ಪ್ರಬಂಧ
ಮನೆಗಳಿಗೆ ಹಿತ್ತಲುಗಳಿಲ್ಲ.
ಒಂದು ಕಾಲವಿತ್ತು, ಎಲ್ಲ ಮನೆಗಳಿಗೂ ಹಿತ್ತಲುಗಳಿರುತ್ತಿದ್ದವು. ಬೆಳಗಾವಿಯಂಥ ಊರಿನ, ಒತ್ತೊತ್ತಾಗಿ ಕಟ್ಟಿದ, ಗಾಳಿ ಆಡದ, ಬೆಳಕು ಬಾರದ, ರೈಲ್ವೆ ಡಬ್ಬಿಯಂಥ ಮನೆಗಳಿಗೆ ಕೂಡ ಹಿಂದೆ ಹಿತ್ತಲುಗಳಿದ್ದವು. ಅವು ಅನೇಕ ಮನೆಗಳಿಗೆ ಸಾಮೂಹಿಕವಾಗಿಯೂ ಇದ್ದಿದ್ದು ಸುಳ್ಳಲ್ಲ. ಅಂದರೆ ಇವರ ಹಿತ್ತಲಿನಿಂದ ಅವರ ಹಿತ್ತಲಿಗೆ, ಅವರ ಹಿತ್ತಲಿನಿಂದ ಇವರ ಹಿತ್ತಲಿಗೆ ಸುಲಭವಾಗಿ ಸೀಮೋಲ್ಲಂಘನ ಮಾಡಿ, ಅವರ ಗಿಡದ ಹೂಗಳನ್ನು ಇವರು, ಇವರದನ್ನು ಅವರು ಕದ್ದು ಕೊಯ್ದು, ತಮ್ಮತಮ್ಮಮನೆದೇವರಿಗೆ ಅರ್ಪಿಸಿ ವರವ ಪಡೆದುಕೊಂಡವರೆಷ್ಟೋ!
ಹಿತ್ತಲಿನಲ್ಲಿ ಒಂದು ತುಳಸಿಕಟ್ಟೆ, ಅದರಲ್ಲೊಂದು ಪುಟ್ಟ ತುಳಸಿಗಿಡ, ಹಂಗೆ ಮುಂದೆ ಖಾಲಿಜಾಗ, ಅದರ ಸುತ್ತಲೂ ಮಲ್ಲಿಗೆ ಬಳ್ಳಿ, ಗೊರಟಗಿ ಹೂವಿನ ಗಿಡ, ಗುಲಾಬಿ ಕಂಟಿಗಳು, ಬೇರೆ ಬೇರೆ ಬಣ್ಣದ ದಾಸವಾಳದ ಗಿಡಗಳು, ಕನಕಾಂಬರ ಗಿಡಗಳು, ಹೀಗೇ ಅನೇಕ ಹೂವಿನ ಸಸ್ಯಸಮೂಹ, ಜೊತೆಗೆ ಕರಿಬೇವಿನ ಮರ, ನಿಂಬೆಗಿಡ, ಪಪ್ಪಾಯಿ ಮರ, ಒಂದೊಂದು ಹಿತ್ತಲಿಗೆ ತೆಂಗಿನ ಮರ, ಮಾವಿನ ಮರ ಕೂಡ ಇರುತ್ತಿದ್ದವು. ಕೆಲವರ ಮನೆ ಹಿತ್ತಲು ಏನೇನೂ ಕೃಷಿ ಇಲ್ಲದೇ ಹಾಗೆ ಪಾಳು ಬಿದ್ದಿರುವುದೂ ಇತ್ತು, ಆದರೆ ಹಿತ್ತಲು ಮಾತ್ರ ಗ್ಯಾರಂಟಿ ಇರುತ್ತಿತ್ತು.
