ಪತ್ರ Vs ಫೋನ್ Vs ಸೆಲ್ ಫೋನ್
ದಿನ ಕಳೆದಂತೆ ಸಂಪರ್ಕ ಸಾಧನೆಗಳಲ್ಲಿ ವಿಧವಿಧ ಬದಲಾವಣೆಗಳಾಗಿರುವುದನ್ನುನಾವೇ ಕಣ್ಣಾರೆ
ನೋಡುತ್ತಿದ್ದೇವೆ.ಅದರ ಜೊತೆಜೊತೆಗೇ ನಮ್ಮ ಮಾನವೀಯ ಸಂಬಂಧಗಳ ರೂಪ ರೇಶೆಗಳೂ ಬದಲಾಗುತ್ತಿವೆ.
ಜೀವನದ ಬಗ್ಗೆ, ಸಂಬಂಧಗಳ ಬಗ್ಗೆ ನಮ್ಮ ದೃಷ್ಟಿಕೋನಗಳೂ ವಿಪರೀತವಾಗಿ ಬದಲಾಗುತ್ತಿವೆ.
ಹಳೆಯ ತಲೆಮಾರಿನ ಜನ ಪತ್ರಗಳಲ್ಲೇ ತಮ್ಮೆಲ್ಲ ಭಾವನೆಗಳನ್ನು ತೋಡಿಕೊಂಡು ತಣ್ಣಗಾಗಿ ಹೋದರು.
ಇಂದಿನ ತಲೆಮಾರಿನವರು ಸೆಲ್ ಫೋನಗಳ ಕೈಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿ ಸಮಾಧಾನದಿಂದಿದ್ದಾರೆ.
ಆದರೆ ಪತ್ರಗಳಿಂದ ಪ್ರಾರಂಭಿಸಿ, ಮುಂದುವರೆಸಲಾಗದೇ
ಫೋನಗಳ ರಿಸಿವರಗಳಲ್ಲಿ ನಮ್ಮ ಧ್ವನಿಯನ್ನು ಕಳಿಸಿ, ಇದೀಗ ಮೊಬೈಲ್ ಫೋನಗಳ ಹಾಳೆಗಳ ಮೇಲೆ ಎಸ್ಸೆಮ್ಮೆಸ್ ಟೈಪ್ ಮಾಡುತ್ತಾ, ಹಳೆಯದನ್ನು ಮರೆಯಲಾಗದೇ ಹೊಸತನ್ನು ಬಿಡಲಾಗದೇ ತ್ರಿಶಂಕು
ಸ್ಥಿತಿಯಲ್ಲಿರುವ ನಾವು ಅಂದರೆ ನಲವತ್ತರಿಂದ ಐವತ್ತು ವಯಸ್ಸಿನವರು ಈ ಸ್ಥಿತ್ಯಂತರ ಅವಧಿಯ
ಬಲಿಪಶುಗಳು ಎಂದೆನಿಸುತ್ತದೆ, ಅಥವಾ ಎಲ್ಲ ಸಂಪರ್ಕ
ಸಾಧನಗಳನ್ನು ಉಪಯೋಗಿಸಿದ,
ಪ್ರತಿಸಲ ಸಂಕ್ರಮಣ ಕಾಲವನ್ನು
ದಾಟಿ ಬಂದ ಧೀರರು ಹೌದೇನೋ!
