Friday, 2 October 2015

ಹಳೇ ಸಿನಮಾ ಹಳೇ ಥೇಟರ್


ಹಳೇ ಸಿನಮಾ ಹಳೇ ಥೇಟರ್


          ಇಂದಿನ ದಿನಗಳಲ್ಲಿ ಒಂದು ಭಾನುವಾರ ಸಿನೆಮಾ ನೋಡಬೇಕೆಂದು ಟಿ.ವ್ಹಿ. ಮುಂದೆ ಕುಳಿತು, ನಡುನಡುವೆ ಜಾಹಿರಾತುಗಳಿಗಾಗಿ ಕೊಡುವ ಬ್ರೇಕ್ ಗಳಲ್ಲಿ ಮನೆಯವರಿಗೆ ಟೀ, ಕಾಫಿ ಸಮಾರಾಧನೆ ಮಾಡಿ, ಮತ್ತೇನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ನಡುನಡುವೆ ಬಂದು ಕುಳಿತುಕೊಂಡು ನಾಲ್ಕು ತಾಸಿನ ದೀರ್ಘವಾದ ಸಿನೆಮಾ+ಜಾಹಿರಾತುಗಳನ್ನು ನೋಡುವಾಗ ಮಧ್ಯೆ ಮಧ್ಯೆ ಮಕ್ಕಳು, ಮನೆಯವರು ರಿಮೋಟ್ ಕಸಿದುಕೊಂಡು 'ಕ್ರಿಕೆಟ್ ಸ್ಕೋರ್ ಎಷ್ಟಾಯ್ತು ನೋಡಿ ಕೊಟ್ಟುಬಿಡ್ತೀನಿ' ಅಂತ ತಲೆ ಚಿಟ್ಟು ಹಿಡಿಸುವುದು, ಮಧ್ಯೆ ಯಾರೋ ಮನೆಬಾಗಿಲಿಗೇ ಬಂದು ಹಪ್ಪಳ-ಸಂಡಿಗೆ ಬೇಕಾ ಎನ್ನುವುದು, ನಾನು ಅಸಹನೆಯಿಂದಲೇ ಬೇಡ ಬೇಡ ಎಂದು ಬೇಗ ಮಾತು ಮುಗಿಸಲು ಗಡಿಬಿಡಿ ಮಾಡಿದರೂ ಅವನು ವಾರ ಚುಡಿದಾರ ಸೆಟ್ ಕೂಡಾ ತಂದಿದಿನಿ ನೋಡ್ತೀರಾ ಎಂದು ಗೋಗರೆಯುವುದು - ಎಲ್ಲದರ ಮಧ್ಯೆ ಹಾಳು ಸಿನೆಮಾನೂ ಬೇಡ, ಟಿ.ವ್ಹಿ. ಸಹವಾಸಾನೂ ಬೇಡ ಎಂದು ಎದ್ದು ಹೋಗಿ ಬೆಡ್ ರೂಮಿನ ಬಾಗಿಲು ಹಾಕಿ ಮಲಗಿಕೊಂಡು ನಿದ್ರೆಯಿಲ್ಲದೇ ಒದ್ದಾಡುವಾಗ ನಮ್ಮ ಹಳೆಯ ಕಾಲೇಜು ದಿನಗಳ ಸಿನೆಮಾ ನೋಡುವ ಸಂಭ್ರಮದ ಗತವೈಭವ ಕಣ್ಣಿಗೆ ಕಟ್ಟುತ್ತದೆ.
       ಅವು ಎಂಬತ್ತರ ದಶಕದ ಆರಂಭದ ದಿನಗಳು, ನಾವೂ ಆಗಷ್ಟೇ ಶಾಲೆ ಮುಗಿಸಿ ಪಿ.ಯು.ಸಿ.ಗೆ ಕಾಲೇಜು ಕಟ್ಟೆ ಏರಿದವರು. ಬೆಳಗಾವಿಯ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಟಾಕೀಜುಗಳು ತುಂಬಿದ್ದವು. ಮನೆಯ ಹತ್ತಿರವೇ ಎಂಟು-ಹತ್ತು ಥೇಟರುಗಳು. ಒಂದಂತೂ ಮನೆಯ ಹಿತ್ತಲಿನಲ್ಲೇ, ರೇಡಿಯೊ ಥೇಟರ ಅಂತ. ಮನೆಯಿಂದ ನಾಲ್ಕು ಹೆಜ್ಜೆ ನಡೆದರೆ ರಿಟ್ಝ್ ಟಾಕೀಜು. ಮತ್ತೆ ಹುರುಪು, ಕಸುವು ಎರಡೂ ಇದ್ದ ಕಾಲದಲ್ಲಿ ಕಪೀಲ್, ಕೃಷ್ಣಾ, ಬಾಳಕೃಷ್ಣಾ, ಗ್ಲೋಬ್, ರೂಪಾಲಿ, ಅಝಾದ್, ಅರುಣ, ಹೀಗೆ ಯಾವ ಥೇಟರಗಳೂ ದೂರವಲ್ಲ ನಮಗೆ. ಒಂದು ಸಿನೆಮಾ ಬರುವುದಿದೆಯೆಂದರೆ ಅದರ ಕಥೆ ಏನಿರಬಹುದು, ನಾಯಕ-ನಾಯಕಿ ಯಾರು ಯಾರು, ನಿರ್ದೇಶಕ ಯಾರು, ಹಾಡುಗಳನ್ನು ಯಾರು ಯಾರು ಹಾಡಿದ್ದಾರೆ, ಅವು  ಚೆನ್ನಾಗಿವೆಯೇ, ಎಂದೆಲ್ಲಾ ಚರ್ಚೆಯಾಗುತ್ತಿತ್ತು, ಗೆಳತಿಯರ ಮಧ್ಯೆ, ಮುಖ್ಯವಾಗಿ ನಾವಿಬ್ಬರು ಅಕ್ಕ-ತಂಗಿಯರ ಮಧ್ಯೆ. ಆನಂತರ, ಹಾಗಾದರೆ ಸಿನೆಮಾಕ್ಕೆ ಹೋಗುವುದೋ ಬೇಡವೋ ಎಂದು ಡಿಸೈಡ್ ಮಾಡಿ ಕಾಲೇಜಿನಿಂದ ಬಂದವರೇ ಗಬಗಬನೇ ಊಟ ಮಾಡಿ ಅಮ್ಮನ ಮುಂದೆ ಹಾಜರಾಗಿ ಬೇಡಿಕೆಯಿಡುವುದು. ಅವಳು ಮೊದಲು "ಊಹೂಂ, ಊಹೂಂ, ಸಿನೆಮಾ ನೋಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗ ಇಷ್ಟು ಬೇಗ ಇನ್ನೊಂದಕ್ಕೆ ಕಳಿಸುವುದಿಲ್ಲ" ಎನ್ನುವಳು. "ಅಮ್ಮಾ ಪ್ಲೀಜ್" ಅಂತ ಗೋಗರೆತದ ನಂತರ "ಹಾಗಾದ್ರೆ ಬಾಲ್ಕನಿಗೆ ಹೋಗಬೇಡ್ರಿ, ಸ್ಟಾಲಿಗೆ ಹೋಗಿ ಸಾಕು" ಅಂತ ಒಂದು ಕಂಡಿಷನ್ ಹಾಕುವಳು. ಅಂತೂ ಒಪ್ಪಿಗೆ ಸಿಕ್ಕಿತಲ್ಲಾ ಅಷ್ಟೇ ಸಾಕು ಅಂತ ನಾವು ಓಡುವುದು.
        ಅಲ್ಲಿ ನೋಡಿದರೆ ಗದ್ದಲವೋ ಗದ್ದಲ. ಉದ್ದಾನುದ್ದ ಕ್ಯೂಗಳು- ಹುಡುಗರ ಕ್ಯೂ ಬೇರೆ, ಹುಡುಗಿಯರದೇ ಬೇರೆ. ಅಷ್ಟರ ಮೇಲೆ "ಒಬ್ಬರಿಗೆ ಎರಡೇ ಟಿಕೆಟ್ ಕೊಡ್ತಾರಂತೆ ಕಣೆ" ಅಂತ ಮುಂದೆ ನಿಂತವರಾರೋ ಹೆದರಿಸುವುದು. ಹಾಗಾಗಿ ಎನಾದರಾಗಲಿ ಎಂದು ಎಲ್ಲರೂ ಕ್ಯೂನಲ್ಲಿ ನಿಂತೇ ಬಿಡುವುದು. ಉಡಾಫೆ ಮಾಡ್ಕೊಂಡು ಲೇಟಾಗಿ ಬಂದ ಹುಡುಗರು ನಮ್ಮ ಹತ್ತಿರ ಬಂದು ಬಹಳ ಸಭ್ಯರಂತೆ ಸುಳ್ಳು ಸುಳ್ಳೇ ನಟಿಸುತ್ತಾ, "ಸಿಸ್ಟರ್ ಸಿಸ್ಟರ್, ನಮಗೆರಡು ಟಿಕೆಟ್ ತೆಗಿಸಿಕೊಡಿ ಸಿಸ್ಟರ್, ಹುಡುಗರ ಲೈನಲ್ಲಿ ಭಾಳ ರಷ್ ಇದೆ" ಎಂದು ದೈನಾಸಿ ಪಡುವುದು ಕೇಳಿ ಮೇಲೆ ಮೇಲೆ "ಹೂಂ ಹೂಂ" ಎಂದು ದುಡ್ಡಿಸಿದುಕೊಂಡ್ರೂ ಅವರು ಸ್ವಲ್ಪ ಆಚೆ ಹೋಗುತ್ತಲೂ ಕಡೆ "ಸಿಸ್ಟರ್ ಮೈ ಫುಟ್" ಅಂತ ಹುಡುಗರನ್ನು ಬೈಯ್ಯುವುದು, ಆದ್ರೂ "ಇರ್ಲಿ ಪಾಪ, ಅವೂ ನೋಡ್ಕೊಳ್ಲಿ" ಅಂತ ಒಂದೆರಡು ಟಿಕೆಟು ತೆಗಿಸಿಕೊಟ್ಟು ಉಪಕಾರ ಮಾಡಿ, ಅವರ ಥ್ಯಾಂಕ್ಸಿಗೆ ಒಂದು ಹೂನಗೆ ನಕ್ಕು ಸೀಟು ಹಿಡಿಯಲು ಧಾವಿಸುವುದು.
       ಗುದ್ದಾಡಿ ಸೀಟು ಸಿಕ್ಕು ಗೆಳತಿಯರು, ಅಕ್ಕ, ಒಮ್ಮೊಮ್ಮೆ ಅವಳ ಗೆಳತಿಯರು ಹೀಗೆ ಉದ್ದಾನುದ್ದ ಸಾಲು ನಾವೇ ಕೂತ್ಕೊಂಡು, ಸಣ್ಣ ಪುಟ್ಟ ಡೈಲಾಗಿಗೆಲ್ಲಾ ಖೊಳ್ ಅಂತ ನಕ್ಕು ಸೊಕ್ಕು ತೋರಿಸಿ, ಒಮ್ಮೊಮ್ಮೆ ಬೇರೆ, ವಯಸ್ಸಾದ ಸಿರಿಯಸ್ ಜನರಿಂದ ಬೈಸಿಕೊಂಡಿದ್ದೂ ಇದೆ. ನನಗಿನ್ನೂ ನೆನಪಿದೆ, ವಿಷ್ಣುವರ್ಧನ, ಭವ್ಯಾ ಅಭಿನಯದ 'ನೀ ಬರೆದ ಕಾದಂಬರಿ' ಚಿತ್ರದಲ್ಲಿ ಸಿ.ಆರ್. ಸಿಂಹ ಅವರ ಡೈಲಾಗ್ ಕೇಳಿ ಇಡೀ ಒಂದು ಸಾಲು ನಾವೇ ನಾವಾಗಿ ಕುಳಿತಿದ್ದ ಗೆಳತಿಯರ ಬಳಗ ನಕ್ಕಿದ್ದೇ ನಕ್ಕಿದ್ದು.
      ಹಾಗಂತ ಎಲ್ಲಾ ಸಿನೆಮಾಗಳಿಗೆ ಥರ ರಶ್ ಇರ್ತಿತ್ತು ಅಂತಲ್ಲ. ಒಂದೊಂದು ಸಿನೆಮಾಕ್ಕೆ ಹೋಗಿ ಅವು ಖಾಲಿ ಹೊಡೆಯುವುದನ್ನು ನೋಡಿ, ಇನ್ನೇನು ಇಷ್ಟು ದೂರ ಬಿಸಿಲಲ್ಲಿ ಹ್ಯಾಗೂ ನಡಕೊಂಡು ಬಂದಿದ್ದೀವಲ್ಲ ಸಿನಮಾ ನೋಡಿಯೇ ಹೋದರಾಯ್ತು ಅಂತ ಕೂತ್ಕೊಂಡು ಅಷ್ಟು ಕಷ್ಟ ಪಟ್ಟಿದಕ್ಕೆ ಮತ್ತೆ ಹಂಗೇ ಮಜಾ ಮಾಡಿ ನಕ್ಕು ನಕ್ಕು ಹೊರಬಂದ ಉದಾಹರಣೆಗಳೂ ಇವೆ.