ಆದರೆ ಹಿತ್ತಲೆಂದರೆ ಇಷ್ಟೇ ಅಲ್ಲ, ಅದು ಇನ್ನೂ ಏನೇನೋ ಆಗಿದ್ದುದು ಸುಳ್ಳಲ್ಲ. ನನ್ನ ಅಜ್ಜಿಯ ಊರು ಖಾನಾಪುರದ ಹತ್ತಿರ ಹೆಬ್ಬಾಳ ಎನ್ನುವ ಪುಟ್ಟ ಹಳ್ಳಿ. ಅಲ್ಲಿ ಅವಳದೊಂದು ಸುಮಾರು ದೊಡ್ಡ ಮನೆ. ಮನೆ ಮುಂದೆ ಎತ್ತರ ಮತ್ತು ಅಗಲವಾದ ಕಟ್ಟೆ. ಹಿಂದೆ ಸಾಕಷ್ಟು ದೊಡ್ಡದಾದ ಹಿತ್ತಲು. ಹಿತ್ತಲಿಗೆ ಕಾಲಿಡುತ್ತಿದ್ದಂತೆ ಎದುರುಗೊಳ್ಳುತ್ತಿದ್ದ ಆಳದ ನೀರಿನ, ಗಡಗಡೆಯಿದ್ದ ಬಾವಿ, ಅದನ್ನು ಬಳಸಿ ಮುಂದೆ ಹೋಗುತ್ತಿದ್ದಂತೆ ಬಟ್ಟೆ ಒಗೆಯುವ ಕಲ್ಲು ಮತ್ತು ಅದಕ್ಕೆ ತಾಕಿದಂತೆ ಹಾಕಲಾಗಿದ್ದ ನೀರು ತುಂಬಿಸುವ ದೋಣಿ. ಮುಂದೆರೆಡು ಮೆಟ್ಟಿಲು ಇಳಿದರೆ ನಿಜವಾದ ಹಿತ್ತಲಿನ ಬಯಲು ಪ್ರಾರಂಭವಾಗುತ್ತಿತ್ತು. ಎರೆಡು ದೊಡ್ಡ ಹಲಸಿನ ಮರಗಳು, ಮುಂದೆ ಎರೆಡು ದೊಡ್ಡ ಕಲಮಿ ಮಾವಿನ ಮರಗಳು ಮಧ್ಯದಲ್ಲೇ ಎತ್ತರವಾಗಿ ಬೆಳೆದು ನಿಂತಿದ್ದವು. ಮಧ್ಯ ಸಾಕಷ್ಟು ಖಾಲಿ ಜಾಗದ ನಂತರ ಬೇಲಿಗೆ ಹೊಂದಿಕೊಂಡು ಢಮಣಿ ಹಣ್ಣಿನ ಗಿಡ, ಕೊನೆಗೆ ಆಗಿನ ಕಾಲದ ಹಳೆಯ ಪಾಯಿಖಾನೆ. ಹಲಸು, ಮಾವಿನ ಎಲೆಗಳೆಲ್ಲ ಇಡೀ ಹಿತ್ತಲಿನ ತುಂಬೆಲ್ಲ ಉದುರಿ ನೆಲವೇ ಕಾಣಲಾರದಂತೆ ಹಾಸಿರುತ್ತಿದ್ದವು. ಅಜ್ಜಿ ಬೆಳಗಾವಿಗೆ ಬಂದು ನೆಲೆಸಿದ ಮೇಲೆ ಸದಾ ಬೀಗ ಹಾಕಿರುತ್ತಿದ್ದ ಮನೆ ಮತ್ತು ಹಿತ್ತಲುಗಳು ಧೂಳಾಗಿರುತ್ತಿದ್ದವು, ಎಲೆಗಳಿಂದ ಹಿತ್ತಲು ತುಂಬಿ ಹೋಗಿರುತ್ತಿತ್ತು. ಬೇಸಿಗೆಯ ರಜದಲ್ಲಿ ಮಾವಿನ ಹಣ್ಣಿನ ಸೀಜನ್ನಿನಲ್ಲಿ ನಾವು ಹೋಗಿ ಮನೆ, ಹಿತ್ತಲುಗಳನ್ನು ಸ್ವಚ್ಛಗೊಳಿಸಿ ತಿಂಗಳುಗಟ್ಟಲೇ ಅಲ್ಲೇ ಇರುತ್ತಿದ್ದೆವು.
