಾತ್ರ ಕುಲುಕುಲು. ಇವರನ್ನು ಬಿಟ್ಟರೆ ಅವರ ಪುಟಗಳು ತುಂಬುವುದಿಲ್ಲ, ಅವರನ್ನು ಬಿಟ್ಟರೆ ಇವರ ಬರಹಗಳಿಗೆ ಮೋಕ್ಷವಿಲ್ಲ, ಅಂಥಾ ಪರಿಸ್ಥಿತಿ.
ಉದಯೋನ್ಮುಖ ಲೇಖಕರು ಅಂತ ಇರುತ್ತಾರಲ್ಲ, ಹಾಗೆಂದರೆ ಅವರು ತೀರಾ ಚಿಕ್ಕ ವಯಸ್ಸಿನವರೇ ಇರಬೇಕೆಂದೇನೂ ಇಲ್ಲ. ಐವತ್ತು ಅರವತ್ತು ವರ್ಷಗಳಾದರೂ ಉದಯೋನ್ಮುಖರಾಗಿಯೇ ಉಳಿದ ನೂರಾರು ಲೇಖಕರು ತಮ್ಮ ಲೇಖನಗಳನ್ನು ಬರೆದು ಉದ್ದನೆಯ ಹಾಳೆಗಳ ಮೇಲೆ ಅವುಗಳ ಫೇರ್
ಕಾಪಿ ಮಾಡಿ, ಎರೆಡೆರೆಡು ಬಾರಿ ತಾವೇ ಅವನ್ನು ಓದಿ 'ಈ ಸಲ ಚೆನ್ನಾಗಿ ಆಗಿದೆ, ಸಂಪಾದಕ ಸ್ವೀಕೃತಿ ಪತ್ರ ಕಳಿಸಲೇಬೇಕು' ಎನ್ನುವ ಬತ್ತದ ಆಶಾಭಾವದಿಂದ ಅವನ್ನು ಲಕೋಟೆಯೊಳಗೆ ಹಾಕಿ ಅಂಚೆಚೀಟಿ ಹಚ್ಚಿ ಇಲ್ಲಿಂದ ಎಸೆದರೆಂದರೆ ಮನಸ್ಸೆಂಬುದು 'ಐ ಲವ್ ಯೂ' ಅಂತ ಪ್ರೀತಿಸಿದವಳಿಗೆ/ನಿಗೆ ಬರೆದು ಉತ್ತರ ಏನು ಬರಬಹುದೋ ಎಂದು ಕಾಯುತ್ತ ಕುಳಿತ ಪ್ರೇಮಿಯಂತೆ ವಿಲವಿಲ ಒದ್ದಾಡುತ್ತಿರುತ್ತದೆ. ಆದರೆ ಆ ಕಡೆಯಿಂದ ಸುದ್ದಿಯೇ ಇರುವುದಿಲ್ಲ. ಹಾಗಂತ ಆ ಲೇಖನವೇನು ಸಂಪಾದಕರ ಕಸದ ಬುಟ್ಟಿಗೆ ಬಿತ್ತೋ, ಅಥವಾ ಲಕೋಟೆಗಿನ್ನೂ ತೆರೆಸಿಕೊಳ್ಳುವ ಭಾಗ್ಯವೇ ಒದಗಿಬರಲಿಲ್ಲವೋ ಒಂದೂ ತಿಳಿಯುವುದಿಲ್ಲ. ಫೋನು ಮಾಡಿ ಕೇಳಲೂ ಅವಕಾಶವಿರುವುದಿಲ್ಲ. ಒಮ್ಮೆ ನಿಮ್ಮ ಲೇಖನ ನಿಮ್ಮ ಕೈಬಿಟ್ಟಿತೆಂದರೆ ಅದರ ಸಂಪೂರ್ಣ ಅಧಿಕಾರವನ್ನು ಸಂಪಾದಕರಿಗೆ ಕೊಟ್ಟು ಕೈತೊಳೆದುಕೊಂಡ ಹಾಗೆಯೇ! 'ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು' ಎಂದು ದೀನರಾಗಿ ದೇವರಲ್ಲಿ ಮೊರೆಯಿಟ್ಟ ಹಾಗೆ 'ದಿನಪತ್ರಿಕೆಯಲ್ಲಾದರೂ ಹಾಕು, ವಾರಪತ್ರಿಕೆಯಲ್ಲಾದರೂ ಹಾಕು' ಎಂದು ದೈನೇಸಿ ಪಡುವ ಪಾಡು ಲೇಖಕನದ್ದು.