ನಾವು ಚಿಕ್ಕವರಿದ್ದಾಗ ಅಮ್ಮ ತನ್ನ ಇಬ್ಬರು ತಂಗಿಯರಿಗೆ ಅಂದರೆ ನನ್ನ ಚಿಕ್ಕಮ್ಮಂದಿರಿಗೆ
ಇನ್ ಲ್ಯಾಂಡ್ ಕವರಿನಲ್ಲಿ ಪತ್ರ ಬರೆಯುತ್ತಿದ್ದಳು. ಒಬ್ಬ ತಂಗಿ ಗೋವಾದ ಪಣಜಿಯಲ್ಲಿದ್ದರೆ
ಇನ್ನೊಬ್ಬ ತಂಗಿ ಮಹಾರಾಷ್ಟ್ರದ ಠಾಣೆಯಲ್ಲಿದ್ದಳು. ಹಾಗೂ ನಾವು ಬೆಳಗಾವಿಯಲ್ಲಿ. ಪ್ರತಿ ಹದಿನೈದು
ಇಪ್ಪತ್ತು ದಿನಗಳಿಗೊಮ್ಮೆ ಸರಿಯಾಗಿ ಅವರೆಲ್ಲ ಪತ್ರದ ಮೂಲಕ ಖಾಯಂ ಆಗಿ ಸಂಪರ್ಕ
ಇರಿಸಿಕೊಂಡಿದ್ದರು. ಹೀಗೆ ಬರೆಯುವ ಪತ್ರದ ಕೆಲವು ಭಾಗಗಳು ಕರಾರುವಕ್ಕಾಗಿರುತ್ತಿದ್ದವು.
ಮೊದಲಿಗೆ ಪ್ರೀತಿಯ ಇಲ್ಲವೇ ಪೂಜ್ಯ ಎಂಬ ಸಂಬೋಧನೆಯ ನಂತರ "ಶಿ.ಸಾ. ನಮಸ್ಕಾರಗಳು (ಶಿರ
ಸಾಷ್ಠಾಂಗ) ಇಲ್ಲಿ ನಾವೆಲ್ಲ ಕ್ಷೇಮ. ತಮ್ಮ ಕ್ಷೇಮಕ್ಕೆ ಮೇಲಿಂದ ಮೇಲೆ ತಿಳಿಸುತ್ತಿರಬೇಕು"
ಎಂಬ ಅವೇ ಶಬ್ದಗಳ ಅವೇ ವಾಕ್ಯಗಳಿರುತ್ತಿದ್ದವು. ಅವು ಶಿಷ್ಟಾಚಾರದ ಸಂಕೇತವಾಗಿರುತ್ತಿದ್ದವು.ಅದೇ
ರೀತಿ ಮುಕ್ತಾಯ ಮಾಡುವಾಗ "ಮನೆಯಲ್ಲಿ ಎಲ್ಲ ಹಿರಿಯರಿಗೆ ನನ್ನ ನಮಸ್ಕಾರಗಳು, ಹಾಗೂ ಕಿರಿಯರಿಗೆ ಸಿಹಿ ಆಶೀರ್ವಾದಗಳು". ಎನ್ನುವ
ಸಾಲುಗಳು ತಪ್ಪದೇ ಇರುತ್ತಿದ್ದವು. ಪತ್ರದ ಮಧ್ಯಭಾಗದಲ್ಲಿ ಮುಖ್ಯವಾದ ಹಾಗೂ ನಿಯಮಿತವಾದ
ವಿಷಯಗಳಿರುತ್ತಿದ್ದವು. ಮಳೆ ಬೆಳೆಯ ಬಗ್ಗೆ, ಮಕ್ಕಳ
ವಿದ್ಯಾಭ್ಯಾಸ, ಹಿರಿಯರ ಆರೋಗ್ಯ, ನೋಡಿದ ಯಾವುದಾದರೂ ಸಿನೆಮಾ, ಓದಿದ ಪುಸ್ತಕ ಹೀಗೆ
ನಾನಾ ವಿಷಯಗಳ ಬಗ್ಗೆ ಲೇಖನಿ ಹರಿದಾಡುತ್ತಿತ್ತು.ಬಹುಷ: ಅದೇ ಆಕರ್ಷಣೆ ನಮಗೇ ಗೊತ್ತಿಲ್ಲದಂತೆ
ನಮ್ಮ ಮನಸ್ಸಿನೊಳಗೂ ಗೂಡುಕಟ್ಟಿತ್ತು ಎನಿಸುತ್ತದೆ. ಆರು ಏಳನೇ ಕ್ಲಾಸಿನಲ್ಲಿದ್ದಾಗಿನಿಂದ ನಾನು, ನನ್ನಕ್ಕ ಕೂಡಾ ನಮ್ಮ ಬಂಧುಗಳಿಗೆ ಕಾಗದ