ದಿನಾಲೂ ಬಾವಿಯಿಂದ ನೀರು ಸೇದುವುದು, ಒಂದಿಷ್ಟು ಬಟ್ಟೆ ತೊಳೆಯುವುದು ಇವು ನಮ್ಮ ಅಲ್ಲಿನ ದೈನಂದಿನ ಕೆಲಸಗಳು. ಪಾಡಾದ ಮಾವಿನ ಕಾಯಿಗಳನ್ನು ಅಜ್ಜಿ ಅಥವಾ ಅಮ್ಮ ಊರಿನ ರೈತರ ಸಹಾಯದಿಂದ ಇಳಿಸುತ್ತಿದ್ದರು. ಚಿಕ್ಕ ಹುಡುಗರಾಗಿದ್ದ ನಮ್ಮ ಕೆಲಸವೆಂದರೆ ಇಷ್ಟಿಷ್ಟೇ ಮಾವಿನ ಕಾಯಿಗಳನ್ನು ಮನೆಯೊಳಗೊಯ್ದು ಅವನ್ನು ಸರಿಯಾಗಿ ಜೋಡಿಸಿ ಇಡುವುದು. ನಂತರ ಹಣ್ಣುಗಳಾದಂತೆ ದಿನಾಲೂ ಬೆಳಿಗ್ಗೆ, ರಾತ್ರಿ ಮಾವಿನ ಹಣ್ಣುಗಳನ್ನು ತಿನ್ನುವುದೇ ಒಂದು ಮೋಜು. ನಮ್ಮ ಅಂಗಿಯ ಮೇಲೆ ಬೀಳಿಸಿಕೊಳ್ಳದಂತೆ ಕಸರತ್ತು ಮಾಡಿ ಗೊರಟೆಯನ್ನು ಚೀಪಿ ಚೀಪಿ ತಿನ್ನುವುದೇ ಒಂದು ಮಜ. ಬೆಳಗಿನ ಹೊತ್ತಿನಲ್ಲಿ ಹಲಸಿನ ಹಣ್ಣನ್ನು ತಿನ್ನವುದು. ಇಂಥ ರಾಜಫಲಗಳ ಜೊತೆಗೆ ಸಣ್ಣಪುಟ್ಟ ಹಣ್ಣುಗಳಾದ ಢಮಣಿಹಣ್ನು, ಕೌಳಿಹಣ್ಣು, ಸುಣ್ಣದ ಹಣ್ಣು, ನೀರಲ ಹಣ್ಣು, ಚಾರಿಹಣ್ಣು, ಹೀಗೆ ನಾನಾ ರೀತಿಯ ಹಣ್ಣುಗಳನ್ನು ತಿನ್ನುವುದೇ ನಮಗೆ ಖುಶಿ. ಮತ್ತೆ ಇಂಥ ತಿನ್ನುವ ಕೆಲಸಗಳಿಗೆಲ್ಲ ಹಿಂದಿನ ಹಿತ್ತಲು ಇಲ್ಲವೇ ಮುಂದಿನ ಕಟ್ಟೆ ಹೇಳಿ ಮಾಡಿಸಿದ ಜಾಗಗಳು.
ಸುಮಾರು ವರ್ಷಗಳು ಮನೆಯನ್ನು ಬೀಗ ಹಾಕಿಟ್ಟು ಕೊನೆಗೆ ಮಾರಿದ ಮೇಲೆ ಇದೀಗ ಆ ಮನೆ, ಆ ಹಿತ್ತಿಲು, ಮನೆ ಮುಂದಿನ ದೊಡ್ಡ ಕಟ್ಟೆ, ಎದುರಿನ ಹನಮಪ್ಪನ ಗುಡಿ, ಎಲ್ಲ ಕೇವಲ ನೆನಪುಗಳಾಗಿ ಸ್ಮøತಿಪಟಲದ ಮೇಲೆ ಉಳಿದುಹೋದವು. ದೊಡ್ಡ ಮನೆಗಳಿದ್ದರೂ ಮಕ್ಕಳು ಪ್ರೀತಿಯಿಂದ ಹೆಚ್ಚು ಹೊತ್ತು ಕಳೆಯುವುದು ಹಿತ್ತಲಿನಲ್ಲೇ ಎನ್ನುವ ಸತ್ಯವೂ ಇದೀಗಷ್ಟೇ ನನಗೆ ತಿಳಿಯಲಾರಂಭಿಸಿದೆ.