       ಮುಂದೆ ೮೬-೮೭ರಲ್ಲಿ ನಮ್ಮಣ್ಣ (ದೊಡ್ಡಪ್ಪನ ಮಗ) ಬೆಳಗಾವಿಗೆ ಬಂದಮೇಲಂತೂ ನಾವು ಮನೆಮಂದಿಯೆಲ್ಲಾ ಕೂಡಿ ರಾತ್ರಿ ಒಂಬತ್ತರ ಆಟಕ್ಕೆ ಸಿನೆಮಾಕ್ಕೆ ಹೋಗುವುದು ಬಹಳ ಕಾಮನ್ ಆಯಿತು. ಅವನು ತನ್ನ ಕೆಲಸ ಮುಗಿಸಿ ಎಂಟು ಗಂಟೆಗೆ ಬಂದು "ಕಾಕು ಇವತ್ತು ನಯಾ ದೌರ ಸಿನೆಮಾಕ್ಕೆ ಹೋಗುವುದೇ, ಬೇಗ ಅಡಿಗೆ ಮಾಡು" ಎನ್ನುವುದು, ನಮ್ಮಮ್ಮ ಗಡಬಡಿಸಿ ಮುಂದೆ ಹದಿನೈದು ಇಪ್ಪತ್ತು ನಿಮಿಷದೊಳಗೆ ಅನ್ನ ಝುಣಕ ರೆಡಿ ಮಾಡುವುದು, ಬಿಸಿ ಬಿಸಿ ಅನ್ನ ಉಂಡು ಓಡುವ ನಡಿಗೆಯಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಒಳಸೇರಿ ಕತ್ತಲೆಯಲ್ಲಿ, ಲೈಟ್ ಬಿಡುವವನ ಹಿಂದೆ ಹಿಂದೆ ಹೊರಟು ಯಾರದೋ ಕಾಲು ತುಳಿದು ಸಾರಿ ಹೇಳಿ, ಆತ ತೋರಿಸಿದ ಸೀಟ್ ಮೇಲೆ ಉಫ್ ಅಂತ ಕುಳಿತು, ಪಿಕ್ಚರ್ ಸುರುವಾಗಿಬಿಟ್ಟಿದೆಯೇನೋ ಅಂತ ಹೆದರಿ ಪರದೆ ಮೇಲೆ ಇನ್ನೂ ಜಾಹಿರಾತು ಬರುತ್ತಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟು ಖುಶಿ ಪಡುವುದು, .... ಹೀಗೆ ಎಷ್ಟು ಸಿನೆಮಾಗಳನ್ನು ನೋಡಿದೆವೋ ಲೆಕ್ಕವಿಲ್ಲ.
       ಹಳೇ ಕಪ್ಪು ಬಿಳುಪಿನ ಚಿತ್ರಗಳು ಮತ್ತೆ ಮತ್ತೆ ಬರುವ ಕಾಲವದು. ಹಾಗಾಗೇ ಅನೇಕ ಹಳೆಯ ಹಿಂದಿ ಚಿತ್ರಗಳನ್ನು ಟಾಕೀಜಿನಲ್ಲೇ ನೋಡುವ ಭಾಗ್ಯ ನಮ್ಮದಾಯಿತು. ಬೈಜೂ ಬಾವರಾ, ಅನಾರಕಲಿ, ಹರಿಯಾಲಿ ಔರ್ ರಾಸ್ತಾ, ದೋ ಬದನ್, ಕಶ್ಮೀರ್ ಕಿ ಕಲಿ, ಲೀಡರ್, ನಯಾದೌರ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ, ಸಂಗಮ, ಇಂಥ ನೂರಾರು ಹಳೆಯ ಚಿತ್ರಗಳನ್ನು ಈಗ ಬಣ್ಣಗೆಟ್ಟು ಹಳೆಯದಾದ, ಅಥವಾ ಅಳಿದು ಇನ್ನಾವುದೋ ಕಟ್ಟಡಕ್ಕೆ ಆಧಾರವಾದ ಹಳೆಯ ಟಾಕೀಜುಗಳಲ್ಲೇ ನಾವೆಲ್ಲಾ ನೋಡಿದ್ದೇವೆ. ಅಷ್ಟೇ ಅಲ್ಲ, ಆಯಾ ಕಾಲಕ್ಕೆ ಬರುತ್ತಿದ್ದ ಹೊಸ ಚಿತ್ರಗಳನ್ನೂ ಇದೇ ಥರ ನೋಡುತ್ತಿದ್ದೆವು. ಅಭಿಮಾನ, ಮಿಲಿ, ತ್ರಿಶೂಲ, ದೋಸ್ತಾನ, ಮುಂತಾದ ಚಿತ್ರಗಳನ್ನು ನಿಜಕ್ಕೂ ಟಾಕೀಜಿನಲ್ಲೇ ನೋಡಬೇಕು. ಮುಕದ್ದರ ಕಾ ಸಿಕಂದರ, ಶಂಕರ ಗುರುಅನಂತರದ ದಿನಗಳಲ್ಲಿ ಬಂದ ತೆಲಗಿನ ಸ್ವಾತಿಮುತ್ಯಂ ಚಿತ್ರಗಳನ್ನಂತೂ ನಾವು ಟಾಕೀಜಿನಲ್ಲಿ ಮೂರು ಮೂರು ಸಲ ನೋಡಿದ್ದೆವು ಎಂದು ಹೇಳಿ ಮಕ್ಕಳಿಂದ ಮಂಗಳಾರತಿ ಮಾಡಿಸಿಕೊಂಡೂ ಆಗಿದೆ.
      ಈಗ ಬೆಳಗಾವಿಯ ಹೆಚ್ಚಿನ ಟಾಕೀಜುಗಳು ನೆಲಸಮವಾಗಿ ಸ್ಥಳದಲ್ಲಿ ಕಾಂಪ್ಲೆಕ್ಸಗಳು ತಲೆ ಎತ್ತಿವೆಯಾವ ರೇಡಿಯೋ ಥೇಟರಿನಲ್ಲಿ (ನಮ್ಮ ಮನೆಯ ಹಿತ್ತಲಿನಲ್ಲೇ ಇದ್ದ ಥೇಟರು) ನಾವು ಜಯಪ್ರದಾ, ರಿಷಿಕಪೂರನ 'ಸರಗಮ್' ಚಿತ್ರವನ್ನು ನೋಡಿ, ನಂತರ ಆರು ತಿಂಗಳ ಕಾಲ ಹಾಡುಗಳನ್ನು ಕೇಳಿ ಖುಶಿಪಟ್ಟಿದ್ದೆವೋ, ಅನಂತನಾಗ, ಆರತಿ, ರೂಪಾ ಅಭಿನಯದ 'ಮುಳ್ಳೀನ ಗುಲಾಬಿ' ಚಿತ್ರವನ್ನು ನೋಡಿ ಹುಚ್ಚುಹಿಡಿದವರಂತೆ ತಿಂಗಳುಗಟ್ಟಲೇ ಹಿತ್ತಲಲ್ಲಿ ಕುಳಿತು ಹಾಡು, ಡೈಲಾಗುಗಳನ್ನು ಕೇಳಿ ಬಾಯಿಪಾಠ ಮಾಡಿ ಆನಂದಿಸಿದ್ದೆವೋ, ರೇಡಿಯೋ ಥೇಟರ್ ಈಗ ನಾಲ್ಕು ಅಂತಸ್ತಿನ ರೇಡಿಯೋ ಕಾಂಪ್ಲೆಕ್ಸ್ ಆಗಿ ಮಾರ್ಪಟ್ಟಿದೆ. ಕಪೀಲ ಥೇಟರ್ ಹೋಗಿ ನ್ಯೂಕ್ಲಿಯಸ್ ಮಾಲ್ ಆಗಿದ್ದರೂ ಅದರ ನೆತ್ತಿಯ ಮೇಲೆ ಬಿಗ್ ಸಿನೆಮಾದ ಎರೆಡು ಸ್ಕ್ರೀನಗಳಿವೆ. ಎಂದೂ ನಡೆಯದ ಚಂದನ ಟಾಕೀಜ್ ಈಗ ಚಂದನ ಐನಾಕ್ಸ್ ಆಗಿ ಮೂರು ಮೂರು ಸ್ಕ್ರೀನಗಳಲ್ಲಿ ಚಿತ್ರಗಳನ್ನು ಜನರಿಗೆ ತೋರಿಸುತ್ತ ಬಹುಷಃ ಲಾಭ ಮಾಡಿಕೊಳ್ಳುತ್ತಿದೆ. ಆಝಾದನ ನೆನಪೂ ಜನಕ್ಕೆ ಉಳಿಯಲಾರದಂತೆ ಅದನ್ನು ಕಾಲ್ಕೆಳಗೆ ದಬ್ಬಿ, ಅದರ ಮೇಲೆಯೇ 'ಸ್ವರೂಪ ಪ್ಲಾಝಾ' ಎತ್ತರವಾಗಿ ಎದ್ದು ನಿಂತಿದೆ. ಕೃಷ್ಣಾ ಟಾಕೀಜ ಹೋಗಿ ಯಾವುದೋ ಕಂಪನಿಯ ಶೋರೂಮ್ ಆಗಿದೆ. ಅರುಣ ಥೇಟರ್ ಏನೂ ಆಗದೇ ಪಿಕ್ಚರೂ ನಡೆಯದೇ, ಬಂದಾಗಿ, ಮೂಕವಾಗಿ ಖಾಲಿ ನಿಂತಿದೆ. ರಿಟ್ಝ್ ಥೇಟರ್ ಸ್ವಲ್ಪವೇ ಪರಿವರ್ತನೆಗೊಂಡು ಲೋಕಮಾನ್ಯ ರಂಗಮಂದಿರವಾಗಿದೆ. ನರ್ತಕಿ ಥೇಟರ್ ಹೋಗಿ ಅಪಾರ್ಟಮೆಂಟ ಆಗಿದೆ. ಸ್ವರೂಪ, ಚಿತ್ರಾ, ಪ್ರಕಾಶ ಮುಂತಾದ ಕೆಲವೇ ಕೆಲವು ಟಾಕೀಜುಗಳು ಕಾಲಕ್ಕೆ ತಕ್ಕಂತೆ ನವೀಕರಣಗೊಂಡು ಒಂದಿಷ್ಟು ಲಾಭ ಮಾಡಿಕೊಳ್ಳೂತ್ತಿವೆಯೇನೋ! ಉಳಿದವೆಲ್ಲ ಹಾಗೆಯೇ ಹರಿದ ಕುಶನ್ನಿನ ಚೇರುಗಳು, ಬಣ್ಣ ಕಿತ್ತುಹೋದ ಗೋಡೆಗಳು, ಅದೇ ಹಳೆಯ ಸ್ಕ್ರೀನು ಇಟ್ಟುಕೊಂಡು ಅಂತೂ ಇನ್ನೂ ಬದುಕಿದ್ದೇವೆ ಎಂದು ಉಸಿರಾಡುತ್ತಿರುವ ಹಳೇ ಥೇಟರುಗಳು.
        ದಿನಗಳ ಮಜಾ, ಹುಚ್ಚು, ಆಗಿನ ಕಾಲದ ಸಿನೆಮಾಗಳು ಈಗ ಬರುವುದು ಸಾಧ್ಯವೇ ಇಲ್ಲ. ಈಗಿನ ಕೆಲವು ಸಿನೆಮಾಗಳನ್ನು ನೋಡಲಾಗದೇ ಟಾಕೀಜಿನಿಂದ ಎದ್ದು ಬಂದ ಮೇಲೆ ನಾನು ಮತ್ತು ನನ್ನಕ್ಕ ಇದನ್ನೆಲ್ಲ ನೆನಪಿಸಿಕೊಂಡು ಮಾತಾಡಿ ನಕ್ಕು, ಒಂದಿಷ್ಟು ವಿಷಾದಿಸಿ, ನೋವು ನಲಿವುಗಳನ್ನು ಒಟ್ಟಿಗೆ ಅನುಭವಿಸಿದೆವು. ಯಾಕೆಂದರೆ ಆಗಿನ ಕಾಲದ ತುಡಿತಗಳೇ ಬೇರೆ, ನಮ್ಮ ವಯಸ್ಸೂ ಹಾಗಿತ್ತು.
ನೀತಾ ರಾವ್
**************************