ಬರೆಯಲಾರಂಭಿಸಿದೆವು. ಆಗ ಅಂದರೆ 80-90 ರ ದಶಕಗಳಲ್ಲಿ, ಸಾಹಿತ್ಯದ ಓದು ಬರವಣಿಗೆ ಅತ್ಯಂತ ಉಚ್ರಾಯ
ಸ್ಥಿತಿಯಲ್ಲಿದ್ದ ವೈಭವದ ಕಾಲ. ಎಲ್ಲರೂ ಕತೆ ಕಾದಂಬರಿಗಳನ್ನೋದುವವರೇ. ತಾವೂ ಕೂಡಾ ಸಾಹಿತಿ, ಕವಿ, ಕತೆಗಾರ್ತಿ ಆಗಬೇಕೆಂದು
ಕನಸು ಕಾಣುವವರೇ. ಕೊನೆಗೆ ಅದೆಲ್ಲ ಆಗದಿದ್ದರೆ ಹೋಗಲಿ, ಪತ್ರಗಳಲ್ಲಾದರೂ ಒಂದಿಷ್ಟು ಸುಂದರವಾದ ವಾಕ್ಯಗಳನ್ನು ರಚಿಸಿ ಬರೆದು, ಅಷ್ಟರ ಮಟ್ಟಿಗೆ ಸಾಹಿತ್ಯ ಕೃಷಿ ಮಾಡಿಬಿಡುವ ಉತ್ಸಾಹ
ಅನೇಕರಲ್ಲಿತ್ತು. ಅಲ್ಲದೇ ಪತ್ರಗಳು ನಿಜವಾಗಿಯೂ ಅತ್ಯಂತ ಸೂಕ್ಷ್ಮ ಸಂವೇದನೆಗಳ
ಅಭಿವ್ಯಕ್ತಿಯಾಗಿರುತ್ತಿದ್ದುದೂ ಸುಳ್ಳಲ್ಲ. ಅವ್ಯಕ್ತವಾಗಿದ್ದುಕೊಂಡೇ ವ್ಯಕ್ತವಾಗುವ ಅನೇಕ
ಭಾವನೆಗಳು ಬರೆಯಲಾರದ ಶಬ್ದಗಳ ಮೂಲಕ ಹೊರಹೊಮ್ಮುತ್ತಿದ್ದವು. ಇಂಥವೇ ಅನೇಕ ಕಾರಣಗಳಿಂದ ಪತ್ರಗಲು
ಅನೇಕರ ಅಚ್ಚುಮೆಚ್ಚಿನ ಸಂಗಾತಿಗಳಾಗಿದ್ದವು. ಪತ್ರ ಬರೆಯುವುದು ಒಂದು ಪ್ರೀತಿಯ
ಹವ್ಯಾಸವಾಗಿರುತ್ತಿತ್ತು.ನಮ್ಮ ಕಥೆ ಕವನ ಹೀಗೆ ಯಾವುದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದರಂತೂ
ಅದೆಲ್ಲಿಂದ ಓದುಗರು ನಮ್ಮ ವಿಳಾಸವನ್ನು ಸಂಗ್ರಹಿಸುತ್ತಿದ್ದರೋ ದೇವರೇ ಬಲ್ಲ! ಅಂತೂ ಅತ್ಯಂತ
ಹೊಗಳಿಕೆಯಿಂದ ಕೂಡಿದ ಪತ್ರಗಳು ಕೈಸೇರುತ್ತಿದ್ದವು. ಅದಕ್ಕೇನಾದರೂ ಉತ್ತರ ಬರೆದು ಕೃತಜ್ನತೆ
ಸಲ್ಲಿಸಿದಿರೋ ಮತ್ತೊಂದು ಪತ್ರ. ಇಷ್ಟರಲ್ಲೇ ಒಂದು ಪತ್ರದಷ್ಟು ಹಳೆಯ ಪರಿಚಯವಿರುವುದರಿಂದ
ಇನ್ನಷ್ಟು ಆತ್ಮೀಯತೆ. ಒಮ್ಮೊಮ್ಮೆ ಸ್ವಂತ ವಿಷಯಗಳ ತೋಡಿಕೊಳ್ಳುವಿಕೆ, ಹೀಗೆ ಎನೇನೋ ಅಂತೂ ಒಳ್ಳೆ ಮಜವಾದ ಕಾಲ.