ಹೀಗೆ ಅಜ್ಜಿಯ ಮನೆಯ ಹಿತ್ತಲಿನ ಆಟ ನಮ್ಮ ಪಾಲಿಗೆ ಇಲ್ಲದೇ ಹೋದರೂ ಬೆಳಗಾವಿಯ ನಮ್ಮ ಮನೆಗೂ ಒಳ್ಳೆಯ ಹಿತ್ತಲೇ ಇದ್ದಿದ್ದರಿಂದ ಮತ್ತೆ ನಮ್ಮ ಹಿತ್ತಲಿನ ನಂಟು ಯಾವ ತಡೆಯಿಲ್ಲದೇ ಸಾಗಿತು. ಅಪ್ಪ ಮನೆ ಕಟ್ಟಿದ ಹೊಸತರಲ್ಲಿ ಅತಿ ಉತ್ಸಾಹದಲ್ಲಿ ಎಲ್ಲೆಲ್ಲಿಂದ ಹುಡುಕಿ ಹೂವಿನ ಸಸಿಗಳನ್ನು ತಂದು ನೆಟ್ಟಿದ್ದಾಯಿತು. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಡಾ, ಗೊರಟಗಿ, ಕನಕಾಂಬರ, ಛಂದದ ಹೂಗಳು ಹೀಗೆ ನಾನಾ ನಮೂನೆಯ ಗಿಡಗಳು ಹಿತ್ತಲಿನಲ್ಲಿ ಕಂಗೊಳಿಸಿದವು. ಅವುಗಳ ಜೊತೆ ತೆಂಗಿನ ಮರಗಳನ್ನೂ ಅಪ್ಪ ಹಾಕಿದರು. ನಮ್ಮ ಮತ್ತು ಪಕ್ಕದವರ ಮನೆಯ ಹಿತ್ತಲಿನ ಮಧ್ಯೆ ಗಡಿರೇಖೆಯಲ್ಲಿ ಒಂದು ಪಾರಿಜಾತದ ಮರವೂ ಇತ್ತು. ಮತ್ತೆ ಯಥಾ ರೀತಿ ಆ ಪಾರಿಜಾತ ಹೂಗಳು ನಮ್ಮ ಜಾಗದಲ್ಲಿ ಬೀಳುತ್ತಿದ್ದವು. ಸಂಜೆಯ ಹೊತ್ತಿಗೆ ಪಾರಿಜಾತದ ಮೊಗ್ಗುಗಳ ಪರಿಮಳ ಘಂಮ್ಮೆಂದು ಇಡೀ ಹಿತ್ತಲು ಪಸರಿಸುತ್ತಿತ್ತು. ಆದರೆ ಪಕ್ಕದ ಮನೆಯವರ ಬಾಡಿಗೆಯ ಆಸೆಗೆ ಎಲ್ಲ ಮರಗಳ ಜೊತೆ ಈ ಪಾರಿಜಾತದ ಮರವೂ ಬಲಿಯಾಯಿತು, ಮತ್ತು ಅವರ ಇಡೀ ಹಿತ್ತಲು ಕಾಂಕ್ರೀಟ್ ಕಾಡಾಯಿತು. ಮರ-ಗಿಡಗಳ ಮರ್ಮರ, ಮೊಗ್ಗುಗಳ ಸುವಾಸನೆ ಎಲ್ಲ ಮುಗಿದ ಕಥೆಗಳಾದವು.