ನನಗೂ ಬರೆಯುವ ವಿಚಿತ್ರ ಖಯಾಲಿ ಇರುವುದರಿಂದ, ಮತ್ತು ಈ ಬರೆದದ್ದೆಲ್ಲವನ್ನೂ ಇತರರು ಓದಲಿ ಎಂಬ ವಿಪರೀತ ಆಸೆಬುರುಕತನಕ್ಕೆ ಬಿದ್ದದ್ದರಿಂದ ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುತ್ತಿರುತ್ತೇನೆ. ಒಮ್ಮೆ ನನ್ನ ಡೈರಿಯಲ್ಲಿ ತೋಚಿದಂತೆ ಗೀಚುತ್ತ ಹೋಗುವುದು, ಆನಂತರ ಅದನ್ನು ಉದ್ದದ ರೂಲ್ಡ್ ಹಾಳೆಗಳ ಮೇಲೆ ದುಂಡಾದ ಅಕ್ಷರಗಳಲ್ಲಿ ಕಾಪಿ ಮಾಡುವುದು. ಹಾಗೆ ಕಾಪಿ ಮಾಡುವಾಗಲೇ ಲೇಖನವನ್ನು ಒಂದಿಷ್ಟು ತಿದ್ದುವುದು, ಇನ್ನೊಂದೆರೆಡು ಲೈನುಗಳನ್ನು ಸೇರಿಸುವುದು, ಒಂದೆರಡನ್ನು ಕೈಬಿಡುವುದು ಎಲ್ಲಾ ಸರ್ಕಸ್ ಮಾಡಿ ಕವರಿಗೆ ಹಾಕಿ, ಸ್ವೀಕೃತವಾಗದಿದ್ದಲ್ಲಿ ವಾಪಸ್ಸಾದರೂ ಬರಲಿ ಎಂದು ಕವರಿನೊಳಗೊಂದು ಸ್ವವಿಳಾಸದ ಕವರನ್ನಿಟ್ಟು ಅದಕ್ಕೆ ಸಾಕಷ್ಟು ಅಂಚೆಚೀಟಿಗಳನ್ನು ಅಂಟಿಸಿ ಕಳಿಸುತ್ತಿದ್ದೆ. (ಇದೆಲ್ಲ ಕಂಪ್ಯೂಟರ್ ಎಂಬ ಅದ್ಭುತ ಬರುವುದಕ್ಕೆ ಮೊದಲು) ನಂತರ ಈಗ ಸಂಪಾದಕರಿಂದ ಉತ್ತರ ಬರಬಹುದು, ಆಗ ಬರಬಹುದು ಎಂದು ಕಾಯುತ್ತ ಕೂಡುವುದು. ಒಂದಷ್ಟು ದಿನಗಳ ನಂತರ ನನ್ನದೇ ಹ್ಯಾಂಡರೈಟಿಂಗ್ ಇರುವ ದಪ್ಪ ಕವರು ಮನೆಗೆ ಬಂತೆಂದರೆ ದುಃಖ ಉಮ್ಮಳಿಸಿ ಬಂದು ಕಣ್ಣೀರಾಗಿ ಹರಿಯುವುದು. ನನ್ನ ಸೋಲಿನ ದ್ಯೋತಕವಾದ ಈ ಕಣ್ಣೀರು ಯಾರಿಗೂ ಕಾಣದಿರಲೆಂದು ನಾನು ಕದ್ದು ಮುಚ್ಚಿ ಅಳುವುದು ಮತ್ತು ಸದ್ದಿಲ್ಲದೇ ಕವರನ್ನು ಎತ್ತಿಟ್ಟುಕೊಂಡು ಬಿಡುವುದು. ಎಲ್ಲ ಸುಮಾರು ವರ್ಷಗಳು ನಡೆಯಿತು. ಅಂಥದ್ದರಲ್ಲೇ ಒಂದೆರೆಡು ಲೇಖನಗಳು ಪತ್ರಿಕೆಗಳಲ್ಲಿ ಬಿಡುಗಡೆಯ ಭಾಗ್ಯ ಕಂಡು ಸುಖದ ಕಣ್ಣೀರು ಕೆನ್ನೆಗಿಳಿದವು.
ಇದೀಗ ಈ ಲೇಖನಗಳನ್ನು ಅಂಚೆಯ ಮುಖಾಂತರ ಕಳಿಸುವ ತಾಪತ್ರಯವೂ ಇಲ್ಲ. ಕಂಪ್ಯೂಟರ್
ಮೇಲೆ ನುಡಿ ಅಥವಾ ಬರಹ ಯಾವುದಾದರೂ ಫಾಂಟನಲ್ಲಿ ಟೈಪಿಸಿಕೊಂಡು ಇಟ್ಟುಕೊಂಡರೆ ಮುಗಿಯಿತು. ಒಂದೇ ಸಲಕ್ಕೆ ಹತ್ತು ಪತ್ರಿಕೆಗಳಿಗೂ ಶೂಟ್ ಮಾಡಿಬಿಡಬಹುದು, ಯಾರು ಸ್ವೀಕರಿಸಿ ಪ್ರಕಟಿಸುತ್ತಾರೋ ಪ್ರಕಟಿಸಲಿ ಎಂದು. ಒಬ್ಬರು ಸ್ವೀಕೃತಿ ಮೆಸ್ಸೇಜು ಕಳಿಸಿದ ನಂತರ ನಾವೇ ಉಳಿದ ಒಂಬತ್ತು ಸಂಪಾದಕರಿಗೆ "ನನ್ನ ಲೇಖನವು ಈಗಾಗಲೇ ಇಂಥ ಪತ್ರಿಕೆಯವರು ಪ್ರಕಟನೆಗೆ ಸ್ವೀಕರಿಸಿರುವುದರಿಂದ ತಾವು ದಯವಿಟ್ಟು ಈ ಲೇಖನವನ್ನು ಪ್ರಕಟಿಸಬಾರದೆಂದು ತಿಳಿಸಲು ವಿಷಾದಿಸುತ್ತೇನೆ" ಎಂದು ಮತ್ತೊಂದು ಇ-ಮೇಲನ್ನು ಒಗೆದುಬಿಡುವುದು. 'ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎನ್ನುವುದು ಸುಳ್ಳೇ ಮತ್ತೆ? ಆಗ ಅವರ ಕಾಲವಿತ್ತು, ಮೆರೆದಾಡಿದರು, ಈಗ ನಮ್ಮ ಕಾಲ, ನಾವು ಮೆರೆದಾಡುವುದು, ಗಂಡ ವಯಸ್ಸಾಗಿ ಕೈಕಾಲು ಹರಿದಾಡುವುದು ನಿಂತ ಮೇಲೆ ಹಾರಾಡುವ ಹೆಂಡತಿಯಂತೆ!