ಗುರುತು ಪರಿಚಯವಿಲ್ಲದ ಪತ್ರಮಿತ್ರರಿಂದಾಗಿ
ಅನೇಕ ಹಾಸ್ಯ ಪ್ರಸಂಗಗಳೂ ಉಂಟಾಗುತ್ತಿದ್ದವು. ಹೇಗೂ ಒಬ್ಬರ ಮುಖವನ್ನೊಬ್ಬರು ನೋಡಿರದೇ
ಇರುವುದರಿಂದ, ಮತ್ತೆ ಯಾವುದೇ ರಿಸ್ಕ್ ಇಲ್ಲದೇ ಇದ್ದುದರಿಂದ ಕೆಲವರು ಸುವಾಸಿತ ಗುಲಾಬಿ ಹಾಳೆಗಳ ಮೇಲೆ
ಬರೆದದ್ದೂ ಉಂಟು. ಅವನ್ನೆಲ್ಲ ನೋಡಿ, ಓದಿ ನಕ್ಕು ಮರೆತದ್ದೂ ಉಂಟು.
ಆದರೆ ಪರಿಚಯವಿದ್ದ ಆತ್ಮೀಯರೊಡನೆ
ಉಂಟಾಗುವ ಪತ್ರ ಮೈತ್ರಿ ನೋವು ನಲಿವು ಎರಡನ್ನೂ ತರುತ್ತವೆ. ವರ್ಷಾನುಗಟ್ಟಲೇ ಪತ್ರಗಳನ್ನು
ಬರೆಯತ್ತಾ ಆತ್ಮೀಯತೆ, ಸ್ನೇಹವನ್ನು
ಮುಂದುವರೆಸಿದವರು ಆಗಿನ ಕಾಲದಲ್ಲಿ ಅನೇಕರಿರುತ್ತಿದ್ದರು. ಸ್ನೇಹ ಒಂದು ಹೆಣ್ಣು ಮತ್ತು ಒಂದು
ಗಂಡಿನ ಮಧ್ಯದ್ದಾದರಂತೂ ಈ ತುಡಿತ ತೀವ್ರತೆ ಇನ್ನೂ ಹೆಚ್ಚಾಗಿರುತ್ತಿತ್ತು. ಪತ್ರಗಳು ಇಬ್ಬರ
ಮಧ್ಯೆಯೂ ರಾಕೆಟಿನಂತೆ ಹಾರಾಟ ನಡೆಸಿರುತ್ತಿದ್ದವು. ಸ್ನೇಹಿತನಿಂದ ಪತ್ರ ಬಂತೆಂದರೆ ಎರೆಡೆರೆಡು
ಬಾರಿ, ಒಮ್ಮೊಮ್ಮೆ ಮೂರ್ನಾಲ್ಕು
ಬಾರಿ ಓದುವುದು, ತಕ್ಷಣ ಉತ್ತರ ಬರೆದು ಪೋಸ್ಟ್ ಡಬ್ಬಿಯಲ್ಲಿ ಹಾಕಿ ಬರುವುದು.