ಗೆಳತಿಯರನೇಕರ ಮನೆಗಳಿಗೂ ಹಿತ್ತಲುಗಳಿದ್ದವು. ಒಬ್ಬ ಗೆಳತಿಯ ಹಿತ್ತಲಿನಲ್ಲಿದ್ದ ತೆಂಗಿನ ಮರ ನೆಲಕ್ಕಂಟಿದಂತೆ ಬೆಳೆದು ನಂತರ ಮೇಲೇರಿತ್ತು. ಹೀಗಾಗಿ ಅದರ ಮೇಲೆ ಹತ್ತಿ ಕುಳಿತುಕೊಳ್ಳುವುದು ನಮಗೆ ಮೋಜಿನ ಕೆಲಸವಾಗಿತ್ತು. ಯಾರ ಮನೆಗೇ ಹೋಗಲಿ ನಮ್ಮ ವ್ಯಾಪಾರವೆಲ್ಲ ಹಿತ್ತಲಿನಲ್ಲೇ. ಅಲ್ಲೇ ನಮ್ಮ ಆಟ, ಅಲ್ಲೇ ಅಭ್ಯಾಸವನ್ನೂ ಮಾಡುತ್ತಿದ್ದೆವು. ಬಟ್ಟೆ ಒಗೆಯುವ ಕಲ್ಲಿನ ಮೇಲೆ ಹೊಸ ಹುಣಸೆಹಣ್ಣಿನ ಚಿಗಳಿ ಕುಟ್ಟುತ್ತಿದ್ದೆವು. ಹುಳಿಗೆ ಲಿಸ್ಲಿಸ್ ಮಾಡುತ್ತಾ ಅಲ್ಲೇ ಕುಳಿತು ಅದನ್ನು ತಿನ್ನುತ್ತಿದ್ದೆವು. ಅತೀ ಚಿಕ್ಕವರಿದ್ದಾಗ ನಮ್ಮ ಬೊಂಬೆಯಾಟಕ್ಕೂ ಈ ಹಿತ್ತಲುಗಳೇ ಸಾಕ್ಷಿಯಾಗಿದ್ದವು. ಅಂತೂ ನಮ್ಮ ಅರ್ಧಕ್ಕಿಂತ ಹೆಚ್ಚು ಸಮಯ, ಸಂಸಾರ ಅಲ್ಲೇ ಸಾಗುತ್ತಿದ್ದುದು ಸುಳ್ಳಲ್ಲ. ಯಾಕ ಹೀಗೆಲ್ಲಾ ಹೇಳುತ್ತಿರುವೆನೆಂದರೆ, ಈಗ ನಾನು ಮೇಲೆ ಹೇಳಿದ ಯಾವ ಹಿತ್ತಲುಗಳೂ ಉಳಿದಿಲ್ಲ, ಉಳಿದಿದ್ದರೂ ಅವು ಮೊದಲಿನಂತೆ ಉಳಿದಿಲ್ಲ.
ಇದೀಗ ಜಾಗದ ರೇಟು ಗಗನಕ್ಕೇರಿ ಇಂಚಿಂಚು ಜಾಗಕ್ಕೂ ಕಿಮ್ಮತ್ತು ಬಂದ ಮೇಲೆ ಹಿತ್ತಲುಗಳಿದ್ದವರಿಗೆ ಜಾಗವನ್ನಿಟ್ಟುಕೊಳ್ಳುವುದಕ್ಕಿಂತ ಅದರಲ್ಲಿ ಇನ್ನೊಂದು ಮನೆ ಕಟ್ಟುವುದೇ ಹೆಚ್ಚು ಫಾಯದೆ ಎನಿಸಿರಬೇಕು. ಕೆಲವು ಮನೆಗಳಲ್ಲಿ ಅಣ್ಣ-ತಮ್ಮಂದಿರು ಬೇರೆ ಬೇರೆ ಆಗಿ, ಇದ್ದ ಜಾಗವನ್ನೇ ಹಿಂದೊಬ್ಬರು, ಮುಂದೊಬ್ಬರು ಎಂದು ಹಂಚಿಕೊಂಡು ಎರಡೂ ಕಡೆ ಮನೆ ಕಟ್ಟಿ ಇದೀಗ ಈ ಹಿತ್ತಲುಗಳೆಲ್ಲ ಹೇಳಹೆಸರಿಲ್ಲದಂತೆ ಮಾಯವಾದವು. ಹಿಂದಿನ ಮಕ್ಕಳಿಗೆ ಆಶ್ರಯ ನೀಡಿದ್ದ ತೆಂಗಿನ ಮರಗಳನ್ನು ನಾನಾ ಕಾರಣಕ್ಕೆ ಕಡಿಯಲಾಯಿತು. ಬೇರುಗಳು ಸುತ್ತಲೆಲ್ಲ ಹರಡಿ ಮನೆಯ ಪಾಯಾವನ್ನೇ ಅಲುಗಾಡಿಸುತ್ತಿವೆ ಎನ್ನುವುದು ಒಂದು ಕಾರಣವಾದರೆ, ನಮ್ಮ ಮರ ವಾಲಿ ಪಕ್ಕದ ಮನೆಯ ಮೇಲೊರಗಿರುವುದು ಇನ್ನೊಂದು ಕಾರಣ. ತೆಂಗಿನ ಗರಿಗಳು, ಕಾಯಿಗಳು ಗಾಳಿ ಬೀಸಿದಗೊಮ್ಮೆ ಮ್ಯೆಮೇಲೆ ಬೀಳಬಹುದೆಂಬ ಹೆದರಿಕೆಯಂತೂ ಸಾರ್ವತ್ರಿಕ. ಇನ್ನು ದೊಡ್ಡ ದೊಡ್ಡ ಮಾವಿನ ಮರಗಳೆಲ್ಲ ಉರುಳಲು ಆ ಜಾಗದಲ್ಲಿ ಹೊಸ ಮನೆ ಏಳಬೇಕೆಂಬ ಕಾರಣವೇ ಸಾಕಲ್ಲ. ಅಂತೂ ನೋಡನೋಡುತ್ತಿದ್ದಂತೆ ನಮ್ಮ ಸುತ್ತಮುತ್ತಲಿನ ಎಲ್ಲ ಮರಗಳೂ ಧರಾಶಾಹಿಯಾಗಿ, ಹಿತ್ತಲುಗಳೆಲ್ಲ ಕಾಂಕ್ರೀಟ ಕಾಡುಗಳಾದವು. ಅರಿವಿಗೆ ಬಾರದಷ್ಟು ಕ್ಷಿಪ್ರವಾಗಿ ಎಲ್ಲರ ಮನೆಯ ಸಣ್ಣಪುಟ್ಟ ಗಿಡಮರಗಳೆಲ್ಲ ಸತ್ತು ಸ್ವರ್ಗ ಸೇರಿದವು. ಅಷ್ಟೇ ಏಕೆ, ಬೆಳಗಾವಿಯ ಜನರಂತೂ ಹಿತ್ತಲಿನಲ್ಲಿದ್ದ ಬಾವಿಗಳನ್ನು ಕೂಡಾ ಮುಚ್ಚಿಸಿ ತಣ್ಣಗೆ ಕುಳಿತುಬಿಟ್ಟರು. ಒಂದಷ್ಟು ವರ್ಷ ಅದರ ಪರಿಣಾಮವೂ ಅವರನ್ನು ತಟ್ಟಲೇ ಇಲ್ಲ. ಯಾವಾಗ ಬರದ ಬಿಸಿ ಜೋರಾಯಿತೋ, ಯಾವಾಗ ಕುಡಿಯುವ ನೀರಿಗೂ ತತ್ವಾರವಾಯಿತೋ ಇದೇ ಜನ, ನಗರಪಾಲಿಕೆಯ ನೀರಿನ ಆಮಿಷಕ್ಕೆ ಬಲಿಯಾಗಿ ಬಾವಿಗಳನ್ನು ಮುಚ್ಚಿದ್ದಕ್ಕೆ ತಮ್ಮನ್ನು ತಾವೇ ಶಪಿಸಿಕೊಳ್ಳುವ ಸ್ಥಿತಿಗೆ ಬಂದುನಿಂತರು. ಇದೀಗ ಪಾಲಿಕೆಯೇ ಮುಂದೆ ನಿಂತು, ಒಂದೊಮ್ಮೆ ಹೂತುಹೋದ ಬಾವಿಗಳಿಗೆ ಮತ್ತೆ ಮರುಜನ್ಮ ನೀಡುವ ಕಾಯಕಲ್ಪಕ್ಕೆ ನಾಂದಿ ಹಾಡಿದೆ. ಹೀಗಾಗಿ ಅನೇಕರ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳಲಾರಂಭಿಸಿವೆ. ಒಂದೊಮ್ಮೆ ಮುಚ್ಚಿಬಿಟ್ಟ ಬಾವಿಗಳನ್ನು ಮತ್ತೆ ತೆರೆಸಲಾಗುತ್ತಿದೆ.