ಇಷ್ಟೆಲ್ಲ ಕಾಲ ಬದಲಾಗಿದೆಯೆಂದರೂ, ಯಾರೂ ನಿಮ್ಮ ಲೇಖನಗಳನ್ನು, ಕವನಗಳನ್ನು ಸ್ವೀಕರಿಸುವ ಕೃಪೆ ತೋರಲಿಲ್ಲವೋ, ಅಂಥವರಿಗಾಗಿಯೇ ಫೇಸಬುಕ್ಕು, ವಾಟ್ಸ್ಯಾಪು, ಬ್ಲಾಗು, ವರ್ಡಪ್ರೆಸ್ಸು ಮುಂತಾದವುಗಳು ಜನ್ಮ ತಳೆದಿವೆ. ನಮ್ಮೆಲ್ಲ ಹುಚ್ಚು, ಹವ್ಯಾಸಗಳಿಗೆ ವೇದಿಕೆ ಒದಗಿಸುವುದಕ್ಕಾಗಿಯೇ ಉದ್ಭವವಾಗಿರುವ ತಂತ್ರಜ್ಞಾನದ ಈ ಹೊಸ ಅವಿಷ್ಕಾರಗಳಿಂದ ಪತ್ರಿಕೆಗಳಿಗೆ ಅಸ್ಪøಷ್ಯರಾಗಿಯೇ ಉಳಿದ ಅನೇಕ ಬರಹಗಾರರ ಕೃತಿಗಳಿಗೊಂದು ಗತಿ ಕಾಣಿಸುವ ಸಮಯ ಒದಗಿ ಬಂದಿದೆ. ನಿಮ್ಮ ನಿಮ್ಮ ಸ್ನೇಹಿತರು, ಬಂಧು-ಬಳಗದವರು ಫ್ರೆಂಡಾಗಿರುವ ಈ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಲೇಖನಗಳನ್ನು ಹರಿಬಿಟ್ಟಿರೋ ತಾಸೆರಡು ತಾಸಿನಲ್ಲಿ ಅವರು ನಿಮ್ಮ ಮನಸ್ಸು ಮುರಿಯಲಾರದೇ ನೂರಿನ್ನೂರು ಲೈಕುಗಳನ್ನು ಕುಟ್ಟುತ್ತಾರೆ. ಗುರುತು-ಪರಿಚಯ ಇಲ್ಲದವರೂ ಒಮ್ಮೊಮ್ಮೆ ಲೈಕ್ ಮಾಡುವ ದೊಡ್ಡತನ ತೋರಿ ನೋವಿನ ಹೊಳೆಯಲ್ಲಿ ಮುಳುಗುತ್ತಿರುವ ನಮ್ಮನ್ನು ಸಂತಸದ ಹಾಯಿದೋಣಿಯಲ್ಲಿ ಎತ್ತಿಕೂರಿಸಿ ತೇಲಿಸುತ್ತಾರೆ. ಕೆಲವರು ಇನ್ನೊಂದಿಷ್ಟು ತ್ರಾಸು ತೆಗೆದುಕೊಂಡು 'ಒಳ್ಳೆಯ ಲೇಖನ', 'ಚೆನ್ನಾಗಿದೆ', 'ಓದಿ ಖುಶಿಯಾಯ್ತು' ಎಂದೆಲ್ಲ ನಾಲ್ಕೈದಾದರೂ ಕಮೆಂಟುಗಳನ್ನು ಒಗೆಯುತ್ತಾರೆ. ಇದ್ದಷ್ಟು ಸಣ್ಣ ಸರ್ಕಲ್ಲಿನಲ್ಲೇ ಆದರೂ ನೀವು ಲೇಖಕ/ ಲೇಖಕಿ ಅಂತ ಫೇಮಸ್ ಆಗುತ್ತೀರಿ. ಯಾರದ್ದೋ ಮದುವೆಗೋ, ಮುಂಜಿವೆಗೋ, ಕುಬುಸಕ್ಕೋ ನೀವು ಹೋದಾಗ ನಾಲ್ಕೈದು ಜನ ನಿಮ್ಮನ್ನು ಗುರುತಿಸಿ, "ಓ ಮೇಡಮ್ ಭಾಳ ಛೊಲೊ ಬರೀತಿರಿ, ನಾವು ತಪ್ಪದ ಓದ್ತೇವಿ ನಿಮ್ಮ ಲೇಖನಾ" ಅಂತಂದು ಆಗಲೇ ಸಣ್ಣಗೇ ಮೂಡಿರುವ ಕೋಡುಗಳಿಗೆ ಗುಲಾಬಿ ರಿಬ್ಬನ್ನು ಕಟ್ಟಿ ಜಾತ್ರೆಯಲ್ಲಿ ಓಡಲು ಸ್ಫೂರ್ತಿ ತುಂಬುತ್ತಾರೆ. ವಾಟ್ಸ್ಯಾಪಿನ ಹತ್ತೆಂಟು ಗ್ರೂಪಗಳಲ್ಲಿ ನೀವೊಬ್ಬರು ಲೇಖಕ/ಲೇಖಕಿ ಎಂದು ಪ್ರಸಿದ್ಧರಾಗುತ್ತೀರಿ.