ಕ.ಪಿ.ಗಳ ಸ್ವರ, ಸಾಫ್ಟವೇರಿಗಳ ಪರ

ಕ.ಪಿ.ಗಳ ಸ್ವರ, ಸಾಫ್ಟವೇರಿಗಳ ಪರ             

  
ನಮ್ಮ ಪ್ರೀತಿಯ (ಪಾಪ) ನಾನ್-ಸಾಫ್ಟವೇರಿ ವರಮಹಾಶಯರೇ,
        ನಿಮಗೆಲ್ಲ ಕ.ಪಿ. (ಕನ್ಯಾಪಿತೃಗಳ) ಸಂಘದ ಅಧ್ಯಕ್ಷರ ಸಪ್ರೇಮ ಆಶೀರ್ವಾದಗಳು. ಮೊನ್ನೆ ಮೊನ್ನೆ ತಾವೆಲ್ಲ ನಾನ್-ಸಾಫ್ಟವೇರಿ ವರಗಳ ವೇದಿಕೆಯಿಂದ ಹುಚ್ಚಾಪಟ್ಟೆ ಕೂಗಾಡಿ, ನಮ್ಮನ್ನೆಲ್ಲ ಮನಸೋ ಇಚ್ಛೆ ಬೈದದ್ದು ಗೊತ್ತಾಗಿದ್ದರಿಂದ, ನಮ್ಮ ಸಂಘದ ಎಲ್ಲ ಸದಸ್ಯರ ಪರವಾಗಿ ಈ ಪತ್ರವನ್ನು ತಮಗೆ ರವಾನಿಸುತ್ತಿದ್ದೇನೆ. ಓದಿಕೊಂಡು, ತಿಳಿದುಕೊಂಡು ಸುಮ್ಮನಾಗುವುದು.
      ತರುವಾಯ, ನಾವು ಕ.ಪಿ.ಗಳು ಸಾಫ್ಟವೇರ್  ಇಂಜಿನಿಯರ ಅಲ್ಲದ ವರಗಳಿಗೆ ಹೆಣ್ಣುಮಕ್ಕಳನ್ನು ಕೊಡುವುದಿಲ್ಲ, ಅಷ್ಟೇ ಏಕೆ ತೋರಿಸುವುದೂ ಇಲ್ಲವೆಂದು ನೀವೆಲ್ಲ ಗೋಳಾಡಿದ್ದು ತಿಳಿದು ಬಂತು. ಅಯ್ಯಾ ಮಹಾಶಯರೇ, ಇಲ್ಲಿ ನಮ್ಮದೂ ಕೆಲವೊಂದು ವಾದಗಳಿವೆ, ಭಾವನೆಗಳಿವೆ, ಆಯ್ಕೆಗಳಿವೆ, ಅವನ್ನು ತಿಳಿದುಕೊಳ್ಳಿ. ಹಿಂದೆ ನಾವು, ಅಂದರೆ ನಮ್ಮಂಥ ಹೆಣ್ಣು ಹೆತ್ತವರು ಪಟ್ಟ ಕಷ್ಟಗಳನ್ನು ನೆನಪಿಸಿಕೊಳ್ಳಿ, ಇಲ್ಲವೇ ನಿಮ್ಮ ಹೆತ್ತವರನ್ನು ಕೇಳಿ. ಹೆಣ್ಣುಮಕ್ಕಳ ಜಾತಕ ಹಿಡಿದುಕೊಂಡು ಗಂಡು ಎನ್ನಿಸಿಕೊಂಡ ಎಲ್ಲ ಪ್ರಾಣಿಗಳ ಮನೆಗಳಿಗೆ ಅಲೆದಲೆದು ನಾವು ಚಪ್ಪಲಿ ಹರಿದುಕೊಂಡಿದ್ದು ಸುಳ್ಳೇ? ಕೆಲಸವಿರಲಿ, ಇಲ್ಲದಿರಲಿ, ಅಂತಸ್ತು ಇದ್ದರೆಷ್ಟು ಬಿಟ್ಟರೆಷ್ಟು ಎಂದುಕೊಂಡು ವರನ ತಂದೆ-ತಾಯಿಗಳು, ಅಷ್ಟೇಕೆ ಹತ್ತಿರ ದೂರದ ಎಲ್ಲ ಬಂಧು-ಬಳಗದವರು ನಮ್ಮ ಮೇಲೆ ಉರಿದದ್ದು ಇತಿಹಾಸವೇ ಆದರೂ ಸತ್ಯವೇ ಅಲ್ಲವೇ? ಜಾತಕ ಕೂಡಿದೆಯೋ ಇಲ್ಲವೋ ಎಂದು ತಿಳಿಯಬೇಕಾದರೆ ಹತ್ತತ್ತು ಸಲ ವರನ ಮನೆಗೆ ಎಡತಾಕಿ ಸಾಯಬೇಕು. ಇನ್ನು ಅದು ಹೇಗೋ ದೇವರ ದಯದಿಂದ ಕೂಡಿಬಿಟ್ಟರೆ, ವರನ ಕಡೆಯಿಂದ ಬರುವವರಿಗೆಲ್ಲಾ ವಗ್ಗರಣೆ ಅವಲಕ್ಕಿ, ಚಹಾ, ಸ್ವೀಟು, ಬಾಳೆಹಣ್ಣು ಅಂತೆಲ್ಲಾ ಸರಬರಾಜು ಮಾಡಿ ಮಾಡಿ ಸಾಕಾಗಿಹೋಗಿತ್ತು. ಇಷ್ಟೆಲ್ಲಾ ಆದ ಮೇಲೆ ಹೆಣ್ಣು ಮನಸ್ಸಿಗೆ ಬರಲಿಲ್ಲ, ಕಾಲು ಸೊಟ್ಟಗಿದೆ, ಮೂಗು ನೆಟ್ಟಗಿಲ್ಲ ಎನ್ನುವ ಉತ್ತರ. ಮತ್ತೆ ಬೇರೆ ಕನ್ಯಾ ನೋಡಲು, ಉಪ್ಪಿಟ್ಟು ಚಹಾಕ್ಕೆ ವರಮಹಾಶಯರೂ, ಅವರ ಶ್ರೇಷ್ಠ ಮಾತಾ-ಪಿತೃಗಳೂ ರೆಡಿ. ಏನೋ ಬಹಳ ದೊಡ್ಡ ಉಪಕಾರ ಮಾಡಿದವರಂತೆ, ಕನ್ಯಾಸೆರೆ ಬಿಡಿಸುತ್ತೇನೆಂಬ ಅಹಂನಿಂದ ಬಂದವರೂ ಸೂಟು-ಬೂಟು ಕೊಡಲಿಲ್ಲ, ಚಿನ್ನದ ಚೈನು ಬಿಗಿಯಲಿಲ್ಲ ಎಂದು ಮದುವೆಯ ಮಧ್ಯೆ ಜಗಳ ತೆಗೆದು, ಒಂದು ಗಂಟೆಗೆ ಆಗಬೇಕಾದ ಊಟ ಐದು ಗಂಟೆಗೆ ಆಗಿ, ಬಂದ ಬಂಧು-ಬಳಗವೆಲ್ಲ ಹಸಿದು ಕಂಗಾಲಾಗಿ, ಕೆಲವರ ಕಣ್ಣೂ ಭೆಳ್ಳಗಾಗಿ - - - - ಒಂದೋ, ಎರಡೋ - - - - ಮರೆತವಂದ್ರೂ ಮರೆಯಲಾಗದ ಗತಕಾಲದ ಭೂತಗಳು.
       ಈಗ ಏನಾಗಿದೆಯಪ್ಪಾ ಅಂದ್ರೆ, ನಮ್ಮ ಹುಡ್ಗೀರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಮದುವೆ ಮಾರ್ಕೆಟ್ಟಿನಲ್ಲಿ ಡಿಮ್ಯಾಂಡ್ ಬಂದಿದೆ. ಒಂದು ಕಾಲದಲ್ಲಿ ನಿಮಗಿತ್ತಲ್ಲಾ ಹಾಗೆ! ಸಿಂಪಲ್  ಎಕನಾಮಿಕ್ಸ್ ಥೇರಿ, ಲಾ ಆಫ್ ಡಿಮಾಂಡ್ ಎಂಡ್ ಸಪ್ಲೈ ಅಷ್ಟೇ, ಅರ್ಥವಾಯ್ತಾ? ಈ ಜಗತ್ತು ದುಂಡಗಿದೆ ಸ್ವಾಮೀ, ಒಮ್ಮೆ ಮೇಲೆ ಇದ್ದೋರು ನೀವು ಕೆಳಗೆ ಬಂದಿದ್ದೀರಾ ಅಷ್ಟೇ! ನಿಮ್ಮಪ್ಪ, ನಿಮ್ಮಜ್ಜ ಮಾಡಿದ ಪಾಪ ನಿಮ್ಮನ್ನು ಪ್ರಾಯಶ್ಚಿತ ಕೇಳ್ತಿದೆ ಅಷ್ಟೇ.
                                                                                           