ಆದರೆ ಕಡಿದ ಮರಗಳನ್ನು ಮತ್ತೆ ಎಬ್ಬಿಸಿ ನಿಲ್ಲಿಸಲಾಗದು, ಕಳೆದುಹೋದ ಗಾಳಿ ಬೀಸಿದಾಗಲೆಲ್ಲ ಪರಿಮಳ ಸೂಸಿದ ಹೂ-ಹಣ್ಣುಗಳ ಸುಖವನ್ನು ಮತ್ತೆ ಹಿಡಿದು ನಿಲ್ಲಿಸಲಾಗದು. ಇಂಚಿಂಚೂ ಬಿಡದೇ ಎಲ್ಲೆಂದರಲ್ಲಿ ಕಟ್ಟಿದ ಮನೆಗಳನ್ನು ಈಗ ಉರುಳಿಸಲಾಗದು. ತಪ್ಪುಗಳು ಆಗಿ ಹೋಗಿವೆ. ಮಕ್ಕಳಿಗೆ ಆಟಕ್ಕೆ, ನೋಟಕ್ಕೆ ಬೇಕೇಬೇಕಿದ್ದ ಹಿತ್ತಲುಗಳನ್ನು ಮಾಯಮಾಡಿದ ಮೇಲೆ ಇದೀಗ ಮಕ್ಕಳ ಕಾಲಿಗೆ ಮಣ್ಣು ಮೆತ್ತಿಕೊಳ್ಳಬೇಕು, ಮಕ್ಕಳು ಮಣ್ಣಲ್ಲಿ ಆಟವಾಡಬೇಕು ಎಂದೆಲ್ಲ ಅಲ್ಲಿಲ್ಲಿ ಓದಿ, ಖಾಲಿ ಜಾಗಗಳನ್ನು, ಇತರರ ಇನ್ನೂ ಯಾಕೋ ಪುಣ್ಯಕ್ಕೆ ಉಳಿದುಕೊಂಡ ಹಿತ್ತಲುಗಳಿಗೆ ತಮ್ಮ ಮಕ್ಕಳನ್ನು ಆಟಕ್ಕೆ ಕರೆದುಕೊಂಡು ಬರುವ ಪಾಲಕರನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ.
******************
ನಮ್ಮ ಬಾಲ್ಯದ ಸವಿ ನೆನಪು ತಾಜಾ ಆಯಿತು.... ಗೊರಟಿಗಿ ಗಿಡ, ಬಳ್ಳಿ ಗುಲಾಬಿ ಗಿಡ, ಚಿಗಳಿ ಮಾಡುವ ಸಂಭ್ರಮ ಇನ್ನೂ ಕಣ್ಣ ಮುಂದೆ ಕಟ್ಟಿದ ಹಾಗೆ ಇದೆ.ನೀತಾ ಆ ಬಾಲ್ಯದ ನೆನಪುಗಳನ್ನು ಮತ್ತೆ ಮರು ಕಳಿಸುವಂತೆ ಮಾಡಿದ್ದಕ್ಕೆ a big thank you...
ReplyDeleteThanks anu.
DeleteHeart touching remembered my childhood but felt heaviness in mind
ReplyDelete