ಎಲ್ಲಿ ತಡವಾಗುತ್ತದೋ ಎಂದು ಒಮ್ಮೊಮ್ಮೆ ಹೆಡ್ ಪೋಸ್ಟಿಗೇ ಹೋಗಿ ಪತ್ರವನ್ನು ಹಾಕಿ ಬರುವುದು, ಮತ್ತು ಉತ್ತರ ಬರುವ ತನಕ ಚಡಪಡಿಸುವುದು, ಪೋಸ್ಟ್ ಮನ್ ಬರುವ ಟೈಮಿಗೆ ಸರಿಯಾಗಿ ಹೋಗಿ ಗೇಟಿಗೇ
ನಿಲ್ಲುವುದು, ಇವೆಲ್ಲ ನಿತ್ಯಕಾಯಕಗಳಾಗಿ ಬಿಟ್ಟಿರುತ್ತಿದ್ದವು.ಪತ್ರದ
ವಿಷಯಗಳೂ ವೈವಿಧ್ಯಮಯವಾಗಿರುತ್ತಿದ್ದವು. ಅಲ್ಲಿ ವಯ್ಯಕ್ತಿಕ ವಿಷಯಗಳಲ್ಲದೇ ಪ್ರಸಕ್ತ ರಾಜಕೀಯ
ವಿದ್ಯಮಾನಗಳು, ಹವಾಮಾನ, ಓದಿದ ಕಥೆ ಕಾದಂಬರಿಗಳ ಚರ್ಚೆ ಹೀಗೆ ನಾನಾ ವಿಷಯಗಳು ಹಾದುಹೋಗುತ್ತಿದ್ದವು. ಆ
ದೃಷ್ಟಿಯಿಂದಲೇ ಅನೇಕರು ತಮ್ಮ ಮತ್ತು ತಮಗೆ ಬಂದ
ಪತ್ರಗಳನ್ನೇ ಜತನದಿಂದಿಟ್ಟುಕೊಂಡು ನಂತರದ ದಿನಗಳಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
ಕ್ರಮೇಣವಾಗಿ ತಡವಾಗಿಯಾದರೂ ಎಲ್ಲರ
ಮನೆಗಳಲ್ಲಿ ಫೋನುಗಳು ರಿಂಗಣಿಸತೊಡಗಿದ್ದು 90 ರ ದಶಕದ
ಮಧ್ಯಭಾಗದಲ್ಲಿ. ಸ್ಥಿರಫೋನುಗಳು ಸರ್ವವ್ಯಾಪಿಯಾದ ನಂತರ ಈ ಪತ್ರ ಬರೆಯುವ ತಾಪತ್ರಯ ಯಾರಿಗೂ
ಬೇಡವಾಗಿರಬಹುದು. ಮೊದಲು ಪೋಸ್ಟಾಫಿಸಿಗೆ ಹೋಗಿ ಇನ್ ಲ್ಯಾಂಡ್, ಇಲ್ಲವೇ ಕವರ್ ಗಳನ್ನು ತಂದಿಟ್ಟುಕೊಳ್ಳುವುದು, ವಿಚಾರ ಮಾಡಿ ಬರೆಯುವುದು, ಅವುಗಳನ್ನು
ಸರಿಯಾಗಿ ಮಡಚಿ ಅಂಟಿಸಿ ಹತ್ತಿರದಲ್ಲಿರುವ ಪೋಸ್ಟ್ ಡಬ್ಬಕ್ಕೆ ಹಾಕಿ ಬರುವುದು, ಈ ಯಾವ ರಗಳೆಯೂ ಇಲ್ಲದೇ ಕೇವಲ ಒಂದಿಷ್ಟು ನಂಬರಗಳನ್ನು
ತಿರುವಿದರೆ ಅಥವಾ ಒತ್ತಿದರೆ ಸಾಕು, ಆ ಕಡೆಯಿಂದ ನಮಗೆ
ಬೇಕಾದವರ ಕಂಠದಿಂದ 'ಹಲೋ' ಉಲಿತ. ನೇರ