        ಹೋಗಲಿ ಈಗ ಮುಖ್ಯ ವಿಷಯಕ್ಕೆ ಬರೋಣ. ನಾವೆಲ್ಲಾ ನಮ್ಮ ಹೆಣ್ಣುಮಕ್ಕಳನ್ನು ಸಾಫ್ಟವೇರ ವರಗಳಿಗೇ ಕೊಡಬಯಸುತ್ತೇವೆ. "ಹಾಗಾದರೆ ನಾವೆಲ್ಲ (ಅರ್ಥಾತ್  ಉಳಿದ ನಾನ್-ಸಾಫ್ಟವೇರಿಗಳು) ಏನು ಮಾಡಬೇಕು? ಮದುವೆಯಿಲ್ಲದೇ ಬ್ರಹ್ಮಚಾರಿಗಳಾಗಿಯೇ ಬದುಕಿ, ಬ್ರಹ್ಮಚಾರಿಗಳಾಗಿಯೇ ಸಾಯಬೇಕೇ? ನಾವೇನು ಕಡಿಮೆ ಗಳಿಸುತ್ತೇವೆಯೇ? ನಮಗೇನು ಹೊಲ-ಮನೆಗಳಿಲ್ಲವೇ?" ಎಂದೆಲ್ಲಾ ಲಾ ಪಾಯಿಂಟ್ ಬಿಗಿದು, ನಮ್ಮನ್ನೆಲ್ಲಾ ಉಗಿದು ಉಪ್ಪಿನಕಾಯಿ ಹಾಕಿದಿರಂತೆ ನೀವು! ಇರಲಿ, ಈಗ ಸಾಫ್ಟವೇರಿಗಳೇ ಯಾಕೆ ಬೇಕು ಎನ್ನುವುದರ ರಹಸ್ಯ ಬಿಚ್ಚುತ್ತೇನೆ ಕೇಳಿ.
೧) ಮೊದಲನೇಯದಾಗಿ ಅವು ಕೈ ತುಂಬ ಸಂಪಾದನೆ ಮಾಡುತ್ತವೆ. (ಮಾವಂದಿರಿಗೆ ಖುಶಿಯಾಗದೇ ಇರುತ್ತಾ ಹೇಳಿ?) ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಜಿಗಿದಾಗಲೆಲ್ಲಾ ಈ ಸಂಪಾದನೆ ಮತ್ತೂ ಜಾಸ್ತಿಯಾಗುತ್ತಾ ಹೋಗುತ್ತದೆ.
೨) ಸೋಮವಾರದಿಂದ ಶುಕ್ರವಾರದವರೆಗೆ ದಿನಾಲೂ ದುಡಿದು ದುಡಿದು, ದಣಿದು ಸುಸ್ತಾಗಿ ಮಧ್ಯರಾತ್ರಿಯೋ, ಮರುದಿನದ ನಸುಕಿನ ವೇಳೆಯೋ ಮನೆ ಸೇರಿಕೊಂಡು ನಿದ್ದೆ ಮಾಡಲು ಆರಂಭಿಸಿದರೆ, ಮತ್ತೆ ಎದ್ದು ಕೆಲಸಕ್ಕೆ ಓಡಿ ಹೋಗುವ ಚಿಂತೆಯೇ ಜಾಸ್ತಿಯಾಗಿ, "ಇದೇನು ಅಡುಗೆ ಮಾಡಿದ್ದೀ? ಸಾರಿಗೆ ಉಪ್ಪು ಸಾಲ್ದು, ಹುಳಿಗೆ ಹೋಳು ಕಡಿಮೆಯಾಯ್ತು, ವಗ್ಗರಣೆ ಹೊತ್ತಿಹೋಗಿದೆ." ಎಂದೆಲ್ಲಾ ಕೆಲಸಕ್ಕೆ ಬಾರದ ರಗಳೆ ತೆಗೆದು (ನಿಮ್ಮಂತೆ) ನಮ್ಮ ಹೆಣ್ಣುಮಕ್ಕಳನ್ನು ಕಾಡುವುದಿಲ್ಲ. ಮುಖ್ಯವಾಗಿ ಕಾಡುವುದಕ್ಕೆ ಪಾಪ ಅವುಗಳಿಗೆ ನಿಮ್ಮಂತೆ ಸಮಯವಾಗಲೀ ತಾಕತ್ತಾಗಲೀ ಉಳಿದಿರುವುದೇ ಇಲ್ಲ.
೩) ಇನ್ನು ಮೂರನೇಯದಾಗಿ ಶನಿವಾರ, ಭಾನುವಾರ ಎರೆಡೆರೆಡು ದಿನ ರಜೆ ಇರುವುದರಿಂದ ವೀಕೆಂಡಿಗೆ ಅಂತ ಕೊಡಗು, ಕೊಡಚಾದ್ರಿ ಬೆಟ್ಟ, ಚಿಕ್ಕಮಗಳೂರು, ನಾಗರಹೊಳೆ, ಎಂದೆಲ್ಲಾ ಹೆಂಡತಿಯನ್ನೂ ಕರೆದುಕೊಂಡು ಜಾಲಿ ಟ್ರಿಪ್ಪಿಗೆ ಹೋಗುತ್ತವೆ. ಅಂದರೆ ನಮ್ಮ ಮುದ್ದಿನ ಮಕ್ಕಳಿಗೆ ವಾರವಿಡೀ ಗಂಡನ ಕಾಟವಿಲ್ಲ, ಅಡುಗೆಯ ಜಂಜಡವಿಲ್ಲ. ನಿಮಗಾದರೋ ವೇಳೆ ಧಂಡಿಯಾಗಿ ಬಿದ್ದಿರುವುದರಿಂದ ಮನೆಯಲ್ಲಿ ಹೆಂಡರನ್ನು ಕುಕ್ಕುವ ಕೆಲಸವೇ! ಅದಕ್ಕೇ ಗಿಣಿಗಳಂತೆ ಸಾಕಿದ ನಮ್ಮ ಹೆಣ್ಣುಮಕ್ಕಳನ್ನು ಹದ್ದುಗಳಿಗೆ ಕೊಡುವುದಕ್ಕಿಂತ, ಇನ್ನೊಂದು ಮೈನಾ ಪಕ್ಷಿಗೆ ಕೊಡುವುದು ಲೇಸೆಂದು ನಾವು ನಿರ್ಧರಿಸುವುದು ತಪ್ಪಾ?
೪) ಅವರ ಪರವಾಗಿ ವಾದಿಸಲು ಇನ್ನೂ ಅನೇಕ ಕಾರಣಗಳಿವೆ ಕೇಳಿ. ಮದುವೆಯಾಗಿ ವರ್ಷದೊಳಗೆ ನಮ್ಮ ಸಾಫ್ಟವೇರಿ ಅಳಿಯಂದಿರು ಕೋರಮಂಗಲದಲ್ಲೋ, ವೈಟ್-ಫೀಲ್ಡನಲ್ಲೋ ಲಕ್ಷುರಿ ಅಪಾರ್ಟಮೆಂಟನಲ್ಲಿ ಫ್ಲ್ಯಾಟ ಖರೀದಿ ಮಾಡಿ, "ಮಾವಾ ರಜಿಸ್ಟ್ರೇಶನ್ನಿಗೆ ನೀವೇ ಬರಬೇಕು, ಇದೆಲ್ಲಾ ವ್ಯವಹಾರ ನನಗಿಂತ ನಿಮಗೇ ಚೆನ್ನಾಗಿ ಗೊತ್ತು" ಅಂತ ಗೋಗರೀತಾರೆ. "ಅತ್ತೆ ನೀವೇ ಮುಂದೆ ನಿಂತು ಗೃಹಪ್ರವೇಶದ ಕಾರ್ಯಕ್ರಮವನ್ನು ನಡೆಸಿಕೊಡಬೇಕು, ನನಗೆ ಬಹಳ ಕೆಲಸವಿದೆ, ಇವಳೂ ಇನ್ನೂ ಚಿಕ್ಕವಳು" ಅಂತ ಪ್ರೀತಿಯಿಂದ ಕರೀತಾರೆ.
೫) ಇನ್ನು ಮದುವೆಯಾಗಿ ಎರೆಡು ವರ್ಷಗಳಲ್ಲಿ, ಎರೆಡು ವರ್ಷದ ಅವಧಿಗೆ ಪ್ರಾಜೆಕ್ಟ ಮೇಲೆ ಅಮೇರಿಕಾಕ್ಕೋ ಇನ್ನಾವುದೋ ವಿದೇಶಕ್ಕೋ ಹೆಂಡತಿಯೊಡನೆ ಹಾರುತ್ತಾರೆ. ನಿಮ್ಮ ಹಾರಾಟವೋ ಯಾವಾಗಲೂ ಅಡುಗೆಮನೆಯಲ್ಲಿಯೇ, ಹೆಂಡತಿ-ಮಕ್ಕಳ ಮುಂದೆ ಮುಗಿದು ಹೋಗುತ್ತದೆ.
೬) ಮಗಳು ಅಲ್ಲಿದ್ದಾಗಲೇ ಬಸಿರು ಅಂತಾದರೆ ಅತ್ತೆ-ಮಾವನಿಗೂ ವಿದೇಶಕ್ಕೆ ಹಾರುವ ಛಾನ್ಸ್, ಬಾಳಂತನದ ನೆವದಲ್ಲಿ. ಹೇಗೂ ಆರಾರು ತಿಂಗಳು ಹೋಗಿರುತ್ತೇವೆ, ದೇಶ ಸುತ್ತಿ ಬಂದರಾಯ್ತು ಎಂದುಕೊಂಡರೆ ಅಳಿಮಯ್ಯ ಟಿಕೆಟ್ಟುಗಲೊಂದಿಗೆ ಹಾಜರು.
೭) ಪ್ರಾಜೆಕ್ಟ ಮುಗಿಸಿ ಬಂದವರು, ಆಗೀಗ ಸಣ್ಣ-ಪುಟ್ಟ ಕೆಲಸಗಳಿಗಾಗಿ ಲಂಡನ್ನು, ಪ್ಯಾರಿಸ್ಸು, ಜರ್ಮನಿ ಅಂತ ಹದಿನೈದು-ಇಪ್ಪತ್ತು ದಿನಗಳ ಟ್ರಿಪ್  ಹೊಡೆಯುತ್ತಾರೆ. ನೀವು ಗಡದ್ದಾಗಿ ಊಟ ಮಾಡಿ ನಿದ್ದೆ ಹೊಡೆದದ್ದೇ ಬಂತು.
೮) ಅವರ ಖರೀದಿಯೆಲ್ಲಾ ಬಿಗ  ಬಝಾರ, ಸ್ಟಾರ ಬಝಾರ, ಗರುಡಾ, ಮಂತ್ರಿ, ಫೋರಂ ಮಾಲ್ ಇಂಥಲ್ಲೇ. ನಿಮ್ಮ ಹಾಗೆ ಬೀದಿ ಬದಿಯಲ್ಲಿ ನಿಂತು ಚೌಕಾಶಿ ಮಾಡಲು ಅವರಿಗೆ ಟೈಮಾದರೂ ಎಲ್ಲಿರುತ್ತದೆ ಪಾಪ! ಹೆಂಡತಿ ಸೀರೆ, ಆಭರಣಕ್ಕೆ ಮಾಡಿದ ಖರ್ಚಿನ ಲೆಕ್ಕವೂ ಸಿಗುವುದಿಲ್ಲ. ಕ್ರೆಡಿಟ್ ಕಾರ್ಡ ಕೊಟ್ಟು ಎಲ್ಲೋ ನೋಡುತ್ತ ನಿಲ್ಲುವ ಅವರಿಗೆ ಬ್ಯಾಂಕಿನಿಂದ ಬಂದ ಎಸ್ಸೆಮ್ಮೆಸ್ಸು, ಸ್ಟೇಟಮೆಂಟು ನೋಡಲೂ ಟೈಮಿರುವುದಿಲ್ಲ.
೯) ವರ್ಷಕ್ಕೊಮ್ಮೆ ಎರೆಡು ವರ್ಷಕ್ಕೊಮ್ಮೆ ಕಾರು ಚೇಂಜ ಮಾಡುತ್ತಾ ಹೆಂಡತಿ-ಮಕ್ಕಳಿಗೆ ಸ್ವರ್ಗ ಸುಖವನ್ನು ಉಣಿಸುವ ಅವರೆಲ್ಲಿ, ಉಸಿರಿಗೊಂಬತ್ತು ಸಲ ಹೆಂಡತಿಯ ತಪ್ಪು ಎತ್ತಿ ತೋರಿಸುತ್ತ ನಿಮ್ಮಪ್ಪ ಮದುವೇಲಿ ಅದು ಕೊಡಲಿಲ್ಲ, ಇದು ಮಾಡಲಿಲ್ಲ ಅನ್ನು ನೀವೆಲ್ಲಿ?
೧೦) ಇನ್ನೂ ಒಂದು ಬಲವಾದ ಕಾರಣವಿದೆ, ಅವರನ್ನು ಮೆಚ್ಚಿಕೊಳ್ಳಲು, ಕೇಳಿ. ಕಂಪ್ಯೂಟರ ಮುಂದೆ ಕೂತು-ಕೂತು ತಲೆ ಉಪಯೊಗಿಸಿ, ಉಪಯೋಗಿಸಿ, ತಲೆ ಕೂದಲೆಲ್ಲ ಬೇಗನೇ ಬೆಳ್ಳಗಾಗಿ ಸಣ್ನ ವಯಸ್ಸಿಗೇ ಹಿರಿಯರಂತೆ ಕಾಣುವ ಅಳಿಯಂದಿರು, ಮಾವಂದಿರ ಗೆಳೆಯರಂತೇ ಕಾಣುತ್ತಾರೆ, ಮತ್ತು ಸ್ವಲ್ಪ ದಿನಗಳಲ್ಲೇ ಗೆಳೆಯರೇ ಆಗುತ್ತಾರೆ.
     ಈಗ ನೀವೇ ಹೇಳಿ, ಇಷ್ಟೆಲ್ಲಾ ಅನುಕೂಲವಿರುವ ಸಾಫ್ಟವೇರಿಗಳನ್ನು ಬಿಟ್ಟು ನಿಮ್ಮಂಥ (ಪಾಪ ಅನಿಸುತ್ತದೆ ನಮಗೂ) ವರಗಳಿಗೆ ಕೊಡಲು ನಾವೇನು ತಲೆಕೆಟ್ಟ ಯಬಡರೇ? ನಾವೂ ಜಾಣರಾಗಿದ್ದೇವೆ ತಡವಾಗಿಯಾದರೂ! ಇನ್ನೊಂದು ಗುಟ್ಟು ಹೇಳುತ್ತೇನೆ ಕೇಳಿರಿ, ಕಷ್ಟ ನಿಮಗಷ್ಟೇ ಅಲ್ಲ, ನಮಗೂ ಬಂದಿದೆ, "ಒಂದು ಹದಿನೈದಿಪ್ಪತ್ತು ವರ್ಷ ತಡವಾಗಿಯಾದರೂ ಹುಟ್ಟಬಾರದಿತ್ತೇ? ನನಗೂ ಸಾಫ್ಟವೇರಿ ವರನೇ ಸಿಗುತ್ತಿದ್ದ" ಅಂತ ಬೆಳ್ಳಗಾದ ತಲೆಕೂದಲಿಗೆ ಹೇರಡೈ ಮಾಡಿಕೊಂಡು ಕಂಗೊಳಿಸುವ ನಮ್ಮ ವಯಸ್ಸಾದ ಹೆಂಡರು ಬೇರೆ ಹೆಣ್ಣುಮಕ್ಕಳ ಮುಂದೆ, ಇಲ್ಲಾ ಇನ್ನೂ ವಯಸ್ಸಾಗಿರುವ ಬಚ್ಚು ಬಾಯಿಯ ತಮ್ಮಮ್ಮನ ಮುಂದೋ ಆಲವತ್ತುಕೊಳ್ಳುವುದು ನೋಡಿಯೂ ನೋಡದ ಕುರುಡರಂತೆ ನಾವೇ ಇದ್ದುಬಿಡುತ್ತೇವೆ ಕಣ್ರಯ್ಯಾ, ಇನ್ನು ನಿಮ್ಮಂಥವರ ಪಾಡೇನು? ಮೊದಲಿನಂತೆ ನಾವೂ ನಮ್ಮ ಹೆಂಡರಿಗೆ ಜೋರು ಮಾಡುವ ಪರಿಸ್ಥಿಯಲ್ಲಿ ಇಲ್ಲ. ಬಿಟ್ಟುಹೋದರೇ? ಬೇಯಿಸಿ ಹಾಕುವರಾರು! ಹಾಗಾಗಿ ಅವರ ವರಾತಗಳನ್ನೆಲ್ಲ ಸಹಿಸಿಕೊಂಡು ಅವರಿಗೆ ಬೇಕಾದಂಥ ಅಳಿಯನನ್ನು ಹುಡುಕುತ್ತಿದ್ದೇವೆ. ಹಾಗಂತ ನಮಗೆ ಸಾಫ್ಟವೇರಿಗಳು ಬೇಡವೆಂತಲ್ಲ. ಯಾರು ಬೇಡ ಅನಲಿಕ್ಕೆ ಸಾಧ್ಯ ಹೇಳಿ ನೋಡೋಣ.
    ಏನೇ ಆಗಲಿ, ನಿಮ್ಮಗಳ ಮದುವೆಯೂ ಆಗಲಿ, ನಿಮಗೂ ಮದುವೆಗೆ ಹೆಣ್ಣು ಸಿಗಲಿ ಎಂದು ಹಾರೈಸಿ, ಆಶೀರ್ವದಿಸುವ,