ಈ ಮಧ್ಯೆ ಪದೆಪದೆ ಹೋಗುವ ನಿಮ್ಮ ಮೇಲ್ ಗಳಿಗೆ ಬೇಸತ್ತ ಆ ಸಂಪಾದಕನೆಂಬ ಗಂಡನಿಗೂ ಯಾವುದೋ ಒಂದು ವೀಕ್ ಗಳಿಗೆಯಲ್ಲಿ ನಿಮ್ಮ ಮೇಲೆ ಕರುಣೆಯುಕ್ಕಿ "ಇರಲಿ, ಇಷ್ಟೊಂದು ಕಳಿಸುತ್ತಾಳೆ, ಇದೊಂದು ಪ್ರಕಟಿಸಿಬಿಡೋಣ" ಎಂದು ಅವನೂ ಕೃಪೆ ತೋರಿದರೆ ನಿಮಗೆ ಸ್ವರ್ಗ ಮೂರೇ ಗೇಣು. ಅಂತೂ ಅವನ ಮೇಲಿದ್ದ, ಒಳಗೊಳಗೇ ಸೂಪ್ತ ಜ್ವಾಲಾಮುಖಿಯಂತೆ ಕುದಿಯುತ್ತಿದ್ದ ಕೋಪವೆಲ್ಲ ಶಮನಗೊಂಡು ಪ್ರೀತಿ ಉಕ್ಕೇರಿ ಹರಿದು ಜಲಪಾತದಂತೆ ಧುಮ್ಮಿಕ್ಕುತ್ತದೆ. " ಹಂಗೆಲ್ಲಾ ಕಂಡಕಂಡವ್ರ ಲೇಖನಾ ಪ್ರಕಟ ಮಾಡೂದೇ ಇಲ್ಲ ಅವ್ರು, ಲೇಖನದೊಳಗ ಏನಾದ್ರೂ ಘಟ್ಟಿತನಾ, ಸತ್ವ, ಇರಬೇಕಲ್ಲಾ!" ಅಂತ ನೀವೇ ಅವನ ಪತ್ರಿಕೆಯ ಕ್ವಾಲಿಟಿ ಬಗ್ಗೆ ಶರಾ ಬರೆದು, ನಿಮ್ಮ ಲೇಖನದ ಗುಣಮಟ್ಟವೂ ಚೆನ್ನಾಗಿದೆ ಎಂದು ಇನಡೈರೆಕ್ಟಾಗಿ ಎಲ್ಲರ ಮುಂದೆ ಢಣಾಡಂಗುರ ಸಾರಿ ಬಿಡುತ್ತೀರಿ.
ಹೀಗೆ ನಾಲ್ಕೈದು ಲೇಖನಗಳು ಪ್ರಕಟವಾಗಿ, ಅವುಗಳಿಗೆ ಒಂದಿಷ್ಟು ಪ್ರತಿಕ್ರಿಯೆಗಳು ಪತ್ರಿಕೆಗೆ ಬಂದವೆಂದರೆ ಆಗ ನೋಡಿ ಮಜಾ! ಪತ್ರಿಕೆಯ ಸಂಪಾದಕರೇ ನಿಮ್ಮ ಫೋನಿಗೆ ಕರೆ ಮಾಡಿ, ಈ ವಿಷಯದ ಮೇಲೊಂದು ಲೇಖನ ಬರೆದುಕೊಡಿ, ಆ ಹಬ್ಬಕ್ಕೊಂದು ವಿಶೇಷ ಲೇಖನ ಕೊಡಲಿಕ್ಕಾಗುತ್ತಾ ಎಂದು ನಿಮಗೆ ಕೈತುಂಬ ಕೆಲಸ ಕೊಟ್ಟು ನಿಮ್ಮನ್ನು ಗಾಳಿಯಲ್ಲಿ ತೇಲಿಸುತ್ತಾರೆ. ನೀವು ಓದುಗರ ಕಣ್ಣಿಗೂ ಗೋಚರಿಸಲಾರಂಭಿಸುವ ಪವಾಡ ನಡೆಯುತ್ತದೆ. ನಿಮ್ಮ ಊರಲ್ಲಿ ನಡೆಯುವ ಸಣ್ಣಪುಟ್ಟ ಸಭೆ, ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಲು ನಿಮಗೆ ಆಹ್ವಾನಗಳು