ಸಂಪರ್ಕ. ಎರಡೂ ಕಡೆಗಳಿಂದ ಮಾತು ಕತೆ. ಈ ಎಲ್ಲ ಅನುಕೂಲತೆಗಳಿಂದಾಗಿ ಕ್ರಮೇಣ ಪತ್ರ ಬರೆಯುವ
ಅಭ್ಯಾಸ, ಹವ್ಯಾಸ ಎರಡೂ ಬಿಟ್ಟು ಹೋಯಿತು. ಪತ್ರಗಳಲ್ಲಿ
ನೀರಿನಂತೆ ಸುಲಲಿತವಾಗಿ ಹರಿಯುತ್ತಿದ್ದ ಭಾವನೆಗಳಿಗೆ ಕಡಿವಾಣ ಖಂಡಿತ ಬಿತ್ತು. ಏಕೆಂದರೆ
ಪತ್ರದಲ್ಲಿ ಬರೆದು ನಿಮ್ಮ ಭಾವನೆಗಳನ್ನು ತೋಡಿಕೊಂಡಂತೆ ಫೋನಿನಲ್ಲಿ ಎಲ್ಲವನ್ನೂ
ಹೇಳಲಾಗುವುದಿಲ್ಲ. ಆದರೂ ಕ್ರಮೇಣ ವಯ್ಯಕ್ತಿಕ ಪತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ
ಕಾಲ ಬದಲಾಯಿತು.
ನಿಜ, ಆದರೆ ಅಂಚೆಅಣ್ಣನ ಕೆಲಸವೇನೂ ಕಡಿಮೆಯಾಗಿಲ್ಲ. ಆಗಿನ
ವಯ್ಯಕ್ತಿಕ ಪತ್ರಗಳ ಬದಲಾಗಿ ಈಗ ವ್ಯವಹಾರಿಕ, ವ್ಯಾಪಾರಿ ಪತ್ರಗಳು
ಬಂದಿವೆ. ದಿನಾಲೂ ನಿಮ್ಮ ಅಂಚೆಪೆಟ್ಟಿಗೆಯಲ್ಲಿ ಜಿವವಿಮಾ ಕಂತು ತುಂಬಲು ನೆನಪಿನೋಲೆ, ನಿಮ್ಮ ಬ್ಯಾಂಕಿನ, ಮ್ಯೂಚವಲ್ ಫಂಡಿನ, ಡಿಮ್ಯಾಟ್ ಅಕೌಂಟಿನ ಸ್ಟೇಟಮೆಂಟುಗಳು ಹೀಗೆ ಒಂದಿಲ್ಲ
ಒಂದು ಅಂಚೆ ಕಾದು ಕುಳಿತಿರುತ್ತದೆ. ಹೊರತು ಯಾರಿಂದಲೂ ಪತ್ರ ಬಂದಿರುವುದಿಲ್ಲ. ಹಾಗಾಗಿ ಮೊದಲಿನ
ಕುತೂಹಲ, ಉತ್ಸಾಹ ಈಗೇನಿಲ್ಲ. ಹಾಗೆ ಅಂಚೆಗಾಗಿ ಕಾಯುವ ನಮ್ಮ
ವಯಸ್ಸೂ ಕಳೆದುಹೊಗಿರುವುದರಿಂದ ಬೇಜಾರೂ ಇಲ್ಲ. ಯೌವನದ ಸುಂದರ ದಿನಗಳಲ್ಲಿ ಈ ಪತ್ರಗಳ ಅಪರಿಮಿತ
ಲಾಭವನ್ನು ನನ್ನಂಥ ಅನೇಕರು ಬೊಗಸೆತುಂಬ ಪಡೆದಿದ್ದೇವೆ, ಖುಶಿ ಪಟ್ಟಿದ್ದೇವೆ. ಪತ್ರಗಳಿಗಾಗಿ ಕಾಯುವ ಮಧುರ ಯಾತನೆಯನ್ನು ಅನುಭವಿಸಿದ್ದೇವೆ. ಅದು
ಬಂದೊಡನೆ ಗಡಿಬಿಡಿಯಲ್ಲಿ ಒಡೆದು ಓದಿ ಅತ್ತಿದ್ದೇವೆ, ನಕ್ಕಿದ್ದೇವೆ.