ಇಂತಿ ತಮ್ಮ ವಿಶ್ವಾಸಿ
ಅಧ್ಯಕ್ಷರು
ಕ.ಪಿ.ಸಂಘ
ಕರ್ನಾಟಕ
   
                                                                                                     


Thursday, 27 March 2014

ಮುದ್ದು ವಿದ್ಯಾರ್ಥಿಗಳಿಗೊಂದು ಪ್ರೇಮಪತ್ರದ ನಮೂನೆ


ಮುದ್ದು ವಿದ್ಯಾರ್ಥಿಗಳಿಗೊಂದು ಪ್ರೇಮಪತ್ರದ ನಮೂನೆ

ನಮ್ಮ ಪ್ರೀತಿಯ ಮುದ್ದು ಮಕ್ಕಳಿಗೆ ಅರ್ಥಾತ್ ವಿದ್ಯಾರ್ಥಿಗಳಿಗಾಗಿ ನಾವು ಏನೇನು ಮಾಡುವುದಿಲ್ಲ? ಬೇಸರ ಬಂದು ಅವು ಕ್ಲಾಸಿನಲ್ಲೇ ತೂಕಡಿಸಿದರೂ ಒಂದು ತಾಸು ಬಿಡದೇ ಕೊರೆಯುವುದಂತೂ ಇದ್ದೇ ಇದೆ. ಆದರೂ ನಾವು ತೀರಾ ಕಟುಕರೇನಲ್ಲ. ಹಾಗೆ ಯಾರಾದರೂ ಕ್ಲಾಸಿನಲ್ಲೇ ನಿದ್ದೆ ಮಾಡಲು ಸುರು ಮಾಡಿದರೆ, ಪಾಪ ಮನೆಯಲ್ಲಿ ಏನು ಕಷ್ಟವೋ ಏನೊ ಇಲ್ಲಿಯಾದರೂ ಒಂದಿಷ್ಟು ನೆಮ್ಮದಿಯಿಂದ ಮಲಗಲಿ ಎಂದು ಧ್ವನಿ ತಗ್ಗಿಸುತ್ತೇವೆ. ಇನ್ನು ಮತ್ಯಾರೋ ವಿದ್ಯಾರ್ಥಿ ಕೂತಲ್ಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಇಹಪರದ ಚಿಂತೆ  ಬಿಟ್ಟು ತನ್ನದೇ ಲೋಕದಲ್ಲಿ ಕಳೆದುಕೊಂಡುಬಿಟ್ಟಿದ್ದರೆ ಅವನಿಗೆ ಅವನನ್ನು ಹುಡುಕಿಕೊಡುವ ಕಾರಭಾರ ಮಾಡುವುದೇ ಇಲ್ಲ. ಪಾಪ ನಮಗಿರುವುದೇ ಒಂದು ಅಸ್ತ್ರ ಎಂದುಕೊಂಡು ದೊಡ್ಡದನಿಯಲ್ಲಿ ಕೂಗುತ್ತಾ, ಇಡೀ ಕ್ಲಾಸ್ ರೂಮನ್ನೇ ನಮ್ಮ ರಂಗಸ್ಥಳವನ್ನಾಗಿ ಪರಿವರ್ತಿಸಿಕೊಂಡು ಮೈಕೈಗಳನ್ನೆಲ್ಲಾ ಕುಣಿಸುತ್ತಾ ನಾವು ವೀರಗರ್ಜನೆಗೈಯ್ಯುತ್ತಿದ್ದರೆ ಸಮಾಧಿ ಯೋಗಕ್ಕೇರುವ ತಾಕತ್ತು ಅವನಿಗಿದೆಯೆಂದರೆ ಅವನ ಪ್ರಭುದ್ಧತೆ ಎಂಥ ಮೇಲ್ಮಟ್ಟದ್ದಾಗಿರಬಹುದೆಂದು ಅರಿವಾಗಿ ಅವನನ್ನು ಕೊಂಚವೂ ಅಲುಗಾಡಿಸದೇ ಅವನ‌ಷ್ಟಕ್ಕೆ ಅವ ನ‌ನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವರು ಪುಟ್ಟ ಮಕ್ಕಳಂತೆ ಬಾಯಲ್ಲಿ ಬೆರಳು ಹಾಕಿಕೊಂಡು ಚೀಪುತ್ತಿದ್ದರೆ, ನೋಟಬುಕ್ಕುಗಳಲ್ಲಿ ಆಟವಾಡುತ್ತಿದ್ದರೆ  ನಾವು ನೋಡಿಯೇ ಇಲ್ಲವೆಂಬಂತೆ ನಟಿಸಿ ಅವರ ಮುಜುಗರ ತಪ್ಪಿಸಿಬಿಡುತ್ತೇವೆ. ಇದೇನು  ಮಹಾ,  ನೀವು ಮಾಡುವುದೇ ಇಷ್ಟು ಅಂತ ನೀವೇನೂ ಮೂಗು ಮುರಿಯುವುದು ಬೇಡ. ಇನ್ನೂ ನನ್ನ ಲಿಸ್ಟು ಮುಗಿದಿಲ್ಲ.

ನೋಟ್ಸು, ಕ್ವೆಶ್ಚನ್ ಬ್ಯಾಂಕು, ಇಂಪಾರ್ಟೆಂಟ್ ಪ್ರಶ್ನೆಗಳು, ಮೂರ್ನಾಲ್ಕು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಕ್ಲಾಸಿನಲ್ಲಿ ಬಿಡಿಸುವುದು, ಇವೆಲ್ಲಾ ಉಪಕಾರಗಳನ್ನು ಅವರು ಕೇಳದೆಯೇ ಮಾಡುತ್ತಿರುತ್ತೇವೆ. ಅದರ ಮೇಲೆ ಕೇಸ್ ಸ್ಟಡಿ, ಅಸೈನ್ಮೆಂಟು, ಅದು ಇದು ಅಂತ ನಮಗೆ ಗೊತ್ತಿಲ್ಲದ್ದನ್ನೆಲ್ಲ ಗೊತ್ತಿದ್ದವರಿಗಿಂತ ಹೆಚ್ಚು ಸಿರೀಯಸ್ಸಾಗಿ ಮಾಡಿಸುತ್ತೇವೆ.

ಇತ್ತಿತ್ತಲಾಗಿ ನಾವು ಇನ್ನೊಂದಿಷ್ಟು add on ಉಪಕಾರಗಳನ್ನು ಸುರು ಹಚ್ಚಿಕೊಂಡಿದ್ದೇವೆ. ಶಾಲೆಯಲ್ಲಿ ಏನು ಎಂದರೆ ಏನೂ ಕಲಿತಿರದ ನಮ್ಮ ಮುದ್ದು ಮಕ್ಕಳಿಗೆ ನಮ್ಮ ಪಾಠ ಎಲ್ಲಿಂದ ಶುರು ಮಾಡಬೇಕೆಂಬ ಗೊಂದಲದಲ್ಲಿ ನಾವೇ ಬಿದ್ದು ಗೋಳಾಡಿದರೂ ಪ್ರಾಬ್ಲ್ಂ ಅನ್ನು ಅಲ್ಲಿಯೇ ಫಿಕ್ಸ್ ಮಾಡಿ, ಅಕ್ಷರಗಳಿಂದಲೇ ಆಗಲಿ ಅಂತ ಪ್ರಾರಂಭಿಸಿಯೇ ಬಿಡುತ್ತೇವೆ. ಇನ್ನು ವ್ಯಾಕರಣ, ವಾಕ್ಯರಚನೆ ಅಂತೆಲ್ಲಾ ಅಂತ:ಕರಣದಿಂದ ಹೇಳಿಕೊಟ್ಟು ಯಾಕಾರು ಸಿಗತಿವಿ ಟೀಚರ್ಸಿಗೆ, ಬ್ಯಾರೆ ಸಿಕ್ಸೆ ಇಲ್ವಾ ಸ್ಟುಡಂಟಿಗೆ' ಅಂತ ಅವು ಅತ್ತು ಸಾಲೆ ಬಿಡಿಸಿದ ದೋಷಕ್ಕೆ ತುತ್ತಾಗ್ತೀವಿ. ಇರಲಿ ಈಗ ಮಾತ್ರ ನಾನು ಕಲಿಸುತ್ತಿರುವ ವಿಷಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಿಯವಾಗಬಹುದೆಂಬ ಕೆಟ್ಟ ನಂಬಿಕೆ ಉಂಟಾಗಿದೆ ನನಗೆ. ಒಂದೊಂದು ಸಲ ಹಾಗೆ ಟೀಚರಗಳು ತಮ್ಮ ಕೆಪ್ಯಾಸಿಟಿಯ ಬಗ್ಗೆ ಅತಿಶ‌ಯವಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಅಷ್ಟೇ ಅಲ್ಲ ತಮ್ಮ ವಿದ್ಯಾರ್ಥಿಗಳ ಆಸಕ್ತಿಯ ಬಗ್ಗೆಯೂ ಭಯಂಕರ ವಿಶ್ವಾಸ ಅವರಿಗೆ. ಅಂಥದೇ ಕೆಟಗರಿಯಲ್ಲಿ ಬರುವ ನಾನು ನನ್ನ ಮಕ್ಕಳ‌  ಬಗ್ಗೆ ಬಹಳಷ್ಟು ಸಹಾನುಭೂತಿಯನ್ನು ಹೊಂದಿರುವವಳಗಿದ್ದರಿಂದ ಒಂದು ಸಣ್ಣ ಪರೋಪಕಾರಿ ಕೆಲಸವನ್ನು ಮಾಡಲು ಹೊರಟಿದ್ದೇನೆ. ಹುಡುಗ‍ ಹುಡುಗಿಯರು ಒಮ್ಮೊಮ್ಮೆ ಪ್ರೇಮದಲ್ಲಿ ಬಿದ್ದು ವಿಲವಿಲ ಒದ್ದಾಡಬೇಕೆಂದು ಸ್ವಯಂಸ್ಪೂರ್ಥಿಯಿಂದ ಪ್ರಯತ್ನ ಮಾಡುತ್ತಿರುತ್ತಾರೆ, ಇನ್ನು ಕೆಲವರು ಅದಾಗಲೇ ಬಿದ್ದುಬಿಟ್ಟಿರುತ್ತಾರೆ ಮತ್ತು ತಮ್ಮ ಪ್ರಿಯತಮೆ(ಮ)ಗೆ ಒಂದು ಸುಂದರವಾದ ಪ್ರೇಮಪತ್ರವನ್ನು ಬರೆಯಲು ಚಡಪಡಿಸುತ್ತಿರುತ್ತಾರೆ. ಇದು ಮೊಬೈಲ್ ಯುಗವಾದ್ದರಿಂದ  ILU, I ms U, Gm, Ga, Gn, tc  ಎಂದೆಲ್ಲಾ ಕಳಿಸಿ ಆಗಲೇ ಮುಗಿದುಹೋಗಿರುತ್ತದೆ. ಮತ್ತೂ ಮತ್ತೂ ಅವನ್ನೇ ಕಳಿಸಬೇಕೆಂದರೆ ಅವಕ್ಕೂ ಬೋರು, ಓದುವ ಪ್ರೇಮಿಗಳಿಗೂ ಬೋರು. ಇಂಥ ಟೈಮಲ್ಲೇ ಸ್ವಾಮಿ, ಏನಾದರೂ ಕ್ರಿಏಟಿವ್ ಆಗಿ ಬರೆಯಬೇಕೆಂಬ  ರೋಗ ಉಲ್ಭಣಿಸಿ ಪ್ರೇಮರೋಗಿಯು ಇನ್ನೂ ಹೆಚ್ಚಿನ ಟೆಂಪರೇಚರನಿಂದ ಬಳಲಿ ಬೆಂಡಾಗುತ್ತಾನೆ(ಳೆ).  ಒಂದು ಉದ್ದಾನುದ್ದ ಪ್ರೇಮಪತ್ರ ಬರೆದು ಮನಸ್ಸಿನೊಳಗಿನದೆಲ್ಲಾ ತೋಡಿಕೊಳ್ಳಬೇಕೆಂಬ ಬಯಕೆ ಪಾಪ ಯಾರಿಗಿರುವುದಿಲ್ಲ ಹೇಳಿ? ಆದರೆ ಪಾಪ ಮತ್ತದೇ ವ್ಯಾಕರಣ, ವಾಕ್ಯರಚನೆ ಎಂದೆಲ್ಲಾ ರಗಳೆ. ಆಗ ಕೆಟ್ಟ ಭಾಷೆ ಕಲಿಸಿದ ಈ ಸ್ಕೂಲ ಟೀಚರಗಳ ವಿರುದ್ಧ ಅವರ ಸಹಸ್ರ ನಾಮಾವಳಿ ಪ್ರಾರಂಭವಾಗಬಹುದು. ನೌಕರಿಗಾಗಿ ಅರ್ಜಿ ಕಳಿಸಲು ಅರ್ಜಿಯ ವಿವಿಧ ನಮೂನೆಗಳನ್ನು ಇಂಟರನೆಟ್ ಮೇಲೆ ಜಾಲಾಡಿದಂತೆ, ಪ್ರೇಮಪತ್ರದ ನಮೂನೆಗಳಿಗಾಗಿಯೂ ಜಾಲಾಡಿ ಸುಸ್ತಾಗಿರಬಹುದು. ಯಾಕೆ ಯಾರೂ ಕೊಡಬಾರದು ಇಂಥ ಉಪಯೋಗಿ ಟಿಪ್ಸು, ಲಿಂಕ್ಸು, ಅಂತ ಯಾರನ್ನು ಬೈಯ್ಯಬೇಕೆಂದು ಗೊತ್ತಾಗದೇ ಕೈಕೈ ಹಿಸುಕಿಕೊಂಡು ಅಸಹಾಯಕರಾಗಿರಬಹುದು. ಅಂಥ ನನ್ನ ಎಲ್ಲ ಪಾಪದ ಮುದ್ದು ಮಕ್ಕಳಿಗೆ ಇಲ್ಲಿದೆ ಒಂದು ಪ್ರೇಮಪತ್ರದ ನಮೂನೆ.