ಬರಲಾರಂಭಿಸುತ್ತವೆ. ಒಂದೆರಡು ಸಭೆಗಳಿಗೆ ಹೋಗಿ ಪೋಡಿಯಮ್ ಗುದ್ದಿ ಗಟ್ಟಿಯಾಗಿ ಭಾಷಣ ಬಿಗಿದಿರೋ ಮುಗಿಯಿತು, ಯಾರ್ಯಾರನ್ನೋ ಸಂಪರ್ಕಿಸಲು ಪ್ರಯತ್ನಿಸಿ ಸೋತ ಸಂಘ-ಸಂಸ್ಥೆಯವರು, "ಇಷ್ಟ್ಯಾಕ ಒದ್ದಾಡತೀರಿ? ಲೋಕಲ್ ಇದ್ದಾರ ನೋಡ್ರಿ, ಪೇಪರಿನ್ಯಾಗ ಕಥಿ-ಕವನಾ ಬರೀತಿರ್ತಾರ. ಅವರನ್ನ ಕರದು ಫಂಕ್ಷನ್
ಮುಗಿಸಿಬಿಡ್ರೆಪಾ, ಎಷ್ಟು ತಲಿ ಕೆಡಿಸಿಗೋತೀರಿ? ಯಾರ ಬಂದ್ರೂ ಅಷ್ಟ, ಒಂದ ತಾಸು ಏನರೇ ಕೊರಿತಾರ, ಹೋಗ್ತಾರ" ಅಂತ ನಿಮ್ಮನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಮೊದಮೊದಲು ನಿಮಗೂ ಈ ಸಮಾರಂಭಗಳು ಒಳ್ಳೆ ಖುಶಿ ನೀಡುತ್ತವೆ. "ಏನಕೇನ ಪ್ರಕಾರೇಣ, ಪ್ರಸಿದ್ಧೋ ಭವಂತು" ಎನ್ನುವುದು ನಿಮ್ಮ ಮಂತ್ರವಾಗಿರುತ್ತಲ್ಲಾ! ಅಂತೂ ಇಂತೂ ಈ ರೀತಿ ನಿಮ್ಮ ಜನ್ಮ ಸಾರ್ಥಕವಾಯ್ತು ಎನ್ನಿಸಲಿಕ್ಕೆ ಈ ಸಂಪಾದಕನೇ ಕಾರಣ ಎನಿಸಿ ಸಕಾರಣವಾಗಿ ಅವನ ಮೇಲಿನ ಪ್ರೀತಿ ನೂರ್ಮಡಿಸುತ್ತದೆ. ಎಷ್ಟೇ ಕೆಟ್ಟವನಿರಲಿ, ಅವನಿಲ್ಲದೇ ನಿಮಗೆ ಸದ್ಗತಿ ಇಲ್ಲ, ನೀವಿಲ್ಲದೇ ಅವನಿಗೆ ಗತಿಯಿಲ್ಲ. "ನಿಂದು ನಂದು ಜಮಾಸಂಗಿಲ್ಲ, ನಿನ್ನ ಬಿಟ್ಟು ನಡ್ಯಂಗಿಲ್ಲ" ಎಂದು ನಾವು ಹೇಳುತ್ತೇವಲ್ಲ, ಥೇಟ್ ಅದೇ ರೀತಿ ಇದು, ಲೇಖಕ-ಸಂಪಾದಕ ಸಂಬಂಧ!
*************************
ನೀತಾ. ರಾವ್
ಬಹಳ ಚನ್ನಾಗಿದೆ 🙏
ReplyDeleteಥ್ಯಾಂಕ್ಸ್
Deleteಆಹಾ...ಛಂದದ.
ReplyDeleteಥ್ಯಾಂಕ್ಯೂ
Deleteಲೇಖನ ಅರ್ಥಪೂರ್ಣವಾಗಿದೆ
ReplyDeleteಥ್ಯಾಂಕ್ಯೂ ಮೇಡಂ
DeleteNice one ma'am..
ReplyDeleteಥ್ಯಾಂಕ್ಯೂ
Delete