ಇದೀಗ ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಮ್ಮೆಲ್ಲ ವ್ಯಾಪಾರೀ/ವ್ಯವಹಾರೀ
ವಿಷಯಗಳನ್ನು e-mail ಮತ್ತು smsಮೂಲಕ ತಲುಪಿಸುವ, ತಿಳಿಸುವ ವ್ಯವಸ್ಥೆ ಪ್ರಾರಂಭವಾಗಿದೆ. ನಿಜ, e-mail ಗಳು ವಯ್ಯಕ್ತಿಕ ಪತ್ರಗಳ ಜಾಗವನ್ನೂ ತುಂಬಬಲ್ಲವು.
ಆದರೆ ಪತ್ರಗಳ ಖುಶಿಯನ್ನು ಕೊಡಲಾರವು. ಪತ್ರಗಳೇ ಇಲ್ಲದ್ದರಿಂದ ಪತ್ರಗಳ ಬಗ್ಗೆ ಮೊದಲು
ಬರುತ್ತಿದ್ದ "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ, ಈ ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳೆಸಿರುವೆ" ಎನ್ನುವ ಸುಂದರವಾದ ಮಧುರ ಹಾಡುಗಳೂ
ಇನ್ನಿಲ್ಲವಾಗಿವೆ. ಸಿನೇಮಾಗಳಲ್ಲಿ ಪತ್ರಗಳ ಪ್ರೇಮಾಲಾಪನೆ ಮುಗಿದು ಇದೀಗ ಫೋನಾಯಣ
ಪ್ರಾರಂಭವಾಗಿದೆ. ನಮ್ಮ ಮಕ್ಕಳು ತಮ್ಮ ಸ್ನೇಹಿತರೊಂದಿಗೆ smsಭಾಷೆಯಲ್ಲಿ ಸಂವಹನ ಶುರುವಿಟ್ಟುಕೊಂಡ ಈ ಸಂಕ್ರಮಣ ಕಾಲದಲ್ಲಿ ಕೂಡಾ ಪತ್ರಗಳ ಗತವೈಭವದ
ನೆನಪಿನಲ್ಲಿ ನಮ್ಮ ಕಣ್ಣೂಗಳು ಒದ್ದೆಯಾಗುವಷ್ಟು ಭಾವುಕತೆಯನ್ನು ಇನ್ನೂ ಉಳಿಸಿಕೊಂಡಿರುವುದೇ
ನಮ್ಮ ಹೃದಯಗಳ ಹೆಗ್ಗಳಿಕೆ!
ಶ್ರೀಮತಿ. ನೀತಾ. ರಾವ್.
*******************
ಇನ್ನೇನೇನು ನೋಡ್ಬೇಕು ಇನ್ನೇನೇನು ಅನುಭವಿಸಬೇಕು ಅಂತ ಅರಿಯದಾಗಿದೆ ಈ ಜೀವನ, ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನಾ ಭಾವನೆಗಳಿಗೆ ಬೆಲೆ ಇಲ್ಲಾ ಈ ಮೊಬೈಲ್ ಎಂಬಾ ಸುಳ್ಳಿನ ಪ್ರಪಂಚದಲ್ಲಿ
ReplyDelete