   ಓದಿಕೊಂಡು, ಕಂಠಪಾಠ ಮಾಡಿಕೊಂಡು, ಇಲ್ಲವೇ ಕಾಪಿ ಹೊಡೆದು ಬರೆದು ಪ್ರಿಯತಮನ(ಮೆಯ) ಮನಗೆದ್ದು ಪಾಸಾಗಿಬಿಡಲಿ ಎಂಬ ಒಂದೇ ಒಂದು ದೂರಾಲೋಚನೆ ಅಷ್ಟೇ. ಮತ್ತಾವ ಸ್ವಾರ್ಥವೂ ಇಲ್ಲ. ಹಾಗಂತ ಇದು ನನ್ನದೇ ಸ್ವಂತ ಕಪೋಲಕಲ್ಪಿತ ಕೃತಿ ಎಂದು ಪ್ರಿಯ ವಿದ್ಯಾರ್ಥಿಗಳು ತಪ್ಪು ಭಾವಿಸಬಾರದು. ಹಾಗೆಲ್ಲಾ ನಾವು ಲೆಕ್ಚರರಗಳು ಸ್ವಂತ ತಲೆ ಉಪಯೋಗಿಸಿ ನೋಟ್ಸ್ ಕೊಡುವುದೇ ಇಲ್ಲ. ಅಲ್ಲಿ ಇಲ್ಲಿ ನಿಮಗಿಂತ ಒಂದೆರಡು ಹೆಚ್ಚಿಗೆ ಪುಸ್ತಕಗಳನ್ನು ರೆಫರ ಮಾಡಿ ನೋಟ್ಸ್ ತೆಗೆದಂತೆ ಅಲ್ಲಿ ಇಲ್ಲಿ ಹುಡುಕಾಡಿ ನಿಮಗಾಗಿ ಪ್ರೇಮಪತ್ರದ ಒಂದೊಳ್ಳೆ ಮಾದರಿಯನ್ನು ಕಂಡುಹಿಡಿದ್ದಿದ್ದೇನೆ. ಇದನ್ನೇ ಆಧಾರವಾಗಿಟ್ಟುಕೊಂಡು ನೀವು ಅಲ್ಲಿ ಇಲ್ಲಿ ಒಂದೆರೆಡು ಶಬ್ದಗಳನ್ನು ನಿಮ್ಮ ನಿಮ್ಮ ಅನುಕೂಲ, ಪರಿಸ್ಥಿತಿ ಮತ್ತು ಬುದ್ಧಿಗೆ ತಕ್ಕಂತೆ ಬದಲಾಯಿಸಿ ಬರೆದುಕೊಳ್ಳಬಹುದು. ತೀರಾ ಇದನ್ನೇ ವರ್ಡ್ ಟು ವರ್ಡ್ ಕಾಪಿ ಹೊಡೆದರೆ ಪ್ಲಗೇರಿಸ್ಂ ಭೂತ ಬೆಂಬಿಡದೆ ಕಾಡಬಹುದು.

ಇನ್ನು ನೀವುಂಟು, ಪ್ರೇಮಪತ್ರದ ನಮೂನೆಯುಂಟು, All the best, all the best.

Welfare

My Dearest Laila (Miss Kho t)

       All well, I love you hart and sole, You also please love to me. I you Go to Seneema, box seat, I stand in Moter stand 3 O’clock. Seneema begin three and half matnee. You do not come, my life Barbad! Nothing more to wright at present. All well.

Post:Dharwar                                                Your dearest Majnu

At: Dharwar                                             Vasantrao Gopal Gouda Desai

District: Dharwar                                                  (Bahaddur)

                                                                            

(ಇದೊಂದು ಕನ್ನಡದ ಖ್ಯಾತಲೇಖಕರ ಪ್ರಸಿದ್ಧ ಕಾದಂಬರಿಯಲ್ಲಿ ಬಂದ ಪ್ರೇಮಪತ್ರ, ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು. ಇಲ್ಲವಾದರೆ ಇನ್ನೆರಡು ದಿನ ಬಿಟ್ಟು ನಾನೇ ತಿಳಿಸುತ್ತೇನೆ)

Friday, 21 March 2014

ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು

                    ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು


ಮರಿ ಫುಡಾರಿ ಭಾಳ ಘಾಬರಿ ಆಗಿದ್ದ. ಎಲ್ಲಾ ನ್ಯಾಷನಲ್ ಚ್ಯಾನಲ್ಲಗೋಳು ಬರೇ ಭ್ರಷ್ಟಾಚಾರದ ಸುದ್ದಿನs.. ಮಾತಾಡಲಿಖತ್ತಾವ. ಅವಕ್ಕ ಸರಕ ಒದಗಸ್ಲಿಕ್ಕಂತ ದಿನಕ್ಕೊಂದೊಂದು ಸ್ಕ್ಯಾಮು ಪೈಪೊಟಿಮ್ಯಾಲೆ ಹೊರಗ ಬೀಳಲಿಖತ್ತಾವ. ಅಯ್ಯೋ ದೇವರೇ ಹಿಂಗಾದರ ಮುಂದಿನ ಇಲೆಕ್ಷನ್ನದಾಗ ನಮ್ಮ ಗತಿಯೇನು? ಅವರಪ್ಪ ಹಿರಿಯ ಫುಡಾರಿ ಮುಂದ ಹೋಗಿ ಘೋಳಾಡಲಿಖತ್ತ. "ಅಪ್ಪಾ ಈ ಸರ್ತೆ ಇಲೆಕ್ಷನ್ನದಾಗ ನಾವು ಗೆದ್ದಂಗ ತೊಗೊ. ಬರೇ ಒಂದರ ಮ್ಯಾಲ ಒಂದು ಭ್ರಷ್ಟಾಚಾರ ಹೊರಗೆಳಿಲಿಖತ್ತಾರ ಟಿ.ವಿ. ಚ್ಯಾನಲ್ಲಿನವ್ರು ".
"ಅಯ್ಯೋ ಮಗನ ಅದನ್ನೆಲ್ಲ ಮನಸ್ಸಿಗೆ ಹಚಗೋಬ್ಯಾಡ ತಗಿ, ಗೆಲ್ಲೋದ ಗೆಲ್ಲೋದ ನವs  ಗ್ಯಾರಂಟೀ, ಇನ್ನ್ಯಾರ ಬರ್ತಾರಲೇ ನಮ್ಮನ್ನ್ನ ಸೈಡ್ ಒಗದು!" ಅಂತ ಆತ್ಮವಿಶ್ವಾಸದಿಂದ ಹಿರಿ ಫುಡಾರಿ ಉಡಾಫೆ ಮಾಡಿದ. "ಇಲ್ಲಪ್ಪಾ ನಿನಗ ಗೊತ್ತಿಲ್ಲ ಜನಾ ಈಗ ಶ್ಯಾಣೆ ಆಗ್ಯಾರ, ಹಿಂದಿನ ಹಂಗ ನಮಗ ಕಾಲ ಬಿದ್ದು ವೋಟು ಕೊಡಂಗಿಲ್ಲ, ನೋಡ್ತಾ ಇರು, ಇನ್ನ ಐದ ವರ್ಷ ನಮಗೆಲ್ಲಾ ರಜಾ ಕೊಟ್ಟಬಿಡ್ತಾರ".
"ಛೇ ಮಗನ ನಿನ್ನ ದಿಲ್ಲಿ ಕಾಲೇಜಿನ್ಯಾಗ ಇಟ್ಟು ಓದಿಸಿದ್ದರ ದುಷ್ಪರಿಣಾಮ ಇದು ತಮ್ಮಾ . ನಮ್ಹಂಗ ಹಳ್ಳಿ ಸಾಲ್ಯಾಗ ಕಲತಿದ್ದರ ನಮ್ಮ ಸುತ್ತಮುತ್ತಲ ಮಂದಿ ಆಚಾರಾ- ವಿಚಾರಾ ಎಲ್ಲಾ ತಿಳೀತಿತ್ತು ನಿಂಗ. ಈಗ ಒಂದು ಕೆಲಸಾ ಮಾಡೋಣು. ಒಂದಿಷ್ಟು ಮಂದಿನ್ನ ಮಾತಾಡಿಸಿಕೊಂಡು ಬರೋಣು ನಡಿ, ನಮ್ಮೂರಾಗ".
ಅಪ್ಪ ಮಗ ರಾಜಕಾರಣಿಗಳು ಮತ್ತವರ ಪಟಾಲಂ ಹಳ್ಳಿಗೆ ಬಂದು ತಮ್ಮ ಹಳೆ ಮನ್ಯಾಗ ಟೆಂಟ ಹಾಕ್ತು. ಫುಡಾರಿ ಸಾಹೇಬರು ಊರಿಗೆ ಬಂದ ಸುದ್ದಿ ಊರಿಗೆಲ್ಲಾ ತಿಳೀತು. ಹಳ್ಳಿ ಅಜ್ಜಾರು, ಮುತ್ತ್ಯಾಗಳು, ಕಾಕಾ - ಮಾಮಾಗೋಳು, ಕೆಲಸಿಲ್ದ ಬೀಡಿ ಎಳದ ಎಳದ ಹೊಗಿ ಬಿಟಕೊಂತ ಆಲದ ಮರದ ಕಟ್ಟಿ ಮ್ಯಾಲ ಹಾಳ ಹರಟಿ ಹೊಡಕೊಂತ ಕೂತ ಪಡ್ಡೆ ಹೈಕಳು, ಎಲ್ಲಾ ಸಾಹೇಬ್ರ ದರ್ಶನಾ ತೊಗೊಂಡು ಧನ್ಯ ಆಗ್ಲಿಕ್ಕೆ ಓಡೋಡಿ ಬಂದ್ರು. ಸಾಹೇಬ್ರು ತಮ್ಮನಿ ಜಗಲಿ ಮ್ಯಾಲ ಅವರ್ನೆಲ್ಲಾ ಕೂಡಿಸಿ, ತಾವಿಬ್ರು ಹಳೇ ಕಾಲದ ಧೊಡ್ಡ ಕುರ್ಚಿಗಳ ಮ್ಯಾಲೆ ಆಸೀನರಾದ್ರು. ಮಳೀ -ಬ್ಯೆಳಿ ವಿಚಾರಿಸಿದ್ರು. ಹಳ್ಳಿ ಮಂದಿ ಇನ್ನೂ ಹುರುಪಾದ್ರು. ಐದ ವರ್ಷ, ಒಳಗs ಇಟಗೊಂಡ ಇಟಗೊಂಡ ಉಬ್ಬಿದ ಹೊಟ್ಟಿ ಒಳಗಿನ ದು:ಖಾ ಎಲ್ಲಾ ಹೊರಗ ಹಾಕಿ ನಿರಾಳಾದ್ರು. ಹಳ್ಳಿ ಮಕ್ಕಳಂದ್ರ ಸಾಹೇಬ್ರಿಗರೇ ಏನು ಕಡಿಮಿ ಪ್ರೀತೀ ಅಂತೀರಿs ! ಈ ಹಳ್ಳಿ ಅಲ್ದನs ಸುತ್ತಮುತ್ತಲ ಇಪ್ಪತ್ತು ಮೂವತ್ತು ಹಳ್ಳಿ ಜನಾ ಎಲ್ಲಾ ವೋಟ ಹಾಕಿ ಪ್ರತೀ ಸಲ ಅವರನ್ನ ಗೆಲ್ಲಿಸಿಕೊಟ್ಟಾರ. ಸಾಹೇಬ್ರರೇ ಅವರನ್ನ ಮರತಾರೇನು, ಊಹುಂ, ಎರಡ ವರ್ಷದ ಹಿಂದ ಮಗಳ ಮದವಿ ಮಾಡಿ ಎಲ್ಲಾರಿಗೂ ಭರ್ಜರೀ ಊಟಾ ಹಾಕಸ್ಯಾರ. ಹೋದ ವರ್ಷ ಮಗನ ಮದವಿ ಮೂರ ಮೂರ ದಿನಾ ಮಾಡಿದಾಗ ಸುತ್ತಮುತ್ತಲ ಹಳ್ಯಾಗೆಲ್ಲಾ ಒಂದ ಮನ್ಯಾಗೂ ಒಲಿ ಉರಿಬಾರ್ದು, ಎಲ್ಲಾರೂ ಮೂರೂ ದಿನಾ ಮದವಿ ಮನ್ಯಾಗs ಊಟಾ ಮಾಡ್ಬೇಕಂತ ಫ಼ರ್ಮಾನು ಹೊಂಡಿಸಿದ ಮ್ಯಾಲೆ ಪಾಪ ಮಂದ್ಯರ ಯಾಕ ಸುಮ್ಮ ಸುಮ್ಮನ ತ್ರಾಸ ತೊಗೋತಾರ? ಮೂರೂ ದಿನಾ ಹಗಲ -ರಾತ್ರಿ ಅನದನ ಧಕ್ಕನ ದುಡದು ಕಂಠ ಮಟ ಉಂಡು ತೃಪ್ತ ಆಗಿ ಹೊಗ್ಯಾರ. ಮುಂದಿನ ವರ್ಷ ಸಾಹೇಬ್ರಿಗೆ ಮಮ್ಮಗಾ ಆಗ್ಲಿ, ಊರಿಗೇ ಊಟಾ ಹಾಕಸ್ಲಿ ಅಂತ ಕಾಯ್ಲಿಖತ್ಯಾರ ಅಂಥ ಒಳ್ಳೆ ದಾನಶೂರ ಕಳ್ನಾ ನಮ್ಮ ಸಾಹೇಬರು ಇನ್ನು ಈಗೀಗ ರಾಜಕಾರಣಕ್ಕ ಇಳಿದಿರೋ ಅವರ ಡೆಲ್ಲಿ ರಿಟರ್ನಡ್ ಮಗಾ. ಅಂದಮ್ಯಾಲ ಕೇಳ್ತೀರ, ಎಲ್ಲಾ ಜನ್ರ ಪ್ರೀತಿ ಸುರಕೊಂಡು ಸೂರಿ ಮಾಡಿಬಿಟ್ಟರ ಅಪ್ಪಾ-ಮಗಾ. ಅಂಥ ಸಾಹೇಬ್ರು ಮಗನ್ನ ಕರಕೊಂಡು ಅಪರೂಪಕ್ಕ ಊರಕಡೀ ಬಂದ್ರಂದ್ರ ಜನ ಮನ್ಯಾಗ ಇರಲಿಕ್ಕಾಗತದೇನು? ಎಲ್ಲಾ ಕೆಲಸಾ ಬಿಟ್ಟು ಊರಿಗ ಊರs ಅವರ ಮುಂದ ನೆರದದ.
      "ಹ್ಯಾಂಗದಪಾ ರಾಮಣ್ಣಾ ಇಲೆಕ್ಷನ್ ಭರಾಟಿs. ನಮಗೇನರೇ ಸಹಾಯ ಮಾಡ್ತಿರೋ ಇಲ್ಲೋ ಮತ್ತ? " ಸಾಹೇಬ್ರು ಹಗೂರಕ ಮುಖ್ಯ ವಿಷಯಕ್ಕ ಬರಲಿಕ್ಕ ಸುರು ಮಾಡಿದ್ರು.
      "ಹಂಗ್ಯಾಕ ಅಂತೀರಿ,  ತಗೀರೀ ಯಪ್ಪಾ, ನಿಮಗಲ್ದನ ಇನ್ಯಾರಿಗೆ ವೋಟು ಕೊಡೋದು  ನಾವು. ಇಲ್ಲೆ ಅಷ್ಟೂ ಜನಾ, ಸುತ್ತಮುತ್ತಲ ಹಳ್ಳಿ ಜನಾ ಎಲ್ಲರ ವೋಟು ನಿಮಗs, ಕಾಳಜಿ ಬಿಡ್ರಿ" ಅಂದ ಊರಿನ ಹಳೇ ಮನಷ್ಯಾ ರಾಮಣ್ಣ.
      "ಅಲ್ಲಪಾ ಮತ್ತ, ಈಗೀಗ ಟಿ. ವ್ಹಿ. ಅವ್ರು ಏನೇನೋ ಸುದ್ದಿ ತಗದು ಸುಳ್ಳ ಸುಳ್ಳs ನಮ್ಮನ್ನೆಲ್ಲಾ ಬಯ್ಯಾಕತ್ತಾರ ಏನಪಾs . ಮತ್ತ ನೀವೆಲ್ಲರೇ ಅದನ್ನs ಖರೇ ಅಂತ ನಂಬಿ ನಮಗ ವೋಟ ಹಾಕಬಾರ್ದಂತ ಒಳಗೊಳಗ ನಿರ್ಣಯ ಮಾಡಿದ್ರ ಈ ವಯಸ್ಸಿನ್ಯಾಗ ನಾವೆಲ್ಲೆ ಬ್ಯಾರೆ ಕ್ಷೇತ್ರಕ್ಕ ಹೋಗಿ ವೋಟ ಕೊಡ್ರಿ ವೋಟ ಕೊಡ್ರಿ ಅಂತ ಬ್ಯಾರೆದಾವ್ರನ ಭಿಕ್ಷಾ ಬೇಡೋಣೋ  ಭೀಮಶಿ, ನನ್ನ ಭವಿಷ್ಯ ನನ್ನ ಮಗನ ಭವಿಷ್ಯ ಎರಡೂ ನಿಮ್ಮ ಉಡ್ಯಾಗ ಹಾಕಿ ಬರಿಗೈಲೆ ನಿಂತೇವಿ ನೋಡ್ರ್ಯಪಾ, ಉಳಸೋದು, ಮುಳಗಸೋದು ನಿಮಗs ಬಿಟ್ಟಿದ್ದು" ಅಂತ ನಾಜೂಕಾಗಿ  ಅಸ್ತ್ರ ಉಪಯೋಗಿಸಿದರು ಹಿರೀ ಸಾಹೇಬ್ರು.
       "ತಗೀರಿ ಅಣ್ಣಾರ ಆ ಟಿ. ವ್ಹಿ. ಅವರು ಏನ ಹೇಳ್ತಾರೋ ಏನೋ ಅದೆಲ್ಲಾ ನಾವು ತಲಿ ಕೆಡಿಸಿಗೋಳಾಂಗಿಲ್ಲರೀs. ನಮ್ಮ ವೋಟ ಏನಿದ್ರೂ ನಿಮಗs... " ಅಂತ ವಿಶ್ವಾಸ ಕೊಟ್ಟ ಭೀಮಶೀ. ಆದ್ರೂ ಮರಿ ಫ಼ುಡಾರಿ ಜೀವ ಫುಕು ಫುಕು ಅನ್ನೋದು ಬಿಡವಲ್ತು. ಅದಕ್ಕs ತಾನs  ಕೇಳಿದ.
"ನೀವು ದಿನಾ ಟಿ.ವ್ಹಿ.ನ್ಯಾಗ ಏನೇನ ನೋಡ್ತೀರಪಾ?
" ಏ ಬಿಡ್ರಿ ಸಾಹೇಬ್ರ‌s ಬೆಳಗಿನ ಟೈಮಂತೂ ನೋಡಾಕ ಆಗೂದಿಲ್ರೀ  ರಾತ್ರಿ ಒಂದಿಷ್ಟು ಹೆಣ್ಮಕ್ಕಳು ಧಾರಾವಾಹಿ ಹಚ್ಕೊಂಡು ಕೂತಿರ್ತಾರ, ಅದನ ನಾವೂ ನೋಡೋದು. ಅದ ಬಿಟ್ಟರ ಒಂದೀಟ ಕ್ರಿಕೆಟ್ಟು ಅದೂ ಇದು ಅಂತ ಆಟಾ ನೋಡ್ತೇವರೀ, ಆತು" ಅಂತ ನಿಂಗಣ್ಣ ಉತ್ತರಾ ಕೊಟ್ಟಾ.
ಅಷ್ಟರಾಗ ಜಮಾಯಿಸಿದ್ದ ಹೆಣ್ಣಮಕ್ಕಳನ್ನ ನೋಡಿ ಮರಿ ಕೇಳಿದ, "ತಾಯಂದ್ರ, ನೀವು ಏನೇನ ನೋಡ್ತೀರಿ ಟಿವ್ಯಾಗ, ನೀವು ಮನ್ಯಾಗ ಇರ್ತೀರಂದ್ರ ಮುಂಜಾನೆ, ಮಧ್ಯಾನ್ನನೂ ನೋಡ್ತಿರಬೇಕಲಾ?"
"ನೋಡ್ತೇವರೀ. ಮಧ್ಯಾನ್ನ ಕೆಲವೊಂದು ಚಾನಲ್ಲಿನ್ಯಾಗ ಗಂಡಾ ಹೆಣ್ತೀ ಜಗಳ, ಡೈವರ್ಸ ಕೊಡ್ತೇನಂತ ಗಂಡ ಹೇಳೋದು, ಕೊಡಂಗಿಲ್ಲಂತ ಹೇಣ್ತೀ ಅಳೋದು, ತಾಸಗಟ್ಳೇ ಕೆಲಸಾ ಮಾಡೋದು ಬಿಟ್ಟ ಬಿಟ್ಟ ನೋಡೇವ್ರೀ. ಇನ್ನ ಆ ಸ್ವಾಮಿ, ಈ ಸ್ವಾಮಿ ಅಂತೆಲ್ಲಾ ನೂರಾಎಂಟು ಕಥೀ ತೋರಸ್ತಾರ ನೋಡ್ರೀ, ಬಲೇ ಮಜಾ ಇರ್ತಾವ್ರೀ, ಅವನ್ನೆಲ್ಲಾ ನೋಡ್ತೇವ್ರೀ. ರಾತ್ರೀ ಮಾತ್ರ ಸೀರಿಯಲ್ ಬೇಕು. ಅದೇನ ಛ್ಂದ ಮನೀ, ಅದೇನ ವಸ್ತಾ ವಡವಿ, ದಾಗೀಣು, ಸೀರೀ,  ಭಾಳ ಛಂದ ಇರ್ತಾವ್ರೀ" ಅಂದ್ಲು ಕಡೀಮನೀ ಕಲ್ಲಕ್ಕ.
"ಅಲ್ಲಾ ಅಕ್ಕಾರ, ನಿಮಗ ಈ 2ಜಿ, 3ಜಿ ಅಂದ್ರ ಏನು ಅಂತ ಗೊತ್ತದ ಏನು?" ಮರಿ ಮತ್ತೂ ಕೆದಕಿದ.
"ಏ ಇಲ್ಲ ಬಿಡ್ರೀ, ನಮಗ ಗೊತ್ತಿರೋದು ಪಾರ್ಲೆ ಜಿ ಒಂದ" ಅಂದ್ರು ಹೆಣ್ಮಕ್ಕಳು.
"ಅಲ್ಲಾ ಗಂಡಸರಿಗೆ ಯಾರಗರೇ ಈ ಕೋಲಗೇಟು ಅನ್ನೋದು ಗೊತ್ತದ ಏನು?"
"ಹೇ ಅದೇನ ಚಾಷ್ಟೀ ಮಾಡ್ತಿರೀ ಸಾಹೇಬ್ರ, ನಾವ ಹುಟ್ಟಿದಾಗಿಂದ ಕೋಲ್ಗೇಟ ಪೇಸ್ಟ‌s ಅಲ್ಲೇನರೀ ಹಲ್ಲ ತಿಕ್ಕಾಕ ಬಳಸೂದು? ಬ್ರಷ್ ಉಪಯೋಗಿಸ್ದೇ ಇದ್ರೂ ಪೇಸ್ಟ ಮಾತ್ರ ಯಾವಾಗ್ಲೂ ಕೋಲ್ಗೇಟರೀ" ಅಂದ ಪಂಪಣ್ಣಾ. ಮರಿಗೆ ಖುಶಿ ಆತು, ಅಬ್ಬಾ ಅಂತೂ ಇಲ್ಲಿನ ಮ‍ಂದಿಗೆ ಕೋಲ್ಗೇಟು, 2ಜಿ, CWG, ಎಲ್ಲಾ ಏನೂ ಗೊತ್ತಿಲ್ಲ ಅಂತಾತು. ಇನ್ನ ಆದರ್ಶ ಅದೂ ಇದೂ ಅಂತ ಕೇಳೋದ್ಯಾಕ ಅಂತ ಸುಮ್ಮನಾದ. ದೊಡ್ಡ ಸಾಹೇಬ್ರೂ ಅದು ಇದು ಮಾತಾಡಿ ಊರಮಂದಿನ್ನ ಕಳಿಸಿ ಕೊಟ್ರು.
"ಆತಿಲ್ಲಪಾ ಮಗನ‌s  ಸಮಾಧಾನ! ನಮ್ಮ ಜನಾ ಒಳ್ಳೆವ್ರು. ಆ ಸುಪನಾತಿ ಟಿ.ವ್ಹೀ. ಅವ್ರು ನೂರು ಒದರ್ಲೀ, ನಮ್ಮ ಜನಾ ನಮಗs ವೋಟು ಕೊಡ್ತಾರ, ನೋಡ್ತಿರು. ಹೋದ ಸರ್ತಿ ಮನಿಗೆ ಸಾವಿರ ರೂಪಾಯ ಹಂಗ ಹಂಚಿತ್ತು, ಈ ಸಲ ಮನಷ್ಯಾಗ ಸಾವ್ರ ರೂಪಾಯ ಹಂಗ ಹಂಚಿದ್ರ ಓಡಿ ಬಂದ ವೋಟ ಹಾಕಿ  ಹೋಕ್ತಾರ, ಅಷ್ಟ ನಿಯತ್ತಿನ ಮಂದಿ" ಅಂತ ಮಂಚದ ಮ್ಯಾಲೆ ಮೈ ಚಾಚಿದ್ರು.
ಏನೋ ಯೊಚ್ನಿ ಮಾಡ್ಕೋತ ಮರಿ ಫುಡಾರಿನೂ ಅಡ್ಡಾದ. ಆದರ ಮೈಗೆಲ್ಲಾ ಸೊಳ್ಳಿ  ಕಡದು ನಿದ್ದಿ ಬರಲಿಲ್ಲಾ. ಮತ್ತ ತಲ್ಯಾಗ ಹುಳಾ ಕೊರಿಲಿಕತ್ತು. ಅಲ್ಲಾ ಈ ಹಳ್ಳಿ ಮಂದಿ ಹಕ್ತಾರ, ಅಡ್ಡಿ ಇಲ್ಲಾ. ಆದ್ರ ಆ ಹರಾಮಖೋರ್ ಶಹರದ ಜನಾ? ಈ ಲೋಕಸಭಾ ಇಲೆಕ್ಷನ್ನದಾಗ ಅವ್ರದೂ ಮರ್ಜಿ ಕಾಯಬೇಕಲ್ಲಾ! ಅವ್ರಿಗೆ 2ಜಿ, ಕೊಲ್ಗೇಟು ಎಲ್ಲಾ ಸ್ಕ್ಯಾಮೂ ಗೊತ್ತ ಇರ್ತಾವ! ಅದಕ್ಕೇನು ಮಾಡೋದು? "ಅಪ್ಪಾ ಹಳ್ಳಿ ಮಂದಿದಂತೂ ಖಾರ್ತಿ ಆತು, ಆದರ ಶಹರದ ಜನಾ, ಅವರನ್ನೇನು ಮಾಡೋದು, ಅವ್ರು ಮಹಾ ದಗಾಖೋರ ಮಂದಿ" ಅಂದ. "ಥತ್ತೇರಿ ನಾಳೆ ನೋಡೋಣು ಮಲಕ್ಕಳಲೇ" ಅಂತ ಹಿರಿ ಫುಡಾರಿ ಮತ್ತ ಮಗ್ಗಲಾದ್ರು.
ಮರಿ ಫುಡಾರಿ ಬಿಡಬೇಕಲ್ಲಾ? ದಿಲ್ಲಿಯೊಳಗ ಕಲತ ಬಂದಾವ, ಹಳ್ಳಿ ಮನಷ್ಯಾ ಈ ಅಪ್ಪಗ ಏನ ತಿಳಿತದ ಅಂತ ಹೆದರಿಕಿ ಅವಂಗ. ಮರದಿನಾ ಇಬ್ಬರದೂ ಸವಾರಿ ಶಹರ ಕ್ಷೇತ್ರದೊಳಗ ಬಿಜಯಂಗೈದು ಜನರಿಗೆ ದರ್ಶನ ಕೊಟ್ಟಿತು.
ಕಾಲೇಜಿನ್ಯಾಗ ಮರಿ ಫುಡಾರಿತರುಣ ಮತದಾರರಿಗೆ ಕೇಳೇಬಿಟ್ಟ "ಯಾವ್ಯಾವ ಟಿ.ವ್ಹಿ. ಚ್ಯಾನಲ್ ನೋಡ್ತೀರಿ ತಮ್ಮಗೋಳ್ರ್ಯಾ"
"M ಟಿ.ವ್ಹಿ,  f ಟಿ.ವ್ಹಿ.  V ಚ್ಯಾನೆಲ್, ಬಿಟ್ರ ಉದಯಾ ಮ್ಯುಜಿಕ್, ರಾಜ್ ಮ್ಯುಜಿಕ್, ಕಾಮಿಡಿ, ಸಿನಮಾ ಇವನ್ನ‌s ನೋಡುದ್ರೀ ನಾವು" ಅಂದ ತರುಣರ ಪ್ರತಿನಿಧಿ ಹಂಗಿದ್ದ ವಿಚಿತ್ರ ವೇಷ ಭೂಷಣದ ಹುಡುಗನೊಬ್ಬ. "ಪೇಪರ್ ಯಾವ್ದು ಓದ್ತೀರಿ ತಮ್ಮಾ" "ಏ ಪೇಪರ್ ಓದಾಕ ಟೈಂ ಯಾರಿಗದರೀ?" ಅಂದ್ರು ಹುಡುಗ್ರು. "ಮತ್ತ ಕ್ಲಾಸ್ ಮುಗದ ಮ್ಯಾಲೆ ಏನ್ ಮಾಡ್ತೀರಪ್ಪಾ?" ಅಂದದ್ದಕ್ಕ "ಕ್ಲಾಸಿಗ್ಯಾರ ಹೋಗ್ತಾರ್ರೀ, ಕಾಲೇಜ ಇದ್ದಾಗ ಕ್ಯಾಂಪಸ್ಸಿನ್ಯಾಗ ಅಡ್ಡಾಡತೇವಿ, ಇಲ್ಲಾ ಕ್ಯಾಂಟೀನ್ ನ್ಯಾಗ ಬಿದ್ದಿರತೇವಿ, ಯಾವಾಗರೆ ಬ್ಯಾಸರ ಬಂದಾಗ ಕ್ಲಾಸಿಗೆ ಹೋದ್ರ ಮಾಸ್ತರ ಕಾಲ ಎಳಿತೇವಿ" ಎಲ್ಲಾ ಖೊಳ್ ಅಂತ ನಕ್ಕರು. "ಮನ್ಯಾಗ, ಹೊರಗ ಎಲ್ಲೆಂದ್ರಲ್ಲೆ ಮೊಬೈಲ್ ಮ್ಯಾಲೆ ಮೆಸ್ಸೆಜು ಕಳಸೋದು, ಬಂದದ್ದನ್ನ ಓದೋದು, ಫೇಸ್ ಬುಕ್ಕು, ವಾಟ್ಸ್ಯಾಪು, ಅಯ್ಯೋ ಭಾಳ ಎಂಗೇಜಮೆಂಟ್ಸ್ ಅವರೀ ನಮಗ‌s" ಅಂತ ಮತ್ತ ಎಲ್ಲಾರೂ ನಕ್ರು.
"ನಿಮಗ 2ಜಿ, 3ಜಿ, CWG ಬಗ್ಗೆ ಏನರೆ ಗೊತ್ತದ ಏನು ತಮ್ಮಾ" ಅಂದದ್ದಕ್ಕ "ಸ್ವಲ್ಪ ಸ್ವಲ್ಪ ಗೊತ್ತದರೀ, ಯಾರು ತಲಿ ಕೆಡಿಸಿಗೊಳ್ಳಾವ್ರು, ತಿನ್ನಾವ್ರು ತಿಂದು ಹಾಯಾಗಿ ಸಾಯ್ಲಿ, ನಮಗ ಹೊಸಾ ಹೊಸಾ ವರ್ಷನ್ ಗ್ಯಾಜೆಟ್ ಸಿಗಲಿ ಅಷ್ಟ‌s" ಅಂದ್ರು. ಮರಿ, ಹಿರಿ ಇಬ್ರೂ ಅಲ್ಲಿಂದ ಮರೆಯಾದ್ರು.
ಒಂದಿಷ್ಟು ನಡು ವಯಸ್ಸಿನ ಸಿರಿಯಸ್ ಜಾಣರನ್ನ ಭೆಟ್ಟಿ ಆಗಿ ಬಿಡ್ಬೇಕು ಅಂದ ಮರಿ. ಬೈಕೊಂಡೇ ಒಪಗೊಂಡ್ರು ಹಿರಿ.
"ಸರಕಾರದ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಅಂತ ಕೇಳಿದ್ದಕ್ಕ, ಅವರೊಂದಿಷ್ಟು ಮಂದಿ ಉದ್ದುದ್ದ ಭಾಷಣ ಬಿಗಿದು ಕುತಗೊಂಡ್ರು. "ಹಂಗಾರ ವೋಟು ಯಾರಿಗೆ ಹಾಕ್ತೀರಿ/" ಅಂದದ್ದಕ್ಕ, "ಎಲ್ಲೀ ವೋಟು ಸ್ವಾಮೀ,  ಯಾರಿಗೆ ಹಾಕಿದ್ರೂ ಅಷ್ಟs, ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ, ಎಲ್ಲಾರೂ ಭ್ರಷ್ಟರs, ನಾವ್ಯಾರಿಗೂ ವೋಟು ಹಾಕಂಗಿಲ್ಲ, ಇಲೆಕ್ಷನ್ ದಿನ, ಅದರ ಹಿಂದ ಮುಂದ ಜೋಡಿಸಿಕೊಂಡು ಎರಡ ದಿನಾ ಎಲ್ಲೆರೆ ಟೂರಿಗೆ ಹೋಗಿ ಬರ್ತೇವಿ, ಅಷ್ಟs ಮಜಾ ಆದ್ರು ಆಗ್ತದ" ಅಂದ್ರು.
ದಿಲ್ಲಿ ಕಾಲೇಜಿನ್ಯಾಗ ಕಲತ ನನಗಿಂತ ಹಳ್ಳೀ ಸಾಲ್ಯಾಗ ಕಲತ ನಮ್ಮಪ್ಪನ ಶಾಣ್ಯಾ ಅಂತ ಖಾತ್ರಿ ಆಗಿ ಮರಿ ರಾಜಕಾರಣಿ ನಕ್ಕೋತ ನಿದ್ದಿ ಮಾಡಿದ.

ನೀತಾ ರಾವ್